Homeಕಂಡದ್ದು ಕಂಡಹಾಗೆಮೂರು ವರ್ಷಗಳ ನಂತರ, ವಿಶ್ವಾಸ ಹೆಚ್ಚೇ ಆಗಿದೆ ಮತ್ತು ಅದಕ್ಕೆ ಗೌರಿ ಲಂಕೇಶರೂ ಕಾರಣ

ಮೂರು ವರ್ಷಗಳ ನಂತರ, ವಿಶ್ವಾಸ ಹೆಚ್ಚೇ ಆಗಿದೆ ಮತ್ತು ಅದಕ್ಕೆ ಗೌರಿ ಲಂಕೇಶರೂ ಕಾರಣ

ಇಲ್ಲಿಂದ ಮುಂದಿನ ಪಯಣ ಹೊಸ ಪ್ರಯೋಗಗಳ ಜೊತೆ ನಡೆಯಲಿದೆ. ಆ ಪಯಣದಲ್ಲಿ ಓದುಗರು ಮತ್ತು ನಾವು ಒಟ್ಟಿಗೇ ಹೆಜ್ಜೆ ಹಾಕುತ್ತೇವೆ ಮತ್ತು ಯಶಸ್ವಿಯಾಗುತ್ತೇವೆಂಬ ನಂಬುಗೆಯಿದೆ.

- Advertisement -
- Advertisement -

ಗೌರಿ ಲಂಕೇಶರು ನಮಗೆ ಪ್ರಿಯರಾಗಿದ್ದರು ಎಂಬ ಕಾರಣಕ್ಕೆ ಮಾತ್ರವೇ 2017ರ ಸೆಪ್ಟೆಂಬರ್ 5ರಂದು ನಡೆದ ಆ ಘಟನೆ ಮತ್ತು ಆ ದಿನಕ್ಕೆ ಮಹತ್ವವಿದೆ ಎಂದು ನಾವು ಹೇಳುತ್ತಿದ್ದೇವೆಯೇ? ಖಂಡಿತಾ ಅಲ್ಲ. ಈ ವಿಚಾರವನ್ನು ಹಲವಾರು ಸಲ ಯೋಚಿಸಿದ್ದೇನೆ ಮತ್ತು ಗೆಳೆಯರ ಜೊತೆಗೂ ಚರ್ಚಿಸಿದ್ದೇನೆ. ಗೌರಿ ಲಂಕೇಶರ ಹತ್ಯೆಯ ಮೂಲಕ ದೇಶದ ಬಲಪಂಥೀಯ ಶಕ್ತಿಗಳು ಕೊಡಬಯಸಿದ್ದ ಸಂದೇಶವೇನು? ಅವರ ವಿರುದ್ಧ ರಾಜಿರಹಿತವಾಗಿ ಎತ್ತಲಾಗುವ ದನಿಗಳನ್ನು ಕೊಲ್ಲುವವರೆಗೆ ಹೋಗಬಲ್ಲೆವು ಎಂದು ತಾನೇ? ಗೌರಿಯವರ ಕೊಲೆಗೆ ಕಾರಣವಾದ ಸಂಘಟನೆ ಅಥವಾ ವ್ಯಕ್ತಿಗಳು ಇಂದು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಅವರು ಮತ್ತು ಸರ್ಕಾರದಲ್ಲೂ ಇರುವವರು ಬಲಪಂಥೀಯ ಸಂಘಟನೆಯವರಲ್ಲ, ಬದಲಿಗೆ ಇನ್ನೂ ತೀವ್ರಪಂಥೀಯರು ಎಂದು ಯಾರಾದರೂ ವಾದಿಸಬಹುದು.

ಆದರೆ, ಗೌರಿ ಲಂಕೇಶರ ಕೊಲೆಯ ಸುದ್ದಿ ಬಂದ ಕೆಲವೇ ಘಂಟೆಗಳಲ್ಲಿ ಅದನ್ನು ಖಂಡಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿಕೆಯನ್ನು ಬಿಡುಗಡೆ ಮಾಡಿತಾದರೂ (ಅಷ್ಟು ತರಾತುರಿಯೇ ಅನುಮಾನ ಹುಟ್ಟಿಸಿತ್ತು), ಆರೆಸ್ಸೆಸ್‍ನ ಜೊತೆ ಸಂಬಂಧ ಹೊಂದಿದ್ದ ಬಿಜೆಪಿಯ ಬಹುತೇಕರು ಕೊಲೆಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಮರ್ಥಿಸುವ ಹೇಳಿಕೆಗಳನ್ನೇ ನೀಡಿದರು. ಕೊಲೆಯನ್ನು ಸಂಭ್ರಮಿಸಿದವರನ್ನು ಪ್ರಧಾನಿಗಳು ಟ್ವಿಟ್ಟರ್‍ನಲ್ಲಿ ಹಿಂಬಾಲಿಸುತ್ತಿದ್ದರು ಮತ್ತು ತನ್ನನ್ನು ಸಜ್ಜನನೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುವ ಕರ್ನಾಟಕದ ಬಿಜೆಪಿ ಶಾಸಕರೊಬ್ಬರು, ಗೌರಿಯವರ ಹತ್ಯೆಯ ಖಂಡನಾ ರ್ಯಾಲಿಯ ಒಂದು ಫೋಟೋವನ್ನು ಹಾಕಿ ಟ್ರೋಲ್ ಮಾಡಲು ಯತ್ನಿಸಿದ್ದರು. ಇವೆಲ್ಲವೂ ಇಡೀ ಬಲಪಂಥೀಯ ಸಂಘಟನೆಗಳು, ಪಕ್ಷ ಹಾಗೂ ಸರ್ಕಾರಗಳ ಧೋರಣೆಯನ್ನು ಸ್ಪಷ್ಟಪಡಿಸಿದ್ದವು.

