ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯನ್ನು ಮಗನ ಮದುವೆಗೆ ಮತ್ತು ಮನೆ ಕಟ್ಟಲು ಬಳಸಿಕೊಂಡೆ ಎಂದು ತೆಲಂಗಾಣದ ಆದಿಲ್‌ಬಾದ್‌ನ ಬಿಜೆಪಿ ಸಂಸದ ಸೋಯಂ ಬಾಪುರಾವ್ ಹೇಳುವ ಮೂಲಕ ನಿಧಿಯ ದುರ್ಬಳಕೆಯನ್ನು ಸ್ವಯಂ ಒಪ್ಪಿಕೊಂಡಿದ್ದಾರೆ.
“ನಾನು ಹಿಂದಿನ ಸಂಸದರಂತೆ ನಿಧಿಯ ಒಟ್ಟು ಹಣವನ್ನು ಲಪಟಾಯಿಸಿಲ್ಲ. ಬದಲಿಗೆ ಸ್ವಲ್ಪ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ, ಉಳಿದ ಹಣವನ್ನು ಮಗನ ಮದುವೆ ಮತ್ತು ಮನೆ ಕಟ್ಟಲು ಬಳಸಿಕೊಂಡಿರುವೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ ತಟ್ಟುವುದನ್ನು ನೋಡಬಹುದಾಗಿದೆ.
A purported video of Adilabad #BJP MP Soyam Bapu Rao goes viral where he confesses that he used Members of Parliament Local Area Development (MPLAD) funds to construct his house and son's wedding and said he is ‘not like previous MPs who swindled total fund’. The video has given… pic.twitter.com/aBRzOPNwkA
— Ashish (@KP_Aashish) June 19, 2023
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉಲ್ಟಾ ಹೊಡೆದಿರುವ ಸಂಸದರು, “ಪಕ್ಷದಲ್ಲಿ ತನ್ನ ಬೆಳವಣಿಗೆಯನ್ನು ಇಷ್ಟಪಡದ ಕೆಲವು ಬಿಜೆಪಿ ನಾಯಕರ ಕೈವಾಡವಿದು” ಎಂದು ಆರೋಪಿಸಿದ್ದಾರೆ.
“ಬಿಜೆಪಿ ಜಿಲ್ಲಾಧ್ಯಕ್ಷ ಪಾಯಲ್ ಶಂಕರ್ ಹಾಗೂ ಆದಿಲಾಬಾದ್ ಮಾಜಿ ಸಂಸದ ರಮೇಶ್ ರಾಥೋಡ್ ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದು, ಇಡೀ ಸಂಚಿಕೆ ಹಿಂದೆ ಅವರ ಕೈವಾಡವಿದೆ. ಬಿಜೆಪಿಯ ಕೆಲ ನಾಯಕರಿಗೆ ನನ್ನ ಮಾತು ಇಷ್ಟವಿಲ್ಲ. ಅವರು ನನ್ನನ್ನು ನಿಂದಿಸಲು ಮತ್ತು ನನ್ನನ್ನು ತೊಡೆದುಹಾಕಲು ಈ ಎಲ್ಲಾ ಸಾಹಸಗಳನ್ನು ಮಾಡುತ್ತಿದ್ದಾರೆ” ಎಂದು ಸೋಯಂ ಬಾಪುರಾವ್ ಹೇಳಿದ್ದಾರೆ.
MPLAD ಹಣ ದುರುಪಯೋಗದ ಆರೋಪವನ್ನು ತಳ್ಳಿಹಾಕಿದ ಬಾಪು ರಾವ್, “ತಮ್ಮ ಮನೆ ಮತ್ತು ಮಗನ ಮದುವೆಯ ನಿರ್ಮಾಣದಲ್ಲಿ ನಿರತರಾಗಿರುವ ಕಾರಣ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಣವನ್ನು ಬಳಸಲಾಗಿಲ್ಲ. ನಿಧಿಯನ್ನು ಖರ್ಚು ಮಾಡಲು ಅಧಿಕೃತ ಕಾರ್ಯವಿಧಾನ ಇರುವುದರಿಂದ ಯಾವುದೇ ಸಂಸದರು ತಮ್ಮ ವೈಯಕ್ತಿಕ ಬಳಕೆಗಾಗಿ MPLAD ಹಣವನ್ನು ಬಳಸಲು ಯಾವುದೇ ಅವಕಾಶವಿಲ್ಲ” ಎಂದು ಹೇಳಿದ್ದಾರೆ.
ಆದರೆ ಅವರ ಮೊದಲ ಹೇಳಿಕೆ ವೈರಲ್ ಆಗಿದ್ದು, ಬಿಜೆಪಿ ಹೇಗೆ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ವಿಪಕ್ಷಗಳಾದ ಬಿಆರ್‌ಎಸ್ ಮತ್ತು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿವೆ.
ಇದನ್ನೂ ಓದಿ; ಬಡವರ ಅನ್ನದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ರಾಜ್ಯದ ಜನರು ಮತ್ತೊಮ್ಮೆ ಪಾಠ ಕಲಿಸುತ್ತಾರೆ: ಡಿಕೆಶಿ



No comments