ತ್ರಿಪುರಾ ಪೊಲೀಸರು ರಾಜ್ಯದಲ್ಲಿ ನಡೆದ ಕೋಮು ಹಿಂಸಾಚಾರದ ಕುರಿತು ವರದಿ ಮಾಡಿದ ಇಬ್ಬರು ಪತ್ರಕರ್ತೆಯರ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ದೂರಿನ ಮೇಲೆ ಶನಿವಾರ ಎಫ್ಐಆರ್ ದಾಖಲಿಸಿದ್ದಾರೆ. ಉನಕೋಟಿ ಜಿಲ್ಲೆಯ ಫಾಟಿಕ್ರೋಯ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸ್ವತಂತ್ರ ಸುದ್ದಿ ವೆಬ್‌ಸೈಟ್ @hwnewsnetwork ದೆಹಲಿ ಮೂಲದ ವರದಿಗಾರರಾದ 21 ವರ್ಷದ ಸಮೃದ್ಧಿ ಸಕುನಿಯಾ ಮತ್ತು 25 ವರ್ಷದ ಸ್ವರ್ಣ ಝಾ ವಿರುದ್ಧ ಭಾರತೀಯ ದಂಡ ಸಂಹಿತೆಯ 120B (ಕ್ರಿಮಿನಲ್ ಪಿತೂರಿ), 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 504 ಸೆಕ್ಷನ್ ಅಡಿಗಳಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 13 ರಂದು ಫಾಟಿಕ್ರೋಯ್‌ನಲ್ಲಿರುವ ಮುಸ್ಲಿಂ ಮನೆಗಳಿಗೆ ಭೇಟಿ ನೀಡಿದಾಗ ಇಬ್ಬರು ಪತ್ರಕರ್ತರು “ಹಿಂದೂಗಳು ಮತ್ತು ತ್ರಿಪುರಾ ಸರ್ಕಾರದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ” ಎಂದು ಆರೋಪಿಸಿ ಕಾಂಚನ್ ದಾಸ್ ಎಂಬವರು ದೂರು ದಾಖಲಿಸಿದ್ದಾರೆ.
ಪತ್ರಕರ್ತೆ ಸಕುನಿಯಾ, ಅಕ್ಟೋಬರ್ 24 ರಂದು ಉನಕೋಟಿಯ ಪೌಲ್ ಬಜಾರ್‌ನಲ್ಲಿ ಮಸೀದಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಎಚ್‌ಪಿ ಮತ್ತು ಬಜರಂಗದಳ ಸಂಘಟನೆ ಹೆಸರನ್ನು ಸೇರಿಸಿದ್ದಾರೆ. ಇದು ತ್ರಿಪುರಾದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡುವ “ಅಪರಾಧದ ಪಿತೂರಿ”ಯ ಭಾಗವಾಗಿದೆ ಎಂದು ದಾಸ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಮಣಿಪುರ: ಉಗ್ರರ ದಾಳಿಯಲ್ಲಿ ಸೇನಾ ಕರ್ನಲ್, ಪತ್ನಿ, ಮಗು ಸೇರಿ 7 ಮಂದಿ ಸಾವು
ಈ ಬಗ್ಗೆ ಪತ್ರಕರ್ತೆಯರಿಬ್ಬರೂ ತಮ್ಮ ಟ್ವಿಟರ್ ಖಾತೆಗಳಲ್ಲಿ ಎಫ್‌ಐಆರ್ ಪ್ರತಿಗಳನ್ನು ಫೋಸ್ಟ್ ಮಾಡಿ, ನಮ್ಮ ಮೇಲೆ ಎಫ್‌ಐಆರ್ ದಾಖಲಾಗಿದೆ. ನಮ್ಮನ್ನು ಹೋಟೆಲ್‌ನಿಂದ ಹೊರ ಹೋಗಲು ಪೊಲೀಸರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
15 ಪೊಲೀಸ್ ಅಧಿಕಾರಿಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಹೋಟೆಲ್ ಸುತ್ತುವರೆದಿದ್ದಾರೆ, ಅದರಲ್ಲಿ ಮೂವರು ಮಹಿಳಾ ಪೊಲೀಸರು ಇದ್ದಾರೆ ಎಂದು ಸಕುನಿಯಾ ಹೇಳಿದ್ದಾರೆ.