ಪೊಟೋ ಕೃಪೆ: ಡೆಕ್ಕನ್ ಕ್ರಾನಿಕಲ್

ಗೌರಿ ಲಂಕೇಶರ ಕೊಲೆಯ ಮೂಲಕ ಅವರೆಲ್ಲರೂ ಕೊಟ್ಟ ಸಂದೇಶ ದನಿಯೆತ್ತಬಾರದೆಂದು – ಆದರೆ ದೇಶ ವಿದೇಶಗಳಲ್ಲಿ ಲಕ್ಷಾಂತರ ಜನರು ದನಿಯೆತ್ತಿದರು. ಅದರ ಪರಿಣಾಮವಾಗಿಯೇ ಅಲ್ಲಿಂದ ಮುಂದಕ್ಕೆ ಆ ರೀತಿಯ ಕೊಲೆಗಳು ಸಂಭವಿಸಿಲ್ಲ. ಗೌರಿಯವರ ಹತ್ಯೆಯ ತನಿಖೆ ನಡೆಸಿದ ಎಸ್‍ಐಟಿಯ ಒಬ್ಬ ಅಧಿಕಾರಿ ಹೇಳಿದ ಪ್ರಕಾರ ‘ಗೌರಿಯವರ ಕೊಲೆಗೆ ಬಂದ ರೀತಿಯ ಪ್ರತಿಕ್ರಿಯೆ ಬಾರದೆ ಹೋಗಿದ್ದರೆ ಇನ್ನಷ್ಟು ಜನರ ಕೊಲೆಯಾಗುತ್ತಿತ್ತು’. ಅಂದರೆ ಗೌರಿಯವರ ಹತ್ಯೆಯ ಮೂಲಕ ಕೊಲೆಗಡುಕರು ಸಾಧಿಸಬಯಸಿದ್ದು ಸೋಲುಂಡಿತು. ಆದರೀಗ ದನಿ ಅಡಗಿಸಲು ಅವರು ಬೇರೆ ದಾರಿಗಳನ್ನು ಕಂಡುಕೊಂಡಿದ್ದಾರೆ. ಸುಳ್ಳು ಕೇಸುಗಳಲ್ಲಿ ಸಿಕ್ಕಿಸುವುದು – ಯುಎಪಿಎ ಜಡಿಯುವುದು ಇತ್ಯಾದಿ. ಆದರೆ ದನಿ ಅಡಗಿಸಲಾಗಿಲ್ಲ.

ಯಾವ ಮಟ್ಟಿಗೆಂದರೆ, ನಕ್ಸಲೈಟರಿರಲಿ ಮಾಕ್ರ್ಸ್‍ವಾದವನ್ನೂ ವಿರೋಧಿಸುತ್ತಿದ್ದ ಗಿರೀಶ್ ಕಾರ್ನಾಡರಂತಹ ಉದಾರವಾದಿ ಬರಹಗಾರರಾಗಿರಲಿ ‘ನಾನೂ ನಗರ ನಕ್ಸಲ್’ ಎಂಬ ಬೋರ್ಡನ್ನು ಹಾಕಿಕೊಂಡು ಗೌರಿ ಲಂಕೇಶರ ಕಾರ್ಯಕ್ರಮಕ್ಕೇ ಬಂದರು. ದನಿಯೆತ್ತುವ ಚಿಂತಕರು, ಹೋರಾಟಗಾರರನ್ನು ನಗರ ನಕ್ಸಲ್ ಎಂದು ಹಣಿಯುತ್ತಿದ್ದ ಸರ್ಕಾರಕ್ಕೆ ಅದು ಅವರೆಸೆದ ಸವಾಲಾಗಿತ್ತು.

