ನಿನ್ನೆ ಬೆಂಗಳೂರಿನ ಆಶಿರ್ವಾದ್ ಕೇಂದ್ರದಲ್ಲಿ Prisonor No. 626710 is present ಎಂಬ ಸಾಕ್ಷ್ಯ ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು. 6.30ಕ್ಕೆ ಪ್ರದರ್ಶನ ಎಂದು ಹಾಕಲಾಗಿತ್ತು. 6.15ಕ್ಕೇ ಹಾಲ್ ಫುಲ್ ಆಗಿತ್ತು. ಆದರೂ ಸಿನಿಮಾ ಶುರುವಾದದ್ದು 6.45ಕ್ಕೆ. ಬಂದವರನ್ನು ಕೂರಿಸಲು ಫಾದರ್ ಅರುಣ್ ಲೂಯಿಸ್ ಪೇಚಾಡುತ್ತಿದ್ದರು. ಸುಮಾರು ಜನ ನೆಲದ ಮೇಲೆಯೇ ಕೂತರು. ಕೂರಲೂ ಜಾಗವಿಲ್ಲ. ಹಾಗೂ ಹೀಗೂ ಮಾಡಿ ಚಿತ್ರವನ್ನು ಚಾಲು ಮಾಡಲಾಯಿತು.ಉಮರ್ ಖಾಲಿದ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನೀವು ಈ ವಿಡಿಯೋ ನೋಡುತ್ತಿದ್ದೀರೆಂದರೆ ನಾನು ಬಂಧನವಾಗಿದ್ದೇನೆ ಎಂದೇ ಅರ್ಥ” ಎಂಬ ಉಮರ್ ನ ಮಾತಿನೊಂದಿಗೆ ಸಾಕ್ಷ್ಯ ಚಿತ್ರ ಪ್ರಾರಂಭವಾಯಿತು. ತನ್ನ ಬಂಧನವನ್ನು ನಿರೀಕ್ಷಿಸಿದ್ದ ಉಮರ್ ಮೊದಲೇ ರೆಕಾರ್ಡ್ ಮಾಡಿದ್ದ ವಿಡಿಯೋ ಅದು. ಸ್ವಯಂ ಉಮರ್, ಅವರ ಬಾಳ ಸಂಗಾತಿ ಜೋಸ್ನ ಹಾಗೂ ಅವರ ಮತ್ತೊಬ್ಬ ಮಿತ್ರನ ಮಾತುಗಳನ್ನು ನಿರೂಪಣೆಯಾಗಿ ಹೆಣೆಯಲಾಗಿದೆ.
ಇದನ್ನೂ ಓದಿ: ವಿಚಾರಣೆಯಿಲ್ಲದೆ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್
ಮಧ್ಯದಲ್ಲಿ 2016 ರಿಂದ 2020ರ ನಡುವೆ ಜೆ ಎನ್ ಯು ಹಾಗೂ ದೆಹಲಿಯಲ್ಲಿ ನಡೆದ ಘಟನಾವಳಿಗಳನ್ನು ಹಿನ್ನೆಲೆಯಾಗಿ ಸಮರ್ಥ ರೀತಿಯಲ್ಲಿ ಬಳಸಲಾಗಿದೆ. ಸಿನೆಮಾ ಉಮರ್ ಬಗ್ಗೆ ಮಾತನಾಡಿದರೂ ಅದು ಹೇಳುವುದು ಈ ದೇಶದ ದುರಂತ ಕಥೆಯನ್ನು. ಬಹಳ ಸರಳವಾಗಿ, ನೇರವಾಗಿ, ಕಣ್ಣಿಗೆ ಕಟ್ಟುವ ವಿಡಿಯೋ ತುಣುಕುಗಳ ಮೂಲಕ ಹಾಗೂ ಹೃದಯ ಕಲಕುವ ವಾಸ್ತವಗಳ ಮೂಲಕ ನಿರ್ದೇಶಕ ಲಲಿತ್ ವಾಚಾನಿ ಅವರು ಚಿತ್ರವನ್ನು ಕಟ್ಟಿಕೊಡುವ ಪರಿ simple but super.
ಸಿನಿಮಾ ಮುಗಿದ ಮೇಲೆ ಸಂವಾದದ ಆರಂಭಿಕ ಮಾತುಗಳನ್ನಾಡಲು ನನ್ನನ್ನು ಕರೆದರು. ಉಮರ್ ಅವರನ್ನು ಹತ್ತಿರದಿಂದ ಬಲ್ಲವನು ಎಂಬ ಕಾರಣಕ್ಕೆ. ಮನದಾಳದಿಂದ ಉಮರ್ ಗೆ ಕ್ಷಮೆ ಕೇಳಿದೆ. ಉಮರ್ ಬಿಡುಗಡೆಗೆ ಇಷ್ಟು ವರ್ಷವಾದರೂ ನಾವು ಗಟ್ಟಿ ದನಿ ಎತ್ತಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತಿತ್ತು. ನನ್ನದು ಮಾತ್ರವಲ್ಲ ಬಂದವರೆಲ್ಲರ ಮನಸ್ಸುಗಳೂ ಉಮರ್ ಬಿಡುಗಡೆಗೆ ಏನಾದರೂ ಮಾಡಬೇಕು ಎಂದು ಒತ್ತಾಯಿಸುತ್ತಿದ್ದವು.
