Homeಮುಖಪುಟ'ಏನು ಹೇಳಿದರೂ ಸಲ್ಲುತ್ತೆ ಅಂತಾಗಬಾರದು': ಜಿ. ಎಚ್. ನಾಯಕರ ಸಂದರ್ಶನ

‘ಏನು ಹೇಳಿದರೂ ಸಲ್ಲುತ್ತೆ ಅಂತಾಗಬಾರದು’: ಜಿ. ಎಚ್. ನಾಯಕರ ಸಂದರ್ಶನ

- Advertisement -
- Advertisement -

ಕನ್ನಡದ ಹಿರಿಯ ವಿಮರ್ಶಕರಾದ ಜಿ.ಎಚ್. ನಾಯಕರು ಈಚೆಗೆ ನಿಧನರಾದರು. ಅವರು ನನ್ನ ವಿಮರ್ಶೆಯ ಪ್ರಾಥಮಿಕ ಪಾಠಗಳನ್ನು ತರಗತಿಗಳಲ್ಲಿ ಕಲಿಸಿದವರು. ನನ್ನ ಮೊದಲ ಘಟ್ಟದ ಓದು ಬರೆಹದ ಮೇಲೆ ಅವರ ಗಾಢವಾದ ಪ್ರಭಾವವಿತ್ತು. ಬಂಡಾಯ ದಲಿತ ಸಾಹಿತ್ಯ ಚಳವಳಿಯಲ್ಲಿ ಭಾಗವಹಿಸಲು ಆರಂಭಿಸಿದ ಬಳಿಕ, ಎಡಪಂಥೀಯ ನಿಲುವಿನ ಡಿ.ಆರ್.ನಾಗರಾಜ, ಆರ್‍ಕೆ ಮಣಿಪಾಲ, ಜಿ. ರಾಜಶೇಖರ ಅವರ ವಿಮರ್ಶಾ ಬರಹಗಳನ್ನು ಓದಿದ ಬಳಿಕ, ನಾನು ಅವರ ಪ್ರಭಾವದಿಂದ ನಿಧಾನಕ್ಕೆ ಹೊರಬಂದೆ. ಆದರೂ ನಾಯಕರು ಸಾಹಿತ್ಯ ಕೃತಿಯನ್ನು ಶ್ರದ್ಧೆಯಿಂದ ಅನುಸಂಧಾನಿಸುವ ಗುಣ, ಹೇಳಬೇಕಾದ್ದನ್ನು ಹಿಂಜರಿಕೆಯಿಲ್ಲದೆ ಹೇಳುವ ದಿಟ್ಟತನ, ಅವರ ಪ್ರಾಮಾಣಿಕತೆ ಅನುಕರಣೀಯ. ಮೇಷ್ಟ್ರಾಗಿ, ಲೇಖಕರಾಗಿ ಮಾತ್ರವಲ್ಲ, ಒಬ್ಬ ಪ್ರಜ್ಞಾವಂತ ನಾಗರಿಕನಾಗಿಯೂ ವೈಚಾರಿಕ ಮಾನವೀಯ ವ್ಯಕ್ತಿಯೂ ಆಗಿ ಅವರು ದೊಡ್ಡವರಾಗಿದ್ದರು. ನನಗೆ ಇಷ್ಟವಾದ ಲೇಖಕರನ್ನು ಚಿಂತಕರನ್ನು ಸಂದರ್ಶನ ಮಾಡುವ ನನ್ನ ಹವ್ಯಾಸದ ಭಾಗವಾಗಿ ಅವರನ್ನು 25 ವರ್ಷಗಳ ಹಿಂದೆ ಸಂದರ್ಶನ ಮಾಡಿದ್ದೆ. ಅದು ‘ಲೋಕವಿರೋಧಿಗಳ ಜತೆಯಲ್ಲಿ’ ಸಂಪುಟದಲ್ಲಿ ಪ್ರಕಟವಾಗಿದೆ. ಅಲ್ಲಿಂದ ಆಯ್ದ ಭಾಗವಿದು.

*****

ಉತ್ತರ ಕನ್ನಡದವರು ಓದೋಕೆ ಮುಂಬೈಗೊ ಧಾರವಾಡಕ್ಕೊ ಹೋಗೋದು ಇತ್ತು. ನೀವು ಮೈಸೂರಿನ ಕಡೆ ಬಂದ್ರಿ. ಈ ದಿಕ್ಕು ಬದಲಾವಣೆಗೆ ಕಾರಣ ಏನು?

