Homeಕರ್ನಾಟಕ2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದ್ದೇನು? ಉಳಿಸಿಕೊಂಡಿದ್ದೇನು? ಪಡೆದುಕೊಂಡಿದ್ದೇನು?

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದ್ದೇನು? ಉಳಿಸಿಕೊಂಡಿದ್ದೇನು? ಪಡೆದುಕೊಂಡಿದ್ದೇನು?

9 ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. 8 ಜಿಲ್ಲೆಗಳಲ್ಲಿ ಕೇವಲ ಒಂದು ಕ್ಷೇತ್ರವನ್ನು ಕಷ್ಟಪಟ್ಟು ಉಳಿಸಿಕೊಳ್ಳಲು ಸಾಧ್ಯವಾಗಿದೆ. 7 ಕ್ಷೇತ್ರಗಳಲ್ಲಿ ಎರಡು ಸೀಟುಗಳನ್ನು ಮಾತ್ರ ಗಳಿಸಿದೆ. ಅಂದರೆ 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಅದರ ಪ್ರದರ್ಶನ ಕಳಪೆಯಾಗಿದೆ.

- Advertisement -
- Advertisement -

ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಕರ್ನಾಟಕದ ಎಲ್ಲಾ ಪ್ರಾಂತ್ಯಗಳಲ್ಲೂ ಕಾಂಗ್ರೆಸ್ ಸೀಟು [136] ಮತ್ತು ಓಟು[ಶೇ. 42.9] ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರೆ, ಜೆಡಿಎಸ್ ಎರಡೂ ರೀತಿಯಲ್ಲಿ[19 ಮತ್ತು ಶೇ. 13.3] ಕುಸಿದಿದೆ. ಬಿಜೆಪಿ ಸೀಟುಗಳ ಲೆಕ್ಕದಲ್ಲಿ 104ರಿಂದ 66ಕ್ಕೆ ಕುಸಿದಿದ್ದರೂ, ಮತಗಳ ಸಂಖ್ಯಾಬಲವನ್ನು ಕಾಯ್ದುಕೊಂಡಿದೆ [ಶೇ. 36]. ಹಲವು ಪ್ರಾಂತ್ಯಗಳಲ್ಲಿ ಅದರ ಮತ ಪ್ರಮಾಣ ತಗ್ಗಿದ್ದರೆ, ಕೆಲವು ಪ್ರಾಂತ್ಯಗಳಲ್ಲಿ ಅದರ ಮತ ಪ್ರಮಾಣ ಹೆಚ್ಚಿದೆ. ಬಿಜೆಪಿಯ ಸೋಲುಗೆಲುವಿನ ಕುರಿತು ಭಿನ್ನ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ‘ಬಿಜೆಪಿ ನೆಲಕಚ್ಚಿದೆ’ ಎಂಬ ವಾದದಿಂದ ಹಿಡಿದು ಬಿಜೆಪಿಯ ‘ಕೋಮು ರಾಜಕಾರಣಕ್ಕೆ ಮುಕ್ಕಾಗಿಲ್ಲ’ ಎಂಬ ವಾದದ ತನಕ ಹಲವು ಅಭಿಪ್ರಾಯಗಳು ಪ್ರಗತಿಪರ ವಲಯದಲ್ಲೇ ಇವೆ. ಈ ವಿದ್ಯಮಾನವನ್ನು ಇನ್ನಷ್ಟು ಬಿಡಿಸಿ ನೋಡುವ ಅಗತ್ಯವಿದೆ.

ಬಿಜೆಪಿ ಕಳೆದುಕೊಂಡಿರುವುದೇನು?

  • ಚುನಾವಣೆಯಲ್ಲಿ ಬಿಜೆಪಿಯ ಅನೇಕ ಅಗ್ರನಾಯಕರು ಹೀನಾಯವಾಗಿ ಸೋತಿದ್ದಾರೆ. ಸಿ.ಟಿ. ರವಿ, ಸೋಮಣ್ಣ, ಆರ್. ಅಶೋಕ್ (ಒಂದು ಕ್ಷೇತ್ರದಲ್ಲಿ ಸೋಲು), ವಿಶ್ವೇಶ್ವರ ಕಾಗೇರಿ, ಮುರುಗೇಶ್ ನಿರಾಣಿ, ಹಾಲಪ್ಪ, ಶಂಕರ್ ಪಾಟೀಲ್, ಬಿ.ಸಿ. ಪಾಟೀಲ್, ಬಿಸಿ. ನಾಗೇಶ್, ಎಂಟಿಬಿ ನಾಗರಾಜ್, ಜೆ.ಸಿ. ಮಾಧವಸ್ವಾಮಿ, ಕೆ. ಸುಧಾಕರ್, ಬಿ. ಶ್ರೀರಾಮುಲು …. ಪಟ್ಟಿ ದೊಡ್ಡದಿದೆ.
  • 9 ಜಿಲ್ಲೆಗಳಲ್ಲಿ ಒಂದು ಕ್ಷೇತ್ರದಲ್ಲೂ ಬಿಜೆಪಿ ಗೆದ್ದಿಲ್ಲ. 8 ಜಿಲ್ಲೆಗಳಲ್ಲಿ ಕೇವಲ ಒಂದು ಕ್ಷೇತ್ರವನ್ನು ಕಷ್ಟಪಟ್ಟು ಉಳಿಸಿಕೊಳ್ಳಲು ಸಾಧ್ಯವಾಗಿದೆ. 7 ಕ್ಷೇತ್ರಗಳಲ್ಲಿ ಎರಡು ಸೀಟುಗಳನ್ನು ಮಾತ್ರ ಗಳಿಸಿದೆ. ಅಂದರೆ 31 ಜಿಲ್ಲೆಗಳ ಪೈಕಿ 24 ಜಿಲ್ಲೆಗಳಲ್ಲಿ ಅದರ ಪ್ರದರ್ಶನ ಕಳಪೆಯಾಗಿದೆ. ಅದರ ಭದ್ರ ಕೋಟೆಗಳಾಗಿದ್ದ ಚಿಕ್ಕಮಗಳೂರು, ಕೊಡಗು ಮತ್ತು ಬಳ್ಳಾರಿಗಳಲ್ಲಿ ಭಾರೀ ಸೋಲಿಗೆ ಬಿಜೆಪಿ ತುತ್ತಾಗಿದೆ.
  • 5 ಜಿಲ್ಲೆಗಳಲ್ಲಿ [ಸೀಟಿನ ಸಂಖ್ಯೆ ತಗ್ಗಿದ್ದರೂ] ಸಮಾಧಾನಕರ ಫಲಿತಾಂಶ ಪಡೆದುಕೊಂಡಿದೆ. ಬೆಳಗಾವಿಯಲ್ಲಿ [18ರ ಪೈಕಿ 7], ದಕ್ಷಿಣ ಕನ್ನಡದಲ್ಲಿ [8 ರ ಪೈಕಿ 6], ಶಿವಮೊಗ್ಗದಲ್ಲಿ [7ರ ಪೈಕಿ 3], ಬೀದರ್ [6ರ ಪೈಕಿ 3] ಮತ್ತು ಧಾರವಾಡದಲ್ಲಿ [7ರ ಪೈಕಿ 3]. ಉಡುಪಿ ಜಿಲ್ಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ [5ಕ್ಕೆ 5], ಬೆಂಗಳೂರಲ್ಲಿ ಮಾತ್ರ ಸೀಟಿನ ಸಂಖ್ಯೆ ಹೆಚ್ಚಿಸಿಕೊಂಡಿದೆ. [11 ರಿಂದ 17].
  • ರಾಜ್ಯದ 31 ಕ್ಷೇತ್ರಗಳಲ್ಲಿ ಬಿಜೆಪಿ ಅಬ್ಯಾರ್ಥಿಗಳು ಡಿಪಾಸಿಟ್ ಕಳೆದುಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನವರು ಹಳೆ ಮೈಸೂರು ಪ್ರಾಂತ್ಯಕ್ಕೆ ಸೇರಿದವರಾಗಿದ್ದಾರೆ.
  • ಕರ್ನಾಟಕವನ್ನು ಆರು ಪ್ರಾಂತ್ಯಗಳಾಗಿ ವಿಭಜಿಸಿ ನೋಡುವುದಾದರೆ ಮಧ್ಯ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಮತಗಳನ್ನು ಬಿಜೆಪಿ ಕಳೆದುಕೊಂಡಿದೆ [-7.3]. ಕರಾವಳಿ ಪ್ರದೇಶ [- 3.1], ಮುಂಬೈ ಕರ್ನಾಟಕ [-2.4] ಮತ್ತು ಕಲ್ಯಾಣ ಕರ್ನಾಟಕ [-1.8].
  • ಬೆಂಗಳೂರು ಹೊರತುಪಡಿಸಿದಂತೆ ಎಲ್ಲಾ ಪ್ರಾಂತ್ಯಗಳಲ್ಲೂ ಅದರ ಸೀಟಿನ ಸಂಖ್ಯೆ ಪ್ರಮಾಣ ಕಡಿಮೆಯಾಗಿದೆ. ಹಳೇ ಮೈಸೂರು – 9 ರಿಂದ 6, ಕರಾವಳಿ – 18 ರಿಂದ 13, ಮಧ್ಯ ಕರ್ನಾಟಕ – 24 ರಿಂದ 6, ಮುಂಬೈ ಕರ್ನಾಟಕ – 30 ರಿಂದ 16, ಕಲ್ಯಾಣ ಕರ್ನಾಟಕ -12 ರಿಂದ 9. ಬೆಂಗಳೂರಲ್ಲಿ ಮಾತ್ರ – 11 ರಿಂದ 17.