ಇವೆಲ್ಲವೂ ಗೌರಿಯವರು ಇದ್ದಾಗಲೇ ಶುರುವಾಗಿತ್ತು. ಹೈದ್ರಾಬಾದ್ ವಿವಿಯಲ್ಲಿ ರೋಹಿತ್ ವೇಮುಲ ಮತ್ತು ಜೆಎನ್‍ಯುನಲ್ಲಿ ಕನ್ಹಯ್ಯಾ ಪ್ರಕರಣ ನಡೆದ ನಂತರವೂ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ ಕೊಲೆಯಂತಹ ಪ್ರಕರಣಗಳು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಒಂದಾದ ಮೇಲೆ ಒಂದರಂತೆ ಮೂರು ನಡೆದವು. ನಾಲ್ಕನೆಯದ್ದು – ಗೌರಿ ಲಂಕೇಶರದ್ದು – ನಡೆದ ನಂತರ ದೇಶದ ಚಿಂತಕರು ದೊಡ್ಡ ಸಂಖ್ಯೆಯಲ್ಲಿ, ದೊಡ್ಡ ದನಿಯಲ್ಲಿ ಗುಡುಗಲಾರಂಭಿಸಿದರು.

ಇದೇಕೆ ಮುಖ್ಯ? ಏಕೆಂದರೆ ಅಲ್ಲಿಂದಾಚೆಗೆ ವಿವಿಧ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪಕ್ಷವು ಹಿಡಿತಕ್ಕೆ ತೆಗೆದುಕೊಳ್ಳಲಾರಂಭಿಸಿದ್ದರೂ, ವಿಶ್ವವಿದ್ಯಾಲಯಗಳ ಮೇಲೆ ವಿವಿಧ ರೀತಿಯ ದಾಳಿಗಳನ್ನು ನಡೆಸಲಾರಂಭಿಸಿದ್ದರೂ ಅದರೊಳಗಿಂದ ಪ್ರತಿರೋಧದ ದನಿಯೂ ಕೇಳಿಬರುತ್ತಿದೆ. ಸಾರ್ವಜನಿಕ ವಲಯದಲ್ಲಿ – ನಿರ್ದಿಷ್ಟವಾಗಿ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬಾಯಿಬಡುಕರು ಮತ್ತು ಇತರರ ಬಾಯಿ ಬಡಿಯುವವರು ವಿಪರೀತ ಸಂಖ್ಯೆಯಲ್ಲಿ ಕಾಣುತ್ತಿದ್ದರೂ, ಬಾಯಿ ಬಿಚ್ಚಿ ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದರ ಅರ್ಥವೇನು? ಗೌರಿ ಲಂಕೇಶರ ಹತ್ಯೆಯು ಭಾರತದ ಪ್ರಜ್ಞಾವಂತರನ್ನು ‘ನಾವು ಬಾಯಿ ಮುಚ್ಚುವುದಿಲ್ಲ’ವೆಂದು ಪ್ರತಿಜ್ಞೆ ಮಾಡುವಂತೆ ಮಾಡಿದಂತೆ ಕಾಣುತ್ತಿದೆ. ಹಾಗಾಗಿ ಇದು ಮುಖ್ಯ.

ಪೊಟೋ ಕೃಪೆ: ದಿ ವೈರ್‌

ಇವೆಲ್ಲಕ್ಕೂ ಗೌರಿಯವರು ನಿಮಿತ್ತ ಮಾತ್ರರಾಗಿಯಷ್ಟೇ ಕಾರಣರಿರಬಹುದು. ಮಧ್ಯಮವರ್ಗದ, ಇಂಗ್ಲಿಷ್ ಬಲ್ಲ, ಆಧುನಿಕವಾಗಿ ಕಾಣುತ್ತಿದ್ದ ಮಹಿಳೆಯಾಗಿದ್ದದ್ದು ಆ ವರ್ಗಕ್ಕೆ ಸಮೀಕರಿಸಿಕೊಳ್ಳಲು ಕಾರಣವಾಗಿರಬಹುದು. ಹಾಗೆಯೇ ರೋಹಿತ್ ವೇಮುಲನನ್ನು ಮಗನೆಂದು ಕರೆದುಕೊಂಡು, ಸತ್ತ ದಿನದವರೆಗೂ ತನ್ನ ಫೇಸ್‍ಬುಕ್ ಪ್ರೊಫೈಲ್‍ನಲ್ಲಿ ಆತನದ್ದೇ ಫೋಟೋ ಹಾಕಿಕೊಂಡಿದ್ದು ದೇಶದ ಶೋಷಿತ ಸಮುದಾಯಗಳಿಗೆ ಕಳ್ಳುಬಳ್ಳಿ ಸಂಬಂಧ ಎನಿಸಿರಬಹುದು. ಹೀಗೆ ಹುಡುಕುತ್ತಾ ಹೋದರೆ ಗೌರಿಯವರೊಂದಿಗೆ ಅಂತರಾತ್ಮದ ಸಂಬಂಧ ಕಂಡುಕೊಳ್ಳಲು ಪ್ರತಿಯೊಬ್ಬರಿಗೂ ಒಂದೊಂದು ಕಾರಣ ಸಿಕ್ಕಿರುತ್ತದೆ. ಹಾಗಾಗಿ ಆ ಸೆಪ್ಟೆಂಬರ್ 5ಕ್ಕೊಂದು ಮಹತ್ವವಿದೆ.

