Homeಮುಖಪುಟ‘ಎದ್ದೇಳು ಕರ್ನಾಟಕ’ ಮುಂದೇನು? - ನೂರ್ ಶ್ರೀಧರ್: ಭಾಗ 4

‘ಎದ್ದೇಳು ಕರ್ನಾಟಕ’ ಮುಂದೇನು? – ನೂರ್ ಶ್ರೀಧರ್: ಭಾಗ 4

ಈ ಸಕರಾತ್ಮಕ ವಿದ್ಯಮಾನವನ್ನು ಪ್ರತಿರೋಧದ ಕಾಂಗ್ರೇಸಿಕರಣವಾಗಿ ಅಲ್ಲ, ಪ್ರತಿರೋಧದ ಸಾಮಾಜೀಕರಣವಾಗಿ ಗ್ರಹಿಸುವ ಅಗತ್ಯವಿದೆ. ಏಕೆಂದರೆ ಬಿಜೆಪಿಯನ್ನು ಚುನಾವಣೆಗಳಲ್ಲಿ ಸೋಲಿಸಲೇಬೇಕೆಂದು ಅನೇಕ ಸಾಮಾಜಿಕ ಶಕ್ತಿಗಳು ದುಡಿದಿವೆ.

- Advertisement -
- Advertisement -

ಎದ್ದೇಳು ಕರ್ನಾಟಕ ಮುಂದೇನು? ಎಂಬುದನ್ನು ಚರ್ಚಿಸುವ ಮುನ್ನ ಕರ್ನಾಟಕ ಇಂದೇನು? ಎಂಬುದನ್ನು ಗುರುತಿಸಿಕೊಳ್ಳುವ ಅಗತ್ಯವಿದೆ. ಈ ವಿಚಾರದಲ್ಲಿ ಎರಡು ದೃಷ್ಟಿಕೋನಗಳಿವೆ. ಒಂದು – ಕೋಮುವಾದಿ ಶಕ್ತಿಗಳು ನೆಲಕಚ್ಚಿವೆ ಎಂದು ನೋಡುವುದು, ಮತ್ತೊಂದು – ಕಾಂಗ್ರೆಸ್ ಗೆದ್ದಿದೆ, ಬಿಜೆಪಿ ಸೋತಿಲ್ಲ ಎಂದು ನೋಡುವುದು. ಮೊದಲನೆಯದು ಭ್ರಮೆ, ಎರಡನೆಯದು ಸಿನಿಕತೆ. ಸತ್ಯ ಎರಡರ ನಡುವೆ ಇದೆ. ಹಿಂದುತ್ವದ ಕೋಟೆ ಕುಸಿದಿಲ್ಲ, ನಿಜವಾದ ಜನ ಪರ್ಯಾಯ ಅಸ್ತಿತ್ವಕ್ಕೆ ಬಂದಿಲ್ಲ, ಜನರ ಗಂಭೀರ ಸಮಸ್ಯೆಗಳ್ಯಾವುವೂ ಅಷ್ಟು ಸುಲಭಕ್ಕೆ ಬಗೆಹರಿಯುವ ಪರಿಸ್ಥಿತಿಯೂ ಇಲ್ಲ, ಕಾಂಗ್ರೆಸ್ ಜನಪರ ಪಕ್ಷವಾಗಿ ಮಾರ್ಪಾಡಾಗಿಬಿಡುವುದಿಲ್ಲ, ಕೋಮುವಾದಿ ಶಕ್ತಿಗಳು ನಿರಾಶೆಗೊಂಡು ಹಿಂದೆ ಸರಿದುಬಿಡುವುದಿಲ್ಲ. ಈ ಎಚ್ಚರ ನಮಗೆ ಸದಾ ಇರಬೇಕು, ಇಂದಿನ ಸಂದರ್ಭದಲ್ಲಿ ಇನ್ನೂ ಹೆಚ್ಚಾಗಿ ಇರಬೇಕು. ಆದರೆ ಗೆದ್ದುಬಿಟ್ಟೆವು ಎಂಬ ಭ್ರಮೆಗೋ, ಏನೂ ಆಗಿಲ್ಲ ಎಂಬ ಸಿನಿಕತೆಗೋ ಗುರಿಯಾಗಬಾರದು. ಒಂದು ಮೈಮರೆಸುತ್ತದೆ ಮತ್ತೊಂದು ನಿರಾಸಕ್ತಿಯನ್ನು ಬೆಳೆಸುತ್ತದೆ. ಎರಡೂ ಅಷ್ಟೇ ಅಪಾಯಕಾರಿ.

ಕರ್ನಾಟಕದ ರಾಜಕೀಯ ಸ್ಥಿತಿಯಲ್ಲಿ ಈ ಚುನಾವಣೆ ತಂದಿರುವ ಬದಲಾವಣೆ:

ಈ ಚುನಾವಣೆಯ ಪ್ರಕ್ರಿಯೆಯಲ್ಲಿ ಆದ ಬೆಳವಣಿಗೆಗಳು, ನಡೆದ ಕೆಲಸ, ಬಂದ ಫಲಿತಾಂಶ ಜನರಲ್ಲಿ ದೊಡ್ಡ ನಿರಾಳತೆಯನ್ನು, ಸಂತಸವನ್ನು,  ಸಂಘಪರಿವಾರದಲ್ಲಿ ಅಪಾರ ಚಡಪಡಿಕೆ, ಹತಾಶೆ ಮತ್ತು ಆಕ್ರೋಶವನ್ನೂ ಮೂಡಿಸಿದೆ. ಸಂಘಪರಿವಾರದ ಕೋಟೆ ಕುಸಿದಿಲ್ಲ ನಿಜ, ಆದರೆ ಅಲುಗಾಡಿದೆ. ಬಿಜೆಪಿ ಮುಖವಾಣಿ ನಾಯಕರಿಲ್ಲದ ಪಕ್ಷವಾಗಿ ಪರಿವರ್ತನೆಯಾಗಿದೆ. ಯಡಿಯೂರಪ್ಪ ಮೂಲೆಗುಂಪಾದರೆ, ಈಶ್ವರಪ್ಪ ನೆಲೆ ಕಳೆದುಕೊಂಡಿದ್ದಾರೆ, ಬೊಮ್ಮಾಯಿ ಬಲೂನ್ ಠುಸ್ ಎಂದಿದೆ.

