Homeದಲಿತ್ ಫೈಲ್ಸ್ಹತ್ತು ದಲಿತರ ಹತ್ಯೆ ಪ್ರಕರಣ; 42 ವರ್ಷಗಳ ಬಳಿಕ ಓರ್ವ ಅಪರಾಧಿಗೆ ಶಿಕ್ಷೆ

ಹತ್ತು ದಲಿತರ ಹತ್ಯೆ ಪ್ರಕರಣ; 42 ವರ್ಷಗಳ ಬಳಿಕ ಓರ್ವ ಅಪರಾಧಿಗೆ ಶಿಕ್ಷೆ

- Advertisement -
- Advertisement -

ಉತ್ತರಪ್ರದೇಶದ ಫಿರೋಜಾಬಾದ್‌ ಜಿಲ್ಲೆಯ ಸಾಧುಪುರ್‌‌ ಗ್ರಾಮದಲ್ಲಿ 1981 ಇಸವಿಯಲ್ಲಿ ನಡೆದ ಘಟನೆ ಇದು. ಏಕಾಏಕಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ದಲಿತರ ಜೀವಗಳು ಹಾರಿಹೋಗಿದ್ದವು. ಆದರೆ ಪ್ರಕರಣ ನಡೆದು 42 ವರ್ಷಗಳ ಬಳಿಕ ಓರ್ವ ಅಪರಾಧಿಗೆ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿದೆ.

ಪ್ರಕರಣ ಸವೆಸಿದ ಹಾದಿಯ ಕುರಿತು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ವಿಸ್ತೃತವಾಗಿ ವರದಿ ಮಾಡಿದೆ. ಪ್ರಕರಣದ ಏಳುಬೀಳಿನಲ್ಲಿ ನೊಂದ ದಲಿತರ ತ್ರಾಸದಾಯಕ ಪಯಣವನ್ನು ವರದಿ ತೆರೆದಿಟ್ಟಿದೆ.

1981ರ ಡಿಸೆಂಬರ್‌ 30ನೇ ತಾರೀಕು. ಮೈನ್‌ಪುರಿ ಜಿಲ್ಲೆಗೆ ಸೇರಿದ, ಈಗ ಫಿರೋಜಾಬಾದ್‌ಗೆ ಒಳಪಟ್ಟಿರುವ ಸಾಧುಪುರ್ ಗ್ರಾಮದಲ್ಲಿ ಅಂದು ಸಂಜೆ 6 ಗಂಟೆಯಲ್ಲಿ ಭೀಕರ ದಾಳಿ ನಡೆದಿತ್ತು. 30ರ ಹರೆಯದ ಪ್ರೇಮಾವತಿ, ತನ್ನ 14 ವರ್ಷದ ಮಗಳು ಸುಖದೇವಿ ಅವರೊಂದಿಗೆ ರೊಟ್ಟಿಗಳನ್ನು ತಟ್ಟುತ್ತಿದ್ದರು. ಪ್ರೇಮಾವತಿ ಅವರ ಮಕ್ಕಳಾದ  ಹರಿಶಂಕರ್ (12), ಕೈಲಾಶ್  8 ಅಡುಗೆ ಮನೆಯಲ್ಲಿ ಕುಳಿತ್ತಿದ್ದರು.

ಇದ್ದಕ್ಕಿದ್ದಂತೆ, ಇಬ್ಬರು ಪುರುಷರು ಅಡುಗೆಮನೆಗೆ ಪ್ರವೇಶಿಸಿದರು. ಪೊಲೀಸ್‌ ಸಮವಸ್ತ್ರದಲ್ಲಿದ್ದ ಮೂರನೇ ವ್ಯಕ್ತಿ ಮುಖ್ಯ ಬಾಗಿಲಿನ ಹೊರಗೆ ಕವಾಲಾಗಿ ನಿಂತಿದ್ದ. ಐದು ನಿಮಿಷಗಳ ಕಾಲ ಇಬ್ಬರು ವ್ಯಕ್ತಿಗಳು ಮನಬಂದಂತೆ ಗುಂಡು ಹಾರಿಸಿದರು. ಸುಖದೇವಿ ಹೊಟ್ಟೆಗೆ, ಹರಿಶಂಕರ್ ಕುತ್ತಿಗೆಗೆ ಮತ್ತು ಕೈಲಾಶ್‌ನ ಎದೆ ಮತ್ತು ಹೊಟ್ಟೆಗೆ ಗುಂಡು ತಗುಲಿದವು. ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದರು.

