ರಾಜ್ಯ ಸರ್ಕಾರದ ಅಡಿಯಲ್ಲಿನ ಸಾರ್ವಜನಿಕ ವಿಶ್ವವಿದ್ಯಾನಿಲಯ, ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶಾತಿಗೆ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಅಳವಡಿಸಿಕೊಳ್ಳುವಂತೆ ಯುಜಿಸಿ ಮನವಿ ಮಾಡಿದೆ.
ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಅವರು ಎಲ್ಲಾ ವಿಶ್ವವಿದ್ಯಾಲಯಗಳು, ಉಪಕುಲಪತಿಗಳು, ಕಾಲೇಜುಗಳ ನಿರ್ದೇಶಕರು ಮತ್ತು ಪ್ರಾಂಶುಪಾಲರಿಗೆ ಪತ್ರ ಬರೆದು ಸಿಯುಇಟಿ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಪರೀಕ್ಷೆಗಾಗಿ ಏಪ್ರಿಲ್ 2ರಿಂದ ಏಪ್ರಿಲ್ 30ರವರೆಗೆ ಅಪ್ಲಿಕೇಶನ್ ಸ್ವೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 45 ಕೇಂದ್ರಗಳಿಗೆ ಈಗಾಗಲೇ ಸಿಯುಇಟಿ ಕಡ್ಡಾಯಗೊಳಿಸಲಾಗಿದೆ.
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಸಿಯುಇಟಿ ಅಳವಡಿಸಿಕೊಂಡರೆ, ವಿದ್ಯಾರ್ಥಿಗಳು ಬಹು ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕಾಗುವುದಿಲ್ಲ ಎಂದು ಜೈನ್ ಪತ್ರದಲ್ಲಿ ಬರೆದಿದ್ದಾರೆ. ಇದು ವಿವಿಧ ಮಂಡಳಿಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.
“ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾನಿಲಯಗಳು ಮತ್ತು ದೇಶದ ಇತರ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರವೇಶಾತಿಗೆ 12ನೇ ತರಗತಿ ಬೋರ್ಡ್‌ನ ಅಂಕಗಳನ್ನು ಬಳಸುತ್ತವೆ ಅಥವಾ ಯುಜಿ ಕಾರ್ಯಕ್ರಮಗಳಲ್ಲಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ. ವಿವಿಧ ದಿನಾಂಕಗಳಲ್ಲಿ, ಕೆಲವೊಮ್ಮೆ ಪರಸ್ಪರ ಹೊಂದಿಕೆಯಾಗುವ ಬಹು ಪ್ರವೇಶ ಪರೀಕ್ಷೆಗಳಿಗೆ ಹಾಜರಾಗದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು, ವಿವಿಧ ಬೋರ್ಡ್‌ಗಳ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲು, ಯುಜಿಸಿ ಎಲ್ಲಾ ರಾಜ್ಯ ವಿಶ್ವವಿದ್ಯಾಲಯಗಳನ್ನು ಸಿಯುಇಟಿಗೆ ಆಹ್ವಾನಿಸುತ್ತದೆ” ಎಂದು ಕಾರ್ಯದರ್ಶಿಯವರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಜುಲೈ ಮೊದಲ ವಾರದಲ್ಲಿ ಸಿಯುಇಟಿ ನಡೆಸುವ ಸಂಬಂಧ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಮಾರ್ಗಸೂಚಿಗಳನ್ನು ಹಂಚಿಕೊಂಡಿದೆ. NCERT 12ನೇ ತರಗತಿಯ ಪಠ್ಯಕ್ರಮದ ಆಧಾರದ ಮೇಲೆ ಪರೀಕ್ಷೆಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಇದನ್ನೂ ಓದಿರಿ: ಹಿಜಾಬ್ ವಿಚಾರದಲ್ಲಿ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ‘ಮಿಸ್ ಯುನಿವರ್ಸ್’ ಹರ್ನಾಜ್ ಸಂಧು
ಸಿಯುಇಟಿ ಏಕೆ ಅಪಾಯಕಾರಿ?
