Homeಕರ್ನಾಟಕ‘ಎದ್ದೇಳು ಕರ್ನಾಟಕ’ – ಬೀರಿದ ಪರಿಣಾಮ, ಕಲಿಸಿದ ಪಾಠ: ಭಾಗ -3

‘ಎದ್ದೇಳು ಕರ್ನಾಟಕ’ – ಬೀರಿದ ಪರಿಣಾಮ, ಕಲಿಸಿದ ಪಾಠ: ಭಾಗ -3

ನಾಗರೀಕ ಸಮಾಜದ ಪರಿಣಾಮಕಾರಿ ಮಧ್ಯಪ್ರವೇಶದ ಒಂದು ಮಾದರಿಯನ್ನು ಎದ್ದೇಳು ಕರ್ನಾಟಕ ಕಟ್ಟಿಕೊಟ್ಟಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳ ಪ್ರಗತಿಪರರಲ್ಲೂ ಒಂದು ಆಶಾಕಿರಣವನ್ನು ಮೂಡಿಸಿದೆ.

- Advertisement -
- Advertisement -

ಬೀರಿದ ಪರಿಣಾಮವೇನು?:

–        ಬಿಜೆಪಿಯನ್ನು ಸೋಲಿಸಬೇಕು, ಅದಕ್ಕಾಗಿ ಏನಾದರೂ ಮಾಡಬೇಕು ಎಂದು ಚಡಪಡಿಸುತ್ತಿದ್ದ ಮನಸ್ಸುಗಳಿಗೆ ಒಂದು ವೇದಿಕೆಯಾಗಿ ಎದ್ದೇಳು ಕರ್ನಾಟಕ ಹೊರಹೊಮ್ಮಿತು. ಒಂದು ರೀತಿಯ ಚೈತನ್ಯದ ಸಂಚಯಕ್ಕೆ ಕಾರಣವಾಯಿತು. ಸಹಸ್ರಾರು ಕಾರ್ಯಕರ್ತರನ್ನು ಪ್ರೇರೇಪಿಸಿ ಕ್ರಿಯೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು.

–        ಎಲ್ಲವೂ ಮುಗಿದಿಲ್ಲ. ನಾವು ಬದ್ಧತೆ ಮತ್ತು ಸರಿಯಾದ ವ್ಯೂಹತಂತ್ರದ ಮೂಲಕ ಕೆಲಸ ಮಾಡಿದರೆ ಬಿಜೆಪಿಯನ್ನು ಚುನಾವಣೆಯಲ್ಲಿಯೂ ಮಣಿಸಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ನಾಗರೀಕ ಸಮಾಜದಲ್ಲಿ ಹುಟ್ಟುಹಾಕಿತು.

–        ಯಾವ ಪಕ್ಷದ ಬಾಲಂಗೋಚಿಯೂ ಆಗದೆ, ಯಾವ ಪಕ್ಷದ ಮೇಲೂ ಹಣಕಾಸಿಗಾಗಲೀ ಮತ್ತೊಂದಕ್ಕಾಗಲೀ ಅವಲಂಬಿತಗೊಳ್ಳದೆ ಸ್ವತಂತ್ರ ಜನ ರಾಜಕೀಯ ಶಕ್ತಿಯ ಹುಟ್ಟಿಗೆ ಕಾರಣವಾಯಿತು.

–        ಇಂದಿನ ಸಂದರ್ಭದಲ್ಲಿ ನಮ್ಮ ರಾಜಕೀಯ ನೀತಿ ಮತ್ತು ಸೂತ್ರ ಏನಾಗಿರಬೇಕು ಎಂಬ ಅರಿವನ್ನು ನಾಗರೀಕ ಸಮಾಜದಲ್ಲೂ, ದಮನಿತ ಮತ್ತು ಶೋಷಿತ ಜನ ವರ್ಗಗಳಲ್ಲೂ ದೊಡ್ಡ ಮಟ್ಟಕ್ಕೆ ಮೂಡಿಸಿತು. ವಿಶೇಷವಾಗಿ ಮತ ವಿಭಜನೆಯಾಗದಂತೆ ಎಚ್ಚರವಹಿಸುವುದು ಬಹಳ ಬಹಳ ಮುಖ್ಯ ವಿಚಾರ. ಸೋಲಿಸಬಲ್ಲವರಿಗೇ ಮತ ಹಾಕಬೇಕು ಎಂಬ ಅರಿವನ್ನು ಬಹಳ ದೊಡ್ಡ ಮಟ್ಟದಲ್ಲಿ ಬೆಳೆಸಿತು. ಈ ಬಾರಿ ಮತ ವಿಭಜನೆಯ ಪ್ರಮಾಣ ಗಮನಾರ್ಹವಾಗಿ ತಗ್ಗಿರುವುದನ್ನು ಗಮನಿಸಬೇಕು.

