2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಆಡಳಿತರೂಢ ಬಿಜೆಪಿ ಬೂತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದು ಮಹತ್ವದ ಕೆಲಸ ಎಂದಿದೆ. ಹೀಗಾಗಿ ದೀಪಾವಳಿ ನೆಪದಲ್ಲಿ ತನ್ನ 30 ಲಕ್ಷ ಬೂತ್ ಮಟ್ಟದ ಕಾರ್ಯಕರ್ತರಿಗೆ ಬಿಜೆಪಿ ದೀಪಾವಳಿ ಉಡುಗೊರೆಯನ್ನು ಕಳುಹಿಸಿದೆ.
ಉತ್ತರ ಪ್ರದೇಶ ರಾಜ್ಯದಲ್ಲಿ 1.63 ಲಕ್ಷ ಬೂತ್‌ಗಳಿದ್ದು, 1.5 ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ಬಿಜೆಪಿ 20-20 ಸದಸ್ಯರ ಸಮಿತಿಗಳನ್ನು ರಚಿಸಿದೆ.
“ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಬಿಜೆಪಿ ಕುಟುಂಬದಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಪ್ರಮುಖ ಕೊಂಡಿಯಾಗಿದ್ದಾರೆ. ದೀಪಾವಳಿಯಂದು ಎಲ್ಲರಿಗೂ ಉಡುಗೊರೆಗಳನ್ನು ನೀಡುವ ಸಂಪ್ರದಾಯವಿದೆ. ಹೀಗಾಗಿ ಪಕ್ಷವು ಈ ಬಾರಿ 30 ಲಕ್ಷಕ್ಕೂ ಹೆಚ್ಚು ಬೂತ್ ಕಾರ್ಯಕರ್ತರಿಗೆ ಉಡುಗೊರೆಗಳನ್ನು ಕಳುಹಿಸಿದೆ” ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ವಿಜಯ್ ಬಹದ್ದೂರ್ ಪಾಠಕ್ ಹೇಳಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್: ಪಾಕ್ ಜಯ ಸಂಭ್ರಮಿಸಿದರೆ ದೇಶದ್ರೋಹ ಪ್ರಕರಣ-ಯೋಗಿ ಆದಿತ್ಯನಾಥ್
ಈ ಬಾರಿ ಬಾಗಿಲಿಗೆ ಹಾಕುವ ತೋರಣಗಳು ಮತ್ತು ಕಮಲದ ಆಕಾರದ ಮಣ್ಣಿನ ದೀಪವನ್ನು ಒಳಗೊಂಡಿರುವ ಉಡುಗೊರೆ ಪೆಟ್ಟಿಗೆಗಳನ್ನು ಎಲ್ಲಾ ಬೂತ್ ಸಮಿತಿಗಳ ಸದಸ್ಯರಿಗೆ ಕಳುಹಿಸಲಾಗಿದೆ.
ಈ ಉಡುಗೊರೆಗಳು ಚುನಾವಣಾ ಪ್ರಚಾರದ ಭಾಗವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪಾಠಕ್, “ಸದ್ಯಕ್ಕೆ ಪಕ್ಷದ ಪ್ರಮುಖ ಗಮನವೇ 2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಾಗಿದೆ. ಹೀಗಾಗಿ ಜನರ ಬಳಿಗೆ ಚುನಾವಣಾ ಚಿಹ್ನೆಯನ್ನು ತೆಗೆದುಕೊಂಡು ಹೋಗುವುದು ಸಹಜ ಪ್ರಕ್ರಿಯೆ” ಎಂದು ಹೇಳಿದ್ದಾರೆ.
“ಜನರು ಕಮಲದ ದೀಪವನ್ನು ಬೆಳಗಿಸಿದಾಗ, ಕತ್ತಲೆ ಮಾತ್ರ ಮಾಯವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಾರಂಭಿಸಿದ ಅಭಿವೃದ್ಧಿ ಯೋಜನೆಗಳಲ್ಲಿ ನಂಬಿಕೆ ಬಲಗೊಳ್ಳುತ್ತದೆ” ಎಂದು ಪಾಠಕ್ ಹೇಳಿದರು.
2017ರ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೂತ್ ನಿರ್ವಹಣಾ ಸೂತ್ರವನ್ನು ಜಾರಿಗೆ ತಂದರು. ಜೊತೆಗೆ ಬೂತ್ ಮಟ್ಟದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಮತೀಯ ಸಂಕೇತಗಳಿಗೆ ಎನ್‌ಎಸ್‌ಡಿ ಇನ್‌ಸ್ಟಾಗ್ರಾಮ್ ಖಾತೆ ದುರ್ಬಳಕೆ: 272 ಜೀವಪರರ ಬಹಿರಂಗ ಪತ್ರ



ಬಿಜೆಪಿ ಉಡುಗೊರೆ ಹಂಚುತ್ತಿರುವುದು ಅವರ ಅಪ್ಪನ ಆಸ್ತಿಯಿಂದಲ್ಲ.
ಸರಕಾರದ ಬೊಕ್ಕಸದಿಂದ….
ಸರಕಾರಕ್ಕೆ ತೆರಿಗೆ ಕಟ್ಟುತ್ತಿರುವುದು ಬಿಜೆಪಿ ಮಾತ್ರವಲ್ಲ.
ಸರ್ವ ಜನರೂ ಸರಕಾರಕ್ಕೆ ಹಲವು ರೂಪದಲ್ಲಿ ನಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುವಾಗ ಸರಕಾರ ಎಲ್ಲರಿಗೂ ಸಮಾನ ರೀತಿಯಲ್ಲಿ ಉಡುಗೊರೆ ನೀಡಬೇಕು