ಆದರೆ, ಈ ಪ್ರತಿಕ್ರಿಯೆಯ ಆಳದಲ್ಲಿದ್ದದ್ದು ಏನು? ಆ ನಂತರವೂ ಗೌರಿಯವರ ಜೊತೆಗೆ ಯಾವ ಸಂಬಂಧವೂ ಇಲ್ಲದೇ ನೂರೆಂಟು ಬಗೆಯ ಪ್ರತಿರೋಧಗಳು ತೂರಿ ಬಂದಿದ್ದಕ್ಕೇನು ಕಾರಣ? ಯಾರೂ ಊಹಿಸಿರದ ರೀತಿಯಲ್ಲಿ ಕೋಟಿಗಟ್ಟಲೆ ಜನರು ಮೂರು ತಿಂಗಳ ಅವಧಿಯಲ್ಲಿ ಸಿಎಎ, ಎನ್‍ಆರ್‌ಸಿ ವಿರುದ್ಧ ಬೀದಿಗಿಳಿದಿದ್ದು ಏಕೆ, ಹೇಗೆ?

ಇದು ಭಾರತದ ಸಮಾಜದೊಳಗೆ ಇರುವ ಪ್ರಜಾತಾಂತ್ರಿಕ ಅಂತಃಸತ್ವವನ್ನು ತೋರುತ್ತದೆ.

ಹಲವು ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರನ್ನು ನುಂಗಿ ನೊಣೆಯಹೊರಟಿರುವುದು ನಿಜವಾದರೂ, ಸುಪ್ರೀಂಕೋರ್ಟಿನ ಎಲ್ಲಾ ನ್ಯಾಯಾಧೀಶರೂ ಮಂಡಿಯೂರಿಬಿಟ್ಟರೇ? ಈಗಲೂ ಎಷ್ಟೋ ಹೈಕೋರ್ಟುಗಳ ನ್ಯಾಯಾಧೀಶರು ಕಟು ಜನಪರ ತೀರ್ಪುಗಳನ್ನು ನೀಡುವುದು ಹೇಗೆ ಸಾಧ್ಯವಾಗುತ್ತಿದೆ? ಪ್ರಶಾಂತ್ ಭೂಷಣ್ ಅವರ ಕೇಸಿನಲ್ಲಿ ದೇಶದ ಪ್ರಜಾತಾಂತ್ರಿಕ ದನಿಗಳ ಒಕ್ಕೊರಲ ದನಿಗೆ ವಿಜಯ ಸಿಕ್ಕಿತಲ್ಲವೇ? ಇಂತಹ ಕೇಸಿನಲ್ಲೂ ದೇಶದ ‘ಮುಖ್ಯವಾಹಿನಿ’ ಮಾಧ್ಯಮಗಳು ಬೇರೆಯೇ ಕಥೆಕಟ್ಟಲು ಹೊರಟಿದ್ದವು. ಆದರೆ ದೇಶದ ಪ್ರಜ್ಞಾವಂತ ಜನರು ಸತತವಾಗಿ ದನಿಯೆತ್ತಿದ್ದು ಸುಪ್ರೀಂಕೋರ್ಟನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಸ್ಪಷ್ಟವಾಗಿತ್ತು. ಭೀಮಾ ಕೊರೆಗಾಂವ್ ಕೇಸಿನಲ್ಲಿ ಬಂಧಿತರಾದವರಲ್ಲಿ ಒಬ್ಬರಿಗೂ ಜಾಮೀನು ಸಿಕ್ಕಿಲ್ಲವೆನ್ನುವುದು ನಿಜ. ಜಾಮೀನು ಸಿಗದಂತೆ ಇಂತಹ ಕೇಸುಗಳನ್ನು ಹಾಕಬಲ್ಲ ತಿದ್ದುಪಡಿಗಳನ್ನು ತಂದಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರವಾಗಿತ್ತು. ಅದನ್ನು ಬಿಜೆಪಿ ಬಳಸುತ್ತಿದೆ. ಆದರೆ, ಎಲ್ಲರನ್ನೂ ದೀರ್ಘಕಾಲ ಬಂಧನದಲ್ಲಿಡಲಾಗದು ಎನ್ನುವುದಕ್ಕೆ ಜೈಲಿನಿಂದ ಹೊರಗೆ ಬಂದಿರುವ ರಾವಣ್, ಸಫೂರಾ, ಡಾ.ಕಫೀಲ್‍ಖಾನ್‍ರು ಸಾಕ್ಷಿ.

