Homeಕಥೆಬೆನ್ ಓಕ್ರಿ ಕಥೆ ಅನುವಾದ; ಚಹರೆ ಮತ್ತು ಮುಖವಾಡ

ಬೆನ್ ಓಕ್ರಿ ಕಥೆ ಅನುವಾದ; ಚಹರೆ ಮತ್ತು ಮುಖವಾಡ

- Advertisement -

ತಾನ್ಯಾಕೋ ಸರಿ ಇಲ್ಲ, ಏನೋ ದೋಷ ಇದೆ ಎಂದು ಅವನಿಗೆ ಅನಿಸಿದ್ದು ಒಂದು ದಿನ ಆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಒಬ್ಬ ಮಹಿಳೆ ಇವನನ್ನು ನೋಡಿ ಇವನಿಂದ ತಪ್ಪಿಸಿಕೊಳ್ಳಲು ತಾನು ನಡೆಯುತ್ತಿದ್ದ ದಾರಿ ಬದಲಿಸಿ ದೂರ ನಡೆದಾಗ. ಇದೇನೋ ಕಾಕತಾಳೀಯವಾಗಿ ನಡೆದಿರಬಹುದು ಅಂದುಕೊಂಡ. ಆದರೆ ಮತ್ತೆ ಇದೇ ರೀತಿ ಆಯಿತು.

ಅವನು ತನ್ನ ಸುತ್ತಮುತ್ತಲೂ ನೋಡತೊಡಗಿದ. ಒಂದು ದಿನ, ಅಂಡರ್‌ಗ್ರೌಂಡ್‌ನಲ್ಲಿ ಕುಳಿತಿದ್ದಾಗ, ಅವನ ಪಕ್ಕ ಮೂರು ಖಾಲಿ ಸೀಟುಗಳ ನಂತರದ ಸೀಟಿನಲ್ಲಿ ಕುಳಿತಿದ್ದ ಒಬ್ಬ ಮಹಿಳೆ ಇವನನ್ನು ನೋಡಿ ತನ್ನ ಕೈಚೀಲವನ್ನು ತನ್ನ ಇನ್ನೊಂದು ಬದಿಯಲ್ಲಿ ಭದ್ರಗೊಳಿಸಿ ಇರಿಸಿದಳು. ಅವಳು ಯಾಕೆ ಹಾಗೆ ಮಾಡಿದಳು ಎಂದು ಅವನಿಗೆ ತಿಳಿಯಲಿಲ್ಲ.

ನಾಲ್ಕೈದು ಸಲ ಹೀಗೇ ಆದ ನಂತರ ಅವನು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡ. ಅಲ್ಲಿ ಇತರ ಮನುಷ್ಯರಂತೆ ಅವನೂ ಒಬ್ಬ ಸಾಮಾನ್ಯ ಮನುಷ್ಯನಂತೆ ಕಂಡ. ಆದರೆ ಇವನನ್ನು ನೋಡಿದ ಕೂಡಲೇ ತಮ್ಮ ಬ್ಯಾಗುಗಳನ್ನು ಭದ್ರಪಡಿಸಿಕೊಳ್ಳುವವರ ಕಣ್ಣಿನಿಂದ ನೋಡಿದಾಗ, ಅವನಿಗೆ ತನ್ನ ಮುಖ ತಾನೆಂದುಕೊಂಡಂತೆ ನಾರ್ಮಲ್ ಆಗಿಲ್ಲ ಎಂದೆನಿಸಿತು.

ಅವನಲ್ಲಿ ಏನು ದೋಷವಿದೆ ಎಂಬುದು ಅವನಿಗೆ ಕಾಣಲಿಲ್ಲ ಆದರೆ ಅವನು ತನ್ನ ಮುಖವನ್ನು ನೋಡಿದಷ್ಟೂ ಅವನಿಗೆ ಖಾತ್ರಿಯಾಗತೊಡಗಿತು, ಏನೋ ದೋಷವಿದೆಯೆಂದು. ಆದರೆ ಅವನಿಗೆ ಅದು ಕಾಣುತ್ತಿಲ್ಲ. ಎದುರಿಗಿನ ಕನ್ನಡಿಯು ತಾನು ಮುಂಚೆ ಗಮನಿಸದೇ ಇರದ ಆಯಾಮಗಳನ್ನು ತೋರಿಸಿತು. ಜನರು ರಸ್ತೆಯಲ್ಲಿ ಇವನನ್ನು ತಪ್ಪಿಸಿಕೊಂಡು ದೂರ ಹೋಗುವುದಕ್ಕೆ ಯಾವ ಆಯಾಮ ಕಾರಣ?

ಈ ಪ್ರಶ್ನೆ ಅವನಿಗೆ ಎಷ್ಟು ಕಾಡಿತು ಎಂದರೆ, ಎಷ್ಟೋ ರಾತ್ರಿ ಅವನು ನಿದ್ರೆಯೇ ಮಾಡಲಿಲ್ಲ. ಯಾರೊಬ್ಬರ ಜೊತೆಗಾದರೂ ಇದರ ಬಗ್ಗೆ ಮಾತನಾಡಬೇಕು ಎಂದೆನಿಸಿತು ಆದರೆ ಅಂತಹ ಯಾವ ವ್ಯಕ್ತಿಗಳೂ ಅವನಿಗೆ ಹೊಳೆಯಲಿಲ್ಲ. ಹಗಲೊತ್ತಿನಲ್ಲಿ ತಾನು ಕೆಲಸಕ್ಕಾಗಿ ಹೋಗುವ ಸಮಯದಲ್ಲಿ ಅವನು ಜನರನ್ನು ಆತಂಕದಿಂದ ನೋಡಿದ. ಜನರು ತನ್ನನ್ನು ಯಾವಾಗ ಗಮನಿಸುವರು ಎಂಬುದರ ಬಗ್ಗೆ ಯೋಚಿಸಿದ ಹಾಗೂ ಇವನ ಮೇಲೆ ದೃಷ್ಟಿ ಬೀರುವ ಆ ಕ್ರಿಯೆಯ ಬಗ್ಗೆ ಯೋಚಿಸಿದ. ಆದರೆ ಜನ ಇವನ ಅಸ್ತಿತ್ವವನ್ನು ಗಮನಿಸದಂತೆ ಬೇಗಬೇಗನೆ ಸರಿದುಹೋಗುತ್ತಿದ್ದರು. ಅವನನ್ನು ತಪ್ಪಿಸಿಕೊಳ್ಳುವ ಸಲುವಾಗಿ ಯಾರಾದರೂ ರಸ್ತೆಯಿಂದ ದೂರ ಹೋದಾಗ ಎಷ್ಟು ಕಕ್ಕಾಬಿಕ್ಕಿಗೊಳಿಸಿತ್ತೋ ಈಗಲೂ ಅಷ್ಟೇ ಅವನನ್ನು ದಿಗ್ಭ್ರಮೆಗೊಳಿಸಿತು. ಅವರ್‍ಯಾಕೆ ನೋಡುತ್ತಿಲ್ಲ? ತನ್ನ ಮುಖದಲ್ಲಿ ಇದ್ದ ವಿಚಿತ್ರ ಆಯಾಮಕ್ಕೆ ಏನಾದರೂ ಪ್ರತಿಕ್ರಿಯೆ ನೀಡುತ್ತಾರೋ ಎಂದು ಪತ್ತೆ ಹಚ್ಚಲು ಉದ್ದೇಶಪೂರ್ವಕವಾಗಿ ಅವರನ್ನು ನೋಡಿದ. ಆದರೆ ಅವನು ಅವರೆಡೆಗೆ ಎಷ್ಟು ಹೆಚ್ಚು ನೋಡಿದನೋ, ಅಷ್ಟೇ ಹೆಚ್ಚೆಚ್ಚು ಜನರು ಅವನನ್ನು ನೋಡದೇ ಹೋದರು. ಇಳಿಹೊತ್ತಿನಲ್ಲಿ ಇವನನ್ನು ತಪ್ಪಿಸಿಕೊಂಡು ದೂರ ಹೋಗುವುದು ಹಾಗೂ ಹಗಲೊತ್ತಿನಲ್ಲಿ ಇವನನ್ನು ನೋಡದೇ ಇರುವುದು ಒಂದು ರೀತಿಯ ವಿರೋಧಾಭಾಸ ಎನಿಸಿತು.

