Homeಮುಖಪುಟ'ನೆರಳಿನಿಂದ ನಕ್ಷತ್ರದವರೆಗೆ..'; ರೋಹಿತ್ ವೇಮುಲಾ 8ನೇ ವರ್ಷದ ಸ್ಮರಣೆ

‘ನೆರಳಿನಿಂದ ನಕ್ಷತ್ರದವರೆಗೆ..’; ರೋಹಿತ್ ವೇಮುಲಾ 8ನೇ ವರ್ಷದ ಸ್ಮರಣೆ

- Advertisement -
- Advertisement -

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೂ ಕಳೆದಿರಲಿಲ್ಲ; ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಯಾಗಿದ್ದ, ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂದುಕೊಂಡಿದ್ದ ರೋಹಿತ್ ಸಾವಿನ ಸುದ್ದಿ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ದೇಶದ ಲಕ್ಷಾಂತರ ಜನರ; ಮುಖ್ಯವಾಗಿ, ಯುವ ಸಮೂಹದ ಕಣ್ಣೀರಿಗೆ ಕಾರಣವಾಗಿತ್ತು.

ದಲಿತ ವಿದ್ಯಾರ್ಥಿಗಳಿಗೆ ನೆರವು ನೀಡುವಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ತಾರತಮ್ಯ ಹಾಗೂ ವಿವಿಗಳ ಕೇಸರೀಕರಣದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ ರೋಹಿತ್ ವೇಮುಲ ಬರೆದಿದ್ದ ಕೊನೆಯ ಪತ್ರ ಪ್ರತಿಯೊಬ್ಬರ ಕರುಳನ್ನೂ ಕಿವುಚಿತ್ತು.

26 ವರ್ಷದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ರೋಹಿತ್, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ತಮ್ಮ ಸೀನಿಯರ್ ಒಬ್ಬರ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘದ ಸದಸ್ಯರಾಗಿದ್ದರು, ಇದು ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡುತ್ತದೆ. ವಿಶ್ವವಿದ್ಯಾನಿಲಯದ ವಸತಿ ಸೌಲಭ್ಯದಿಂದ ಹೊರಹಾಕುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಐವರು ದಲಿತ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದು, ಹಾಸ್ಟೆಲ್‌ನಿಂದ ಹೊರಬರುತ್ತಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದವು.

ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನೂ ರೋಹಿತ್ ಎದುರಿಸಿದ್ದರು. ಆದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಚಾರಣೆ ನಂತರ ಕ್ಲೀನ್‌ಚಿಟ್ ನೀಡಿದರೂ, ಡಿಸೆಂಬರ್‌ ಹೊತ್ತಿಗೆ ತನ್ನ ನಿರ್ಧಾರವನ್ನು ಬದಲಾಯಿಸಿತು.

‘ರೋಹಿತ್ ಕಠಿಣ ಪರಿಶ್ರಮಿ, ಅದ್ಭುತ ವಿದ್ಯಾರ್ಥಿ ಮತ್ತು ಸಹೃದಯ ಆತ್ಮ’ ಎಂದು ಅವರ ಆತ್ಮೀಯ ಸ್ನೇಹಿತರಾಗಿದ್ದ ಪಿ ವಿಜಯ್ ಹೇಳಿದ್ದರು. ‘ಅವರು ತಮ್ಮ ಹೆಚ್ಚಿನ ಸಮಯವನ್ನು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಕಳೆಯುತ್ತಿದ್ದರು’ ಎಂದು ಅವರ ಮರಣದ ನಂತರ ಹೇಳಿದ್ದರು.

ರೋಹಿತ್ ಸಾವಿನ ನಂತರ ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ, ಹಲವು ವಿಶ್ವವಿದ್ಯಾಲಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದವು. ಸಂಸತ್ತಿನ ಅಧಿವೇಶನದಲ್ಲಿ ಹಲವು ದಿನಗಳ ಕಾಲ ರೋಹಿತ್ ಸಾವಿನ ವಿಚಾರವಾಗಿ ಚರ್ಚೆಗಳು ನಡೆದು, ಅಂದಿನ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿ ಅವರನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು.

ಇಂದಿಗೆ (17-01-2016; 17-01-2024) ರೋಹಿತ್ ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿ, ಮನಸ್ಸಿನಿಂದ ಅಪ್ಪಿಕೊಂಡು ಎಂಟು ವರ್ಷ ಕಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದು ಲಕ್ಷಾಂತರ ಜನ ರೋಹಿತ್ ನೆನಪಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಆತ ಕೊನೆಯದಾಗಿ ಬರೆದ ಡೆತ್ ನೋಟ್‌ನ ಸಾಲುಗಳನ್ನು ಹಂಚಿಕೊಂಡಿದ್ದಾರೆ.

