ಲಸಿಕೆ ನೀಡಲು ಗ್ರಾಮಕ್ಕೆ ಬಂದ ಆರೋಗ್ಯ ಕಾರ್ಯಕರ್ತರ ಗುಂಪನ್ನು ನೋಡಿ ಹೆದರಿದ ಜನ ನದಿಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬಾರಬಂಕಿಯ ಸಿಸೌರ್ಹಾ ಗ್ರಾಮದಲ್ಲಿ ನಡೆದಿದೆ. ಲಸಿಕೆ ಪಡೆಯಲು ಹಿಂಜರಿಯುವ ಅನೇಕ ನಿದರ್ಶನಗಳು ಅನೇಕ ಭಾಗಗಳಿಂದ ನಿಯಮಿತವಾಗಿ ವರದಿಯಾಗುತ್ತಿವೆ.
ಲಸಿಕೆಯನ್ನು ವಿಷಕಾರಿ ಚುಚ್ಚುಮದ್ದು ಎಂದು ತಿಳಿದ ಗ್ರಾಮಸ್ಥರು, ಗ್ರಾಮದಲ್ಲಿ ಆರೋಗ್ಯ ಕಾರ್ಯಕರ್ತರನ್ನು ನೋಡಿದ ಕೂಡಲೆ ಸರಯೂ ನದಿಯ ಕಡೆಗೆ ಓಡಿದ್ದಾರೆ. ಇವರನ್ನೇ ಹಿಂಬಾಲಿಸಿದ ಅಧಿಕಾರಿಗಳನ್ಜು ಕಂಡು ನದಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಈ ಘಟನೆ ನಡೆದಿದೆ ಎಂದು ರಾಮನಗರದ ತಹಸಿಲ್ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಒಡಿಶಾದ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಿದ ಸೋಂಕು: ಕೊರೊನಾ ಕೇಂದ್ರಗಳನ್ನು ಆರಂಭಿಸಲು ಒತ್ತಾಯ
ನದಿಗೆ ಹಾರಿದ ಗ್ರಾಮಸ್ಥರಿಗೆ ಆರೋಗ್ಯ ಕಾರ್ಯಕರ್ತರು ಲಸಿಕೆ ಬಗ್ಗೆ ಮತ್ತು ಲಸಿಕೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಆದಾದ ನಂತರವೂ 1,500 ನಿವಾಸಿಗಳನ್ನು ಹೊಂದಿರುವ ಗ್ರಾಮದಲ್ಲಿ ಕೇವಲ 18 ಮಂದಿ ಲಸಿಕೆ ತೆಗೆದುಕೊಳ್ಳಲು ಒಪ್ಪಿದರು ಎಂದು ರಾಜೀವ್ ಕುಮಾರ್ ಶುಕ್ಲಾ ಹೇಳಿದ್ದಾರೆ.
ಇದು ಲಸಿಕೆ ಅಲ್ಲ, ವಿಷಕಾರಿ ಚುಚ್ಚುಮದ್ದು ಎಂದು ಕೆಲವರು ವದಂತಿ ಹಬ್ಬಿಸಿದ್ದರಿಂದ ಹಲವರು ನದಿಗೆ ಹಾರಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದಲ್ಲಿ ಲಸಿಕೆ ಬಗ್ಗೆ ಜಾಗೃತಿ ಅಭಿಯಾನ ಕೈಗೊಳ್ಳೂವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಹಿಂದೆಯೂ ಹಲವು ಬಾರಿ ಲಸಿಕೆ ತೆಗೆದುಕೊಳ್ಳದೇ ಜನ ಪರಾರಿಯಾಗಿರುವ ಘಟನೆಗಳಿಗೆ ಆರೋಗ್ಯ ಕಾರ್ಯಕರ್ತರು ಸಾಕ್ಷಿಯಾಗಿದ್ದಾರೆ.
ಶನಿವಾರದವರೆಗೆ, ಉತ್ತರ ಪ್ರದೇಶದಲ್ಲಿ 1.62 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ಫ್ಯೂ ಉಲ್ಲಂಘನೆ ನೆಪದಲ್ಲಿ ಯುವಕನ ಕೊಲೆ ಆರೋಪ: ಒಬ್ಬರ ಬಂಧನ, ಇಬ್ಬರು ಪೊಲೀಸರು ನಾಪತ್ತೆ


