Homeಮುಖಪುಟಚಂದ್ರಯಾನ-2 ವೈಜ್ಞಾನಿಕ ಕನಸು ನನಸಿನ ವಾಸ್ತವಗಳು

ಚಂದ್ರಯಾನ-2 ವೈಜ್ಞಾನಿಕ ಕನಸು ನನಸಿನ ವಾಸ್ತವಗಳು

- Advertisement -
- Advertisement -

| ಡಾ. ಟಿ.ಎಸ್. ಚನ್ನೇಶ್ |

ನಮ್ಮ ಸಂಸ್ಕೃತಿಯಲ್ಲಿ ಸೂರ್ಯ-ಚಂದ್ರರ ಸಾಕ್ಷಿಯಾಗಿ ಮದುವೆಗಳು ನಡೆದು ಎರಡು ಜೀವಗಳು ಬೆಸುಗೆಯಾಗುತ್ತವೆ. “ಸೂರ್ಯ-ಚಂದ್ರರಿರುವತನಕ” “ಸೂರ್ಯ-ಚಂದ್ರರ ಸಮ್ಮುಖದಲ್ಲಿ” ಎನ್ನುವ ಮಾತುಗಳು ಶಾಸನಗಳಲ್ಲಿ, ಒಪ್ಪಂದಗಳಲ್ಲಿ, ವೇದ-ಉಪನಿಷತ್ತುಗಳಲ್ಲಿ, ಸಾಹಿತ್ಯದಲ್ಲಿ, ಧಾರಾಳವಾಗಿ ಬಳಕೆಯಾಗಿವೆ. ಅಷ್ಟೇಕೆ ಅಳುವ ಮಕ್ಕಳನ್ನು ಸಮಾಧಾನಿಸಲು ಆಗಸದೆಡೆಗೆ ಕೈಮಾಡಿ ಚಂದಮಾಮ ಎಂದು ಕರೆದು ತೋರಿಸುತ್ತೇವೆ. ಮಕ್ಕಳೂ ಸಹ ಬಾ, ಬಾ, ಎಂದು ಕರೆದು ಸಂಭ್ರಮಿಸುತ್ತಾರೆ. ಭೂಮಿಯ ಮೇಲೆ ನಡೆಯುವ ಎಲ್ಲಾ ವಿದ್ಯಮಾನಗಳಿಗೆ ಬಾನಿನ ಸೂರ್ಯ-ಚಂದ್ರರು ಆಕಾಶಕಾಯಗಳಾಗಿ ಸದಾ ಬಯಕೆ, ಬೆರಗು ಮತ್ತು ಅನಿವಾರ್ಯಗಳನ್ನು ಸದಾ ಜೀವಂತವಾಗಿಸಿದ್ದಾರೆ. ಈ ಬೆರಗು, ಬಯಕೆ ಹಾಗೂ ಅನಿವಾರ್ಯಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಬೆಳೆಯುತ್ತಲೇ ಇವೆ.

ಕಳೆದ ಶನಿವಾರ ಮಧ್ಯರಾತ್ರಿಯಲ್ಲಿ ಲಕ್ಷಾಂತರ ಭಾರತೀಯ ಮನಸ್ಸುಗಳು ಕಣ್ಣಲ್ಲಿ ಕಣ್ಣಿಟ್ಟು ಟಿವಿ, ಕಂಪ್ಯೂಟರ್ ಪರದೆಗಳನ್ನು ನೋಡುತ್ತಾ ಗಂಟೆಗಟ್ಟಲೆ ಕಾಯುತ್ತಾ ಕುಳಿತಿದ್ದವು. ತೀರಾ ಇತ್ತೀಚೆಗೆ ನಮ್ಮ ದೇಶದ ಯಾವುದೇ ವೈಜ್ಞಾನಿಕ ವಿದ್ಯಮಾನವೊಂದು ಅಷ್ಟು ಆಪ್ತವಾಗಿ ನಿದ್ದೆಗೆಡಿಸಿಕೊಂಡು ಕಾಯಲು ಹಚ್ಚಿರಲಿಲ್ಲ. ಕಾಯುತ್ತಾ ಕುಳಿತವರು ಭಾರತೀಯ ಪ್ರಜೆಗಳಷ್ಟೇ ಅಲ್ಲ! ಜಗತ್ತಿನಾದ್ಯಂತ ಸಹಸ್ರಾರು ಜನರು ಐತಿಹಾಸಿಕ ಕ್ಷಣವನ್ನು ಸಾಕ್ಷೀಕರಿಸಲು ಕಾದಿದ್ದರು. ಕೊನೆಯ ಒಂದೆರಡು ನಿಮಿಷದ ತೀವ್ರ ಒತ್ತಡದ ಸಮಯದಿಂದ ಅನುಭವಿಸಿದ ನಿರಾಸೆಯನ್ನು ತಡೆದುಕೊಳ್ಳಲು ಗಂಟೆಗಳ ಸಮಾಧಾನವನ್ನು ಬೇಡಿದ್ದು ನಿಜ.