PC : Avadhi Mag

ಒಂದಿಷ್ಟು ದಿನಗಳ ನಂತರ ಜನರು ನಿಜವಾಗಿಯೂ ತನ್ನನ್ನು ತಪ್ಪಿಸಿಕೊಳ್ಳಲು ದೂರ ಹೋಗುತ್ತಿದ್ದಾರೆಂದುಕೊಂಡು, ಈ ಪ್ರತಿಕ್ರಿಯೆಗೆ ಕಾರಣ ಏನು ಎಂಬುದನ್ನು ಕಂಡುಹಿಡಿಯಲು ನಿರ್ಧರಿಸಿದ. ಸಂಜೆ ಒಂದಿಷ್ಟು ಕತ್ತಲು ಆದ ನಂತರ ಒಬ್ಬ ವ್ಯಕ್ತಿಯ ವಿವರಗಳನ್ನು ಗಮನಿಸುವುದು ಕಷ್ಟ, ಹಾಗಾಗಿ ಸಮಸ್ಯೆ ತನ್ನ ಆಕಾರದಲ್ಲಿಯೇ ಇದ್ದಿರಬಹುದು ಎಂದುಕೊಂಡ. ಆಯಾ ಸ್ಥಾನಗಳಲ್ಲಿ ತನ್ನ ಆಕಾರ ಹೇಗೆ ಚಲಿಸುತ್ತೆ ಎಂದು ನೋಡಿ ಅದರ ಪರಿಣಾಮವಾಗಿಯೇ ಜನರು ತನ್ನನ್ನು ತಪ್ಪಿಸಿಕೊಂಡು ಹೋಗುತ್ತಾರೆ ಎಂದುಕೊಂಡ. ತಾನು ನಡೆಯುವ ಶೈಲಿಯೇ ಇರಬೇಕೆಂದು ನಿಣರ್ಯಿಸಿದ.

ಆಗ ಅವನು ಬೇರೆ ಬೇರೆ ನಡಿಗೆಯ ಶೈಲಿಗಳೊಂದಿಗೆ ಪ್ರಯೋಗ ಮಾಡಿದ. ಮೊಣಕಾಲುಗಳನ್ನು ಮುಂದೆ ತಂದು ನಡೆದು ನೋಡಿದ. ಅವನು ತನ್ನನ್ನು ಒಂದಿಷ್ಟು ಕುಳ್ಳನಂತೆ ಅಂದುಕೊಂಡು ನಡೆದು, ಅದರಿಂದ ಜನರು ತನ್ನನ್ನು ನೋಡಿ ಹೆದರಿಕೊಳ್ಳಲಾರರು ಎಂದುಕೊಂಡ. ನಂತರ ಅವನು ಪಕ್ಕಪಕ್ಕಕ್ಕೆ ನಡೆದ. ಇದರಿಂದ ಆಗಿದ್ದೇನೆಂದರೆ ಜನರು ಇನ್ನಷ್ಟು ಅವನನ್ನು ತಪ್ಪಿಸಿಕೊಂಡು ಹೋಗುವಂತೆ ಆಯಿತು. ಅವರು ರಸ್ತೆಯಲ್ಲಿ ಬಹುಬೇಗನೇ ತಪ್ಪಿಸಿಕೊಂಡು ಹೊರಡಲು ಶುರುಮಾಡಿದರು. ಒಂದು ಸಂಜೆ, ಅವನು ಕೆಲಸ ಮಾಡುತ್ತಿದ್ದ ಸಣ್ಣ ಜಾಹಿರಾತು ಕಂಪನಿಯೊಂದರಿಂದ ಕೆಲಸ ಮುಗಿಸಿ ಮನೆಗೆ ಹೊರಟಿದ್ದ. ಅವನು ರಸ್ತೆಯನ್ನು ಬಳಸಿ ಬಂದು, ಅಲ್ಲಿರುವ ಎರಡು ಸಾಲು ಮರಗಳನ್ನು ನೋಡಿದ. ಆ ಮರಗಳು ಅಲ್ಲಿರುವ ಪಾದಚಾರಿ ರಸ್ತೆಯ ಬಹಳಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದ್ದವು. ಜನರು ಆ ಮರಗಳನ್ನು ಸುತ್ತುಬಳಸಿ ನಡೆಯಬೇಕಾಗಿತ್ತು. ತಾನು ಬಳಸುವ ದಾರಿಯಲ್ಲಿದ್ದ ಈ ಮರಗಳು ಅವನಿಗೆ ತುಂಬಾ ಇಷ್ಟವಾಗಿದ್ದವು. ಪ್ರತಿಯೊಂದು ಮರವೂ ತನ್ನದೇ ಆದ ಒಂದು ಕೋನದಲ್ಲಿ ಬೆಳೆದಿದ್ದವು. ಈ ಜಗತ್ತಿನಲ್ಲಿ ಈ ಮರಗಳಷ್ಟೇ ಅವನಿಗೆ ಯಾವುದೇ ತೊಂದರೆ ಕೊಡದ ವಿಷಯಗಳಾಗಿದ್ದವು. ಅವುಗಳು ಎಂದೂ ಅವನ ಬಗ್ಗೆ ಹಾಗೇ ಹೀಗೇ ಅಂದಿದ್ದಿಲ್ಲ. ಅವನು ಆ ಮರಗಳ ಪಕ್ಕ ನಡೆಯುವಾಗಲೆಲ್ಲ ಅವುಗಳನ್ನು ಮುಟ್ಟಿ ಮುಂದೆ ಹೋಗುತ್ತಿದ್ದ.

