ಭಾರತದ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ದೇಶವು ನೂರು ಮನೆಗಳುಳ್ಳ ಗ್ರಾಮ ನಿರ್ಮಾಣ ಮಾಡಿರುವುದನ್ನು ಮತ್ತು ಲೈನ್ ಆಫ್ ಕಂಟ್ರೋಲ್‌ನಲ್ಲಿ ಉದ್ವಿಗ್ವ ಸ್ಥಿತಿ ಇರುವುದನ್ನು ಅಮೆರಿಕ ರಕ್ಷಣಾ ವಿಭಾಗದ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ವರದಿಯ ‘ಚೀನಾ-ಭಾರತ ಗಡಿ ಬಿಕ್ಕಟ್ಟು’ ಎಂಬ ಅಧ್ಯಾಯದಲ್ಲಿ 2020ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು 100 ಮನೆಗಳ ಒಂದು ಹಳ್ಳಿಯನ್ನು ಸ್ವಾಯುತ್ತ ಟಿಬೇಟ್ ಮತ್ತು ಭಾರತದ ಅರುಣಾಚಲ ಪ್ರದೇಶದ ಲೈನ್ ಆಫ್ ಕಂಟ್ರೋಲ್‌ನ ವಿವಾದಿತ ಜಾಗದಲ್ಲಿ ನಿರ್ಮಿಸಿದೆ ಎಂದು ಬರೆಯಲಾಗಿದೆ. ವರದಿಯನ್ನು ಯುಎಸ್ ಕಾಂಗ್ರೆಸ್‌ಗೆ ಸಲ್ಲಿಸಲಾಗಿದೆ.
ಚೀನಾದ ಈ ನಡೆ ಮತ್ತು ಆ ಜಾಗದಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿರುವುದು ಭಾರತೀಯ ಸರ್ಕಾರ ಮತ್ತು ಮಾಧ್ಯಮಗಳನ್ನು ದಿಗ್ಭ್ರಮೆಗೆ ದೂಡಿದೆ ಎಂದು ವರದಿ ಹೇಳಿದೆ. ತ್ಸಾರ್ ಚು ನದಿ ದಂಡೆ ಪ್ರದೇಶದಲ್ಲಿರುವ ಈ ಗ್ರಾಮ ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿಗೆ ಸೇರಿದೆ. ಇದು 1962ರ ಯುದ್ಧಕ್ಕೂ ಮೊದಲಿನಿಂದಲೂ ಭಾರತ-ಚೀನಾ ನಡುವಿನ ವಿವಾದಿತ ಪ್ರದೇಶಗಳಲ್ಲೊಂದಾಗಿದೆ.
ಈ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಸೈನ್ಯದ ತುಕಡಿಯನ್ನು ದಶಕಕ್ಕೂ ಮೊದಲೇ ಚೀನಾ ದೇಶವು ನಿಯೋಜಿಸಿತ್ತು. ಆದರೆ 2020 ರಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಭಾರತಕ್ಕೆ ಸೇರಿದ ಪ್ರದೇಶದೊಳಗೆ ಚೀನಾವು ರಸ್ತೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಗ್ರಾಮವನ್ನೇ ನಿರ್ಮಾಣ ಮಾಡಿದೆ.
ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಭಾರತ ಸರ್ಕಾರದ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆಯುತ್ತಿರುವುದನ್ನು ಲೆಕ್ಕಿಸದೆ ಚೀನಾವು ಅಲ್ಲಿ ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ ಮತ್ತು ಯುದ್ಧತಂತ್ರದ ಕ್ರಮಗಳಿಗೆ ಮುಂದಾಗಿದೆ ಎಂದು ವರದಿ ಹೇಳಿದೆ.
ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಸ್ಥಾನಗಳನ್ನು ನಿರ್ಮಿಸುವ ಚೀನಾದ ನೀತಿಯು ಟಿಬೆಟ್ ಪ್ರದೇಶದಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಬಹು-ಶತಕೋಟಿ ಡಾಲರ್ ಯೋಜನೆಯ ಒಂದು ಭಾಗವಾಗಿದೆ. ಇದು ಗಡಿ ಪಟ್ಟಣಗಳಿಗೆ ಬೃಹತ್ ರಸ್ತೆ ಮತ್ತು ರೈಲು ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಈ ಪ್ರದೇಶದಲ್ಲಿ 600 ಕ್ಕೂ ಹೆಚ್ಚು ಸಂಪೂರ್ಣ ಅಭಿವೃದ್ಧಿ ಹೊಂದಿದ ಹಳ್ಳಿಗಳನ್ನು ನಿರ್ಮಿಸುವ ಯೋಜನೆಯನ್ನು ಒಳಗೊಂಡಿದೆ ಎನ್ನಲಾಗಿದೆ.
ಇನ್ನೊಂದೆಡೆ ಲಡಾಖ್ ಲೈನ್ ಆಫ್ ಕಂಟ್ರೋಲ್‌ನಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವಿನ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಚೀನಾದ ಕಡೆಯಿಂದ ಎಷ್ಟು ಜನರು ಮರಣ ಹೊಂದಿದರು ಎಂಬುದನ್ನು ಚೀನಾ ದೇಶವು ಬಹಿರಂಗಪಡಿಸಿಲ್ಲ.
ಗಾಲ್ವಾನ್ ಘರ್ಷಣೆಯನ್ನು ಉಲ್ಲೇಖಿಸಿರುವ ಯುಎಸ್ ರಕ್ಷಣಾ ವರದಿಯ “ಫೆಬ್ರವರಿ 2021 ರಲ್ಲಿ, ಸೆಂಟ್ರಲ್ ಮಿಲಿಟರಿ ಕಮಿಷನ್ (CMC) ನಾಲ್ಕು ಚೀನಿ ಸೈನಿಕರಿಗೆ ಮರಣೋತ್ತರ ಪ್ರಶಸ್ತಿಗಳನ್ನು ಘೋಷಿಸಿದೆ, ಆದರೂ ಚೀನಾವು ಸಾವುನೋವುಗಳ ಒಟ್ಟು ಸಂಖ್ಯೆಯನ್ನು ತಿಳಿಸಿಲ್ಲ ಎಂದಿದೆ.
“ಈ ಘರ್ಷಣೆಗೆ ಭಾರತೀಯ ಸೈನಿಕರ ಪ್ರಚೋದನೆಯೇ ಕಾರಣ ಎಂದು ಪ್ರತಿಪಾದಿಸಿರುವ ಚೀನಾವೂ ಲೈನ್ ಆಫ್ ಕಂಟ್ರೋಲ್‌ನಿಂದ ಭಾರತೀಯ ಸೇನೆ ಹಿಂದಿರುಗುವವರೆಗೂ ಮತ್ತು ಆ ಪ್ರದೇಶದಲ್ಲಿ ತನ್ನ ಮೂಲಭೂತ ಸೌಕರ್ಯಗಳ ಯೋಜನೆ ನಿಲ್ಲಿಸುವವರೆಗೂ ಯಾವುದೇ ಪಡೆಗಳನ್ನು ಹಿಂತೆಗೆದುಕೊಳ್ಳಲು ಬೀಜಿಂಗ್ ನಿರಾಕರಿಸಿದೆ” ಎಂದು ವರದಿ ಹೇಳಿದೆ.
ಯುಎಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ವರದಿಯು “ಚೀನಾದ ಮಿಲಿಟರಿ ಸಾಮರ್ಥ್ಯ ಮತ್ತು ಅದರ ಜಾಗತಿಕ ಮಹತ್ವಾಕಾಂಕ್ಷೆಗಳಿಂದ ಸವಾಲನ್ನು ಎದುರಿಸುವ ಪ್ರಾಮುಖ್ಯತೆಯ ಸಭೆ ಅಗತ್ಯವಾಗಿದೆ” ಎಂದು ವಿವರಿಸಿದೆ.
ಇದನ್ನೂ ಓದಿ; ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಮಹಿಳಾ ಕೇಂದ್ರಿತ ರಾಜಕಾರಣ: ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿ?