ಸಿಯುಇಟಿ- ಅಖಿಲ ಭಾರತ ಮಟ್ಟದ ಪರೀಕ್ಷೆಯಾಗಿದ್ದು, ನೀಟ್‌ನಂತಹ ಸ್ವರೂಪದ್ದಾಗಿರುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಬರುತ್ತಿರುವ ಸಿಯುಇಟಿಯಂತಹ ಪರೀಕ್ಷೆಗಳು ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ ಎಂದು ಎನ್‌ಇಪಿಯ ಆಳ, ಅಗಲ, ಉದ್ದೇಶ, ಗುರಿಯನ್ನು ಸೂಕ್ಷ್ಮವಾಗಿ ಗಮನಿಸಿದವರು ಹೇಳುತ್ತಿದ್ದಾರೆ. ಸಿಯುಇಟಿ ಜಾರಿಯನ್ನು ವಿರೋಧಿಸುತ್ತಿದ್ದಾರೆ.
ಶಿಕ್ಷಣ ತಜ್ಞರಾದ ಶ್ರೀಪಾದ್ ಭಟ್, “ಕೆಲ ವರ್ಷಗಳ ಹಿಂದೆ ಕೆಲ ಕೇಂದ್ರೀಯ ವಿವಿಗಳು ತಮ್ಮೊಳಗೆ ಒಪ್ಪಂದ ಮಾಡಿಕೊಂಡು ಪದವಿ ವ್ಯಾಸಂಗಕ್ಕೆ ಈ ಸಿಯುಸಿಇಟಿಯನ್ನು ಅಳವಡಿಸಿಕೊಂಡಾಗ ಶಿಕ್ಷಣದ ಭಾಗೀದಾರರು ಮೌನವಾಗಿದ್ದರು. ಮೊನ್ನೆ ಎಲ್ಲಾ 45 ಕೇಂದ್ರೀಯ ವಿವಿಗಳಿಗೂ ಸಿಯುಸಿಇಟಿಯನ್ನು ಕಡ್ಡಾಯಗೊಳಿಸಿದಾಗ ಶಿಕ್ಷಣದ ಭಾಗೀದಾರರು (ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು) ಇದರ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡಲಿಲ್ಲ. ಈಗ ಕೇಂದ್ರ ಶಿಕ್ಷಣ ಇಲಾಖೆಯು ಎಲ್ಲಾ ರಾಜ್ಯ ವಿವಿಗಳಿಗೂ ಇದನ್ನು ಕಡ್ಡಾಯಗೊಳಿಸಿ ಎಂದು ಆದೇಶ ಕೊಡುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಶಿಕ್ಷಣವೆಂದರೆ ಪರೀಕ್ಷೆ ನಡೆಸುವುದು, ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು ಮತ್ತು ಪರೀಕ್ಷೆ ನಡೆಸುವುದರ ಮೂಲಕ ಅದನ್ನು ಕಗ್ಗಂಟುಗೊಳಿಸಿ ಸಾಧ್ಯವಾದಷ್ಟು ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಹೊರಗಿಡುವುದು ಎನ್ನುವ ಪ್ರಭುತ್ವದ ನೀತಿ ಈ ಭಾಗೀದಾರರಿಗೆ ಒಪ್ಪಿಗೆಯೇ? ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿಪಡಿಸಿ ಸಮಾನ ಶಿಕ್ಷಣ ಜಾರಿಗೊಳಿಸದೆ ಈ ರೀತಿ ಏಕಪಕ್ಷೀಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇರುವುದರಿಂದ ಗ್ರಾಮೀಣ ಭಾಗದ ಮಕ್ಕಳು, ವಂಚಿತ ಸಮುದಾಯಗಳು ಶಿಕ್ಷಣದಿಂದ ಸಂಪೂರ್ಣವಾಗಿ ಹೊರಗುಳಿಯುವುದು ಖಚಿತ ಎಂಬುದು ಸಹ ಭಾಗೀದಾರರಿಗೆ ಸಮ್ಮತವೇ?” ಎಂದು ಕೇಳಿದ್ದಾರೆ.