–        ದೊಡ್ಡ ಮಟ್ಟದ ಮತ್ತು ಮನ ತಟ್ಟುವ ಸೋಷಿಯಲ್ ಮೀಡಿಯಾ ಪ್ರಚಾರದ ಮೂಲಕ ಪ್ರತಿರೋಧದ ದನಿ ಸಮಾಜದಲ್ಲಿ ಗುಂಯ್ ಗುಟ್ಟಿತು. ಕುಸಿದಿದ್ದ ಮನಸ್ಸುಗಳ ಮೇಲೆ ಉತ್ಸಾಹದ ನೀರು ಚಿಮುಕಿಸಿತು. ಗೊಂದಲದಲ್ಲಿದ್ದ ಮನಸ್ಸುಗಳಿಗೆ ತರ್ಕ ಬದ್ಧ ಉತ್ತರದ ಶಕ್ತಿ ತಂದುಕೊಟ್ಟಿತು. ಹಾಡುಗಳ ಮೂಲಕ ಪ್ರತಿರೋಧಕ್ಕೊಂದು ಚರಿಷ್ಮಾ ಬಂದಿತು.

–        ಬಿಜೆಪಿ ಮತ್ತು ಸಂಘ ಮಾಡಿದ ತಂತ್ರಗಾರಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಕೌಂಟರ್ ನೆರೇಟಿವ್ ಅನ್ನು ಕಟ್ಟಿಕೊಟ್ಟಿದ್ದು. ಇದು ಸಣ್ಣ ವಿಚಾರವಲ್ಲ. ಈ ಬಾರಿ ಬಿಜೆಪಿಯ ಉರಿಗೌಡ, ನಂದಿನ, ಸುದೀಪ್ ಎಲ್ಲವೂ ತೋಪಾದವು. ಮೋದಿ ಭೇಟಿಯೂ ದೊಡ್ಡ ಪ್ರಭಾವ ಬೀರಲಿಲ್ಲ. ಇದರ ಹಿಂದೆ ಎದ್ದೇಳು ಜೊತೆ ಸಮನ್ವಯದಲ್ಲಿದ್ದ ಅಲ್ಲದೆ ಸ್ವತಂತ್ರವಾಗಿ ತಮ್ಮದೇ ರೀತಿಯಲ್ಲಿ ಕೆಲಸ ಮಾಡಿದ ನಾಗರೀಕ ಸಮಾಜದ ಕಾರ್ಯಕರ್ತರು ಹಾಗೂ ತಂಡಗಳ ಪಾತ್ರ ಮತ್ತು ಕೊಡುಗೆ ಬಹಳ ಮಹತ್ತರವಾದುದು.

–        ಬಿಜೆಪಿ ತೋಡಿದ ಖೆಡ್ಡಾಗೆ ಬೀಳದೆ ಮುಂದೆ ಸಾಗುವಂತೆ ನೋಡಿಕೊಂಡದ್ದು. ಇದ್ರೀಸ್ ಪಾಷ ಕೊಲೆ ಮತ್ತು ಮುಸ್ಲಿಮರಿಗೆ ಮೀಸಲಾತಿ ರದ್ದತಿ ಕೇವಲ ಸೇಡಿನ ಕ್ರಮಗಳಗಾಗಿರಲಿಲ್ಲ. ರಾಜಕೀಯ ಖೆಡ್ಡಾಗಳಾಗಿದ್ದವು. ಮುಸ್ಲಿಮರನ್ನು ಬೀದಿಗಿಳಿಸಿ ರಾಜಕೀಯವನ್ನು ಕೋಮುವಾದಿ ದಿಕ್ಕಿನತ್ತ ತಿರುಗಿಸಬೇಕು ಎಂಬ ಸಂಚಿನ ಭಾಗವಾಗಿದ್ದವು. ಆದರೆ ಎದ್ದೇಳು ಜೊತೆ ಸಮನ್ವಯದಲ್ಲಿದ್ದ ಮುಸ್ಲಿಂ ಸಂಘಟನೆಗಳು ವಹಿಸಿದ ಪಾತ್ರ ಅತ್ಯಂತ ಪ್ರಬುದ್ಧವಾದುದು. ಇಡೀ ಸಮುದಾಯ ನಾವು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಉತ್ತರಿಸೋಣ ಬೀದಿಗೆ ಇಳಿಯಬಾರದು ಎಂಬ ಒಕ್ಕೊರಲ ತೀರ್ಮಾನ ತೆಗೆದುಕೊಂಡವು.

–        ಆತ್ಮಸ್ಥೈರ್ಯ ನೀಡಿದ ಸರ್ವೆ. ಬಿಜೆಪಿಯೇ ಮತ್ತ ಅಧಿಕಾರಕ್ಕೆ ಅಥವಾ ಅತಂತ್ರ ಸ್ಥಿತಿ ಎಂದೇ ಮಾಧ್ಯಮಗಳು ಬೊಬ್ಬಿರಿಯುತ್ತಿದ್ದಾಗ, ವೈಜ್ಞಾನಿಕ ತಳಹದಿಯ ಮೇಲೆ ನಿಂತು “ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ” ಎಂಬ ಸಮೀಕ್ಷೆಯನ್ನು ನಾಗರೀಕ ಸಮಾಜದ ಪರವಾಗಿ “ಈ ದಿನ” ತಂಡ ಮುಂದಿಟ್ಟಿದ್ದು ಮಹತ್ವದ ಕೊಡುಗೆಯಾಗಿತ್ತು. ಅದು ಪ್ರಗತಿಪರ ವಲಯದಲ್ಲಿ ಮತ್ತು ಬಿಜೆಪಿಯನ್ನು ಸೋಲಿಸಲು ಶ್ರಮಿಸುತ್ತಿದ್ದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು ಮತ್ತು ಇದು ಅತ್ಯಗತ್ಯವಗಿತ್ತು.