ಕಳಾಹೀನವಾದ ನಾಯಕರು

ಈ ಬಾರಿಯ ಬಿಜೆಪಿಯ ಯಾವ ದಾಳವೂ ಕೆಲಸ ಮಾಡಿಲ್ಲ. ಉರಿಗೌಡ – ನಂಜೇಗೌಡ,  ಸುದೀಪ್, ಇದ್ರೀಸ್ ಪಾಷ ಕೊಲೆ, ಮುಸ್ಲಿಮರ ಮೀಸಲಾತಿ ರದ್ದತಿ ಎಲ್ಲಾ ನಡೆಗಳೂ ತೋಪಾದವು. 40% ಭ್ರಷ್ಟಾಚಾರ, ಬೆಲೆ ಏರಿಕೆ, ನಂದಿನಿಯನ್ನು ಸಮರ್ಥಿಸಿಕೊಳ್ಳಲಾಗದೆ ಬಿಜೆಪಿ ಪೇಚಾಡಿತು. ಅಮಿತ್ ಶಾ ಮತ್ತು ಮೋದಿ ಕರ್ನಾಟಕವನ್ನು ಉಳಿಸಿಕೊಳ್ಳಲು ಗಿರಕಿ ಹೊಡೆದರೂ ಮೋಡಿ ಮಾಡಲು ಆಗಲಿಲ್ಲ. ಚುನಾವಣೆಯಲ್ಲಿ ಬಿಜೆಪಿಯ ಅಗ್ರ ನಾಯಕರೆಲ್ಲಾ ಹೀನಾಯವಾಗಿ ಸೋತಿದ್ದಾರೆ. ಸಿ.ಟಿ. ರವಿ, ಸೋಮಣ್ಣ, ಅಶೋಕ್, ವಿಶ್ವೇಶ್ವರ ಕಾಗೇರಿ, ಮುರುಗೇಶ್ ನಿರಾಣಿ, ಹಾಲಪ್ಪ, ಶಂಕರ್ ಪಾಟೀಲ್, ಬಿ.ಸಿ. ಪಾಟೀಲ್, ಬಿ.ಸಿ ನಾಗೇಶ್, ಎಂಟಿಬಿ ನಾಗರಾಜ್, ಜೆ.ಸಿ. ಮಾಧವಸ್ವಾಮಿ, ಕೆ. ಸುಧಾಕರ್, ಬಿ. ಶ್ರೀರಾಮುಲು…. ಪಟ್ಟಿ ದೊಡ್ಡದಿದೆ. 9 ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. 8 ಜಿಲ್ಲೆಗಳಲ್ಲಿ ಕೇವಲ ಒಂದು ಕ್ಷೇತ್ರವನ್ನು ಕಷ್ಟಪಟ್ಟು ಉಳಿಸಿಕೊಳ್ಳಲು ಸಾಧ್ಯವಾಗಿದೆ. 30 ಕ್ಷೇತ್ರಗಳಲ್ಲಿ ಬಿಜೆಪಿ ಅಬ್ಯಾರ್ಥಿಗಳು ಡಿಪಾಸಿಟ್ ಕಳೆದುಕೊಂಡಿದ್ದಾರೆ. ಸೀಟು ಕೊಡಲಿಲ್ಲ ಎಂದು ಹಲವು ನಾಯಕರು ಮುನಿಸಿಕೊಂಡಿದ್ದಾರೆ. ಸೋತಿದ್ದಕ್ಕೆ ಹಲವು ನಾಯಕರು ವಿಚಲಿತಗೊಂಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಜನ ಬಿಜೆಪಿ ನಾಯಕರಿಗೆ ತಾರಾಮಾರಿ ಉಗಿದಿದ್ದಾರೆ. ಕರಾವಳಿಯಲ್ಲಿ, ಅದರಲ್ಲೂ ವಿಶೇಷವಾಗಿ ಉಡುಪಿಯಲ್ಲಿ ಬಿಜೆಪಿ ಕೋಟೆ ಅಲುಗಾಡಿಲ್ಲ, ಬೆಂಗಳೂರಿನಲ್ಲಿ ಪ್ರಭಾವ ಗಟ್ಟಿಯಾಗಿದೆ, ಹೊಸದಾಗಿ ಕೋಮು ವಿಷ ಬಿತ್ತಲು ಪ್ರಯತ್ನಿಸಿದ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯ ಮತಪ್ರಮಾಣ ಹೆಚ್ಚಾಗಿದೆ ಎಂಬುದು ವಾಸ್ತವ. ಆದರೆ ಬಿಜೆಪಿ ಅಲುಗಾಡಿಲ್ಲ, ಹಿಂದುತ್ವಕ್ಕೆ ಸೋಲೇ ಆಗಿಲ್ಲ, ಹಿಂದುತ್ವ ಬಳಸಿದ ಕಡೆ ಮತ್ತಷ್ಟು ಬೆಳೆದಿದೆ ಎಂಬಂತಹ ಏಕಮುಖಿ ತಪ್ಪು ವಿಶ್ಲೇಷಣೆ ಮಾಡುತ್ತಿರುವ ಮಿತ್ರರು ತಮಗೆ ಅರಿವಿಲ್ಲದಂತೆ ಮೂಡಿರುವ ಚಿಗುರನ್ನು ಚಿವುಟುವ ಕೆಲಸ ಮಾಡುತ್ತಿದ್ದಾರೆ.

ಸೋತ ಸಚಿವರು

ಈ ಫಲಿತಾಂಶದಿಂದಾಗಿ ಉಸಿರುಕಟ್ಟಿ ಚಡಪಡಿಸುತ್ತಿದ್ದ ದಮನಿತ ಸಮುದಾಯಗಳ ಮನಸ್ಸು ಉಲ್ಲಾಸಿತಗೊಂಡಿದೆ, ತಳಸಮುದಾಯಗಳು ಸಂತಸಗೊಂಡಿವೆ, ಮೇಲ್ಜಾತಿಗಳಿಂದಲೂ ಒಂದು ವಿಭಾಗ ಸಂಘ ಪರಿವಾರದಿಂದ ದೂರ ಸರಿದು ನಿಂತಿವೆ, ಖಿನ್ನತೆಗೆ ಗುರಿಯಾಗಿದ್ದ ಪ್ರಗತಿಪರರು ನಿಟ್ಟುಸಿರುಬಿಟ್ಟಿದ್ದಾರೆ.  ಸತತ ಒತ್ತಡದಲ್ಲಿದ್ದ ಜನ ಚಳವಳಿಗಳಿಗೆ ಹೋರಾಡುವ ಸ್ಪೇಸ್ ಸಿಕ್ಕ ಸಮಾಧಾನ ದೊರಕಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೂ ಉತ್ಸಾಹ ಮೂಡಿದೆ. ಇಡೀ ದೇಶದ ಜನ ಈ ಸಂತಸವನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಕರ್ನಾಟಕದ ಫಲಿತಾಂಶ ದೇಶದ ರಾಜಕಾರಣದ ಮೇಲೆ ಪ್ರಭಾವ ಬೀರಿದೆ. ಬಿಜೆಪಿಯನ್ನು ಚಿಂತೆಗೆ ದೂಡಿದೆ – ವಿರೋಧ ಪಕ್ಷಗಳಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ಇದೆಲ್ಲಾ ಈ ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿ ಬೇಕಾಗಿತ್ತು. ಈ ಎಲ್ಲಾ ಬದಲಾವಣೆ, ನಿರಾಳತೆ, ಉತ್ಸಾಹ, ಸಂತಸ ಬರಿ ಭ್ರಮೆಯಲ್ಲ. ಇದು ಅಪಾರ ಪರಿಶ್ರಮದ ಮೂಲಕ ಸಿಕ್ಕಿರುವ ಪಾಸಿಟಿವ್ ಫಲ. ಇದನ್ನು ನಿರಾಕರಿಸುವುದೆಂದರೆ ವಾಸ್ತವವನ್ನು ನಿರಾಕರಿಸುವುದು ಮತ್ತು ಇದರಲ್ಲಿ ಅಡಗಿರುವ ಜನರ ಆಶೋತ್ತರಗಳನ್ನು ಹಾಗೂ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರ ಶ್ರಮವನ್ನು ಅವಮಾನಿಸುವುದು.

