Homeಅಂಕಣಗಳುಅಪ್ಪನ ಕನವರಿಕೆ, ಕನಸುಗಳ ಮರುಹುಟ್ಟು: ಗೌರಿಯವರ ಮೊದಲ ಕಣ್ಣೋಟ ಇದು

ಅಪ್ಪನ ಕನವರಿಕೆ, ಕನಸುಗಳ ಮರುಹುಟ್ಟು: ಗೌರಿಯವರ ಮೊದಲ ಕಣ್ಣೋಟ ಇದು

ಅಪ್ಪನ ‘ಪತ್ರಿಕೆ' ಈಗ ಅವರ 70ನೇ ಹುಟ್ಟು ಹಬ್ಬದ ದಿನವೇ ಹೊಸ ಹುಟ್ಟು ಪಡೆದು ನಿಮ್ಮ ಕೈಯಲ್ಲಿಇಟ್ಟಿದ್ದೇನೆ. ಹಳೆಯದರ ಮುಂದುವರಿಕೆ, ಹೊಸ ಕಾಲದ ಸ್ಪಂದನೆಗೆ ತಕ್ಕ ಹಾಗೆ ಮಾರ್ಪಾಡು- ಇವು ಒಂದು ಪತ್ರಿಕೆಯನ್ನು ಸದಾ ಕಾಲ ಜೀವಂತವಾಗಿಡುವ ಸೂತ್ರಗಳು. ಈ ಸೂತ್ರ ಹೇಳಿಕೊಟ್ಟವರು ನೀವು. ಅದನ್ನು ಪಾಲಿಸುವ ಕರ್ತವ್ಯ ಮಾತ್ರ ನನ್ನದು.

- Advertisement -
- Advertisement -

ಅತ್ಯಂತ ದುಗುಡ, ಆತಂಕ ಹಾಗೂ ನಿರ್ಭಯತೆಯಿಂದ ಈ ಅಂಕಣವನ್ನು ಇಂದು ಬರೆಯುತ್ತಿದ್ದೇನೆ. ಕಳೆದ ನಾಲ್ಕು ವಾರಗಳಲ್ಲಿ ಕರ್ನಾಟಕದ ಒಟ್ಟು ಸಂದರ್ಭದಲ್ಲಿ ಮತ್ತು ನನ್ನ ವೈಯಕ್ತಿಕ ಬದುಕಿನಲ್ಲಿ ನಡೆದು ಹೋದ ಘಟನೆಗಳು ತೆರೆದ ಪುಸ್ತಕದಂತೆ. ಎಲ್ಲರಿಗೂ ತಿಳಿದಿದೆ. ಮಹಿಳಾ ವಾದದಲ್ಲಿ ‘ಖಾಸಗಿ ಎಂಬುದು ಕೂಡ ರಾಜಕೀಯ’ (The Personal is also political) ಎಂಬ ಪ್ರಸಿದ್ಧ ಮಾತಿದೆ. ನನ್ನ ಬದುಕಿನಲ್ಲಿ ಇದು ಅಕ್ಷರಶಃ ನಿಜವಾಗಿದೆ.

ಪತ್ರಿಕಾ ರಂಗ ನನಗೆ ಹೊಸದೇನಲ್ಲ. ಆದರೆ ಐದು ವರ್ಷಗಳ ಹಿಂದೆ ಅಪ್ಪನ ಪತ್ರಿಕೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತಾಗ ನಾನೊಂದು ಮರು ಹುಟ್ಟನ್ನೇ ಪಡೆದೆ. ಯಾವ ವಿಶ್ವವಿದ್ಯಾನಿಲಯದಲ್ಲೂ ಕಲಿಯಲಾಗದಷ್ಟನ್ನು ಕಳೆದ ಐದು ವರ್ಷಗಳಲ್ಲಿ ಕಲಿತೆ. ಅಂದಿನಿಂದ ಇವತ್ತಿನವರೆಗೂ ಅಪ್ಪನ ಧ್ಯೇಯೋದ್ದೇಶಗಳು ಮತ್ತು ಕರ್ನಾಟಕದ ಓದುಗರು ನನ್ನ ಕೈ ಹಿಡಿದು ಮುನ್ನೆಡೆಸಿದ್ದಾರೆ.