–        ಬಹಳ ಪರಿಣಾಮಕಾರಿಯಾಗಿ ಎಂದು ಹೇಳದಿದ್ದರೂ ಚುನಾವಣೆ ಸಂದರ್ಭದಲ್ಲಿ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಜನರನ್ನು ಜಾಗೃತಗೊಳಿಸಿದ್ದು [ಭೂಮಿ-ವಸತಿ ಹಕ್ಕು ವಂಚಿತರು, ರೈತರು, ನರೇಗದಡಿ ಕೆಲಸ ಮಾಡುವ ಕೃಷಿ ಕೂಲಿಗಳು, ಒಳ ಮೀಡಲಾತಿಯ ಎದುರು ನೋಡುತ್ತಿರುವ ಸಮುದಾಯಗಳು, ಓಪಿಎಸ್ ಗಾಗಿ ಹೋರಾಡುತ್ತಿರುವ ಸರ್ಕಾರಿ ನೌಕರರು ಇತ್ಯಾದಿ] ಮತ್ತು ಬಲಾಢ್ಯ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಒಂದಲ್ಲಾ ಒಂದು ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಕಮಿಟ್ ಆಗುವಂತೆ ಮಾಡಿದ್ದು. ಇದರಿಂದಾಗಿ ಒಂದೋ ಆಯಾ ಜನವರ್ಗಗಳು ಧೃಡವಾಗಿ ಬಿಜೆಪಿಯನ್ನು ಸೋಲಿಸುವ ತೀರ್ಮಾನ ತೆಗೆದುಕೊಂಡವು. ಮತ್ತೊಂದೆಡೆ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವಂತೆ ಕಾಂಗ್ರೆಸ್ ಅನ್ನು ಕಮಿಟ್ ಮಾಡಿಸಿದ್ದು ಜನ ರಾಜಕಾರಣದ ಮುಖ್ಯ ಹೆಜ್ಜೆಯಾಗಿತ್ತು.

–        ಮತದಾನದ ಪ್ರಮಾಣವನ್ನು ಹೆಚ್ಚಿಸುವುದರಲ್ಲಿ, ಓಟು ವಿಭಜನೆಯನ್ನು ಕಡಿಮೆ ಮಾಡುವುದರಲ್ಲಿ. ಸೋಲಿಸಬಲ್ಲವರ ಪರವಾಗಿಯೇ ಮತಗಳು ಧೃವೀಕರಣವಾಗುವಂತೆ ಮಾಡುವುದರಲ್ಲಿ ಎದ್ದೇಳು ಕರ್ನಾಟಕ ಖಚಿತವಾದ ಸಕರಾತ್ಮಕ ಪಾತ್ರ ನಿರ್ವಹಿಸಿತು. ಮತ ವಿಭಜನೆಗೆ ಕಾರಣವಾಗುತ್ತಿದ್ದ 49 ಜನ ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯದ ಅಬ್ಯಾರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವುದರ ಹಿಂದೆ ಬಹಳ ದೊಡ್ಡ ಪರಿಶ್ರಮವಿದೆ. ಅದರ ವಿವರ ಇಲ್ಲಿ ಹಂಚಿಕೊಳ್ಳಲು ಹೋಗುತ್ತಿಲ್ಲ. ಅಲ್ಲದೆ ಕಾಂಗ್ರೆಸ್ಸೋ, ಜೆಡಿಎಸ್ಸೋ ಎಂಬ ಚರ್ಚೆ ಸಧ್ಯಕ್ಕೆ ನಿಲ್ಲಿಸಬೇಕು. ಯಾರು ಆ ಕ್ಷೇತ್ರದಲ್ಲಿ ಸೋಲಿಸಬಲ್ಲರೋ ಅವರಿಗೇ ಮತ ಹಾಕಿ ಎಂದು ಸಮುದಾಯ ಮುಖಂಡರನ್ನು ಒಪ್ಪಿಸಿದ್ದು ಮತ್ತು ಗೆಲ್ಲಲಾಗದ ಅಭ್ಯರ್ಥಿಗಳಿಗೆ ಮತ ಹಾಕಿ ಓಟು ವ್ಯರ್ಥ ಮಾಡಿಕೊಳ್ಳಬೇಡಿ. ಪ್ರತಿ ಮತವೂ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಬಳಕೆಯಾಗಬೇಕು ಎಂದು ಕನ್ವಿನ್ಸ್ ಮಾಡಿಸಿದ್ದು ಈ ಬಾರಿ ಮತ ವಿಭಜನೆ ಕಡಿಮೆಯಾಗಲು ಕಾರಣವಾಯಿತು. ಉತ್ತಮ ಫಲಿತಾಂಶದಲ್ಲಿ ಇದರ ದೊಡ್ಡ ಪಾತ್ರವಿದೆ ಎಂಬುದನ್ನು ನಾವು ಗುರುತಿಸಬೇಕು. ಈ ಚುನಾವಣೆಯಲ್ಲಿ ಬಿಜೆಪಿ ಮತ ಪ್ರಮಾಣದ ಸ್ವಲ್ಪವೇ ಕಡಿಮೆಯಾಯಿತು ಎಂಬುದು ನಿಜ. ಆದರೆ ಕಾಂಗ್ರೇಸೇತರ ಪಕ್ಷಗಳ [ಜೆಡಿಎಸ್ ಒಳಗೊಂಡಂತೆ] ಗಮನಾರ್ಹವಾಗಿ ಕುಸಿಯಿತು. ಕಳೆದ ಬಾರಿ ಇದ್ದ ಶೆ. 25.51 ರಿಂದ ಅದು ಶೇ. 21.12ಕ್ಕೆ ಇಳಿಯಿತು. ಅಂದರೆ ಶೇ 4.3 ರಷ್ಟು ಮತಗಳು ಕಡಿಮೆಯಾದವು.  ಮತಗಳು ವಿಭಜನೆಯಾಗಬಾರದು, ವ್ಯರ್ಥವಾಗಬಾರದು ಎಂಬ ಜಾಗೃತಿಯೇ ಈ ವಿದ್ಯಮಾನಕ್ಕೆ ಮುಖ್ಯ ಕಾರಣ. ಈ ಜಾಗೃತಿಯನ್ನು ಮೂಡಿಸುವುದರಲ್ಲಿ ನಾಗರೀಕ ಸಮಾಜದ ಪಾತ್ರ ಖಂಡಿತ ಮಹತ್ವದ್ದಾಗಿದೆ.