ರೋಹಿತ್ ವೇಮುಲ ಕೊನೆಯದಾಗಿ ಬರೆದ ಡೆತ್ ನೋಟ್:

ಶುಭ ಮುಂಜಾನೆ…

ನೀವು ಈ ಪತ್ರವನ್ನು ಓದುವಾಗ ನಾನಿರುವುದಿಲ್ಲ, ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನಿಜಕ್ಕೂ ನನ್ನ ಬಗ್ಗೆ ಕಾಳಜಿ ತೋರಿದಿರಿ, ಪ್ರೀತಿಸಿದಿರಿ ಮತ್ತು ಉತ್ತಮವಾಗಿ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನನಗೆ ಸಮಸ್ಯೆಯಿದ್ದಿದ್ದು ನನ್ನೊಂದಿಗೇನೇ, ನನ್ನ ದೇಹ ಮತ್ತು ಆತ್ಮದ ನಡುವಿನ ಕಂದಕ ದೊಡ್ಡದಾಗುತ್ತಿರುವ ಭಾವನೆ ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ.

ಒಬ್ಬ ಬರಹಗಾರನಾಗಬೇಕೆಂಬುದು ಯಾವಾಗಲೂ ನನ್ನ ಬಯಕೆಯಾಗಿತ್ತು. ಕಾರ್ಲ್ ಸಗಾನ್‌ನಂತೆ, ವಿಜ್ಞಾನದ ಬರಹಗಾರನಾಗಬಯಸಿದ್ದೆ. ಕೊನೆಗೆ. ಇದೊಂದು ಪತ್ರವನ್ನು ಮಾತ್ರ ನನ್ನಿಂದ ಬರೆಯಲಾಗುತ್ತಿರುವುದು.
ನಾನು ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ. ಆದರೆ, ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ಕಾಲವಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನು ಇಲ್ಲಿ ಕಟ್ಟಿಕೊಡಲಾಗಿದ್ದು, ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಇಲ್ಲಿ ಬೆಲೆ ಬರುವುದೇ ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ. ಅದು ಅಧ್ಯಯನ ಕ್ಷೇತ್ರದಲ್ಲಿರಲಿ, ಬೀದಿಗಳಲ್ಲಿರಲಿ, ರಾಜಕೀಯದಲ್ಲಿರಲಿ. ಸಾವಿನಲ್ಲೇ ಇರಲಿ ಅಥವಾ ಬದುಕಿನಲ್ಲೇ ಇರಲಿ; ಮನುಷ್ಯನ ಮೌಲ್ಯ ಎಂಬುದು ಅವನ ತತ್ಕ್ಷಣದ ಅಸ್ಮಿತೆ ಮತ್ತು ಸಮೀಪದ ಯಾವುದೋ ಒಂದು ಸಾಧ್ಯತೆಯ ಮಟ್ಟಕ್ಕಷ್ಟೇ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ಸಂಖ್ಯೆಗೆ ಒಂದು ವಸ್ತುವಿಗೆ. ಅಷ್ಟೆ. ಮನುಷ್ಯನನ್ನು ಅವನ ಮನಸ್ಸಿನ ಮೂಲಕ ಎಂದೂ ಪರಿಗಣಿಸಲಿಲ್ಲ. ನಭೋಮಂಡಲದ ನಕ್ಷತ್ರಗಳ ಧೂಳಿನಿಂದ ಮಾಡಲ್ಪಟ್ಟ ಅತ್ಯದ್ಭುತ ವಸ್ತುವಿನಂತೆ ಎಂದೂ ಅವನನ್ನು ಗುರುತಿಸಲಿಲ್ಲ.

ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಇದು ಅಂತಿಮ ಪತ್ರದ ಮೊದಲ ಯತ್ನ. ಏನಾದರೂ ತಪ್ಪಾಗಿ ಬರೆದಿದ್ದರೆ ಮನ್ನಿಸಿ. ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ಎಡವಿದೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ. ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಹತಾಶೆಯಿಂದ ಓಡುತ್ತಿದ್ದೆ. ಕೆಲವರಿಗೆ ಬದುಕೇ ಒಂದು ಶಾಪ. ನನಗೆ, ನನ್ನ ಹುಟ್ಟೇ ನನಗೆ ಮಾರಣಾಂತಿಕ ಅಪಘಾತ. ನನ್ನ ಬಾಲ್ಯದ ಏಕಾಂಗಿತನದಿಂದ ನಾನೆಂದೂ ಚೇತರಿಸಿಕೊಳ್ಳಲಾರೆ. ನನ್ನ ಗತದಿಂದ ಬಂದ ಪಾಪಿ ಕೂಸು ನಾನು.

ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ. ದುಃಖವಾಗುತ್ತಿಲ್ಲ; ಖಾಲಿ ಖಾಲಿ ಅನಿಸುತ್ತಿದೆ. ನನ್ನ ಬಗ್ಗೆ ನನಗೇ ಕಾಳಜಿಯಿಲ್ಲದಾಗಿದೆ. ಇದು ಅಸಹ್ಯ; ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಸ್ವಾರ್ಥಿ, ಮೂರ್ಖ ಎನ್ನಬಹುದು. ಅದರ ಬಗ್ಗೆಯೇನೂ ಚಿಂತೆಯಿಲ್ಲ. ಪುನರ್ ಜನ್ಮದ ಕತೆಗಳಲ್ಲಿ, ಭೂತ, ಪಿಶಾಚಿಗಳಿರುವುದರಲ್ಲಿ ನನಗೆ ನಂಬಿಕೆಯಿಲ್ಲ. ಏನಾದರೂ ನಂಬುವುದಿದ್ದರೆ ಅದು ನಾನು ತಾರೆಗಳವರೆಗೆ ಪ್ರಯಾಣಿಸಬಲ್ಲೆನೆಂಬುದನ್ನು ಮಾತ್ರ ಮತ್ತು ಇತರ ಪ್ರಪಂಚಗಳ ಬಗ್ಗೆ ತಿಳಿದುಕೊಳ್ಳಬಲ್ಲೆ ಎಂಬುದನ್ನು ಮಾತ್ರವೇ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಇನ್ನೂ ಬರಬೇಕಿದೆ. ಅದು ನನ್ನ ಕುಟುಂಬದವರಿಗೆ ತಲುಪುವಂತೆ ಮಾಡಿ. ರಾಮ್ಜಿಗೆ ನಲವತ್ತು ಸಾವಿರದಷ್ಟು ಕೊಡಬೇಕಿದೆ. ಅವನು ವಾಪಸ್ ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ. ನನ್ನ ಅಂತ್ಯಕ್ರಿಯೆ ಶಾಂತವಾಗಿ, ಸುಗಮವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಜೀವಂತವಾಗಿದ್ದಾಗ ಇರುವುದಕ್ಕಿಂತಲೂ ಸತ್ತಮೇಲೆಯೇ ನಾನು ಖುಷಿಯಾಗಿರುತ್ತೇನೆ ಎನ್ನುವುದು ಗೊತ್ತಿರಲಿ; ಮಬ್ಬುಗತ್ತಲೆಯಿಂದ ತಾರೆಗಳೆಡೆಗೆ.

ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ಕೋಣೆಯನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ. ‘ಆಸಾ’ ಕುಟುಂಬಕ್ಕೆ ನಿರಾಸೆ ಮೂಡಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತಿದ್ದೇನೆ. ಇದೋ ಕೊನೆಯ ಒಂದು ಸಲ, ಜೈ ಭೀಮ್.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಹಾಸ್ಟೆಲ್‌ನಿಂದ ಹೊರಬರುತ್ತಿರುವ ರೋಹಿತ್ ವೇಮುಲ

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಯಾರೂ ನನ್ನನ್ನು ತಮ್ಮ ಕೃತ್ಯಗಳಿಂದಾಗಲೀ, ಮಾತಿನಿಂದಾಗಲೀ ಇದಕ್ಕೆ ಉತ್ತೇಜಿಸಲಿಲ್ಲ. ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ. ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.

ಇದನ್ನೂ ಓದಿ; ಚಂಡೀಗಢ: ಮೇಯರ್ ಚುನಾವಣೆಗೂ ಮುನ್ನವೇ ಕಾರ್ಯಕರ್ತರ ನಡುವೆ ಮಾರಾಮಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...

ಬಿಜೆಪಿ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಅಂದಿದ್ದೆ : ಅಣ್ಣಾಮಲೈ

"ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ" ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ...

ಸುರಕ್ಷಿತವಾಗಿ ಹಾರ್ಮುಜ್ ದಾಟಿದ 7ನೇ ಎಲ್‌ಪಿಜಿ ಹಡಗು; ಸರದಿಯಲ್ಲಿ ಕಾಯುತ್ತಿವೆ ಭಾರತದ 17 ಟ್ಯಾಂಕರ್‌ಗಳು

ಭಾರತದ ಧ್ವಜ ಹೊಂದಿದ್ದ ಮತ್ತೊಂದು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ ಹೆಸರಿನ ಹಡಗು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಯಶಸ್ವಿಯಾಗಿ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಡೆಯುತ್ತಿರುವ ಪಶ್ಚಿಮ...

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...

ಯುಸಿಸಿ ಜಾರಿ ನಂತರ ‘ಜನಸಂಖ್ಯಾ ನಿಯಂತ್ರಣ’ ಕಾನೂನಿಗೆ ಮುಂದಾದ ಉತ್ತರಾಖಂಡ ಬಿಜೆಪಿ ಸರ್ಕಾರ

ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತಂದ ನಂತರ, ಉತ್ತರಾಖಂಡ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರುವ ಬಗ್ಗೆ ಯೋಚಿಸುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಸೂಚಿಸಿದ್ದಾರೆ. ಪ್ರಸ್ತಾವಿತ ಕ್ರಮದ...