ಆ ಮರಗಳು ಈಗ ಬೃಹದಾಕಾರ ತಾಳಿ, ಮೌನ ತಾಳಿದ್ದವು. ಅವನು ನಿಧಾನವಾಗಿ ನಡೆಯುತ್ತಿದ್ದ. ಆಗ ಅವನು ದೂರದಲ್ಲಿ ಒಬ್ಬ ಮಹಿಳೆ ನಡೆದುಕೊಂಡು ಬರುವುದನ್ನು ನೋಡಿದ ಹಾಗೂ ತನ್ನನ್ನು ತಾನು ಕುಳ್ಳನಾಗಿಸಿದ. ಆಗಲೇ ಒಬ್ಬ ಪುರುಷ ಪಕ್ಕದ ರಸ್ತೆಯಿಂದ ಬಂದ. ಎತ್ತರದ ಹಾಗೂ ಮೊಣಕಾಲು ಅಡ್ಡವಾಗಿದ್ದ ಆ ವ್ಯಕ್ತಿ ಅಲ್ಲಿ ಬರುತ್ತಿದ್ದ ಮಹಿಳೆಯ ಕಡೆಗೇ ಸಾಗಿದ. ಆಗ ಆ ಮಹಿಳೆ ಏನು ಮಾಡಬಹುದು? ಆ ಎತ್ತರದ ಮನುಷ್ಯನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಆ ಮಹಿಳೆ ಬೇರೆಡೆ ನಡೆಯುವಳೇ? ಅವನು ಪುರುಷನಾಗಿದ್ದೇ ಭಯ ಹುಟ್ಟಿಸಲು ಕಾರಣವೇ? ಆ ವ್ಯಕ್ತಿಯು ಆ ಮಹಿಳೆಯ ಪಕ್ಕದಿಂದ ಸರಾಗವಾಗಿ ನಡೆದು ಮುಂದೆ ಹೋದ. ಆ ಮಹಿಳೆ ಅವನಿಂದ ತಪ್ಪಿಸಿಕೊಳ್ಳಲು ಏನೂ ಮಾಡಲಿಲ್ಲ. ಅಂದರೆ ಅದು ಅವನು ಗಂಡಸು ಆಗಿದ್ದು ಕಾರಣವಲ್ಲ, ಅಂದರೆ ಮತ್ತೇನು? ಈಗ ಅವನು ಆ ಮಹಿಳೆ ತನ್ನನ್ನು ಯಾವಾಗ ಗಮನಿಸುವಳು ಎಂದು ಕಾಯುತ್ತಾ ಆಕೆ ಏನು ಮಾಡಬಹುದು ಎಂದು ಯೋಚಿಸಿದ. ಅದೇ ಸಮಯದಲ್ಲಿ ಅವಳು ತನ್ನ ಮುಖವನ್ನೆತ್ತಿ ಅವನನ್ನು ನೋಡಿದಳು. ನೋಡಿದ ಕೂಡಲೆ ಅವಳ ದೇಹವು ಗಣನೀಯವಾಗಿ ಮುದುಡಿದಂತಾಯಿತು. ಅವಳು ವೇಗವೇಗವಾಗಿ ಹೆಜ್ಜೆ ಹಾಕಿ ಮುಂದೆ ಹೋದಳು.

ಈ ಘಟನೆಯಿಂದ ಅವನಿಗೆ ತುಂಬಾ ನೋವಾಯಿತು. ಅವನು ಅಲ್ಲಿಯೇ ನಿಂತುಬಿಟ್ಟ, ಅಲ್ಲಿಂದ ಚಲಿಸಲು ಆಗಲಿಲ್ಲ. ಯಾವುದೋ ಒಂದು ಹೆಸರಿಸಲಾಗದ ನಾಚಿಕೆ ಮತ್ತು ಸಿಟ್ಟಿನಲ್ಲಿ ಕುದ್ದ. ಆ ಮಹಿಳೆಗೆ ಏನೆಲ್ಲ ಹೇಳಬಹುದಾಗಿತ್ತು ಎಂಬುದೆಲ್ಲ ಅವನ ತಲೆಯಲ್ಲಿ ಓಡುತ್ತಿದ್ದವು. ’ನಿಮಗೊತ್ತಾ, ನನ್ನಲ್ಲಿ ಯಾವುದೇ ದೋಷವಿಲ್ಲ, ನಾನೂ ಸಾಮಾನ್ಯ ಮನುಷ್ಯ’, ’ನಾನೇನು ನಿಮ್ಮನ್ನು ಲೂಟಿ ಮಾಡಲು ಬಂದಿಲ್ಲ’. ಅಥವಾ ’ನಿಮ್ಮ ದೇಹದ ಮೇಲೆ ನನಗೆ ಆಸೆ ಇದೆ ಎಂದು ನಿಮಗೆ ಅನಿಸಿದೆಯೇ?’, ’ನನ್ನನ್ನು ನೋಡಿ ಯಾಕೆ ದೂರ ಓಡಿಹೋದದ್ದು, ಆದರೆ ಆ ಇನ್ನೊಬ್ಬ ಪುರುಷ ಬಂದಾಗ ಏಕೆ ಓಡಲಿಲ್ಲ, ನಮ್ಮಿಬ್ಬರಲ್ಲಿ ಅಪಾಯಕಾರಿಯಾಗಿ ಯಾರು ಕಂಡದ್ದು?’

ಹೇಳಲು ಅವನ ತಲೆಯಲ್ಲಿ ಅನೇಕ ವಿಷಯಗಳಿದ್ದವು. ರಸ್ತೆ ಖಾಲಿಯಾಗಿತ್ತು. ಕತ್ತಲು ಆವರಿಸಿಕೊಳ್ಳುತ್ತಿತ್ತು. ಆಗ ಅವನು ತಾನೇ ಖುದ್ದು ಆಶ್ಚರ್ಯವಾಗುವಂಥದ್ದನೊಂದು ಮಾಡಿದ. ಅವನು ರಸ್ತೆಯನ್ನು ಕ್ರಾಸ್ ಮಾಡಲು ಶುರು ಮಾಡಿದ.

ಆ ಮಹಿಳೆ ಅವನು ಬರುತ್ತಿರುವುದನ್ನು ನೋಡಿದಳು. ಅವಳ ಮುಖದಲ್ಲಿ ಆತಂಕ ಕಾಣಿಸಿಕೊಂಡಿತು. ಅವಳು ಹಿಂದಕ್ಕೆ ನಡೆಯಲಾರಂಭಿಸಿದಳು. ಇವನು ಹಿಂಬಾಲಿಸಿದ. ಅವನನ್ನು ತಪ್ಪಿಸಿಕೊಂಡು ಹೋಗುತ್ತಿದ್ದೇನೆ ಎಂಬುದನ್ನು ಅವನಿಗೆ ಗೊತ್ತಾಗಬಾರದು ಎಂಬಂತೆ ಪ್ರಯತ್ನಿಸಿದಳು. ಆ ರಸ್ತೆಯ ಮಧ್ಯದಲ್ಲಿ ಅವನನ್ನು ಸಂಧಿಸದಿರಲು ಕೊನೆಯ ಪ್ರಯತ್ನ ಮಾಡಿದಳು. ಅವನು ಅವಳನ್ನು ಸಮೀಪಿಸಿದಂತೆ ಅವಳು ಕಿರುಚಲು ತನ್ನ ಬಾಯಿ ತೆಗೆದಳು. ಅವನು ಅವಳ ಪಕ್ಕದಿಂದ ಸಾಗುವಾಗ ಹೇಳಿಯೇಬಿಟ್ಟ, ’ನನ್ನಲ್ಲಿ ಏನೂ ತಪ್ಪಿಲ್ಲ, ನಾನೇನು ನಿಮ್ಮನ್ನು ತಿಂದು ಹಾಕಲ್ಲ.’

ಅವನು ಆ ಮಾತುಗಳನ್ನು ಹೇಳುತ್ತಿರುವಾಗಲೇ, ತಾನು ಹೇಗೆ ಧ್ವನಿಸುತ್ತಿದ್ದೇನೆ ಎಂಬುದು ಅವನಿಗೆ ತಿಳಿಯಿತು. ನಾನು ಹಾಗೆ ಹೇಳಬಾರದಿತ್ತು ಎಂದುಕೊಂಡ.

