Homeಕರ್ನಾಟಕಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

ಅಂಬೇಡ್ಕರ್‌‌ ವಿಚಾರಧಾರೆಯೇ ಪ್ರೇರಣೆ: ಮೈಸೂರು ವಿವಿಯಲ್ಲಿ ಪಿಎಚ್‌.ಡಿ ಮಾಡುತ್ತಿರುವ ಟ್ರಾನ್ಸ್‌ಜೆಂಡರ್‌ ಮಹಿಳೆಯ ಮನದಾಳ

ಮೈಸೂರು ವಿವಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ‘ದೀಪು ಬುದ್ಧೆ’ ಪಿಎಚ್‌ಡಿ ಮಾಡುತ್ತಿದ್ದಾರೆ. ಅವರು ತಮ್ಮ ಜೀವನದ ಹೋರಾಟವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

- Advertisement -
- Advertisement -

“ನಾನು ಲಿಂಗತ್ವ ಸಂಖ್ಯಾತ ಮಹಿಳೆ ಎಂಬುದು ಹೊರ ಜಗತ್ತಿಗೆ ತಿಳಿದ ಬಳಿಕ ಸಮಾಜ ನೋಡುವ ದೃಷ್ಟಿಕೋನ ಬದಲಾಯಿತು. ಆ ವೇಳೆಗಾಗಲೇ ಡಿಗ್ರಿ ಮುಗಿಸಿದ್ದ ನಾನು ಮಧ್ಯದಲ್ಲೇ ಓದು ನಿಲ್ಲಿಸಿದೆ. ನನ್ನನ್ನು ಮತ್ತೆ ಓದಿಗೆ ಪ್ರೇರೇಪಿಸಿದ್ದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ವಿಚಾರಗಳು…”

ಹೀಗೆ ತಮ್ಮ ಬದುಕಿನ ಬಗ್ಗೆ ಹೇಳುತ್ತಾ ಹೋಗುತ್ತಾರೆ ಮೈಸೂರು ವಿವಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಪಿಎಚ್‌ಡಿ ಮಾಡುತ್ತಿರುವ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ದೀಪು ಬುದ್ಧೆ.

ಚಾಮರಾಜನಗರ ಜಿಲ್ಲೆ ಸಂತೇಮಾರಳ್ಳಿ ಹೋಬಳಿ ವ್ಯಾಪ್ತಿಯ ಹೆಗ್ಗವಾಡಿಪುರ ಗ್ರಾಮದವರು ದೀಪು ಬುದ್ಧೆ. ಮೂಲ ಹೆಸರು ಗುರುಸ್ವಾಮಿ. ಏಳು, ಎಂಟನೇ ತರಗತಿಯ ವೇಳೆಗೆ ತನ್ನೊಳಗಿನ ಹೆಣ್ತತನಗಳ ಭಾವನೆಗಳನ್ನು ಅರ್ಥಮಾಡಿಕೊಂಡ ಅವರು, ಪಿಯುಸಿ ಮುಗಿಯುವವರೆಗೂ ತನ್ನ ಅಸ್ಮಿತೆಯ ಬಗ್ಗೆ ಹೇಳಿಕೊಳ್ಳಲಾಗದೆ ಒದ್ದಾಡಿದರು.

ಮನೆಯಲ್ಲಿ ಐದು ಜನ ಮಕ್ಕಳು. ನಾಲ್ಕು ಜನ ಹೆಣ್ಣು ಮಕ್ಕಳು. ಐದನೆಯವರು ಗುರುಸ್ವಾಮಿ. ಮನೆಯಲ್ಲಿ ಗಂಡು ಮಕ್ಕಳು ಇರಲಿಲ್ಲ. ಗುರುಸ್ವಾಮಿಯವರನ್ನು ಎಲ್ಲರೂ ಪ್ರೀತಿಯಿಂದ ಸಾಕಿದರು. ಈಗಲೂ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

“ನಾನು ಪಿಯುಸಿ ಓದುವವರೆಗೂ ಆ ಭಾವನೆಗಳನ್ನು ಎಲ್ಲಿಯೂ ತೋರಿಸಿಕೊಳ್ಳದಂತೆ ಯತ್ನಿಸಿದೆ. ಆದರೆ ನನ್ನ ಭಾವನೆಗಳಿಗೆ ಪುಷ್ಟೀಕರಣ ನೀಡಬೇಕು ಎಂದು ಪಿಯುಸಿ ಮುಗಿದ ಮೇಲೆ ನನ್ನ ಸಮುದಾಯವನ್ನು ಸೇರಿಕೊಂಡೆ. ಸ್ವಲ್ಪ ದಿನಗಳ ಕಾಲ ಮನೆಯವರಿಗೂ ಗೊತ್ತಿರಲಿಲ್ಲ. ಗೊತ್ತಿಲ್ಲದ ರೀತಿಯಲ್ಲಿ ಕಾಪಾಡಿಕೊಂಡು ಹೋಗುತ್ತಿದ್ದೆ. ಆಮೇಲೆ ತದನಂತರದ ಗೊತ್ತಾಯಿತು” ಎನ್ನುತ್ತಾರೆ ದೀಪು ಬುದ್ಧೆ.

