Homeಕರ್ನಾಟಕಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

ಹಿರಿಯ ಚಿಂತಕ, ಜನಪರ ಹೋರಾಟಗಾರ ಜಿ. ರಾಜಶೇಖರ (75) ನಿಧನ

- Advertisement -
- Advertisement -

ಹಿರಿಯ ಚಿಂತಕ, ವಿಮರ್ಶ, ಲೇಖಕ ಹಾಗೂ ಜನಪರ ಹೋರಾಟಗಾರ ಜಿ.ರಾಜಶೇಖರ ಅವರು ಬುಧವಾರ ರಾತ್ರಿ 11:15 ಕ್ಕೆ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಸಂಗಾತಿಗಳನ್ನು ಅಗಲಿದ್ದಾರೆ.

2019 ರಿಂದ ಪ್ರೋಗೆಸಿವ್ ಸುಪ್ರ ನ್ಯೂಕ್ಲಿಯರ್‌‌ ಪಾಲ್ಸಿ ಎಂಬ ಅಪರೂಪದ ಪಾರ್ಕಿನ್‌ಸನ್ಸ್‌ ಕಾಯಿಲೆಯಿಂದ ಬಳಲುತ್ತಿದ್ದ ಜಿ. ರಾಜಶೇಖರ ಅವರನ್ನು, ಹಲವು ದಿನಗಳ ಹಿಂದೆ ಶ್ವಾಸಕೋಶದ ಸಮಸ್ಯೆಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿಯನ್ನು ಉಡುಪಿಯಲ್ಲಿ ಪಡೆದರು. ಆರಂಭದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು.

ಜಿ. ರಾಜಶೇಖರ ಅವರು ನೇರ ನಿಷ್ಠುರ ವಿಮರ್ಶಕರಾಗಿದ್ದರು. ಬಹುವಚನ ಭಾರತ ಅವರ ಪ್ರಮುಖ ಕೃತಿಯಾಗಿದ್ದು, ಈ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ 2015ರ ಸಾಲಿನಲ್ಲಿ ಪ್ರಕಟಿಸಿದ್ದ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ಕಾಗೋಡು ಸತ್ಯಾಗ್ರಹ, ಪರಿಸರ ಮತ್ತು ಸಮಾಜವಾದ, ಬರ್ಟೊಲ್ಟ್ ಬ್ರೆಕ್ಟ್ ಪರಿಚಯ, ದಾರು ಪ್ರತಿಮ ನ ಪೂಜಿವೇ (ಅನುವಾದ), ಕೋಮುವಾದದ ಕರಾಳ ಮುಖಗಳು, ಹರ್ಷಮಂದರ್ ಬರಹಗಳು ಅವರ ಇತರ ಪ್ರಮುಖ ಕೃತಿಗಳಾಗಿವೆ.

ದಲಿತ, ಅಲ್ಪಸಂಖ್ಯಾತ ಹಾಗೂ ಶೋಷಿತ ವರ್ಗಗಳ ಹಕ್ಕುಗಳಿಗಾಗಿ ನಡೆಯುವ ಎಲ್ಲಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ರಾಜ್ಯದ ಪ್ರಮುಖ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಜನಪರ ಚಳವಳಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಕರಾವಳಿಯಲ್ಲಿ ಕೋಮುವಾದದ ವಿರುದ್ಧ ಅವರದ್ದು ಗಟ್ಟಿ ಧ್ವನಿಯಾಗಿತ್ತು. ಕೋಮುಗಲಭೆಗಳು ನಡೆದ ಪ್ರದೇಶಕ್ಕೆ ತೆರಳಿ ಸತ್ಯಶೋಧನ ವರದಿಯನ್ನು ಮಾಡುತ್ತಿದ್ದರು.