ಚಂದ್ರನ ಬೆರಗಿನ ಒತ್ತಾಸೆ ವೈಜ್ಞಾನಿಕವಾಗಿ ಹೊಸತಲ್ಲ. ಈಗ್ಗೇ 50 ವರ್ಷಗಳ ಹಿಂದೆಯೆ ಅಮೆರಿಕೆಯ ಮೂವರು ಆತನೆಡೆಗೆ ಸಾಗಿ ಅವರಲ್ಲಿಬ್ಬರು ಮೊದಲ ಬಾರಿಗೆ ಕಾಲಿಟ್ಟು ನಡೆದಾಡಿ ಬಂದರು. ಅಮೆರಿಕನ್ನರು ಐದಾರು ಬಾರಿ ಹೋಗಿ ಬಂದರೂ ತನ್ನ ಗುಟ್ಟನ್ನು ಬಿಟ್ಟುಕೊಡದ ಚಂದ್ರನಲ್ಲಿ ಒಂದಷ್ಟು ನಮ್ಮದಾಗಿಸಿಕೊಳ್ಳುವ ದೇಶಗಳಲ್ಲಿ ಭಾರತವು ನಾಲ್ಕನೆಯದು. ಅದು ಇನ್ನೇನು ಸಾಧ್ಯವಾಯಿತು ಎನ್ನುವಷ್ಟರ ಕೊನೆಯ ನಿಮಿಷದಲ್ಲಿ ಸಂಪರ್ಕ ಕಡಿದು ಯಾವುದೊಂದೂ ಅರಿವಿಗೆ ಬರದೇ ಸ್ತಬ್ಧವಾಗಿತ್ತು. ವಿಜ್ಞಾನದ ಹಿರಿಮೆಯ ವಿಕ್ರಮವೊಂದರ ಕ್ಷಣದ ಕುತೂಹಲಕ್ಕೆ ಕಾಯ್ದಿದ್ದ, ದುಡಿದಿದ್ದ ಸಹಸ್ರಾರು ಮಂದಿಗೆ ಮಾತೇ ಹೊರಡಲು ಸಾಧ್ಯವಾಗಲಿಲ್ಲ.

ಈ ಹಿನ್ನೆಲೆಯ ವಿವರವಾದ ಬೃಹತ್ ಕಥಾನಕವನ್ನು ನಂತರದಲ್ಲಿ ಎಳೆಎಳೆಯಾಗಿ ಬಿಡಿಸಿ ನೋಡೋಣ. ಆದರೆ ಮರುದಿನದಿಂದ ಹರಿದಾಡಿದ ಸುದ್ದಿ, ವಿಡಿಯೋಗಳು, ಸಂಗತಿಗಳು ತೀರಾ ಅವೈಜ್ಞಾನಿಕ, ಅನವಶ್ಯಕ ದಾಖಲೆಗಳನ್ನು ಮೆರೆಸಿದ್ದಂತೂ ಸುಳ್ಳಲ್ಲ. ಇಡೀ ವಿದ್ಯಮಾನದ ನಾಯಕ ಇಸ್ರೋದ ಅಧ್ಯಕ್ಷರನ್ನು ಸಮಾಧಾನಿಸುವ ಸಂಗತಿಯೇ ಸಾಮಾನ್ಯವಾಗಿ ಹೋಯಿತು. ಸೋತಕ್ಷಣದಲ್ಲಿ ನಾಯಕ ತನ್ನ ಇಡೀ ಟೀಮಿನ ಜೊತೆಗಾರರ ಸಾಮೀಪ್ಯವನ್ನು ಬಿಟ್ಟು ಪ್ರಭುತ್ವದಿಂದ ಸಂತೈಸಿಕೊಳ್ಳುವ ಕ್ಷಣಕ್ಕೆ ಕಾರಣವಾಗಬೇಕಾಯಿತು. ಅವೈಜ್ಞಾನಿಕ ಅಚಾತುರ್ಯ ಜಗಜ್ಜಾಹೀರಾಯಿತು.