ತಮ್ಮ ಬದುಕಿನ ಪಯಣವನ್ನು ನಾನುಗೌರಿ.ಕಾಂ ಜೊತೆ ಬಿಚ್ಚಿಟ್ಟ ಅವರು, “ಪದವಿ ವೇಳೆಗೆ ನಾನು ಟ್ರಾನ್ಸ್‌ಜೆಂಡರ್‌ ಕಮ್ಯುನಿಟಿ ಜೊತೆಯಲ್ಲಿ ಇದ್ದೆ. ಟ್ರಾನ್ಸ್‌ಜೆಂಡರ್‌ ಆಗಿದ್ದರೂ ಅಧಿಕೃತ ದಾಖಲೆಗಳಲ್ಲಿ ಎಲ್ಲಿಯೂ ಅದನ್ನು ನಮೂದಿಸಿರಲಿಲ್ಲ. ‘ಪುರುಷ’ ಎಂದು ಹೇಳಿಕೊಂಡೇ ನಾನು 2015ರಲ್ಲಿ ಡಿಗ್ರಿ ಮುಗಿಸಿದೆ. ತದನಂತರ ನಾನು ಪರಿವರ್ತನಾ ಮಹಿಳೆ ಎಂಬುದು ಎಲ್ಲರಿಗೂ ಗೊತ್ತಾಯಿತು. ಕಾಲೇಜಿನಿಂದ ಹಿಡಿದು ಊರಿನವರೆಗೂ ನನ್ನ ಬಗ್ಗೆ ಸುದ್ದಿ ಹಬ್ಬಿತು. ನನಗೆ ಅವಮಾನಗಳು, ತೊಂದರೆಗಳು ಶುರುವಾದವು. ಹೀಗಾಗಿ ಶಿಕ್ಷಣವನ್ನು ನಿಲ್ಲಿಸಿಬಿಟ್ಟೆ” ಎಂದರು.

“ಚಾಮರಾಜನಗರದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯಾದ ‘ಸಮತ ಸೊಸೈಟಿ’ ಇದೆ. ಅದರಲ್ಲಿ ಒಂದು ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಮತ್ತೆ ಓದಬೇಕೆಂದು ನಿರ್ಧರಿಸಿದೆ. ನನ್ನ ಓದಿಗೆ ಮತ್ತೆ ಪ್ರೇರಣೆಯಾಗಿದ್ದು ಡಾ.ಬಿ.ಆರ್‌.ಅಂಬೇಡ್ಕರ್‌. ಅವರ ವಿಚಾರಗಳನ್ನು ಓದುತ್ತಾ ಸ್ಪೂರ್ತಿ ಪಡೆದೆ. 2018ರಲ್ಲಿ ಶಿಕ್ಷಣಕ್ಕೆ ಮರಳಿದೆ. ನನಗೆ ಓದಲಿಕ್ಕೆ ಹಣಕಾಸು ವ್ಯವಸ್ಥೆ ಮಾಡಿ, ನನಗೊಂದು ಉದ್ಯೋಗ ನೀಡಿದ್ದು ನಮ್ಮ ಸಮತ ಸೊಸೈಟಿ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ದೀಪು.

“ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರಕ್ಕೆ ಪ್ರವೇಶಾತಿಗಾಗಿ ಬಂದೆ. ಕೇಂದ್ರದ ಸಂಯೋಜನಾಧಿಕಾರಿಯಾಗಿ ಡಾ.ಎಸ್.ನರೇಂದ್ರಕುಮಾರ್‌ ಇದ್ದರು. ಅವರಲ್ಲಿ ವಿಚಾರಿಸಿದಾಗ ನನಗೆ ಅವಕಾಶ ನೀಡುವುದಾಗಿ ಹೇಳಿದರು. ಪ್ರವೇಶಾತಿ ಅರ್ಜಿ ಬರೆಯುವಾಗ ಮತ್ತೊಂದು ಸಮಸ್ಯೆ ಎದುರಾಯಿತು. ಪುರುಷ ಮತ್ತು ಮಹಿಳೆ ಎಂಬ ಎರಡು ಕಾಲಂಗಳು ಮಾತ್ರ ಇದ್ದವು. ಅಲ್ಲಿ ಟ್ರಾನ್ಸ್‌ಜೆಂಡರ್‌ (ಟಿಜೆ) ಎಂದು ಬರೆದು ನಾನೇ ಟಿಕ್‌ ಹಾಕಿದೆ” ಎಂದು ತಮ್ಮ ಶೈಕ್ಷಣಿಕ ಬದುಕಿನ ಮತ್ತೊಂದು ಹೋರಾಟವನ್ನು ನೆನೆದರು.

