ಭಾನುವಾರ ಮಧ್ಯಾಹ್ನ ಮಣಿಪುರದ ರಾಜಧಾನಿ ಇಂಫಾಲ್‌ನ ನ್ಯೂ ಲಂಬುಲೇನ್ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಮೂರು ಮನೆಗಳಿಗೆ ಬೆಂಕಿ ಹಚ್ಚಿದ್ದು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಅಹಿತಕರ ಘಟನೆ ನಡೆದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ನಂತರ, ಜನರು ಈ ಪ್ರದೇಶದಲ್ಲಿ ಜಮಾಯಿಸಿದರು ಮತ್ತು ಆ ಘಟನೆ ನಡೆದ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ಕೊಡುವಂತೆ ರಾಜ್ಯ ಮತ್ತು ಕೇಂದ್ರ ಪಡೆಗಳಿಗೆ ಒತ್ತಾಯಿಸಿದ್ದಾರೆ. ನಂತರ ಭದ್ರತಾ ಪಡೆಗಳು ಗುಂಪನ್ನು ಚದುರಿಸಲು ಕೆಲವು ಸುತ್ತು ಅಶ್ರುವಾಯುಗಳನ್ನು ಸಿಡಿಸಿದ್ದಾರೆ.
ಮತ್ತೊಂದು ಬೆಳವಣಿಗೆಯಲ್ಲಿ, ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕ ಕೆ ರಾಜೋ ಅವರ ನಿವಾಸದಲ್ಲಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯಿಂದ ಅಪರಿಚಿತ ವ್ಯಕ್ತಿಗಳು ಮೂರು ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಸಗೋಲ್‌ಬಂದ್ ಬಿಜೋಯ್ ಗೋವಿಂದ ಎಂಬಲ್ಲಿ ಈ ಘಟನೆ ನಡೆದಿದ್ದು, ಕಿತ್ತುಕೊಂಡ ಶಸ್ತ್ರಾಸ್ತ್ರಗಳಲ್ಲಿ ಎರಡು ಎಕೆ ಸಿರೀಸ್ ರೈಫಲ್‌ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಂತುಕರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮತ್ತು ಹೆಚ್ಚಿನ ಸಮಸ್ಯೆ ಉಂಟು ಮಾಡುವ ಮೊದಲು ಬಂಧಿಸಲು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.