ವಿಜ್ಞಾನದ ಉತ್ಪನ್ನಗಳು, ಅರಿವು ಎಲ್ಲವೂ ಸಂಚಿತವಾದವು ಮತ್ತು ಸಹಸ್ರಾರು ಮನಸ್ಸುಗಳ ದುಡಿಮೆಯ ಸಹಯೋಗದವು. ಅವು ಎಂದೂ ಕೇವಲ ನಾಯಕನನ್ನು ಮಾತ್ರ ಮೆರೆಸುವ, ದುಡಿದವರನ್ನು ಮರೆಮಾಚುವ ಜಾಯಮಾನದವಲ್ಲ. ಜತೆಗೆ ಅಂತಹದ್ದನ್ನೆಂದೂ ವೈಜ್ಞಾನಿಕ ಸಾದೃಶ್ಯಗಳಾಗಿಸಲು ಸಾಧ್ಯವಿಲ್ಲ. ಕಳೆದ 2017ರ ಭೌತವಿಜ್ಞಾನ ನೊಬೆಲ್ ಪುರಸ್ಕøತರು ಬಹುಮಾನದ ಸ್ವೀಕೃತಿಯ ಸಂದರ್ಭದಲ್ಲಿ ಕಾರ್ಯಸಾಧುವಾದ ಸಂಗತಿಗೆ ಒಂದು ಶತಮಾನದ ದುಡಿಮೆಯ ಫಲವನ್ನು ನೆನಪಿಸಿಕೊಂಡು, ಜೊತೆಗೆ ಆವರೆಗೆ ದುಡಿದ ಮನಸ್ಸುಗಳ ಪರವಾಗಿ ಸ್ವೀಕರಿಸುವ ಮಾತನಾಡಿದ್ದರು. ವಿಜ್ಞಾನದಲ್ಲಿ ಗೆದ್ದ ಬಾವುಟವನ್ನು ಹಾರಿಸುವ ಕೈಯನ್ನೆತ್ತಲು ಅನಂತ ಶ್ರಮದ ಅನಿವಾರ್ಯ ಬೆಂಬಲವಿದ್ದೇ ಇರುತ್ತದೆ. ಸೋಲು ಕೂಡ ಹಾಗೆಯೇ ಅದು ಸದಾ ಪರೀಕ್ಷೆಗೆ ಒಡ್ಡುವ ಗುಣವುಳ್ಳದ್ದು. ಸೋಲಿನ ಅನುಭವವನ್ನು ಗೆಲುವಿನ ಅಡಿಪಾಯಕ್ಕೆ ಬಳಸುವ ಪ್ರಯೋಗವನ್ನಾಗಿಸುತ್ತದೆ. ದಕ್ಕದ ಉತ್ಪನ್ನಗಳ ಕಾರಣಗಳ ಹುಡುಕಾಟಕ್ಕೂ ವಿಜ್ಞಾನದಲ್ಲಿ ಬಹಳ ದೊಡ್ಡ ಬೆಲೆಯಿದೆ. ಅದನ್ನೇ ಇದೀಗ ಇಸ್ರೋ ತೊಡಗಿರುವುದು ಕೂಡ. ಎಲ್ಲವನ್ನೂ ಕೇವಲ ಕಂಪ್ಯೂಟರೀಕೃತ ಸಂವೇದನೆಗಳಿಂದಲೇ ಅದೂ ಲಕ್ಷಾಂತರ ಮೈಲಿಗಳಿಂದ ನಿಭಾಯಿಸುವ ಸೂಕ್ಷ್ಮ ಸನ್ನಿವೇಶವನ್ನು ಊಹಿಸಿಕೊಳ್ಳಿ!

