ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಗಳ ನಡುವೆ, ಮಹಿಳೆಯರ ಸುರಕ್ಷತೆಗಾಗಿ “ಮಿಷನ್ ಶಕ್ತಿ” ಎಂಬ ಅಭಿಯಾನವನ್ನು ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ರಾಜ್ಯಸರ್ಕಾರ ಆರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ಉತ್ತರಪ್ರದೇಶದಲ್ಲಿ ಮಹಿಳಾ ಭದ್ರತೆಗಾಗಿ ‘ಮಿಷನ್ ಶಕ್ತಿ’ ಎಂಬ ಕಾರ್ಯಕ್ರಮವನ್ನು ಪ್ರಾಂಭಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಲರಾಂಪುರದಲ್ಲಿದ್ದಾರೆ” ಎಂದು ಹೇಳಿದೆ.
ಈ ಕಾರ್ಯಕ್ರಮದಲ್ಲಿ ಆದಿತ್ಯನಾಥ್ ಮಾತನಾಡಿ, “ಅತ್ಯಂತ ದುರದೃಷ್ಟಕರ ಘಟನೆಯ ಹತ್ರಾಸ್ ಸಂತ್ರಸ್ತೆಗೆ ಗೌರವ ಸಲ್ಲಿಸುವ ಈ ಕಾರ್ಯಕ್ರಮದಲ್ಲಿ ಯುವತಿಯರು ಆತ್ಮರಕ್ಷಣೆಯ ತಂತ್ರಗಳ ಪ್ರದರ್ಶನ ನೀಡಿದರು. ಇಲ್ಲಿ ಮಿಷನ್ ಶಕ್ತಿ ಅಭಿಯಾನವನ್ನು ಪ್ರಾರಂಭಿಸಲು ನನಗೆ ಸಂತೋಷವಾಗುತ್ತಿದೆ. ಇದು ರಾಜ್ಯ ಪ್ರತಿಯೊಬ್ಬ ಮಹಿಳೆಗೆ ಭದ್ರತೆ ಮತ್ತು ಗೌರವವನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆ” ಎಂದರು.
ಇದನ್ನೂ ಓದಿ :ಉತ್ತರ ಪ್ರದೇಶವನ್ನು ಬಿಜೆಪಿ ’ಅಪರಾಧ ಪ್ರದೇಶ’ವನ್ನಾಗಿ ಮಾಡಿದೆ: ಪ್ರಿಯಾಂಕ ಗಾಂಧಿ
ರಾಜ್ಯಾದ್ಯಂತ 1535 ಪೊಲೀಸ್ ಠಾಣೆಗಳಲ್ಲಿ ಮಹಿಳಾ ದೂರುದಾರರಿಗಾಗಿ ಈಗ ಪ್ರತ್ಯೇಕ ಕೊಠಡಿ ಇರಲಿದ್ದು, ಅಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಹಾಜರಿರುತ್ತಾರೆ. ಅವರ ದೂರಿನ ಮೇಲೆ ತುರ್ತು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ವಿಧಿಸಲಾಗುತ್ತದೆ” ಎಂದು ಹೇಳಿದರು.
To pay homage to the victim of a very unfortunate incident, I decided to kick-off Mission Shakti campaign from Balrampur & I'm extremely delighted to launch this programme. Mission Shakti aims at guaranteeing security & respect for every woman in the state: UP CM Yogi Aditya Nath https://t.co/8Uw6lyfGc3 pic.twitter.com/XWrOTjnSbP
— ANI UP (@ANINewsUP) October 17, 2020
ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವೆ ಈ ಕಾರ್ಯಕ್ರಮದ ಆರಂಭ ಆಶಾದಾಯಕವಾಗಿ ಕಂಡರೂ, ಇದು ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸಲಿದೆ ಮತ್ತು ಎಷ್ಟು ಉಪಕಾರಿಯಾಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಅದಾಗ್ಯೂ, ರಾಜ್ಯ ಸರ್ಕಾರ ಮತ್ತು ಆದಿತ್ಯನಾಥ್ ಮೇಲೆ ಪ್ರತಿಪಕ್ಷಗಳೂ ಸೇರಿದಂತೆ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿವೆ ಎಂದು ಅಪರಾಧ ದಾಖಲೆಗಳ ವಿಭಾಗದ ವರದಿ ಹೇಳಿತ್ತು. ಇದರ ನಡುವೆ ಈ ಕಾರ್ಯಕ್ರಮದ ಉದ್ಘಾಟನೆ ಜನತೆ ಮತ್ತು ವಿರೋಧ ಪಕ್ಷಗಳ ಕಣ್ಣೊರೆಸುವ ತಂತ್ರವಾಗಿರಬಹುದೇ ಎಂದು ಹಲವರು ಟೀಕಿಸಿದ್ದಾರೆ.
ಇದನ್ನೂ ಓದಿ :ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?