ನನ್ನ ಮುಂದೆ ಅಂದು ಇದ್ದ ಧ್ಯೇಯಗಳು ಮೂರು: ಅಧಿಕಾರ ವರ್ಗದ ಬಗ್ಗೆ ನಿಷ್ಠುರತೆ, ಜನಸಾಮಾನ್ಯರ ಬಗ್ಗೆ ಪ್ರೀತಿ ಮತ್ತು ಎಂತಹ ಕಠಿಣ ಸಂದರ್ಭದಲ್ಲೂ ಅನ್ಯಾಯದೊಂದಿಗೆ ರಾಜಿ ಮಾಡಿಕೊಳ್ಳದಂತೆ ಆತ್ಮ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು. ಇವು ಮೂರು ನನ್ನನ್ನು ಇಂದಿಗೂ ಕಾಪಾಡಿಕೊಂಡು ಬಂದಿವೆ. ನನ್ನ ಬದುಕಿನ ಈ ಹೊಸ ಅಧ್ಯಾಯದ ಹೊಸ್ತಿಲಲ್ಲಿ ಇವೇ ನನಗೆ ಶ್ರೀರಕ್ಷೆ ಕೂಡ ಆಗಿವೆ; ಅಪ್ಪನ ‘ಪತ್ರಿಕೆ’ಗೆ ಮರುಹುಟ್ಟು ನೀಡುವ ಶಕ್ತಿಯನ್ನು ಕೊಟ್ಟಿವೆ.

ಕಳೆದ ಐದು ವರ್ಷ ನಾನು ಅನುಭವಿಸಿದ ಯಾತನೆ ನನಗೆ ಮಾತ್ರ ಗೊತ್ತು. ನನ್ನನ್ನು ಹಾದಿ ತಪ್ಪಿಸುವ ಕ್ಷುದ್ರ ಶಕ್ತಿಗಳು ಬಗಲಲ್ಲೇ ಇದ್ದವು. ಅಪ್ಪನ ಆದರ್ಶಗಳನ್ನು ಎಂದೋ ಗಾಳಿಗೆ ತೂರಿ, ಪತ್ರಿಕಾ ಧರ್ಮವನ್ನು ಮರೆತು ಅನೇಕ ಆಮಿಷ-ಅಸೂಯೆಗಳಿಗೆ ಶರಣಾಗಿದ್ದ ಕೆಲ ಜನರ ನಡುವೆ ನಾನು ಇಷ್ಟು ದಿನ ಮೂಕವೇದನೆ ಅನುಭವಿಸಿದ್ದೆ. ಅದಕ್ಕೆ ಏಕೈಕ ಕಾರಣ ಅಪ್ಪನ ಪತ್ರಿಕೆಯನ್ನು ಹೇಗಾದರೂ ಮಾಡಿ ಮುನ್ನಡೆಸಬೇಕು ಎಂಬ ಒಂದೇ ಒಂದು ಉದ್ದೇಶ ನನ್ನದಾಗಿತ್ತು.

ನನ್ನ ವೈಕ್ತಿಕ ಒದುಕು, ಆಸೆಗಳನ್ನು ಪಕ್ಕಕ್ಕೆ ಸರಿಸಿದೆ. ನಮ್ಮದೇ ಆಗಿದ್ದ ಸಂಸ್ಥೆಯಲ್ಲಿ ಸಂಬಳ ಪಡೆದು ದುಡಿದೆ. ಈ ವಿಚಾರ ನನ್ನ ಆಪ್ನ ಗೆಳೆಯರಿಗೂ ತಿಳಿದರಲಿಲ್ಲ. ಆದರೆ ಎಂತಹದೇ ಬಿಕ್ಕಟ್ಟಿನ ಸಂದರ್ಭದಲ್ಲೂ ನನಗೆ ಹಣ ಎಂದೂ ಮುಖ್ಯವಾಗಿರಲಿಲ್ಲ. ಆದರೆ ಯಾವಾಗ `ಪತ್ರಿಕೆ’ ಬಳಗದ ಹಲವರು ಸರ್ಕಾರದ ಮುಂದೆ ಸೈಟು ಇತ್ಯಾದಿಗಳಿಗೆ ಕೈಯ್ಯೊಡ್ಡಿದರೋ ಆಂದು ನಾನು ಕುಸಿದು ಹೋದೆ. ಅವರ ಆ ಕ್ರಿಯೆ ಅಪ್ಪ ನಿಂತು ಬೆಳೆಸಿದ್ದ `ಪತ್ರಿಕೆ’ಯ ಬುಡಕ್ಕೇ ಹಾಕಿದ ಕೊಡಲಿ ಏಟಾಗಿತ್ತು. ಅದನ್ನು ಪ್ರತಿಭಟಿಸಿದ್ದೆನಾದರೂ ಆಗಲೂ ಅಪ್ಪನ ಹಿತೈಷಿಗಳ ಸಲಹೆಯಂತೆ ಅಪ್ಪನ ಪತ್ರಿಕೆಯನ್ನು ಮುಂದುವರಿಸಲೇಬೇಕು ಎಂದು ನನ್ನ ವೃತ್ತಿ ಧರ್ಮವನ್ನು ಪಾಲಿಸುತ್ತಾ ಬಂದೆ.

