ಸಂಗ್ರಹಾನುವಾದ: ನಿಖಿಲ್ ಕೋಲ್ಪೆ
ಮುಂಬಯಿಯ ಗಜಿಬಿಜಿಯ ಲೋವರ್ ಪರೇಲ್‌ನಲ್ಲಿರುವ ಯಾವುದೇ ದೇಖಾದೇಕಿ ಇಲ್ಲದ ಮೂರು ಗಗನಚುಂಬಿ ಕಟ್ಟಡಗಳನ್ನು ಹೊಂದಿರುವ ಇಂಡಿಯಾ ಬುಲ್ಸ್ ಫೈನಾನ್ಸ್ ಸೆಂಟರ್ ಎಂಬ ವಾಣಿಜ್ಯ ಸಂಕೀರ್ಣದಲ್ಲಿರುವ ಯೆಸ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಈಗ ಭಯಹುಟ್ಟಿಸುವ ಮೌನವಿದೆ. ಕೆಟ್ಟ ಸಾಲಗಳು ಮತ್ತು ಅಭದ್ರ ಆಸ್ತಿಗಳ ಕಾರಣದಿಂದ ಕಳೆದ ವಾರ ಪ್ರಪಾತದ ಅಂಚಿನಲ್ಲಿದ್ದ ದೇಶದ ನಾಲ್ಕನೇ ಅತಿದೊಡ್ಡ ಖಾಸಗಿ ಬ್ಯಾಂಕಿನಲ್ಲೀಗ ಬದುಕಬಹುದೋ ಏನೋ ಎಂಬ ಆಶಾವಾದ ಮೂಡಿದೆ.
ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿ ಹಣ ಹಿಂತೆಗೆತಕ್ಕೆ ಮಿತಿಯನ್ನು ವಿಧಿಸಿದಾಗ ಹಣ ಕಳೆದುಕೊಳ್ಳುವ ಭೀತಿಗೆ ಒಳಗಾದ ಸಾವಿರಾರು ಜನರು ಈ ಬ್ಯಾಂಕಿನ ವಿಶಾಲವಾದ ಲಾಬಿಯಲ್ಲಿ ಜಮಾಯಿಸಿದ್ದರು. ಈ ಕಟ್ಟಡಗಳಲ್ಲಿರುವ ಹಲವಾರು ಮಧ್ಯಮ ಪ್ರಮಾಣದ ಕಂಪನಿಗಳು ಈ ಬ್ಯಾಂಕಿನ ಕಾರ್ಪೊರೇಟ್ ಗ್ರಾಹಕರಾಗಿದ್ದು, ತಮ್ಮ ನೌಕರರ ಸಂಬಳದ ಖಾತೆಗಳನ್ನು ಇಲ್ಲಿಯೇ ಹೊಂದಿರುವುದು ಬಹುದೊಡ್ಡ ಗದ್ದಲಕ್ಕೆ ಕಾರಣವಾಗಿತ್ತು.
ಇದೀಗ ನಿಮ್ಮ ಹಣ ಸುರಕ್ಷಿತ ಎಂದು ಸರಕಾರ ಭರವಸೆ ನೀಡಿರುವುದರಿಂದ ಗ್ರಾಹಕರು ಸ್ವಲ್ಪ ಮಟ್ಟಿನ ನಿಟ್ಟುಸಿರು ಬಿಟ್ಟಿದ್ದಾರೆ. 16 ವರ್ಷಗಳ ಹಿಂದೆ ಈ ಬ್ಯಾಂಕನ್ನು ಸ್ಥಾಪಿಸಿದ್ದ ರಾಣಾ ಕಪೂರ್ ಇದೀಗ ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಹೊಸ ಖಳನಾಯಕ ಎನಿಸಿದ್ದಾರೆ. ಅವರೀಗ ಮುಂಬಯಿಯ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಕ್ರಿಮಿನಲ್ ಸಂಚು, ವಂಚನೆ ಮತ್ತು ಭ್ರಷ್ಟಾಚಾರದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಇದೇ ಕಪೂರ್ ಈಗ ಬ್ಯಾಂಕಿನ ಪತನಕ್ಕಾಗಿ ಆರ್ಥಿಕ ಹಿಂಜರಿತ ಮತ್ತು ನೋಟು ಅಮಾನ್ಯೀಕರಣವನ್ನು ದೂರಬಹುದು. ಆದರೆ, ಇವರೇ ಅದನ್ನು ಸರಕಾರದ ಮಾಸ್ಟರ್ ಸ್ಟ್ರೋಕ್ ಎಂದು ಕೊಂಡಾಡಿದ್ದರು. ಬ್ಯಾಂಕಿನ ರಕ್ತಸಿಕ್ತ ಲೆಕ್ಕಪತ್ರದ ವಿವರಗಳು ಏನನ್ನು ತೋರಿಸುತ್ತವೆ ಎಂದರೆ ಹಿಂದೆ ಬಿಲಿಯಾಧಿಪತಿಗಳಾಗಿದ್ದು ನಂತರ ಆಸ್ತಿಪಾಸ್ತಿಗಳ ವಿನಾಶಕರಾಗಿ ಪರಿಣಮಿಸಿದ ಮೂವರು ಮಹಾನುಭಾವರು ಈ ಬ್ಯಾಂಕಿನ ಪತನಕ್ಕೆ ಮುನ್ನುಡಿ ಬರೆದಿದ್ದಾರೆ.