ಇದನ್ನು ಓದಿ: ಪ್ರಜಾತಂತ್ರದ ವಿಸ್ತರಣೆ ಮತ್ತು ಧ್ರುವೀಕರಣ: ಚಳವಳಿಗಳ ಗೆಲುವು ಮತ್ತು ಸೋಲು

ಇಂತಹ ಅದೆಷ್ಟೋ ಉದಾಹರಣೆಗಳನ್ನು ‘ಎಲ್ಲವೂ ಮುಗಿದಿಲ್ಲ’ ಎನ್ನುವುದನ್ನು ತೋರಿಸಲೆಂದು ಕೊಡಬಹುದು. ನಾವೆಲ್ಲರೂ ಪ್ರತಿನಿಧಿಸುವ ಭಾರತವೇ ನಿಜವಾದ ಭಾರತ ಎಂಬುದನ್ನು ಗಟ್ಟಿಯಾಗಿ ಹೇಳುತ್ತಾ ಹೋಗುವುದು ಮತ್ತು ಸುಳ್ಳು ಸೃಷ್ಟಿಸುವ ಪ್ರೊಪಗಾಂಡಾ ಯಂತ್ರಾಂಗವನ್ನು ಸಾಮಾಜಿಕ ಜಾಲದ ಮೂಲಕ (ಗಮನಿಸಿ: ಸಾಮಾಜಿಕ ಜಾಲತಾಣ ಅಲ್ಲ) ಕಟ್ಟಿಕೊಳ್ಳಬಹುದಾದ ವಿವಿಧ ರೀತಿಯ ನೈಜ ಮಾಧ್ಯಮ ಯಂತ್ರಾಂಗದ ಮೂಲಕ ಎದುರಿಸುವುದಷ್ಟನ್ನು ಮಾಡಿದರೆ ಅರ್ಧ ಯುದ್ಧ ಗೆದ್ದಂತೆ. ಈ ವಿಶ್ವಾಸಕ್ಕೆ ಕಾರಣವಿದೆ.

ಇದೇ ಸಂದರ್ಭದಲ್ಲಿ, ಕಳೆದೆರಡು ವಾರಗಳಲ್ಲಿ ಇದೇ ಅಂಕಣದಲ್ಲಿ ಬರೆದ, ಈ ಬರಹಕ್ಕೆ ವಿರುದ್ಧ ಎಂದು ತೋರಬಹುದಾದ ಲೇಖನಗಳನ್ನೂ ಇಲ್ಲಿ ನೆನೆಯುತ್ತೇನೆ. ಒಂದು, ಭಾರತದಲ್ಲಿ ಪ್ರಜಾತಂತ್ರವನ್ನು ವಿಸ್ತರಿಸಿದ ಚಳವಳಿಗಳು ಶೋಷಿತರಿಗೆ ಸಂವಿಧಾನದಲ್ಲಿ ಖಾತರಿ ಮಾಡಿದ್ದ ಹಕ್ಕುಗಳನ್ನು ಜಾರಿಯಾಗುವಂತೆ ಮಾಡಿತು. ಆದರೆ ವ್ಯವಸ್ಥೆಯ ರಚನೆಯೊಳಗೆ ಆಗಬೇಕಿದ್ದ ಪರಿಣಾಮಕಾರಿ ಬದಲಾವಣೆಗಳನ್ನು ತರಲಿಲ್ಲ ಮತ್ತು ಜನರ ಮನೋಭಾವದೊಳಗೆ ಬರಬೇಕಿದ್ದ ಬದಲಾವಣೆಗಳು ಬರಲಿಲ್ಲ. ಹೀಗಾಗಿ ಮೇಲ್ಜಾತಿಗಳ ಧ್ರುವೀಕರಣ ಮತ್ತು ಐಡೆಂಟಿಟಿ ರಾಜಕಾರಣದಿಂದ ತಳಸಮುದಾಯಗಳಲ್ಲಿ ಉಂಟಾದ ಒಡಕು, ಇಂದಿನ ಸ್ಥಿತಿಯನ್ನು ತಂದಿದೆ. ಎರಡು, ಮಾಧ್ಯಮಗಳು ವೃತ್ತಿನಿಷ್ಠೆಯನ್ನಾಗಲೀ ಕನಿಷ್ಠ ಸತ್ಯನಿಷ್ಠೆಯನ್ನಾಗಲೀ ಇಟ್ಟುಕೊಳ್ಳದೇ ಪ್ರಾಪಗಾಂಡಾ ಆಯುಧಗಳಾಗಿ ಪರಿವರ್ತನೆಯಾಗಿವೆ. ಇವೆರಡರ ಪರಿಣಾಮಗಳು ಬಹಳ ಭೀಕರವಾಗಿವೆ. ತತ್ಪರಿಣಾಮವಾಗಿ ದೇಶದ ಮಾತುಬಲ್ಲ ಸಮುದಾಯಗಳು ಒಂದೆಡೆ ಧ್ರುವೀಕರಣವಾಗಿವೆ. ಇದು ನಿಜಕ್ಕೂ ಗಂಭೀರ ಸಂಗತಿಯೇ. ಆದರೆ, ಎಲ್ಲವೂ ಮುಗಿದು ಹೋಗಿದೆ ಎಂಬುದು ವಾಸ್ತವವಲ್ಲ.