ಸ.ಪ. ಗಾಂವಕರ್ ಅಂತ ನಮ್ಮ ಕಡೆಯವರು, ಕನ್ನಡದ ಕವಿ ಅವರು, ನನ್ನ ಜೀವನದಲ್ಲಿ ಪ್ರವೇಶವಾದರು. ನಾನು ನನ್ನ ಬದುಕಲ್ಲಿ ಅಷ್ಟು ದೊಡ್ಡವರನ್ನ ನೋಡಿಲ್ಲ. ಟಾಗೂರರ ’ಗೀತಾಂಜಲಿ’ ಅನುವಾದ ಮಾಡಿದೋರು. ಜಾತಿ ಮತ ಧರ್ಮ ಅಂತ ತಲೆಗೆ ಹಾಕ್ಕೊಳ್ತಿರಲಿಲ್ಲ. ಕಷ್ಟದಲ್ಲಿರೋರು ಯಾರು ಬಂದರೂ ಸಹಾಯ ಮಾಡತಿದ್ರು. ನಾನು ಹೈಸ್ಕೂಲ್ಲಿನಲ್ಲಿದ್ದಾಗ ಕವನಗಳನ್ನು ಬರೀತಾ ಇದ್ದೆ. ಗೋಪಾಲಕೃಷ್ಣ ಅಡಿಗರು ಇಂಗ್ಲಿಷ್ ಪ್ರೊಫೆಸರಾಗಿ ಕುಮಟೆಯ ಕೆನರಾ ಕಾಲೇಜಲ್ಲಿ ಇದ್ದರಲ್ಲ, ವಿದ್ಯಾರ್ಥಿ ಕವಿಗೋಷ್ಠಿಗೆ ಅಂತ ನಮ್ಮ ಸ್ಕೂಲಿಗೆ ಬಂದಿದ್ದರು. ನಾವೆಲ್ಲ ಕವನ ಓದಿದೆವು. ನನ್ನೊಬ್ಬನ ಕವನ ಚೆನ್ನಾಗಿದೆ ಅಂತ ಹೇಳಿದರು. ಗಾಂವಕರ್ ಸಭೆ ಮುಗೀತಿದ್ದ ಹಾಗೇನೆ ತಾವಾಗಿ ಬಂದು, ಅರೆತಬ್ಬಿಕೊಂಡು ಮಾತಾಡಿಸಿದರು. ಆದರೆ ನಾನು ಮೈಸೂರಿಗೇ ಹೋಗಬೇಕು, ದೊಡ್ಡ ಕವಿಯಾಗಬೇಕು ಅಂತ ಅವರಿಗೆ ಆಸೆ. ಮೈಸೂರಿನ ಟಿಎಸ್ ಸುಬ್ಬಣ್ಣನವರ ಸಾರ್ವಜನಿಕ ಹಾಸ್ಟಲಿಗೆ ಸೇರೋಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದರು. ಹಂಗಾಗಿ ಆ ಕಡೆ ಹೊರಟೋನು, ಈ ಕಡೆ ಬಂದೆ.

ಮೈಸೂರಿಗೆ ಬಂದಮೇಲೆ ಕುವೆಂಪು ಅವರನ್ನ ಭೇಟಿಯಾದಿರಾ?

ಬಂದೋನೇ ಕುವೆಂಪು ಇದ್ದಲ್ಲಿ ಹೋಗಿದ್ದೆ. ಹೋಗಿ ಗೇಟ್ ಹತ್ತಿರ ನಿಂತೆ. ಕುವೆಂಪು ಯಾರದೋ ಜೊತೆಯಲ್ಲಿ ಹುಲ್ಲುಹಾಸಿನ ಮೇಲೆ ಬೆತ್ತದ ಕುರ್ಚಿ ಹಾಕಿಬಿಟ್ಟು ಕೂತಿದ್ದರು. ನಾಲ್ಕು ಕವನಗಳನ್ನು ಚೆಂದ ಅಕ್ಷರದಲ್ಲಿ ಬರೆದುಕೊಂಡು ರೆಡಿ ಮಾಡಿಕೊಂಡು ಹೋಗಿದ್ದೆ. ಹೋದ ತಕ್ಷಣ ಅವರಿಗೆ ಕೊಡಲು ಕೈಯನ್ನು ಮುಂದೆ ಚಾಚಿ ಸಾರ್, ನನ್ನನ್ನು ಅಂಕೋಲೆಯ ಸ.ಪ. ಗಾಂವಕರ್ ಕಳ್ಸಿದಾರೆ. ನಾನು ಕವನ ಬರೀತೀನಿ. ತಾವು ನನಗೆ ಕಾವ್ಯಗುರು ಆಗಬೇಕು ಅಂತ ಒಂದೇಸಲ ಪಟಪಟ ಅಂತ ಹೇಳಿದೆ. ಅವರು ಪ್ರಭುಶಂಕರ್ ಕಡೆ ತಿರುಗಿ ’ಅಧ್ಯಾತ್ಮಕ್ಕೆ ಗುರು ಬೇಕು. ಕಾವ್ಯಕ್ಕೆ ಗುರು ಬೇಕೇಬೇಕು ಎಂದೇನು ಇಲ್ಲ’ ಅಂತ ಹೇಳಿದರು. ನನ್ನ ಕಡೆ ತಿರುಗಿ ’ಒಳಗಡೆ ಪ್ರತಿಭೆಯ ಕಿಡಿ ಇದ್ರೆ ತನಗೆ ತಾನೆ ಒಂದು ರೂಪ ಪಡೆದುಕೊಳ್ತದೆ. ಹಿರಿಯರು ಬರೆದ ಕಾವ್ಯ ಓದುತ್ತಿರಬೇಕು’ ಅಂದುಬಿಟ್ಟರು.

ಮೈಸೂರಲ್ಲಿ ನಿಮ್ಮ ಗುರುಗಳು ಯಾರು?