–        ಎದ್ದೇಳು ಕರ್ನಾಟಕ ಫೋಕಸ್ ಮಾಡಿ ಕೆಲಸ ಮಾಡಿದ 103 ಸವಾಲಿನ ಕ್ಷೇತ್ರಗಳ ಪೈಕಿ 73 ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಗಿದೆ. [ಎದ್ದೇಳು ಕರ್ನಾಟಕ ಆಯ್ದುಕೊಂಡಿದ್ದ ಕ್ಷೇತ್ರಗಳೆಲ್ಲಾ ಟಫ್ ಕ್ಷೇತ್ರಗಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅವಲೋಕಿಸಬೇಕು]. ಎದ್ದೇಳು ಕರ್ನಾಟಕದ ಕಾರಣಕ್ಕಾಗಿಯೇ ಸಕರಾತ್ಮಕ ಫಲಿತಾಂಶ ಬಂದಿತು ಆಯಿತು ಎಂದು ಹೇಳುತ್ತಿಲ್ಲ. ಆದರೆ ಈ ಕ್ಷೇತ್ರಗಳಲ್ಲಿ ಪೂರಕಸ್ಥಿತಿ ನಿರ್ಮಾಣ ಮಾಡುವುದರಲ್ಲಿ ಎದ್ದೇಳು ಕರ್ನಾಟಕದ ಕೆಲಸ ಗುರುತರವಾಗಿದೆ. ಬಿಜೆಪಿಯೇತರ ಅಭ್ಯರ್ಥಿಗಳು ಗೆದ್ದ 73 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಗೆಲುವಿನ ಅಂತರ 5000 ಓಟುಗಳಿಗಿಂತಲೂ ಕಡಿಮೆ ಮತಗಳದಾಗಿದೆ. ಅಲ್ಲದೆ ಇನ್ನು 7ರಲ್ಲಿ ಗೆಲುವಿನ ಅಂತರ 5 ರಿಂದ 10 ಸಾವಿರದೊಳಗಿದೆ. ಈ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಗೆಲುವಿನಲ್ಲಿ ಎದ್ದೇಳು ಕರ್ನಾಟಕ ನಿರ್ಣಾಯಕ ಪಾತ್ರವಹಿಸಿದೆ. 7 ಕ್ಷೇತ್ರಗಳಲ್ಲಿ 5000ಕ್ಕಿಂತಲೂ ಕಡಿಮೆ ಅಂತರದಲ್ಲಿ ಸೋಲಾಗಿದೆ. ಇನ್ನು 6 ಕ್ಷೇತ್ರಗಳಲ್ಲಿ 5 ರಿಂದ 10 ಸಾವಿರ ಅಂತರದಲ್ಲಿ ಬಿಜೆಪಿಯೇತರ ಶಕ್ತಿಗಳಿಗೆ ಸೋಲಾಗಿದೆ. ಈ 13 ಕ್ಷೇತ್ರಗಳಲ್ಲಿ ಇನ್ನಷ್ಟು ಗಮನ ನೀಡಿ ಕೆಲಸ ಮಾಡಿದ್ದಲ್ಲಿ, ಮತ ವಿಭಜನೆಯನ್ನು ತಡೆದಿದ್ದಲ್ಲಿ ಇವುಗಳನ್ನು ಉಳಿಸಿಕೊಳ್ಳುವ ಸಾಧ್ಯತೆಗಳೂ ಇದ್ದವು ಎಂಬುದು ಗೋಚರಿಸಿದೆ. ಕೆಲವು ಕ್ಷೇತ್ರಗಳಲ್ಲಿ ಪ್ರಯತ್ನ ಪಟ್ಟರೂ ಮತ ವಿಭಜನೆಯನ್ನು ತಡೆಯಲು ನಮಗೆ ಸಾಧ್ಯವಾಗಲಿಲ್ಲ. ಉದಾಹರಣೆಗೆ ಚಿಕ್ಕಪೇಟೆ, ಹರಿಹರ, ಗಂಗಾವತಿ, ಬಿಜಾಪುರ. ಇವು ನಾಗರೀಕ ಸಮಾಜಕ್ಕೂ ತಳ ಸಮುದಾಯಗಳಿಗೂ ಪಾಠವಾಗಿದೆ.

