ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ತೆರದಕುಪ್ಪಯ ಸಮೀಪ ತೋಟದ ಮನೆಯಲ್ಲಿ ಆಟವಾಡುತ್ತಿದ್ದ ನಾಗರಾಜು ಎಂಬವರ ಪುತ್ತಿ ರೇಖಾ (6) ಎಂಬ ಬಾಲಕಿಯ ಮೇಲೆ, ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ದಾಳಿ ಮಾಡಿದ ಚಿರತೆಯೊಂದು ಬಲಕಿವಿಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.
ಬಾಲಕಿಯೂ ಗಂಭೀರವಾಗಿ ಗಾಯಗೊಂಡಿದ್ದು ಕುಣಿಗಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ.
ಚಿರತೆ ದಾಳಿಯನ್ನು ಖಂಡಿಸಿ ಕುಣಿಗಲ್ ತಾಲೂಕು ವಡ್ಡರಕುಪ್ಪೆ ಬಳಿ ರಾಷ್ಟ್ರೀಯ ಹೆದ್ದಾರಿ 75ನ್ನು ತಡೆದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಹೀಗಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಪ್ರತಿಭಟನಾಕಾರರು ಚಿರತೆ ದಾಳಿ ತಡೆಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು. ನಂತರ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು.
ಇನ್ನೊಂದು ಕಡೆ ತುಮಕೂರು ತಾಲೂಕು ಹೆಬ್ಬೂರಿನಲ್ಲೂ ರಸ್ತೆ ತಡೆದು ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಬಾಲಕಿಗೆ ಪರಿಹಾರ ನೀಡಿದ್ದ ಚೆಕ್ ಭೌನ್ಸ್ ಆಗಿದ್ದು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು.
ಹೆಬ್ಬೂರಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ನೂರಾರು ಪೊಲೀಸರನ್ನು ನಿಯೋಜಿಸಲಾಗಿದೆ. ಚಿರತೆ ದಾಳಿಗೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಮನುಷ್ಯರ ರಕ್ತದ ರುಚಿ ಕಂಡಿರುವ ಚಿರತೆಯ ದಾಳಿ ಮುಂದುವರಿದಿದ್ದು, ಪದೇ ಪದೇ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆ. ಜಿಲ್ಲಾಡಳಿತ ಇಂತಹ ಘಟನೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ನಾಲ್ಕು ಮಂದಿ ಚಿರತೆಗೆ ಬಲಿಯಾಗಿದ್ದಾರೆ. ಇದೀಗ ಮತ್ತೆ ಚಿರತೆ 6 ವರ್ಷದ ಬಾಲಕಿ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದೆ.
ಓದಿ: ಕೊರೊನ ಹುಲ್ಲುಗಾವಲು: ಸಸ್ಪೆಂಡ್ ಆಗಿದ್ದ ನಾಗೇಂದ್ರಪ್ಪನನ್ನು ತುಮಕೂರಿನ ಡಿಎಚ್ಓ ಸ್ಥಾನಕ್ಕೆ ಕೂರಿಸಿದ್ದೇಕೆ?