FIR? in #Tripura@Jha_Swarnaa and I, the correspondent at @hwnewsnetwork have been booked under 3 sections of IPC at the Fatikroy police station, Tripura.
VHP filed complaint against me and @Jha_Swarnaa FIR has been filed under the section: 120(B), 153(A)/ 504.
Copy of FIR pic.twitter.com/a8XGC2Wjc5
— Samriddhi K Sakunia (@Samriddhi0809) November 14, 2021
ಆದರೆ, ದೂರು ದಾಖಲಾದ ನಂತರ ಪೊಲೀಸರ ತಂಡ ಅವರನ್ನು ಪ್ರಶ್ನಿಸಲು ಹೋಗಿತ್ತು. ಪತ್ರಕರ್ತರಿಗೆ ಕೇವಲ ನೋಟಿಸ್ ನೀಡಲಾಗಿದೆ. ನವೆಂಬರ್ 21 ರಂದು ತಮ್ಮ ವಕೀಲರೊಂದಿಗೆ ಫಾಟಿಕ್ರೋಯ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನವೆಂಬರ್ 12 ರಂದು, ಸಕುನಿಯಾ ಮತ್ತು ಝಾ ಅವರು ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗಿರುವ ಮಸೀದಿಯ ಬಗ್ಗೆ ವರದಿ ಮಾಡಿದ್ದರು. ಶನಿವಾರ ಇಬ್ಬರು ವರದಿಗಾರರು ಇಲ್ಲಿ ಇನ್ನೊಂದು ಮಸೀದಿ ಮತ್ತು ಮುಸ್ಲಿಮರ ಮನೆಗಳಿಗೆ ಹಾನಿಯಾಗಿರುವದನ್ನು ವರದಿ ಮಾಡಲು ಧರ್ಮನಗರಕ್ಕೆ ಬಂದಿದ್ದರು. ತ್ರಿಪುರಾದಲ್ಲಿ ಅಕ್ಟೋಬರ್ 26 ರಂದು ನಡೆದ ವಿಎಚ್‌ಪಿ ರ್‍ಯಾಲಿ ಬಳಿಕ ಹಿಂಸಾಚಾರ ಆರಂಭವಾಗಿದೆ.
ಆದರೆ, ಬಿಜೆಪಿ ಆಡಳಿತವಿರುವ ತ್ರಿಪುರಾದಲ್ಲಿ ಮಸೀದಿಯನ್ನು ಧ್ವಂಸ ಮಾಡಿರುವ ವರದಿಗಳನ್ನು ಗೃಹ ಸಚಿವಾಲಯ ತಳ್ಳಿಹಾಕಿದೆ. “ತ್ರಿಪುರಾದ ಗೋಮತಿ ಜಿಲ್ಲೆಯ ಕಕ್ರಾಬನ್ ಪ್ರದೇಶದಲ್ಲಿ ಮಸೀದಿಯನ್ನು ಹಾನಿಗೊಳಿಸಲಾಗಿದೆ ಮತ್ತು ಧ್ವಂಸಗೊಳಿಸಲಾಗಿದೆ ಎಂದು ವರದಿ ಪ್ರಸಾರವಾಗಿವೆ. ಈ ಸುದ್ದಿಗಳು ನಕಲಿ ಮತ್ತು ಸಂಪೂರ್ಣ ಸುಳ್ಳು” ಎಂದಿದೆ.
ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ, ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ನಕಲಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿದ ಆರೋಪದಲ್ಲಿ ನೂರಕ್ಕೂ ಹೆಚ್ಚು ಖಾತೆಗಳ ವಿವರಗಳನ್ನು ನೀಡುವಂತೆ ಪೊಲೀಸರು ಜಾಲತಾಣಗಳಿಗೆ ನೋಟಿಸ್ ನೀಡಿದ್ದಾರೆ.
ಇತ್ತೀಚೆಗೆ, ಸುಪ್ರೀಂ ಕೋರ್ಟ್ ವಕೀಲರು, ಕಾರ್ಯಕರ್ತರು ಮತ್ತು ಪತ್ರಕರ್ತರು ಸೇರಿದಂತೆ 70 ಜನರ ವಿರುದ್ಧ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ನನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ: ಕಂಗನಾ ರಣಾವತ್


