Homeಮುಖಪುಟಮಾಯಾವತಿ, ಮಾಂಝಿ ವಿರೋಧ ಪಕ್ಷಗಳ ಮೈತ್ರಿಯಿಂದ ದೂರ ಉಳಿಯುವರೇ?

ಮಾಯಾವತಿ, ಮಾಂಝಿ ವಿರೋಧ ಪಕ್ಷಗಳ ಮೈತ್ರಿಯಿಂದ ದೂರ ಉಳಿಯುವರೇ?

- Advertisement -
- Advertisement -

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಮಹಾಮೈತ್ರಿಕೂಟವನ್ನು ರಚಿಸುವುದಕ್ಕಾಗಿ ವಿರೋಧ ಪಕ್ಷಗಳು ಪ್ರಯತ್ನಿಸುತ್ತಿರುವಾಗಲೇ, ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತನ್ನದೇ ಆದ ಹಾದಿಯನ್ನು ಕಂಡುಕೊಳ್ಳುವ ಸೂಚನೆಗಳನ್ನು ನೀಡುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಮಾಯಾವತಿಯವರನ್ನು ಬಿಂಬಿಸಬೇಕೆಂದು ಬಿಎಸ್‌ಪಿ ನಿರ್ಧರಿಸಿದೆ.

ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಪ್ರತಿಪಕ್ಷ ನಾಯಕರ ಸಭೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರಿಗೆ ಯಾವುದೇ ಆಹ್ವಾನವನ್ನು ಕಳುಹಿಸಲಾಗಿಲ್ಲ ಎಂದು ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ಕೆ.ಸಿ.ತ್ಯಾಗಿ ಇತ್ತೀಚೆಗೆ ಹೇಳಿದ್ದಾರೆ.

ಜೆಡಿಯು ನಾಯಕರ ಹೇಳಿಕೆಯ ಸ್ವಲ್ಪ ಸಮಯದ ನಂತರ, ಬಿಎಸ್‌ಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. 2024ರ ಚುನಾವಣೆಯಲ್ಲಿ ಇತರ ಪಕ್ಷಗಳು ರೂಪಿಸಿದ ಕಾರ್ಯತಂತ್ರದ ಭಾಗವಾಗಲು ಬಿಎಸ್‌ಪಿ ಬಯಸುವುದಿಲ್ಲ. ಬದಲಿಗೆ ತನ್ನದೇ ಆದ ಹಾದಿಯನ್ನು ಕಂಡುಕೊಳ್ಳಲಾಗುವುದು ಎಂದು ಬಿಎಸ್‌ಪಿ ಹೇಳಿದೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್‌ಪಿಯ ಹಿರಿಯ ನಾಯಕರೊಬ್ಬರು, “ಬಿಜೆಪಿ ವಿರುದ್ಧ ವೇದಿಕೆಯನ್ನು ಸಜ್ಜುಗೊಳಿಸಲು ವಿವಿಧ ವಿರೋಧ ಪಕ್ಷಗಳ ಮುಖ್ಯಸ್ಥರನ್ನು ಭೇಟಿ ಮಾಡುವುದಕ್ಕಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹಲವು ಸುತ್ತಿನ ತಿರುಗಾಟ ನಡೆಸಿದ್ದಾರೆ. ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಯಾರನ್ನು ಬಿಂಬಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಮಾಯಾವತಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಿಎಸ್‌ಪಿ ನಿರ್ಧರಿಸಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದಲ್ಲಿ ಜೂನ್ 23ರಂದು ಪಾಟ್ನಾದಲ್ಲಿ ನಡೆಯಲಿರುವ ಬಿಜೆಪಿಯೇತರ ಪಕ್ಷಗಳ ಸಭೆಗೆ ತಮ್ಮನ್ನು ಆಹ್ವಾನಿಸದಿರುವ ಬಗ್ಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ವರಿಷ್ಠರಾದ ಜಿತನ್ ರಾಮ್ ಮಾಂಝಿ ಅಸಮಾಧಾನ ಹೊಂದಿದ್ದಾರೆ.