ಬಿಜೆಪಿ ಪಡೆದುಕೊಂಡಿರುವುದೇನು?

  • ಬಿಜೆಪಿಗೆ ಸೀಟು ಮತ್ತು ಓಟು ಎರಡರಲ್ಲೂ ಮುನ್ನಡೆ ಸಿಕ್ಕಿರುವ ಏಕೈಕ ಪ್ರದೇಶ ಬೆಂಗಳೂರು. ಬೆಂಗಳೂರಿನಲ್ಲಿ ಅದರ ಸೀಟುಗಳು 11ರಿಂದ 17ಕ್ಕೆ ಹೆಚ್ಚಾಗಿದ್ದರೆ, ಮತ ಪ್ರಮಾಣ ಶೇ. 35.8 ರಿಂದ 41.2 ಕ್ಕೆ ಏರಿಕೆಯಾಗಿದೆ. ಅಂದರೆ 5,78,170 ಹೆಚ್ಚು ಮತಗಳನ್ನು ಪಡೆದುಕೊಂಡಿದೆ.
  • ಹಳೇ ಮೈಸೂರು ಪ್ರಾಂತ್ಯದಲ್ಲಿ ಅದರ ಸೀಟಿನ ಸಂಖ್ಯೆ 9ರಿಂದ 6ಕ್ಕೆ ಇಳಿದಿದೆ. ಆದರೆ ಅದರ ಓಟಿನ ಪ್ರಮಾಣ 18.2 ರಿಂದ 21.4ಕ್ಕೆ ಹೆಚ್ಚಾಗಿದೆ. ಅಂದರೆ ಶೇ. 3.2 ಮತಗಳ ಹೆಚ್ಚಳವಾಗಿದೆ. ವಿಶೇಷವಾಗಿ ಶ್ರೀರಂಗಪಟ್ಟಣದಲ್ಲಿ ಅದು ಮತಗಳ ಸಂಖ್ಯೆಯನ್ನು 11,326 ರಿಂದ 42,306ಕ್ಕೆ ಹೆಚ್ಚಿಸಿಕೊಂಡಿದೆ. ಮದ್ದೂರು, ಚಾಮುಂಡೇಶ್ವರಿ, ವರುಣ ಕ್ಷೇತ್ರಗಳಲ್ಲೂ ಅದರ ಮತ ಪ್ರಮಾಣ ಹೆಚ್ಚಾಗಿದೆ.

ಬಿಜೆಪಿ ಉಳಿಸಿಕೊಂಡಿರುವುದೇನು?

  • ಕರಾವಳಿ ಭಾಗದಲ್ಲಿ, ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ 8ರಲ್ಲಿ 6 ಸೀಟುಗಳನ್ನು ಗೆದ್ದಿದ್ದರೆ, ಉಡುಪಿಯಲ್ಲಿ 5 ಕ್ಕೆ 5 ಉಳಿಸಿಕೊಂಡಿದೆ. ಒಟ್ಟಾರೆ ಕರಾವಳಿಯಲ್ಲಿ ಅದರ ಮತಪ್ರಮಾಣ 51 ರಿಂದ 46.3ಕ್ಕೆ ಇಳಿದಿದೆ. ಇದು ದೊಡ್ಡ ಇಳಿಕೆಯೆ. ಆದರೆ ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಎಷ್ಟು ದೊಡ್ಡ ಸಂಖ್ಯೆಯ ಮತಬ್ಯಾಂಕನ್ನು ಕ್ರಿಯೇಟ್ ಮಾಡಿಕೊಂಡಿದೆಯೆಂದರೆ ಅವರ ಭದ್ರಕೋಟೆಯನ್ನು ಮುರಿಯಲು ಇಷ್ಟು ಮತಪ್ರಮಾಣದ ತಗ್ಗುವಿಕೆಯೂ ಸಾಲದಾಗಿದೆ.
  • ಬಿಜೆಪಿ ಶಿವಮೊಗ್ಗ ಜಿಲ್ಲೆಯಲ್ಲಿ ಸಾಪೇಕ್ಷವಾಗಿ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ಟಿಕೆಟ್ ವಿವಾದಿತ ಶಿವಮೊಗ್ಗ ನಗರವನ್ನು ಉಳಿಸಿಕೊಂಡಿರುವುದಲ್ಲದೆ, ಶಿಕಾರಿಪುರ ಮತ್ತು ತೀರ್ಥಹಳ್ಳಿಗಳನ್ನು ಗೆದ್ದುಕೊಂಡಿದೆ.
  • ಇದೇ ರೀತಿ ಬೆಳಗಾವಿ ಜಿಲ್ಲೆ, ಧಾರವಾಡ ಹಾಗೂ ವಿಜಾಪುರ ನಗರದಲ್ಲಿ ತನ್ನ ಅಸ್ತಿತ್ವವನ್ನು ಒಂದು ಮಟ್ಟಕ್ಕೆ ಕಾಯ್ದುಕೊಂಡಿದೆ.

