Homeಕರ್ನಾಟಕತಪ್ಪಿದ ಸಚಿವ ಸ್ಥಾನ; ಉಪಸಭಾಪತಿ ಸ್ಥಾನಕ್ಕೆ ಒಪ್ಪಿದ ಹಿಂದುಳಿದ ಉಪ್ಪಾರ ಸಮುದಾಯದ ಸಿ.ಪುಟ್ಟರಂಗ ಶೆಟ್ಟಿ

ತಪ್ಪಿದ ಸಚಿವ ಸ್ಥಾನ; ಉಪಸಭಾಪತಿ ಸ್ಥಾನಕ್ಕೆ ಒಪ್ಪಿದ ಹಿಂದುಳಿದ ಉಪ್ಪಾರ ಸಮುದಾಯದ ಸಿ.ಪುಟ್ಟರಂಗ ಶೆಟ್ಟಿ

- Advertisement -
- Advertisement -

ಒಂದು ಕಾಲಕ್ಕೆ ಲಿಂಗಾಯತ ಅಭ್ಯರ್ಥಿಗಳೇ ಗೆದ್ದುಬರುತ್ತಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರವನ್ನು ಹಿಂದುಳಿದ ವರ್ಗದ ಉಪ್ಪಾರ ಸಮುದಾಯದ ತೆಕ್ಕೆಗೆ ತಂದ ಶ್ರೇಯಸ್ಸಿಗೆ ಪಾತ್ರರಾದವರು ಸಿ.ಪುಟ್ಟರಂಗ ಶೆಟ್ಟಿ. ಸತತ ನಾಲ್ಕನೇ ಬಾರಿಗೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿ ದಾಖಲೆ ನಿರ್ಮಿಸಿ, ಈಗ ಕರ್ನಾಟಕ ವಿಧಾನಸಭೆಯ ಉಪಸಭಾಪತಿ ಆಗಲೂ ಒಪ್ಪಿರುವ ಅವರ ರಾಜಕಾರಣ ವರ್ಣರಂಜಿತವಾದದ್ದು. ಪ್ರಭಾವಿ ಜಾತಿಗಳ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ, ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳ ಸಮೀಕರಣದಲ್ಲಿ ಗೆದ್ದುಬಂದಿರುವ ಶೆಟ್ಟರ ಮೇಲೆ ಕ್ಷೇತ್ರದ ಜನತೆಯಲ್ಲಿ ಅಪಾರ ನಿರೀಕ್ಷೆಗಳಿವೆ.

ಅತಿ ಹಿಂದುಳಿದ ಪ್ರದೇಶ ಎಂಬ ಅವಜ್ಞೆಗೆ ಹೆಸರಾದ ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದು (ದಿವಂಗತರಾದ ಆರ್. ಧ್ರುವನಾರಾಯಣ, ಎಚ್.ಎಸ್.ಮಹದೇವಪ್ರಸಾದ್ ಅವರಂತಹ ರಾಜಕೀಯ ಧುರೀಣರ ಫಲವಾಗಿ ಜಿಲ್ಲೆಯು ಒಂದಿಷ್ಟು ಚೇತರಿಕೆ ಕಂಡಿದ್ದು ಬೇರೆ ಮಾತು.) ಚಾಮರಾಜನಗರ ವಿಧಾನಸಭೆಯೂ ಇದಕ್ಕೆ ಅಪವಾದವಲ್ಲ. ಹೆಚ್ಚಿನ ಅಭಿವೃದ್ಧಿಯನ್ನು ಕಂಡಿರದಿದ್ದರೂ, ಪ್ರಭಾವಿ ಲಿಂಗಾಯತ ಸಮುದಾಯದ ಪೈಪೋಟಿಯ ನಡುವೆ ಶೆಟ್ಟರು ಗೆದ್ದು ಬರುತ್ತಿರುವುದರ ಹಿಂದೆ, ಅವರ ನಿರಂತರ ಜನಸಂಪರ್ಕ, ದೇಸಿ ರಾಜಕಾರಣ, ಯಾವ ಗ್ರಾಮದಲ್ಲಿ ಯಾವ ಜಾತಿಯ ಎಷ್ಟು ಮತಗಳಿವೆ ಎಂಬುದನ್ನು ಬಾಯಿತುದಿಯಲ್ಲೇ ಹೇಳಬಲ್ಲ ಶೆಟ್ಟರ ಲೆಕ್ಕಾಚಾರ- ಈ ಎಲ್ಲವೂ ಸಹಕರಿಸಿವೆ.