ಕೇವಲ ಬರವಣಿಗೆ ಮಾತ್ರ ಸಾಲದು; ಜನರ ಹತ್ತಿರ ಹೋಗಬೇಕು; ಅವರ ಆಳದ ನೋವನ್ನು ಅವರಿಂದಲೇ ಕೇಳಬೇಕು ಎನ್ನವುದೂ ಈ ವೃತ್ತಿಧರ್ಮದ ವಿಸ್ತರಣೆ. ಹೀಗಾಗಿ ನಾನು ಜನರ ಹೋರಾಟಗಳಲ್ಲಿ ಪಾಲ್ಗೊಂಡೆ. ಅಪ್ಪ ಯಾವಾಗಲೂ ಹೇಳುತ್ತಿದ್ದರು “ಬೀದಿಗಳಿದು ಜನರ ಪರವಾಗಿ ಪ್ರತಿಭಟಿಸದಿದ್ದರೆ, ಅನ್ಯಾಯದ ವಿರುದ್ದ ಹೋರಾಡದಿದ್ದರೆ, ಸಮಾಜದ ಒಳಿತಿಗಾಗಿ ದುಡಿಯದಿದ್ದರೆ ನಾವು ಬದುಕಿದ್ದೂ useless” ಎಂದು.

ಆದರೆ ನಾನು ಹೀಗೆ ಜನಪರವಾಗಿ ಸಕ್ರಿಯವಾಗಿದ್ದನ್ನೇ ಹಲವರಿಗೆ ಸಹಿಸಲಾಗಲಿಲ್ಲ. ನನಗಾಗಿ ನಾನು ಏನನ್ನೂ ಆಶಿಸದಿದ್ದರೂ ಅಸೂಯೆಪಟ್ಟರು; ಅವಮಾನ-ಮಾನಸಿಕ ಹಿಂಸೆ ನೀಡಲಾರಂಭಿಸಿದರು. ಇದೆಲ್ಲ ಯಾವ ಹಂತ ಮುಟ್ಟಿತೆಂದರೆ ನಾನು ನಮ್ಮ ರಾಜ್ಯದಲ್ಲಿ ಶಾಂತಿ ನೆಲಸಬೇಕು, ಇಲ್ಲಿ ಹಿಂಸೆ-ಪ್ರತಿಹಿಂಸೆ ನಡೆದರೆ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಪದೇಪದೇ ಹೇಳುತ್ತಾ ಬಂದಿದ್ದರೂ ನಾನು ನಕ್ಸಲರ ಪರ ಎಂದು ನನ್ನ ಮೇಲೆ ಗೂಬೆ ಕೂರಿಸಲಾಯಿತು. ಶಾಂತಿಯ ಪರವಾಗಿ, ರಕ್ತದೋಕುಳಿಯ ವಿರುದ್ಧವಾಗಿ ಧ್ವನಿ ಎತ್ತುವುದೇ ಒಂದು ಕ್ರೈಂ ಎಂಬಂತೆ ಬಿಂಬಿಸಲಾಯಿತು.

