ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಮುಸ್ಲಿಂ ಯುವಕ ಸಾವನ್ನಪ್ಪಿರುವುದರ ಕುರಿತು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದೆ.
ಸರ್ಕಾರದಿಂದ ವರದಿ ಬಂದ ನಂತರ ಆಯೋಗದಿಂದ ತಂಡವೊಂದು ಸ್ಥಳಕ್ಕೆ ಭೇಟಿ ನೀಡಿ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಆಯೋಗದ ಮುಖ್ಯಸ್ಥ ಸರ್ದಾರ್ ಇಕ್ಬಾಲ್ ಸಿಂಗ್ ಲಾಲ್ಪುರ ಹೇಳಿದ್ದಾರೆ.
“ಘಟನೆ ಕುರಿತು ಯುಪಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯಿಂದ ನಾವು ವರದಿ ಕೇಳಿದ್ದೇವೆ. ವರದಿ ಪಡೆದ ನಂತರ, ನಾವು ಸ್ಥಳಕ್ಕೆ ಭೇಟಿ ನೀಡುತ್ತೇವೆ. ಒಬ್ಬ ವ್ಯಕ್ತಿಯ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ” ಎಂದಿದ್ದಾರೆ ಎಂದು ಆಯೋಗದ ಮುಖ್ಯಸ್ಥರನ್ನು ಸುದ್ದಿ ಸಂಸ್ಥೆ ANI ಉಲ್ಲೇಖಿಸಿದೆ.
ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ದಲಿತ ಯುವಕನ ಅನುಮಾನಸ್ಪದ ಸಾವು: ಮರ್ಯಾದೆಗೇಡು ಹತ್ಯೆ ಆರೋಪ
We've asked for report from UP Govt -from Chief Secy & DGP. Once we get the report, we'll visit the place & see that no injustice is done to anyone on basis of his caste & religion: Sardar Iqbal Singh Lalpura, National Commission for Minorities Chairman on Kasganj custodial death pic.twitter.com/WPnCRi1rud
— ANI (@ANI) November 12, 2021
ಯುವಕ ಅಲ್ತಾಫ್‌ನ ವಿರುದ್ಧ ಅಪ್ರಾಪ್ತ ಹಿಂದೂ ಬಾಲಕಿಯನ್ನು ಅಪಹರಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ತಾಫ್‌ರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. 22 ವರ್ಷದ ಯುವಕ ನವೆಂಬರ್ 8 ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಯುವಕ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಆದರೆ, ಪೊಲೀಸರು ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ. ಕರ್ತವ್ಯ ನಿರತ ಸಿಬ್ಬಂದಿಯೇ ಆತನನ್ನು ಕೊಂದಿದ್ದಾರೆ ಎಂದು ಮೃತನ ಕುಟುಂಬ ಆರೋಪಿಸಿದೆ.
ಪೊಲೀಸ್ ಲಾಕಪ್‌ನ ವಾಶ್‌ರೂಮ್‌ನಲ್ಲಿ ಯುವಕ ತನ್ನ ಜಾಕೆಟ್ ಹುಡ್‌ನ ದಾರವನ್ನು ಬಳಸಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಘಟನೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಲಾಕಪ್ ಡೆತ್‌ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಅಖಿಲೇಶ್ ಯಾದವ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ “ಉತ್ತರ ಪ್ರದೇಶದಲ್ಲಿ ಮಾನವ ಹಕ್ಕುಗಳು ಉಳಿದಿವೆಯೇ?” ಎಂದು ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘಟನೆಯನ್ನು ಖಂಡಿಸಿದ್ದು, “ಕಾಸ್‌ಗಂಜ್‌ನಲ್ಲಿ ಅಲ್ತಾಫ್, ಆಗ್ರಾದಲ್ಲಿ ಅರುಣ್ ವಾಲ್ಮೀಕಿ, ಸುಲ್ತಾನ್‌ಪುರದಲ್ಲಿ ರಾಜೇಶ್ ಕೋರಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿರುವ ಘಟನೆಗಳಿಂದ ರಕ್ಷಕರು ಭಕ್ಷಕರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪೊಲೀಸ್ ಕಸ್ಟಡಿ ಸಾವುಗಳಲ್ಲಿ ಯುಪಿ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಕಾನೂನು ಸುವ್ಯವಸ್ಥೆ ಬಿಜೆಪಿ ಆಡಳಿತದಲ್ಲಿ ಸಂಪೂರ್ಣ ಅಸ್ತವ್ಯಸ್ತವಾಗಿದೆ, ಇಲ್ಲಿ ಯಾರೂ ಸುರಕ್ಷಿತವಾಗಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದರು.
ಇದನ್ನೂ ಓದಿ: ಲಾಕಪ್ ಡೆತ್: ’ಉತ್ತರ ಪ್ರದೇಶದಲ್ಲಿ ಮಾನವ ಹಕ್ಕುಗಳು ಉಳಿದಿವೆಯೇ?’- ರಾಹುಲ್ ಗಾಂಧಿ