ಈ ಫಲಿತಾಂಶಕ್ಕೆ ಬಿಜೆಪಿಯ ಸ್ವಯಂಕೃತ ಅಪರಾಧಗಳೇ ಮೊದಲ ಕಾರಣ. ಅವರಲ್ಲಿ ಬೆಳೆದ ಅಹಂಕಾರ, ದುಷ್ಟತನ ಮತ್ತು ಭ್ರಷ್ಟತನ ಅವರನ್ನು ಜನರಿಂದ ದೂರ ಮಾಡಿದವು ಮತ್ತು ಇವರನ್ನು ಸೋಲಿಸಲೇಬೇಕು ಎಂದು ದೊಡ್ಡ ವಿಭಾಗದ ಜನ ಕಂಕಣ ಕಟ್ಟುವಂತೆ ಮಾಡಿದವು. ಆದರೆ ಇದೂ ಸಹ ಹಾಗೇ ತನ್ನಂತಾನೇ ಆದದ್ದಲ್ಲ. ಕರ್ನಾಟಕದ ಸಮಸ್ತ ಜೀವಪರ ಶಕ್ತಿಗಳು ಸೇರಿ ಜನರ ಹತಾಶೆಯನ್ನು ರಾಜಕೀಯ ಅರಿವನ್ನಾಗಿಸಲು ಮಾಡಿದ ಕೆಲಸ ಮತ್ತೊಂದು ಮುಖ್ಯ ಕಾರಣವಾಗಿದೆ. ಸಾಲಸೋಲ ಮಾಡಿಕೊಂಡು ನಡೆದ ಹಲವು ಮಾಧ್ಯಮ ಪ್ರಯತ್ನಗಳು, ವಿವಿಧ ಜನ ಚಳವಳಿಗಳು ತೆಗೆದುಕೊಂಡ ಸಂಕಲ್ಪ, ಅನೇಕ ಯುವಜನರು ಸೋಷಿಯಲ್ ಮೀಡಿಯಾದಲ್ಲಿ ಒಡ್ಡಿದ ಪ್ರತಿರೋಧ, “ಸಮಾನ ಮನಸ್ಕರ ವೇದಿಕೆ”, “ಸಹಬಾಳ್ವೆ”, “ಬಹುತ್ವ”, “ದಸಂಸ ಒಕ್ಕೂಟ”, “ಶೋಷಿತ ಸಮುದಾಯಗಳ ಒಕ್ಕೂಟ”, “ಜಾಗತಿಕ ಲಿಂಗಾಯತ ಮಹಾ ಸಭಾ”, “ಸಂಯುಕ್ತ ಹೋರಾಟ”, “ಎದ್ದೇಳು ಕರ್ನಾಟಕ” ಮುಂತಾದ ಹೆಸರುಗಳಲ್ಲಿ ನಡೆದ ಸಾಮಾಜಿಕ ಪರಿಶ್ರಮಗಳು ಕ್ರಮೇಣ ಜನರ ಮಾನಸಿಕತೆಯನ್ನು ರಾಜಕೀಯ ಜಾಗೃತಿಯಾಗಿ ಬೆಳೆಸಿದವು. ಇದಲ್ಲದೆ ಕಾಂಗ್ರೆಸ್ ತೆಗೆದುಕೊಂಡ ಮುಂದೊಡಗು – ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಭಾರತ್ ಜೋಡೋ’ ನಂತಹ ಬೃಹತ್ ಸಾಮಾಜಿಕ ನಡೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸ್ಪರ್ಧೆಯನ್ನು ನಿಭಾಯಿಸಿದ ಪರಿ, 5 ಗ್ಯಾರಂಟಿಯಂತಹ ಜನಪ್ರಿಯ ರಾಜಕೀಯ ನಡೆ, ಇವೆಲ್ಲಾ ಸೇರಿ ಕಾಂಗ್ರೆಸ್ಸಿನ ಶಕ್ತಿಯನ್ನು ವೃದ್ಧಿಸಿದವು. ಶಸಿಕಾಂತ್ ಸೆಂದಿಲ್ ರಂತಹ ಹಲವು ಪ್ರಾಮಾಣಿಕ ವ್ಯಕ್ತಿಗಳು ಕಾಂಗ್ರೆಸ್ ಅನ್ನು ಬಲಪಡಿಸಲೇಬೇಕು ಎಂದು ತಣ್ಣಗೆ ಒಳಗಿಂದಲೇ ಮಾಡಿದ ಕೆಲಸದ ಕೊಡುಗೆಯೂ ಗುರುತರವಾದುದು. ಇದೆಲ್ಲದರ ಫಲಶೃತಿ ಈ ಫಲಿತಾಂಶ.