ಬಿಜೆಪಿ ಪಡೆದುಕೊಂಡ ಓಟುಗಳ ಸಂಖ್ಯೆ ನೋಡಲು ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಯ ಹಿನ್ನೆಡೆ, ಮುನ್ನಡೆ ಮತ್ತು ಯಥಾಸ್ಥಿತಿಗಳು ಏನನ್ನು ಸೂಚಿಸುತ್ತವೆ?

    • ಬಿಜೆಪಿಯ ಸೋಲನ್ನು “ದ್ವೇಷ ರಾಜಕಾರಣಕ್ಕಾಗಿರುವ ಹೀನಾಯ ಸೋಲು” ಎಂದು ಕೆಲವರು ವ್ಯಾಖ್ಯಾನಿಸಿದರೆ, ಬಿಜೆಪಿ ಓಟಿನ ಪ್ರಮಾಣ ಕಾಯ್ದುಕೊಂಡಿರುವುದನ್ನು ಹಾಗೂ ಕೆಲವು ಭಾಗಗಳಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಂಡಿರುವುದನ್ನು ಆಧರಿಸಿ “ಕೋಮುವಾದಕ್ಕೆ ಹಿನ್ನಡೆಯಾಗಿಲ್ಲ” ಎಂದು ಕೆಲವರು ವಾದಿಸಿದ್ದಾರೆ. ಯಾವುದು ಸತ್ಯ?
    • ಚುನಾವಣೆಗಳಿಗೆ ಒಂದು ವರ್ಷವಿರುವಾಗಲೇ ಗೆಲುವಿನ ಸ್ಟ್ರಾಟಜಿಯಾಗಿ ಸಂಘ ಪರಿವಾರವು ಸಾಲುಸಾಲು ಕೋಮು ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಿತು. ಹಿಜಾಬ್, ಹಲಾಲ್, ಜಟ್ಕಾ ಕಟ್, ದೇವಸ್ಥಾನಗಳ ಬಳಿ ಮುಸ್ಲಿಂ ವರ್ತಕರಿಗೆ ನಿಶೇಧ, ಹರ್ಷನ ಕೊಲೆ, ಶ್ರೀರಂಗಪಟ್ಟಣದಲ್ಲಿ ದರಿಯಾದೌಲತ್ ವಿವಾದ, ಉರಿಗೌಡ-ನಂಜೇಗೌಡ, ಇದ್ರೀಸ್ ಪಾಷ ಕೊಲೆ ಇತ್ಯಾದಿ. ಅಧಿಕಾರ ಬಳಸಿಕೊಂಡು ಕೋಮುನೀತಿಗಳನ್ನೂ ಜಾರಿಗೆ ತಂದಿತು. ಜಾನುವಾರು ಕಾಯ್ದೆ, ಮತಾಂತರ ಕಾಯ್ದೆ, ಪಠ್ಯಪುಸ್ತಕ ಪರಿಷ್ಕರಣೆ, ಮುಸ್ಲಿಮರಿಗೆ ಮೀಸಲಾತಿ ರದ್ದತಿ ಇತ್ಯಾದಿ. ಆದರೆ ಅವರ ಈ ಸ್ಟ್ರಾಟಜಿ ಬಹುಪಾಲು ಕೆಲಸ ಮಾಡಲಿಲ್ಲ. ಈ ದ್ವೇಷ ರಾಜಕಾರಣದ ಸ್ಟ್ರಾಟಜಿ ಆಧರಿಸಿ ಅವರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಒಟ್ಟಾರೆ ಅರ್ಥದಲ್ಲಿ ಕೋಮು ರಾಜಕಾರಣಕ್ಕೆ ಮುಖಭಂಗವಾಗಿರುವುದಂತೂ ವಾಸ್ತವ.

  • ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಮತ ಚಲಾಯಿಸಲು ದ್ವೇಷ ರಾಜಕಾರಣದ ವಿರುದ್ಧದ ಆಕ್ರೋಶ, ಚಡಪಡಿಕೆಗಳು ಪ್ರಧಾನ ಕಾರಣವಾಗಿವೆ. ಈ ಸಮುದಾಯಗಳು ತಮ್ಮೊಳಗೇ ಸಂಘಟಿತಗೊಂಡಿದ್ದಲ್ಲದೆ ‘ಎದ್ದೇಳು ಕರ್ನಾಟಕ’ ಹಾಗೂ ಇತರೆ ಸಾಮಾಜಿಕ ಆಂದೋಲನಗಳ ಸಹಯೋಗದಲ್ಲಿ ದ್ವೇಷ ರಾಜಕಾರಣಕ್ಕೆ ಸಂಘಟಿತ ಮತ್ತು ಪ್ರಜ್ಞಾವಂತಿಕೆಯ  ಪ್ರತಿರೋಧ ಒಡ್ಡಿದ್ದು ಫಲಿತಾಂಶದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ.
  • ದಲಿತ, ಹಿಂದುಳಿದ ಮತ್ತು ಲಿಂಗಾಯತ ಸಮುದಾಯದ ಒಂದು ವಿಭಾಗ ಸಹ ಈ ಬಾರಿ ಬಿಜೆಪಿ ವಿರುದ್ಧ ಮತ ಚಲಾಯಿಸಿದೆ. ಬಿಜೆಪಿಯ ಮನುವಾದಿ ನಡೆಗಳ ವಿರುದ್ಧ ಈ ಸಮುದಾಯಗಳಲ್ಲಿ ಮೂಡುತ್ತಿರುವ ಜಾಗೃತಿ ಮತ್ತು ಬೆಳೆಯುತ್ತಿರುವ ಸಂಘಟಿತ ಪ್ರಯತ್ನ ಮುಖ್ಯ ಕಾರಣಗಳಲ್ಲೊಂದಾಗಿದೆ. ಇದಲ್ಲದೆ ಮೀಸಲಾತಿ ಬಳಸಿ ಸಮುದಾಯಗಳನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಈ ಬಾರಿ ಅದೇ ಸಿಕ್ಕಿನಲ್ಲಿ ಸಿಲುಕಿ, ಬೇಕಾಬಿಟ್ಟಿ ಪರಿಹಾರ ನೀಡಲು ಹೋಗಿ, ಯಾರಿಗೂ ಸಮಾಧಾನ ನೀಡದೆ, ತಳ ಸಮುದಾಯದ ಗಮನಾರ್ಹ ವಿಭಾಗ ತಿರುಗಿಬಿದ್ದ ವಿದ್ಯಮಾನವೂ ನಡೆದಿದೆ. ಮತ್ತೊಂದು ಬೆಳವಣಿಗೆ ಎಂದರೆ ಬ್ರಾಹ್ಮಣೀಕರಣದ ವಿರುದ್ಧ ಲಿಂಗಾಯತ ಸಮುದಾಯದಲ್ಲಿ ಮೂಡುತ್ತಿರುವ ಜಾಗೃತಿ ಒಳಗಿಂದೊಳಗೇ ಕೆಲಸ ಮಾಡುತ್ತಿದ್ದರೆ, ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಪ್ರಚಾರವೂ ಸೇರಿ ಒಂದು ಪ್ರಮಾಣದ ಲಿಂಗಾಯತ ಓಟುಗಳು ಬಿಜೆಪಿಯಿಂದ ಕಾಂಗ್ರೆಸ್ಸಿನತ್ತ ಸರಿಯಲು ಕಾರಣವಾಗಿದೆ. ಈ ಎಲ್ಲಾ ರೀತಿಯಲ್ಲಿ ಜಾತಿಗಳೊಳಗಿನ ಜಾಗೃತಿಯೂ ಬಿಜೆಪಿಯನ್ನು ಕಾಡಿದೆ.
  • ಬೆಲೆ ಏರಿಕೆಯ ಬಿಸಿ ಈ ಬಾರಿ ಬಲವಾಗಿಯೇ ಜನರಿಗೆ ತಟ್ಟಿದೆ. ಬಿಜೆಪಿಯ ಭ್ರಹ್ಮಾಂಡ ಭ್ರಷ್ಟಾಚಾರ ಅದರ ಸಾಮಾಜಿಕ ಇಮೇಜನ್ನು ದೊಡ್ಡ ಮಟ್ಟಕ್ಕೆ ಹರಿದು ಹಾಕಿದೆ. ಬೆಲೆ ಏರಿಕೆ ಮತ್ತು ಭ್ರಷ್ಟಾಚಾರದ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದರಲ್ಲಿ, ಅವು ಜನರ ಅರಿವಿನ ಭಾಗ ಮಾಡುವುದರಲ್ಲಿ, ಸಾಮಾಜಿಕ ಅಭಿಯಾನಗಳು, ಜನಪರ ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಚಾರ ಯತ್ರಾಂಗದ ಪ್ರಯತ್ನಗಳ ಸಂಯುಕ್ತ ಪಾತ್ರವಿದೆ. ಕಾಲಿಗೆ ತಾಕುತ್ತಿದ್ದ ಬಿಸಿ ಮತ್ತು ತಲೆಗೆ ತಲುಪುತ್ತಿದ್ದ ಪ್ರಚಾರ ಎರಡೂ ಸೇರಿ ಅವು ಮತದಾರರ ಮೇಲೆ, ವಿಶೇಷವಾಗಿ ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಿವೆ.
  • ಇದೇ ಹೊತ್ತಿನಲ್ಲಿ ಕಾಂಗ್ರೆಸ್ ನೀಡಿದ ಕೊಡುಗೆ ಗ್ಯಾರಂಟಿಗಳು, ಬಳಲಿದವರಿಗೆ ನೀರು ಕೊಟ್ಟಂತಾಗಿದೆ. ಈ ಯೋಜನೆಗಳ ಉಪಯೋಗ ಮತ್ತು ಅಪಾಯಗಳ ತಾರ್ಕಿಕ ಚರ್ಚೆಗಳು ಒತ್ತಟ್ಟಿಗಿದ್ದರೆ, ಕಷ್ಟಕಾಲದಲ್ಲಿ ನೆರವಿಗೊಂದಿಷ್ಟು ಆಸರೆ ಸಿಗುತ್ತದೆ ಎಂಬುದೇ ಜನಸಾಮಾನ್ಯರ ಪಾಲಿಗೆ ದೊಡ್ಡ ಸಮಾಧಾನವಾಗಿತ್ತು, ಕಾಂಗ್ರೆಸ್ ಆಶಾದಾಯಕವಾಗಿ ಕಂಡಿತ್ತು.
  • ಇವಲ್ಲದೆ ಬಿಜೆಪಿ ಸರ್ಕಾರ ತಂದ ರೈತ ವಿರೋಧಿ ಕಾಯ್ದೆಗಳು, ಅದರ ಸುತ್ತ ನಡೆದ ಸಂಘರ್ಷ, ಕಾರ್ಮಿಕ ವಿರೋಧಿ ನೀತಿಗಳು, ಬೆಳೆಯುತ್ತಿರುವ ಕೆಲಸದ ಅಭದ್ರತೆ, ಬಿಡಿಬಿಡಿಯಾಗಿ ನಡೆದ ವಿವಿಧ ಶ್ರಮಿಕ ಸಮುದಾಯಗಳ ನೂರಾರು ಹೋರಾಟಗಳು, ಭೂಮಿ-ವಸತಿ-ನರೇಗಾ ಯೋಜನೆಗಳಿಗಾಗಿ ನಡೆದ ಬಡವರ ಹೋರಾಟಗಳು, ನ್ಯೂ ಪೆನ್ಷನ್ ಸ್ಕೀಂ ವಿರುದ್ಧ ನಡೆದ ಸರ್ಕಾರಿ ನೌಕರರ ಹೋರಾಟ ಇವೆಲ್ಲವೂ ಅಂತರ್ಗಾಮಿಯಾಗಿ ಕೆಲಸ ಮಾಡಿವೆ. ಈ ಚಳವಳಿಗಳ ಪ್ರಜ್ಞಾವಂತ ಶಕ್ತಿಗಳು ಮೂಡಿಸಿದ ಜನಾಭಿಪ್ರಾಯದ ಪಾತ್ರವೂ ಇದೆ.
  • ಸಾರಾಂಶೀಕರಿಸಿ ಹೇಳಬೇಕೆಂದರೆ ದ್ವೇಷರಾಜಕಾರಣದ ವಿರುದ್ಧ ಅಲ್ಪಸಂಖ್ಯಾತ ಸಮುದಾಯದಲ್ಲಿ ಮೂಡಿದ ಜಾಗೃತಿ ಮತ್ತು ಒಗ್ಗಟ್ಟು, ತಳ ಸಮುದಾಯಗಳಲ್ಲಿ ಬೆಳೆಯುತ್ತಿರುವ ಅಸಮಧಾನ, ಬೆಲೆ ಏರಿಕೆ – ಭ್ರಷ್ಟಾಚಾರದ ಬಿಸಿ, ಜನ ವಿರೋಧಿ ನೀತಿಗಳಿಂದಾಗಿ ವಿವಿಧ ಸಮುದಾಯಗಳೊಳಗೆ ಬೆಳೆದ ಪ್ರತಿರೋಧ, ಇವೆಲ್ಲವನ್ನೂ ಹರಳುಗಟ್ಟಿಸಲು ಸಾಮಾಜಿಕ ಸಂಘಟನೆಗಳಿಂದ, ಜನ ಮಾಧ್ಯಮಗಳಿಂದ ನಡೆದ ಕೃಷಿ, ಭಾರತ್ ಜೋಡೋ ಅಭಿಯಾನ, ಬೆಲೆ ಏರಿಕೆ – ಭ್ರಷ್ಟಾಚಾರದ ವಿರುದ್ಧ ಪ್ರಚಾರ ಹಾಗೂ ಗ್ಯಾರಂಟಿ ಭರವಸೆಗಳ ಮೂಲಕ ಕಾಂಗ್ರೆಸ್ ಮಾಡಿದ ಪ್ರಚಾರ ಎಲ್ಲವೂ ಸೇರಿ ಬಿಜೆಪಿಯನ್ನು ಸೋಲಿಸಬೇಕು ಎಂಬ ಮನೋಭಾವ ಮತದಾರರಲ್ಲಿ ಮೂಡಿತು. ಅದರ ಸಂಪೂರ್ಣ ಲಾಭ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ.

ಬಿಜೆಪಿಯ ಮತಪ್ರಮಾಣದ ಉಳಿಕೆ ಕೋಮು ರಾಜಕಾರಣದ ಯಶಸ್ಸಲ್ಲವೇ?