ಅವನು ಅವಳನ್ನು ಬಿಟ್ಟು ಒಂದು ಹೆಜ್ಜೆ ಮುಂದೆ ಹೋಗುತ್ತಲೇ ಅವಳು ಯಾವುದೋ ಒಂದು ಭಯಂಕರ ಅಪಾಯದಿಂದ ಪಾರಾದಂತೆ ಓಡತೊಡಗಿದಳು, ಯಾವುದೋ ಇಂದು ದೆವ್ವ ಅವಳನ್ನು ಹಿಂಬಾಲಿಸಿದರೆ ಎಷ್ಟು ವೇಗವಾಗಿ ಓಡುತ್ತಿದ್ದಳೋ ಅಷ್ಟೇ ವೇಗವಾಗಿ ಅವನಿಂದ ದೂರ ಓಡಿದಳು. ಅವಳು ಓಡುತ್ತಿರುವಾಗ ಒಂದು ವಿಚಿತ್ರ ಶಬ್ದವನ್ನು ಮಾಡುತ್ತಿದ್ದಳು. ಅವಳು ಓಡುವುದನ್ನೇ ನೋಡುತ್ತ ನಿಂತ ಇವನು. ಪ್ರಯೋಗ ವಿಫಲವಾಗಿತ್ತು. ಜನರು ತನಿಂದ ಯಾಕೆ ತಪ್ಪಿಸಿಕೊಳ್ಳುತ್ತಾರೆ ಎಂಬುದಕ್ಕೆ ಯಾವ ಕಾರಣವೂ ಈ ಪ್ರಯೋಗದಿಂದ ಗೊತ್ತಾಗಲಿಲ್ಲ.

ಆ ಸಂಜೆ ಕನ್ನಡಿಯಲ್ಲಿ ಅವನ ಮುಖ ಭಿನ್ನವಾಗಿ ಕಂಡಿತು. ಅವನು ಒಂದು ಸಾಮಾನ್ಯವಾದ ಮುಖ ಹೊಂದಿದ್ದ, ಕುರುಚಲು ಗಡ್ಡ, ವಿಶಾಲವಾದ ಹಣೆ, ಒಳ್ಳೆ ಹುರಿಯಾದ ತುಟಿಗಳನ್ನು ಹೊಂದಿದ್ದ. ಅವನ ದವಡೆ ಒಂದಿಷ್ಟು ಚೂಪಾಗಿತ್ತು, ಕಿವಿಗಳು ಅಗಲವಾಗಿರದೇ ಚಹರೆಗೆ ಹೊಂದಿಕೊಳ್ಳುವಂತಿದ್ದವು ಹಾಗೂ ಹಲವರು ಅವನು ಸುಂದರವಾದ ಕಣ್ಣುಗಳನ್ನು ಹೊಂದಿದ್ದಾನೆ ಎಂದು ಹೇಳಿದ್ದರು. ಅವನ ಹಲ್ಲುಗಳು ಶುಭ್ರವಾಗಿದ್ದವು. ಅವನು ಜೀವನದಲ್ಲಿ ಎಂದೂ ಸಿಗರೇಟು ಸೇದಿಸಿರಲಿಲ್ಲ.

ಆದರೆ ಆ ಮಹಿಳೆಯೊಂದಿಗೆ ಆದ ಘಟನೆಯ ನಂತರ ಏನೋ ಬದಲಾಗಿತ್ತು. ಅವನ ಬಣ್ಣ ಮತ್ತು ಅವನ ಚಹರೆಯ ಆಕಾರ ಒಂದಿಷ್ಟು ಬದಲಿ ಆಗಿದೆ ಎಂದೆನಿಸಿತು. ಮಾರನೆಯ ದಿನ ಕೆಲಸಕ್ಕೆ ಹೋದಾಗ ತನ್ನ ಸಹೋದ್ಯೋಗಿಗಳನ್ನು, ತಾನು ಇತರರಿಗಿಂತ ಭಿನ್ನವಾಗಿದ್ದೇನೆಯೇ ಎಂದು ಕೇಳಿದ. ಅವರೆಲ್ಲರೂ ಅವನ ಕಡೆ ನೋಡಿದರು ಆದರೆ ಖಚಿತವಾಗಿ ಏನೂ ಹೇಳಲಿಲ್ಲ. ಏನೋ ಭಿನ್ನವಾಗಿ ಇರುವುದಂತೂ ಖಚಿತ ಆದರೆ
ಏನದು ಭಿನ್ನವಾಗಿದ್ದು ಎಂದು ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ. ತನ್ನಲ್ಲಿ ಏನೋ ಬದಲಾವಣೆ ಆಗಿದೆ ಎಂಬುದು ಅವನ ತಲೆಯಲ್ಲಿ ತುಂಬಿಕೊಂಡಿತು. ಹಾಗೂ ಅವನನ್ನು ತಪ್ಪಿಸಿಕೊಂಡು ದೂರ ಹೋಗುವವರೇ ಈ ಬದಲಾವಣೆಗೆ ಕಾರಣ ಎಂದು ಅವನಿಗೆ ಅನಿಸಿತು. ಆದರೆ ಹೇಗೆ ಅವರು ಕಾರಣ ಎಂಬುದರ ಬಗ್ಗೆ ಅವನಿಗೆ ಖಚಿತತೆ ಇರಲಿಲ್ಲ.

ಈಗ ಅವನು ಬೇರೆಯವರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಮಾಡಬಹುದೋ ಅದನ್ನೆಲ್ಲ ಮಾಡತೊಡಗಿದ. ಅವನನ್ನು ನೋಡಿದ ಕೂಡಲೇ ಜನರು ತನ್ನನ್ನು ತಪ್ಪಿಸಿಕೊಳ್ಳಲು ಏನೆಲ್ಲ ಮಾಡುವರು ಎಂಬುದಕ್ಕೆ ಹೆದರಿ ದಾರಿಯಲ್ಲಿ ಯಾರ ಕಣ್ಣಿಗೂ ಬೀಳದಂತೆ ಪ್ರಯತ್ನಿಸಿದ. ಯಾರಾದರೂ ದೂರದಲ್ಲಿ ನಡೆದುಬರುವುದು ಕಂಡರೆ ಅವನು ಅಲ್ಲಿಯೇ ಎಲ್ಲಾದರೂ ಅವಿತುಕೊಂಡ ಅಥವಾ ಅವರೆಡೆಗೆ ತನ್ನ ಬೆನ್ನು ತಿರುಗಿಸುತ್ತಿದ್ದ ಹಾಗೂ ಅವರು ತನ್ನ ಮುಂದೆಯಿಂದ ಹಾದುಹೋಗುವ ತನಕ ಅದೇ ಭಂಗಿಯಲ್ಲಿ ಇರತೊಡಗಿದ.