ಬಿಜೆಪಿ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಅದು ಹಿಂದುತ್ವಕ್ಕೆ ಆಗಿರುವ ಸೋಲಲ್ಲ ಎಂಬ ವಾದವೂ ಇದೆ. ಬಿಜೆಪಿಗೆ ಸಿಕ್ಕಿರುವ ಓಟುಗಳ ಪ್ರಮಾಣದಲ್ಲಿ ದೊಡ್ಡ ಬದಲಾವಣೆ ಆಗದಿರುವುದನ್ನು, ಕೋಮುವಾದದ ಪ್ರಯೋಗದ ಹೊಸ ಕೇಂದ್ರಗಳಲ್ಲಿ ಓಟು ಪ್ರಮಾಣ ಕೊಂಚ ಹೆಚ್ಚಾಗಿರುವುದನ್ನು ಇದಕ್ಕೆ ಉದಾಹರಣೆಗಳಾಗಿ ನೀಡಲಾಗುತ್ತದೆ. ಬಿಜೆಪಿ ಸೋತಿದೆ ಆದರೆ ಹಿಂದುತ್ವಕ್ಕೆ ಸೋಲಾಗಿಲ್ಲ ಎಂಬ ವಾದವನ್ನು ಹರಿಬಿಡಲಾಗುತ್ತಿದೆ. ಒಟ್ಟಾರೆಯಾಗಿ ಬಿಜೆಪಿ ಮತ ಪ್ರಮಾಣವನ್ನು ಉಳಿಸಿಕೊಂಡಿದೆ ಎಂಬುದು ನಿಜ. ಆದರೆ ಬಿಜೆಪಿಯ ಓಟುಗಳೆಲ್ಲಾ ಹಿಂದುತ್ವದ ಓಟುಗಳು ಎಂದು ಲೆಕ್ಕ ಹಾಕುವುದೇ ಸರಿಯಲ್ಲ. ಬಿಜೆಪಿ ಕೇವಲ ಹಿಂದುತ್ವವನ್ನು ಮಾತ್ರ ಬಳಸುತ್ತಿರುವುದಲ್ಲ. ಅಪಾರ ಹಣಬಲ, ಮಾಧ್ಯಮ ಬಲ, ಅಧಿಕಾರ ಬಲ ಮತ್ತು ಜಾತಿ ರಾಜಕಾರಣ ಎಲ್ಲವನ್ನೂ ಬಳಸಿ ಸಂಪಾದಿಸಿರುವ ಓಟುಗಳು ಅವು. ಅದರಲ್ಲಿ ಈ ಬಾರಿ ಹಲವು ಕಡೆ ಅವರು ಹಣ ಹಾಸಿ ಓಟು ಪಡೆದಿದ್ದಾರೆ. ಹಿಂದುತ್ವದ ಹೊಸ ಪ್ರಯೋಗ ಶಾಲೆಯಲ್ಲಿ ಸಿಕ್ಕಿರುವ ಎಲ್ಲಾ ಮತಗಳೂ ಹಿಂದುತ್ವಕ್ಕೆ ಸಿಕ್ಕ ಮತಗಳಲ್ಲ. ಆ ಪಕ್ಷ ತನ್ನ ಶಕ್ತಿ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಲು ಆ ಭಾಗದಲ್ಲಿ ಹಾಕಿದ ಹೆಚ್ಚಿನ ಪರಿಶ್ರಮದ ಫಲಿತಾಂಶವೂ ಇದೆ. ಅಲ್ಲದೆ ಈ ಬಾರಿ ಅವರನ್ನು ವಿರೋಧಿಸಿದ ಶಕ್ತಿಗಳು ಬಳಸಿದ ನೆರೇಟಿವ್ ಕೇವಲ ಹಿಂದುತ್ವ ವಿರೋಧಿಯಾದದ್ದಲ್ಲ. ಹಾಗೆ ನೋಡಬೇಕೆಂದರೆ ಹಿಂದುತ್ವ ಪದವನ್ನೇ ಬಳಸಲಿಲ್ಲ.  “ಕೋಮುವಾದಿ ಪಕ್ಷವನ್ನು ಸೋಲಿಸಿ” ಎಂದು ಈ ಬಾರಿ ಕರೆಕೊಡಲಿಲ್ಲ. “ದುರಾಡಳಿತ ನೀಡಿದ ಬಿಜೆಪಿಯನ್ನು ಸೋಲಿಸಿ” ಎಂಬುದು ಕೇಂದ್ರ ಕರೆಯಾಗಿತ್ತು. ಅದರಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ, ಜನಸಾಮಾನ್ಯರ ಸುಲಿಗೆ, ಜನ ವರೋಧಿ ನೀತಿಗಳು ಹಾಗೂ ದ್ವೇಷ ರಾಜಕಾರಣ ಪ್ರಚಾರದ ಪ್ರಮುಖ ವಿಚಾರಗಳಾಗಿದ್ದವು. ಇವೆಲ್ಲವೂ ಚುನಾವಣೆಯಲ್ಲಿ ಕೆಲಸ ಮಾಡಿವೆ. ವಿಶೇಷವಾಗಿ ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ದ್ವೇಷ ರಾಜಕಾರಣದ ವಿರುದ್ಧ ಮೂಡಿದ ಅರಿವು  ಈ ಸೋಲಿಗೆ ಮುಖ್ಯ ಕಾರಣವಾಗಿವೆ. ಇದರಲ್ಲಿ ಕೆಲವರು ದ್ವೇಷ ರಾಜಕಾರಣದ ವಿರುದ್ಧದ ಜನರ ಪ್ರಜ್ಞಾಪೂರ್ವಕ ಪ್ರಯತ್ನವನ್ನು ಗೌಣಗೊಳಿಸಿ ನೋಡುತ್ತಿದ್ದಾರೆ. ಇವರು ಅಲ್ಪಸಂಖ್ಯಾತ ಧರ್ಮೀಯರು, ತಳ ಸಮುದಾಯಗಳು ಹಾಗೂ ಪ್ರಜ್ಞಾವಂತರನ್ನು ಜನಸಾಮಾನ್ಯರೆಂದು ನೋಡಲು ತಯಾರಿಲ್ಲ. ಈ ಜನ ವಿಭಾಗಗಳು ಈ ಚುನಾವಣೆಯಲ್ಲಿ ಬಹಳ ಪ್ರಜ್ಞಾವಂತಿಕೆಯಿಂದ ನಡೆದುಕೊಂಡು ಸಂಘಟಿತ ಪ್ರಯತ್ನ ಹಾಕಿವೆ. ಹಾಗಾಗಿಯೇ ಮತ ವಿಭಜನೆಯ ಪ್ರಮಾಣ ಕಡಿಮೆಯಾಗಿ ಬಿಜೆಪಿಗೆ ಸೋಲಾಗಿದೆ. ಉಡುಪಿಯನ್ನು ಅವರು ಸಾಗಾಸಗಟು ಉಳಿಸಿಕೊಂಡಿದ್ದಾರೆ ಎಂಬುದು ನಿಜ. ಅದಕ್ಕೆ ಕಾರಣ ಹಿಂದುತ್ವದ ಪ್ರಭಾವ ಮಾತ್ರವಲ್ಲ. ಕಾಂಗ್ರೆಸ್ಸಿಗೆ ಸಮರ್ಥ ಅಭ್ಯರ್ಥಿಗಳೇ ಇರಲಿಲ್ಲ. ಕೊನೆಗಳಿಗೆ ತನಕವೂ ಕಾಂಗ್ರೆಸ್ ಅಬ್ಯರ್ಥಿಗಳನ್ನೇ ಆಯ್ಕೆ ಮಾಡಿರಲಿಲ್ಲ. ಇಡೀ ಪ್ರಯತ್ನ ಕೊನೆಗಳಿಗೆಯದು. ಹಾಗೆಯೇ ಬೆಂಗಳೂರಿನ ಮಧ್ಯಮ ವರ್ಗವನ್ನು ಅಡ್ರೆಸ್ ಮಾಡುವ ಅಜೆಂಡಾವೇ ಕಾಂಗ್ರೆಸ್ಸಿಗೆ ಇರಲಿಲ್ಲ.