ಪೊಟೋ ಕೃಪೆ: ಟ್ವಿಟ್ಟರ್‌

ಹಾಗಾದರೆ 2014ರಲ್ಲಿ ನಡೆದದ್ದು ಒಂದು ರೀತಿಯ ಪ್ರತಿಕ್ರಾಂತಿ ಹೌದೋ ಅಲ್ಲವೋ? ಖಂಡಿತಾ ಹೌದು. ಏಕೆಂದರೆ ಕ್ರಾಂತಿ ಅಥವಾ ಪ್ರತಿಕ್ರಾಂತಿಯು ರಾಜಕೀಯ ಅಧಿಕಾರವನ್ನು ಹಿಡಿಯುವುದಕ್ಕೆ ಸಂಬಂಧಿಸಿದ್ದು. ಅದಕ್ಕೆ ಬೇಕಾದಷ್ಟು ಬಲವನ್ನು ಅವರು ಸಂಚಯಿಸಿಕೊಂಡಿದ್ದಾರೆ. ಅದನ್ನು 2019ರ ಹೊತ್ತಿಗೆ ವಿಸ್ತರಿಸಿಯೂಕೊಂಡಿದ್ದಾರೆ; ಅಷ್ಟೇ ಅಲ್ಲ, 2019ರ ಚುನಾವಣೆಯನ್ನು ಅಭಿವೃದ್ಧಿಯ ಸುಳ್ಳು ಭರವಸೆಗಳ ಮೂಲಕ ಅಲ್ಲದೇ, ತಮ್ಮದೇ ಅಜೆಂಡಾ ಮುಂದಿಡುವ ಮೂಲಕವೇ ಗೆದ್ದಿದ್ದಾರೆ. ಈ ದೇಶದಲ್ಲಿ ಹಿಂದೆ ನಡೆದ ಯಾವುದೇ ಚುನಾವಣೆಗಿಂತ ಅತ್ಯಂತ ಶಕ್ತಿಶಾಲಿಯಾದ ಮತ್ತು ಎಲ್ಲಾ ವಿರೋಧಿಗಳು ನಡೆಸಿದ ಒಟ್ಟೂ ಪ್ರಚಾರದ ಹಲವು ಪಟ್ಟು ಹೆಚ್ಚಾಗಿಯೇ ನಡೆಸಿದ ಪ್ರಚಾರವನ್ನು ಅವರು ನಡೆಸಿದ್ದರು. ವಿರೋಧಿಗಳಲ್ಲಿ ಸರಿಗಟ್ಟುವ ನಾಯಕಿ ಅಥವಾ ನಾಯಕನಿರಲಿಲ್ಲ; ಹಣಬಲವಿರಲಿಲ್ಲ; ಚುನಾವಣಾ ಯಂತ್ರಾಂಗದ ದುರ್ಬಳಕೆಯನ್ನು ತಡೆಯುವ ಸಾಮಥ್ರ್ಯವಿರಲಿಲ್ಲ; ಮಾಧ್ಯಮಗಳಂತೂ ಸಂಪೂರ್ಣ ವಿರುದ್ಧವಿದ್ದವು. ಹೀಗಿದ್ದೂ ಅಂತಹ ಚುನಾವಣೆಯಲ್ಲೂ ಶೇ.55ರಷ್ಟು ಜನರು ಎನ್‍ಡಿಎ ಕೂಟಕ್ಕೇಕೆ ಮತ ಹಾಕಲಿಲ್ಲ?