ಡಿ.ಎಲ್. ನರಸಿಂಹಾಚಾರ್, ತೀನಂಶ್ರೀ. ಇವರ ಪಾಠದ ಬಗ್ಗೆ, ವಿದ್ವತ್ತಿನ ಬಗ್ಗೆ, ಬಹಳ ಗೌರವ ನಮಗೆ. ವ್ಯಕ್ತಿಯಾಗಿ ಡಿಎಲ್‌ಎನ್ ಹೆಚ್ಚು ಹತ್ತಿರಕ್ಕೆ ಬಂದೋರು. ಏಕವಚನದಲ್ಲೇ ಮಾತಾಡಿಸ್ತಿದ್ರೂ ಪೇರೆಂಟಲ್ ಫೀಲಿಂಗ್ ಇರೋದು. ಜಾತಿ ಭಾವನೆಗಳು ಏನೂ ಸೋಕದೆ ಇದ್ದಂಥ ಮೇಷ್ಟ್ರು ಅವರು. ವಿದ್ವತ್ತಿಗಿಂತ ಅವರ ಸಮಭಾವ ಅಫೆಕ್ಷನ್ ಇತ್ತಲ್ಲ, ಅದು ಬಹಳ ಗೌರವ ಹುಟ್ಟಿಸುವಂತಹದ್ದು. ಅವರ ಮುಗುಳು ನಗುವೇ ಒಂದು ಸೊಗಸು. ಜಿ.ಎಸ್ ಶಿವರುದ್ರಪ್ಪನವರು ಎಳೆಯ ತಲೆಮಾರಿನವರಲ್ಲಿ ಸಮರ್ಥರು ಅಂತ ಅನಿಸೋದು. ಆಗ ನನಗೆ ಇಷ್ಟವಾದ ವ್ಯಕ್ತಿ ಹಾಗೂ ಮೇಷ್ಟ್ರು ಅವರು. ತುಂಬ ಶ್ರದ್ಧೆಯಿಂದ ಪಾಠ ಮಾಡೋರು. ಸಾಹಿತ್ಯ ಸಂಬಂಧವಾದ ಎಷ್ಟೋ ಹೊಸ ವಿಷಯಗಳನ್ನು ಹೇಳೋರು. ಸ್ವತಃ ಕವಿ ಬೇರೆ ಆಗಿದ್ದರಲ್ಲವಾ. ಅವರ ಬಗ್ಗೆ ನಮಗೆ ಕುತೂಹಲ, ಆಸಕ್ತಿ ಇತ್ತು. ಆದರೆ ನಾನು, ಎಚ್‌ಎಂ ಚನ್ನಯ್ಯ ನವ್ಯದ ಅಡಿಗರು-ಅನಂತಮೂರ್ತಿಯವರ ಪ್ರಭಾವಕ್ಕೆ ಒಳಗಾಗಿಬಿಟ್ಟಿದ್ದೆವು.

ಇದು ಹ್ಯಾಗೆ ಸಾಧ್ಯವಾಯ್ತು?

ನಾನು ಟಿಎಸ್ ಸುಬ್ಬಣ್ಣನವರ ಸಾರ್ವಜನಿಕ ಹಾಸ್ಟೆಲಿಗೆ ಹೋದಾಗ, ಅಲ್ಲಿ ಅನಂತಮೂರ್ತಿ ಓದ್ತಾ ಇದ್ದರು. ಒಂದ್ಸಲ ಅವರು ಹಾಸ್ಟಲಿನಲ್ಲಿ ನಡೆಯೋ ಅಗಸ್ಟ್ 15ರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ’ಎಷ್ಟು ಚೆನ್ನಾಗಿ ಮಾತಾಡ್ತಾರಪ್ಪ. ಮೈಸೂರು ಭಾಷೆ ಎಷ್ಟು ಚೆಂದ. ನಾನೂ ಹಂಗೆ ಮಾತಾಡಲು ಕಲೀಬೇಕಲ್ಲಾ’ ಅಂತ ಅನಿಸ್ತು. ಕಾಲೇಜಿಗೆ ಹೋಗುವಾಗ ಅವರ ಜೊತೆಯಲ್ಲೆ ಹೆಚ್ಚಾಗಿ ಹೋಗ್ತಿದ್ದೆ. ಸಾಹಿತ್ಯದ ಬಗ್ಗೆ ಅನಂತಮೂರ್ತಿ ಉತ್ಸಾಹದಿಂದ ಪರಿಣಾಮಕಾರಿಯಾಗಿ ಮಾತಾಡ್ತಿದ್ದರು. ಹೊಸಹೊಸ ವಿಚಾರಗಳನ್ನು ಹೇಳ್ತಾ ಇದ್ರು.

ನವ್ಯಪಂಥವನ್ನು ರೂಪಿಸಿದ ಜಾಗಗಳಲ್ಲಿ ಮೈಸೂರಿನ ’ಕಾಫಿಹೌಸ್’ ಪ್ರಸ್ತಾಪ ಬರುತ್ತೆ. ಅದರ ನೆನಪು ಹೇಳಿ.