ಹೇಗೋ ಪ್ರೇಮಾವತಿ ಬದುಕುಳಿದಿದ್ದಳು. ಕಾಲಿಗೆ ಗುಂಡು ತಗುಲಿದ್ದರಿಂದ ವಾಕಿಂಗ್ ಸ್ಟಿಕ್ ಅವರಿಗೆ ಕಾಯಂ ಆಯಿತು. ಡಕಾಯಿತ ಅನಾರ್ ಸಿಂಗ್ ಯಾದವ್ ನೇತೃತ್ವದ ಗ್ಯಾಂಗ್‌ಗೆ ಸೇರಿದ ಮಂದಿ ಪರಿಶಿಷ್ಟ ಜಾತಿಗೆ ಸೇರಿದ ಆರು ಮಹಿಳೆಯರೂ ಸೇರಿದಂತೆ 10 ಜನರನ್ನು ಈ ಸರಣಿಯಲ್ಲಿ ಕಗ್ಗೊಲೆ ಮಾಡಿದ್ದರು.

ಸುಮಾರು 42 ವರ್ಷಗಳ ಹಿಂದೆ ನಡೆದ ಪ್ರಕರಣವಿದು. 1989ರಲ್ಲಿ ಹೊಸ ಜಿಲ್ಲೆಯ ರಚನೆ ಆಯಿತು. ಹೊಸ ಜಿಲ್ಲೆಯಲ್ಲಿ ಸುಮಾರು 32 ವರ್ಷ ನ್ಯಾಯಕ್ಕಾಗಿ ಕಾಯಬೇಕಾಯಿತು. ಫಿರೋಜಾಬಾದ್ ನ್ಯಾಯಾಲಯವು ಕಳೆದ ಮೇ 31 ರಂದು ಸಾಧುಪುರ್‌ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಪ್ರಕಟಿಸಿದೆ. ವಿಚಾರಣೆ ನಡೆಯುವ ವೇಳೆಯಲ್ಲಿಯೇ ಇಬ್ಬರು ಆರೋಪಿಗಳು (ಅನಾರ್ ಮತ್ತು ಜಪಾನ್ ಸಿಂಗ್) ನಿಧನರಾಗಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 307 (ಕೊಲೆಗೆ ಯತ್ನ) ಅಡಿಯಲ್ಲಿ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ 90 ವರ್ಷದ ಗಂಗಾ ದಯಾಳ್‌ಗೆ ಜೀವಾವಧಿ ಶಿಕ್ಷೆ, 50,000 ರೂಪಾಯಿ ದಂಡ ವಿಧಿಸಲಾಗಿದೆ.

“ಇದು ನ್ಯಾಯವೆಂದು ಕಾಣುತ್ತಿದೆಯೇ? ನಾನು ನನ್ನ ಇಡೀ ಜೀವನವನ್ನು ನ್ಯಾಯಕ್ಕಾಗಿ ಸವೆಸಿದೆ. ನನಗೆ ಈಗ ನ್ಯಾಯ ಸಿಗುತ್ತದೆಯೇ?”- ಸುಮಾರು ನಾಲ್ಕು ದಶಕಗಳ ಹಿಂದೆ ತನ್ನ ಮಕ್ಕಳನ್ನು ಕಳೆದುಕೊಂಡ, ಈಗ 72 ವರ್ಷದವರಾಗಿರುವ ಪ್ರೇಮಾವತಿಯವರು ಪತಿ ರಾಮ್ ಭರೋಸ್ (82) ಪಕ್ಕದಲ್ಲಿ ಕುಳಿತು ಹೀಗೆ ಅಳಲು ತೋಡಿಕೊಂಡಿದ್ದಾರೆ.

