ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾರತದಲ್ಲಿ ಉಳಿದುಕೊಂಡಿದ್ದ 2,550 ವಿದೇಶಿ ತಬ್ಲೀಘಿ ಜಮಾಅತ್ ಸದಸ್ಯರು 10 ವರ್ಷಗಳ ಕಾಲ ದೇಶಕ್ಕೆ ಪ್ರವೇಶಿಸುವುದನ್ನು ಗೃಹ ಸಚಿವಾಲಯ ನಿಷೇಧಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದೆ.
ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಈ ಹಿಂದೆಯೇ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು ಎನ್ನಲಾಗಿದೆ. ದೇಶಾದ್ಯಂತ ಮಸೀದಿಗಳು ಮತ್ತು ಧಾರ್ಮಿಕ ಸೆಮಿನರಿಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿರ ವಿವರಗಳನ್ನು ವಿವಿಧ ರಾಜ್ಯ ಸರ್ಕಾರಗಳು ಒದಗಿಸಿದ ನಂತರ ಗೃಹ ಸಚಿವಾಲಯ ಈ ಕ್ರಮ ಕೈಗೊಂಡಿದೆ.
ಮಾರ್ಚ್‌ನಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾದ ನಂತರ 250 ವಿದೇಶಿಯರು ಹಾಗೂ ಸಾವಿರಕ್ಕೂ ಹೆಚ್ಚು ಜನರು ದೆಹಲಿಯ ನಿಜಾಮುದ್ದೀನ್‌ನ ತಬ್ಲೀಘಿ ಜಮಾಅತ್‌ನ ಪ್ರಧಾನ ಕಚೇರಿಯಲ್ಲಿ ವಾಸಿಸುತ್ತಿರುವುದು ಕಂಡುಬಂದ ನಂತರ ವಿದೇಶಿ ತಬ್ಲಿಘಿ ಜಮಾಅತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಮಾರ್ಚ್ 13 ರಿಂದ 15ರ ವರೆಗೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂಡೋನೇಷ್ಯಾ ಹಾಗೂ ಮಲೇಷ್ಯಾ ಸೇರಿದಂತೆ ಹಲವಾರು ದೇಶಗಳಿಂದ ಜನ ಆಗಮಿಸಿದ್ದರು.
ಈ ಘಟನೆಯನ್ನಿಟ್ಟು ಹಳೆಯ ವಿಡಿಯೋ ಹಾಗೂ ಚಿತ್ರಗಳನ್ನು ಬಳಸಿಕೊಂಡು, ಬಲಪಂಥೀಯ ಸಂಘಟನೆಗಳು ಹಾಗೂ ಮಾಧ್ಯಮಗಳು ನಕಲಿ ಸುದ್ದಿಯನ್ನು ಹಂಚಿ ದೇಶದಲ್ಲಿ ಕೋಮು ದ್ವೇಷ ಹರಡಲು ಪ್ರಯತ್ನಿಸಿದ್ದವು.
ಈ ಬಗ್ಗೆ ಸ್ಪಷ್ಟೀಕರಣ ನಿಡಿದ್ದ ತಬ್ಲೀಘ್ ಜಮಾಅತ್ “ತನ್ನ ನೂರು ವರ್ಷಗಳ ಇತಿಹಾಸದಲ್ಲಿ ಸದಾ ದೇಶದ ಕಾನೂನನ್ನು ಪಾಲಿಸುತ್ತಾ ಬಂದಿದೆ. ಈಗಲೂ ಕೊರೋನ ನಿಯಂತ್ರಣಕ್ಕೆ ಸರಕಾರದ ಎಲ್ಲ ಕ್ರಮಗಳನ್ನು ಅದು ಸಂಪೂರ್ಣ ಬೆಂಬಲಿಸುತ್ತದೆ. ಮರ್ಕಝ್ ಕೇಂದ್ರ ಕಚೇರಿಯನ್ನು ಕೊರೋನ ನಿಯಂತ್ರಣಕ್ಕೆ ಬೇಕಾದ ಐಸೋಲೇಷನ್ ಕೇಂದ್ರವಾಗಿ ಬೇಕಾದರೂ ಸರಕಾರ ಬಳಸಬಹುದು” ಎಂದು ಹೇಳಿತ್ತು.
ಓದಿ: ಮರ್ಕಝ್‌ನಲ್ಲಿ ನಡೆದದ್ದೇನು?: ತಬ್ಲೀಘ್ ಜಮಾಅತ್ ಸ್ಪಷ್ಟನೆ