ಚಂದ್ರನ ತಲುಪುವ ಬಯಕೆಯ ಹಿಂದಿರುವ ಜಗತ್ತಿನ ನಾಲ್ಕು ರಾಷ್ಟ್ರಗಳಲ್ಲಿ ಭಾರತವೂ ಒಂದು. ಮೊನ್ನೆಯ ಕ್ಷಣ ಸಫಲವಾಗಿದ್ದರೆ ಚಂದಿರನ ದಕ್ಷಿಣದ ಧ್ರುವದ ಪ್ರದೇಶವನ್ನು ಮೊಟ್ಟಮೊದಲು ತಲುಪಿದ ರಾಷ್ಟ್ರವಾಗಿರುತ್ತಿತ್ತು. ಈಗಲೂ ಅಂತಹದ್ದೊಂದು ಮತ್ತೊಂದು ಪ್ರಯತ್ನದಲ್ಲಿ ಸಫಲವಾಗುವುದು ದೊಡ್ಡದೇನಲ್ಲ. ಭೂಮಿಯಿಂದ 3,84,400 ಕಿ.ಮೀ ದೂರದ ಆಕಾಶಕಾಯವಾದ ಚಂದ್ರ ಗಗನದಲ್ಲಿಯೇ ಹತ್ತಿರದ ತಾಣ. ಅಳುವ ಮಕ್ಕಳಿಂದ ಆರಂಭಗೊಂಡು ಬೌದ್ಧಿಕ ಚಟುವಟಿಕೆಗಳ ಔನ್ನತ್ಯದ ಸಾಧಕರವರೆಗೂ, ಪ್ರಭುತ್ವದ ಆಕಾಂಕ್ಷೆಗಳನ್ನೂ ಒಳಗೊಂಡಂತೆ ಜೊತೆಗೆ ಹಲವು ವ್ಯಾವಹಾರಿಕ ಸಂಸ್ಥೆಗಳೂ ಚಂದ್ರನನ್ನು ಬಯಸುತ್ತಿದ್ದಾರೆ. ಅಮೆರಿಕ, ರಶಿಯಾ, ಚೀನಾ ಮತ್ತು ಭಾರತವಲ್ಲದೆ ಕೆಲವು ಖಾಸಗಿ ಸಂಸ್ಥೆಗಳೂ ಕಾತರರಾಗಿದ್ದಾರೆ. ಈಗಾಗಲೆ ವಿಶ್ವಸಂಸ್ಥೆಯ ನಿರ್ಧಾರದಂತೆ ಯಾರೂ ಬಾಹ್ಯಾಕಾಶವನ್ನು ಒಡೆಯರೆಂದುಕೊಳ್ಳಲಾಗದು. ಆದರೂ ಚಂದ್ರನಲ್ಲಿರುವ ಚಿನ್ನವೂ ಸೇರಿದಂತೆ ಹಿಲಿಯಂ ಮುಂತಾದ ಸಂಪನ್ಮೂಲಗಳ ಬೆನ್ನು ಹತ್ತಿರುವುದನ್ನು ಯಾರೂ ನೇರ ಪ್ರಸ್ತಾಪಿಸದಿದ್ದರೂ ಅವುಗಳ ಆಸೆಯೂ ಚಂದ್ರಯಾನದ ಹಿಂದಿರುವುದು ಸುಳ್ಳಲ್ಲ. ವಿಷಯವೇನೇ ಇರಲಿ ಪ್ರಸ್ತುತ ಭಾರತದ ಪ್ರಯತ್ನ ಮತ್ತು ಅದರಾಚೆಗಿನ ಸಂಗತಿಗಳು ಜಗತ್ತಿನ ಎಲ್ಲಾ ರಾಷ್ಟ್ರಗಳ ಕುತೂಹಲವನ್ನು ಕೆರಳಿಸಿವೆ. ಆದರೂ ನಾವು ತಲುಪಲಾಗದ ಸಂಗತಿಯ ಹಿಂದೇನು ಎಂಬುದನ್ನು ಮತ್ತು ಗೆಲ್ಲುವ ಕನಸುಗಳ ಆಕಾಂಕ್ಷೆಗಳೇನು ಎಂದು ಮುಂದೆ ನೋಡೋಣ.