ಒಂದೆಡೆ ಸಾಲು ಸಾಲು ಕೋಮು ಅಜೆಂಡಾವನ್ನು ಪುಷ್ ಮಾಡಿದ್ದಾಗ್ಯೂ, ಅಧಿಕಾರದ ದುರುಪಯೋಗ ಮಾಡಿಕೊಂಡು ಪ್ರಚಾರ ಮಾಡಿಕೊಂಡಿದ್ದಾಗ್ಯೂ ಅಪಾರ ಹಣ ಮತ್ತು ಮಾಧ್ಯಮದ ಬಲ ಬಳಸಿಕೊಂಡಿದ್ದಾಗ್ಗಿಯೂ, ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಆಗಿಲ್ಲ. ಅಗ್ರ ನಾಯಕರನ್ನೇ ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಮತ್ತೊಂದೆಡೆ ಈ ದುರಾಡಳಿತವನ್ನು ವಿರೋಧಿಸಿದ ಶಕ್ತಿಗಳು ಸಂಘಟಿತ ಪ್ರಯತ್ನ ನಡೆಸಿವೆ. ಚುನಾವಣೆಯಲ್ಲಿ ಬಿಜೆಪಿ ಸೋಲಿಸಿವೆ. ಅವರ ಕೋಮು ಅಜೆಂಡಾಗೆ ರಾಜ್ಯ ಸಿಗಿಬೀಳದಂತೆ ಪ್ರಬುದ್ಧ ರೀತಿಯ ನೆರೇಟಿವ್ ಅನ್ನು ಕಟ್ಟಿದ್ದಾರೆ.  ದಮನಿತ ಹಾಗೂ ತಳ ಸಮುದಾಯದ ಮತದಾರರು ಹೆಚ್ಚಿನ ಅರಿವಿನ ಜೊತೆ ಮತ ಹಾಕಿದ್ದಾರೆ. ಸಾರಾಂಶದಲ್ಲಿ ಜಾತ್ಯಾತೀತ – ಜನಪರ ಶಕ್ತಿಗಳು ಚೈತನ್ಯಯುತವಾಗಿ ಕೆಲಸ ಮಾಡಿವೆ, ದುಷ್ಟ ರಾಜಕಾರಣ ಅಧಿಕಾರ ಉಳಿಸಿಕೊಳ್ಳಲಾಗದೆ ಹೀನಾಯವಾಗಿ ಸೋತಿದೆ. ಇದು ಪ್ರಜ್ಞಾವಂತ ಶಕ್ತಿಗಳ ಗೆಲುವೇ ಅಲ್ಲ, ದುಷ್ಟ ಬಣದ ಸೋಲೇ ಅಲ್ಲ ಎಂಬಂತೆ ನೋಡುವುದು ಒಣ ವಾದಗಳ ಸಮರ್ಥನೆಯಾಗುತ್ತದೆ, ನಿಷ್ಕ್ರಿಯತೆಗೆ ನೀರೆರೆಯುವ ಕೆಲಸವಾಗುತ್ತದೆ.

ಮಿತಿಗಳಾಚೆಯೂ ನಡೆದಿರುವ ಈ ಸಾಮಾಜಿಕ – ರಾಜಕೀಯ ಪ್ರಕ್ರಿಯೆ ಬಿಜೆಪಿಯ ಕೋಟೆಯನ್ನು ಅಲುಗಾಡಿಸಿದೆ. ಇದ್ದಿದ್ದರಲ್ಲಿ ತಾತ್ಕಾಲಿಕ ಪರಿಹಾರವಾಗಿರುವ ಕಾಂಗ್ರೆಸ್ ‘ಸ್ಥಿರ’ ಸರ್ಕಾರ ರಚಿಸಿದೆ. ಸಮಾಜದಲ್ಲಿ ಸಾಮಾಜಿಕ ಶಕ್ತಿಗಳು ಮೊದಲಿಗಿಂತ ಹೆಚ್ಚು ಸಕ್ರಿಯವಾಗಿವೆ ಮತ್ತು ಸಂಘಟಿತಗೊಂಡಿವೆ, ಜನ ಮಾಧ್ಯಮದ ತಂಡಗಳ ಸಾಮಾಜಿಕ ಪಾತ್ರ ಹೆಚ್ಚಾಗಿದೆ, ಜನ ಚಳವಳಿಗಳು ಮುಂದಿಟ್ಟಿರುವ ಹಕ್ಕೊತ್ತಾಯಗಳನ್ನೆಲ್ಲಾ ಈಡೇರಿಸುವುದಾಗಿ ಕಾಂಗ್ರೆಸ್ ಕಮಿಟ್ ಆಗಿದೆ. ಕಾಂಗ್ರೆಸ್ ಮಾತು ತಪ್ಪಿದರೆ ದೊಡ್ಡ ಹೋರಾಟಗಳನ್ನು ಲಾಂಚ್ ಮಾಡಲು ಸಿದ್ಧತೆಗಳು ಪ್ರಾರಂಭಗೊಂಡಿವೆ. ಬಿಜೆಪಿಯನ್ನು ಸೋಲಿಸಬಹುದು ಎಂಬ ವಿಶ್ವಾಸ ಹೋರಾಟನಿರತ ಶಕ್ತಿಗಳಲ್ಲಿ ಮೂಡಿದೆ. ಬಾಡಿದ್ದ ಮುಖಗಳು ಅರಳಿವೆ.

ಈ ಸಕರಾತ್ಮಕ ವಿದ್ಯಮಾನವನ್ನು ಪ್ರತಿರೋಧದ ಕಾಂಗ್ರೇಸಿಕರಣವಾಗಿ ಅಲ್ಲ, ಪ್ರತಿರೋಧದ ಸಾಮಾಜೀಕರಣವಾಗಿ ಗ್ರಹಿಸುವ ಅಗತ್ಯವಿದೆ. ಏಕೆಂದರೆ ಬಿಜೆಪಿಯನ್ನು ಚುನಾವಣೆಗಳಲ್ಲಿ ಸೋಲಿಸಲೇಬೇಕೆಂದು ಅನೇಕ ಸಾಮಾಜಿಕ ಶಕ್ತಿಗಳು ದುಡಿದಿವೆ. ಈ ವಿಜಯದ ಅಮಲಿನಲ್ಲಿ ಮೈ ಮರೆಯಬಾರದು, ಕಾಂಗ್ರೆಸ್ ಬಗ್ಗೆ ಭ್ರಮೆ ಬೆಳೆಸಿಕೊಳ್ಳಬಾರದು, ಹೋರಾಟ ಕೈಬಿಟ್ಟು ಲಾಭಿ ರಾಜಕಾರಣಕ್ಕೆ ಇಳಿಯಬಾರದು ಎಂಬ ಜಾಗೃತಿ ಖಂಡಿತ ಇರಲೇಬೇಕು.  ಪ್ರಗತಿಪರರಲ್ಲೇ ಒಂದು ಅವಕಾಶವಾದಿ ಬಣ ಅಧಿಕಾರದ ಕೇಂದ್ರಗಳಲ್ಲಿ ತೂರಿಕೊಳ್ಳಲು ಲಾಭಿಯಲ್ಲಿ ಮಾತ್ರ ನಿರತವಾಗಿರುವುದೂ ನಿಜ. [ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ಸಮರ್ಥರು ಬರಬೇಕು. ಅದನ್ನೇ ಲಾಭಿ ಎನ್ನಲು ಬರುವುದಿಲ್ಲ. ಆದರೆ ಸ್ವಾರ್ಥ ಗುರಿಗಾಗಿ ಅಧಿಕಾರದ ಎಡತಾಕುವ ಶಕ್ತಿಗಳನ್ನು ಮಾತ್ರ ಅವಕಾಶವಾದಿಗಳೆಂದು ಗುರುತಿಸಬೇಕಿದೆ]. ಅಧಿಕಾರದ ಸಾಮಿಪ್ಯ ಸಾಮಾಜಿಕ ಕಾರ್ಯಕರ್ತರಲ್ಲೂ ಅಹಂ ಮತ್ತು ಅವಕಾಶವನ್ನು ಚಿಗುರಿಸುವುದು ಸಹಜ. ಇದರ ಬಗ್ಗೆ ವಿಶೇಷ ಎಚ್ಚರಿಕೆವಹಿಸಲೇಬೇಕು. ಆದರೆ ಕರ್ನಾಟಕದ ಸಾಮಾಜಿಕ ಹೋರಾಟಗಾರರು ಕಾಂಗ್ರೆಸ್ ಕಡೆ ಸರಿಯುತ್ತಿದ್ದಾರೆ ಎಂಬಂತೆ ಗ್ರಹಿಸುವುದು ಅಥವಾ ಪ್ರಚಾರ ಮಾಡುವುದು ಕರ್ನಾಟಕದ ಜನ ಚಳವಳಿಗಳಲ್ಲಿ ಬೆಳೆಯುತ್ತಿರುವ ಬದ್ಧತೆ ಮತ್ತು ಪ್ರಬುದ್ಧತೆಯನ್ನು ಅನುಮಾನಿಸುವ ಮತ್ತು ನೋಡದಿರುವ ತಪ್ಪಾಗಿದೆ.