’ಕಾಫಿಹೌಸ’ಲ್ಲಿ ಗೋಪಾಲಕೃಷ್ಣ ಅಡಿಗರು, ಡಿ.ವಿ. ಅರಸು, ಅನಂತಮೂರ್ತಿ, ಕೆ ಸದಾಶಿವ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಜೀವ ತಾರಾನಾಥ, ಚನ್ನಯ್ಯ, ವೈಕುಂಠರಾಜು, ದಾಮೋದರರಾವ್, ಗಿರಿ ಹೆಗ್ಡೆ, ಜಿ.ಎಸ್. ಸದಾಶಿವ, ವಿ.ಪಿ, ನಟರಾಜ, ಕೆ.ಎಚ್. ಶ್ರೀನಿವಾಸ, ಎಂಡಿ. ನಂಜುಂಡಸ್ವಾಮಿ, ಬಿ.ಎನ್. ರಾಮು, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ಪೋಲಂಕಿ ರಾಮಮೂರ್ತಿ-ಇವರೆಲ್ಲ ಬರ್‍ತಿದ್ರು. ಸುಮತೀಂದ್ರ ನಾಡಿಗರು ಅಪರೂಪಕ್ಕೆ ಬೆಂಗಳೂರಿಂದ ಬಂದು ಹೋಗ್ತಿದ್ದರೆಂದು ನೆನಪು. ಎ.ಕೆ. ರಾಮಾನುಜನ್, ಗಂಗಾಧರ ಚಿತ್ತಾಲ, ಎಂ.ಜಿ. ಕೃಷ್ಣಮೂರ್ತಿ ಮೈಸೂರಿಗೆ ಬಂದ್ರೆ ಅಲ್ಲಿಗೆ ಬರ್‍ತಿದ್ರು. ಕಾಫಿಹೌಸಿನಲ್ಲಿ ಸಂಜೆ ಆರು ಗಂಟೆ ಮೇಲೆ ಸೇರೋದು. ಅರಸು ಇರುವಾಗ ರಾಷ್ಟ್ರೀಯ ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಮಾತು, ಚರ್ಚೆ. ಅಡಿಗರು ಇರುವಾಗ ಸಾಹಿತ್ಯ ಚರ್ಚೆ ಮುಖ್ಯವಾಗಿ ಇರತಿತ್ತು. ರಾಜಕೀಯ ವಿದ್ಯಮಾನಗಳ ಚರ್ಚೆ, ಮಾತೂ ಇರುತಿತ್ತು. ಆದರೆ ಅಡಿಗರು ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ನಿಂತಾಗ ನಾನು ’ಅದು ಸರಿಯಲ್ಲ’ ಎಂದಿದ್ದೆ. ಲಂಕೇಶ್ ಮೈಸೂರಿಗೆ ಬಂದು ಅಡಿಗರ ಪರ ಪ್ರಚಾರಕ್ಕೆ ಕರೆದಾಗ ನಾನು ಒಪ್ಪಿರಲಿಲ್ಲ; ಅನಂತಮೂರ್ತಿಯವರೂ ಒಪ್ಪಿರಲಿಲ್ಲ. ಲಂಕೇಶ್ ಅಡಿಗರ ಪರ ಹಗಲೂ ರಾತ್ರಿ ಆರ್‌ಎಸ್‌ಎಸ್ ಹುಡುಗರ ಜೊತೆ ದುಡಿದಿದ್ರು. ಅನಂತಮೂರ್ತಿ ಅಡಿಗರು ಬ್ರಾಹ್ಮಣರಾಗಿದ್ರು ಎಂಬುದು. ಅವರಿಬ್ಬರೂ ನನ್ನಂಥವನ ಮೇಲೆ ಪ್ರಭಾವ ಬೀರಬಲ್ಲಂಥ ಪ್ರತಿಭಾಶಾಲಿಗಳಾಗಿದ್ದರು ಎಂಬೋದು ಮುಖ್ಯ ಮಾತು.

ನಿಮ್ಮ ಕಾಲದಲ್ಲಿ ಮೈಸೂರಲ್ಲಿ ಸಮಾಜವಾದಿ ಯುವಜನ ಸಭೆಯ ಚಟುವಟಿಕೆಗಳೂ ಇದ್ದವು. ತೇಜಸ್ವಿ, ನಂಜುಂಡಸ್ವಾಮಿ, ಶಾಮಣ್ಣ ಅವರ ಸಂಪರ್ಕ ನಿಮಗೆ ಬರಲಿಲ್ಲವಾ?

ಸಮಾಜವಾದಿ ಯುವಜನ ಸಭಾದವರು ಶ್ರೀಲಂಕಾದ ಅಬ್ರಾಹಂ ಕೋವೂರರನ್ನ ಮೈಸೂರಿಗೆ ಕರಸಿದ್ರು. 1974ರಲ್ಲಿ ಸಾಯಿಬಾಬಾನ ಬೂದಿಮಂತ್ರ ಕೊಡೋದು ಬೂಟಾಟಿಕೆ ಅಂತ ತೋರಿಸಿದ್ರು. ನಾನು ಆ ಸಭೆಯ ಅಧ್ಯಕ್ಷತೆ ವಹಿಸಿದ್ದೆ. ಸಮಾಜವಾದಿ ಮಿತ್ರರ ಜಾತಿವಿನಾಶ ಸಮ್ಮೇಳನದ ಬಗ್ಗೆ ನನಗೆ ಸಹಮತ ಇತ್ತು. ಆದರೆ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಧೋರಣೆ ಬಗ್ಗೆ ಸಹಮತ ಇರಲಿಲ್ಲ.

ನೀವೊಬ್ಬ ವಿಚಾರವಾದಿ ವ್ಯಕ್ತಿತ್ವ; ನಿಮ್ಮ ಮತ್ತು ನಿಮ್ಮನ್ನು ರೂಪಿಸಿದ ಸಮುದಾಯದ ಮಧ್ಯೆ ಬೇರೆ ಎಂಥ ಬಿಕ್ಕಟ್ಟು ನಿರ್ಮಿಸಿತು?