ಇದನ್ನೂ ಓದಿ: ಗಾಂಧೀಜಿಯವರ ಪುಣ್ಯ ಸ್ಮರಣೆ : ಬಾಬಾ ಸಾಹೇಬರಿಗೆ ಕೃತಜ್ಞತೆ..- ಜಿ.ರಾಜಶೇಖರ್‌

ಜಿ.ರಾಜಶೇಖರ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 8 ಗಂಟೆಯಿಂದ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣ ಸಮೀಪದಲ್ಲಿರುವ ಸಂಬಂಧಿಕರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಅಂತ್ಯಕ್ರಿಯೆಯು ಹತ್ತು ಗಂಟೆಗೆ ಉಡುಪಿಯ ಬೀಡಿನಗುಡ್ಡೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಜಿ. ರಾಜಶೇಖರ ಅವರ ನಿಧನಕ್ಕೆ ಹಲವಾರು ಜನರು ಸಂತಾಪ ವ್ಯಕ್ತಪಡಿಸಿದ್ದಾರೆ. ಲೇಖಕ, ಪ್ರಕಾಶಕ ಬಸೂ ಅವರು, “ಕರಾವಳಿಯಲ್ಲಿ ಅನ್ಯಾಯಗಳು ನಡೆದಾಗ ಸದಾ ಪ್ರತಿಭಟಿಸಿದ ಜಾಗೃತ ಕಿಡಿಯೊಂದು ಈಗ ಅದನ್ನು ನಮ್ಮೆದೆಗೆ ದಾಟಿಸಿ ಶಾಂತವಾಗಿದೆ.. ಪ್ರೀತಿಯ ನಮನಗಳು. ಜಿ. ರಾಜಶೇಖರ ಅವರು ಸದಾ ನಮ್ಮೊಡನೆ ಇರುತ್ತಾರೆ ಜಾಗೃತ ಕಿಡಿಯೊಂದು ನಮ್ಮೆದೆಗಳಲ್ಲಿ ನಿಗಿನಿಗಿಸುವ ಹೊತ್ತಿನಷ್ಟು” ಎಂದು ಹೇಳಿದ್ದಾರೆ.

ಲೇಖಕರಾದ ಶ್ರೀಪಾದ್ ಭಟ್‌ ಅವರು, “ಇಂದು ಜಿ. ರಾಜಶೇಖರ ನಮ್ಮನ್ನು ಅಗಲಿದ್ದಾರೆ. ಅವರ ದೀರ್ಘಕಾಲದ ಅನಾರೋಗ್ಯವನ್ನು ಕಂಡಾಗ ಇದು ಅನಿವಾರ್ಯವಾಗಿತ್ತು. ‘ಹೌದುರೀ ನಾನು ಹೀಗೆಯೇ ಜೀವಿಸಿದ್ದೆ ನೋಡಿ’ ಎಂದು ಎಗ್ಗಿಲ್ಲದೆ ಹೇಳಿಕೊಳ್ಳಬಹುದಂತೆ ಬದುಕಿದ್ದರು ಜಿ.ಆರ್. ಆದರೆ ಅವರು ಬದುಕು ಕೇವಲ ಬದುಕಾಗಿರಲಿಲ್ಲ. ಸಮಾಜದ ತಳಮಳವನ್ನು ತನ್ನೊಳಗಿನ ಅಸ್ವಸ್ಥತೆ ಎಂದು ಸ್ಪಂದಿಸುತ್ತಿದ್ದರು. ತನ್ನ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಮಾಜದಲ್ಲಿನ ಸಾಮರಸ್ಯ ತುಂಬಾ ಅಗತ್ಯ ಎಂದು ಜಿ.ಆರ್ ನಂಬಿದ್ದರು. ಇಂದು ಫ್ಯಾಸಿಸಂ ಪ್ರಭುತ್ವದ ಸಂದರ್ಭದಲ್ಲಿ ಕಂಡೂ ಕಾಣದಂತೆ, ನನ್ನ ಕಡೆಗೆ ನೋಡಬೇಡಿ ಮಾರಾಯ್ರೆ ಎಂಬಂತೆ ಆತ್ಮವಂಚನೆಯಲ್ಲಿ ಬದುಕುತ್ತಿರುವ ಅನೇಕ ಲೇಖಕರನ್ನು ನೋಡಿದಾಗ ಜಿ. ಆರ್. ಮಹತ್ವ ಅರ್ಥವಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಜಾಪ್ರಭುತ್ವದ ಮುಖವಾಡ ಹಾಕುವಲ್ಲಿ ಸಫಲವಾದ ಜೀವವಿರೋಧಿ ಮೋದಿ ಸರ್ಕಾರ: ಜಿ.ರಾಜಶೇಖರ್