ಬಿಜೆಪಿಯನ್ನು ಸೋಲಿಸಲು ಇಂದು ಸಕ್ರಿಯವಾಗಿ ತೊಡಗಿಸಿಕೊಂಡು ದುಡಿಯುತ್ತಿರುವ ಬಹುತೇಕರು ಕಾಂಗ್ರೆಸ್ಸಿನ ಅಭಿಮಾನಿಗಳಲ್ಲ. ಹಾಗೆ ನೋಡಬೇಕೆಂದರೆ ಕಾಂಗ್ರೆಸ್ಸಿನ ಅಭಿಮಾನಿಗಳು ಲಾಭಿಯಲ್ಲಿ ತೊಡಗಿರುವುದೇ ಹೆಚ್ಚು. ದುಡಿಯುತ್ತಿರುವ ಸಾಮಾಜಿಕ ಶಕ್ತಿಗಳಲ್ಲಿ ಹೆಚ್ಚಿನವರು ಸಮಗ್ರ ಬದಲಾವಣೆಯ ಕನಸನ್ನು ಇಟ್ಟುಕೊಂಡಿರುವವರು, ಕಾಂಗ್ರೆಸ್ಸಿನ ಸ್ವಭಾವದ ಮತ್ತು ದೌರ್ಬಲ್ಯಗಳ ಅರಿವಿರುವವರು, ನಿಜವಾದ ಪರ್ಯಾಯವನ್ನು ಕಟ್ಟಬೇಕು ಎಂಬ ಗುರಿ ಇಟ್ಟುಕೊಂಡವರು. ಜನ ಚಳವಳಿಗಳಿಂದ ದೂರವಾಗಿ ಬರವಣಿಗೆಗಳಿಗೆ ಸೀಮಿತವಾಗುತ್ತಿರುವ ವರ್ಗ ವಾಸ್ತವತೆಯಿಂದಲೂ ದೂರವಾಗುತ್ತಿದೆ. ದೂರದಲ್ಲಿ ಕುಂತವರಿಗೆ ಸಾಮಾಜಿಕ ಶಕ್ತಿಗಳ ಪ್ರಯತ್ನ, ಪರಿಶ್ರಮ, ಬದ್ಧತೆ, ಪ್ರಬುದ್ಧತೆ ಕಾಣಿಸುತ್ತಿಲ್ಲ. ಅವರಲ್ಲಿ ಅನುಮಾನ, ಆತಂಕ ಹೆಚ್ಚಾಗುತ್ತಿದೆ. ಕನಿಷ್ಟ ಹತ್ತಿರ ಬಂದು ಅರ್ಥಮಾಡಿಕೊಳ್ಳುವ ಕಷ್ಟವೂ ತೆಗೆದುಕೊಳ್ಳದೆ ತರಾತುರಿಯಲ್ಲಿ ಅದನ್ನು ಹರಡುವ ಕೆಲಸದಲ್ಲೂ ತೊಡಗಿದ್ದಾರೆ. ದಯವಿಟ್ಟು ಈ ತಪ್ಪು ಮಾಡದಿರಿ ಎಂದಷ್ಟೇ ಅವರನ್ನು ಕೇಳಿಕೊಳ್ಳುತ್ತೇನೆ. ಕರ್ನಾಟಕ ಹೋರಾಡಿ ಒಂದು ಒಳ್ಳೆ ಫಲಿತಾಂಶ ಬಂದಿದೆ. ಮೊದಲು ಅದನ್ನು ಆಸ್ವಾದಿಸೋಣ. ಆದರೆ ಭ್ರಮೆಗೆ ತುತ್ತಾಗದೆ, ನಿದ್ರೆಗೆ ಜಾರದೆ, ಅಹಂಗೆ ಒಳಗಾಗದೆ, ಅವಕಾಶವಾದಿತನಕ್ಕೆ ಗುರಿಯಾಗದೆ ಮುಂದಿನ ಕರ್ತವ್ಯದತ್ತ ಗಮನಹರಿಸೋಣ.

ಎದ್ದೇಳು ಕರ್ನಾಟಕವಾಗಿ ನಮ್ಮ ಮುಂದಿನ ನಡೆ ಏನಾಗಿರಬೇಕು?:

ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ಮಟ್ಟಕ್ಕೆ ಕರ್ನಾಟಕ ಎದ್ದದ್ದು ಹೌದು. ಆದರೆ ಇದು ಸಮಗ್ರ ಜಾಗೃತಿಯೂ ಅಲ್ಲ, ಶಾಶ್ವತ ಜಾಗೃತಿಯೂ ಅಲ್ಲ. ಗಾಯಗೊಂಡಿರುವ ಸಂಘಪರಿವಾರ ಮತ್ತು ಬಿಜೆಪಿ ಬುಸುಗುಟ್ಟುತ್ತಿವೆ, ಸುಳ್ಳಿನ ಫ್ಯಾಕ್ಟರಿಯ ಉತ್ಪಾದನೆ ದ್ವಿಗುಣಗೊಂಡಿದೆ, ಅಪಾಯಕಾರಿ ಷಡ್ಯಂತ್ರಗಳು ಕರ್ನಾಟಕದಲ್ಲೂ ಕೇಂದ್ರದಲ್ಲೂ ಸಜ್ಜಾಗುತ್ತಿವೆ. ಹೊಸ ಸಂಸತ್ತು ಭವನದ ಉದ್ಘಾಟನೆ ನಡೆದ ಪರಿ ಮತ್ತು ಧರ್ಮ ದಂಡದ ಸಂಕೇತ ಭವಿಷ್ಯದ ಅಪಾಯದ ಗಂಟೆಯನ್ನು ಬಾರಿಸುತ್ತಿವೆ. ಭಗ್ನ ಪಕ್ಷ ಜನತಾ ದಳ ಮತ್ತೆ ಅವಕಾಶವಾದಿ ರಾಜಕಾರಣದತ್ತ ಮುಖಮಾಡಿದೆ. ಕಾಂಗ್ರೆಸ್ ಒಂದೆಡೆ ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದೆ. ಆದರೆ ಅದೇ ಸಂದರ್ಭದಲ್ಲಿ ಸಣ್ಣ ದೊಡ್ಡ ಸಾಲು ಸಾಲು ತಪ್ಪುಗಳನ್ನು ಪ್ರತಿನಿತ್ಯ ಮಾಡಲು ಪ್ರಾರಂಭಿಸಿದೆ. ಇದು ಹೆಚ್ಚಾಗುವ ಸಾಧ್ಯತೆಯೇ ಇದೆ. ಹಾಗಾಗಿ ಹೋರಾಟಗಾರರು ಒಂದು ಗಳಿಗೆಯೂ ನಿರಾಳವಾಗಿ ಕೂರುವ ಪರಿಸ್ಥಿತಿ ಇಲ್ಲ.