ಹೌದು.. ಗೌರಿಯವರು ಹುತಾತ್ಮರಾದ ನಂತರ ಹೆದರದ ಚಿಂತಕರ ಧೈರ್ಯವಷ್ಟೇ ಅಲ್ಲದೇ, ಈ ಅಂಶವೂ ನಮಗೆ ವಿಶ್ವಾಸವನ್ನು ತಂದುಕೊಡುತ್ತದೆ. ಈ ದೇಶದ ಜನಸಾಮಾನ್ಯರ ವಿವೇಕದ ಮೇಲೂ ನಾವು ವಿಶ್ವಾಸವಿಡಬೇಕು. ಕಳೆದ ಸಂಚಿಕೆಯಲ್ಲಿ ಬರೆದಂತೆ ಮೇಲ್ಜಾತಿಗಳ ಮತ್ತು ತಳಸಮುದಾಯಗಳ ಒಂದು ವಿಭಾಗದ ಧ್ರುವೀಕರಣವನ್ನು ಫ್ಯಾಸಿಸ್ಟರು ಸಾಧಿಸಿದ್ದಾರೆ. ಅವರಲ್ಲಿ ಬಾಯಿಬಲ್ಲ ಜನರು ಹೆಚ್ಚಿದ್ದಾರೆ. ಅವರ ಮಾತುಗಳು ಎಲ್ಲೆಡೆಯೂ ಅನುರಣಿಸುತ್ತಲೂ ಇರಬಹುದು. ಆದರೆ, ಭಾರತವೆಂದರೆ ಅಷ್ಟೇ ಅಲ್ಲ. ನೈತಿಕವಾಗಿ ಗಟ್ಟಿಯಿರುವ, ಧೀಮಂತಿಕೆಯಿರುವ, ನಿಜವಾದ ವಿದ್ವಾಂಸವಾಗಿರುವ, ಧೈರ್ಯವಿರುವ ಲಕ್ಷಾಂತರ ಪ್ರಜ್ಞಾವಂತರು ಬೀಸುತ್ತಿರುವ ಗಾಳಿಗೆ ತೂರಿ ಹೋಗಿಲ್ಲ. ಎನ್‍ಆರ್‍ಸಿ ಸಂದರ್ಭದಲ್ಲಿ ಬೀದಿಗಿಳಿದ ಕೋಟಿ ಕೋಟಿ ಜನರು ನಮಗೆ ‘ಇದು ಸಾಧ್ಯ’ ಎಂದು ತೋರಿಸಿದ್ದಾರೆ. ಲಕ್ಷಗಟ್ಟಲೇ ಜನರು ಸಾಮಾಜಿಕ ಜಾಲತಾಣಗಳಲ್ಲಿ ಜೀವವಿರೋಧಿ ಸುಳ್ಳರನ್ನು ಮತ್ತು ಬಲಿಪಶುಗಳಾಗಿರುವ ಅಮಾಯಕರನ್ನು ಎದುರಿಸುತ್ತಿದ್ದಾರೆ.

ಇವರಲ್ಲಿ ಕೇವಲ ಶೇ.50ರಷ್ಟು ಜನರನ್ನು (ಶೇ.100 ಎಂದೆಂದಿಗೂ ಸಾಧ್ಯವಿಲ್ಲ) ಒಟ್ಟಿಗೆ ಹೆಣೆಯಬಲ್ಲ ತಂತನ್ನು ಶೋಧಿಸಿ ಮುಂದಕ್ಕೆ ಹೋಗುವುದಾದಲ್ಲಿ ಹಿಟ್ಲರ್‍ಗಳು, ಗೊಬೆಲ್ಸ್‍ಗಳು ನಿಲ್ಲಲಾರರು. ಆದರೆ 2014ರಿಂದ ಎಲ್ಲಾ ಸಮಸ್ಯೆಗಳು ಶುರುವಾದವು ಎಂದು ಹೇಳಿದರೆ, ಜನರು ನಂಬಲಾರರು. 2014ರಲ್ಲಿ ಎಲ್ಲವೂ ಮುಗಿದು ಹೋಯಿತು ಎಂದರೆ ಯಾರೂ ವಿಶ್ವಾಸವಿಡಲಾಗದು. ಭಾರತದ ದೇಶದ ಜನರ ವಿವೇಕವನ್ನು ಬಡಿದೆಬ್ಬಿಸುವ ಕೆಲಸ ಮಾಡಿದರೆ ಸಾಕು, ಬದಲಾವಣೆ ದೂರದ ಸಂಗತಿಯಾಗಿರುವುದಿಲ್ಲ.

