Homeಮುಖಪುಟ‘ಮರೆತೇನೆಂದರೂ ಮರೆಯಲಿ ಹೆಂಗೆ’ - ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

‘ಮರೆತೇನೆಂದರೂ ಮರೆಯಲಿ ಹೆಂಗೆ’ – ಹೋರಾಟಗಾರ ಜಿ. ರಾಜಶೇಖರ ಅವರಿಗೆ ನುಡಿನಮನ

- Advertisement -
- Advertisement -

ಅಜ್ಞಾತವಾಸದಲ್ಲಿದ್ದರೂ ಆಗಾಗ ಕೇಳುತ್ತಲೇ ಇದ್ದ ಹೆಸರು ಜಿ. ರಾಜಶೇಖರ್. ಕರಾವಳಿ ಕೋಮುವಾದಿ ಜ್ವಾಲೆಗೆ ಸಿಕ್ಕಿತ್ತು. ರಥಬೀದಿ ಗೆಳೆಯರು ಬಕೆಟ್ ಹಿಡಿದು ಬೆಂಕಿ ನಂದಿಸಲು ಹೆಣಗುತ್ತಿದ್ದರು. ನಕ್ಕು ಸುಮ್ಮನಿದ್ದವರ ಮುಂದೆ ಈ ಸಣ್ಣ ಫೈರ್ ಬ್ರಿಗೇಡ್ ನಮ್ಮ ಮನಕ್ಕೆ ಎಂಥದೋ ಹಿತ ನೀಡುತ್ತಿತ್ತು. ತುಂಬಾ ವರ್ಷಗಳ ಕಾಲ ಅವರ ಬಗ್ಗೆ ಬಹಳ ಕೇಳಿದೆ, ಸ್ವಲ್ಪ ಓದಿದೆ. ಜೀವನದಲ್ಲಿ ಏನೇನೋ ನಡೆದುಹೋಯಿತು.

ಒಂದು ವಿಶೇಷ ಸಂದರ್ಭದಲ್ಲಿ ಮುಖ್ಯವಾಹಿನಿಗೆ ಮರಳುವ ಅವಕಾಶವೂ ದೊರೆಯಿತು. ಪ್ರೀತಿಯ ಸಮಾಜ ಸ್ವಾಗತಿಸಿತ್ತು. ಆದರೆ ಕಾನೂನು ಪ್ರಕ್ರಿಯೆ ಬಾಕಿ ಉಳಿದಿತ್ತು. ಉಡುಪಿಯಲ್ಲಿ UAPA ಒಳಗೊಂಡಂತೆ ನನ್ನ ಮೇಲೆ ಹಲವು ಕೇಸುಗಳಿದ್ದವು. ಬೇಲ್ ಪಡೆಯಲು ಜಾಮೀನು ಬೇಕಿತ್ತು. ನಕ್ಸಲೈಟನಿಗೆ ಜಾಮೀನು ನೀಡುವುದು ಸುಲಭವಲ್ಲ. ವಿಶ್ವಾಸ, ಗುಂಡಿಗೆ ಎರಡೂ ಇರಬೇಕಿತ್ತು. ಆದರೆ ರಾಜಶೇಖರರಿಗೆ ಅವ್ಯಾವುವೂ ಅಗತ್ಯವಿರಲಿಲ್ಲ. ಕನ್ವಿನ್ಸ್ ಮಾಡೋಣ ಎಂದು ಮಿತ್ರರು ಹೋದರಂತೆ. ಆದರೆ ಪೀಠಿಕೆ ಹಾಕುವ ಅಗತ್ಯವೂ ಬೀಳಲಿಲ್ಲವಂತೆ. “ಸರಿ ಕೊಡೋಣಬಿಡಿ, ಅದಕ್ಕೇನು? ನಾನು ಕೋರ್ಟಿಗೆ ಏನೆಲ್ಲಾ ತರಬೇಕು?” ಎಂದು ಕೇಳಿದರಂತೆ. ಮನುಷ್ಯರನ್ನು ನಂಬಲು‌ ಮನುಷ್ಯರಾಗಿದ್ದರೆ ಸಾಕು ಎಂಬ ಸಹಜ ವ್ಯಕ್ತಿತ್ವ ನಮ್ಮ ಸಾರ್‌ದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಎಲ್ಲಿ ಇದು ಸಾಲಲ್ಲ ಎಂದು ರಿಜೆಕ್ಟ್ ಮಾಡಿಬಿಡ್ತಾರೋ ಅಂತ ಲಾಯರ ಬಳಿ ಹಲವಾರು ಬಾರಿ ವಿಚಾರಿಸಿ, ಓಡಾಡಿ ಡಾಕ್ಯುಮೆಂಟ್ ತೆಗೆಸಿ, ಡಬಲ್ ಡಬಲ್ ಫೋಟೋಗಳನ್ನು ತೆಗೆದುಕೊಂಡು, ತಮ್ಮ ಕೊಡೆಯೊಂದಿಗೆ ನಾವು ಬರುವ ಮುನ್ನವೇ ಕೋರ್ಟಲ್ಲಿ ಬಂದು ಕಾಯುತ್ತಿದ್ದರು. ನೋಡಿ “ಮತ್ತೆ…” ಎಂದರು….ಜೀವಮಾನದ ಒಡನಾಡಿ ಎಂಬಂತೆ. ನಾನು ಅವರನ್ನು ಮೊದಲ ಬಾರಿ ಕಂಡದ್ದು ಆ ಕ್ಷಣದಲ್ಲೆ.