ಇದೇ ಹೋತ್ತಿಗೆ ‘ಪತ್ರಿಕೆ’ಯ ಹೊರಗಡೆ ತುರ್ತುಪರಿಸ್ಥಿತಿಯನ್ನು ನೆನಪಿಸುವಂತಹ ದಿಗ್ಬಂಧನವನ್ನು ಸರ್ಕಾರ ನಮ್ಮ ಸುತ್ತ ನೇಯತೊಡಗಿತ್ತು. ಶಾಂತಿ-ಅಹಿಂಸೆಯನ್ನು ಬಯಸುವ ‘ಶಾಂತಿಗಾಗಿ ನಾಗರಿಕರ ವೇದಿಕೆಯ ಸಂಚಾಲಕರ ಮೇಲೆಯೇ ಅಶಾಂತಿ- ಹಿಂಸೆಯನ್ನು ಕದಡುವ ಆರೋಪವನ್ನು ಹೊರಿಸಲಾಯಿತು. ಬಾಬಾಬುಡನ್‍ಗಿರಿಯಲ್ಲಿ ನ್ಯಾಯಬದ್ಧವಾಗಿ ಹೋರಾಟ ನಡೆಸಿ ವೇದಿಕೆ ಪಡೆದುಕೊಂಡಿದ್ದ ಜಯಕ್ಕೆ ಪ್ರತೀಕಾರ ತೋರಲು ಕಾಯ್ದುಕೊಂಡಿದ್ದ ಸಂಘ ಪರಿವಾರಕ್ಕೆ ನಕ್ಸಲೀಯರ ವಿಚಾರ ಒಂದು ನೆಪವಾಯಿತು. ಪ್ರಭುತ್ವದ ಕೆಲವು ಶಕ್ತಿಗಳು ಸಂಘ ಪರಿವಾರವನ್ನು ಮುಂದಿಟ್ಟುಕೊಂಡು ಪ್ರೊ. ವಿ. ಎಸ್ ಶ್ರೀಧರ ಅವರ ಮೇಲೆ ನೇರ ಹಲ್ಲೆ ನಡೆಸಿದವು. ಇಂತಹದ್ದೇ ಮಹತ್ಕಾರ್ಯವನ್ನು ನನ್ನ ಮೇಲೆ ಸಾಧಿಸಲು ಸಂಘ ಪರಿವಾರದ ಸ್ಥಾನದಲ್ಲಿ ಪತ್ರಕೆಯ ಹಲವರೇ ಸಿದ್ಧರಾಗಿ ನಿಂತಿದ್ದರು. ಕೊನೆಗೆ ನಾನು ಬರೆದಿದ್ದ ಲೇಖನವನ್ನೇ ಓದದೆ ನನ್ನನ್ನ ಪತ್ರಿಕೆಯಿಂದ ಹೊರದೂಡಲಾಯಿತು.

ಆದರೆ ಯಾವ ದಿಕ್ಕಿನಿಂದ ಚಂಡಮಾರುತಗಳೂ ಬಿರುಗಾಳಿಯೂ ಬೀಸುತ್ತವೆಯೋ, ಆದೇ ದಿಕ್ಕಿನಿಂದ ದಾರಿ ತೋರುವ ಬೆಳಕೂ ಮೂಡಿಬರುತ್ತದೆ. ಪ್ರತಿವಾರದ ಕಿರಿ-ಕಿರಿ, ಅವಮಾನ, ದಬ್ಬಾಳಿಕೆಯಿಂದ ಜರ್ಜರಿತಳಾಗಿದ್ದ ನನಗೆ ಇದೊಂದು ರೀತಿಯಲ್ಲಿ ಬಿಡುಗಡೆ ನೀಡಿತು. ಆದರೆ ಈ ಬಿಡುಗಡೆ ಪಡೆದ ನಂತರ ನನ್ನ ಮುಂದೆ ಇದ್ದದ್ದು ಮೂರು ಆಯ್ಕೆಗಳು: ಒಂದು ಪತ್ರಿಕೋದ್ಯಮದಲ್ಲಿ ಎರಡು ದಶಕಗಳ ಅನುಭವವಿರುವ ನನಗೆ ಕೈತುಂಬ ಸಂಬಳ ಸಿಗುವ ಕೆಲಸಕ್ಕೇನು ತೊಂದರೆ ಇಲ್ಲ, ದೆಹಲಿಗೋ, ಮುಂಬೈಗೋ ಹೋಗಿ ಆರಾಮವಾಗಿ ಜೀವಿಸಬಲ್ಲೆ. ಎರಡನೆಯದು, ಇದೆಲ್ಲಕ್ಕೂ ತಿಲಾಂಜಲಿ ಹೇಳಿ ನೆಲಮಂಗಲದ ಬಳಿ ಇರುವ ಅಮ್ಮನ ಐದು ಎಕರೆ ತೋಟವನ್ನು ನೋಡಿಕೊಳ್ಳುತ್ತಾ, ರೈತ ಮಹಿಳೆಯಾಗಿ ಜೀವನ ಸಾಗಿಸುವುದು. ಕಳೆದ ಒಂದು ವರ್ಷದಿಂದ ತೋಟದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನನಗೆ ಅಲ್ಲಿನ ತೆಂಗು, ಮಾವು ಮತ್ತು ಅಡಿಕೆ ಮರಗಳ ನೀಡುವ ಸಂತೋಷ ಮತ್ತು ಆರ್ಥಿಕ ಭಾರ ಎರಡ ಸಾಮಾನ್ಯವಾಗಿದೆ. ಇರಲಿ. ನನ್ನ ಮುಂದೆ ಇದ್ದ ಮೂರನೇ ಆಯ್ಕೆ: ಇನ್ನು ಮುಂದೆ ಯಾವ ಮುಲಾಜು, ಸಣ್ಣತನ ಸ್ವಾರ್ಥದಿಂದ ಹುಟ್ಟುವ ಖುಣಗಳ ಭಾರವಿಲ್ಲದೆ ಅಪ್ಪನ ಹೆಸರಿನಲ್ಲಿ ಇನ್ನೊಂದು ಪತ್ರಿಕೆ ಸ್ಥಾಪಿಸಿ ಅವರ ಧ್ಯೇಯ್ಯೋದ್ದೇಶಗಳನ್ನು ಮುನ್ನಡೆಸುವುದು. ಈ ಮೂರರಲ್ಲಿ ಕೊನೆಯದ್ದು ಬಹಳ ಕಷ್ಟದಿಂದ ಕೂಡಿರುವಂತದ್ದು. ಆದರೆ ಕೊನೆಗೆ ಅದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ.