ಕಾಕತಾಳೀಯವೆಂಬಂತೆ, ಈ ವಿಚಾರವನ್ನು ಬರೆಯಬೇಕೆಂದುಕೊಂಡ ವಾರವೇ ಎರಡು ಲೇಖನಗಳನ್ನು ನಾನು ಓದಿದೆ. ಒಂದು ದೆಹಲಿಯ ಅಸೀಂ ಅಲಿ ಅವರು ಪ್ರಿಂಟ್‍ನಲ್ಲಿ ಬರೆದ ಲೇಖನ. ಇನ್ನೊಂದು ಸಿಪಿಐ-ಎಂಎಲ್‍ನ ನಾಯಕಿ ಕವಿತಾ ಕೃಷ್ಣನ್ ಅವರು ನಮ್ಮ ಪತ್ರಿಕೆಯ ಈ ಸಂಚಿಕೆಗೆ ಬರೆದ ಲೇಖನ. ಅವರೀರ್ವರ ಲೇಖನಗಳೂ ಇದಕ್ಕೆ ಪೂರಕವಾದ, ಇನ್ನೂ ಖಚಿತವಾದ ಹಲವು ಸಂಗತಿಗಳನ್ನು ಮುಂದಿಟ್ಟಿವೆ. ಈ ಎಲ್ಲಾ ಲೇಖನಗಳಲ್ಲಿರುವ ಅಂಶಗಳ ಮೇಲೆ ಚರ್ಚೆ ಮತ್ತು ಕ್ರಿಯೆ ಆರಂಭವಾದರೆ, ನಾವು ಇನ್ನೂ ಕಳೆದುಹೋಗಿರದ ಭಾರತವನ್ನು ಇನ್ನೂ ಗಟ್ಟಿಯಾಗಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆಂಬ ಬಗ್ಗೆ ನನಗ್ಯಾವ ಸಂದೇಹವೂ ಇಲ್ಲ.

 

3ನೇ ವರ್ಷಕ್ಕೆ ಕಾಲಿಟ್ಟ ನ್ಯಾಯಪಥ

ನ್ಯಾಯಪಥ ಪತ್ರಿಕೆಯು 2 ವರ್ಷಗಳನ್ನು ಪೂರೈಸಿ, ಮೂರನೇ ವರ್ಷಕ್ಕೆ ಕಾಲಿಡುವ ಈ ಹೊತ್ತಿನಲ್ಲಿ ನಮಗೆ ಸಿಗುತ್ತಿರುವ ಪ್ರತಿಕ್ರಿಯೆಯು ಆಶಾಭಾವನೆಯನ್ನು ಮೂಡಿಸಿದೆ. ಈ ಮಧ್ಯೆ ಹಲವು ಏಳು-ಬೀಳುಗಳು, ತಿಣುಕಾಟಗಳು ಇದ್ದವು. ಒಟ್ಟಿಗೇ ದೊಡ್ಡ ಸದ್ದಿನೊಂದಿಗೆ ಆರಂಭವಾದ ಪತ್ರಿಕೆ ಇದಲ್ಲ. ಭಾರೀ ದೊಡ್ಡ ಮೇಧಾವಿಗಳಿಂದ ಕೂಡಿದ ತಂಡವೂ ನಮ್ಮದಲ್ಲ. ನಮ್ಮೊಡನಿರುವ ಹಿರಿಯರಾದ ಉಮಾಪತಿಯವರು ‘ಈ ಪತ್ರಿಕೆಯು ಲಂಕೇಶ್ ಪತ್ರಿಕೆಯ ಮುಂದುವರಿಕೆಯೆಂಬಂತೆ ಹಲವರು ನೋಡಬಹುದು. ಲಂಕೇಶ್‍ರಂಥವರಿಗೂ ನಮಗೂ ಯಾವುದೇ ಹೋಲಿಕೆಯಿಲ್ಲ. ಆ ಹೋಲಿಕೆಯೇ ಇಲ್ಲದೇ ನೋಡಲು ಮೊದಲು ಶುರು ಮಾಡಬೇಕು’ ಎಂದು ಹಲವು ಸಾರಿ ಹೇಳಿದ್ದಾರೆ. ಆದರೆ, ಗೌರಿ ಲಂಕೇಶರ ಮನದಾಳದ ಆಶಯಗಳಿಗೆ ಧಕ್ಕೆ ಬಾರದಂತೆ ನಡೆಸಿಕೊಂಡು ಹೋಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇಲ್ಲಿಯವರೆಗೂ ಬಂದಿದ್ದೇವೆ.

ಇಲ್ಲಿಂದ ಮುಂದಿನ ಪಯಣ ಹೊಸ ಪ್ರಯೋಗಗಳ ಜೊತೆ ನಡೆಯಲಿದೆ. ಆ ಪಯಣದಲ್ಲಿ ಓದುಗರು ಮತ್ತು ನಾವು ಒಟ್ಟಿಗೇ ಹೆಜ್ಜೆ ಹಾಕುತ್ತೇವೆ ಮತ್ತು ಯಶಸ್ವಿಯಾಗುತ್ತೇವೆಂಬ ನಂಬುಗೆಯಿದೆ.

– ಗೌರಿ ಮೀಡಿಯಾ ತಂಡ.


ಇದನ್ನೂ ಓದಿ: ಪ್ರೀತಿಯ ಸಂಗಾತಿ ಗೌರಿಗೆ ಒಂದು ಪತ್ರ : ವಿ.ಎಸ್ ಶ್ರೀಧರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...