ಸೆಪ್ಟೆಂಬರ್‌ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಆಮ್ ಆದ್ಮಿ ಪಕ್ಷ (ಎಎಪಿ) ಬೆಂಬಲ ನೀಡಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
“ಎಎಪಿ ಡಿಸೆಂಬರ್ 8 ರಂದು ರೈತ ಸಂಘಟನೆಗಳು ನಡೆಸುತ್ತಿರುವ ಭಾರತ್ ಬಂದ್ ಅನ್ನು ಬೆಂಬಲಿಸುತ್ತದೆ. ಎಎಪಿ ಸ್ವಯಂಸೇವಕರು ಕೂಡ ಆ ದಿನ ದೇಶಾದ್ಯಂತ ನಡೆಯುವ ಶಾಂತಿಯುತ ಪ್ರತಿಭಟನೆಗಳಲ್ಲಿ ರೈತರೊಂದಿಗೆ ಕೈಜೋಡಿಸುತ್ತಾರೆ. ರೈತರನ್ನು ಬೆಂಬಲಿಸುವಂತೆ ಭಾರತದ ನಾಗರಿಕರಲ್ಲಿ ಮನವಿ ಮಾಡುತ್ತೇನೆ” ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
8 दिसंबर को किसानों द्वारा किए गए भारत बंद के आह्वान का आम आदमी पार्टी पूरी तरह से समर्थन करती है। देश भर में आम आदमी पार्टी के कार्यकर्ता शांतिपूर्ण तरीक़े से इसका समर्थन करेंगे। सभी देशवासियों से अपील है की सब लोग किसानो का साथ दें और इसमें हिस्सा लें https://t.co/xNseuxjtFO
— Arvind Kejriwal (@ArvindKejriwal) December 6, 2020
ಇದನ್ನೂ ಓದಿ: ಡಿಸೆಂಬರ್ 8ಕ್ಕೆ ರೈತರಿಂದ ಭಾರತ್ ಬಂದ್: ಎಲ್ಲೆಡೆ ಹರಿದುಬರುತ್ತಿರುವ ಬೆಂಬಲದ ಮಹಾಪೂರ
ಕೇಂದ್ರ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಅವರು ಮೂರು ಕೃಷಿ ಕಾನೂನುಗಳು ರೈತರ ಪರವಾಗಿವೆ ಮತ್ತು ರೈತರ ಬೇಡಿಕೆಯಂತೆ ಅದನ್ನು ರದ್ದುಗೊಳಿಸುವ ಸಾಧ್ಯತೆಯಿಲ್ಲ ಎಂದು ಪುನರುಚ್ಚರಿಸಿದ್ದಾರೆ, ಅಗತ್ಯವಿದ್ದರೆ, ಪ್ರತಿಭಟನಾ ನಿರತ ರೈತರ ಆಶಯಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ಕಾನೂನುಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡುತ್ತದೆ ಎಂದು ಹೇಳಿದ್ದರು.
“ವಿವಿಧ ರಾಜ್ಯಗಳಲ್ಲಿನ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷವು ರೈತರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ. ರಾಷ್ಟ್ರದ ರೈತರು ಈ ಕಾನೂನುಗಳ ಪರವಾಗಿದ್ದಾರೆ. ಆದರೆ, ಕೆಲವು ರಾಜಕೀಯ ನಾಯಕರು ಬೆಂಕಿಗೆ ತುಪ್ಪ ಸುರಿಸಲು ಪ್ರಯತ್ನಿಸುತ್ತಿದ್ದಾರೆ”ಎಂದು ಚೌಧರಿ ಆರೋಪಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು ರೈತರನ್ನು ಬೆಂಬಲಿಸುವ ಎಲ್ಲಾ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ಇದು ಕೇವಲ ರೈತರ ಹೋರಾಟವಲ್ಲ, ಎಲ್ಲಾ ದೇಶವಾಸಿಗಳ ಹೋರಾಟ. ಭಾರತವು ಕೃಷಿ ದೇಶವಾಗಿದ್ದು, ರೈತರು ಅತೃಪ್ತರಾಗಿದ್ದರೆ, ಅದು ದೇಶದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ”ಎಂದು ರಾಯ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರತಿಭಟನಾ ನಿರತ ರೈತರಿಗೆ ಆಪ್ ಸರ್ಕಾರ, ಪಕ್ಷದ ರಾಷ್ಟ್ರೀಯ ವಕ್ತಾರ ರಾಘವ್ ಚಾಡ್ಡಾ ನೇತೃತ್ವದಲ್ಲಿ ಶೆಡ್‌ಗಳು, ನೀರು, ವಿದ್ಯುತ್ ಇತ್ಯಾದಿ ಮೂಲಸೌಕರ್ಯಗಳ ವ್ಯವಸ್ಥೆ ಮಾಡಿತ್ತು. ಇದನ್ನು ರಾಜಕಾರಣ ಎಂದು ಬಿಜೆಪಿ ಟೀಕಿಸಿತ್ತು.
“ಈ ಬಿಕ್ಕಟ್ಟಿನ ಸಮಯದಲ್ಲಿ ರೈತರ ಪರ ನಿಂತರೆ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರೆ ಅದು ರಾಜಕೀಯ ಎನ್ನುವುದಾದರೇ..ಹೌದು ನಾವು ತಪ್ಪಿತಸ್ಥರೇ” ಎಂದು ರಾಘವ್ ಚಾಡ್ಡಾ ತಿರುಗೇಟು ನೀಡಿದ್ದರು.
ಈಗಾಗಲೇ ರೈತರ ಭಾರತ್ ಬಂದ್‌ಗೆ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ (ಆರ್‌ಜೆಡಿ), ಡಿಎಂಕೆ, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್), ಶಿರೋಮಣಿ ಅಕಾಲಿ ದಳ ಸೇರಿ 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಗಳು ದೇಶಾದ್ಯಂತ ಮುಷ್ಕರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿವೆ.