ಸಂತ್ರಸ್ತರ ಪರ ವಾದ ಮಂಡಿಸಿದ ಫಿರೋಜಾಬಾದ್ ಜಿಲ್ಲಾ ಪ್ರಧಾನ ವಕೀಲ ರಾಜೀವ್ ಉಪಾಧ್ಯಾಯ ಪ್ರತಿಕ್ರಿಯಿಸಿ, “1989ರಲ್ಲಿ ಹೊಸ ಜಿಲ್ಲೆ ರಚನೆಯಾದ ಕಾರಣ ವಿಚಾರಣೆ ಎಲ್ಲಿ ನಡೆಯಬೇಕು ಎಂದು ನಿರ್ಧರಿಸಲು ಸಾಕಷ್ಟು ಸಮಯ ವ್ಯಯಿಸಿದ್ದರಿಂದ ತೀರ್ಪು ವಿಳಂಬವಾಯಿತು” ಎಂದಿದ್ದಾರೆ.

“ಈ ಘಟನೆ ಸಂಭವಿಸಿದಾಗ, ಶಿಕೋಹಾಬಾದ್ ಪೊಲೀಸ್ ಠಾಣೆ (ಸಾಧುಪುರ್‌ ಗ್ರಾಮ ಈ ಠಾಣೆ ವ್ಯಾಪ್ತಿಗೆ ಸೇರಿದೆ) ಮೈನ್‌ಪುರಿ ಜಿಲ್ಲೆಯಲ್ಲಿತ್ತು. 1989ರಲ್ಲಿ, ಫಿರೋಜಾಬಾದ್ ಜಿಲ್ಲೆಯನ್ನು ರಚಿಸಲಾಯಿತು. ಶಿಕೋಹಾಬಾದ್ ಹೊಸ ಜಿಲ್ಲೆಯ ಭಾಗವಾಯಿತು. ಪ್ರಕರಣವು ಈಗಾಗಲೇ ಮೈನ್‌ಪುರಿ ಜಿಲ್ಲೆಯಲ್ಲಿ ಪ್ರಾರಂಭವಾಗಿರುವುದರಿಂದ, ಯಾವ ಜಿಲ್ಲಾ ನ್ಯಾಯಾಲಯವು ಈ ವಿಷಯವನ್ನು ಆಲಿಸಬೇಕು ಎಂಬುದರ ಕುರಿತು ವಾದಗಳು ಇದ್ದವು” ಎನ್ನುತ್ತಾರೆ ಉಪಾಧ್ಯಾಯ.

“(ಅಲಹಾಬಾದ್) ಹೈಕೋರ್ಟ್ ಫಿರೋಜಾಬಾದ್ ನ್ಯಾಯಾಲಯವನ್ನು ಆಯ್ಕೆ ಮಾಡುವ ಮೊದಲು ಸ್ವಲ್ಪ ಸಮಯವಾಗಿತ್ತು. ಆ ನಂತರವೂ ಆರೋಪಿಗಳು ಕಾಲಾವಕಾಶ ಕೋರುತ್ತಲೇ ಇದ್ದರು. ಇದು ಪ್ರಕರಣವನ್ನು ಮತ್ತಷ್ಟು ವಿಳಂಬಗೊಳಿಸಿತು” ಎಂದಿದ್ದಾರೆ.

ಇದನ್ನೂ ಓದಿರಿ: ಮಾಯಾವತಿ, ಮಾಂಝಿ ವಿರೋಧ ಪಕ್ಷಗಳ ಮೈತ್ರಿಯಿಂದ ದೂರ ಉಳಿಯುವರೇ?