ವಿ.ಸೋಮಣ್ಣ

ಹಿಂದುಳಿದ ವರ್ಗಕ್ಕೆ ಸೇರಿದ ಉಪ್ಪಾರ ಸಮುದಾಯದ ಏಕೈಕ ಶಾಸಕ ಎಂದೇ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಈ ಬಾರಿ ನಿಜದ ಸವಾಲು ಎದುರಾಗಿತ್ತು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿಸಿ, ಲಿಂಗಾಯತ ಸಮುದಾಯದ ಪ್ರಭಾವಿ ರಾಜಕಾರಣಿ ವಿ.ಸೋಮಣ್ಣನವರನ್ನು ಎರಡು (ವರುಣಾ, ಚಾಮರಾಜನಗರ) ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಣಕ್ಕಿಳಿಸಿತ್ತು. ವರುಣಾದಲ್ಲಿ ಸಿದ್ದರಾಮಯ್ಯನವರು ಪ್ರತಿಸ್ಪರ್ಧಿಯಾಗಿದ್ದರಿಂದ ಸೋಮಣ್ಣನವರ ಕಣ್ಣು ಹೆಚ್ಚಿನದಾಗಿ ಚಾಮರಾಜನಗರದ ಮೇಲೆಯೇ ಇತ್ತು. ಮತ್ತೊಂದೆಡೆ ಬಹುಜನ ಸಮಾಜ ಪಾರ್ಟಿಯಿಂದ ಹೋರಾಟಗಾರ ಹ.ರ. ಮಹೇಶ್ ಸ್ಪರ್ಧಿಸಿದ್ದರು. ದಲಿತರ ಮತಗಳನ್ನು ಹೆಚ್ಚಿನದಾಗಿ ಬಿಎಸ್‌ಪಿ ಪಡೆದರೆ ಶೆಟ್ಟರಿಗೆ ಸೋಲು ಖಚಿತ ಎಂದೇ ನಂಬಲಾಗಿತ್ತು. ಆದರೆ ಅದ್ಯಾವ ಮ್ಯಾಜಿಕ್ ಕೂಡ ನಡೆಯದೆ, ಬಹುಸಂಖ್ಯಾತ ಲಿಂಗಾಯತರ ಮತಗಳ ಹೊರತಾಗಿಯೂ ಶೆಟ್ಟರು ಮತ್ತೆ ಗೆದ್ದರು. ಸೋಮಣ್ಣ ಎರಡು ಕ್ಷೇತ್ರಗಳಲ್ಲೂ ಸೋಲುಂಡರು.

ಚಾಮರಾಜನಗರ ಕ್ಷೇತ್ರವು ಒಂದು ಕಾಲಕ್ಕೆ ಲಿಂಗಾಯತ ಸಮುದಾಯದ ಅಭ್ಯರ್ಥಿಗಳ ಹಿಡಿತದಲ್ಲಿತ್ತು. ಆದರೆ ಪುಟ್ಟರಂಗಶೆಟ್ಟರು ಕ್ಷೇತ್ರವನ್ನು ಪ್ರವೇಶಿಸಿದ ಬಳಿಕ, ಇಲ್ಲಿ ಗಣನೀಯವಾಗಿರುವ ಉಪ್ಪಾರ ಸಮುದಾಯದ ಮತಗಳು ಸಂಘಟಿತವಾದವು. ನಾಯಕ, ಲಿಂಗಾಯತ ಸಮುದಾಯಗಳು ಬಿಜೆಪಿ ತೆಕ್ಕೆಯಲ್ಲಿದ್ದರೂ ದಲಿತ, ಉಪ್ಪಾರ, ಅಲ್ಪಸಂಖ್ಯಾತ, ಕುರುಬ ಇನ್ನಿತರ ಸಣ್ಣಪುಟ್ಟ ಸಮುದಾಯಗಳ ಮನಗೆಲ್ಲುವಲ್ಲಿ ಶೆಟ್ಟರು ಸಫಲರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ವಿಜಯಪತಾಕೆಯನ್ನು ಸತತವಾಗಿ ಹಾರಿಸುತ್ತ ಬಂದಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಚಾಮರಾಜನಗರ ಕ್ಷೇತ್ರದಿಂದ ಗೆದ್ದವರ ಪೈಕಿ ಸಚಿವರಾದವರು ಇವರೊಬ್ಬರೇ, ಇಲ್ಲಿ ಸತತ ನಾಲ್ಕು ಬಾರಿ ಗೆದ್ದವರೂ ಇವರೊಬ್ಬರೇ ಎಂಬ ಹೆಗ್ಗಳಿಕೆ ಇದೆ.