ಭಾಗವಹಿಸಿದವರಲ್ಲಿ ಬಹುತೇಕ ಯುವ ಮುಖಗಳು. ಅ ಮುಖಗಳಲ್ಲಿ ಒಂದು ಕಾಳಜಿ ಇತ್ತು, ಹೊಳಪಿತ್ತು. ಸಂವಾದದ ಭಾಗವಾಗಿ ಹಲವರು ಯುವ ಮಿತ್ರರು ಬಹಳ ಚೆನ್ನಾಗಿ ಮಾತನಾಡಿದರು. ಮರ ಸಂಸ್ಥೆಯ ರಾಮ್ ಅರ್ಥಪೂರ್ಣ ಮಾತುಗಳ ಮೂಲಕ ಸಭೆಯನ್ನು ಸಮಾರೋಪಗೊಳಿಸಿದರು. ಸಭೆ ಮುಗಿದರೂ ಅನೇಕರಿಗೆ ಹೊರಡುವ ಮನಸ್ಸಿರಲಿಲ್ಲ. ಅಲ್ಲಲ್ಲೆ ಗುಂಪಾಗಿ ನಿಂತು, ಕುಳಿತು, ಮಾತಿನಲ್ಲಿ ತಲ್ಲೀನರಾಗಿದ್ದರು. ಕಳಕಳಿಯ ಮನಸ್ಸುಗಳ ಕಲರವದ ಮಾತಾವರಣ ಎಲ್ಲರನ್ನು ಹಿಡಿದಿಟ್ಟುಕೊಂಡಿತ್ತು ಅನಿಸುತ್ತೆ.
ಇದನ್ನೂಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ
ಯುವಜನರ ನಡುವೆ ಹಿರಿಯ ಹೋರಾಟಗಾರರೂ ಇದ್ದರು. ಯುವಜನರಿಗೆ ಮಾತನಾಡಲು ಬಿಟ್ಟು ಅವರು ಸುಮ್ಮನೆ ಕೂತು ಆಲಿಸುತ್ತಿದ್ದರು. ಒಂದು ರೀತಿಯಲ್ಲಿ ಆನಂದಿಸುತ್ತಿದ್ದರು. ಪ್ರಸಿದ್ಧ ರಂಗ ಕರ್ಮಿ ರಘುನಂದನ್ ಅವರು ವಿರೋಧ ಪಕ್ಷಗಳಾವುವೂ ಕೋರೆಗಾಂವ್ ಆರೋಪಿಗಳ ಬಗ್ಗೆಯಾಗಲೀ, ಉಮರ್ ಬಗ್ಗೆಯಾಗಲೀ ಮಾತನಾಡುತ್ತಿಲ್ಲ. ಎಲ್ಲಿ ತಮ್ಮನ್ನೂ ಭಯೋತ್ಪಾದಕರ ಬೆಂಬಲಿಗರು ಎಂದು ದೂಷಿಸಲಾಗುತ್ತೋ ಎಂಬ ಭಯ ಅವರಿಗೆ. ಆದರೆ ಈ ಪಕ್ಷಗಳೂ ಸಹ ಮಾತನಾಡಲೇಬಾಕಾದಂತಹ ವಾತಾವರಣವನ್ನು ಹಾಗೂ ಒತ್ತಡವನ್ನು ನಾವು ಸೃಷ್ಟಿಸಬೇಕು ಎಂದು ಸಲಹೆ ಮಾಡಿದರು.
ಸ್ಕ್ರೀನಿಂಗ್ ಹಾಗೂ ಸಂವಾದ ಎರಡನ್ನೂ ಮುಗಿಸಿಕೊಂಡು ಹೊರಟೆ. ಆದರೂ ಎರಡೂ ಹಿಂಬಾಲಿಸುತ್ತಲೇ ಬಂದವು. ಈಗಲೂ ಮನದ ಮೂಲೆಯಲ್ಲಿ ಗಟ್ಟಿಯಾಗಿ ಕೂತಿವೆ. ಏನು ಮಾಡುತ್ತೀರಿ ಎಂದು ಕೇಳುತ್ತಿವೆ. ಉತ್ತರ ಕಂಡುಕೊಳ್ಳಲೇಬೇಕು, ನಾವೆಲ್ಲರೂ ಕೂಡಿ.
ಮುಗಿಸುವ ಮುನ್ನ ಒಂದು ಮಾತು. ಈ ಸಾಕ್ಷ್ಯ ಚಿತ್ರ ತಾವು ನೋಡಲೇಬೇಕು. ಸಾಧ್ಯವಾದಷ್ಟು ನೀವಿರುವ ಕಡೆಗಳಲ್ಲಿ ಸ್ಕ್ರೀನಿಂಗ್ ಏರ್ಪಡಿಸಿ ಸಮಾನ ಮನಸ್ಕರ ಜೊತೆ ನೋಡಿ. ಆಗದಿದ್ದರೆ ವ್ಯಕ್ತಿಗತವಾಗಿಯಾದರೂ ನೋಡಿ. ಚಿತ್ರದ ಲಿಂಕ್ ಬೇಕಿದ್ದಲ್ಲಿ ನಿಸಾರ್ [8056035809] ಅವರನ್ನು ಸಂಪರ್ಕಿಸಿ.
ಉಮರ್ ಬಳಿ ಮತ್ತೊಮ್ಮೆ ಕ್ಷಮೆ ಕೋರುತ್ತಾ.
ವಿಡಿಯೊನೋಡಿ: ಕಟ್ಟುತ್ತೇವಾ ನಾವು ಜಾತಿ ಇಲ್ಲದ ಭೀತಿ ಇಲ್ಲದ ನಾಡ ಕಟ್ಟುತ್ತೇವೆ; ಹಾಡು ನೋಡಿ