ಅಂದಿನ ಘಟನೆಯನ್ನು ನೆನಪಿಸಿಕೊಂಡಿರುವ ಪ್ರೇಮಾವತಿ, “ಎಲ್ಲವೂ ತುಂಬಾ ವೇಗವಾಗಿ ನಡೆಯಿತು. ಒಂದು ಕ್ಷಣ, ಏನಾಗುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಾನು ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಿದ್ದೆ. ಕಾಲಿಗೆ ಗುಂಡು ತಗುಲಿದ್ದರೂ ನನಗೆ ಯಾವುದೇ ನೋವು ಆಗಲಿಲ್ಲ. ಆಗಷ್ಟೇ ಗುಂಡಿನ ದಾಳಿ ಆರಂಭಿಸಿದ್ದರು. ಅವರು ನಮ್ಮನ್ನು ಯಾವುದೇ ವಿಚಾರ ಕೇಳಲಿಲ್ಲ. ಅವರು ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ” ಎಂದು ನೆನೆದಿದ್ದಾರೆ.

ಅಂದು ಪ್ರೇಮಾವತಿಯವರ ಅರ್ಧದಷ್ಟು ಕುಟುಂಬ ಬಲಿಯಾಗಿತ್ತು. ಬದುಕುಳಿದವರು ರಾಮ್ ಭರೋಸ್, ಪ್ರೇಮಾವತಿ ಮತ್ತು ಅವರ ಮಗ ಮಹೇಂದ್ರ ಸಿಂಗ್ (ಆಗ ಕೇವಲ 2 ವರ್ಷದ ಮಗು). ಈಗ 44 ವರ್ಷ ವಯಸ್ಸಿನವರಾದ ಮಹೇಂದ್ರ ಅವರು ಆ ಸಂಜೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದರಿಂದ ಮಾತ್ರ ಬದುಕುಳಿದ್ದರು. ರಾಮ್ ಭರೋಸ್ ಅವರು ನೆರೆಯ ಮನೆಯಲ್ಲಿದ್ದ ಕಾರಣ ಜೀವ ಉಳಿಸಿಕೊಂಡಿದ್ದರು.

ತನ್ನ ಏಳು ಮಂದಿಯ ಕುಟುಂಬವನ್ನು ಪೋಷಿಸಲು ಕೂಲಿ ಕೆಲಸ ಮಾಡುವ ಮಹೇಂದ್ರ ಅವರು, “ಸರ್ಕಾರವು ಪ್ರತಿ ಸಂತ್ರಸ್ತ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಭರವಸೆ ನೀಡಿತು. ನಾನು 18 ನೇ ವರ್ಷಕ್ಕೆ ಕಾಲಿಟ್ಟಾಗಿನಿಂದ ಆ ಕೆಲಸವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ. ನಾನು ಸರ್ಕಾರಕ್ಕೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ನನ್ನನ್ನು ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆಸಲಾಯಿತು” ಎಂದು ಅಳಲು ತೋಡಿಕೊಂಡಿದ್ದಾರೆ.

(ಪೂರ್ಣ ವರದಿಗಾಗಿ ‘ಇಲ್ಲಿ’ ಕ್ಲಿಕ್ ಮಾಡಿರಿ)

ವರದಿ ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಥುರಾ ಭೂ ವಿವಾದ: ಫೆಬ್ರವರಿ 29ರಂದು ಅಲಹಾಬಾದ್ ಹೈಕೋರ್ಟಿನಲ್ಲಿ ವಿಚಾರಣೆ

0
ಮಥುರಾದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಹೂಡಿರುವ ದಾವೆಯ ನಿರ್ವಹಣೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಮುಂದಿನ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಫೆಬ್ರವರಿ 29ಕ್ಕೆ ನಿಗದಿಪಡಿಸಿದೆ. ಶಾಹಿ ಈದ್ಗಾ ಇಂತೇಜಾಮಿಯಾ ಸಮಿತಿಯು ಕತ್ರ...