ಈಗಾಗಲೇ ಈ ನೀಟ್ ಕುರಿತು ಅನೇಕ ವಿವಾದ, ಗೊಂದಲಗಳಿವೆ. ಗ್ರಾಮೀಣ ಭಾಗದ ಮಕ್ಕಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದೇ ಫಲಿತಾಂಶ ಈಗ ಮಾನವಿಕ ವಲಯಕ್ಕೂ ಅನ್ವಯಿಸುತ್ತದೆ. ಇದರ ದುಷ್ಪರಿಣಾಮವೆಂದರೆ ದಲಿತ, ತಳ ಸಮುದಾಯದ ಮೊದಲ ತಲೆಮಾರಿನ ಮಕ್ಕಳು ಪದವೀಧರರಾಗುತ್ತಿರುವುದೇ ಕೊನೆಗೊಳ್ಳುತ್ತದೆ. ಇದು ಶಿಕ್ಷಣದ ಭಾಗೀದಾರರಿಗೆ ಸಮ್ಮತವೇ? ಎಂದು ಕೇಳಿದ್ದಾರೆ.
“ಎಲ್ಲ ಹಂತದಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು ಎನ್ನುತ್ತದೆ ಎನ್‌ಇಪಿ. ಕಾಲೇಜು ಸೇರ್ಪಡೆಗೆ, ಹಾಸ್ಟೆಲ್ ಪ್ರವೇಶಾತಿಗೆ- ಹೀಗೆ ಎಲ್ಲೆಡೆಯೂ ಸ್ಪರ್ಧಾತ್ಮಕ ಪರೀಕ್ಷೆ ನಡೆಯಬೇಕು. ಸ್ಪರ್ಧೆ ಇರಬೇಕು ಅನ್ನುತ್ತದೆ. ನಾವು ಎಷ್ಟೇ ಅಸಮಾನ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಶಿಕ್ಷಣ ಪರಿಸ್ಥಿತಿ, ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಎಂದರೂ, ಶೇ. 66ರಷ್ಟಿರುವ ಗ್ರಾಮೀಣ ವಿದ್ಯಾರ್ಥಿಗಳು, ಎಲ್ಲ ಸೌಲಭ್ಯಗಳನ್ನು ಹೊಂದಿರುವ ನಗರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದು ಎಂದು ಹೇಳುತ್ತಾ ಬಂದಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮಸ್ಯೆಗಳಿದ್ದರೆ ನಿಮ್ಮ ಹಣೆಬರಹ ಎನ್ನುತ್ತಾರೆ. ರಾಜ್ಯದ ಹಣೆಬರಹ ಎನ್ನುತ್ತಾರೆ. ಬಳ್ಳಾರಿಯಲ್ಲಿ, ಚಾಮರಾಜನಗರದಲ್ಲಿ ಶಾಲೆ ಸರಿ ಇಲ್ಲವೆಂದಾರೆ ಎನ್‌ಟಿಎ ಏನು ಮಾಡಲಾಗದು ಎಂದು ಪ್ರತಿಕ್ರಿಯಿಸುತ್ತಾರೆ” ಎಂಬ ಬೇಸರವನ್ನು ವ್ಯಕ್ತಪಡಿಸುತ್ತಾರೆ ಶ್ರೀಪಾದ್ ಭಟ್.