ಕೆಲಸದ ಸ್ಥಳದಲ್ಲೂ ಇದನ್ನು ಮುಂದುವರಿಸಿದ. ಈ ವರ್ತನೆ ಇತರ ಕೆಲಸಗಾರರಿಗೆ ಎಷ್ಟು ವಿಚಿತ್ರ ಎನಿಸಿತು ಎಂದರೆ, ಅವರಲ್ಲಿ ಕೆಲವರು ಇವನು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ ಎಂದರು. ಅವನನ್ನು ಅನೇಕ ವರ್ಷಗಳಿಂದ ಬಲ್ಲವರಿಗೆ ಈ ವರ್ತನೆಯನ್ನು ನಂಬಲೂ ಕಷ್ಟವಾಯಿತು. ಆದರೆ ಎಲ್ಲರನ್ನು ತಪ್ಪಿಸಿಕೊಂಡು ಓಡಾಡುವುದು, ಜನರ ದೃಷ್ಟಿಗೆ ಸಿಗದಿರುವುದು, ಕಾರಿಡಾರ್‌ನಲ್ಲಿ ಯಾರಾದರೂ ಕಂಡಕೂಡಲೇ ಓಡಿಹೋಗುವುದು, ಇವೆಲ್ಲ ಮೊದಮೊದಲು ತಮಾಷೆಯಾಗಿ ಕಂಡರೂ ಬಹುಬೇಗನೇ ನುಣುಚಿಕೊಳ್ಳುವವ ಎಂಬ ಕುಖ್ಯಾತಿ ತಂದಿತು ಹಾಗೂ ಇನ್ನು ಒಂದಿಷ್ಟು ಸಮಯದಲ್ಲಿ ಜನರು ಅವನನ್ನು ಅನುಮಾನದಿಂದ ನೋಡುವಂತೆ ಆಯಿತು. ಅವನನ್ನು ನೋಡಿದ ಕೂಡಲೇ ಕಣ್ಮರೆಯಾಗುವುದು, ಕೆಲಸದ ಸಭೆಗಳಲ್ಲಿ ಸಾಧ್ಯವಾದಷ್ಟು ಅದೃಶ್ಯವಾಗುವುದು ಇವೆಲ್ಲವೂ ಜನರನ್ನು ಗೊಂದಲಕ್ಕೀಡುಮಾಡಿದವು. ಪಾರ್ಟಿಗೆ ಅವನಿಗೆ ಆಹ್ವಾನವಿದ್ದರೂ ಅವನು ಏಕೆ ಬರುವುದಿಲ್ಲ ಅಥವಾ ಕೆಲಸ ಮುಗಿದನಂತರ ಅವನು ಏಕೆ ಒಂದೆರಡು ಡ್ರಿಂಕ್‌ಗಳಿಗಾಗಿ ಹೊರಗೆ ಸೇರುತ್ತಿಲ್ಲ ಎಂಬುದು ಯಾರಿಗೂ ಅರ್ಥವಾಗಲಿಲ್ಲ.

ಪುರುಷರ ಕೋಣೆಯಲ್ಲಿ ಅವನು ಕನ್ನಡಿಯಲ್ಲಿ ತನ್ನನ್ನು ತಾನು ನೋಡುತ್ತ ಏನೋ ಪರಿಶೀಲಿಸುವುದನ್ನು ಅನೇಕ ಬಾರಿ ಜನರು ಕಂಡರು. ಕೆಲವು ಸಲ ಅವನು ತನ್ನ ನೆರಳನ್ನು ಪರಿಶೀಲಿಸುವಂತೆ ಕಾಣಿಸಿಕೊಂಡನು. ಅವನು ಇತರ ಜನರೊಂದಿಗೆ ಮಾತನಾಡಿದಾಗ ತನ್ನ ಮುಖವನ್ನು ಮುಚ್ಚಿಕೊಳ್ಳುತ್ತಿದ್ದಾನೆ ಅನಿಸುತ್ತಿತ್ತು. ಶೀಘ್ರವೇ ಜನರೆಲ್ಲರೂ ಅವನು ಎಷ್ಟು ವಿಚಿತ್ರವಾಗಿ ಕಾಣಿಸುತ್ತಿದ್ದಾನೆ ಎಂದು ಮಾತನಾಡಿಕೊಳ್ಳಲು ಶುರು ಮಾಡಿದರು, ಸುಮಾರು ಸಮಯದಿಂದ ಅವರ್‍ಯಾರೂ ಸರಿಯಾಗಿ ಅವನನ್ನು ನೋಡದೇ ಇದ್ದರೂ.

ಈ ಸಮಯದಲ್ಲಿ ಅವನು ಯಾವ ಫೋಟೊಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಯಾರಾದರೂ ಕ್ಯಾಮರಾ ಇವನ ಕಡೆ ತಿರುಗಿಸಿದರೆ ಅಲ್ಲಿಂದ ಓಡಿಬಿಡುತ್ತಿದ್ದ. ನಂತರ ಅವನು ಕನ್ನಡಿಗಳನ್ನು ನೋಡುವುದನ್ನೂ ಬಿಟ್ಟುಬಿಟ್ಟ. ತಾನು ಹೇಗೆ ಕಾಣುತ್ತೇನೆ ಎಂದು ಅವನು ಆತಂಕಗೊಂಡಷ್ಟೆಲ್ಲ ಅವನ ಆತಂಕಗಳು ನಿಜ ಆಗಿ, ತಾನು ಹಾಗೆಯೇ ಆಗುವೆ ಎಂಬುದರ ಬಗ್ಗೆ ಅವನಿಗೆ ಖಾತ್ರಿಯಾಯಿತು.

ಆದರೆ, ರಸ್ತೆಯಲ್ಲಿ ಅವನನ್ನು ತಪ್ಪಿಸಿಕೊಂಡು ಹೋಗುವವರ ಬಗ್ಗೆ ಏನು ಮಾಡಬೇಕು? ತನ್ನಿಂದ ತಪ್ಪಿಸಿಕೊಳ್ಳುತ್ತಾರೆ ಎಂಬುದರ ಒತ್ತಡ, ಅದರ ಭಾರವನ್ನು ಹೇಗೆ ಹೊರಬೇಕು? ಈ ಆತಂಕವು, ಅವನ ಪ್ರತಿನಿತ್ಯ ಮನೆಗೆ ಹೋಗುವ ಪಯಣವನ್ನು ಕಷ್ಟಗೊಳಿಸಿತು. ಅವನು ತನ್ನ ನಿತ್ಯದ ರಸ್ತೆಯಲ್ಲಿ ಬಂದಾಗ, ಆ ಮರಗಳ ಎರಡು ಸಾಲುಗಳ ಬಳಿ ಬಂದಕೂಡಲೇ ಭಯ ಆವರಿಸಿಕೊಳ್ಳುತ್ತಿತ್ತು, ಇತರರ ದೃಷ್ಟಿಯ ಭಯ. ಕೆಲವು ಸಲ ಅವನಿಗೆ ತಾನು ಅದೃಶ್ಯನಾದರೆ ಎಷ್ಟು ಚೆನ್ನ ಎನಿಸುತ್ತಿತ್ತು. ಆಗ ಜನರು ಅವನನ್ನು ನೋಡಿ ಓಡಿಹೋಗುವುದನ್ನು ನೋಡುವ ಪ್ರಮೇಯವೇ ಬರುತ್ತಿರಲಿಲ್ಲ.

ಆಗ ಒಂದು ದಿನ ಅವನಿಗೆ ಹೊಳೆದಿದ್ದೇನೆಂದರೆ, ಒಂದು ವೇಳೆ ಒಂದು ಮಾಸ್ಕ್‌ಅನ್ನು ಧರಿಸಿದರೆ ಅವನು ಆ ಎಲ್ಲಾ ಆತಂಕಗಳಿಂದ ಮುಕ್ತನಾಗಬಹುದು ಎಂದು. ಅದೊಂದು ಭಾರಿ ಉಪಾಯ ಎನಿಸಿತು. ಭಾನುವಾರ ಬೆಳಗ್ಗೆ ಲೋಕಲ್ ಮಾರುಕಟ್ಟೆಯಲ್ಲಿ ಮಾಸ್ಕ್‌ಗಳನ್ನು ಮಾರುವ ಅಂಗಡಿಯೊಂದಿತ್ತು. ಅವನು ವಿಧವಿಧವಾದ ಮಾಸ್ಕ್‌ಗಳನ್ನು ನೋಡಿದ. ಅವುಗಳಲ್ಲಿ ಹೆಚ್ಚಿನವು ಗಾಢವಾದ ಬಣ್ಣಬಣ್ಣಗಳದ್ದಾಗಿದ್ದು ತುಂಬಾ ವಿಚಿತ್ರವೆನಿಸಿದವು, ಅವನು ಸಾರಾಸಗಟಾಗಿ ಅವುಗಳನ್ನು ತಿರಸ್ಕರಿಸಿದ. ಅವನಿಗೆ ಬೇಕಾಗಿದ್ದದ್ದು ಸಾಮಾನ್ಯ ಮನುಷ್ಯನ ಚಹರೆಯಂತೆ ಕಾಣುವ ಒಂದು ಮಾಸ್ಕ್.