ನಾನು ಕಟಕಟೆಯಲ್ಲಿ ನಿಂತಿದ್ದೆ. ಅವರು ಹೊರಗಿದ್ದರು. ಕಾರಕೂನ ಅವರ ಹೆಸರು ಕೂಗಿದೊಡನೆ ಲಗುಬಗೆಯಿಂದ ಒಳಬಂದವರೇ ಸೀದಾ ಕಟಕಟೆಯಲ್ಲಿ ಬಂದು ನನ್ನ ಜೊತೆ ನಿಂತರು. ಅಲ್ಲಿ ಬೇಡ ಇಲ್ಲಿ ಬನ್ನಿ ಎಂದು ವಕೀಲರು ಅವರನ್ನು ಜಡ್ಜ್ ಬಳಿಗೆ ಕರೆದೊಯ್ದರು. ಹೊರ ಬಂದರೆ ಶಿವಸುಂದರದು ಒಂದೇ ಸಮ ನಗು. ಸಹ ಆರೋಪಿ ರಾಜಶೇಖರ್ ಎಂದು ಗೇಲಿ ಮಾಡಿದ್ದರು. ಮುಗ್ದ ರಾಜಶೇಖರರಿಗೆ ಅದರಿಂದ ಮುಜುಗರವೂ ಅನಿಸಲಿಲ್ಲ. ಸಹಜವಾಗಿಯೇ ಅವರು ನಾನು ಜೊತೆಗಿದ್ದೇನೆ ಎಂದು ನನ್ನ ಜೊತೆ ಕಟಕಟೆ ಹಂಚಿಕೊಂಡಿದ್ದರು.

ಇದನ್ನೂ ಓದಿ: ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

ಅಂದಿನಿಂದ ನನ್ನ ಕೇಸ್ ಮುಗಿಯುವ ತನಕ ನಾನು ತಪ್ಪಿಸಿದರೂ ಅವರು ಕೋರ್ಟಿಗೆ ತಪ್ಪಿಸಲಿಲ್ಲ. ಕೋರ್ಟಿಗೆ ಅವರು ಬೇಕಿರಲಿಲ್ಲ. ಆದರೆ ಅವರಿಗೆ ಕೋರ್ಟಿಗೆ ಬರುವುದು ಮುಖ್ಯವಿತ್ತು. ಕೋರ್ಟಿನಲ್ಲಿ ನನಗೆ ಒಂಟಿತನ ಕಾಡಬಾರದು ಎಂಬುದು ಅವರ ಕಾಳಜಿಯಾಗಿತ್ತು. ಪ್ರತಿ ಡೇಟಿಗೆ ಬಂದು ಮಾತನಾಡಿಸಿ, ಕ್ಯಾಂಟೀನಿಗೆ ಕರೆದುಕೊಂಡು ಹೋಗಿ ಮಂಗಳೂರು ಬಜಿ, ಎಳ್ಳಿನ ಪಾನಕ ಕೊಡಿಸಿ, “ಬರ್ತೇನೆ..” ಅಂತ ಹೊರಡುತ್ತಿದ್ದರು.

ನನ್ನ ಕೇಸಿನ ವಿಚಾರಣೆ ಮುಗಿದು ತೀರ್ಪಿನ ದಿನ ಬರುವ ಹೊತ್ತಿಗೆ ಅವರಿಗೆ ಪಾರ್ಕಿನ್ಸನ್ ಆಗಿತ್ತು, ದೇಹ ಕೃಷವಾಗಿತ್ತು. ಆದರೂ ಕೋರ್ಟಿಗೆ ಬಂದು ಮತ್ತೊಮ್ಮೆ ಜಾಮೀನು ಧೃಡೀಕರಿಸಬೇಕಿತ್ತು. ಮಗ ವಿಷ್ಣುವಿಗೆ ಚಿಂತೆ. ಕೋರ್ಟಿನ ಮೆಟ್ಟಿಲು ಹತ್ತಿಸಿ ಕರೆತರುವುದು ಹೇಗೆ? ಜಡ್ಜ್ ಕೇಳುವ ಪ್ರಶ್ನೆಗೆ ಉತ್ತರಿಸುವಂತೆ ಮಾಡುವುದು ಹೇಗೆ? ಆಟೋದಲ್ಲಿ ಹುಶಾರಾಗಿ ಕರೆತಂದರು. ರಾಜಶೇಖರರ ದೇಹ ನಡುಗುತ್ತಿದ್ದರೂ ಮುಖ ಎಂದಿನಂತೆ ನಿಶ್ಚಲವಾಗಿತ್ತು.

