ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ರೈತರ ಹತ್ಯೆ ಕುರಿತು ಒಕ್ಕೂಟ ಸರ್ಕಾರದ ವಿರುದ್ಧ ಕಿಡಿ ಕಾರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರೈತರ ಮೇಲೆ ನಿಮಗ್ಯಾಕೆ ಅಷ್ಟೊಂದು ದ್ವೇಷ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಲಖಿಂಪುರ್ ಖೇರಿ ಹತ್ಯಾಕಾಂಡದ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಮಗನನ್ನು ಘಟನೆಯ ಆರೋಪಿ ಎಂದು ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, “ಇಡೀ ವ್ಯವಸ್ಥೆ ರೈತರನ್ನು ಕೊಲೆ ಮಾಡಿದ ಕೊಲೆಗಾರರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಏಕೆ ಬಂಧಿಸಿಲ್ಲ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಪುತ್ರ ಆಶೀಶ್ ಚಲಾಯಿಸುತ್ತಿದ್ದರು: ಗಾಯಾಳು ರೈತ ಮುಖಂಡ
“ಕಳೆದ ಒಂದು ವರ್ಷದಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ 600 ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಇದರ ನಡುವೆ ರೈತರ ಮೇಲೆ ಕಾರು ಹತ್ತಿಸಿ ಕೊಲ್ಲಲಾಗಿದೆ. ರೈತರ ಮೇಲೆ ಏಕೆ ನಿಮಗೆ ಅಷ್ಟೊಂದು ದ್ವೇಷ?” ಎಂದು ಪ್ರಧಾನಿಯನ್ನು ಕೇಳಿದ್ದಾರೆ.
ಜೊತೆಗೆ ಹತ್ಯಾಕಾಂಡದಲ್ಲಿ ಹೆಸರು ಕೇಳಿ ಬಂದರೂ ಅಜಯ್ ಮಿಶ್ರಾ ಅವರನ್ನು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಸ್ಥಾನದಿಂದ ಏಕೆ ವಜಾಗೊಳಿಸಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಸಂತ್ರಸ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡಲಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನ ಮಂತ್ರಿಯವರೇ, ಒಂದೆಡೆ, ಸರ್ಕಾರವು ‘ಆಜಾದಿ ಕಾ ಮಹೋತ್ಸವ (ಸ್ವಾತಂತ್ರ್ಯದ ಹಬ್ಬ)’ ಆಚರಿಸುತ್ತಿದೆ ಮತ್ತು ಮತ್ತೊಂದೆಡೆ, ಲಖಿಂಪುರಕ್ಕೆ ಹೋಗುವ ದಾರಿಯಲ್ಲಿ ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ. ಯಾವ ರೀತಿಯ ಸ್ವಾತಂತ್ರ್ಯ ಇದು? ಬ್ರಿಟಿಷರು ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು “ಎಂದು ಬಿಜೆಪಿ ಸರ್ಕಾರವನ್ನು ಬ್ರಿಟಿಷರಿಗೆ ಹೋಲಿಸಿದ್ದಾರೆ.
ಲಖಿಂಪುರ್ ಖೇರಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಇದನ್ನೂ ಓದಿ: ರೈತರ ಹತ್ಯೆಯಲ್ಲಿ ಸಚಿವ ‘ಅಜಯ್ ಮಿಶ್ರಾ’ ಹೆಸರು: ಯುಪಿ ಬ್ರಾಹ್ಮಣ ಪ್ರಾತಿನಿಧ್ಯಕ್ಕೆ ಸಂಕಷ್ಟ!