ಅವರೇ ಅನಿಲ್ ಅಂಬಾನಿ (ರಿಲಯನ್ಸ್ ಗ್ರೂಪ್), ಕಪಿಲ್ ವಾಧ್ವಾನ್ (ಡಿಎಚ್‌ಎಫ್‌ಎಲ್) ಮತ್ತು ಸುಭಾಷ್ ಚಂದ್ರ (ಎಸ್ಸೆಲ್ ಗ್ರೂಪ್). ಇವರು ಅಪಾಯದೊಂದಿಗೆ ಆಟವಾಡುವ ಚಾಳಿಯ ಶೋಕಿಲಾಲ ಕಪೂರ್ ಜೊತೆ ನಡೆಸಿದ ಗುಪ್ತ ವ್ಯವಹಾರಗಳ ಈಗ ತನಿಖಾ ಸಂಸ್ಥೆಗಳ ಭೂತಕನ್ನಡಿಯ ಅಡಿಯಲ್ಲಿವೆ. ಇವರು ಬ್ಯಾಂಕಿನ ಒಟ್ಟು 50,000 ಕೋಟಿ ರೂ.ಗಳ ಒತ್ತಡದ ಆಸ್ತಿಯಲ್ಲಿ 20,000 ಕೋಟಿ ರೂ.ಗಳ ಆಸ್ತಿಯನ್ನು ಪಡೆಯಲು ಈ ಮೂವರು ಕಪೂರ್‌ಗೆ ನೆರವಾದರು ಎಂದು ಬ್ಯಾಂಕಿನ ಕಾರ್ಪೊರೇಟ್ ಸಾಲಗಳ ಲೆಕ್ಕಪುಸ್ತಕವು ತೋರಿಸುತ್ತದೆ. ಇದಕ್ಕಾಗಿ ಕಪೂರ್ ವಂಚನೆಯ ಪ್ರತಿಯೊಂದು ಕೊಳಕು ತಂತ್ರಗಳನ್ನು ಬಳಸಿದ್ದಾರೆ- ರೌಂಡ್ ಟ್ರಿಪ್ಪಿಂಗ್ ಅಂದರೆ ಮಾಲಕರೇ ಅಥವಾ ಸಹವರ್ತಿಗಳು ಹೊಂದಿರುವ ಶೆಲ್ ಕಂಪನಿಗಳಿಗೆ ಅಂದರೆ ನಕಲಿ ಕಂಪನಿಗಳಿಗೆ ಸಾಲ ನೀಡುವುದು, ಕಪ್ಪು ಹಣ ಬಿಳಿ ಮಾಡುವುದು, ಒಳಗಿನ ಗುಟ್ಟು ಬೇರೆಯವರಿಗೆ ನೀಡಿ ಲಾಭ ಮಾಡುವುದು (ಇನ್‌ಸೈಡರ್ ಟ್ರೇಡಿಂಗ್), ಭ್ರಷ್ಟಾಚಾರ, ಸಾಂಸ್ಥಿಕ ದುರಾಡಳಿತ ಇತ್ಯಾದಿ.
ಈ ಬೇಜವಾಬ್ದಾರಿ ಬ್ಯಾಂಕ್ ಮಾಲಕ ಅಪಾಯಕಾರಿ ಅಟಗಳನ್ನು ವಿಸ್ತರಿಸಿ, ತಾನೊಬ್ಬ ಬಹುದೊಡ್ಡ ಸಾಲ ನೀಡಿಕೆದಾರ ಎಂದು ಎಂದು ಸಾಬೀತುಪಡಿಸುತ್ತಿರುವಾಗ ತಾನೊಂದು ಚತುರ ನಿಯಂತ್ರಕ ಸಂಸ್ಥೆ ಎಂಬ ರಿಸರ್ವ್ ಬ್ಯಾಂಕಿನ ಪ್ರತಿಷ್ಟೆ ನಡುಗಲು ಆರಂಭಿಸಿತು.
