ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್ ಮುಂದೆ 15 ಅಂಶಗಳ ಪ್ರಸ್ತಾಪವನ್ನು ಮಂಡಿಸಿದೆ ಎಂದು ವರದಿಯಾಗಿದೆ.
ಅಮೆರಿಕದ ಪ್ರಸ್ತಾಪವನ್ನು ಪಾಕಿಸ್ತಾನ ಮೂಲಕ ಇರಾನ್ ಸ್ವೀಕರಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಯುದ್ದ ಕೊನೆಗೊಳಿಸುವ ಕುರಿತು ಇರಾನ್‌ನ ಸರಿಯಾದ ವ್ಯಕ್ತಿಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಮಾ.24) ಹೇಳಿದ್ದರು. ಆದರೆ, ಇರಾನ್ ಇದನ್ನು ತಳ್ಳಿಹಾಕಿದೆ.
ವರದಿಗಳ ಪ್ರಕಾರ, ಇರಾನ್ ಮೇಲೆ ದಾಳಿ ನಡೆಸಿ ಇಸ್ರೇಲ್ ಮತ್ತು ಅಮೆರಿಕ ಕೈ ಸುಟ್ಟುಕೊಂಡಿವೆ. ಇರಾನ್‌ನ ತಿರುಗೇಟಿಗೆ ಟ್ರಂಪ್ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಹಾಗಾಗಿ, ಅಮೆರಿಕವೇ ಯುದ್ಧ ನಿಲ್ಲಿಸುವ ಪ್ರಸ್ತಾವ ಮುಂದಿಟ್ಟಿದೆ.
ಅಮೆರಿಕ ಇರಾನ್ ಮುಂದೆ ಇಟ್ಟಿರುವ ಪ್ರಸ್ತಾಪದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ
1. ಇರಾನ್ ತನ್ನ ಮೂರು ಪ್ರಮುಖ ಪರಮಾಣು ಕೇಂದ್ರಗಳಾದ ನಟಾಂಝ್, ಇಸ್ಫಹಾನ್, ಮತ್ತು ಫೋರ್ಡೋ ಸೌಲಭ್ಯಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು.
2. ಇರಾನ್ ತನ್ನ ನೆಲದಲ್ಲಿ ಯುರೇನಿಯಂ ಶುದ್ಧೀಕರಣವನ್ನು ನಿಲ್ಲಿಸಬೇಕು ಮತ್ತು ಈಗಿರುವ ಶುದ್ಧೀಕರಿಸಿದ ಯುರೇನಿಯಂ ಅನ್ನು ಅಂತಾರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಗೆ (ಐಎಇಎ) ಹಸ್ತಾಂತರಿಸಬೇಕು.
3. ಬ್ಯಾಲಿಸ್ಟಿಕ್ ಕ್ಷಿಪಣಿಗಳ ತಯಾರಿಕೆ ಮತ್ತು ಪರೀಕ್ಷೆಯನ್ನು ನಿಲ್ಲಿಸಬೇಕು ಹಾಗೂ ಕ್ಷಿಪಣಿಗಳ ಬಳಕೆಯನ್ನು ಕೇವಲ ಆತ್ಮರಕ್ಷಣೆಗಷ್ಟೇ ಸೀಮಿತಗೊಳಿಸಬೇಕು.
4. ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಝ್ ಜಲಸಂಧಿಯನ್ನು ಮುಕ್ತವಾಗಿರಿಸಬೇಕು ಮತ್ತು ಪ್ರಾದೇಶಿಕ ಬಂಡುಕೋರ ಅಥವಾ ಸಶಸ್ತ್ರ ಗುಂಪುಗಳಿಗೆ ನೀಡುತ್ತಿರುವ ಆರ್ಥಿಕ ಮತ್ತು ಶಸ್ತ್ರಾಸ್ತ್ರ ನೆರವನ್ನು ಇರಾನ್ ನಿಲ್ಲಿಸಬೇಕು.
ಈ ಮೇಲಿನ ಷರತ್ತುಗಳನ್ನು ಪಾಲಿಸಿದರೆ ಇರಾನ್ ಮೇಲಿರುವ ಪರಮಾಣು ಸಂಬಂಧಿತ ಕಠಿಣ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸುವುದಾಗಿ ಹೇಳಿದೆಯಂತೆ.
ಅಲ್ಲದೆ, ಇರಾನ್‌ನ ನಾಗರಿಕ ಪರಮಾಣು ಇಂಧನ ಯೋಜನೆಗೆ ಸಹಾಯ ಒದಗಿಸುತ್ತೇವೆ ಮತ್ತು ಮೇಲ್ವಿಚಾರಣೆ ಮಾಡುತ್ತೇವೆ. ಈ ಒಪ್ಪಂದದ ಕುರಿತು ಚರ್ಚಿಸಲು ಒಂದು ತಿಂಗಳ ಕಾಲ ಕದನ ವಿರಾಮ ಘೋಷಿಸಲು ಸಿದ್ಧರಿದ್ದೇವೆ ಎಂಬುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಅಮೆರಿಕ ಅಥವಾ ಟ್ರಂಪ್ ಅವರ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ಇರಾನ್ ಕಠಿಣ ಕದನ ವಿರಾಮದ ಷರತ್ತುಗಳನ್ನು ಅಥವಾ ಬೇಡಿಕೆಗಳನ್ನು ಮುಂದಿಡಲು ನಿರ್ಧರಿಸಿದೆ.
ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಮುಚ್ಚುಬೇಕು. ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಸಾರಿಗೆ ಶುಲ್ಕವನ್ನು ವಿಧಿಸಲು ಅವಕಾಶ ನೀಡಬೇಕು ಇತ್ಯಾದಿ ಇರಾನ್‌ನ ಬೇಡಿಕೆಗಳಲ್ಲಿ ಸೇರಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಇರಾನ್ ಒಪ್ಪಂದಕ್ಕೆ ಸಿದ್ಧವಿದೆ” ಎಂದು ಹೇಳಿದ್ದರೂ, ಇರಾನ್‌ನ ಮಿಲಿಟರಿ ವಕ್ತಾರರು ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ಮುಂದುವರಿದಿದೆ.
ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧವನ್ನು ಮುಂದುವರಿಸುವಂತೆ ಟ್ರಂಪ್ ಅವರ ಮೇಲೆ ಒತ್ತಡ ಹೇರುತ್ತಿದ್ದ ಇಸ್ರೇಲ್ ಅಧಿಕಾರಿಗಳಿಗೆ ಅಮೆರಿಕದ ಕದನ ವಿರಾಮದ ಪ್ರಸ್ತಾವನೆಯು ಅಚ್ಚರಿ ತಂದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಈ ಬೆಳವಣಿಗೆಗಳ ನಡುವೆಯೇ, ಅಮೆರಿಕವು ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ 3,000ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಸುಮಾರು 50,000 ಅಮೆರಿಕನ್ ಸೈನಿಕರು ಮೊಕ್ಕಾಂ ಹೂಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವನ್ನು ಕೊನೆಗಾಣಿಸಲು ಮರುಮಾತುಕತೆಗೆ ವೇದಿಕೆ ಒದಗಿಸಲು ಮುಂದಾಗಿರುವ ಪಾಕಿಸ್ತಾನದ ಮಧ್ಯಸ್ಥಗಾರರ ಮೂಲಕ ಈ ಶಾಂತಿ ಯೋಜನೆಯನ್ನು ಇರಾನ್‌ಗೆ ರವಾನಿಸಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ವಿಷಯದ ಬಗ್ಗೆ ಮಾಹಿತಿಯಿರುವ ಮೂಲವೊಂದು ಅಮೆರಿಕವು ಇರಾನ್‌ನೊಂದಿಗೆ ಶಾಂತಿ ಯೋಜನೆಯನ್ನು ಹಂಚಿಕೊಂಡಿರುವುದನ್ನು ರಾಯಿಟರ್ಸ್‌ಗೆ ಖಚಿತಪಡಿಸಿದೆ, ಆದರೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ಮಂಗಳವಾರ ಟ್ರೂತ್ ಸೋಶಿಯಲ್‌ನಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪೋಸ್ಟ್ ಒಂದನ್ನು ಟ್ರಂಪ್ ರಿಶೇರ್ ಮಾಡಿದ್ದರು. ಇರಾನ್ ಯುದ್ಧವನ್ನು ಕೊನೆಗಾಣಿಸಲು, ಅರ್ಥಪೂರ್ಣ ಮತ್ತು ನಿರ್ಣಾಯಕ ಮಾತುಕತೆಗಳನ್ನು ಸುಗಮಗೊಳಿಸಲು ಇಸ್ಲಾಮಾಬಾದ್ ಸಿದ್ಧವಾಗಿದೆ ಎಂದು ಆ ಪೋಸ್ಟ್‌ನಲ್ಲಿ ಷರೀಫ್ ತಿಳಿಸಿದ್ದರು.
ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯಲಿರುವ ಮಾತುಕತೆಗಳಲ್ಲಿ ಪಾಲ್ಗೊಳ್ಳಲು ಅಮೆರಿಕವು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ. ಆದರೆ, ಈ ಮಾತುಕತೆಗೆ ಇರಾನ್ ಅನ್ನು ಒಪ್ಪಿಸಲು ಮಧ್ಯಸ್ಥಗಾರರು ಇನ್ನೂ ಪ್ರಯತ್ನಿಸುತ್ತಿದ್ದಾರೆ. ಮುಂದಿನ ವಾರವೇ ಈ ಮಾತುಕತೆಗಳು ಪ್ರಾರಂಭವಾಗುವ ಸಾಧ್ಯತೆಯಿದ್ದು, ಅಮೆರಿಕದ ಪರವಾಗಿ ಮಧ್ಯಪ್ರಾಚ್ಯದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಭಾಗವಹಿಸುವ ನಿರೀಕ್ಷೆಯಿದೆ.