ಚಂದ್ರಯಾನ-2 ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾವಿರಾರು ಜನರ ಒಟ್ಟು ಒಂದು ದಶಕದ ವೈಜ್ಞಾನಿಕ ಸಂಶೋಧನೆ ಮತ್ತು ಇಂಜಿನಿಯರಿಂಗ್ ಅಭಿವೃದ್ಧಿಯ ಫಲ. ಇದರ ಪ್ರಮುಖ ಉದ್ದೇಶ ಈವರೆವಿಗೂ ಯಾರೂ ಅನ್ವೇಷಿಸದ ಚಂದ್ರನ ಮೇಲ್ಮೈಯ ಮೇಲೆ ಹೊಸ ಅರಿವನ್ನು ಪಡೆದು ಆ ಮೂಲಕ ಭೂಮಿಯ ಚರಿತ್ರೆಯನ್ನು ಮತ್ತಷ್ಟು ಹಿಗ್ಗಿಸುವ ಗುರಿಯನ್ನು ಹೊಂದಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಕುರಿತು ಈಗಲೂ ಏನೇನೂ ತಿಳಿದಿಲ್ಲ. ಅಲ್ಲಿನ ವಿವರವಾದ ಸ್ಥಳಾಕೃತಿಯ ವಿವರಗಳು, ಖನಿಜವೈಜ್ಞಾನಿಕ ವಿಶ್ಲೇಷಣೆಗಳ ಜೊತೆಗೆ ಚಂದ್ರನ ಮೇಲ್ಮೈಯಲ್ಲಿ ಕೆಲವು ಪ್ರಯೋಗಗಳನ್ನು ನಡೆಸುವ ಕುತೂಹಲಕಾರಿ ಪ್ರಯತ್ನ ಇದಾಗಿತ್ತು. ಈಗಾಗಲೇ ಮೊದಲ ಚಂದ್ರಯಾನದಲ್ಲಿ ತಿಳಿಸಿದ ಅಲ್ಲಿರಬಹುದಾದ ನೀರಿನ ಅಣುಗಳ ಉಪಸ್ಥಿತಿ ಮತ್ತು ಅನನ್ಯ ರಸಾಯನಿಕ ಸಂಯೋಜನೆಯೊಂದಿಗೆ ಶಿಲಾಪ್ರಕಾರಗಳ ಅನ್ವೇಷಿಸಲೂ ಅಪೇಕ್ಷಿಸಲಾಗಿತ್ತು. ಈ ಕಾರ್ಯಾಚರಣೆಯ ಮೂಲಕ ಈ ಗುರಿಯನ್ನು ಸಾಧಿಸಿದ ಮೊಟ್ಟಮೊದಲ ದೇಶವಾಗಿ ಹೊರಹೊಮ್ಮುತ್ತಿತ್ತು. ಹಾಗಾದರೆ ಇದೀಗ ಅಂತಹ ನಷ್ಟವಾಗಿದೆಯೇ? ಲಾಭಗಳಾದರೂ ಏನು? ಇದನ್ನೇ ಮತ್ತಿತರ ದೇಶಾಭಿವೃದ್ಧಿಗೆ ಚಿಂತಿಸಬಹುದಿತ್ತೇ ಎಂದೆಲ್ಲಾ ಪ್ರಶ್ನೆಗಳನ್ನು ಜನರಾಡುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಚಂದ್ರನ ಮೇಲೆ ಇಳಿಸಬೇಕಾಗಿದ್ದ 1,471 ಕಿಲೋತೂಕದ ವಿಕ್ರಂ-ಲ್ಯಾಂಡರ್ ಸರಿಯಾಗಿ ಮೇಲ್ಮೈಯಲ್ಲಿ ಇಳಿಯದೆ ಕೊನೆಯ ಕ್ಷಣದಲ್ಲಿ ಸಂಪರ್ಕವನ್ನು ಕಡಿದುಕೊಂಡಿತು. ಆದರೇನಂತೆ ಅದನ್ನು ಹೊತ್ತು ಚಂದ್ರನ ವಲಯ ತಲುಪಿಸಿದ ಕಕ್ಷೆಗಾಮಿ ಅಥವಾ ಆರ್ಬಿಟರ್ ಚಂದ್ರನ ವಲಯವನ್ನು 100 ಕಿ.ಮೀ ದೂರದಲ್ಲಿ ಸುತ್ತುತ್ತಾ ಇನ್ನೂ 6-7ವರ್ಷಗಳ ಕಾಲ ಅಧ್ಯಯನವನ್ನು ಮುಂದುವರೆಸಲಿದೆ. ಇದೇ ಕಕ್ಷೆಗಾಮಿಯು ಈಗಾಗಲೆ ನಮ್ಮ ದೇಶದ ಬಾಹ್ಯಾಕಾಶ ಪಿತಾಮಹ ವಿಕ್ರಂ ಸಾರಾಭಾಯ್ ಹೆಸರು ಹೊತ್ತ ವಿಕ್ರಂ-ಲ್ಯಾಂಡರ್ ತಲುಪಬೇಕಿದ್ದ ಆದರೆ ಹಾಗೆ ಸಂಪರ್ಕರಹಿತವಾಗಿ ಬಿದ್ದಿರುವ ಚಿತ್ರವನ್ನೂ ನಮ್ಮ ದೇಶದ ಅದರಲ್ಲೂ ನಮ್ಮದೇ ನೆಲಕ್ಕೆ ರವಾನಿಸಿದೆ. ಸೆಪ್ಟೆಂಬರ್ 7ರಿಂದಲೇ ಹಗಲಿರುಳೆನ್ನದೆ ಇಂದಿನ ಕ್ಷಣದವರೆಗೂ ಸರಿಪಡಿಸುವ ಸಾಧ್ಯತೆ ಮತ್ತು ಆದದ್ದಾದರೂ ಏನು ಎಂಬ ಗಣಿತೀಯ ಲೆಕ್ಕಾಚಾರದ ಸಂಶೋಧನೆಯಲ್ಲಿ ಇಡೀ ಟೀಮ್ ನಿರತವಾಗಿದೆ.