ಇಷ್ಟೆಲ್ಲಾ ಹೀನ ಸೋಲಿನ ನಂತರವೂ ಬಿಜೆಪಿ ತನ್ನ ಮತ ಪ್ರಮಾಣವನ್ನು [ಶೇ.36] ಕಾಯ್ದುಕೊಂಡಿದೆ. ಇದನ್ನು “ಕಾಂಗ್ರೆಸ್ ಗೆದ್ದಿದ್ದರೂ ಕೋಮುವಾದ ಸೋತಿಲ್ಲ” ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಸರಿಯೇ? ಇದು ಆಂಶಿಕವಾಗಿ ಸರಿ, ಬಹುಪಾಲು ತಪ್ಪು ವಿಶ್ಲೇಷಣೆ.

ಆಂಶಿಕ ಸರಿ ಯಾವುದು?

ಬಹುತೇಕ ಜನರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದರೂ ಅವೆಲ್ಲವೂ ದ್ವೇಷ ರಾಜಕಾರಣದ ವಿರುದ್ಧ ಚಲಾಯಿತಗೊಂಡ ಮತಗಳು ಎಂದು ನೋಡಲು ಬರುವುದಿಲ್ಲ. ಅಲ್ಪಸಂಖ್ಯಾತರು ಹಾಗೂ ಪ್ರಜ್ಞಾವಂತ ಜನ ವಿಭಾಗ ಪ್ರಜ್ಞಾಪೂರ್ವಕವಾಗಿಯೇ ಕೋಮು ರಾಜಕಾರಣದ ವಿರುದ್ಧ ಮತ ಚಲಾಯಿಸಿದ್ದಾರೆ.  ಇತರೆ ಬಹುಪಾಲು ಜನ ಸಮುದಾಯಗಳೂ ಈ ಬಾರಿ ದ್ವೇಷ ರಾಜಕಾರಣಕ್ಕೆ ಸೊಪ್ಪು ಹಾಕಿಲ್ಲ ಎಂಬುದು ವಾಸ್ತವ. ಆದರೆ ಅವೆಲ್ಲವೂ ದ್ವೇಷ ರಾಜಕಾರಣದ ವಿರುದ್ಧದ ಮತಗಳಲ್ಲ. ಕೋಮು ರಾಜಕಾರಣಕ್ಕಿಂತ ಅವರಿಗೆ ಬದುಕಿನ ಇತರೆ ಸಮಸ್ಯೆಗಳು ಮುಖ್ಯವಾದವು ಎಂಬುದು ಸಕರಾತ್ಮಕ ವಿಚಾರ. ಆದರೆ ದ್ವೇಷ ರಾಜಕಾರಣ ಬಿತ್ತಿರುವ ಪೂರ್ವಗ್ರಹಗಳು ಈ ಸಮುದಾಯಗಳಲ್ಲೂ ಹರಡಿಕೊಂಡಿದೆ. ಬಿಜೆಪಿಯಿಂದ ಈ ಬಾರಿ ಹಲವು ಬಲಪಂಥೀಯರು ಕಾಂಗ್ರೆಸ್ಸಿಗೆ ಬಂದಿದ್ದಾರೆ. ಅವರು ಒಂದಷ್ಟು ಬಲಪಂಥೀಯ ಮತಗಳನ್ನೂ ತಂದಿದ್ದಾರೆ. ಅಲ್ಲದೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಶಿವಮೊಗ್ಗ – ಬೆಳಗಾವಿ ದಕ್ಷಿಣ-ಹುಬ್ಬಳ್ಳಿ – ವಿಜಾಪುರ ನಗರದ ಕ್ಷೇತ್ರಗಳಲ್ಲಿನ ಫಲಿತಾಂಶದಲ್ಲಿ ಕೋಮು ಧೃವೀಕರಣ ಪ್ರಧಾನ ಪಾತ್ರವಹಿಸಿದೆ. ಇದೆಲ್ಲವೂ ದ್ವೇಷ ರಾಜಕಾರಣದ ವಿರುದ್ಧ ನಡೆಯಬೇಕಿರುವ ಅಪಾರ ಕೆಲಸದ ಮಹತ್ವವನ್ನು ಮತ್ತು ಕೋಮು ರಾಜಕಾರಣ ಅವಕಾಶ ನೋಡಿ ಹುಟ್ಟುಹಾಕುಬಹುದಾದ ದ್ವೇಶಾಗ್ನಿಯ ಅಪಾಯವನ್ನು ಸೂಚಿಸುತ್ತದೆ.