ನಿಮ್ಮೆಲ್ಲರಿಗೂ ಗೊತ್ತಿರುವಂತೆ ನಿಮ್ಮ ಕೈಯಲ್ಲಿರು ಈ ಪತ್ರಿಕೆ ಯಾವ ಪಕ್ಷಕ್ಕೂ, ಸಂಘಟನೆಗೂ ಮುಖವಾಣಿಯಲ್ಲ; ಹಾಗೆ ಎಂದೂ ಆಗುವುದೂ ಇಲ್ಲ. ಪ್ರಜಾತಾಂತ್ರಿಕ ಆಶಯ, ಸಮಾಜವಾದಿ ನಿಲುವು, ಶಾಂತಿ ಮತ್ತು ಸೌಹಾರ್ದದ ಪರ, ಹಿಂಸೆಯ ವಿರುದ್ಧ ಹಾಗೂ ಸಂವಿಧಾನದ ಮೂಲಭೂತ ಉದ್ದೇಶಗಳಿಗೆ ಮಾತ್ರ ಈ ಪತ್ರಿಕೆ ಬದ್ಧವಾಗಿರುತ್ತದೆ. ಮತ್ತು ಎಂದಿನಂತೆ ಖಾಯಂ ವಿರೋಧ ಪಕ್ಷವಾಗಿರುತ್ತದೆ.

ಹಿಂದಿನ ಕಹಿಯನ್ನೆಲ್ಲ ಬಿಟ್ಟು ಮುಂದೆ ಸಾಗಬೇಕಾದದ್ದು ಜೀವನದ ಧರ್ಮ. ನನ್ನ ಜೀವನದ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ನಾನು ಏಕಾಂಗಿಯಲ್ಲ ಎಂದು ಪತ್ರಿಕೆಯ ಅಸಂಖ್ಯಾತ ಓದುಗರು ಹೆಗಲಿಗೆ ಹೆಗಲು ಕೊಟ್ಟಿದಾರೆ. ‘ಲಂಕೇಶರ ಹೋರಾಟವನ್ನು ಮುಂದುವರೆಸು’ ಎಂದು ನನ್ನ ಬೆನ್ನು ತಟ್ಟಿದ್ದಾರೆ. ನಾನು ಎಂದೂ ನೋಡದೆ ಇದ್ದವರೂ ನನ್ನ ಆಫೀಸನ್ನು ಹುಡುಕಿಕೊಂಡು ಬಂದು, ಕಂಪ್ಯೂಟರ್, ಹಣ, ಇತ್ಯಾದಿಗಳನ್ನು ನೆರವಾಗಿ ನೀಡಿದ್ದಾರೆ. ತೀರಾ ಸಂಕೋಚದಿಂದ “ನನ್ನ ನೆರವು ಇದು” ಎಂದು ಹೇಳಿ 50,000 ರೂ.ಗಳ ಚೆಕ್ ಅನ್ನು ನನ್ನ ಕೈಯ್ಯಲ್ಲಿಟ್ಟು ನಾನು ಥ್ಯಾಂಕ್ಸ್ ಹೇಳುವುದನ್ನೂ ಕೇಳಿಸಿಕೊಳ್ಳದೆ ಹೊರಟುಹೋದ ಆಪತ್ಬಾಂಧವರಿದ್ದಾರೆ. ಕನ್ನಡದ ಹೆಸರಾಂತ ರಂಗಕರ್ಮಿ ಪ್ರಸನ್ನರವರು “ನಿನ್ನ ಜೀವನದ ದೊಡ್ಡ ಕ್ರೈಸಿಸ್ ಇದು; ಹಾಗೆಯೇ ನಿನ್ನ ಜೀವನದ ಅತಿ ಕ್ರಿಯಾಶೀಲ ಸಂದರ್ಭವೂ ಇದಾಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಹೀಗಾಗುತ್ತದೆ. ಅದನ್ನು ಎದುರಿಸಿ ನಿಂತು ಕ್ರಿಯಾಶೀಲರಾಗುವುದೇ ಬದುಕಿನ ನಿಜವಾದ ಅರ್ಥ” ಎಂದು ಹೇಳಿದ್ದು ನನ್ನ ಕಿವಿಯಲ್ಲಿ ಇನ್ನೂ ರಿಂಗಣಿಸುತ್ತಿದೆ….……