ಸಫಲವಾಗಿದ್ದರೆ ಚಂದ್ರನ ವಲಯದಲ್ಲಿ ಸುತ್ತುತ್ತಿರುವ ಕಕ್ಷೆಗಾಮಿಯು ಮೇಲ್ಮೈಯಲ್ಲಿರುವ 27 ಕಿಲೋ ತೂಕದ ಪುಟ್ಟ ನೌಕೆಯ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಸಂಶೋಧನೆಗಳ ಫಲವನ್ನು ಕಳಿಸಬಹುದಾಗಿತ್ತು. ಮುಂದೆಯೂ ಒಂದು ವರ್ಷಕಾಲ ಪ್ರದಕ್ಷಿಣೆಯ ಮುಂದುವರೆಸಿ ಅಧ್ಯಯನ ಮಾಡುವ ಅದರ ಗುರಿಯನ್ನೀಗ ಜಾಗರೂಕವಾಗಿ 6-7 ವರ್ಷಗಳ ಕಾಲ ಅದರ ಇಂಧನವನ್ನೇ ಬಳಸಿ ಪ್ರಯೋಗಕ್ಕೆ ಒಳಪಡಿಸುವ ಜಾಣತನವನ್ನು ನಮ್ಮ ಇಸ್ರೋ ವಿಜ್ಞಾನಿಗಳು ಪ್ರದರ್ಶಿಸಲಿದ್ದಾರೆ. ಅದಕ್ಕಾಗಿ ಎಲ್ಲಾ ತಯಾರಿಯಲ್ಲೀಗ ಯಶಸ್ವಿಯಾಗಿದ್ದು, ಆ ಮೂಲಕ ಚಂದ್ರಯಾನ-2ರಲ್ಲಿ ಬಹಳ ಮುಖ್ಯವಾದ ಯಶಸ್ಸನ್ನು ಸಾಧಿಸಿದ್ದಾರೆ. ಹಾಗಾಗಿ ಇಳಿದ ನೌಕೆಯ ಫಲ ನೀಡದಿದ್ದರೂ ಪ್ರದರ್ಶಿಸುತ್ತಿರುವ ಆರ್ಬಿಟರ್ ಇನ್ನೂ ಮುಂದೆ ಕನಿಷ್ಟ ಐದಾರು ವರ್ಷಗಳಷ್ಟು ಹೆಚ್ಚು ಸಮಯ ಚಂದ್ರನನ್ನು ಕೇವಲ 100 ಕಿ.ಮೀ ದೂರದಿಂದ ಸುತ್ತುತ್ತಾ ನಿರಂತರ ಅಭ್ಯಾಸವನ್ನು ಮುಂದುವರೆಸಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ವೈಜ್ಞಾನಿಕ ಹಿರಿಮೆಯನ್ನು ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಇಸ್ರೋ ಇದೆ.