ಇದನ್ನೂ ಓದಿ: ಅನ್ನಭಾಗ್ಯಕ್ಕೆ ಕತ್ತರಿ ಹಾಕಲು ಮುಂದಾದ ಕೇಂದ್ರ: ಪ್ರತಿಭಟನಾ ಪತ್ರ ಬರೆಯುವ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಯಾವ ಪಕ್ಷ ಅಧಿಕಾರ ಹಿಡಿಯುತ್ತದೆಯೋ ಆ ಪಕ್ಷದ ಪ್ರತಿನಿಧಿಗಳು ಚಾಮರಾಜನಗರದಲ್ಲಿ ಗೆಲ್ಲುವುದಿಲ್ಲ ಎಂಬ ಮಿಥ್ ಒಡೆದು ಹಾಕಿದ್ದು ಶೆಟ್ಟರು. 2013ರಲ್ಲಿ ಶೆಟ್ಟರು ಗೆದ್ದಿದ್ದರು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈ ಬಾರಿಯೂ ಸಚಿವರಾಗುವ ಕನಸನ್ನು ಶೆಟ್ಟರು ಹೊತ್ತಿದ್ದರು. ಕೊನೆಕ್ಷಣದಲ್ಲಿ ಮಿನಿಸ್ಟರ್ ಆಗುವ ಅವಕಾಶ ತಪ್ಪಿತ್ತು. ಉಪ ಸಭಾಪತಿ ಆಗುವುದಕ್ಕೆ ಹಿಂದೇಟು ಕೂಡ ಹಾಕಿದ್ದರು. ಆದರೆ ಹೈಕಮಾಂಡ್ ಮತ್ತು ಸಿದ್ದರಾಮಯ್ಯನವರ ಮಾತಿಗೆ ಒಪ್ಪಿ ಈ ಸ್ಥಾನವನ್ನು ಅಲಂಕರಿಸಲು ಒಪ್ಪಿದ್ದಾರೆ. “ಒಂದು ವರ್ಷ ಉಪಸಭಾಪತಿಯಾಗಿರು, ಮುಂದಿನ ವರ್ಷ ಸಚಿವ ಸ್ಥಾನ ನೀಡಲಾಗುವುದು” ಎಂದು ಸಿದ್ದರಾಮಯ್ಯ ತಿಳಿಸಿರುವುದಾಗಿ ಶೆಟ್ಟರು ಹೇಳಿಕೊಂಡಿದ್ದಾರೆ.

ಹ.ರ. ಮಹೇಶ್

ಇಲ್ಲಿಯವರೆಗೆ ಚಾಮರಾಜನಗರ ಕ್ಷೇತ್ರದಲ್ಲಿ ನಡೆದಿರುವ 17 ವಿಧಾನಸಭಾ ಚುನಾವಣೆಗಳ ಪೈಕಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪುನರಾಯ್ಕೆಯಾಗಿರುವುದನ್ನು ಕಾಣಬಹುದು. 3 ಬಾರಿ ಆಯ್ಕೆಯಾದ ಯು.ಎಂ.ಮಾದಪ್ಪ, 4 ಬಾರಿ ಗೆದ್ದಿರುವ ಪುಟ್ಟಸ್ವಾಮಿ ಹಾಗೂ 3 ಬಾರಿ ಆಯ್ಕೆಯಾದ ವಾಟಾಳ್ ನಾಗರಾಜ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಆದರೆ ಸತತ ನಾಲ್ಕು ಬಾರಿ ಯಾರೂ ಗೆದ್ದಿರಲಿಲ್ಲ. ಪುಟ್ಟರಂಗಶೆಟ್ಟರು ಈ ಸಾಧನೆ ಮಾಡಿದ ಲಿಂಗಾಯತೇತರ ಜಾತಿಯ ಪ್ರತಿನಿಧಿಯೂ ಹೌದು.