ಕಲಿಸಿದ್ದೇನು?:

–        ಚುನಾವಣಾ ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ನನ್ನಂಥವರಿಗೆ ಎದ್ದೇಳು ಕರ್ನಾಟಕ ಬಹಳ ಬಹಳ ಕಲಿಸಿದೆ. ಸ್ನೇಹಿತೆಯೊಬ್ಬರು ಹೇಳುತ್ತಿದ್ದಂತೆ ಇದೊಂದು ರೀತಿಯಲ್ಲಿ “ಹಾರುತ್ತಾ ಹಾರುತ್ತಾ ಹಾರುವುದನ್ನು ಕಲಿತ” ಪಯಣವಾಗಿತ್ತು.

–        ಚುನಾವಣೆಯಲ್ಲಿ ನಡೆಯುತ್ತಿದ್ದದ್ದು ಸಂಘಟಿತ ದುಷ್ಟ ಶಕ್ತಿಗಳ ಮೈನಾರಿಟಿಗೂ ಹಾಗೂ ಅಸಂಘಟಿತ ಜಾತ್ಯಾತೀತ ಶಕ್ತಿಗಳ ಮೆಜಾರಿಟಿಗೂ ನಡುವಿನ ಪೈಪೋಟಿ. ಅಸಂಘಟಿತವಾಗಿರುವ ಕಾರಣಕ್ಕೆ ಮೆಜಾರಿಟಿಯಾಗಿದ್ದರೂ ಚುನಾವಣೆಯಲ್ಲಿ ಸೋಲಾಗುತ್ತಿತ್ತು. ಈ ಬಾರಿ ಈ ಅಸಂಘಟಿತ ಮೆಜಾರಿಟಿಯನ್ನು ಸಂಘಟಿತಗೊಳಿಸುವ ಮತ್ತು ಜಾಗೃತಗೊಳಿಸುವ ಕೆಲಸ ನಡೆದಿದೆ. ಈ ಪ್ರಕ್ರಿಯೆಯಲ್ಲಿ ನಾವೂ ಕಲಿತಿದ್ದೇವೆ, ಕೆಲವು ಜನ ವರ್ಗಗಳಿಗೂ ಒಂದಷ್ಟು ಕಲಿಸಿದ್ದೇವೆ.

–        ಬಲಾಢ್ಯ ಶಕ್ತಿಗಳ ಹಣಾಹಣಿಯಾದ ಚುನಾವಣೆಯಲ್ಲಿ, ಹಣಬಲ-ಜಾತಿಬಲ-ದ್ವೇಷ ರಾಜಕಾರಣದ ಆರ್ಭಟದ ನಡುವೆಯೂ, ನಾಗರೀಕ ಸಮಾಜ, ನೀತಿಬದ್ಧ ರಾಜಕಾರಣದ ಮೂಲಕ ಜನಮಾನಸವನ್ನು ತಲುಪುವ ಮತ್ತು ಪ್ರಭಾವಿಸುವ ಏನೆಲ್ಲಾ ಕೆಲಸ ಮಾಡಬಹುದು ಎಂಬುದನ್ನು ಎದ್ದೇಳು ಕರ್ನಾಟಕ ತೋರಿಸಿಕೊಟ್ಟಿದೆ.

–        ಈ ದುಷ್ಟ ಶಕ್ತಿಗಳನ್ನು ಹೆಣಿಯಲು ಹಾತೊರೆಯುತ್ತಿರುವ ನಿಸ್ವಾರ್ಥಿ ಶಕ್ತಿಗಳು ಎಂತಹ ದೊಡ್ಡ ಸಂಖ್ಯೆಯಲ್ಲಿ ಸಮಾಜದಲ್ಲಿ [ಪ್ರತಿ ಕ್ಷೇತ್ರ, ಪ್ರತಿ ಊರು, ಪ್ರತಿ ಹಳ್ಳಿಯಲ್ಲಿ] ಎಷ್ಟೆಲ್ಲಾ ಇದ್ದಾರೆ ಎಂಬುದರ ಅಮೋಘ ದರ್ಶನವಾಗಿದೆ.

–        ಈ ದುಷ್ಟ ಸರ್ಕಾರದ ವಿರುದ್ಧ ಸೆಣೆಸಲು ವಾಲಂಟೀರ್‌ಗಳಾಗಿ ಕೆಲಸ ಮಾಡಲು ದೊಡ್ಡ ಸಂಖ್ಯೆಯ ಯುವಶಕ್ತಿ ಹಾತೊರೆಯುತ್ತಿರುವುದನ್ನು ಈ ಅನುಭವ ತೋರಿಸಿಕೊಟ್ಟಿದೆ.