ಅವನು ಏಳು ಮಾಸ್ಕ್‌ಗಳನ್ನು ಖರೀದಿಸಿದ, ಮನೆಗೆ ಹೋಗಿ ಅವೆಲ್ಲವುಗಳನ್ನು ಧರಿಸಿ ನೋಡಿದ. ಕನ್ನಡಿಯಲ್ಲಿ ನೋಡಿಕೊಳ್ಳುವದಕ್ಕಿಂತ ಮನ್ನವೇ ಅವುಗಳನ್ನು ಧರಿಸುವಂತೆ ಲಕ್ಷ್ಯವಹಿಸಿದ್ದ. ಅವುಗಳಲ್ಲಿ ಐದು ಉಪಯುಕ್ತ ಎನಿಸಿದವು. ಅವುಗಳನ್ನು ಕಚೇರಿಯಲ್ಲಿ ಮತ್ತು ಮನೆಗೆ ಮರಳುವ ಸಮಯದಲ್ಲಿ ಹಾಕಿಕೊಂಡು ನೋಡಿದರೆ ಯಾವುದು ಅತ್ಯಂತ ನಾರ್ಮಲ್ಲಾಗಿ ಕಾಣುತ್ತೆ ಎಂಬುದನ್ನು ಗುರುತಿಸಬಹುದು ಎಂದುಕೊಂಡ.

ಕೆಲಸಕ್ಕೆ ಹೋದಾಗ ಅವನನ್ನು ಯಾರೂ ಗುರುತಿಸಿದಂತೆ ಕಾಣಲಿಲ್ಲ. ಅವನನ್ನು ರಿಸೆಪ್ಷನ್ ಡೆಸ್ಕ್‌ನಲ್ಲಿಯೇ ನಿಲ್ಲಿಸಲಾಯಿತು, ಅವನು ತನ್ನ ಗುರುತಿನ ಚೀಟಿಯಿಂದ ಗುರುತನ್ನು ಸಾಬೀತುಪಡಿಸಿದನಂತರವೇ ಮೇಲೆ ಹೋಗಲು ಅನುಮತಿ ನೀಡಲಾಯಿತು. ಅವನ ಸಹೋದ್ಯೋಗಿಗಳು ಅವನ ಈ ಅವತಾರದ ಬಗ್ಗೆ ನಿರಾಕರಣೆಯಿಂದ ನೋಡಿದರು. ಅವನು ತನ್ನ ಡೆಸ್ಕ್‌ನಲ್ಲಿ ಕುಳಿತುಕೊಂಡಾಗ, ಯಾರು, ಅವನು, ಅವನೇನಾ ಎಂದು ಕೇಳಿದರು. ಅವನು ಹೌದೆಂದು ಉತ್ತರಿಸಿದಾಗ ಅವನನ್ನು ದುರುಗುಟ್ಟಿ ನೋಡಿದರು. ನಂತರ ತಮ್ಮತಮ್ಮಲ್ಲೆ ಪಿಸುಗುಟ್ಟಿದರು. ಅವನಿಗೆ ಅವನ ಬಾಸ್‌ನಿಂದ ಕರೆ ಬಂತು.

“ಏನು ಆಟ ಆಡ್ತಾ ಇದೀಯಾ?”
“ಏನಿಲ್ಲ ಸರ್.”
“ಮಾಸ್ಕ್ ಏಕೆ ಧರಿಸಿದ್ದೀಯ?”
“ಅದು ಇತರರ ಕಾಳಜಿಗಾಗಿ. ತನ್ನ ಮುಖ ಜನರಿಗೆ ತೊಂದರೆ ಕೊಡುತ್ತೆ, ಸರ್.”
ಬಾಸ್ ಅವನನ್ನು ನೋಡಿದ.
“ಇದನ್ನು ನೀನು ಕಾಳಜಿ ಎಂದು ಕರೆಯುತ್ತೀಯಾ?”
“ಹೌದು ಸರ್, ಈಗ ನಾನು ಯಾರು ಅಂತಲಾದರೂ ಜನರಿಗೆ ತಿಳಿದಿದೆ.”
“ಹೌದಾ?”
“ಹೌದು, ಮತ್ತೊಂದು ವಿಷಯವೆಂದರೆ, ಈಗ ಅವರು ನನ್ನನ್ನು ನೋಡಲು ಸಮಸ್ಯೆಯಿಲ್ಲ. ಈ ಮಾಸ್ಕ್ ಧರಿಸಿದ ನಂತರ ಜನರು ನನ್ನನ್ನು ನೋಡಿದರೆ ನನಗೆ ಯಾವುದೇ ಅಭ್ಯಂತರವಿಲ್ಲ.”
“ಆದರೆ ಇದು ಹೆದರಿಕೆ ಹುಟ್ಟಿಸುತ್ತೆ. ಇದು ನೀನೇ ಎಂದು ಹೇಗೆ ತಿಳಿಯುವುದು? ಎಲ್ಲರೂ ಕೆಲಸಕ್ಕೆ ಮಾಸ್ಕ್ ಹಾಕಿಕೊಂಡು ಬಂದರೆ, ಜೀವನ ಕಷ್ಟ ಆಗಿಬಿಡೋದು.”
“ಒಂದು ವಾರ ಇದನ್ನು ಮಾಡುವ ಸರ್, ಆಮೇಲೆ ನೋಡುವ.”
ಆ ವಾರ ಪ್ರತಿ ದಿನ ಬೇರೆ ಬೇರೆ ಮಾಸ್ಕ್ ಧರಿಸಿದ ಆತ. ಪ್ರತಿ ದಿನವೂ ಜನರ ಪ್ರತಿಕ್ರಿಯೆ ಒಂದೇ ಆಗಿತ್ತು. ಬಾಸ್ ತನ್ನ ಆಫೀಸಿಗೆ ಬರಹೇಳಿದ. ವಾರದ ಕೊನೆಯಲ್ಲಿ ಮ್ಯಾನೇಜರ್‌ಗೆ ಸಾಕಾಗಿತ್ತು.
“ಬಹುಶಃ ನಿಮಗೆ ಸಹಾಯದ ಅಗತ್ಯವಿದೆ.” ಮ್ಯಾನೇಜರ್ ಸೂಚಿಸಿದ.
“ಮುಂದಿನ ವಾರ ಇದೆಲ್ಲ ಬಗೆಹರಿಯಲಿದೆ.” ಈತ ಹೇಳಿದ.
“ಏನೇ ಆಗಲಿ ಸಹಾಯ ಪಡೆಯಲು ಯಾರನ್ನಾದರೂ ಸಂಪರ್ಕಿಸಿ ಇಲ್ಲವಾದರೆ ಕೆಲಸದಿಂದ ತೆಗೆದುಹಾಕಬೇಕಾಗುವುದು.”
“ಆದರೆ, ಏಕೆ ಸರ್?”
“ಏಕೆಂದರೆ ನೀನು ಎಲ್ಲರಿಗೂ ಹೆದರಿಸುತ್ತಿದ್ದೀಯ. ನಿನ್ನ ಕಾರಣದಿಂದ ಎಲ್ಲರಿಗೂ ಕೆಲಸ ಮಾಡಲು ಕಷ್ಟ ಆಗುತ್ತಿದೆ.”
“ಮುಂದಿನ ವಾರ ಎಲ್ಲವೂ ಬಗೆಹರಿಯಲಿದೆ,” ಎಂದು ಭರವಸೆ ನೀಡಿ ಹೊರಬಂದ ಈತ.