ಅಂದಾಜಿನ ಪ್ರಕಾರ ಕ್ಷೇತ್ರದಲ್ಲಿ 50 ಸಾವಿರಕ್ಕೂ ಪರಿಶಿಷ್ಟ ಜಾತಿ (ಹೊಲೆಯರು, ಮಾದಿಗರು, ಭೋವಿ, ಲಂಬಾಣಿ ಇತ್ಯಾದಿ) ಮತದಾರರು ಇಲ್ಲಿದ್ದಾರೆ. ಲಿಂಗಾಯತರು ಸುಮಾರು 50 ಸಾವಿರ, ಉಪ್ಪಾರರು ಸುಮಾರು 35 ಸಾವಿರ, ಪರಿಶಿಷ್ಟ ಪಂಗಡ (ನಾಯಕರು) ಮತ್ತು ಮುಸ್ಲಿಮರು ತಲಾ 20,000, ಕುರುಬರು 8,000 ಮತದಾರರು ಇದ್ದಾರೆಂದು ಹೇಳಲಾಗುತ್ತಿದೆ.

ಶೆಟ್ಟರಲ್ಲಿ ಜಾತಿ ಲೆಕ್ಕಾಚಾರ ಕೇಳಿದರೆ ಯಾವ ಊರಲ್ಲಿ, ಯಾವ ಜಾತಿಯ ಮನೆಗಳು ಎಷ್ಟಿವೆ, ಎಷ್ಟು ಮತಗಳಿವೆ ಎಂಬುದನ್ನು ಕರಾರುವಾಕ್ಕಾಗಿ ಪಟಪಟನೇ ಹೇಳುತ್ತಾರೆ. ಈ ಊರಲ್ಲಿ ಬಳೆಗಾರ ಶೆಟ್ಟರು ಇಷ್ಟಿದ್ದಾರೆ, ಗೆಜ್ಜಗಾರ ಶೆಟ್ಟರು ಇಷ್ಟಿದ್ದಾರೆ, ಈಡಿಗರು ಇಷ್ಟಿದ್ದಾರೆ, ಆಚಾರಿಗಳು ಇಷ್ಟಿದ್ದಾರೆ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಶೆಟ್ಟರ ರಾಜಕೀಯ ಜೀವನ ಆರಂಭವಾಗಿದ್ದು ಮಂಡಲ ಪಂಚಾಯಿತಿಯಿಂದ.

ಈ ಬಾರಿ ದಲಿತರು ಹೇಗೆ ಮತ ಚಲಾಯಿಸುತ್ತಾರೆ ಎನ್ನುವುದರ ಮೇಲೆ ಸೋಮಣ್ಣ ಮತ್ತು ಪುಟ್ಟರಂಗಶೆಟ್ಟರ ಫಲಿತಾಂಶ ನಿರ್ಧಾರವಾಗಲಿದೆ ಎನ್ನುವ ಮಾತಿತ್ತು. ಆದರೆ ದಲಿತರ ವೋಟುಗಳನ್ನು ಸಾಮಾನ್ಯವಾಗಿ ಹೆಚ್ಚು ಪಡೆಯುವ ಬಿಎಸ್‌ಪಿ 6,461 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಯಿತು. ಹೀಗಾಗಿ 83,858 ಮತಗಳನ್ನು ಪಡೆದು 7,533 ಮತಗಳ ಅಂತರದಲ್ಲಿ ಸೋಮಣ್ಣನವರನ್ನು ಮಣಿಸಿದರು.