  • ಆದರೆ ರಾಜ್ಯದ ಬಹುಪಾಲು ಭಾಗಗಳಲ್ಲಿ ದ್ವೇಷ ರಾಜಕಾರಣದ ಕಾರ್ಡ್ ಚಲಾವಣೆಯಾಗಿಲ್ಲ ಮಾತ್ರವಲ್ಲ ಅದು ಮತ ಪ್ರಮಾಣ ಹೆಚ್ಚಿಸಿಕೊಂಡ ಪ್ರದೇಶಗಳಲ್ಲೂ ಅದಕ್ಕೆ ಪ್ರಧಾನ ಕಾರಣ ಕೋಮು ರಾಜಕಾರಣವಲ್ಲ.
  • ಬಿಜೆಪಿಗೆ ಅತಿಹೆಚ್ಚು ಮತಗಳಿಕೆಯಾಗಿರುವುದು ಬೆಂಗಳೂರು ನಗರದಲ್ಲಿ. ಅದಕ್ಕೆ ಶೇ. 5.4ರಷ್ಟು ಮತ ಗಳಿಕೆಯಾಗಿದೆ. 5 ಲಕ್ಷ 78 ಸಾವಿರ ಮತಗಳು ಹಾಗೂ 6 ಸೀಟುಗಳು ಹೆಚ್ಚಾಗಿವೆ. ಆದರೆ ಈ ಮತಗಳು ಅದಕ್ಕೆ ಬಂದಿರುವುದು ಕೋಮು ರಾಜಕಾರಣದಿಂದಲ್ಲ. ಬದಲಿಗೆ ಅದಕ್ಕೆ ನಾಲ್ಕು ಮುಖ್ಯ ಕಾರಣಗಳಿವೆ.
  1. ಆಪರೇಶನ್ ಕಮಲ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಮಾರಾಟವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್. ಟಿ. ಸೋಮಶೇಖರ್ (ಯಶವಂತಪುರ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿಲೇಔಟ್), ಮುನಿರತ್ನನಾಯ್ಡು(ರಾಜರಾಜೇಶ್ವರಿನಗರ) ಮತ್ತು ಬಿ. ಎ. ಬಸವರಾಜ್ (ಕೆ.ಆರ್.ಪುರ) ಬೆಂಗಳೂರಿನಲ್ಲಿ ಬಿಜೆಪಿ ಗಳಿಸಿದ ಅಧಿಕ ಮತಗಳ ಅರ್ಧದಷ್ಟನ್ನು ತಂದುಕೊಟ್ಟಿದ್ದಾರೆ. [ಈ ನಾಲ್ಕು ಕ್ಷೇತ್ರಗಳ ಮತ ಹೆಚ್ಚಳ – 2,41,804]. ಯಶವಂತಪುರ ಕ್ಷೇತ್ರವೊಂದನ್ನೇ ಒಂದು ಉದಾಹರಣೆಯಾಗಿ ತೆಗೆದುಕೊಂಡರೆ 2018ರ ಚುನಾವಣೆಯಲ್ಲಿ ಬಿಜೆಪಿ ಕೇವಲ 59,308 ಗಳಿಸಲು ಸಾಧ್ಯವಾಗಿತ್ತು. ಅಂದು ಕಾಂಗ್ರೆಸ್ಸಿನಿಂದ ಗೆದ್ದ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ 2019 ರಲ್ಲಿ ಬಿಜೆಪಿಗೆ ಜಿಗಿದು 2023ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಈ ಕ್ಷೇತ್ರದಿಂದ 1,69,149 ಮತಗಳನ್ನು ಬಿಜೆಪಿ ಗಳಿಸಿದೆ, ಅಂದರೆ 2018ಕ್ಕೂ ಮತ್ತು 2023ಕ್ಕೂ ಬಿಜೆಪಿಯ ಗಳಿಕೆ ಇದೊಂದೇ ಕ್ಷೇತ್ರದಲ್ಲಿ 1,04,891 ಮತಗಳ ಹೆಚ್ಚಳವಾಗಿದೆ. ಆಪರೇಷನ್ ಕಮಲದ ಕಾರಣಕ್ಕೆ ಬಿಜೆಪಿಗೆ ಬಂದ ಹಲವು ನಾಯಕರು ಚುನಾವಣೆಯಲ್ಲಿ ಸೋತಿದ್ದರೂ ಬಿಜೆಪಿಯ ಮತ ಹೆಚ್ಚಳಕ್ಕೆ ಕೊಡುಗೆ ನೀಡಿದ್ದಾರೆ. ಬಿಜೆಪಿಯ ಒಟ್ಟಾರೆ ಮತಗಳಿಕೆಯಲ್ಲಿ ಇವರು ತಂದುಕೊಟ್ಟಿರುವ ಹೆಚ್ಚುವರಿಯ ಪಾಲು 2.86%.
  2. ಜೆಡಿಎಸ್ ನ ಕುಸಿತ: ಬೆಂಗಳೂರಿನಲ್ಲಿ ಈ ಬಾರಿ ಜೆಡಿಎಸ್ ತೀವ್ರಗತಿಯಲ್ಲಿ ಕುಸಿಯಿತು. ಇದರ ಲಾಭ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಆಗಿದೆ. ಆದರೆ ಇಲ್ಲಿ ಹೆಚ್ಚಿನ ಲಾಭ ಬಿಜೆಪಿಗೆ ಆಗಿದೆ. ಸಂಪ್ರದಾಯಿಕವಾಗಿ ಕಾಂಗ್ರೆಸ್ ವಿರೋಧಿಯಾಗಿರುವ ಜೆಡಿಎಸ್ ಮತಗಳು ಬಿಜೆಪಿಗೆ ಶಿಫ್ಟ್ ಆಗಿವೆ.
  3. ಹಣ ಮತ್ತು ಅಧಿಕಾರದ ಬಲ: ಬೆಂಗಳೂರು ಸಾಮಾನ್ಯವಾಗಿ ಹಣ ಮತ್ತು ಅಧಿಕಾರ ಇದ್ದವರಿಗೆ ಹೆಚ್ಚಿನ ಒಲವು ತೋರುತ್ತದೆ. ಅಧಿಕಾರ ಕೇಂದ್ರ ಹತ್ತಿರವಿರುವುದು ಮತ್ತು ಸ್ಲಂ ಪ್ರದೇಶಗಳಲ್ಲಿ ಅಧಿಕಾರದ ಜಾಲ ಬಲವಾಗಿ ಬೇರುಬಿಟ್ಟುಕೊಂಡಿರುವುದು ಇದಕ್ಕೆ ಕಾರಣ.
  4. ಮೋದಿ ರ್ಯಾಲಿ: ಚುನಾವಣಾ ಪ್ರಚಾರದ ಕೊನೆ ಪರ್ವದಲ್ಲಿ ನಡೆಸಲಾಗದ ಮೋದಿ ಶೋ ಬಿಜೆಪಿ ಪಕ್ಷವನ್ನು ಒಂದು ಮಟ್ಟಕ್ಕೆ ಬೂಸ್ಟಪ್ ಮಾಡಿದೆ ಮತ್ತು ಒಂದಷ್ಟು ಪ್ರಭಾವವನ್ನೂ ಬೀರಿದೆ. ಸಾರಾಂಶದಲ್ಲಿ ಬಿಜೆಪಿಯ ಅತಿದೊಡ್ಡ ಗಳಿಕೆ ತಂದುಕೊಟ್ಟ ಬೆಂಗಳೂರಿನ ರಾಜಕಾರಣದಲ್ಲಿ ಕೆಲಸ ಮಾಡಿರುವುದು ಮುಖ್ಯವಾಗಿ ಮೇಲ್ಕಂಡ ನಾಲ್ಕು ಅಂಶಗಳೇ ಹೊರತು ಕೋಮು ಧೃವೀಕರಣವಲ್ಲ.