ಇದನ್ನೂ ಓದಿರಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು
“ಶಿಕ್ಷಣ ಎಂದರೆ ಪರೀಕ್ಷೆ ಎಂದಾಗಿದೆ. ಶಾಲಾ ಶಿಕ್ಷಕರಾಗಬೇಕಾದರೆ ಪದವಿ, ಬಿಎಡ್, ಟಿಇಟಿ, ಪ್ರವೇಶ ಪರೀಕ್ಷೆ ಈ ಎಲ್ಲದರಲ್ಲೂ ಅರ್ಹತೆ ಪಡೆದಿರಬೇಕು. ಇಷ್ಟೊಂದು ಪರೀಕ್ಷೆ ಯಾಕೆಂದು ಕೇಳಿದರೆ, ನಮಗೆ ಪ್ರತಿಭಾವಂತರು ಬೇಕು; ಹೀಗಾಗಿ ಫಿಲ್ಟರ್ ಮಾಡುತ್ತೇವೆ ಎನ್ನುತ್ತಾರೆ. ಅಂದರೆ ಪದವಿ ತರಗತಿ ನಡೆಸಿದ್ದು ಇವರೇ ಅಲ್ಲವೇ? ಇವರೇ ನಡೆಸುವ ಪದವಿ ತರಗತಿಯಲ್ಲಿ ಗುಣಮಟ್ಟ ಇಲ್ಲವೆಂದು ಅರ್ಥವೇ? ಈ ಮಾತು ಎಲ್ಲ ಅರ್ಹತಾ ಪರೀಕ್ಷೆಗೂ ಅನ್ವಯಿಸುತ್ತದೆ. ಎನ್‌ಇಪಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾತನಾಡುತ್ತದೆ. ನಾವು ಆರಂಭದಲ್ಲಿಯೇ ಎನ್‌ಇಪಿಯನ್ನು ಹಿಮ್ಮೆಟ್ಟಿಸಬೇಕಿತ್ತು. ಈಗ ತಡವಾಗಿದೆ; ಆದರೆ ಕಾಲಮಿಂಚಿಲ್ಲ” ಎಂದಿದ್ದಾರೆ.
“ಸ್ಕಾಲರ್‌ಶಿಪ್‌ಗೂ ಪರೀಕ್ಷೆ ಬರುವ ಸಮಯ ಬರುತ್ತದೆ. ಪ್ರಶ್ನಿಸಿದರೆ, ನವೋದಯ, ಮೊರಾರ್ಜಿ ಶಾಲೆಗಳ ಉದಾಹರಣೆಗಳನ್ನು ನೀಡುತ್ತಾರೆ. ನವೋದಯದಲ್ಲಿ 40 ಮಕ್ಕಳನ್ನು ತೆಗೆದುಕೊಳ್ಳುತ್ತಾರೆ. ಮಿಕ್ಕ ಲಕ್ಷಾಂತರ ಮಕ್ಕಳನ್ನು ಸೇರುವಂತೆಯೇ ಇಲ್ಲವಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಈ ಎನ್‌ಇಪಿ ಅಂದ್ರೆ ಏನು? ಅದರೊಳಗ ಏನೈತಿ, ಏನಿಲ್ಲ?
ಇದು ಮತ್ತೊಂದು ನೀಟ್ ಕಥೆಯಾಗುತ್ತದೆ: ವಿ.ಪಿ.ನಿರಂಜನಾರಾಧ್ಯ
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು, “ಕೇಂದ್ರೀಯ ವಿವಿ ಪ್ರವೇಶಾತಿ ಪರೀಕ್ಷೆ ಮತ್ತೊಂದು ನೀಟ್‌ನಂತಾಗುತ್ತದೆ” ಎಂದು ತಿಳಿಸಿದ್ದಾರೆ.
“ನಮ್ಮ ಮಕ್ಕಳು ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದರೂ ನೀಟ್ ಪಾಸ್ ಆಗುತ್ತಿಲ್ಲ. ಉನ್ನತ ಶಿಕ್ಷಣದ ಸ್ವಾಯತ್ತತೆಯನ್ನು ಹಾಳು ಮಾಡಲಾಗುತ್ತಿದೆ. ಯಾವ ರೀತಿ ಪಠ್ಯಕ್ರಮ ಇರಬೇಕು, ಪ್ರವೇಶಾತಿ ಹೇಗಿರಬೇಕು, ಬೇರೆ ಬೇರೆ ವರ್ಗದ ಮಕ್ಕಳಿಗೆ ಹೇಗೆ ಅವಕಾಶ ಕಲ್ಪಿಸಬೇಕು ಎಂಬುದೆಲ್ಲ ವಿಶ್ವವಿದ್ಯಾನಿಲಯಕ್ಕೆ ಬಿಟ್ಟ ವಿಚಾರವಾಗಿತ್ತು. ಈಗ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುತ್ತಿದೆ” ಎಂದು ಹೇಳಿದ್ದಾರೆ.