ಪುಟ್ಟರಂಗಶೆಟ್ಟರು ಸತತವಾಗಿ ಗೆಲ್ಲಲು ಲಿಂಗಾಯತೇತರ ಜಾತಿಗಳ ಬಲವಷ್ಟೇ ಅಲ್ಲದೆ ಅವರು ಜನರೊಂದಿಗೆ ಬೆರೆಯುವ ಗುಣವೂ ಕಾರಣವಾಗುತ್ತಾ ಬಂದಿದೆ. ಆ ಮಟ್ಟಿಗೆ ಅವರು ಜನಬಳಕೆಯ ರಾಜಕಾರಣಿ ಎನ್ನುವ ಮಾತಿದೆ.

ಮಂಡಲ ಪಂಚಾಯಿತಿಯಿಂದ ವಿಧಾನಸಭೆವರೆಗೆ

ಚಾಮಜರಾನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದ ಚಾಮಶೆಟ್ಟಿ ಮತ್ತು ನಂಜಮ್ಮ ದಂಪತಿಯ ಹತ್ತು ಮಕ್ಕಳಲ್ಲಿ ಸಿ.ಪುಟ್ಟರಂಗಶೆಟ್ಟಿ ಆರನೆಯವರಾಗಿ 1954 ನವೆಂಬರ್ 30ರಂದು ಜನಿಸಿದರು. ಉಪ್ಪಿನಮೋಳೆಯಲ್ಲೇ 1ರಿಂದ 5ನೇ ತರಗತಿಯವರೆಗೆ ಓದಿದರು. ಯಳಂದೂರಿನ ಜಾಗೀರದಾರ್ ಮುನ್ಸಿಪಲ್ ಶಾಲೆಯಲ್ಲಿ 6 ಮತ್ತು 7ನೇ ತರಗತಿ ಮುಗಿಸಿದರು. 1975ರಲ್ಲಿ ಕೊಳ್ಳೇಗಾಲದ ಮಹದೇಶ್ವರ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1979ರಲ್ಲಿ ಇದೇ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.

ಕುಟುಂಬದಲ್ಲಿ ಶಿಕ್ಷಣ ಪಡೆದ ಮೊದಲ ವ್ಯಕ್ತಿಯೂ ಆಗಿದ್ದ ಶೆಟ್ಟರು ದಾವಣಗೆರೆಯಲ್ಲಿ ಕೆಎಸ್‌ಸಿಸಿ ನಿಗಮದಲ್ಲಿ ಗುಮಾಸ್ತರಾಗಿಯೂ ಒಂದೂವರೆ ವರ್ಷ ಕೆಲಸ ಮಾಡಿದ್ದರು. ನಂತರ ರಾಜೀನಾಮೆ ಕೊಟ್ಟು ಸ್ವಗ್ರಾಮಕ್ಕೆ ಮರಳಿ, ಕೃಷಿಯಲ್ಲಿ ತೊಡಗಿಸಿಕೊಂಡರು. ಇಂದಿಗೂ ಕೃಷಿಯನ್ನು ಕೈಬಿಟ್ಟಿಲ್ಲ. ಪಂಚೆ, ಬನಿಯನ್ ಹಾಕಿಕೊಂಡು ಹೊರಟರೆ ಶೆಟ್ಟರು ಕೃಷಿಯಲ್ಲಿ ತೊಡಗಿದ್ದಾರೆಂದೇ ಅರ್ಥ.

ಎಚ್.ಎಸ್.ಮಹದೇವಪ್ರಸಾದ್

7 ವರ್ಷ ನ್ಯಾಯಬೆಲೆ ಅಂಗಡಿ ನಡೆಸಿದ್ದ ಶೆಟ್ಟರು 1982ರಲ್ಲಿ ಮೊದಲ ಬಾರಿಗೆ ಗೌಡಹಳ್ಳಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ಮಂಡಲ ಪ್ರಧಾನರಾಗಿ ಸೇವೆ ಸಲ್ಲಿಸಿದರು. ಇವರ ಕ್ರಿಯಾಶೀಲತೆ ಜನರ ಗಮನ ಸೆಳೆಯಿತು. ನಂತರ ಯಳಂದೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಟಿಎಪಿಸಿಎಂಎಸ್ ನಿರ್ದೆಶಕರಾಗಿ ಹಾಗೂ ಎರಡು ಬಾರಿ ಅಧ್ಯಕ್ಷರಾಗಿ ಜನಸಂಪರ್ಕ ವಿಸ್ತರಿಸಿಕೊಂಡರು.