1965ರಲ್ಲಿ ನಾನು ವರದಕ್ಷಿಣೆ, ಊಟ, ವಾದ್ಯ, ಗರ್ನಾಲು ಇತ್ಯಾದಿಗಳಿಲ್ಲದ ಸರಳ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದಾಗ, ಎದುರುಗಡೆ ಕೂಡಿಸಿಕೊಂಡು ಹೇಳ್ತಾ ಇದ್ರೂ ನಮ್ಮ ತಾಯಿಗೆ ಅರ್ಥ ಆಗಲಿಲ್ಲ. ಸರಳವಾಗಿ ಮದುವೆ ಆಗುವುದು ಮನೆ ಮರ್‍ಯಾದೆಗೆ ಕಡಿಮೆ ಎಂದಳು. ಆವರೆಗೆ ಮೂಗುತಿ ಹಾಕಿಕೊಂಡಿರದ ವಧುವಿಗೆ, ಮೂಗುತಿ ಕಾಲುಂಗುರ ಹಾಕಿಸುವುದು ಬೇಡ ಎಂದದ್ದಕ್ಕೆ, ಅಪಶಕುನ ಎಂದು ಬೆದರಿದಳು. ನಾನೇನೊ ಹೇಳಿದಂತೆಯೇ ಮಾಡಿದೆ. ನನ್ನನ್ನೂ ಡಿಫೈನ್ ಮಾಡ್ಕೋಬೇಕಾದಾಗ, ನಿಲುವು ತಳೆಯೋ ಹೊತ್ತಿಗೆ ಸ್ಟಬರ್ನ್ ಆಗಿ ನಾನು ನಿಂತ್ಕೊಂಡಾಗ ತಕ್ಷಣ ಕಮ್ಯುನಿಕೇಟ್ ಆಗ್ತಾ ಇರಲಿಲ್ಲ.

ಸಮುದಾಯದ ಸಂಸ್ಕೃತಿಗಳ ಜತೆ ಇನ್ನೂ ಆಪ್ತವಾಗಿ ಒಡನಾಡಲು ಬೇಕಾದ ಹಾಗೆ ನಮ್ಮೀ ರ್‍ಯಾಶನಲಿಸ್ಟ್ ಚಿಂತನ ಕ್ರಮಾನ ಬದಲಿಸಿಕೊಳ್ಳೋ ಅಗತ್ಯ ಇದೆಯಾ?

ನಂಗೆ ಹಾಗೆ ಅನಿಸಿಲ್ಲ. ಉದಾಹರಣೆಗೆ ವರದಕ್ಷಿಣೆ ಮದುವೆಗೆ ಹೋಗೋದಿಲ್ಲ ಅಂತ ನಾನೂ ನನ್ನ ಹೆಂಡತಿ ಮೀರಾ ಬಹಿಷ್ಕಾರ ಹಾಕ್ತಿದ್ದೆವು ಮೊದಲು. ಅಣ್ಣನ ಮಕ್ಕಳದೇ ಆಗಲಿ, ಅಕ್ಕನ ಮಕ್ಕಳದೇ ಆಗಲಿ ಹೋಗೋದಿಲ್ಲಾಂತ, ಗಟ್ಟಿಯಾಗಿ ಯಾರೂ ಹೋಗಲೇ ಇಲ್ಲ. ನಂತರ ಧಾರ್ಮಿಕ ಮದುವೆಗಳಿಗೂ ಹೋಗೋಲ್ಲ ಅಂತ ತೀರ್ಮಾನ ಮಾಡಿದೆವು. ಸರಳ ಮತ್ತು ಧಾರ್ಮಿಕವಲ್ಲದ ಮದುವೆಗಳಿಗೆ ಮಾತ್ರ ನಾನು ನನ್ನ ಮಡದಿ ಹೋಗ್ತೇವೆ. ನನಗೆ ಗೊತ್ತಿದೆ, ಅಷ್ಟೊಂದು ಎಕ್ಸ್‌ಟ್ರೀಮಲ್ಲಿ ನಿಲುವು ತಳೀಬೇಕಾಗಿರಲಿಲ್ಲ ಅಂತ. ಅದರೆ ಈ ನಿಲುವನ್ನು ತಳೆಯೋದು ಅಗತ್ಯ ಅಂತ ಯಾಕೆ ಮಾಡ್ತಾ ಇದೀನಿ ಅಂದ್ರೆ, ನನ್ನಂಥೋನು ಮಾಡದಾಗ ಇವನು ’ಯಾಕೆ ಮದುವೆಗೆ ಬರಲ್ಲ’ ಅಂತ ಕೆಲವರಿಗಾದ್ರೂ ಯೋಚನೆ ಮಾಡೋಕೆ ಹಚ್ಚೇಹಚ್ಚುತ್ತೆ. ಬಯ್ಯೋಕಾದ್ರೂ ಚರ್ಚೆ ಮಾಡತಾರೆ. ಬೇರೆ ತರಹ ಅವರಿಗೆ ಕಮ್ಯುನಿಕೇಟ್ ಮಾಡಕ್ಕಾಗಲ್ಲ. ಈಗ ವರದಕ್ಷಿಣೆ ಅನ್ನೋದು ಹೇಗಾಗಿದೆ ಅಂದ್ರೆ, ಅದಕ್ಕೆ ಸ್ಟ್ರಾಂಗ್ ಡಿಸ್ಸೆಂಟ್ ಹಾಕಲೇಬೇಕು.

ಅಡಿಗರ ಸಖ್ಯವೇ ಕುವೆಂಪು ಸಾಹಿತ್ಯದ ಬಗ್ಗೆ ಮೌಲ್ಯಮಾಪನ ಮಾಡಲು ನೆಗಟೀವ್ ಧೋರಣೆಯನ್ನು ಬೆಳೆಸಿಬಿಡ್ತಾ?