ಸಾಮಾಜಿಕ ಶಕ್ತಿಗಳ ಮೇಲೆ ಇಂದು ಎರಡು ರೀತಿಯ ಹೊಣೆಗಾರಿಕೆಗಳು ಇವೆ. ಮೊದಲಿಗೆ ಕಾಂಗ್ರೆಸ್ ಪಕ್ಷ ತಕ್ಕಮಟ್ಟಿಗಾದರೂ ಕೆಲಸ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿರುವ ಜನರಿಗೆ ಮೊದಲ ಹಂತದ ನ್ಯಾಯವಾದರೂ ಸಿಗಬೇಕು. ಜನ ಕಾಯುತ್ತಿದ್ದುದು ಐದು ಗ್ಯಾರಂಟಿಗಳಿಗೆ ಅಲ್ಲ. ಅವು ಸಿಕ್ಕಿದ್ದರಿಂದ ಜನಸಾಮಾನ್ಯರಿಗೆ ಸಂತೋಷವಾಗಿದೆ. ಆ ಮಾತು ಬೇರೆ. ಆದರೆ ಅವರು ಕಾಯುತ್ತಿರುವುದು ತಮ್ಮ ದೀರ್ಘ ಕಾಲದ ಹಕ್ಕೋತ್ತಾಯಗಳ ಪರಿಹಾರಕ್ಕಾಗಿ. ರೈತರು ಮೂರು ಕೃಷಿ ಕಾಯ್ದೆಗಳ ರದ್ದತಿ, ಎಲ್ಲಾ ಬೆಳೆಗೆ ನ್ಯಾಯಯುತ ಬೆಲೆ ಖಾತ್ರಿ, ಸಾಲ ಮನ್ನ. ಕಡು ಬಡುವರು ತಮ್ಮ ತುಂಡು ಭೂಮಿಗೆ ಮತ್ತು ಸರ್ಕಾರಿ ಜಾಗಗಳಲ್ಲಿ ಕಟ್ಟಿರುವ ಮನೆಗಳಿಗೆ ಹಕ್ಕುಪತ್ರ, ತಳ ಸಮುದಾಯಗಳು ನ್ಯಾಯಯುತ ಮೀಸಲಾತಿ, ಅಲ್ಪಸಂಖ್ಯಾತ ಸಮುದಾಯಗಳು ನೆಮ್ಮದಿಯ ಸಹಬಾಳ್ವೆ, ಕಾರ್ಮಿಕರು ಉದ್ಯೋಗ ಭದ್ರತೆ, ಯುವಜನರು ಓದಿಗೆ ತಕ್ಕ ಉದ್ಯೋಗ, ಮಹಿಳೆಯರು  ರಕ್ಷಣೆ, ಲೈಂಗಿಕ ಅಲ್ಪಸಂಖ್ಯಾರು ಘನತೆಯ ಬದುಕು ಇತ್ಯಾದಿ. ಈ ವಿಚಾರಗಳಿಗಾಗಿ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಬೇಕು. ಮನವಿ ಪತ್ರಗಳನ್ನು ಒಗೆಯುವುದರಿಂದ, ಫೋಟೋ ಸೆಷನ್ ನಡೆಸುವುದರಿಂದ ಕಾಂಗ್ರೆಸ್ ಮರದಿಂದಲೂ ಹಣ್ಣು ಕೆಳಕ್ಕೆ ಬೀಳುವುದಿಲ್ಲ. ಜನ ಹೋರಾಟಗಳು ಬಿರುಸು ಪಡೆಯಲೇಬೇಕು. ಶೋಷಿತ ಸಮುದಾಯಗಳ ಒಕ್ಕೂಟ, ದಸಂಸ ಒಕ್ಕೂಟ, ಸಂಯುಕ್ತ ಹೋರಾಟ, ಎದ್ದೇಳು ಕರ್ನಾಟಕದಂತಹ ವೇದಿಕೆಗಳು ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಬೇಕು. ಅಂತಿಮ ನ್ಯಾಯ ಬೀದಿಯಲ್ಲೇ ದಕ್ಕಬೇಕು. ಅದಕ್ಕೆ ಜನರನ್ನು ಸಜ್ಜುಗೊಳಿಸಬೇಕು.