“ಪ್ರವೇಶಾತಿ ಪರೀಕ್ಷೆಗಳೇ ತಪ್ಪು. ಯಾಕೆಂದರೆ ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಿದರೆ ಹತ್ತನೇ ತರಗತಿ, ಹನ್ನೆರಡನೇ ತರಗತಿಯ ಕ್ವಾಲಿಫೈ ಪರೀಕ್ಷೆಗಳಿಗೆ ಅರ್ಥವಿಲ್ಲದಂತಾಗುತ್ತದೆ. ಶಿಕ್ಷಣವನ್ನು ಕೇಂದ್ರೀಕೃತ ಮಾಡುವುದು ಸರಿಯಲ್ಲ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಅಂದರೆ ಆಯಾ ರಾಜ್ಯದ ತೀರ್ಮಾನಕ್ಕೆ ಬರುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯವನ್ನು ಕೇಂದ್ರ ಸ್ಥಾಪಿಸಿರಬಹುದು, ಅನುದಾನ ಕೊಟ್ಟಿರಬಹುದು. ಆದರೆ ಆಯಾ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಧ್ಯೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಅದರ ವಿರುದ್ಧ ರಾಜ್ಯ ಸರ್ಕಾರ ಧ್ವನಿ ಎತ್ತಬೇಕಾಗುತ್ತದೆ” ಎಂದಿದ್ದಾರೆ.
“ನ್ಯಾಷನಲ್ ಟೆಸ್ಟಿಗ್ ಏಜೆನ್ಸಿಯನ್ನು ಪರೀಕ್ಷೆಗಳನ್ನು ನಡೆಸಲೆಂದೇ ರೂಪಿಸಲಾಗಿದೆ. ಎಲ್ಲ ಕೋರ್ಸ್‌ಗಳ ಪರೀಕ್ಷೆಗಳನ್ನು ಇದು ನಡೆಸುತ್ತಿದೆ. ಹೇಳಬೇಕೆಂದರೆ ಇದು ಸಂವಿಧಾನ ಬಾಹಿರ. ಸ್ವಾಯತ್ತತೆಗೆ ಧಕ್ಕೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಎಲ್ಲ ವಿವಿಗಳ ಪ್ರವೇಶಾತಿಗೂ ಬರುವ ಸಾಧ್ಯತೆ ಅಲ್ಲಗಳೆಯಲಾಗದು. ಎನ್‌ಇಪಿಯ ಉದ್ದೇಶವೇ ಸ್ಪರ್ಧಾತ್ಮಕ ಪರೀಕ್ಷೆ” ಎಂದು ತಿಳಿಸಿದ್ದಾರೆ.
“ಮುಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಬದಲು ಕೋಚಿಂಗ್ ಸೆಂಟರ್‌ಗಳು ಪ್ರಾರಂಭವಾಗುತ್ತವೆ. ಪ್ರವೇಶಾತಿ ಪಡೆಯಲಿಕ್ಕಾಗಿ ಕೋಚಿಂಗ್ ಪಡೆಯಲು ವಿದ್ಯಾರ್ಥಿಗಳು ಹೋಗುತ್ತಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಕೋಚಿಂಗ್ ಕೇಂದ್ರೀತ ಮಾಡಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ವಿ.ಪಿ.ನಿರಂಜನಾರಾಧ್ಯ.
ಇದನ್ನೂ ಓದಿರಿ: ಕೇಂದ್ರೀಯ ವಿವಿ ಪ್ರವೇಶಕ್ಕೆ ಏಕರೂಪದ ಪರೀಕ್ಷೆ: ಆತಂಕ ಏಕೆ? ಮುಂದಿನ ದಾರಿ ಯಾವುದು?


