ಕಳೆದ ಒಂದೂವರೆ ವರ್ಷದಿಂದ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಶಾಸಕ ಸುರೇಶ್‌ಗೌಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುರೇಶ್‌ಗೌಡ ಅವರನ್ನು ಸ್ಥಾನದಿಂದ ಇಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರು, ಬೆಂಬಲಿಗರನ್ನು ನಿಯಂತ್ರಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ರಾಜೀನಾಮೆ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಶಾಸಕ ಸುರೇಶ್‌ಗೌಡ, ತಮ್ಮ ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ. ಅವರ ಕಷ್ಟಸುಖಗಳಲ್ಲಿ ಭಾಗಿಯಾಗಲು ಹೆಚ್ಚು ಸಮಯವೇ ಸಿಗುತ್ತಿರಲಿಲ್ಲ ಹೀಗಾಗಿ ಅವರೊಂದಿಗೆ ಇರಲು ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
“ಪಕ್ಷದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಇಂದು ರಾಜೀನಾಮೆ ನೀಡಿದ್ದು, ಜಿಲ್ಲೆಯ ಜನರು ತೋರಿಸಿದ ಪ್ರೀತಿ, ಬೆಂಬಲಕ್ಕೆ ಅಭಾರಿಯಾಗಿದ್ದೇನೆ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾದ ಬಳಿಕ ಹಲವು ಸವಾಲುಗಳು ಎದುರಾದವು. ಅದರಲ್ಲಿ ಲೋಕಸಭಾ ಚುನಾವಣೆ ಜತೆಗೆ, ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೂ ಒಂದಾಗಿತ್ತು. ಇದಕ್ಕೆಲ್ಲ ನನ್ನ ಗ್ರಾಮಾಂತರ ಕ್ಷೇತ್ರದ ಜನರ ಆರ್ಶೀವಾದ, ಕೊಟ್ಟ ಸಹಕಾರ, ಧೈರ್ಯವೇ ಕಾರಣ, ಈ ಸಂದರ್ಭದಲ್ಲಿ ನನ್ನ ಈ ಎಲ್ಲಾ ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ” ಎಂದಿದ್ದಾರೆ.
ಇದನ್ನೂ ಓದಿ: ರೈತರ ಆಕ್ರೋಶ ಸ್ಫೋಟ – ಎಲ್ಲೆಡೆ ಆರಂಭಗೊಂಡ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
“ನಾನು ಎರಡು ಸಲ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕನಾಗಿ, ಎರಡು ಸಲ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿ. ರಾಜ್ಯ ಘಟಕದ ಕಾರ್ಯದರ್ಶಿಯಾಗಿ ಯಶಸ್ವಿಯಾಗಲು, ನನ್ನ ಕ್ಷೇತ್ರದ ಜನರು ತೋರಿದ ಪ್ರೀತಿ, ಸಹಕಾರ, ಬೆಂಬಲ ಕಾರಣವಾಗಿತ್ತೇ ಹೊರತು ಬೇರೇನು ಅಲ್ಲ. ಜಿಲ್ಲಾ ಘಟಕದ ಅಧ್ಯಕ್ಷನಾದ ಮೇಲೆ ಪಕ್ಷದ ಕೆಲಸಗಳ ಕಾರಣ ನನ್ನ ಕ್ಷೇತ್ರದ ಜನರೊಂದಿಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ಕೊರಗು ಸದಾ ನನ್ನನ್ನು ಕಾಡುತ್ತಿತ್ತು, ಅವರ ಕಷ್ಟಸುಖಗಳಲ್ಲಿ ಭಾಗಿಯಾಗಲು ಹೆಚ್ಚು ಸಮಯವೇ ಸಿಗುತ್ತಿರಲಿಲ್ಲ. ಕೋವಿಡ್ ನಿಂದ ಆರ್ಥಿಕ ಹಿಂಜರಿತ, ನೀರಾವರಿ ಸಮಸ್ಯೆಯಿಂದ ಜನರು ಅನುಭವಿಸುತ್ತಿರುವ ಬವಣೆ, ಶಿಕ್ಷಣದ ಗುಣಮಟ್ಟದ ಕುಸಿತದಿಂದ ಕ್ಷೇತ್ರದ ಮಕ್ಕಳು ಅನುಭವಿಸುತ್ತಿರುವ ಯಾತನೆಯ ಹಿನ್ನೆಲೆಯಲ್ಲಿ ಅವರೊಂದಿಗೆ ಸದಾ ಸಮಯ ಇರಬೇಕೆಂದು ಮನಸ್ಸು ಹೇಳುತ್ತಿತ್ತು. ನನ್ನ ಕ್ಷೇತ್ರದ ಜನರೇ ನನಗೆ ಎಲ್ಲವೂ ಆಗಿರುವುದರಿಂದ ಅವರೊಂದಿಗೆ ಇರಲು ರಾಜೀನಾಮೆ ನಿರ್ಧಾರ ಮಾಡಿದೆ” ಎಂದು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ.
“ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದಾಗ ಜಿಲ್ಲೆಯ ಮೂಲೆಮೂಲೆಗಳಿಂದ ಎಲ್ಲಾ ಜಾತಿಗಳ, ಧರ್ಮಗಳ ಜನರು ನನಗೆ ತೋರಿಸಿದ ಪ್ರೀತಿ, ಕೊಟ್ಟ ಸಹಕಾರಕ್ಕೆ ಧನ್ಯವಾದವನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ. ಇದೇ ರೀತಿಯ ಪ್ರೀತಿ, ಹಾರೈಕೆ, ಬೆಂಬಲ ಇನ್ನೂ ಮುಂದೆಯೂ ನೀಡುವಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ” ಎಂದು ಸುರೇಶ್‌ಗೌಡ ಮನವಿ ಮಾಡಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಾಸಕ ಸುರೇಶ್‌ಗೌಡ ರಾಜೀನಾಮೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಹರಿದಾಡುತ್ತಿವೆ. ಯಡಿಯೂರಪ್ಪ ಆಪ್ತರನ್ನು ನಿಯಂತ್ರಿಸಲು ಅವರ ಆಪ್ತರನ್ನು ಕೆಳಗಿಳಿಸಲಾಗುತ್ತಿದೆ ಎನ್ನುವ ಜೊತೆಗೆ ಸುರೇಶ್‌ಗೌಡ ಅವರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಇದನ್ನೂ ಓದಿ: ಬಿಜೆಪಿಯವರು ಹಿಂಬಾಗಿಲ ಮೂಲಕ ಮಾತ್ರ ಅಧಿಕಾರಕ್ಕೆ ಬರಬಲ್ಲರು- ಸಿದ್ದರಾಮಯ್ಯ