ಲೇಖಕರಾದ ಶ್ರೀನಿವಾಸ್ ಕಾರ್ಕಳ ಅವರು, “ಜಿ ರಾಜಶೇಖರ್ ಓರ್ವ ನಿರ್ಭೀತ ಸಾರ್ವಜನಿಕ ಬುದ್ಧಿಜೀವಿ, ನಾಡಿನ ಸಾಕ್ಷಿಪ್ರಜ್ಞೆ. ಪ್ರಖರ ಚಿಂತಕ, ಲೇಖಕ. ರಾಜ್ಯದಲ್ಲಿ, ಅದರಲ್ಲೂ ಮುಖ್ಯವಾಗಿ ಕರಾವಳಿಯಲ್ಲಿ ಕೊನೆಯುಸಿರಿನ ತನಕವೂ ಕೋಮುವಾದದ ವಿರುದ್ಧ ಹೋರಾಡಿದವರು, ಸೌಹಾರ್ದ, ಸಹಬಾಳ್ವೆಯ ಸಮಾಜವನ್ನು ಕನಸಿದವರು, ಅದರ ನಿರ್ಮಾಣಕ್ಕಾಗಿ ತುಡಿದವರು, ದುಡಿದವರು. ಉಡುಪಿಯಲ್ಲಿ ಕೋಮುವಾದಿಗಳ ಆಟಾಟೋಪದ ವಿರುದ್ಧದ ಪ್ರತಿಭಟನೆ ದಾಖಲಿಸಲು ಸುರಿವ ಜಡಿ ಮಳೆಯಲ್ಲೂ ನಾಲ್ಕೇ ನಾಲ್ಕು ಜನ ಭಿತ್ತಿ ಪತ್ರ ಹಿಡಿದು ನಿಲ್ಲುತ್ತಿದ್ದರೂ ಅದರಲ್ಲಿ ಒಬ್ಬರು ರಾಜಶೇಖರ್ ಅವರಾಗಿರುತ್ತಿದ್ದರು. ಅವರ ನಿರ್ಗಮನ ದೊಡ್ಡ ನಷ್ಟ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರ ಮುನೀರ್‌ ಕಾಟಿಪಳ್ಳ ಅವರು, “ವಿದಾಯದ ಹೊತ್ತಲ್ಲ ಇದು. ಮತ್ತಷ್ಟು ಜಗಳ, ವಾಗ್ವಾದ, ಪ್ರೀತಿ ಎಲ್ಲವೂ ಬಾಕಿಯಿತ್ತು. ಸಮ ಸಮಾಜದ ಕಡೆಗಿನ ಹೋರಾಟ ಮುಂದುವರಿಯುತ್ತದೆ. ಹೋಗಿ ಬನ್ನಿ ಕಾಮ್ರೇಡ್, ಲಾಲ್ ಸಲಾಂ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಿ ರಾಜಶೇಖರ್‌ರವರಿಗೆ ಎಪ್ಪತ್ತೈದು; ರಾಜಶೇಖರರ ‘ತಿರುಕನ ಕನಸು’

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, “ಕನ್ನಡದ ಹಿರಿಯ ವಿಮರ್ಶಕ, ನೇರ-ನಿಷ್ಠುರ ನಡವಳಿಕೆಯ ಪ್ರಖರ ಚಿಂತಕ ಮತ್ತು ಸೌಹಾರ್ದ ಬದುಕಿನ ಹೋರಾಟಗಾರ ಜಿ.ರಾಜಶೇಖರ್ ಅಗಲಿಕೆ ನಮ್ಮೆಲ್ಲರ ಪಾಲಿಗೆ ತುಂಬಿಕೊಳ್ಳಲಾಗದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...