–        ಸೋಷಿಯಲ್ ಮೀಡಿಯಾ ಮೂಲಕ ಪ್ರಭಾವ ಬೀರುವ, ನೆರೇಟಿವ್ ನಿರ್ಮಾಣ ಕಟ್ಟುವ, ವೈಜ್ಞಾನಿಕ ರೀತಿಯಲ್ಲಿ ಸರ್ವೆ ಮಾಡಿ ಜನರ ನಾಡಿ ಮಿಡಿತ ಅರಿಯುವ ಕೆಲೆಯಲ್ಲಿ ಆರಂಭಿಕ ಪಟ್ಟನ್ನು ಸಾಧಿಸಿದ್ದೇವೆ. ಆದರೆ ಕಲಿಯುವುದು ಬಹಳ ಇದೆ. ಜನ ಮಾಧ್ಯಮದ ಮಹತ್ವವೇನು ಎಂಬುದು ಇನ್ನಷ್ಟು ನಿಚ್ಚಳವಾಗಿ ಮನದಟ್ಟಾಗಿದೆ.

–        ಸಮಾಜದ ಗಣ್ಯರನ್ನು, ಸಾಮಾಜಿಕ ಸಂಘಟನೆಗಳನ್ನು, ಸಮುದಾಯಿಕ ಸಂಸ್ಥೆಗಳನ್ನು ಹಾಗೂ ಜನ ಮಾಧ್ಯಮದ ಜಾಲವನ್ನು ಒಟ್ಟಿಗೆ ತಂದು ವಿಶಾಲ ನೆಟ್ವರ್ಕ್ ನಿರ್ಮಾಣ ಮಾಡುವುದನ್ನು ಕಲಿತಿದ್ದೇವೆ. ಈ ಕಾಂಬಿನೇಷನ್ನಿನ ಕೆಲಸ ಸಮಾಜದಲ್ಲಿ ಸೃಷ್ಟಿಸಬಲ್ಲ ಪ್ರಭಾವದ ಅಲೆಗಳನ್ನು ಸ್ವಯಂ ಕಂಡು ಅಚ್ಚರಿಗೊಂಡಿದ್ದೇವೆ.

–        ಜನಸಾಮಾನ್ಯರಲ್ಲಿ  ಮೂಡಿರುವ ರಾಜಕೀಯ ಒಡಕಿಗೆ ಪರಿಹಾರ ಹುಡುಕುವ, ಜನರನ್ನು ಒಮ್ಮತಕ್ಕೆ ತರುವ, ನಮ್ಮ ಮತ ಯಾರಿಗೆ ಎಂಬುದನ್ನು ಸಾಂಘಿಕವಾಗಿ ತೀರ್ಮಾನಿಸುವ ಕಲೆಯಲ್ಲಿ ಒಂದಷ್ಟು ತರಭೇತಿ ಪಡೆದಿದ್ದೇವೆ.

–        ರಾಜಕೀಯ ಪಕ್ಷಗಳ ಜೊತೆ ಒಡನಾಟ ಇಟ್ಟುಕೊಳ್ಳುತ್ತಲೇ ರಾಜಕೀಯ ಪಕ್ಷಗಳ ಬಾಲಂಗೋಚಿಯಾಗದೆ ಕೆಲಸ ಮಾಡುವ, ಹಣಕಾಸು ವಿಚಾರದಲ್ಲೂ ಸ್ವಾವಲಂಬಿಯಾಗಿ ಕೆಲಸ ಮಾಡಿದರೆ ಸಿಗುವ ನೈತಿಕ ಶಕ್ತಿಯ ಅನುಭಾವವನ್ನು ಎದ್ದೇಳು ತೋರಿಸಿಕೊಟ್ಟಿದೆ.

–        ಚುನಾವಣಾ ಕ್ಷೇತ್ರದ ಡೈನಾಮಿಕ್ಸ್ ಅನ್ನು, ಬೂತ್ ರಚನೆಯನ್ನು, ಅದರಲ್ಲಿನ ಜನಸಮುದಾಯಗಳ ಸಂಖ್ಯೆ ಮತ್ತು ಸ್ವಭಾವವನ್ನು, ಅದನ್ನು ಪ್ರಭಾವಿಸುವ ವ್ಯಕ್ತಿ, ವಿಷಯ ಮತ್ತು ವಿದ್ಯಮಾನಗಳನ್ನು ಅಧ್ಯಯನ ಮಾಡುವುದು ಹೇಗೆ ಎಂಬುದನ್ನು ಕಲಿಯಲು ಪ್ರಾರಂಭಿಸಿದ್ದೇವೆ.

–        ಎಲ್ಲದಕ್ಕಿಂತ ಹೆಚ್ಚಾಗಿ ನಾಗರೀಕ ಸಮಾಜದ ಪರಿಣಾಮಕಾರಿ ಮಧ್ಯಪ್ರವೇಶದ ಒಂದು ಮಾದರಿಯನ್ನು ಎದ್ದೇಳು ಕರ್ನಾಟಕ ಕಟ್ಟಿಕೊಟ್ಟಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳ ಪ್ರಗತಿಪರರಲ್ಲೂ ಒಂದು ಆಶಾಕಿರಣವನ್ನು ಮೂಡಿಸಿದೆ.

