ತುಮಕೂರು: ಕೊರೊನ ವಾರಿಯರ್ಸ್ ಗೆ ವೈಯಕ್ತಿಕ ಸುರಕ್ಷಾ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ಆರೋಪದ ಮೇಲೆ ಇಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದ ಚಂದ್ರಿಕಾ ವರ್ಗಾವಣೆ ಹಿಂದೆ ಕಮೀಷನ್ ದಂಧೆ ಕೆಲಸ ಮಾಡಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರತೊಡಗಿವೆ. ಚಂದ್ರಿಕಾ ಅವರ ಜಾಗಕ್ಕೆ ಲೋಕಾಯುಕ್ತ ಬಲೆಗೆ ಬಿದ್ದು ಸಸ್ಪೆಂಡ್ ಆಗಿದ್ದ ಡಾ.ನಾಗೇಂದ್ರಪ್ಪ ಅವರನ್ನು ಡಿಎಚ್ಒ ಸ್ಥಾನಕ್ಕೆ ತಂದು ಕೂರಿಸಿದ್ದೇಕೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಮೊದಲಿಗೆ ಪಿಪಿಇ ಕಿಟ್‌ಗಳ ಟೆಂಡರ್ ರಾಜ್ಯ ಮಟ್ಟದಲ್ಲಾಗಿದೆಯೇ ಅಥವಾ ಜಿಲ್ಲಾ ಮಟ್ಟದಲ್ಲಿ ಆಗಿದೆಯೇ ಸ್ಪಷ್ಟ ಮಾಹಿತಿ ಇಲ್ಲ. ಆರೋಗ್ಯ ಇಲಾಖೆಯ ನಿರ್ದೇಶಕರೇ ಯಾವ್ಯಾವ ಜಿಲ್ಲೆಗಳಿಗೆ ಎಷ್ಟು ಪಿಪಿಇ ಕಿಟ್‌ಗಳ ಅಗತ್ಯವಿದೆ ಎಂಬ ಮಾಹಿತಿ ಪಡೆದು ರಾಜ್ಯಮಟ್ಟದಲ್ಲಿಯೇ ಟೆಂಡರ್ ಕರೆದು ಖರೀದಿ ಮಾಡಬಹುದು. ಇಲ್ಲವೇ ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ನೀಡಿದ್ದರೆ, ಜಿಲ್ಲಾ ಮಟ್ಟದಲ್ಲಿಯೇ ಟೆಂಡರ್ ಕರೆದು ಖರೀದಿ ಮಾಡಲು ಅವಕಾಶವಿದೆ.
ಒಂದೊಮ್ಮೆ ಜಿಲ್ಲಾಮಟ್ಟದಲ್ಲಿಯೇ ಪಿಪಿಇ ಕಿಟ್ ಖರೀದಿಗೆ ಟೆಂಟರ್ ಕರೆದಿದ್ದರೆ ಮೇಲಿನವರಿಗೆ ಕಮಿಷನ್ ನೀಡಲೇಬೇಕು ಎಂಬುದು ಆರೋಗ್ಯ ಇಲಾಖೆಯಲ್ಲಿನ ಮೂಲಗಳು ಹೇಳುತ್ತವೆ. ತುಮಕೂರಿನಲ್ಲಿ ಚಂದ್ರಿಕಾ ಅವರು ಜಿಲ್ಲೆಯಲ್ಲೇ ಟೆಂಡರ್ ಕರೆದು ಖರೀದಿಸಿದರೇ ಸ್ಪಷ್ಟವಾಗಿಲ್ಲ. ಆದರೆ ಬಿಜೆಪಿ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಗುಬ್ಬಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಂದ್ರಿಕಾ ವಿರುದ್ಧ ಅವ್ಯವಹಾರದ ಆರೋಪ ಮಾಡುತ್ತಾರೆ.
ದಿಲೀಪ್ ಕುಮಾರ್ ಹಿಂದಿನ ಡಿಎಚ್ಒ ಚಂದ್ರಿಕಾ ವಿರುದ್ಧ ಆರೋಪ ಮಾಡುತ್ತಿದ್ದಂತೆಯೇ ಅವರನ್ನು ಡಿಮೋಷನ್ ಮಾಡಿ ಹೊಸದುರ್ಗಕ್ಕೆ ವರ್ಗಾವಣೆ ಮಾಡಲಾಯಿತು. ಆದರೆ ಚಂದ್ರಿಕಾ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲೇ ಇಲ್ಲ. ಸರ್ಕಾರ ದಲಿತ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆ ಮಾಡುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಂದ್ರಿಕಾ ಮೇಲೆ ತನಿಖೆಗೆ ಅಧೇಶಿಸಲಾಯಿತು. ಇದಾದ ಕೆಲವೇ ದಿನಗಳಲ್ಲಿ ಚಂದ್ರಿಕಾ ಅವರನ್ನು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರಾಗಿ ಪದೋನ್ನತಿ ನೀಡಿತು. ಹಾಗಾಗಿ ಚಂದ್ರಿಕಾ ಈಗ ಜೆಡಿ.