ಜಡ್ಜ್ ಕೇಳಿದರು
“ಇವರ್ಯಾರು ಗೊತ್ತಾ?”
“ಗೊತ್ತು”.
“ಇವರು ನಿಮಗೆ ಏನಾಗಬೇಕು?”
“ನನ್ನ ಸ್ನೇಹಿತರು”
“ಇವರಿಗೆ ನೀವು ಶ್ಯೂರಿಟಿ ಕೊಡ್ತೀರಾ?”
“ಕೊಡ್ತೇನೆ”

ಕೇಸ್ ಖುಲಾಸ್ ಆಯಿತು. ನಾನು ಕಾನೂನಾತ್ಮಕವಾಗಿಯೂ ಬಿಡುಗಡೆಗೊಂಡೆ. ಎಂದಿನಂತೆ “ಬರ್ಲಾ…” ಎಂದು ವಿಷ್ಣು ಕೈ ಹಿಡಿದು ಹೊರಟರು.

ಇದನ್ನೂ ಓದಿ: ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಮತ್ತೆ ಕಂಡದ್ದು ಇತ್ತೀಚಿನ ಸಹಬಾಳ್ವೆ ಸಮಯದಲ್ಲೆ. ನಾನು, ಅಶೋಕ್, ದಿನಕರ ಬೇಂಗ್ರೆ ಮನೆಗೆ ಹೋದೆವು. ಗುರುಗಳು ಬದಲಾಗೇ ಇಲ್ಲ. ಮುಖದಲ್ಲಿ ಅದೇ ದೃಡತೆ, ಮಾತಿನಲ್ಲಿ ಅದೇ ಲವಲವಿಕೆ. ಭಾವನೆ ಕಾಣದ ಮುಖದಿಂದ ನಿಲ್ಲದ ನಗೆ ಚಟಾಕಿ. ಗೆಳೆಯರು‌ ಮನೆಗೆ ಬಂದಿದ್ದಾರೆ ಎಂದು ಇನ್ನಷ್ಟು ಹುರುಪು. ವಿಷ್ಣು ವಿಡಿಯೋ ಮಾಡತೊಡಗಿದರು. ಮಗನ ಕೆಣಕುವ ಪ್ರಶ್ನೆಗಳಿಗೆ ಅಪ್ಪನ ಖಚಿತತೆಯ ಉತ್ತರ.

“ಮತ್ತೆ ಏನ್ಸಮಾಚಾರ”
“ಮೇ 7 ಕ್ಕೆ ಕಾರ್ಯಕ್ರಮ”
“ಯಾವ ಕಾರ್ಯಕ್ರಮ?”
“ಕೋಮು ಸೌಹಾರ್ದದ್ದು”
“ನೀವು ಹೋಗ್ತೀರಾ?”
“ಹಾಂ ಹೋಗ್ತೇನೆ….ನಾನು ಹೋಗದಿದ್ದರೆ ಆಗಲ್ಲ”.

ಇದು ನಮ್ಮ ರಾಜಶೇಖರ್ ಸಾರ್…

ನನ್ನ ಜೀವನದಲ್ಲಿ ಅನಿರೀಕ್ಷಿತ ಆಪದ್ಬಾಂಧವರಾಗಿ ಬಂದ ಹಿರಿ ಜೀವ ಅದು. ಅವರ ಆತ್ಮೀಯತೆ, ಅಚಲತೆ, ಸರಳತೆ, ಸಹಜತೆ, ಕನಸು, ವಿಶ್ವಾಸ ಎಲ್ಲವೂ ಮರೆಯಲಾಗದಂಹವು. ಅಧ್ಯಾಯನ ಯೋಗ್ಯವಾದಂತಹವು. ನಮ್ಮ ಅರಿವಿಗೇ ಬರದಂತೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸುವಂತಹವು.

ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ಹಾಗಾಗಿಯೇ ನಾಡಿನ ಪಾಲಿಗಷ್ಟೇ ಅಲ್ಲ ನನ್ನ ಪಾಲಿಗೆ ರಾಜಶೇಖರರು ಅಜರಾಮರರು. ಅವರನ್ನು ಮರೆತೇನೆಂದರೂ ಮರೆಯಲು ಅಸಾಧ್ಯವಾದವರು.

ಉಡುಪಿಗೆ ಬಂದಾಗೆಲ್ಲಾ ಸಿಗ್ತೇನೆ ಸಾರ್…ಒಂದು ಗಳಿಗೆ ಸಿಕ್ಕು ಎಳ್ಳು ಪಾನಕ ಕುಡಿಸಿ ಸಾಕು.

ನಿಮ್ಮ ರುಣಿ
ನೂರ್ ಶ್ರೀಧರ್.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...