ಶುಕ್ರವಾರ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿರುವ ಜಿತನ್ ರಾಮ್‌ ಮಾಂಝಿ, “ಜೂನ್ 23ರಂದು ನಡೆಯಲಿರುವ ವಿರೋಧ ಪಕ್ಷಗಳ ಸಭೆಗೆ ನಮ್ಮ ಪಕ್ಷವನ್ನು ಆಹ್ವಾನಿಸಲಾಗಿಲ್ಲ. ಆದಾಗ್ಯೂ, ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಏಕತೆಯನ್ನು ಮುನ್ನಡೆಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮುಂದುವರಿಯಲಾಗುವುದು” ಎಂದಿದ್ದಾರೆ.

ಇದಕ್ಕೂ ಮುನ್ನ ಅವರು ಪಕ್ಷದ ಶಾಸಕರೊಂದಿಗೆ ನಿತೀಶ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಐದು ಲೋಕಸಭಾ ಸ್ಥಾನಗಳನ್ನು ಎಚ್‌ಎಎಂಗೆ ಬಿಟ್ಟುಕೊಡಬೇಕು ಎಂಬ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ. “ಮಹಾಮೈತ್ರಿಕೂಟದ ನಾಯಕರು ಪಕ್ಷದ ಬೇಡಿಕೆಯನ್ನು ಪರಿಗಣಿಸಿ ಸೀಟು ಹಂಚಿಕೆಯ ಅಡಿಯಲ್ಲಿ ಸ್ಥಾನಗಳನ್ನು ನೀಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ದಲಿತರು, ಮುಸ್ಲಿಮರ ಕುರಿತ ರಾಹುಲ್ ಮಾತಿನಲ್ಲಿ ಕಹಿಸತ್ಯವಿದೆ: ಮಾಯಾವತಿ

ಎಚ್‌ಎಎಂನ ಐದು ಲೋಕಸಭಾ ಸ್ಥಾನಗಳ ಬೇಡಿಕೆಯು ರಾಜ್ಯದ ಮಹಾಮೈತ್ರಿಕೂಟದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಮಾಂಝಿಯವರ ಎಚ್‌ಎಎಂ ರಾಜ್ಯ ವಿಧಾನಸಭೆಯಲ್ಲಿ ನಾಲ್ಕು ಶಾಸಕರನ್ನು ಹೊಂದಿದೆ.

ಮಾಂಝಿಯವರ ಪಕ್ಷಕ್ಕೆ ಹೋಲಿಸಿದರೆ ಮಾಯಾವತಿಯವರ ವಿಚಾರವು ತುಸು ವಿಭಿನ್ನವಾಗಿದೆ. ವಿಶೇಷವಾಗಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಕುಸಿತ ಕಂಡಿದೆ. ಪಂಜಾಬ್‌ನಂತಹ ರಾಜ್ಯಗಳಲ್ಲಿ ಯಾವುದೇ ಸಾಧನೆಯನ್ನು ಮಾಡಿಲ್ಲ.

ಲೋಕಸಭಾ ಚುನಾವಣೆಯ ಅಂತಿಮ ಕಾರ್ಯತಂತ್ರವನ್ನು ರೂಪಿಸಲು ಪ್ರತಿಪಕ್ಷಗಳು ಒಟ್ಟಾಗಿ ಕುಳಿತುಕೊಳ್ಳುತ್ತಿವೆ. ಮಾಯಾವತಿಯವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆಂಬ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಮೇಲೆ ಒತ್ತಡ ಹೇರುವ ತಂತ್ರವನ್ನು ಬಿಎಸ್‌ಪಿ ಅನುಸರಿಸುತ್ತಿದೆಯೇ ಎಂಬ ರಾಜಕೀಯ ಚರ್ಚೆಗಳಾಗುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...