ಪ್ರಸ್ತುತ ನಡೆಯುತ್ತಿರುವ ತನಿಖೆಯು ಬ್ಯಾಂಕಿನ ಬಾಕಿ ಸಾಲಗಳು 2013-14ರಲ್ಲಿ 55,000 ಕೋಟಿ ರೂ.ಗಳಿದ್ದದ್ದು, 2018-19ರಲ್ಲಿ ಬಹುಪಟ್ಟು ಹೆಚ್ಚಳವಾಗಿ 2.4 ಕೋಟಿ ರೂ.ಗಳಿಗೆ ತಲಪಿದವು ಎಂಬುದನ್ನು ತೋರಿಸುತ್ತದೆ. ಇದು ಆರ್ಥಿಕ ಹಿಂಜರಿಕೆಯ ಹೊರತಾಗಿಯೂ ನಡೆದಿದೆ. ಬ್ಯಾಂಕಿನ ಬಾಕಿ ಸಾಲವು 2016-17ರಲ್ಲಿದ್ದ 1.3 ಲಕ್ಷ ಕೋಟಿಯಿಂದ ಎರಡೇ ವರ್ಷಗಳಲ್ಲಿ 80 ಶೇಕಡಾ ರಹಿತ ಕ್ಷೇತ್ರಗಳು ಎಂದರೆ, ಖಾಸಗಿ ನಿರ್ಮಾಣಗಾರರಿಗೆ, ಪ್ರವಾಸೋದ್ಯಮ, ಸೇವೆಗಳು, ವೈಯಕ್ತಿಕ ಸಾಲ ಇತ್ಯಾದಿಗಳಿಗೆ ನೀಡಿದ ಸಾಲ ಅಸಹಜವಾದ ಏರಿಕೆ ಕಂಡಿತು- ಅದೂ ಎಲ್ಲಾ ಭಾರತೀಯ ಕಂಪನಿಗಳು ನಿರಾಶರಾಗಿ 2018-19ರ ವಿಸ್ತರಣಾ ಯೋಜನೆಗ ಕಸದ ಬುಟ್ಟಿಗೆ ಎಸೆದಿರುವ ಸಂದರ್ಭದಲ್ಲಿ! ಇದೇ ಸಂದರ್ಭದಲ್ಲಿ ದುಡಿಯದ ಬಂಡವಾಳವೂ ಅಸಹಜವಾಗಿ ಏರಿಕೆ ಕಂಡಿದೆ. ತುರ್ತು ನಿಧಿಯು 2017-18ರಲ್ಲಿ 1,553.8 ಕೋಟಿ ರೂ. ಇದ್ದದ್ದು, 2018-19ರಲ್ಲಿ ಒಮ್ಮೆಲೇ 272 ಶೇಕಡಾ ಏರಿ 5,777.56 ಕೋಟಿಗೆ ತಲಪಿತು. ಅದೇ ಹೊತ್ತಿಗೆ ಲಾಭವು 2018-19ರ ವಾರ್ಷಿಕ ವರದಿಯಂತೆ 59 ಶೇಕಡಾ ಇಳಿದು 1,720.28 ಕೋಟಿ ರೂ.ಗಳಿಗೆ ತಲಪಿತು.
ಬ್ಯಾಂಕಿನ ಅಂದಾಜು ಅಪಾಯಕಾರಿ ಸಾಲವು 46,000 ಕೋಟಿ ರೂ.ಗಳಷ್ಟಿದೆ ಎಂದು ಜೆಪಿ ಮೋರ್ಗನ್ ಹೇಳಿದ್ದರೆ, ಕೆಲವು ಆರ್ಥಿಕ ತಜ್ಞರು 55,000 ಕೋಟಿ ರೂ. ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಕಳೆದ ನಾಲ್ಕೈದು ವರ್ಷಗಳಲ್ಲಿ ಉಂಟಾದವುಗಳು. ಅತ್ಯಂತ ಹೆಚ್ಚು ಸಾಲ ಪಡೆದ 20 ಖಾತೆಗಳ ಸಾಲವು ಒಂದು ವರ್ಷ ಹಿಂದೆ 48,435.4 ಕೋಟಿ ರೂ. ಇದ್ದದ್ದು ಮಾರ್ಚ್ 31, 2019ರಲ್ಲಿ 61,799.3 ಕೋಟಿ ರೂ.ಗಳಿಗೆ ಏರಿರುವುದು ಸಾಲ ನೀಡಿಕೆಯು ಕೆಲವೇ ಆಪ್ತರಿಗೆ ಸೀಮಿತಗೊಳ್ಳುತ್ತಿತ್ತು ಎಂಬುದನ್ನು ಸೂಚಿಸುತ್ತದೆ.
