Homeಕರ್ನಾಟಕಉತ್ತರ ಕನ್ನಡ: ಬದಲಾದ ರಾಜಕೀಯ ಭೂಮಿಕೆ; ಸಂಸದ ಯಾರಾಗಬಹುದೆಂಬ ಲೆಕ್ಕಾಚಾರ

ಉತ್ತರ ಕನ್ನಡ: ಬದಲಾದ ರಾಜಕೀಯ ಭೂಮಿಕೆ; ಸಂಸದ ಯಾರಾಗಬಹುದೆಂಬ ಲೆಕ್ಕಾಚಾರ

- Advertisement -
- Advertisement -

ಉತ್ತರ ಕನ್ನಡದ ರಾಜಕಾರಣ ಮಗ್ಗಲು ಬದಲಿಸಿದೆ. ವಿಧಾನಸಭಾ ಚುನಾವಣೆ-2023ರ ಫಲಿತಾಂಶದ ಒತ್ತಡಕ್ಕೆ ಜಿಲ್ಲೆಯ ರಾಜಕೀಯ ಭೂಮಿಕೆಯಲ್ಲಿ ಅದಲುಬದಲಾಗಿದೆ. ಆಡಳಿತ ವಿರೋಧಿ ಪ್ರಚಂಡಮಾರುತ ಅಪ್ಪಳಿಸುವ ಆತಂಕದಲ್ಲಿದ್ದ ಬಿಜೆಪಿ ಮತೀಯ ಧ್ರುವೀಕರಣ ಅಥವಾ ಹಿಂದುತ್ವದ ಪವಾಡದ ಪ್ರತೀಕ್ಷೆಯಲ್ಲಿತ್ತು. ಆದರೆ ಬಿಜೆಪಿಯ ಧರ್ಮಕಾರಣದ ಅಸ್ತ್ರಗಳೆಲ್ಲವೂ ಮೊಂಡಾಗಿದ್ದವು; ಸಾಕ್ಷಾತ್ ಹಿಂದುತ್ವದ ಹರಿಕಾರ ಪ್ರಧಾನಿ ಮೋದಿಯವರೇ ಅಂಕೋಲೆಗೆ ಬಂದು ಪ್ರಚಾರ ಮಾಡಿದರೂ ಬಿಜೆಪಿಗೆ ಪ್ರಯೋಜನವಾಗಲಿಲ್ಲ. ಜನಾಕ್ರೋಶದ ಸುನಾಮಿಗೆ ಬಿಜೆಪಿ ತತ್ತರಿಸಿ ನೆಲಕಚ್ಚಿದೆ. ಸಂಘಟನಾತ್ಮಕ ಶಕ್ತಿ ಮತ್ತು ಸೈದ್ಧಾಂತಿಕ ಬದ್ಧತೆಗಳಿಲ್ಲದಿದ್ದರೂ ಕಮಲ ಪಡೆಯೊಳಗಿನ ಗುಂಪುಗಾರಿಕೆ ಹಾಗು ಆ ಪಕ್ಷದ ಶಾಸಕರು, ಸಂಸದ ಮತ್ತು ಸಚಿವರ ಬಗೆಗಿನ ಬೇಸರವೇ, ದುರ್ಬಲ ಕಾಂಗ್ರೆಸ್ ಪಾರ್ಟಿಗೆ ವರವಾಗಿದೆ. ಚುನಾವಣೆ ಮುಗಿದು ತಿಂಗಳು ಕಳೆದರೂ ಕಾಂಗ್ರೆಸ್ಸಿಗರಿಗೆ ಅನಿರೀಕ್ಷಿತ “ವಿಜಯಾಘಾತ”ದಿಂದ ಹೊರಬರಲಾಗುತ್ತಿಲ್ಲ; ಜನರಿಂದ ಸಾರಾಸಗಟಾಗಿ ತಿರಸ್ಕೃತವಾಗಿರುವ ಬಿಜೆಪಿಯ ಘಟಾನುಘಟಿಗಳ ಹಳಹಳಿಕೆ-ಒಳ ಶತ್ರುಗಳ ಮೇಲಿನ ಸಿಟ್ಟಿನ್ನೂ ತಣಿದಿಲ್ಲ.