ಅಡಿಗರು “ಕುವೆಂಪು ಕವಿಯೇ ಅಲ್ಲ; ’ರಾಮಾಯಣ ದರ್ಶನಂ’ ಗಾತ್ರದಲ್ಲಿ ಮಹಾಕಾವ್ಯವೇ ಹೊರತು ಸತ್ವದಲ್ಲಿ ಅಲ್ಲ” ಎಂದು 1954ರಲ್ಲಿ ರಾಮಚಂದ್ರ ಶರ್ಮರಿಗೆ ನೀಡಿದ ಸಂದರ್ಶನದಲ್ಲಿ ಗರ್ಜಿಸಿದ್ದರು. ಹಾಗಿರುವಾಗ ನವ್ಯದ ಕಡೆ ಒಲಿದಿದ್ದ ಕನ್ನಡ ವಿದ್ಯಾರ್ಥಿಗಳಾಗಿದ್ದ ನಾನು, ಚನ್ನಯ್ಯನವರು ದೇಜಗೌ ಅವರಿಗೆ ಶತ್ರುಪಕ್ಷದವರ ಥರ ಕಂಡಿರಬೇಕು. ಕುವೆಂಪು ಸಾಹಿತ್ಯದ ಬಗ್ಗೆ ವಿಮರ್ಶೆಯ ಮಾತುಗಳನ್ನು ಆಡುವುದಕ್ಕೆ ಬೇರೆ ನಾನು ಶುರುಮಾಡಿದ್ದೆ. ಜತೆಗೆ ನವ್ಯದಲ್ಲಿ ಪ್ರಾಯೋಗಿಕ ವಿಧಾನ ಬಂತಲ್ಲ, ಆಗ ಕೃತಿಯನ್ನು ಸೂಕ್ಷ್ಮವಾಗಿ ಅದು ಸಾರ್ಥಕವಾಗಿದೆಯಾ ಅಂತಾ ನೋಡುವ ಒಂದು ಶಿಸ್ತು ಬಂತಲ್ಲ, ಆ ರೀತಿಯ ಪರಿಶೀಲನೆ ಮಾಡಿದಾಗ, ಕುವೆಂಪುದು ಹೇಳಿಕೆಯ ಕಾವ್ಯವಾಗಿ ಕಂಡದ್ದು ಹೌದು. ನಾನು ಅಲ್ಲಿ ಕಾವ್ಯದ ಬಗೆಗಿರುವ ನವ್ಯದ ಅಧ್ಯಯನ ಶಿಸ್ತನ್ನು ಹೆಚ್ಚಾಗಿ ಬಳಸಿದ್ದೀನಿ. ಅವರ ಕಾದಂಬರಿಗಳ ಬಗ್ಗೆ ಇನ್ನೂ ಹೆಚ್ಚು ಮುಕ್ತವಾಗಿರಬಹುದಾಗಿತ್ತು ಎಂದು ಗೊತ್ತಾದದ್ದು ಆಮೇಲೆ.

ಈಗ ಕುವೆಂಪು ಸಾಹಿತ್ಯಾನ ಹಿಂದಿಗಿಂತ ಭಿನ್ನವಾಗಿ ಪರಿಶೀಲಿಸಬೇಕು ಅಂತ ಅನಿಸ್ತಿದೆಯಾ?

ಖಂಡಿತಾ. ಬಹುಶಃ ಇವತ್ತಿಗೂ ಕನ್ನಡದಲ್ಲಿ ನಾವು ಇಡಿಯಾಗಿ ಒಪ್ಪಬಹುದಾದಂಥ ಸಾಹಿತ್ಯಕ ವ್ಯಕ್ತಿತ್ವಾನೇ ಬೆಳೆದಿಲ್ಲವೇನೊ ಅಂತನ್ನೊ ಒಂದು ಪ್ರಶ್ನೆ ನನಗೆ ಕಾಡ್ತಿದೆ. ಕುವೆಂಪು ಬಗ್ಗೆ ಮಾತ್ರವಲ್ಲ, ಕಾರಂತರ ಬಗ್ಗೇನೂ, ಬೇಂದ್ರೆ ಮಾಸ್ತಿ ಆಡಿಗರ ಬಗ್ಗೇನೂ ಹಾಗೇನೆ. ಇದು ನಮ್ಮ ಕಲ್ಚರಲ್ ಪ್ರಾಬ್ಲಮ್ಮೆ ಇರಬಹುದು ಅಂತ ಅನುಮಾನ ಕೂಡ ಇದೆ. ಇಡಿಯಾಗಿ ಅಗದೇ ಇರುವಂಥ ಈ ಗುಣ, ಬರೀ ವ್ಯಕ್ತಿತ್ವಕ್ಕೆ ಅಥವಾ ಪ್ರತಿಭೆಗೆ ಸಂಬಂಧಿಸಿದ್ದಲ್ಲ. ಯಾಕೆಂದರೆ ನಮ್ಮ ಈ ಲೇಖಕರೆಲ್ಲ ಕಡಿಮೆ ಪ್ರತಿಭಾವಂತರೇನೂ ಅಲ್ಲ. ಆದರೆ ಇಡಿಯಾಗಿ ಅವರ ಜೊತೆಯಲ್ಲಿ ಒಪ್ಪಿಗೆ ಕೊಡದೆ ಇರುವಂಥ ಸನ್ನಿವೇಶ ಇದೆ ನೋಡಿ, ಇದು ಒಟ್ಟು ನಮ್ಮ ಸಾಂಸ್ಕೃತಿಕ ಸಂದರ್ಭದ ಸಮಸ್ಯೇನೂ ಇರಬಹುದು. ಅದನ್ನು ಇನ್ನೂ ಶೋಧಿಸಬೇಕು ನಾವು.