  • ಬಿಜೆಪಿಯ ಎರಡನೇ ಅತಿಹೆಚ್ಚಿನ ಗಳಿಕೆ ಬಂದಿರುವುದು ಮೈಸೂರು ಪ್ರಾಂತ್ಯದಲ್ಲಿ. ಒಕ್ಕಲಿಗ ಪ್ರಾಧಾನ್ಯತೆ ಇರುವ ಈ ಪ್ರದೇಶವನ್ನು ಕಬಳಿಸಲು ಬಿಜೆಪಿ ತನ್ನ ಅತಿಹೆಚ್ಚಿನ ಗಮನವನ್ನು ಇಲ್ಲಿ ಕೇಂದ್ರೀಕರಿಸಿದೆ. ಇಲ್ಲಿನ ಬಿಜೆಪಿ ನಾಯಕರಿಗೆ ಅಧಿಕಾರದಲ್ಲಿ ಹೆಚ್ಚಿನ ಮಹತ್ವ ನೀಡಿದೆ, ಮೋದಿ-ಶಾ ಭೇಟಿ, ಟಿಪ್ಪು ವಿವಾದ, ಉರಿಗೌಡ – ನಂಜೇಗೌಡ ಹುಸಿ ಪಾತ್ರಗಳ ಸೃಷ್ಟಿ, ಅಪಾರ ಹಣ ಹಂಚಿಕೆ ಎಲ್ಲಾ ತಂತ್ರಗಳನ್ನೂ ಬಳಸಿದೆ. ಇಷ್ಟೆಲ್ಲಾ ಆದರೂ ಅದು ಸೀಟಿನ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳಲಿಲ್ಲ, ಬದಲಿಗೆ ಕಳೆದುಕೊಂಡಿದೆ. ಮತ ಪ್ರಮಾಣವನ್ನು ಮಾತ್ರ ಶೇ.3.2ರಷ್ಟು ಗಳಿಸಿಕೊಂಡಿದೆ. ಆದರೆ ಇದಕ್ಕೂ ಪ್ರಧಾನ ಕಾರಣ ಅದು ಬಿತ್ತಲು ಬಯಸಿದ ಕೋಮು ರಾಜಕಾರಣವಲ್ಲ. ಇಲ್ಲಿನ ಮತಗಳಿಕೆಗೆ ಮುಖ್ಯ ಕಾರಣ ಜೆಡಿಎಸ್ ಕುಸಿದಿರುವುದು. ಹಾಗೆ ನೋಡಬೇಕೆಂದರೆ ಈ ಪ್ರದೇಶದಲ್ಲಿ ಇದರ ಹೆಚ್ಚಿನ ಲಾಭ ಆಗಿರುವುದು ಬಿಜೆಪಿಗಿಂತ ಕಾಂಗ್ರೆಸ್ಸಿಗೆ. ಅದು ತನ್ನ ಸೀಟುಗಳನ್ನು 16 ರಿಂದ 30ಕ್ಕೆ ಹೆಚ್ಚಿಸಿಕೊಂಡಿದ್ದಲ್ಲದೆ ಶೇ. 5.8ರಷ್ಟು ಮತ ಪ್ರಮಾಣವನ್ನು ಹಿಗ್ಗಿಸಿಕೊಂಡಿದೆ. ಜೆಡಿಎಸ್ ಭದ್ರಕೋಟೆ ಛಿದ್ರಗೊಂಡು ಅದರ ಸೀಟುಗಳು 24 ರಿಂದ 13ಕ್ಕೆ ಇಳಿದಿದ್ದರೆ, ಅದರ ಓಟುಗಳು ಶೇ.9 ರಷ್ಟು ಕುಸಿದಿವೆ. ಇದರ ಹೆಚ್ಚಿನ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೆ, ಬಿಜೆಪಿಗೂ ಒಂದಷ್ಟು ಲಾಭವಾಗಿದೆ. ಈ ಕಾರಣವಲ್ಲದೆ, ಸುಮಲತಾ – ದರ್ಶನ್ ಅಂತಹವರು ಬಿಜೆಪಿಗೆ ಸಮೀಪವಾಗಿದ್ದು, ಬಿಜೆಪಿ ಈ ಬಾರಿ ಅಪಾರ ಹಣ ಸುರಿದು ಹಲವು ಸಣ್ಣ ನಾಯಕರನ್ನು ಖರೀದಿಸಿದ್ದು ಅದಕ್ಕೆ ಮತಗಳಿಕೆಯನ್ನು ತಂದುಕೊಟ್ಟಿದೆ. ಶ್ರೀರಂಗಪಟ್ಟಣದಲ್ಲಿ ಅದರ ಮತಗಳಿಕೆಯಲ್ಲೂ ಈ ಪಾತ್ರಗಳಿವೆ. ಅಲ್ಲದೆ ಅಲ್ಲಿ ಅವರು ಫೋಕಸ್ ಮಾಡಿ ಬೆಳೆಸಲು ಪ್ರಯತ್ನಿಸಿದ ಕೋಮು ರಾಜಕಾರಣದ್ದೂ ಒಂದು ಪಾತ್ರವಿದೆ. ಆದರೆ ಅದೇ ನಿರ್ಣಾಯಕವಲ್ಲ. ಇನ್ನು ಮೇಲುಕೋಟೆಯಲ್ಲಿ 4,000 ಓಟು ಹೆಚ್ಚಳವನ್ನೂ ಒಂದು ರೆಫರೆನ್ಸ್ ಪಾಯಿಂಟ್ ಆಗಿ ಕೊಡುವುದು ಬಾಲಿಶತನವಾಗುತ್ತದೆ.
  • ವರುಣ ಕ್ಷೇತ್ರದ ಸುತ್ತಮುತ್ತ ಬಿಜೆಪಿಯ ಮತ ಪ್ರಮಾಣ ಹೆಚ್ಚಾಗಲೂ ಮತ್ತೊಂದು ಕಾರಣವೂ ಇದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಇಡೀ ಬಿಜೆಪಿ ಯಂತ್ರಾಂಗ ವರುಣಾ ಕ್ಷೇತ್ರವನ್ನು ಕೇಂದ್ರೀಕರಿಸಿ ಸುರಿದ ಹಣ, ಮಾಡಿದ ಕೆಲಸದ ಪ್ರಭಾವ ಅದರ ಸುತ್ತಮುತ್ತಲ ಕ್ಷೇತ್ರಗಳ ಮೇಲೂ ಇದೆ. ವರುಣ ಒಳಗೊಂಡಂತೆ ಸುತ್ತಲೆ ಕ್ಷೇತ್ರಗಳಲ್ಲಿ ಅದರ ಮತಗಳಿಕೆಯಾಗಿದೆ. ಆದರೂ ಬಿಜೆಪಿತನ್ನಎಲ್ಲಾಶಕ್ತಿ ಪ್ರಯೋಗಿಸಿದ ನಂತರವೂ ಮೈಸೂರು ಮತ್ತು ಮಂಡ್ಯದಲ್ಲಿ 18 ಸ್ಥಾನಗಳಲ್ಲಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಅದಕ್ಕೆ ಸಾಧ್ಯವಾಗಿದೆ. 5 ಸ್ಥಾನಗಳಲ್ಲಿ 2 ನೇ ಸ್ಥಾನ ಮತ್ತು 12 ಸ್ಥಾನಗಳಲ್ಲಿಅದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿತು.
  • ಇನ್ನು ಅಲ್ಲಲ್ಲಿ ಬಿಜೆಪಿ ಓಟು ಹೆಚ್ಚಿಸಿಕೊಂಡಿರುವ ಪ್ರದೇಶಗಳಲ್ಲೂ ಕೋಮು ರಾಜಕಾರಣ ಮುಖ್ಯ ಕಾರಣವಲ್ಲ. ಭದ್ರಾವತಿಯಲ್ಲಿ ಜಾತಿ ರಾಜಕಾರಣ ಕೆಲಸ ಮಾಡಿದರೆ, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ವ್ಯಕ್ತಿ ರಾಜಕಾರಣ ಕೆಲಸ ಮಾಡಿದೆ. ವಿಜಯಪುರದಲ್ಲಿ ಯತ್ನಾಳ್ ಮತ ಪ್ರಮಾಣ ಹೆಚ್ಚಿಸಿಕೊಂಡಿರುವುದೂ ಸಹ ಮತ ವಂಚನೆಯ ಮೂಲಕ [ಬೇರೆ ಕ್ಷೇತ್ರಗಳ 17 ಸಾವಿರಕ್ಕಿಂತ ಹೆಚ್ಚಿನ ಮತದಾರರಿಗೆ ಈ ಕ್ಷೇತ್ರದಲ್ಲಿ ಖೋಟಾ ಮತ ಪತ್ರ ಮಾಡಿಸಿ ಮತ ಹಾಕಸಿರುವ ಪುರಾವೆ ದೊರಕಿದೆ].
  • ಸಾರಾಂಶದಲ್ಲಿ ಎರಡು ಜಿಲ್ಲೆಗಳಲ್ಲಿ ಹಾಗೂ 4 ಕ್ಷೇತ್ರಗಳಲ್ಲಿನ ಬಿಜೆಪಿ ಗೆಲುವಲ್ಲಿ ಕೋಮು ಧೃವೀಕರಣ ಪ್ರಧಾನ ಪಾತ್ರವಹಿಸಿದೆ ಮತ್ತು ಕೋಮು ಪೂರ್ವಾಗ್ರಹದ ವಿಷ ಅಂತರ್ಗಾಮಿಯಾಗಿ ಉಳಿದುಕೊಂಡಿದೆ. ಆದರೆ ಅದು ಕೆಲವು ಕಡೆ ಹೆಚ್ಚಿಸಿಕೊಂಡಿರುವುದಾಗಲೀ, ಒಟ್ಟಾರೆ ಮತ ಪ್ರಮಾಣವನ್ನು ಶೇ.36ರಷ್ಟು ಉಳಿಸಿಕೊಂಡಿರುವುದಾಗಲೀ ಕೋಮು ರಾಜಕಾರಣದಿಂದ ಅಲ್ಲ.