ಯಳಂದೂರಿನ ಬಳಿಕ ಚಾಮರಾಜನಗರದತ್ತ ಗಮನ ಹರಿಸಿದ ಶೆಟ್ಟರು ಎಪಿಎಂಸಿ ಸದಸ್ಯರಾಗಿ ಐದು ವರ್ಷ ಕೆಲಸ ಮಾಡಿದರು. ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಒಮ್ಮೆ ಉಪಾಧ್ಯಕ್ಷರಾಗಿದ್ದರು. ಆನಂತರದಲ್ಲಿ ಕಾಂಗ್ರೆಸ್ ನಾಯಕರು ಶೆಟ್ಟರತ್ತ ಕಣ್ಣುಹಾಯಿಸಿದರು. ಸತತವಾಗಿ ಲಿಂಗಾಯತರೇ ಗೆಲ್ಲುತ್ತಿದ್ದ ಈ ಕ್ಷೇತ್ರದಲ್ಲಿ ಉಪ್ಪಾರರೂ ಗಣನೀಯವಾಗಿ ಇರುವುದನ್ನು ಗಮನಿಸಿದ ಆರ್.ಧ್ರುವನಾರಾಯಣ, ವಿ.ಶ್ರೀನಿವಾಸ್ ಪ್ರಸಾದ್ ಥರದ ರಾಜಕಾರಣಿಗಳು ಶೆಟ್ಟರನ್ನು ವಿಧಾನಸಭಾ ಚುನಾವಣೆಯತ್ತ ಕರೆತಂದರು. ಮೊದಲ ಬಾರಿಗೆ 2008ರಲ್ಲಿ ಶಾಸಕರಾದ ಶೆಟ್ಟರು ಮತ್ತೆ ಸೋಲು ಕಾಣಲೇ ಇಲ್ಲ.

ಮೂಲತಃ ಜನತಾ ಪರಿವಾರದವರಾದ ಶೆಟ್ಟರು 1973ರಲ್ಲಿಯೇ ಕಾಂಗ್ರೆಸ್‌ನೊಂದಿಗೆ ಸಕ್ರಿಯರಾಗಿದ್ದರು. ಕೊಳ್ಳೇಗಾಲದ ಮಾಜಿ ಶಾಸಕ ದಿವಂಗತ ಸಿದ್ದಮಾದಯ್ಯನವರ ಶಿಷ್ಯರಾಗಿ ಯಳಂದೂರಿನ ತಾಲ್ಲೂಕು ಮಟ್ಟದ ಆಶ್ರಯ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿಯಾಗಿ, ಮೈಸೂರು ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗದ ಅಧ್ಯಕ್ಷರಾಗಿ, ಚಾ.ನಗರ ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ, ಮೈಸೂರು ಯೂನಿವರ್ಸಿಟಿಯ ಸಿಂಡಿಕೇಟ್ ಸದಸ್ಯರಾಗಿ ಗಮನ ಸೆಳೆದರು.

ಕರ್ನಾಟಕ ರಾಜ್ಯ ಉಪ್ಪಾರ ಸಂಘಕ್ಕೆ, ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘಕ್ಕೆ, ಮೈಸೂರು ಚಾ.ನಗರ ಉಪ್ಪಾರ ವಿದ್ಯಾರ್ಥಿನಿಲಯಗಳ ಹೋರಾಟ ಸಮಿತಿಗೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಸಮುದಾಯದ ನಂಟು ಚೆನ್ನಾಗಿದೆ. 2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿಯಾಗಿ, ನಂತರ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ 14 ತಿಂಗಳ ಕಾಲ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿಯೂ ಆಗಿದ್ದರು.