ಎದ್ದೇಳು ಕರ್ನಾಟಕ ಬೀರಿದ ಪರಿಣಾಮವೇನು? ಎಂಬುದಕ್ಕಿಂತ ಆ ಪ್ರಕ್ರಿಯೆಯಲ್ಲಿ ಅದು ಮೂಡಿಸಿದ ಚೈತನ್ಯ ಮತ್ತು ನೀಡಿದ ಕಲಿಕೆ ಮಹತ್ವವಾದದ್ದು.  ಸಾಮಾಜಿಕ ಕಾಳಜಿಯುಳ್ಳ ಶಕ್ತಿಗಳು ಸೇರಿ ಜನರಾಜಕಾರಣದ ಪ್ರಯೋಗಕ್ಕೆ ಇಳಿದದ್ದು, ಸೆಮಿನಾರುಗಳಿಗೆ ಸೀಮಿತವಾಗದೆ ಫೀಲ್ಡಿಗಿಳಿದು ಕೆಲಸ ಮಾಡಿದ್ದು, ಸಾವಿರಾರು ಯುವಜನರು ಜೊತೆಗೂಡಿದ್ದು, ನೂರಾರು ಫೀಲ್ಡ್ ತಂಡಗಳನ್ನು ಕಟ್ಟಿ ಕೆಲಸ ಮಾಡಿದ್ದು, ಜನರ ನಾಡಿಮಿಡಿತ ಅರಿಯಲು ನಮ್ಮದೇ ಆದ ಸರ್ವೆ ನಡೆಸಿದ್ದು, ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ದುಡಿಸಿಕೊಂಡದ್ದು, ದುಷ್ಟ ಶಕ್ತಿಗಳನ್ನು ನಾನಾ ವಿಧಗಳಲ್ಲಿ ಜನರ ಮುಂದೆ ಬಯಲುಗೊಳಿಸಲು ಶ್ರಮಿಸಿದ್ದು, ಜನರ ಸಮಸ್ಯೆಗಳನ್ನು ಮುನ್ನೆಲೆಗೆ ತಂದದ್ದು, ಅವಕ್ಕೆ ರಾಜಕೀಯ ಪಕ್ಷಗಳನ್ನು ಕಮಿಟ್ ಮಾಡಿಸಿದ್ದು, ಜನರನ್ನು ತಟ್ಟಬಲ್ಲ ಭಾಷೆಯಲ್ಲಿ ಮಾತನಾಡಿದ್ದು, ಮತದಾನದ ಮೂರು ಸರಳ ಸೂತ್ರಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದ್ದು, ಅದನ್ನು ಕಾರ್ಯರೂಪಕ್ಕೆ ಇಳಿಸಲು ಶ್ರಮಿಸಿದ್ದು, ಮತ ವಿಭಜನೆ ತಡೆಯಲು ವಿವಿಧ ಪ್ರಯೋಗಗಳನ್ನು ಮಾಡಿದ್ದು, ಈ ಎಲ್ಲಾ ಕ್ರಿಯೆಯ ಮೂಲಕ ಕ್ರಿಟಿಕಲ್ ಕ್ಷೇತ್ರಗಳಲ್ಲೂ ಮತ್ತು ರಾಜ್ಯದಲ್ಲೂ ಸಕರಾತ್ಮಕ ರಾಜಕೀಯ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಕೊಡುಗೆ ನೀಡಿದ್ದು ಮರೆಯಲಾಗದ ಅನುಭವ. ಅಪಾರ ಅನುಭವ, ಅನುಭೂತಿ ಮತ್ತು ಆತ್ಮವಿಶ್ವಾಸ ತಂದುಕೊಟ್ಟ ಒಂದು ಪಯಣ. ಎದ್ದೇಳು ಕರ್ನಾಟಕ ಎಂಬ ಪ್ರಯೋಗಕ್ಕೆ ಅದರಲ್ಲಿ ಭಾಗವಾಗಿ ದುಡಿದ ನಾವೆಲ್ಲರೂ ರುಣಿ.

ನಿಮ್ಮ ಹೆಸರು ಎದ್ದೇಳು ಕರ್ನಾಟಕ. ಚೆನ್ನಾಗಿದೆ, ಇದು ದೇಶಾದ್ಯಂತ ನಡೆಯಬೇಕು. ಇಲ್ಲಿನ ಬಹುಪಾಲು ಜನರು ಭಾರತ್ ಜೋಡೋ ಯಾತ್ರೆಯಲ್ಲಿಯೂ ಭಾಗವಹಿಸಿದ್ದೀರಿ. ಇವೆಲ್ಲ ನಡೆಯಬೇಕು. ಯಾಕಂದ್ರೆ ಈಗ ನಡೀತಿರೋದು ಬಿಜೆಪಿ ವರ್ಸಸ್ ಕಾಂಗ್ರೆಸ್ ಪೈಪೋಟಿ ಅಲ್ಲ. ಇದು ದೇಶವನ್ನ ಹಿಂದಕ್ಕೆ ತೆಗೆದುಕೊಂಡು ಹೋಗೋ ಶಕ್ತಿಗಳು , ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ದೇಶದ ಎಲ್ಲಾ ಜನರೂ ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಸಂವಿಧಾನವನ್ನು ಉಳಿಸಿಕೊಳ್ಳಲು ನಡೆಸಬೇಕಾಗಿರುವ ಹೋರಾಟವನ್ನು ನಾವು ದೀರ್ಘ ಕಾಲದ ರೂಪುರೇಷೆಗಳನ್ನು ರೂಪಿಸಬೇಕಾಗಿದೆ. ಅದಕ್ಕೆ ನಿಮ್ಮ ಸಹಕಾರ ಬೇಕು. – ಸಿದ್ದರಾಮಯ್ಯ, ಮುಖ್ಯಮಂತ್ರಿಗಳು.