ಸೋಲಿನ ಹೊಡೆತದಿಂದ ಜರ್ಜರಿತವಾಗಿರುವ ಬಿಜೆಪಿಯಲ್ಲಿ ಸಂಘನಿಷ್ಠ ಮೂಲ ನಿವಾಸಿಗಳು-ವಲಸಿಗರು ಮತ್ತು ನಿರಂತರವಾಗಿ ಅಧಿಕಾರ ಅನುಭವಿಸಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯಂಥವರು-ಲಾಗಾಯ್ತಿನಿಂದ ಪೋಸ್ಟರ್ ಅಂಟಿಸುವ-ಬ್ಯಾನರ್ ಏರಿಸುವ ಮಟ್ಟದಲ್ಲೇ ಇರುವ “ಹಿರಿಯ”ರ ಸಂಘರ್ಷ ತಾರಕಕ್ಕೇರಿದೆ. ಇತ್ತ ಕಾಂಗ್ರೆಸ್ಸಿನಲ್ಲಿ ಒಂಭತ್ತನೇ ಬಾರಿ ಶಾಸಕನಾಗಿರುವ ಆರ್.ವಿ.ದೇಶಪಾಂಡೆ ಮಂತ್ರಿಗಿರಿ ಪಡೆಯಲು ವಿಫಲವಾಗಿರುವುದು ನಾನಾ ನಮೂನೆಯ ವ್ಯಾಖ್ಯಾನ ಹುಟ್ಟುಹಾಕಿದೆ. ಶೂದ್ರರ ದಿಕ್ಕುತಪ್ಪಿಸುವ ಮೇಲ್ವರ್ಗದ ತಂತ್ರಗಾರಿಕೆಯಿಂದ ಸತತ ಆರು ಬಾರಿ ಆಯ್ಕೆಯಾಗಿದ್ದ ಕಾಗೇರಿಯವರ ಹೀನಾಯ ಸೋಲು ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಮಂತ್ರಿ ಮಾಂಡಲೀಕರಾಗುತ್ತಿದ್ದ ಆರ್.ವಿ.ದೇಶಪಾಂಡೆಯವರಿಗೆ ಸಿದ್ದು ಸರಕಾರದಲ್ಲಿ ಈ ಸಲ ಸ್ಥಾನ ಸಿಗದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ರೋಚಕ ಚರ್ಚೆಗಳನ್ನು ಹುಟ್ಟುಹಾಕಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ

ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಆಗುತ್ತಿದ್ದಂತೆಯೆ ಉತ್ತರ ಕನ್ನಡದ ಜನರಲ್ಲಷ್ಟೇ ಅಲ್ಲ, ರಾಜಕೀಯ ಪಂಡಿತರಲ್ಲೂ ನಾಲ್ಕು ದಶಕದ ಪವರ್ ಪಾಲಿಟಿಕ್ಸ್‌ನಲ್ಲಿ ಪಳಗಿರುವ ದೇಶಪಾಂಡೆ ಮಂತ್ರಿಯಾಗುವುದು ಗ್ಯಾರಂಟಿ ಎಂಬ ಲೆಕ್ಕಾಚಾರ ಶುರುವಾಗಿತ್ತು. ದೇಶಪಾಂಡೆ ಇದು ತನ್ನ ಕಟ್ಟಕಡೆಯ ರಾಜಕೀಯ ಇನ್ನಿಂಗ್ಸ್ ಎನ್ನುತ್ತಾ ದಿಲ್ಲಿ ಮಟ್ಟದಲ್ಲಿಯೂ ಜೋರು ಲಾಬಿ ಮಾಡಿದ್ದರು. ಆದರೆ ದೇಶಪಾಂಡೆಗೆ ಮಂತ್ರಿಗಿರಿ ಕೊಡುವುದರಿಂದ ಕಾಂಗ್ರೆಸ್ಸಿಗೆ ರಾಜ್ಯದಲ್ಲಾಗಲಿ ಅಥವಾ ಉತ್ತರ ಕನ್ನಡದಲ್ಲಾಗಲಿ ಪೈಸೆ ಪ್ರಯೋಜನವಾಗದೆಂಬ ತರ್ಕವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಂಡಿಸಿದ್ದರೆನ್ನಲಾಗುತ್ತಿದೆ. ಬಿಜೆಪಿಯ ಕಾಗೇರಿಯಂಥವರೊಂದಿಗೆ “ಹೊಂದಾಣಿಕೆ ರಾಜಕಾರಣ” ಮಾಡುತ್ತಾರೆಂದು ಆರೋಪಿತರಾಗಿರುವ ದೇಶಪಾಂಡೆಗೆ ಎಪ್ಪತ್ತರಾಚೆಯ ಇಳಿವಯಸ್ಸಿನಲ್ಲಿ ಪಕ್ಷಕಟ್ಟುವ ಚೈತನ್ಯವಿಲ್ಲ; ಸಂಘ ಸಿದ್ಧಾಂತಕ್ಕೆ ಸದಾ ಬದ್ಧರಾಗಿರುವ ಕೊಂಕಣಿಗರ ಮತಗಳನ್ನು ಕಾಂಗ್ರೆಸ್ಸಿಗೆ ತರುವ ಶಕ್ತಿಯೂ ಇಲ್ಲ; ಯುವ-ಉತ್ಸಾಹಿ ಶಾಸಕನೊಬ್ಬನಿಗೆ ಅವಕಾಶ ಕೊಟ್ಟರೆ ಪಕ್ಷ ಪ್ರಬಲ ಬಿಜೆಪಿಯನ್ನು ಎದುರಿಸಬಹುದೆಂಬುದು ಕಾಂಗ್ರಸ್ಸಿನ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯವೂ ಆಗಿತ್ತು. ಇದೇ ಹೊತ್ತಿಗೆ, ಉತ್ತರ ಕನ್ನಡ ರಾಜಕೀಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡಿರುವ “ಹಳೆ ಹುಲಿ” ದೇಶಪಾಂಡೆಯವರನ್ನು ಬೋನಿಗೆ ಕೆಡವಲು ಮಾಜಿ ಸಂಸದೆ ಮಾರ್ಗರೆಟ್ ಆಳ್ವ ಹೈಕಮಾಂಡ್ ಸಂಪರ್ಕವನ್ನು ಬಳಸಿ “ಆಟ” ಆಡಿದ್ದರೆಂಬ ಮಾತುಗಳು ಕೇಳಿಬರುತ್ತಿವೆ.