ನಿಮಗೆ ಕೆಲವರು ’ಕನ್ನಡದ ಎಫ್ ಆರ್ ಲಿವೀಸ್’ ಅಂತ ಕರಿದಿದ್ದಾರೆ.

ಆಶ್ಚರ್ಯ ಏನು ಅಂದರೆ, ನನ್ನ ಇಂಗ್ಲಿಷಿನ ಓದು ಬಹಳ ಕಡಿಮೆ. ನಿಜವಾದ ಅರ್ಥದಲ್ಲಿ ಹೇಳಬೇಕು ಅಂದರೆ, ಲಿವೀಸನ್ನ ನಾನು ಸರಿಯಾಗಿ ಓದೇ ಇಲ್ಲ. ಓದಿದ್ದು ಪಾಠ ಮಾಡೊಕೆ ಬಂದಾಗೇನೆ. ಕನ್ನಡದಲ್ಲೆ ನವ್ಯ ಬೆಳೀತಾ ಇತ್ತಲ್ಲ, ಅದರ ಶ್ರದ್ಧಾವಂತ ವಿದ್ಯಾರ್ಥಿಯಾಗಿದ್ದೆ ನಾನು. ಸೃಜನಶೀಲ ಸಾಹಿತ್ಯ ಬರ್ತಾಯಿತ್ತು. ಕಾದಂಬರಿ ಸಣ್ಣಕತೆ ನಾಟಕ ಆಗಬಹುದು, ವಿಮರ್ಶೆ ಆಗಬಹುದು, ಬರ್ತಾ ಇತ್ತಲ್ಲ, ಅದನ್ನು ಶ್ರದ್ಧೆಯಿಂದ ಅಧ್ಯಯನ ಮಾಡಕೊಂಡು, ಸ್ವಾಧಿನಪಡಿಸಿಕೊಳ್ಳೋಕೆ ಪ್ರಯತ್ನಿಸ್ತಿದ್ದೆ. ಇದರ ಫಲವಾಗಿ ನವ್ಯದ ಚಿಂತನೆಯಲ್ಲಿ ಕ್ರೋಢಿಕರಿಸಿಕೊಳ್ಳುವಾಗ ಲಿವೀಸ್ ಬಗೆಯ ಚಿಂತನೆ ಬಂದಿರಬಹುದು. ಆದರೆ ಪ್ರತ್ಯೇಕವಾಗಿ ಲಿವೀಸ್ ನನಗೆ ಪ್ರಭಾವ ಬೀರಿಲ್ಲ.

ನಿಮ್ಮ ವಿಮರ್ಶೆಯಲ್ಲಿ ಅತಿಯಾದ ಎಚ್ಚರವಿದೆ. ಇದು ವಿಮರ್ಶೆಯಲ್ಲಿ ಮಿತಿ ಉಂಟುಮಾಡ್ತವೆ ಅಂತನ್ನೋದು ನನ್ನ ಗುಮಾನಿ.

ಆಕ್ಚುವಲಿ ಅವನ್ನ ನಾನು ಹಿಂಜರಿಕೆ ಅನ್ನಲಾರೆ. ಸೆನ್ಸ್ ಆಫ್ ರೆಸ್ಪಾನ್ಸಬಿಲಿಟಿ ಅಂತೀನಿ. ನೀವು ವಿಮರ್ಶೆ ಯಾಕೆ ಬರೀತಾ ಇದೀರಿ? ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ನೀವು ಭಾಗವಹಿಸ್ತಿದೀರಿ ಅಂತ ತಾನೇ? ಸಂಸ್ಕೃತಿ ಕಟ್ಟುವ ಒಂದು ಕ್ರಿಯೆಯಲ್ಲಿ ಪಾಲ್ಗೊಳ್ತಾ ಇರುವಾಗ, ಸಾಂಸ್ಕೃತಿಕ ಹೊಣೆಗಾರಿಕೆ ಇದೆಯಲ್ಲ, ಅದಕ್ಕೆ ಏನು ಹೇಳಿದರೂ ಸಲ್ಲುತ್ತೆ ಅನ್ನೋ ತರಹ ಆಗಬಾರದು. ಅದಕ್ಕೇ ಪದಗಳನ್ನ ಭಾಷೇನ ಬಳಸುವಾಗ ನಾನು ಬಹಳ ಎಚ್ಚರವಾಗಿರತೀನಿ. ನಾನು ಒಪ್ಪದೇ ಇರೋದಿಕ್ಕೆ ’ಮೂರ್ಖತನವಾದೀತು’ ಅಂತ ಎಂದೂ ಹೇಳಲಾರೆ. ನಿಮ್ಮನ್ನು ನಾನು ಒಪ್ಪದೇ ಇದ್ದರೂ ಕೂಡ ಸಹಿಸೊ ಸಂಸ್ಕಾರ ಇರಬೇಕು. ಆದರೆ ನಾನು ಒಪ್ಪೋದಿಲ್ಲ ಅಂತ ಹೇಳೋದಿಕ್ಕೆ ಹಿಂಜರೀಬಾರದು ಅಷ್ಟೆ.