“ಅಂಬೇಡ್ಕರ್‌ ಅಧ್ಯಯನ ಸಂಸ್ಥೆಯಲ್ಲಿ ಒಳ್ಳೆಯ ಪ್ರೋತ್ಸಾಹ ಸಿಕ್ಕಿತು. ಸ್ನೇಹಿತರು, ಬೋಧಕರೆಲ್ಲ ಸಪೋರ್ಟ್ ಮಾಡಿದರು. ನನಗೆ ಮತ್ತೆ ಸಮಸ್ಯೆಯಾಗಿದ್ದು ಫಸ್ಟ್‌ ಸೆಮ್ ಪರೀಕ್ಷೆ ಬರೆಯಲು ಎಕ್ಸಾಂ ಅರ್ಜಿ ಬರೆಯುವಾಗ. ಅರ್ಜಿಯಲ್ಲಿ ಪುರುಷ ಮತ್ತು ಮಹಿಳೆ ಎಂಬ ಎರಡು ಕಾಲಂಗಳಷ್ಟೇ ಇದ್ದವು. ಈಗ ನನ್ನ ಪಿಎಚ್‌.ಡಿ. ಮಾರ್ಗದರ್ಶಕರಾಗಿರುವ ಪ್ರೊ.ಜೆ.ಸೋಮಶೇಖರ್‌ ಅವರು ಅಂದು ಮೈಸೂರು ವಿವಿಯ ಪರೀಕ್ಷಾಂಗ ಕುಲಸಚಿವರಾಗಿದ್ದರು. ಅವರಿಗೆ ನಮ್ಮ ತೊಂದರೆಯನ್ನು ತಿಳಿಸಿದೆ. ಅರ್ಜಿಯಲ್ಲಿ ಟ್ರಾನ್ಸ್‌ಜೆಂಡರ್ ಕಾಲಂ ಸೇರಿಸಲು ಅವರು ಕ್ರಮವಹಿಸಿದರು” ಎಂದು ಹೇಳಿದರು.

“ಟ್ರಾನ್ಸ್‌ಜೆಂಡರ್‌ ವ್ಯಕ್ತಿಯಾಗಿಯೇ ಓದು ಮುಂದುವರಿಸಬೇಕೆಂದು ನಿರ್ಧರಿಸಿದೆ. ಎಂಟ್ರೆನ್ಸ್‌ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಿದೆ. ನಮ್ಮ ಕೇಂದ್ರದಲ್ಲಿ ಹೆಚ್ಚು ಅಂಕಗಳನ್ನು ಪಡೆದು ರ್‍ಯಾಂಕ್‌ ಕೂಡ ಪಡೆದೆ. ಶೇ. 82ರಷ್ಟು ಅಂಕ ಪಡೆದಿದ್ದು ನನಗೆ ಸ್ಪೂರ್ತಿ ನೀಡಿತು. ಪಿಎಚ್‌ಡಿ ಪ್ರವೇಶಾತಿ ಪರೀಕ್ಷೆ ಬರೆದು ಅರ್ಹತೆ ಗಳಿಸಿದೆ” ಎಂದು ಮಾಹಿತಿ ನೀಡಿದರು.