ಈ ವಯೋಸಹಜ ಅಸಹಾಯಕತೆ ಮತ್ತು ಅಹಮ್ಮದ್ ಪಟೇಲ್ ನಂತರ ಹೈಕಮಾಂಡ್ ವಲಯದಲ್ಲಿ ಶಕ್ತಿಶಾಲಿ ಆಶ್ರಯದಾತರನ್ನು ಕಂಡುಕೊಳ್ಳಲಾಗದ ದೇಶಪಾಂಡೆಯವರಿಗೆ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲಾಗಿಲ್ಲ; ಇದರ ಸಂಪೂರ್ಣ ಅನುಕೂಲತೆ ಭಟ್ಕಳದ ಮಂಕಾಳು ವೈದ್ಯರಿಗಾಗಿ ಮೀನುಗಾರಿಕೆ ಮತ್ತು ಬಂದರು ಸಚಿವರಾದರು ಎಂದು ವಿಶ್ಲೇಷಿಸಲಾಗುತ್ತಿದೆ. ಮಂತ್ರಿ ಮಾಡಿಲ್ಲವೆಂದು ಬಂಡೇಳುವ ಇಲ್ಲವೇ ಮುನಿಸಿಕೊಂಡು ಕೂರುವ ಸ್ಥಿತಿಯಲ್ಲಿ ಈಗ ದೇಶಪಾಂಡೆಯವರಿಲ್ಲ. ಮತ್ತೆ ತವರು ಕ್ಷೇತ್ರ ಹಳಿಯಾಳದಲ್ಲಿ ಸ್ಪರ್ಧಿಸುವ ಯೋಚನೆಯೂ ಅವರಿಗಿಲ್ಲ. ಈಗವರ ಅಂತಿಮ ಆದ್ಯತೆಯೆಂದರೆ ಮಗ ಪ್ರಶಾಂತ ದೇಶಪಾಂಡೆಗೆ ರಾಜಕೀಯ ನೆಲೆ ಕಲ್ಪಿಸುವುದೊಂದೆ. ಹಳಿಯಾಳದಲ್ಲಿ ಮಗ ಪ್ರಶಾಂತ ಶಾಸಕನಾಗುತ್ತಾನೆಂಬ ಭರವಸೆ ದೇಶಪಾಂಡೆಯವರಿಗಿಲ್ಲ. ರಾಜಕಾರಣದ ಸಕಲ ಪಟ್ಟುಗಳನ್ನು ಬಲ್ಲ ದೇಶಪಾಂಡೆಯವರೇ ಹಳಿಯಾಳದಲ್ಲಿ ಕಳೆದ ಮೂರ್ನಾಲ್ಕು ಚುನಾವಣೆಯಲ್ಲಿ ಮೂರರಿಂದ ಐದು ಸಾವಿರ ಮತದಂತರದಿಂದ ದಡಸೇರಿ ನಿಟ್ಟುಸಿರುಬಿಡುತ್ತಿದ್ದಾರೆ. ಇಂಥದ್ದರಲ್ಲಿ ಹಳಿಯಾಳದ ಜನರ ನಂಬಿಕೆ-ಪ್ರೀತಿ ಗಳಿಸಲಾಗದ ಪ್ರಶಾಂತ್ ದೇಶಪಾಂಡೆಗೆ ಗೆಲುವು ಬಿಸಿಲ್ಗುದುರೆ ಎಂಬುದು ತಂತ್ರಗಾರಿಕೆಯ ರಾಜಕೀಯದ ಸುದೀರ್ಘ ದಾರಿ ಕ್ರಮಿಸಿರುವ ದೇಶಪಾಂಡೆಯವರಿಗೆ ಅರ್ಥವಾಗದ್ದೇನಲ್ಲ ಎಂಬ ಮಾತಗಳು ಜಿಲ್ಲೆಯ ರಾಜಕೀಯ ಕಟ್ಟೆಯಲ್ಲಿ ಸಾಮಾನ್ಯವಾಗಿದೆ.