ಪ್ರತಿದಿನ ಕೆಲಸದಿಂದ ಮನೆಗೆ ಬರುವ ಆತನ ಪಯಣ ಮಾಸ್ಕ್‌ನ ಪರಿಣಾಮವನ್ನು ಖಾತ್ರಿಪಡಿಸಿತು. ಮಾಸ್ಕ್ ಧರಿಸಿ ಮನೆಗೆ ಹೋಗುತ್ತಿದ್ದ ಮೊದಲ ದಿನ, ಅವನನ್ನು ನೋಡಿ ಸಾಮಾನ್ಯವಾಗಿ ಅವನಿಂದ ತಪ್ಪಿಸಿಕೊಳ್ಳಲು ದಾರಿ ಬದಲಿಸುತ್ತಿದ್ದ ಮಹಿಳೆಯರು, ಈಗ ತಮ್ಮ ನಡೆ ಬದಲಿಸದೇ ಇವನ ಪಕ್ಕವೇ ಹಾದುಹೋದರು, ಅವನು ಸಮೀಪ ಬಂದಾಗ ಒಂದು ಸಲ ನೋಡಿದರಷ್ಟೆ. ಎರಡನೆಯ ದಿನ ಒಬ್ಬ ಮಹಿಳೆಯು ಇವನನ್ನು ನೋಡಿ ತನ್ನ ದಾರಿ ಬದಲಿಸಲು ಶುರು ಮಾಡಿದ್ದಳಷ್ಟೆ ಆದರೆ ತನ್ನ ಮನಸ್ಸು ಬದಲಾಯಿಸಿ, ರಸ್ತೆಯ ಅದೇ ಬದಯಲ್ಲಿ ನಡೆದು ಬಂದಳು; ಬಹುಶಃ ಕುತೂಹಲದ ಕಾರಣಕ್ಕೇನೋ. ಐದನೇ ದಿನ ಮುಟ್ಟುವಷ್ಟರಲ್ಲಿ ಇವನನ್ನು ಯಾರೂ ಗಮನಿಸಲಿಲ್ಲ.

ಇದು ಅವನನ್ನು ಆಶ್ಚರ್ಯಗೊಳಿಸಿತು. ಮಾಸ್ಕ್‌ಗಳು ಅವನನ್ನು ಅಸಹಜವಾಗಿ ಕಾಣುವಂತೆ ಮಾಡಿದ್ದು ಅವನಿಗೆ ಖಚಿತವಾಗಿತ್ತು. ಸಾಮಾನ್ಯವಾಗಿ ಅವನನ್ನು ಕಂಡು ಓಡಿಹೋಗುವವರಿಗೆ ಅವನ ಮುಖದಿಂದ ಏನು ತೊಂದರೆಯಾಗಿತ್ತು, ಆದರೆ ಅದೇ ತೊಂದರೆ ಮಾಸ್ಕ್‌ನಿಂದ ಏಕೆ ಆಗಲಿಲ್ಲ?

ಅವನು ಆ ಪ್ರಶ್ನೆಯನ್ನು ಭಾನುವಾರ ಬೆಳಗ್ಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾಸ್ಕ್ ಮಾರುವವನ ಬಳಿ ತೆಗೆದುಕೊಂಡು ಹೋದ.

“ಇವುಗಳನ್ನು ಯಾಕೆ ಖರೀದಿ ಮಾಡುತ್ತಿದ್ದೆ ಎಂದು ನೀನು ನನಗೆ ಹೇಳಿಯೇ ಇದ್ದಿಲ್ಲ.” ಅವನು ಹೇಳಿದ. ತಾನು ಮಾರುವ ಮಾಸ್ಕ್‌ಗಳ ಪ್ರಚಾರ ಮಾಡಲು ತಾನೂ ಒಂದು ಮಾಸ್ಕ್ ಧರಿಸಿದ್ದ. ಆ ದಿನ ಅವನು ಒಂದು ವಿಚಿತ್ರವಾದ ಆಜ್ಟೆಕ್ ಮಾಸ್ಕ್ ಧರಿಸಿದ್ದ, ಅಲ್ಲಿ ಹಾದುಹೋಗುವ ಮಕ್ಕಳೆಲ್ಲರೂ ಅದನ್ನು ನೋಡಿ ಆನಂದಪಡುತ್ತಿದ್ದರು. ಅನೇಕರು ನಿಂತು ಅವನ ಬಳಿ ಇದ್ದ ಅದ್ಭುತ ಮಾಸ್ಕ್‌ಗಳನ್ನು ಖರೀದಿಸುತ್ತಿದ್ದರು. “ಈಗ ನೀನು ನಿನ್ನ ಸಮಸ್ಯೆಯನ್ನು ಹೇಳಿದ್ದೀಯ, ನಿನಗೆ ಸೂಕ್ತವಾಗುವಂತಹ ಮಾಸ್ಕ್ ನನ್ನ ಬಳಿ ಇದೆ. ಆದರೆ ಒಂದು ಕಂಡಿಷನ್ನು..”

“ಏನದು?”
“ನೀನು ಅದನ್ನು ಧರಿಸುವ ಮೊದಲ ವಾರದಂದು, ಈ ಮಾಸ್ಕೇ ನಿನ್ನ ಮುಖ ಎಂದು ನೀನು ಸಂಪೂರ್ಣವಾಗಿ ನಂಬಬೇಕು.”
“ಅಷ್ಟೇನಾ?”
“ಅಷ್ಟೇ. ತುಂಬಾ ಸಿಂಪಲ್ ಕಂಡಿಷನ್ನು.”

ಆಗ ಆ ವ್ಯಕ್ತಿ ಅವನನ್ನು ತನ್ನ ಅಂಗಡಿಯ ಹಿಂಬದಿಗೆ ಕರೆದುಕೊಂಡು ಹೋದ. ಅಲ್ಲಿ ವಿಶ್ವದಾದ್ಯಂತ ಸಂಗ್ರಹಿಸಿದ್ದ ಅಸಂಖ್ಯಾತ ಮಾಸ್ಕ್‌ಗಳನ್ನು ಇಟ್ಟಿದ್ದ. ಅವನಿಗೆ ತನ್ನ ಕಣ್ಣು ಮುಚ್ಚಲು ಹೇಳಿದ. ಆಗ ಅವನ ಮುಖಕ್ಕೆ ಒಂದು ಮಾಸ್ಕ್ ಹಾಕಿ, ಈ ಕೂಡಲೇ ಕನ್ನಡಿ ನೋಡಬಾರದು ಎಂದು ತಾಕೀತು ಮಾಡಿದ. ಅವನಿಂದ ಯಾವುದೇ ದುಡ್ಡು ಪಡೆಯಲಿಲ್ಲ.

“ನೀನು ನನಗೆ ಸಹಾಯ ಮಾಡಿದ್ದೀಯ. ನಿನ್ನ ಕಾರಣದಿಂದ ಜನ ಈ ಅಂಗಡಿಗೆ ಬರ್ತಾ ಇದಾರೆ. ಅವರು ನಿನ್ನ ಮುಖದಿಂದ ಆಕರ್ಷಿತರಾಗಿರಬಹುದು, ಅಲ್ವಾ?” ಆ ವ್ಯಕ್ತಿ ನಗುತ್ತ ಹೇಳಿದ.