ಚುನಾವಣೆ ನಡೆದು ಪ್ರಗತಿಪರ ಮೌಲ್ಯಗಳನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಚುನಾವಣೆಯಲ್ಲಿ ನಡೆದದ್ದು ಮೌಲ್ಯಗಳ ಹೋರಾಟ. ನಿಜದ ಭಾರತೀಯ ಮೌಲ್ಯಗಳನ್ನು ಎತ್ತಿ ಹಿಡಿದ ಹೋರಾಟದಲ್ಲಿ ಎಲೆಮರೆಯ ಕಾಯಿಯಂತೆ, ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ದುಡಿದವರು ‘ಎದ್ದೇಳು ಕರ್ನಾಟಕ’ ವೇದಿಕೆಯ ನೀವೆಲ್ಲರೂ. ಸಮಾಜಕ್ಕೆ ಒಳಿತಾಗಲಿ, ತರ-ತಮಭಾವಗಳು ಕಮ್ಮಿಯಾಗಲೀ ಎಂದು ಹೊರಾಡಿದ ನಿಮಗೆ ಎಷ್ಟು ವಂದನೆಗಳನ್ನು ಹೇಳಿದರೂ ಸಾಲದು. ನಮ್ಮ ಸರಕಾರ ತಪ್ಪು ಮಾಡಿದಾಗಲೂ, ನಮ್ಮನ್ನು ನೀವು ‘ಏಳಿ ಎದ್ದೇಳಿ’ ಎಂದು ಎಚ್ಚರಿಸುತ್ತೀರಾ ಎನ್ನುವ ನಂಬಿಕೆ ನನ್ನದು. – ಡಾ.ಜಿ ಪರಮೇಶ್ವರ್, ಗೃಹಮಂತ್ರಿಗಳು

ನೀವು ಮುಂದೆ ಎದ್ದೇಳು ಕಾಂಗ್ರೆಸ್ ಎಂಬ ಸ್ಲೋಗನ್ ಕೊಡಬೇಕಿದೆ. ಏಕೆಂದರೆ ನಾವು ರಾಜಕಾರಣಗಳು ಗೆಲ್ಲಲೇಬೇಕಾದ ಟಾಸ್ಕ್ ಇತ್ತು. ಗೆದ್ದು ಅಧಿಕಾರಕ್ಕೆ ಬಂದಿದ್ದೀವಿ. ಈಗ ಮತ್ತೆ ಎಲ್ಲಾ ಶಶಾಸ್ತ್ರಗಳನ್ನು ಅಲ್ಲೆ ಇಟ್ಟು, ಪೂಜೆ ಮಾಡಿ ಇನ್ನ ಐದು ವರ್ಷ ಅಭಿವೃದ್ದಿ ಅಧಿಕಾರದ ಕಡೆ ಹೆಚ್ಚು ಗಮನ ಹರಿಸುತ್ತೇವೆ. ಹಾಗಾಗಿ ನಮ್ಮನ್ನು ಅರ್ಲಟ್ ಮಾಡಲ್ಲಿಕ್ಕೆ, ತಪ್ಪು ದಾರಿಗೆ ಹೋದರೆ ತಿದ್ದಲ್ಲಿಕ್ಕೆ ಒಂದು ತಂಡ ಬೇಕು. ಅಭಿವೃದ್ದಿಯಷ್ಟೇ ಸಾಮಾಜಿಕ ನ್ಯಾಯವೂ ಸಹ ಮುಖ್ಯ. ಹಾಗಾಗಿ ನಮ್ಮನ್ನು ಎಚ್ಚರಿಸಲು ಈ ಅಭಿಯಾನ ಅಗತ್ಯವಿದೆ. ನಮ್ಮ ಸರ್ಕಾರಕ್ಕೆ ನೀವು ಯಾವಾಗಲೂ ಚಾಟಿ ಬೀಸುತ್ತಿರಬೇಕು. – ಸತೀಶ್ ಜಾರಕಿಹೊಳಿ, ಸಚಿವರು

 

 

 

 

ಮುಂದಿನ ಅಧ್ಯಾಯ: ಭಾಗ -4 ‘ಎದ್ದೇಳು ಕರ್ನಾಟಕ’ – ಮುಂದೇನು?

ಎದ್ದೇಳು ಕರ್ನಾಟಕ ಅನುಭವ ಕಥನ ಭಾಗ – 2 ಓದಿ

ಇದನ್ನೂ ಓದಿ: ‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...