ಮಗನಿಗೆ ಶಾಸಕನಾಗಿಸುವುದಕ್ಕಿಂತ ಸಂಸದನಾಗಿಸುವುದೇ ಸುಲಭ ಎಂಬ ಲೆಕ್ಕಾಚಾರ ದೇಶಪಾಂಡೆ ಹಾಕಿದ್ದಾರೆನ್ನಲಾಗುತ್ತಿದೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಉತ್ತರಕನ್ನಡ ಕಾಂಗ್ರೆಸ್ ಟಿಕೆಟ್ ಮಗ ಪ್ರಶಾಂತರಿಗೆ ಕೊಡಿಸುವ ಪ್ಲಾನು ದೇಶಪಾಂಡೆ ಹಾಕಿದ್ದಾರೆ ಎನ್ನುವ ಗುಸುಗುಸು ಕಾಂಗ್ರೆಸ್ ಬಿಡಾರದಲ್ಲಿ ಬಿರುಸಾಗಿದೆ. 2014ರಲ್ಲಿ ಪಾರ್ಲಿಮೆಂಟಿಗೆ ಸ್ಪರ್ಧಿಸಿದ್ದ ಪ್ರಶಾಂತಗೆ ತನ್ನಪ್ಪ ಸಲುಹಿದವರೆ ಕೈಕೊಟ್ಟಿದ್ದರಿಂದ ದೊಡ್ಡ ಅಂತರದ ಮುಖಭಂಗ ಅನುಭವಿಸಬೇಕಾಗಿ ಬಂದಿತ್ತು. 2019ರಲ್ಲಿ ಮತ್ತೆ ಮಗನನ್ನು ಅಖಾಡಕ್ಕಿಳಿಸುವ ಧೈರ್ಯ ದೇಶಪಾಂಡೆ ಮಾಡಲಿಲ್ಲ. ಆಗ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ಅಸೆಂಬ್ಲಿ ಕ್ಷೇತ್ರಗಳಲ್ಲಿ ಹಳಿಯಾಳದ ದೇಶಪಾಂಡೆ, ಯಲ್ಲಾಪುರದ ಹೆಬ್ಬಾರ್ ಮತ್ತು ಖಾನಾಪುರದ ಅಂಜಲಿ ನಿಂಬಾಳ್ಕರ್ ಮಾತ್ರ ಕಾಂಗ್ರೆಸ್ ಶಾಸಕರಾಗಿದ್ದರು; ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದರೂ ದೇಶಪಾಂಡೆಯವರ ಕಡುವಿರೋಧಿಯಾಗಿದ್ದರು.

ಪ್ರಶಾಂತ್ ದೇಶಪಾಂಡೆ

ಈ ಬಾರಿಯ ಪರಿಸ್ಥಿತಿ ದೇಶಪಾಂಡೆ ಪರಿವಾರಕ್ಕೆ ಕೊಂಚ ಆಶಾದಾಯಕವಾಗಿದೆ. ಕುಮಟಾ, ಖಾನಾಪುರ ಮತ್ತು ಯಲ್ಲಾಪುರ ಬಿಟ್ಟರೆ ಉಳಿದೈದು ಕಡೆ ಕಾಂಗ್ರೆಸ್ ಶಾಸಕರೇ ಇದ್ದಾರೆ. ಸಂಘಪರಿವಾದ ಕೆಂಗಣ್ಣಿಗೆ ತುತ್ತಾಗಿರುವ ಶಾಸಕ ದಿನಕರ ಶೆಟ್ಟಿ ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿದ್ದಾರೆ. ಕೇವಲ 673 ಮತದಿಂದ ಎಮ್ಮೆಲ್ಲೆಯಾಗಿರುವ ದಿನಕರ ಶೆಟ್ಟಿ ಗೆಲುವಿನಲ್ಲಿ ದೆಶಪಾಂಡೆ ನಿರ್ಣಾಯಕ ಪಾತ್ರವಾಗಿದ್ದರೆನ್ನಲಾಗುತ್ತಿದೆ. ದಿನಕರ ಶೆಟ್ಟಿಯನ್ನು ಮನೆಗಟ್ಟುವ ಹಠದಲ್ಲಿದ್ದ ಬಿಜೆಪಿಯ ಜೀವಜೀವಾಳವಾಗಿರುವ ಕೊಂಕಣಿಗರು ಕೊನೆ ಕ್ಷಣದಲ್ಲಿ ಸ್ವಜಾತಿ ನಾಯಕಾಗ್ರೇಸ ದೇಶಪಾಂಡೆಯವರ ಫರ್ಮಾನಿಗೆ ಕಟ್ಟುಬಿದ್ದು ಮತ ಚಲಾಯಿಸಿದ್ದರಿಂದ ಅವರು ಬಚಾವಾದರೆಂದು ರಾಜಕೀಯ ಪಂಡಿತರ ಅಭಿಪ್ರಾಯ. ಈ ಅಂಶಗಳೆಲ್ಲ ದೇಶಪಾಂಡೆಯವರ ಮಗನನ್ನು ಲೋಕಸಭೆ ಅಖಾಡಕ್ಕಿಳಸಲು ಅನುಕೂಲಕರವಾಗಿವೆ ಎಂಬಂತೆ ಮೇಲ್ನೋಟದ ಲೆಕ್ಕಾಚಾರ ತೋರಿಸುತ್ತದೆ.

ಎಐಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ-ವಿಧಾನಪರಿಷತ್ ಸದಸ್ಯ ಹರಿಪ್ರಸಾದ್ ತವರು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಮೇಲೆ ಒಂದೊಂದು ಕಣ್ಣಿಟ್ಟು ಕೂತಿದ್ದಾರೆಂದು ಕಾಂಗ್ರೆಸ್ಸಿಗರು ಹೇಳುತ್ತಾರೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬುಡಕಟ್ಟು ಹಾಲಕ್ಕಿ ಒಕ್ಕಲಿಗರು ಪ್ರಥಮ ಬಹುಸಂಖ್ಯಾತರಾದರೆ, ದ್ವಿತೀಯ ಬಹುಸಂಖ್ಯಾತರು ಮುಸ್ಲಿಮರು; ಆನಂತರದ ಸ್ಥಾನದಲ್ಲಿ ದೀವರ(ಈಡಿಗರು) ಮತ್ತು ಹವ್ಯಕರು(ಬ್ರಾಹ್ಮಣರು) ಇದ್ದಾರೆನ್ನಲಾಗುತ್ತಿದೆ. ಹಿಂದುತ್ವದ ಪ್ರಯೋಗಶಾಲೆಯಾದ ದಕ್ಷಿಣ ಕನ್ನಡದ ಅಸೆಂಬ್ಲಿ ಚುನಾವಣಾ ಫಲಿತಾಂಶ ನೋಡಿದರೆ ಈಡಿಗ (ಬಿಲ್ಲವ) ಸಮುದಾಯದ ಹರಿಪ್ರಸಾದ್‌ರಿಗೆ ದ.ಕ.ಕ್ಕಿಂತ ಉ.ಕ. ಬೆಟರ್ ಅಂಡ್ ಸೇಫ್ ಎಂದು ಭಾವಿಸುವ ಸಾಧ್ಯತೆಯೇ ಜಾಸ್ತಿ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಅರಣ್ಯ ಅತಿಕ್ರಮಣದಾರರಿಗೆ ಉಳುಮೆ ಹಕ್ಕು ಕೊಡಿಸಲು ಕಳೆದ ಮೂವ್ವತ್ತು ವರ್ಷದಿಂದ ಹೋರಾಟ ಕಟ್ಟಿರುವ ದೀವರ ಜಾತಿಯ ರವೀಂದ್ರ ನಾಯ್ಕ್, ಮೊನ್ನೆ ಮುಗಿದಿರುವ ವಿಧಾನಸಭೆ ಚುನಾವಣೆಯಲ್ಲಿ ಖಾನಾಪುರ ಕ್ಷೇತ್ರದಲ್ಲಿ ಆಗಾಧ ಅಂತರದಲ್ಲಿ ಸೋತಿರುವ ಮರಾಠ ಸಮುದಾಯದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಕಾರವಾರದ ಕೊಂಕಣಿ (ಜಿಎಸ್‌ಬಿ)ಗ-ಸುಪ್ರೀಮ್ ಕೋರ್ಟ್ ವಕೀಲ ದೇವದತ್ತ ಕಾಮತ್ ಮತ್ತು 2008ರ ಮೊಟ್ಟಮೊದಲ ಆಪರೇಷನ್ ಕಮಲಕ್ಕೆ ಒಳಗಾಗಿ ತನ್ನ ರಾಜಕೀಯ ಭವಿಷ್ಯವನ್ನೇ ಬರ್ಬಾದ್ ಮಾಡಿಕೊಂಡಿರುವ ಮಾಜಿ ಮಂತ್ರಿ ಕಾರವಾರದ ಆನಂದ ಅಸ್ನೋಟಿಕರ್ ಕಾಂಗ್ರೆಸ್ ಟಿಕೆಟ್ ಕನಸು ಕಾಣುತ್ತಿದ್ದಾರೆಂಬ ಸುದ್ದಿ ಸದ್ದು ಮಾಡುತ್ತಿರುವುದು ಜಿಲ್ಲೆಯಲ್ಲಿ ಕುತೂಹಲ ಕೆರಳಿಸುತ್ತಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಸೈಕಲ್ ನೀಡಿ, ಡೊನೇಶನ್ ಹಾವಳಿ ತಪ್ಪಿಸಿ: ಸಚಿವರಿಗೆ ಎಸ್‌ಎಫ್‌ಐ ಹಕ್ಕೊತ್ತಾಯ