ಕನ್ನಡ ವಿಮರ್ಶೆಯಲ್ಲಿ ನೀವು ಯಾವುದನ್ನು ದೊಡ್ಡ ಸಮಸ್ಯೆ ಅಥವಾ ತೊಡಕು ಅಂತ ಭಾವಿಸ್ತೀರಿ?

ನನಗೆ ವಿಮರ್ಶೆಯಲ್ಲಿ ಸಿನ್ಸಿಯಾರಿಟಿ ಬಹಳ ಮುಖ್ಯ. ನಾವು ಎಲ್ಲವನ್ನ ಒಪ್ತೀವಿ ಅಂತ ಅಲ್ಲ. ಆದರೆ ಅವರ ದನಿಗಳ ಬಗ್ಗೆ ಗೌರವ ಇಡಬೇಕು. ಸಿನ್ಸಿಯರಾದ ಕ್ರಿಟಿಕ್, ಆಡಿಯನ್ಸನ್ನ ಹೊರಗಡೆ ಇಟ್ಟುಕೊಂಡು ನೋಡ್ತಾ ಇರ್ತಾನೆ ಅಂತ. ತಾನು ಏನನ್ನ ಹೇಳತಾನೋ ಮೊದಲು ಅದರ ಬಗ್ಗೆ ಪ್ರಾಥಮಿಕ ಗೌರವ ಇಟ್ಟಿರ್ತಾನೆ. ಅದು ಉಳಿದವರಿಗೆ ಒಪ್ಪಿಗೆ ಆಗುತ್ತೊ ಇಲ್ಲವೋ, ಅದು ಬೇರೆ ವಿಷಯ. ಒಂದು ರೀತಿಯಲ್ಲಿ ನಿಷ್ಠೆ ಇರುತ್ತಲ್ಲ, ಆ ನಿಷ್ಠೆಯಲ್ಲಿ ಕಪಟ ಇರೋದಿಲ್ಲ. ಯಾರನ್ನೋ ಮೆಚ್ಚಿಸೋಕೆ ಮಾಡ್ತಿದಾರೆ ಅನಿಸೋದಿಲ್ಲ. ಕನ್ನಡದಲ್ಲಿ ಇಂಥ ಕ್ರಿಟಿಕ್ಸ್ ಬಹಳ ಕಡಿಮೆ.

******

ಜಿ.ಎಚ್. ನಾಯಕರು ಆಡುವ ಮಾತು, ಬಳಸುವ ಪದ, ವ್ಯಕ್ತಮಾಡುವ ಅಭಿಪ್ರಾಯ ಸಮತೂಕದಲ್ಲಿರಬೇಕು ಎಂಬ ಬಗ್ಗೆ ಬಹಳ ಕಾಳಜಿ ಮಾಡುವ ಚಿಂತಕರಾಗಿದ್ದರು. ಇದು ಅವರ ಸಾಹಿತ್ಯ ವಿಮರ್ಶೆ, ಚಿಂತನೆ ಮತ್ತು ಜೀವನ ವಿಧಾನದ ಸ್ವರೂಪವನ್ನೂ ಕೂಡ ಸೂಚಿಸುತ್ತದೆ. ಆಡುವ ಮಾತಿಗೂ ಮಾಡುವ ಕ್ರಿಯೆಗೂ ಜವಾಬ್ದಾರಿಯನ್ನು ಹೊರುವ ಈ ಗುಣದಿಂದ ಒಂದು ಬಗೆಯ ಪ್ರಜ್ಞಾಪೂರ್ವಕತೆ ಹಾಗೂ ಎಚ್ಚರದ ಪ್ರಜ್ಞೆ ಬರುತ್ತದೆ. ಅವರು ಸಾಹಿತ್ಯ ವಿಮರ್ಶೆ, ಸಾಮಾಜಿಕ ಚಿಂತನೆ ಹಾಗೂ ವೈಯಕ್ತಿಕವಾದ ಜೀವನ ಇವನ್ನು ಬೇರೆಬೇರೆ ಮಾಡುವುದಿಲ್ಲ. ಅವುಗಳ ನಡುವೆ ಅರ್ಥಪೂರ್ಣವಾದ ನೈತಿಕವಾದ ಸಂಬಂಧ ಇರಬೇಕೆಂದು ಬಯಸಿದರು. ಹೀಗಾಗಿ ಅವರ ಶಿಸ್ತು ಕೇವಲ ಸಾಹಿತ್ಯಕೃತಿಯ ಅನುಸಂಧಾನಕ್ಕೆ ಸಂಬಂಧಪಟ್ಟಿರಲಿಲ್ಲ. ನಾಯಕರು ನವ್ಯದ ಚಳವಳಿರಹಿತ ವ್ಯಕ್ತಿವಾದಿ, ಸಾಹಿತ್ಯವಾದಿ ಪರಿಸರದಲ್ಲಿ ವಿಮರ್ಶಕರಾಗಿ ಬರವಣಿಗೆ ಮಾಡಿದವರು. ಇದರ ಕೊರತೆಯನ್ನು ಅವರು ತಮ್ಮ ಬರೆಹದ ಎರಡನೆಯ ಘಟ್ಟದಲ್ಲಿ ತುಂಬಿಸಿಕೊಂಡರು. ಅವರ ನಂತರದ ಬರೆಹ ಹೆಚ್ಚಾಗಿ ಸಾಮಾಜಿಕ ಚರ್ಚೆಯನ್ನು ಒಳಗೊಳ್ಳುತ್ತ ಹೋಯಿತು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...