ಕಳೆದ 2-3 ವರ್ಷಗಳಿಂದ ಬಿಲಿಯಾಧಿಪತಿಗಳ ಏಣಿಯಿಂದ ಉರುಳುತ್ತಲೇ ಬಂದಿರುವ ಅನಿಲ್ ಅಂಬಾನಿ ಮತ್ತು ಈ ಬ್ಯಾಂಕಿನ ಜೊತೆ ಸಂಬಂಧ ಹೊಂದಿರುವ ಬಹುತೇಕ ಎಲ್ಲಾ ಉದ್ಯಮ ಸಂಸ್ಥೆಗಳು ಉರುಳುತ್ತಲೇ ಇರುವುದು ಬ್ಯಾಂಕಿನ ದುರ್ಗತಿಗೆ ಕಾರಣ. ಡಿಸೆಂಬರ್ 31, 2019ರ ಲೆಕ್ಕಾಚಾರದಂತೆ ಅನಿಲ್ ಅಂಬಾನಿಯ ಟೆಲಿಕಾಂ, ಮೂಲಸೌಕರ್ಯ, ನೌಕಾ ಮತ್ತು ವಿದ್ಯುತ್ ಕ್ಷೇತ್ರದ ಕಂಪನಿಗಳು ಯೆಸ್ ಬ್ಯಾಂಕಿಗೆ 43,800 ರೂ. ಮುಳುಗಿಸಿವೆ. ಇದರಲ್ಲಿ ಕಾಲು ಭಾಗ ಯೆಸ್ ಬ್ಯಾಂಕಿನಿಂದ ಪಡೆದುದಾಗಿದೆ. ಈ ಎಲ್ಲಾ ಕಂಪನಿಗಳು ಇಸ್ಪೀಟ್ ಎಲೆಗಳಂತೆ ಉರುಳಿದವು. ಹಣಕಾಸು ಒದಗಿಸುವವರು ಭಾರೀ ತಳಮಳಕ್ಕೆ ಒಳಗಾದರು.
ಯೆಸ್ ಬ್ಯಾಂಕ್ ಭಾರಿ ಪ್ರಮಾಣದಲ್ಲಿ ಶೇರುಗಳ ಅಡಮಾನಿನ ಆಧಾರದಲ್ಲಿ ಸಾಲಗಳನ್ನು ನೀಡಲು ಆರಂಭಿಸಿತು. ಇದು ಕಡಲ ತಡಿಯಲ್ಲಿ ನೆಟ್ಟಗೆ ನಿಂತಂತೆ. ಕಾಲಡಿಯ ಉಸುಕು ಅಥವಾ ಹೊಯ್ಗೆ ಕೊಚ್ಚಿಹೋಗಿ ಯಾವಾಗ ಉರುಳುವಿರೋ ಗೊತ್ತಾಗದು. ಅನಿಲ್ ಅಂಬಾನಿಯ ರಿಲಯನ್ಸ್ ಪವರ್ 685 ಕೋಟಿ ಕೋಟಿ ರೂ.ಗಳ ಸಾಲ ಬಾಕಿ ಇರಿಸಿ ಇದೇ ಅಡವು ಸಾಲದ ಮೇಲೆ ತನ್ನದೇ ಸಬ್ಸಿಡರಿ ಕಂಪನಿಯಾದ ರೋಸಾ ಪಲರ್ ಸಪ್ಲೈ ಕಂಪನಿಯಿಂದ 30 ಶೇಕಡಾ ಪಾಲುದಾರಿಕೆ ಖರೀದಿಸಿತು.
ಸುಬಾಷ್ ಚಂದ್ರ ಅವರ ಎಸ್ಸೆಲ್ ಗ್ರೂಪ್ ಅದೇ ರೀತಿಯಲ್ಲಿ 3,330 ಕೋಟಿ ರೂ.ಗಳ ಧೋಕಾ ಮಾಡಿತು. ಈ ರೀತಿಯಲ್ಲಿ 20 ದೊಡ್ಡ ಸಾಲಗಾರ ಕುಳಗಳು ಬ್ಯಾಂಕಿನ ಮಾಲಕರ ಸಹಕಾರದ ಮೂಲಕವೇ ಸಾವಿರಾರು ಕೋಟಿ ಸಾಲ ಮಾಡಿ ಮುಳುಗಿಸಿದ್ದಾರೆ. ಠೇವಣಿದಾರರ ಹಣ ಮತ್ತು ನಂಬಿಕೆ ಮುಳುಗಿಸಿದ್ದಾರೆ. ಇದು ಸರಕಾರ ಜನರಿಗೆ ಒದಗಿಸುತ್ತಿರುವ ಆರ್ಥಿಕ ಭದ್ರತೆ.