ಪ್ರಶಾಂತ್ ದೇಶಪಾಂಡೆಗೆ ತಮ್ಮ ತಂದೆಯವರ ಬೆಂಗಳೂರು-ದಿಲ್ಲಿ ಹೈ-ಕಾಂಟಾಕ್ಟ್‌ಗಳೆ ಬಲವಾದರೆ, ಹರಿಪ್ರಸಾದ್‌ಗೆ ದಿಲ್ಲಿ ಹೈಕಮಾಂಡ್ ಜತೆ ನೇರ ಸಂಪರ್ಕವಿದೆ; ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮಡದಿ ಅಂಜಲಿಯವರ ಬೆನ್ನಿಗೆ ಮರಾಠರ ಲಾಬಿಯಿದೆ ಎಂಬ ಮಾತಿದೆ. ಹಿಜಾಬ್ ಪರ ಸುಪ್ರೀಮ್ ಕೋರ್ಟ್‌ನಲ್ಲಿ ವಾದಿಸಿದ್ದ ದೇವದತ್ತ ಕಾಮತ್ ಎಐಸಿಸಿಯ ಲೀಗಲ್ ಮ್ಯಾಟರ್ ನೋಡಿಕೊಳ್ಳುವುದರಿಂದ ನೇರ ರಾಹುಲ್ ಗಾಂಧಿಯವರ ನಂಟಿದೆ. ದೇಶಪಾಂಡೆ ಕೆಂಗಣ್ಣಿಗೆ ತುತ್ತಾಗಿ ಕಾಂಗ್ರೆಸ್ ಪ್ರವೇಶ ಸಾಧ್ಯವಾಗದೆ ತ್ರಿಶಂಕು”ಸ್ವರ್ಗ”ದಲ್ಲಿರುವ ಜೆಡಿಎಸ್ ಪಕ್ಷದ ಆನಂದ್ ಅಸ್ನೋಟಿಕರ್ ಮುಗಿದ ಅಸೆಂಬ್ಲಿ ಚುನಾವಣೆಯಲ್ಲಿ ತನ್ನ ಪ್ರಭಾವವಿರುವ ಜೋಯಿಡಾದಲ್ಲಿ ದೇಶಪಾಂಡೆ ಪರ ಪ್ರಚಾರ ಮಾಡಿದ್ದರು. ಈ “ಪಾಪ ಪ್ರಯಶ್ಚಿತ್ತ”ದಿಂದ ಕಾಂಗ್ರೆಸ್ ಪ್ರವೇಶ ಮತ್ತು ಟಿಕೆಟ್ ಎರಡನ್ನೂ ದೇಶಪಾಂಡೆ ಕೊಡಿಸುತ್ತಾರೆಂಬ ನಂಬಿಕೆಯಲ್ಲಿ ಅಸ್ನೋಟಿಕರ್ ಇದ್ದಾರೆಂಬ ಮಾತು ಕಾರವಾರದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಟಿಕೆಟಿಗಾಗಿ ಅರ್ಧ ಡಜನ್ ಆಕಾಂಕ್ಷಿಗಳು ಸರತಿ ಸಾಲು ಕಟ್ಟಿ ನಿಂತಿದ್ದಾರೆಂಬ ರೋಚಕ ಚರ್ಚೆ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಾಗುತ್ತಿದೆ. ಒಂದು ಕಾಲದಲ್ಲಿ ಸಂಘ ಪರಿವಾರದ ಬೆಂಕಿ ಚೆಂಡು ಎನ್ನಲಾಗುತ್ತಿದ್ದ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಬಿಜೆಪಿಯಲ್ಲಿ ನೆಲೆ-ಬೆಲೆ ಇಲ್ಲದಂತಾಗಿದ್ದಾರೆ; ಬ್ರಾಹ್ಮಣ ಸಮುದಾಯದ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಿಜೆಪಿ ಮೇಲೆ ಹಿಡಿತ ಸಾಧಿಸುತ್ತಿದ್ದಂತೆಯೇ, ಅದೇ ಸಮುದಾಯದ ಅನಂತ್ ಹೆಗಡೆ ಸಾವಕಾಶವಾಗಿ ಮೂಲೆಗುಂಪಾದರೆನ್ನಲಾಗುತ್ತಿದೆ. ಮೋದಿ ಸರಕಾರದಲ್ಲಿ ಸಚಿವನಾಗಿದ್ದಾಗ, ನಾವು ಸಂವಿಧಾನ ಬದಲಿಸಲೆಂದೇ ಅಧಿಕಾರಕ್ಕೆ ಬಂದಿರುವುದು ಎಂಬ ವಿವಾದಾತ್ಮಕ ಭಾಷಣ ಬಿಗಿದು ಪಾರ್ಲಿಮೆಂಟಿನಲ್ಲಿ ಕ್ಷಮೆ ಕೇಳಿ ಕೇಸರಿ ಪಡೆಯ ನಾಯಕತ್ವವನ್ನು ಮುಜುಗರಕ್ಕೀಡುಮಾಡಿದ ನಂತರ ಅನಂತ್ ಬಿಜೆಪಿಯಲ್ಲಿ ಅವಜ್ಞೆ-ಅವಮಾನಕ್ಕೆ ಈಡಾಗುವಂತಾಯಿತೆಂದು ವ್ಯಾಖ್ಯಾನಿಸಲಾಗುತ್ತಿದೆ. ಇದರ ಬೆನ್ನಿಗೆ ಅನಂತ್ ಹೆಗಡೆಗೆ ಗಂಭೀರ ಆರೋಗ್ಯ ಸಮಸ್ಯೆಯೂ ಬಾಧಿಸತೊಡಗಿತು. ಪಾರ್ಟಿಯಲ್ಲಾಗುತ್ತಿರುವ ತಿರಸ್ಕಾರ ಮತ್ತು ಅನಾರೋಗ್ಯದಿಂದ ಹೈರಾಣಾದ ಅನಂತ್ ಹೆಚ್ಚು ಕಮ್ಮಿ ಒಂದೂವರೆ ವರ್ಷದಿಂದ ಬಿಜೆಪಿಯ ಮುಖ್ಯಭೂಮಿಕೆಯಿಂದ ಕಣ್ಮರೆಯಾಗಿದ್ದಾರೆ.