ಮನೆಗೆ ಬಂದಾಗ ಮಾಸ್ಕ್ ಹೇಗಿದೆ ಎಂಬುದರ ಬಗ್ಗೆ ಕುತೂಹಲವಿತ್ತು ಆದರೂ ಕನ್ನಡಿಯಲ್ಲಿ ನೋಡಿಕೊಳ್ಳಲಿಲ್ಲ. ಬೆಳಗ್ಗೆ ಆಗುವತನಕ ಆ ಮಾಸ್ಕ್ ಅವನ ಮುಖದೊಂದಿಗೆ ಬೆರೆತುಹೋಗಿತ್ತು. ಅವನು ತನ್ನ ಗಲ್ಲ ಮುಟ್ಟಿ ನೋಡಿದ, ಅಲ್ಲಿ ಮಾಸ್ಕ್ ಗೋಚರಿಸಲಿಲ್ಲ. ಕನ್ನಡಿಯಲ್ಲಿ ನೋಡಿಕೊಳ್ಳುವ ಅವಶ್ಯಕತೆ ಬೀಳಲಿಲ್ಲ.

ಕಚೇರಿಯಲ್ಲಿ ಎಲ್ಲರೂ ಅವನನ್ನು ಆಶ್ಚರ್ಯದಿಂದ ನೋಡಿದರು. ಮ್ಯಾನೇಜರ್ ತನ್ನ ಕಚೇರಿಗೆ ಕರೆದು, ಅವನನ್ನು ತುಂಬಾ ಹೊತ್ತು ದಿಟ್ಟಿಸಿ ನೋಡಿದ. ಒಂದು ಪದವೂ ಉಚ್ಚರಿಸದೆ ಅವನ ಡೆಸ್ಕ್‌ಗೆ ವಾಪಸ್ ಕಳಿಸಿದ. ಕಚೇರಿಯಿಂದ ಮನೆಯ ಕಡೆ ನಡೆಯುತ್ತ ಸಾಗುತ್ತಿರುವಾಗ ತನ್ನ ಸಹೋದ್ಯೋಗಿಗಳ ಹೊಸ ಪ್ರತಿಕ್ರಿಯೆ ಬಗ್ಗೆ ಎಷ್ಟು ಯೋಚಿಸುತ್ತಿದ್ದ ಎಂದರೆ, ರಸ್ತೆಯಲ್ಲಿ ಅವನಿಂದ ತಪ್ಪಿಸಿಕೊಳ್ಳಲು ಜನರು ತಮ್ಮ ದಾರಿಯನ್ನು ಬದಲಿಸಿದರೆ, ಇಲ್ಲವೇ ಎಂಬುದನ್ನು ನೋಡುವುದನ್ನೇ ಮರೆತ. ತನ್ನ ಮನೆಯ ಬಳಿ ಒಬ್ಬ ಸುಂದರವಾದ ಹುಡುಗಿಯು ಅಡ್ರೆಸ್ ಕೇಳಲು ಇವನ ಬಳಿ ಬಂದಳು. ಅವಳು ಕಳೆದುಹೋಗಿದ್ದಳು. ಇವನು ಅವಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಅವಳಿಗೆ ಶುಭ ಹಾರೈಸಿದ.

ಒಂದು ವಾರದ ಕೊನೆಯಲ್ಲಿ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸುಂದರ ಯುವತಿ, ನೀಳವಾದ ಕಾಲುಗಳ ಮತ್ತು ಗಾಢವಾಗಿ ಲಿಪ್‌ಸ್ಟಿಕ್ ಹಚ್ಚಿದ್ದ ಡಿಜಿಟಲ್ ಡಿಪಾರ್ಟ್‌ಮೆಂಟಿನಲ್ಲಿ ಕೆಲಸ ಮಾಡುವ ಅವಳು, ಮಧ್ಯಾಹ್ನದ ಊಟಕ್ಕೆ ಏನು ಮಾಡುತ್ತಿದ್ದೀಯ ಎಂದು ಇವನಿಗೆ ಕೇಳಿದಳು. ಅವಳು ಯಾಕೆ ಕೇಳಿದಳು ಎಂದು ಇವನಿಗೆ ಸುಳಿವು ಸಿಗಲಿಲ್ಲ.

ಆ ನಂತರ ಅವನು ತನ್ನ ಮಾಸ್ಕ್‌ಅನ್ನು ಗಮನಿಸಲೇ ಇಲ್ಲ. ಆದರೆ ಇತರರು ಧರಿಸಿದ ಮಾಸ್ಕ್‌ಅನ್ನು ಗಮನಿಸಲು ಶುರುಮಾಡಿದ. ಸಂಜೆ ಮನೆಯ ಕಡೆ ನಡೆದುಕೊಂಡು ಬರುತ್ತಿರುವಾಗ ಇತರರು ಧರಿಸುವ ಮಾಸ್ಕ್ ನೋಡಿ, ಅದನ್ನು ಈ ಮುಂಚೆ ನಾನು ಏಕೆ ಗಮನಿಸಿಲ್ಲ ಎಂದು ಆಶ್ಚರ್ಯಗೊಂಡ. ಈಗ ಗಮನಿಸಲು ಶುರು ಮಾಡಿದ ಮೇಲೆ ಅವರಿಂದ ತಪ್ಪಿಸಿಕೊಳ್ಳುವುದು ಅವಶ್ಯಕ ಎಂದುಕೊಂಡ ಹಾಗೂ ತಡವಾಗುವುದಕ್ಕೆ ಮುನ್ನವೇ ರಸ್ತೆಯ ಒಂದು ಬದಿಯಿಂದ ಇನ್ನೊಂದೆಡೆ ಸರಿಯುತ್ತಿದ್ದ.

ಮೂಲ ಕಥೆ: ಎ ರಿಂಕಲ್ ಇನ್ ರಿಯಾಲ್ಮ್

ಬೆನ್ ಓಕ್ರಿ

ಬೆನ್ ಓಕ್ರಿ
ನೈಜೀರಿಯನ್ ಕವಿ ಮತ್ತು ಬರಹಗಾರ. ಇವರ ’ದ ಫ್ಯಾಮಿಶ್ಡ್ ರೋಡ್’ ಕೃತಿಗೆ ಬೂಕರ್ ಪ್ರಶಸ್ತಿ ದೊರೆತಿದೆ. ’ಎ ವೇ ಆಫ್ ಬಿಯಿಂಗ ಫ್ರೀ’, ’ಸ್ಟಾರ್‌ಬುಕ್’, ’ಡೇಂಜರಸ್ ಲವ್’ ಇವರ ಕಾಂದಬರಿಗಳಲ್ಲಿ ಕೆಲವು.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ: ಮೂಲತಃ ಸಿನೆಮಾ ಮತ್ತು ರಂಗಭೂಮಿ ಹಿನ್ನೆಲೆಯವರಾದ ಅಕ್ಕಿ, ಸದಾ ಹೊಸದನ್ನು ಹುಡುಕುವ ಆಕ್ಟಿವಿಸ್ಟ್ ಸಹಾ ಹೌದು.. ನ್ಯಾಯಪಥ ಪತ್ರಿಕೆಯಲ್ಲಿ ಸಣ್ಣಕತೆ, ಸಿನೆಮಾ ಕುರಿತ ಬರಹಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಬಳಗೋಡಕ್ಕೆ ಟಿಸಿ ಬಂದ ಕಥೆ; ‘ಹಸಿರು ಟಾವೆಲ್’-ರೈತನೊಬ್ಬನ ಜೀವನ ಕಥನದಿಂದ ಆಯ್ದ ಅಧ್ಯಾಯ

ಬೆನ್ ಓಕ್ರಿ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Wordpress Social Share Plugin powered by Ultimatelysocial
Shares