ಮತ್ತೊಂದೆಡೆ 2024ರ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಬೇಕು. ಈ ಬಾರಿಯ ಪ್ರಯೋಗದಲ್ಲಿ ಮಾಡಲಾಗದೇ ಹೋದ ಕೆಲಸಗಳನ್ನು ಈ ಬಾರಿ ಯೋಜಿತವಾಗಿ ಕೈಗೆತ್ತಿಕೊಳ್ಳಬೇಕು. ಜೊತೆಗೂಡಿರುವ ಶಕ್ತಿಗಳ ನಡುವಿನ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕು, ವಿಶ್ವಾಸಗಳಿಸಲಾಗದ ಮಿತ್ರರ ಜೊತೆ ಕೂತು ಬಿಚ್ಚು ಮನಸ್ಸಿನ ಮಾತುಕತೆಯಾಗಬೇಕು. ತಪ್ಪಾಗಿದ್ದರೆ ಅಹಂ ಇಲ್ಲದೆ ಕ್ಷಮೆ ಕೇಳಬೇಕು. ಪ್ರತ್ಯೇಕತೆ ಪ್ರತಿಪಾದಿಸುವವರ ಜೊತೆ ಪ್ರೀತಿಯಿಂದಲೇ ಜಗಳವಾಡಬೇಕು. ಕಾರ್ಯಕರ್ತರ ರಾಜಕೀಯ ತಿಳವಳಿಕೆ ಮತ್ತಷ್ಟು ಹರಿತ ಮತ್ತು ನಿಖರಗೊಳಿಸಲು ಸಾಲು ಸಾಲು ತರಭೇತಿಗಳು ನಡೆಯಬೇಕು. ಸಮರ್ಥ ನೆರೇಟಿವ್ ಸಿದ್ಧತೊಳ್ಳಬೇಕು. ಸೋಷಿಯಲ್ ಮೀಡಿಯಾ ಶಕ್ತಿಗಳು ಮತ್ತಷ್ಟು ಸಂಘಟಿತಗೊಳ್ಳಬೇಕು. ಜನ ಮಾಧ್ಯಮ ಸಂಸ್ಥೆಗಳು ಸಬಲಗೊಳ್ಳಬೇಕು. ಕರ್ನಾಟಕ ಮಾತ್ರವಲ್ಲದೆ ದೇಶದುದ್ದಕ್ಕೂ ಈ ದುಷ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಶ್ರಮಿಸುತ್ತಿರುವ ಶಕ್ತಿಗಳ ಜೊತೆ ಬಂಧ – ಸಂಬಂಧ ಬಲಪಡಿಸಿಕೊಳ್ಳಬೇಕು. ಪಕ್ಷಗಳ ಮೇಲೆ ಅವಲಂಬಿಸದೆ ಹಣಕಾಸು ಒಳಗೊಂಡಂತೆ ಅಗತ್ಯ ಸಂಪನ್ಮೂಲಗಳನ್ನು ಕ್ರೂಢೀಕರಿಸಿಕೊಳ್ಳುವ ಯೋಜನೆ ಸಿದ್ಧವಾಗಬೇಕು. ಈ ಎಲ್ಲಾ ಸಿದ್ಧತೆಗಳೂ 2024ನ್ನು ಗುರಿಯಾಗಿಟ್ಟುಕೊಂಡು ನಡೆಯಬೇಕು.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಾಗರಿಕರ ಜಾಗೃತಿಗಾಗಿ ರೂಪುತಾಳಿ ಪರಿಣಾಮಕಾರಿ ಅಭಿಯಾನ ನಡೆಸಿದ ‘ಎದ್ದೇಳು ಕರ್ನಾಟಕ’ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಚರ್ಚೆ ನಡೆಸಿತು.

ಇಷ್ಟು ಮಾತ್ರವಲ್ಲದೆ ಈ ಫ್ಯಾಸಿಸ್ಟ್ ಶಕ್ತಿಗಳನ್ನು ಸೈದ್ಧಾಂತಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ದುರ್ಬಲಗೊಳಿಸುವ ದೂರಗಾಮಿ ಕೆಲಸಗಳ ಯೋಜನೆಗಳೂ ಅಭಿವೃದ್ಧಿಗೊಳ್ಳಬೇಕು ಮತ್ತು ಆ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕು. ಇದೊಂದು ಸಮಗ್ರ ಹಾಗೂ ದೀರ್ಘ ಹೋರಾಟ. ಮುಂದಿನ ಒಂದೆರಡು ದಶಕಗಳ ಕಾಲ ಬಹಳ ತೀಕ್ಷ್ಣ ರೀತಿಯಲ್ಲಿ ನಡೆಯಬೇಕಿರುವ ಸಮಗ್ರ ಹೋರಾಟ. ದೂರಗಾಮಿ ಯೋಜಿತ ಕೆಲಸಗಳು ತಕ್ಷಣದ ಕೆಲಸಗಳ ಜೊತೆಜೊತೆಗೇ ಹೆಜ್ಜೆಹಾಕಬೇಕು.

ಸಿಕ್ಕ ಗೆಲುವಲ್ಲಿ ಮೈಮರೆಯುವುದು ಬೇಡ, ಗೆಲುವನ್ನು ನಿರಾಕರಿಸುವ ತಪ್ಪನ್ನೂ ಮಾಡುವುದು ಬೇಡ. ಪರಿಶ್ರಮ ಪಟ್ಟು ಮೊದಲ ಮೆಟ್ಟಿಲು ಹತ್ತಿದ್ದೇವೆ. ಸಂತಸಪಡೋಣ. ಆದರೆ ಮುಂದಿನ ಮೆಟ್ಟಿಲು ಇನ್ನು ಎತ್ತರದ್ದು, ಕಠಿಣದ್ದು. ಹತ್ತಲು ಸಿದ್ಧರಾಗೋಣ. ಅಲ್ಪಗುರಿಯ ಸಾಧನೆ ದೂರಗುರಿಯ ಮರೆಸದಂತೆ ಎಚ್ಚರವಹಿಸೋಣ. ಬಿಜೆಪಿಯ ಸೋಲಿನಲ್ಲಿ ತಮ್ಮ ಗೆಲುವನ್ನು ಕಾಣುವ ಮನಸ್ಸುಗಳಿಗೆಲ್ಲಾ ನಮನ. ದುರಾಡಳಿತ ನೀಡಿದ ಅತಿದುಷ್ಟ ಪಕ್ಷವನ್ನು ಅಧಿಕಾರದಿಂದಿಳಿಸಲು ಅವಿರತ ಪರಿಶ್ರಮ ನಡೆಸಿದ ಶ್ರಮದ ಹನಿಗಳಿಗೆಲ್ಲಾ ಶರಣು.

ದುಡಿದ ಸಹಸ್ರ ಕೈಗಳಿಗೆ
ನಮಿಸುವುದಾದರೂ ಹೇಗೆ?
ಹಗಲಿರುಳು ದುಡಿದ ಮನಸ್ಸುಗಳನ್ನೆಲ್ಲಾ ಸ್ಮರಿಸುವುದಾದರೂ ಹೇಗೆ?
ಕೊಡುಗೆ ನೀಡಿದ ಅಸಂಖ್ಯ ಜನರನ್ನು
ಗುರುತಿಸುವುದಾದರೂ ಹೇಗೆ?

ಇದು ಒಂದು ಸಾಂಘಿಕ ಸಾಧನೆ ಮಾತ್ರ
ವ್ಯಕ್ತಿಗಳು, ಸಂಘಗಳು, ಸಮಾವೇಶಗಳು ನಿಮಿತ್ತ
ಪಾತ್ರ

ಜೊತೆಗೂಡಿ ನಡೆದಿದ್ದೇವೆ
ಆಗಾಗ ಎಡವಿದ್ದೇವೆ
ತಪ್ಪುಒಪ್ಪುಗಳನ್ನೂ ಮಾಡಿದ್ದೇವೆ

ಆದ ಸಾಧನೆ ನಮ್ಮೆಲ್ಲರದೆಂದೂ
ಆದ ತಪ್ಪುಗಳು ನಮ್ಮನಮ್ಮವೇ ಎಂದು ಸಾಗುವ ಮುಂದೆ
ದೂರದ ಗುರಿಯ ಕಡೆಗೆ

–        ನೂರ್ ಶ್ರೀಧರ್

ಇದನ್ನೂ ಓದಿ: ‘ಎದ್ದೇಳು ಕರ್ನಾಟಕ’ ಅನುಭವ ಕಥನ (ಭಾಗ -1): ಈ ಪರಿಕಲ್ಪನೆ ಹುಟ್ಟಿದ ಪರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...