ಬಿಜೆಪಿ ಕಾರ್ಯಕರ್ತ ದಿಲೀಪ್ ಕುಮಾರ್ ಆರೋಪವನ್ನು ಚಂದ್ರಿಕಾ ಮೇಲೆ ಮಾಡಿದ ಕೂಡಲೇ ವರ್ಗಾವಣೆ ಮಾಡುವುದಾದರೆ ಆ ಜಾಗಕ್ಕೆ ಲಿಂಗಾಯತ ಸಮುದಾಯದ ನಾಗೇಂದ್ರಪ್ಪ ಅವರನ್ನು ಡಿಎಚ್ಒ ಮಾಡುವ ಹುನ್ನಾರ ಈ ಆರೋಪದ ಹಿಂದಿತ್ತು ಎಂಬುದು ಈಗ ಬೆಳಕಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾದುಸ್ವಾಮಿ, ಸಂಸದ ಜಿ.ಎಸ್.ಬಸವರಾಜು ಮತ್ತು ಶಾಸಕ ಜ್ಯೋತಿ ಗಣೇಶ್ ಒತ್ತಡ ವರ್ಗಾವಣೆಗೆ ಕಾರಣ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಚಂದ್ರಿಕಾ ಅವರು ಸಾಚಾ ಏನಲ್ಲ. ಆದರೆ ದಲಿತರು ಎಂಬ ಕಾರಣಕ್ಕೆ ಮತ್ತು ತಮ್ಮ ಮಾತನ್ನು ಕೇಳುವ ಅಧಿಕಾರಿಯನ್ನು ಡಿಎಚ್ಒ ಸ್ಥಾನಕ್ಕೆ ಕೂರಿಸಬೇಕಾಗಿತ್ತು. ಆ ಕಾರಣಕ್ಕೆ ನಾಗೇಂದ್ರಪ್ಪ ಅವರನ್ನು ಡಿಎಚ್ಒ ಅಧಿಕಾರಿಯಾಗಿ ಕೂರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಸಂಸದ ಬಸವರಾಜು ತಮ್ಮ ಸುಮುದಾಯದ ಅಧಿಕಾರಿಯನ್ನು ಆ ಜಾಗಕ್ಕೆ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಿನ ಡಿಎಚ್ಒ ನಾಗೇಂದ್ರಪ್ಪ ಹಿಂದೆ ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದು ಸಸ್ಪಂಡ್ ಆಗಿದ್ದವರು. ಅವ್ಯವಹಾರದ ಆರೋಪವೂ ನಾಗೇಂದ್ರಪ್ಪ ಅವರ ಮೇಲಿತ್ತು. ಅಜೆಸ್ಟ್‌ಮೆಂಟ್ ನಡೆದು ಕೇಸು ಖುಲಾಸೆಯಾಗಿದೆ ಎಂದು ಹೇಳಲಾಗುತ್ತಿದೆ.
ಚಂದ್ರಿಕಾ ಡಿಎಚ್ಓ ಆಗಿದ್ದಾಗ ಪ್ರತಿದಿನದ ಕೊರೊನ ಹೆಲ್ತ್ ಬುಲಿಟಿನ್ ಅನ್ನು ಜಿಲ್ಲಾಧಿಕಾರಿ ನೀಡುತ್ತಿದ್ದರು. ನಾಗೇಂದ್ರಪ್ಪ ಡಿಎಚ್ಒ ಆಗಿ ಬಂದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಯೇ ಕೋವಿಡ್-19 ಅಂಕಿ ಅಂಶಗಳನ್ನು ನೀಡುತ್ತಿದ್ದಾರೆ. ಇದು ಒಬ್ಬ ಮಹಿಳಾ ಅಧಿಕಾರಿಯನ್ನು ನಡೆಸಿಕೊಂಡಿರುವ ರೀತಿಯನ್ನು ಎತ್ತಿತೋರಿಸುತ್ತದೆ. ಕೊರೊನ ಕಾಲದಲ್ಲಿ ‘ಹುಲ್ಲುಗಾವಲು’ ಹುಲುಸಾಗಿ ಬೆಳೆದಿದ್ದು, ಅದನ್ನು ಕೊಯ್ದುಕೊಳ್ಳಲು ಭ್ರಷ್ಟರು ಕಾದು ಕುಳಿತಿದ್ದಾರೆ.
ದಲಿತ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ತಮ್ಮ ಸಮುದಾಯದ ಅಧಿಕಾರಿಗಳನ್ನು ಮುಖ್ಯ ಸ್ಥಾನಗಳಿಗೆ ತರುವ ಹುನ್ನಾರು ನಡೆಯುತ್ತಿದೆ. ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಕೂಡ ಜಿಲ್ಲಾ ಉಸ್ತುವಾರಿ ಸಚಿವರ ಸಂಬಂಧಿ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಓದಿ: ಪಿಪಿಇ ಕಿಟ್, ಔಷಧಿ ಪೂರೈಕೆ ಆಗುತ್ತಿಲ್ಲ; ರಾಜಕೀಯವಾಡದಿರಿ: ಬಿಜೆಪಿ ವಿರುದ್ದ ಮಹಾ ಸಿಎಂ ಕಿಡಿ