ಹರಿಪ್ರಸಾದ್

ಈ ಸಲದ ಅಸೆಂಬ್ಲಿ ಚುನಾವಣೆಯ ಅಖಾಡದಲ್ಲೆಲ್ಲೂ ಅನಂತ್ ಅಪ್ಪಿತಪ್ಪಿಯೂ ಕಾಣಿಸಲಿಲ್ಲ; ಬಿಜೆಪಿಯ ಸರ್ವೋಚ್ಚ ನಾಯಕ ಮೋದಿ, ಜಿಲ್ಲೆಯ ಅಂಕೋಲೆಗೆ ಬಂದರೂ ಮನೆಯಿಂದ ಹೊರಬರಲಿಲ್ಲ. ಪಕ್ಷದ ಹಿರಿಯರ ತಾತ್ಸಾರಕ್ಕೆ ತುತ್ತಾಗಿರುವಂತೆಯೇ, ಐದು ಬಾರಿ ಸಂಸದನಾಗಿ ಆಯ್ಕೆ ಮಾಡಿದರೂ ಐದು ಬಿಲ್ಲೆ ಪ್ರಯೋಜನ ಅನಂತ್ ಹೆಗಡೆಯಿಂದಾಗಿಲ್ಲ ಎಂಬ ಅಸಮಾಧಾನ ಕ್ಷೇತ್ರದಲ್ಲಿ ಮಡುಗಟ್ಟಿದೆ. ಈ ಎಂಟಿ-ಇನ್‌ಕಂಬೆನ್ಸ್ ಮತ್ತು ಅನಾರೋಗ್ಯ ಮುಂದಿಟ್ಟು ಅನಂತ್ ಹೆಗಡೆಗೆ 2024ರ ಚುನಾವಣೆಯಲ್ಲಿ ಕೇಸರಿ ಟಿಕೆಟ್ ಕಟ್ ಮಾಡಲಾಗುತ್ತದೆಂಬ ಸುದ್ದಿಗಳು ಪುಂಖಾನುಪುಂಖವಾಗಿ ಬಿತ್ತರವಾಗುತ್ತಿವೆ. ಹೆಗಡೆಯ ರಾಜಕೀಯ ಮತ್ತು ಖಾಸಗಿ ಚಟುವಟಿಕೆಗಳನ್ನು ಆಪ್ತವಾಗಿ ಬಲ್ಲವರೂ ಸಹ, ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟರೂ ಅವರು ಸ್ಪರ್ಧೆಗೆ ಸಿದ್ಧರಿಲ್ಲ ಎನ್ನುತ್ತಿದ್ದಾರೆ. ಆದರೆ ಹಿಂದಿನ ಎರಡು ಚುನಾವಣೆಯಲ್ಲೂ ಹೆಗಡೆ ಹೀಗೇ ತನಗೆ ಮತ್ತೆ ಎಂಪಿಯಾಗುವ ಇರಾದೆಯಿಲ್ಲ ಎಂದು ಸುದ್ದಿ ತೇಲಿಬಿಟ್ಟಿದ್ದರು; ಇದವರ ಟಿಕೆಟ್ ಪಡೆಯುವ ಟ್ಯಾಕ್ಟಿಕ್ ಎನ್ನುವವರೂ ಇದ್ದಾರೆ.

ಮೊನ್ನೆಯ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತಿರುವ ಮಾಜಿ ಸ್ಪೀಕರ್ ಕಾಗೇರಿ, ಮಾಜಿ ಸಿ.ಎಂ ದಿವಂಗತ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ ಸಿದ್ದಾಪುರದ ಶಶಿಭೂಷಣ ಹೆಗಡೆ, ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್, ಯಲ್ಲಾಪುರ ಮೂಲದ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಮತ್ತು ಹಿಂದುತ್ವದ ಅಡಗೂಲಜ್ಜಿ ಕತೆಗಳ ಮೂಲಕ ಹೆಂಗ್ ಪುಂಗ್ ಲೀ ಎನ್ನಲಾಗುತ್ತಿರುವ ಹೊನ್ನಾವರ ಮೂಲದ ಚಕ್ರವರ್ತಿ ಸೂಲಿಬೆಲೆ ಕೇಸರಿ ಟಿಕೆಟ್ ಕಟಿಪಿಟಿಯಲ್ಲಿದ್ದಾರೆಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತವೆ.

