ತುಮಕೂರಿನಲ್ಲಿ ಕುವೆಂಪುರವರ ಆಶಯದ ಮಂತ್ರ ಮಾಂಗಲ್ಯ ರೀತಿಯಲ್ಲಿ ಮದುವೆಯಾದ ಯುವ ಜೋಡಿಯೊಂದು ತಮ್ಮ ವಿವಾಹದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ದೇವನೂರು ಮಹದೇವರವರು ಬರೆದಿರುವ RSS ಆಳ ಮತ್ತು ಅಗಲ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ರಮ್ಯ ಜಿ ಮತ್ತು ತುಮಕೂರಿನ ಕಿರಣ್ ಎಂಬುವವರು ಬುಧವಾರ ಹೊಸಬದುಕಿಗೆ ಕಾಲಿಟ್ಟರು. ಸಾಹಿತಿ ಎಸ್ ಗಂಗಾಧರಯ್ಯ ವಧು-ವರರಿಗೆ ಮಂತ್ರ ಮಾಂಗಲ್ಯ ಬೋಧಿಸಿ, “ಮನುಷ್ಯರ ನಡುವೆ ಇಂದು ಕೋಮುವಾದಿಗಳು ಮತ್ತು ಜಾತಿವಾದಿಗಳು ದ್ವೇಷ ಬಿತ್ತುತ್ತಿದ್ದಾರೆ. ಇಂತಹ ಕಾಲದಲ್ಲಿ ಸಹಜ ಪ್ರೀತಿ, ಸ್ನೇಹ, ವಿಶ್ವಾಸವನ್ನು ಆಧರಿಸಿದ ಈ ವಿವಾಹಕ್ಕೆ ಒಪ್ಪಿಗೆ ನೀಡಿದ ಎರಡೂ ಕುಟುಂಬಗಳ ನಡೆ ಮಾದರಿಯಾಗಿದೆ. ನೂತನ ವಧು-ವರರು ಮೂಢನಂಬಿಕೆ, ಕಂದಾಚಾರಗಳಿಂದ ಹೊರಬಂದು ಸ್ವತಂತ್ರವಾಗಿ ಆಲೋಚಿಸುತ್ತ ಬದಕನ್ನು ಆನಂದಿಸಲಿ. ಕುವೆಂಪು ಮಾರ್ಗದ ಆದರ್ಶ ಪಾಲಿಸಲಿ” ಎಂದರು.
ನಂತರ ಮಂತ್ರ ಮಾಂಗಲ್ಯದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ದೇವನೂರು ಮಹದೇವರವರ ಇತ್ತೀಚಿನ ಬಹುಬೇಡಿಕೆಯ ಕೃತಿಯಾದ ಆರ್‌ಎಸ್‌ಎಸ್ ಆಳ ಮತ್ತು ಅಗಲ ಕೃತಿಯನ್ನು ಉಡುಗೊರೆಯಾಗಿ ನೀಡಲಾಯಿತು.
ಈ ಕೃತಿ ಬಿಡುಗಡೆಯಾಗಿ ಇನ್ನೂ ಎರಡು ತಿಂಗಳು ಪೂರೈಸಿಲ್ಲ. ಈಗಾಗಲೇ ಸುಮಾರು 1,25,000 ಪ್ರತಿಗಳು ಮುದ್ರಣಗೊಂಡಿವೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ಈ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಪರಿಪಾಟ ರೂಢಿಯಲ್ಲಿದೆ.
ಇದನ್ನೂ ಓದಿ : ಆರ್‌ಎಸ್ಎಸ್ ಆಳ ಮತ್ತು ಅಗಲ: ಭಾರತೀಯ ಜಾತ್ಯತೀತ ಹೋರಾಟಕ್ಕೆ ಹೊಸ ದೇವನೂರ ಭಾಷೆ – ಯೋಗೇಂದ್ರ ಯಾದವ್