ಇಷ್ಟೊಂದು ಜನರ ವಿಶ್ವಾಸ, ಬೆಂಬಲ, ಸ್ಪೂರ್ತಿ ನನಗಿರುವುದು ಅಪ್ಪನ ನಿಲುವುಗಳನ್ನು ನಾನು ಪಾಲಿಸಿಕೊಂಡು ಬಂದಿದ್ದರಿಂದಲೇ ಎಂಬುದು ಸ್ಪಷ್ಟ… ಎಲ್ಲಿಯವರೆಗೆ ಈ ಧ್ಯೇಯ ನನ್ನದಾಗಿರುವುದೋ ಅಲ್ಲಿಯವರೆಗೂ ಇದೇ ಜನರ ಪ್ರೀತಿ ನನ್ನ ಮೇಲಿರುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಮೇಲಿನ ಅನುಕಂಪದಿಂದ ಮಾತ್ರ ಈ ಸಹಾಯ ಬಂದಿದ್ದರೆ, ನಾನು ಋಣದ ಭಾರದಲ್ಲಿ ಕುಸಿಯುತ್ತಿದ್ದೆ. ಆದರೆ ವೈಯಕ್ತಿಕ ಋಣದ ಲೇಪ ಸ್ವಲ್ಪವೂ ಇಲ್ಲದ ಹಾಗೆ ನನಗೆ ಬೆಂಬಲದ ಮಹಾಪೂರ ಹರಿದು ಬಂದಿರುವುದು ನನಗೆ ಅತ್ಯಂತ ಹೆಮ್ಮೆ, ಸಂತೋಷ ತಂದಿದೆ; ಮತ್ತು ಹುರುಪನ್ನು ನೀಡಿದೆ.

ಅಪ್ಪನ ‘ಪತ್ರಿಕೆ’ ಈಗ ಅವರ 70ನೇ ಹುಟ್ಟು ಹಬ್ಬದ ದಿನವೇ ಹೊಸ ಹುಟ್ಟು ಪಡೆದು ನಿಮ್ಮ ಕೈಯಲ್ಲಿಇಟ್ಟಿದ್ದೇನೆ. ಹಳೆಯದರ ಮುಂದುವರಿಕೆ, ಹೊಸ ಕಾಲದ ಸ್ಪಂದನೆಗೆ ತಕ್ಕ ಹಾಗೆ ಮಾರ್ಪಾಡು- ಇವು ಒಂದು ಪತ್ರಿಕೆಯನ್ನು ಸದಾ ಕಾಲ ಜೀವಂತವಾಗಿಡುವ ಸೂತ್ರಗಳು. ಈ ಸೂತ್ರ ಹೇಳಿಕೊಟ್ಟವರು ನೀವು. ಅದನ್ನು ಪಾಲಿಸುವ ಕರ್ತವ್ಯ ಮಾತ್ರ ನನ್ನದು.

ನಿಮ್ಮ ಈ ‘ಪತ್ರಿಕೆ’ಗೆ ನನ್ನ ಪ್ರೀತಿಯ ಸ್ವಾಗತ.

ಮಾರ್ಚ್ 16, 2005


ಇದನ್ನೂ ಓದಿ: ಗೌರಿ ಲಂಕೇಶ್ ಇಲ್ಲದ ಈ ಮೂರು ವರುಷಗಳು : ಪ್ರೊ.ಸಬಿಹಾ ಭೂಮಿಗೌಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...