ಎಬಿವಿಪಿ ಮತ್ತು ಯುವ ಮೋರ್ಚಾ (ಯೂತ್ ಬಿಜೆಪಿ) ಕೇಡರಿನ ಕಾಗೇರಿಗೆ ಕೇಶವ ಕೃಪಾದಲ್ಲಿ ಪ್ರಬಲ ಆಶ್ರಯದಾತರಿದ್ದಾರೆ. ಕಾಗೇರಿಯನ್ನೇ ನಂಬಿ ಬಿಜೆಪಿ ಸೇರಿದ್ದ ಶಶಿಭೂಷಣ ಹೆಗಡೆ ಈಗ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಹಿಂದೆ ಕಾಗೇರಿ ಕಿರಿಕಿರಿ ತಾಳಲಾಗದೆ ಜೆಡಿಎಸ್ ಸೇರಿದ್ದರೆನ್ನಲಾದ ಶಶಿಭೂಷಣ ಹೆಗಡೆ ಎರಡು ಬಾರಿ ಕಾಗೇರಿ ವಿರದ್ಧ ಸ್ಪರ್ಧಿಸಿ ಸಣ್ಣ ಅಂತರದಲ್ಲಿ ಸೋತವರು. ಕಳೆದ ಚುನಾವಣೆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಅದೇ ಕಾಗೇರಿ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದ ಶಶಿಭೂಷಣ್ ಹೆಗಡೆಗೆ ಎಂಪಿ ಟಿಕೆಟ್ ಖಾತ್ರಿ ಮಾಡಲಾಗಿದೆ ಎನ್ನಲಾಗಿತ್ತು. ಹಿಂದೆ ಹಿರಿಯ ಬಿಜೆಪಿ ಮುಂದಾಳು ಡಾ.ಎಂ.ಪಿ.ಕರ್ಕಿಯನ್ನು ಹಿಮ್ಮೆಟ್ಟಿಸಲು ಶಶಿಭೂಷಣ ಹೆಗಡೆಯನ್ನು ಬಳಸಿಕೊಂಡು ಕಾಗೇರಿ ಬಿಸಾಕಿದ್ದರು ಎಂಬ ಮಾತು ಜಿಲ್ಲೆಯ ರಾಜಕೀಯ ರಂಗದಲ್ಲಿ ಕೇಳಿಬಂದಿತ್ತು. ಈಗ ಮತ್ತೆ ಅಂಥದ್ಧೇ ಪರಿಸ್ಥಿತಿ ಬಿಜೆಪಿಯಲ್ಲಿ ನಿರ್ಮಾಣವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಮತ್ತು ಮತೀಯ ಮಸಲತ್ತಿನ ಮಾತುಗಾರ ಮಿಥುನ್ ಶೇಟ್ ಯಾನೆ ಸೂಲಿಬೆಲೆ ಚಕ್ರವರ್ತಿ ಸಂಘ ಪರಿವಾರದ ಕಣ್ಮಣಿಗಳು. ತುಂಬ ಹಿಂದಿನಿಂದ ಉತ್ತರ ಕನ್ನಡದ ಸಂಸದನಾಗುವ ಆಸೆಯಲ್ಲಿದ್ದಾರೆ ಎನ್ನಲಾಗಿರುವ ಸೂಲಿಬೆಲೆ, ಅನಂತ್ ಹೆಗಡೆ ಕೆಲಸಕ್ಕೆ ಬಾರದ ಎಂಪಿ ಎಂಬರ್ಥ ಹೊರಹೊಮ್ಮುವ ಮೂದಲಿಕೆ ಮಾಡಿದ್ದೂ ಇದೆ; ತನ್ನ ಅಂಕಣದಲ್ಲೂ ಉತ್ತರ ಕನ್ನಡದ ಪ್ರಗತಿಯ ಪ್ರಸ್ತಾಪಮಾಡಿ ಅಣಕವಾಡಿದ್ದೂ ಇದೆ. ಮಾಜಿ ಶಾಸಕಿ ರೂಪಾಲಿ ನಾಯ್ಕ್ ಯಡಿಯೂರಪ್ಪರ ಬಲ ನೆಚ್ಚಿ ಕೂತಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಎಂಪಿ ಟಿಕೆಟ್ ಪೈಪೋಟಿ ವರ್ಷದ ಮೊದಲೇ ರೋಚಕತೆ ಸೃಷ್ಟಿಸಿಬಿಟ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...