ಸಾಮಾನ್ಯರಲ್ಲಿ ಸಾಮಾನ್ಯರ ಅಂತ್ಯ ಸಂಸ್ಕಾರಗಳಲ್ಲಿ ಕೂಡ ಭಾಗಿಯಾಗುವ ಶೆಟ್ಟರು ಜನಬಳಕೆಯ ರಾಜಕಾರಣಿ. ಸ್ಥಳೀಯವಾಗಿಯೇ ಇದ್ದುಕೊಂಡು ತಕ್ಷಣವೇ ಯಾರಿಗಾದರೂ ಸ್ಪಂದಿಸುತ್ತಾರೆ. ಇಂದಿಗೂ ಸ್ವಗ್ರಾಮ ಉಪ್ಪಿನಮೋಳೆಯಲ್ಲೇ ವಾಸವಿರುವ ಅವರು ಬೆಳಿಗ್ಗೆ ಎಂಟು ಗಂಟೆ ವೇಳೆಗೆ ಚಾಮರಾಜನಗರದ ಅತಿಥಿಗೃಹದಲ್ಲಿ ಹಾಜರಿರುತ್ತಾರೆ. ಅಲ್ಲಿಗೆ ಊಟವನ್ನು ಪಾರ್ಸಲ್ ತರಿಸಿಕೊಂಡು, ಪೇಪರ್ ಕವರ್‌ನಲ್ಲೇ ತಿನ್ನುತ್ತಾರೆ. ಶಾಸಕರೆಂಬ ಹಮ್ಮು ತೋರಿದವರಲ್ಲ. ಈ ಸರಳತೆಯೇ ಅವರ ಹೆಚ್ಚುಗಾರಿಕೆ. ಮಾತನಾಡುವಾಗ ಕೆಲವೊಮ್ಮೆ ಗ್ರಾಮೀಣ ಬೈಗುಳಗಳನ್ನೂ ಶೆಟ್ರು ಉದುರಿಸಿಬಿಡುತ್ತಾರೆಂಬುದು ಆರೋಪ ಅವರ ಮೇಲಿದೆ. ಇಂದಿಗೂ ಕೃಷಿಯನ್ನು ಕೈಬಿಟ್ಟಿಲ್ಲ. ತಾವಾಗಿಯೇ ತೆಂಗಿನಮರವನ್ನು ಹತ್ತಬಲ್ಲರು, ಕಳೆ ಕೀಳಬಲ್ಲರು- ಕೃಷಿಯೊಂದಿಗೆ ಅಷ್ಟು ಆಪ್ತತೆಯನ್ನು ಹೊಂದಿದ್ದಾರೆ.

ಸರ್ಕಾರಿ ಯೋಜನೆಗಳನ್ನು ತರುವಲ್ಲಿ ಅಷ್ಟಾಗಿ ಮುತುವರ್ಜಿಯನ್ನು ಶೆಟ್ಟರು ವಹಿಸುವುದಿಲ್ಲ ಎಂಬುದು ಬಹುದೊಡ್ಡ ಆಕ್ಷೇಪ. 2013ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಒಂದಿಷ್ಟು ಕೆಲಸಗಳು ಚಾಮರಾಜನಗರದಲ್ಲಿ ಆಗಿವೆ. ಮೆಡಿಕಲ್ ಕಾಲೇಜು, ಆಸ್ಪತ್ರೆ, ಲಾ ಕಾಲೇಜು, ಕೃಷಿ ಕಾಲೇಜು, ಚಾಮರಾಜನಗರ ರಸ್ತೆಗಳ ಅಗಲೀಕರಣ ಇತ್ಯಾದಿ. ಇದರಲ್ಲಿ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಪಾತ್ರವೂ ಇತ್ತು. ಅಭಿವೃದ್ಧಿಗೆ ಅಷ್ಟು ತಲೆಕೆಡಿಸಿಕೊಳ್ಳದಿದ್ದರೂ ಜನಸಂಪರ್ಕವೇ ಅವರ ಗೆಲುವಿನ ಗುಟ್ಟು. ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಕ್ಷೇತ್ರದ ಜನರು ಬಯಸುತ್ತಿರುವುದರತ್ತಲೂ ಶೆಟ್ಟರು ಮುತುವರ್ಜಿ ವಹಿಸುವ ಅಗತ್ಯವಂತೂ ಇದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...