ಈ ಚುನಾಣಾ ಫಲಿತಾಂಶದಲ್ಲಿ ಸಂತಸಪಡಲಿಕ್ಕೇನಿದೆ?

ಬಹಳ ಬಹಳ ಇದೆ. ಕರ್ನಾಟಕ ಬಹಳ ಯೋಚಿತ ಮತ್ತು ಯೋಜಿತ ಕೆಲಸದ ಮೂಲಕ ದ್ವೇಷ ರಾಜಕಾರಣಕ್ಕೆ ಬ್ರೇಕ್ ಹಾಕಿದೆ, ಕೋಮುವಾದಿಗಳನ್ನು ಅದಿಕಾರದಿಂದ ಕೆಳಗಿಳಿಸಿದೆ. ಕೋಮು ರಾಜಕಾರಣ ಬೆಳೆಯಲು, ಬೆಳೆಸಲು ಅವಕಾಶ ಕೊಡದೆ ಅದನ್ನು ನಿಸ್ತೇಜಗೊಳಿಸುವ ನೆರೇಟಿವ್ ರೂಪಿಸುವುದರಲ್ಲಿ, ಜನರ ನಿಜವಾದ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದರಲ್ಲಿ, ಜನ ವಿರೋಧಿ ಕಾಯ್ದೆಗಳ ಹಿಂದಿರುವ ಬಿಜೆಪಿಯನ್ನು ಜನ ಹೋರಾಟಗಳ ಮೂಲಕ ಬಯಲುಗೊಳಿಸುವುದರಲ್ಲಿ, ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ಒಗ್ಗೂಡಿಸುವುದರಲ್ಲಿ ಸಾಮಾಜಿಕ ಶಕ್ತಿಗಳು ಬಹುಮುಖ್ಯ ಪಾತ್ರ ನಿರ್ವಹಿಸಿವೆ. ಕಾಂಗ್ರೆಸ್ ಸಹ ಬಹುದಿನಗಳ ನಂತರ ಇದ್ದಿದ್ದರಲ್ಲಿ ವಿವೇಕಯುತವಾಗಿ [ಹಲವು ತಪ್ಪುಗಳನ್ನೂ ಈ ಬಾರಿಯೂ ಮಾಡಿದ್ದರೂ] ನಡೆದುಕೊಂಡಿದೆ. ಇದೆಲ್ಲದರ ಪರಿಣಾಮವಾಗಿ ಸರ್ವಾಧಿಕಾರಿ ಶಕ್ತಿಗಳಿಗೆ ಸೋಲಾಗಿದೆ. ಜನಸಾಮಾನ್ಯರಲ್ಲಿ, ಹೋರಾಟನಿರತ ಶಕ್ತಿಗಳಲ್ಲಿ ಮತ್ತು ಪ್ರಜ್ಞಾವಂತರಲ್ಲಿ ದೊಡ್ಡ ನಿರಾಳತೆಯ ಭಾವ ಮೂಡಿದೆ. ಸ್ನೇಹಿತರೊಬ್ಬರು ಹೇಳಿದಂತೆ “ಗಾಳಿಯಲ್ಲಿ ಆಕ್ಸಿಜನ್ ಹೆಚ್ಚಾಗಿದೆ”. ಇದೊಂದು ಅನೇಕ ಶಕ್ತಿಗಳ ಹಲವು ವರ್ಷಗಳ ಪ್ರಜ್ಞಾಪೂರ್ವಕ ಕ್ರಿಯೆಯ ಫಲ. ಇದನ್ನು ಸಂತಸಿಸಲೇಬೇಕು. ಆದರೆ ಮೈಮರೆಯಬಾರದು ಅಷ್ಟೆ. ಕೋಮುವಾದಿ ಶಕ್ತಿಗಳಿಗೆ ಈ ಚುನಾವಣೆಯಲ್ಲಿ ಖಂಡಿತ ಹಿನ್ನೆಡೆ ಆಗಿದೆ, ಆದರೆ ಕೋಮುವಾದದ ಪ್ರಭಾವ ಕಾಣೆಯಾಗಿಲ್ಲ, ಅದರ ಅಪಾಯ ತಪ್ಪಿಲ್ಲ. ಅದು ಇನ್ನಷ್ಟು ಉಗ್ರ ರೂಪದಲ್ಲಿ ಏಳುವ ಸಾಧ್ಯತೆ ಇದೆ. ಅದಕ್ಕೆಲ್ಲಾ ಪ್ರಯತ್ನವನ್ನು ಆ ಶಕ್ತಿಗಳು ಮಾಡುತ್ತವೆ. ಕಾಂಗ್ರೆಸ್ ಅದಕ್ಕ ಅವಕಾಶ ನೀಡುವ ಸಾಧ್ಯತೆಗಳೂ ಇವೆ.

ಆದ ಸಾಧನೆಯನ್ನು ಸಂತಸಿಸಬೇಕು, ಅದರ ಸಕಾರಾತ್ಮಕ ಪಾಠಗಳನ್ನು ಹೆಕ್ಕಿಕೊಳ್ಳಬೇಕು, ಭ್ರಮೆಗಳಿಗೆ ಮತ್ತು ಆಮಿಷಗಳಿಗೆ ತುತ್ತಾಗದಂತೆ ಎಚ್ಚರಿಕೆವಹಿಸಬೇಕು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮಾಡಬಹುದಾದ ತಪ್ಪುಗಳ ವಿರುದ್ಧ ದಿಟ್ಟವಾಗಿ ದನಿ ಎತ್ತಬೇಕು ಹಾಗೂ ಬಿಜೆಪಿಯ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು. ಈ ನಿಟ್ಟಿನಲ್ಲಿ ಜನರನ್ನು ಸಂಸಿದ್ಧಗೊಳಿಸಲು ಸಾಮಾಜಿಕ ಶಕ್ತಿಗಳು ಹೊಸ ಮಜಲಿನ ಕೆಲಸಕ್ಕೆ ಮುಂದಾಗಬೇಕು.

  • ನೂರ್ ಶ್ರೀಧರ್ ಮತ್ತು ಭರತ್ ಹೆಬ್ಬಾಳ್

ನೂರ್ ಶ್ರೀಧರ್
ಸಾಮಾಜಿಕ ಕಾರ್ಯಕರ್ತರು, ಕರ್ನಾಟಕ ಜನಶಕ್ತಿಯ ಅಧ್ಯಕ್ಷರು ಮತ್ತು ಎದ್ದೇಳು ಕರ್ನಾಟಕ ಅಭಿಯಾನದ ಮುಖಂಡರು.

ಭರತ್ ಹೆಬ್ಬಾಳ್
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.

ಇದನ್ನೂ ಓದಿ; ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...