“ಅಂಬೇಡ್ಕರ್‌ ಅಧ್ಯಯನ ಕೇಂದ್ರಕ್ಕೆ ಬಂದಿರುವ ಪ್ರೊ.ಜೆ.ಸೋಮಶೇಖರ್‌ ಅವರು ಮಾರ್ಗದರ್ಶಕರಾದರು. ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರು ಜೀವನ ಮತ್ತು ಹೋರಾಟಗಳು: ಒಂದು ವಿಮರ್ಶಾತ್ಮಕ ಅಧ್ಯಯನ’ ಎಂಬ ವಿಷಯವನ್ನು ಆಯ್ದುಕೊಂಡಿದ್ದೇನೆ. ಒಂದು ಸಮುದಾಯದ ವ್ಯಕ್ತಿಯಾಗಿ ಇಲ್ಲಿನ ಜೀವನವನ್ನು ಹೇಗೆ ನೋಡಬಹುದು, ಹೋರಾಟಗಳು ಹೇಗಿವೆ, ಸರ್ಕಾರದಲ್ಲಿ, ಸಮಾಜದಲ್ಲಿ ಹಾಗೂ ಸಮುದಾಯದಲ್ಲಿ ಏನೆಲ್ಲ ಸಮಸ್ಯೆಗಳಿವೆ, ಯಾಕೆ ಸರ್ಕಾರ ನಮ್ಮ ಕಡೆ ಗಮನ ಹರಿಸುವುದಿಲ್ಲ, ಸಮಾಜದ ವ್ಯಕ್ತಿಗಳು ನಮ್ಮನ್ನು ಯಾವ ರೀತಿ ತುಚ್ಛವಾಗಿ ಕಾಣುತ್ತಾರೆ ಎಂಬ ವಿಚಾರಗಳನ್ನು ತಿಳಿಸಲು ಈ ವಿಷಯವನ್ನು ಆಯ್ದುಕೊಂಡೆ. ಟ್ರಾನ್ಸ್‌ಜೆಂಡರ್‌ ಸಮುದಾಯದ ಹೊರಗಿನ ವ್ಯಕ್ತಿಗಳು ನಮ್ಮ ಕಷ್ಟಗಳ ಕುರಿತು ಪಿಎಚ್‌.ಡಿ ಮಾಡಿದ್ದಾರೆ. ಆದರೆ ಅವರು ನೋಡುವ ದೃಷ್ಟಿಕೋನ ಬೇರೆ ಇರುತ್ತದೆ, ಸಮುದಾಯದ ವ್ಯಕ್ತಿಯಾಗಿ ನನ್ನ ದೃಷ್ಟಿಕೋನ ಬೇರೆ ಇರುತ್ತದೆ. ಹೀಗಾಗಿ ನನ್ನದೇ ಸಮುದಾಯದ ವಿಷಯವನ್ನು ನಾನು ಆಯ್ದುಕೊಂಡೆ” ಎಂದರು.

“ಮೈಸೂರು ವಿವಿಯಲ್ಲಿ ಪಿಎಚ್‌ಡಿ ಮಾಡುತ್ತಿರುವ ಮೊದಲ ಟ್ರಾನ್ಸ್‌ಜೆಂಡರ್‌‌ ಮಹಿಳೆ” ಎಂಬುದಾಗಿಯೂ  ‘ದೀಪು ಬುದ್ಧೆ’ ಗುರುತಿಸಿಕೊಂಡಿದ್ದಾರೆ. ಆದರೆ ತಮ್ಮ ಹಳೆಯ ಹೆಸರಿನಲ್ಲಿರುವ ಸರ್ಟಿಫಿಕೇಟ್‌ಗಳಿಂದಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ದಾಖಲೆಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ.

“ಟ್ರಾನ್ಸ್‌ಜೆಂಡರ್‌ ಎಂಬುದನ್ನು ಎಲ್ಲ ಕಡೆ ನಮೂದಿಸುತ್ತಿದ್ದೇನೆ. ‘ದೀಪ ಬುದ್ಧೆ’ ಎಂಬುದು ಕೆಲವು ದಾಖಲೆಗಳಲ್ಲಿ ಮಾತ್ರ ಇದೆ. ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಹೈಯರ್‌ ಎಜುಕೇಷನ್‌ವರೆಗಿನ ಸರ್ಟಿಫಿಕೇಟ್‌ಗಳವರೆಗೂ ಹೆಸರಿನ ಸಮಸ್ಯೆಯಾಗಿದೆ. ಯಾಕೆಂದರೆ ಮೂಲ ಹೆಸರೇ ಅವುಗಳಲ್ಲಿ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಬದಲಾಯಿಸುವ ಪ್ರಯತ್ನಗಳು ನಡೆದಿವೆ” ಎಂದು ತಿಳಿಸಿದರು.

ದೀಪು ಬುದ್ಧೆಯವರ ಉನ್ನತ ವ್ಯಾಸಂಗದ ಬಗ್ಗೆ ‘ನಾನುಗೌರಿ.ಕಾಂ’ ಜೊತೆ ಸಂತಸ ವ್ಯಕ್ತಪಡಿಸಿದ ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿಯವರು, “ಈ ಹಿಂದೆಯೂ ಕೆಲವು ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಸಂಶೋಧನೆ ನಡೆಸಿದ್ದಾರೆ. ಆದರೆ ಅನೇಕರು ತಮ್ಮ ಐಡೆಂಟಿಟಿಯನ್ನು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ದೀಪು ಅವರು ತಮ್ಮ ಐಡೆಂಟಿಟಿಯನ್ನು ಹೇಳಿಕೊಂಡಿದ್ದಾರೆ” ಎಂದು ಪ್ರೋತ್ಸಾಹದ ನುಡಿಗಳನ್ನಾಡಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...