ಇಂದು ಪ್ರಾಯೋಗಿಕವಾಗಿ ಹಿನ್ನಡೆಯಾಗಿರಬಹುದು, ಆದರೆ ಇದೊಂದು ದೊಡ್ಡ ಹೆಜ್ಜೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಜ್ಞಾನದ ಆಕಾಂಕ್ಷೆಗಳನ್ನು ಬದಲಿಯಾಗಿ ಆಲೋಚನೆಗಿಳಿಸಿ ಸಮೀಕರಿಸಿ ಲಾಭ-ನಷ್ಟಗಳ ಲೆಕ್ಕಾಚಾರದಲ್ಲಿ ವಿವರಿಸಲು ಆಗದು. ಕಾರಣ ಮಾನವ ಕುಲದ ಅದ್ವಿತೀಯ ಲಕ್ಷಣಗಳಲ್ಲಿ ಯೋಚನೆಯ ವಿಕಾಸವು ಪ್ರಮುಖವಾದುದು. ಹಾಗಾಗಿ ಮಾನವ ಕುಲವು ಆಲೋಚಿಸದೇ ಇರಲು ಸಾಧ್ಯವಿಲ್ಲದೇ ಇರುವಾಗ ವಿಜ್ಞಾನದ ಅನುಶೋಧಗಳನ್ನು ನಿಲ್ಲಿಸಲಾಗದು. ಪ್ರಸ್ತುತ ವರ್ಷವು ಭಾರತೀಯ ಬಾಹ್ಯಾಕಾಶ ಜಗತ್ತಿನಲ್ಲಿ ಪ್ರಮುಖವಾದುದು. ಕಾರಣ ಇದೇ ವರ್ಷ ನಮ್ಮ ದೇಶವನ್ನು ಬಾಹ್ಯಾಕಾಶ ವಿಜ್ಞಾನವಲ್ಲದೆ ಇತರೇ ಬಹುಮುಖ್ಯ ಅಭಿವೃದ್ಧಿ ಚಿಂತನೆಗಳ ಬೌದ್ಧಿಕ ಸಾಧ್ಯತೆಗಳಿಗೆ ಕಾರಣರಾದ ಪ್ರೊ.ವಿಕ್ರಂ ಸಾರಾಭಾಯ್ ಅವರ ಶತಮಾನೋತ್ಸವ.

ಸೂರ್ಯ ಮತ್ತು ಚಂದ್ರರಂತಹ ರೂಪದ ಅಪರೂಪದ ಕಣ್ಣುಗಳ ಶ್ರೀಮಂತ ನೋಟವನ್ನು ಹೊಂದಿದ್ದ ವಿಕ್ರಂ ಸಾರಾಭಾಯ್ 1919ರ ಆಗಸ್ಟ್ 12ರಂದು ಜನಿಸಿದವರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ತಮಗೆ ಯಾವುದೇ ಆಸೆಯ ಗುರಿಗಳನ್ನೂ ಹೊಂದಿರದ, ಸದಾ ದೇಶದ ಹಿತದಿಂದ ಕನಸುಗಳನ್ನು ಕಟ್ಟಿದ, ಅದರ ತಯಾರಿಗಳನ್ನು ಶ್ರದ್ಧೆ ಮತ್ತು ವಿಶ್ವಾಸದಿಂದ ಮಾಡಿದ ದೂರದೃಷ್ಟಿಯ ವಿಜ್ಞಾನಿ. ಭಾರತೀಯ ಅಪ್ರತಿಮ ಭೌತವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಖಾಸಾ ಶಿಷ್ಯ, ಅವರ ಮಾರ್ಗದರ್ಶನದಲ್ಲೇ ಪಿಎಚ್.ಡಿ ಪಡೆದು, ಇಸ್ರೋಗೆ ಬೇಕಾದ ತಾಂತ್ರಿಕ ನಿಪುಣರ ತಯಾರಿಯ ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯ ಹುಟ್ಟಿಗೂ ಕಾರಣರಾದರು. ಅವರ ಹೆಸರಿನ ಲ್ಯಾಂಡರ್ ಮೊನ್ನೆ ಚಂದ್ರನ ಮೇಲೆ ಲೆಕ್ಕಾಚಾರದಂತೆ ಇಳಿದು ಹೊಸ ಇತಿಹಾಸವನ್ನು ಬರೆಯಬೇಕಿತ್ತು. ತೀರಾ ಎಳೆಯ ಕೇವಲ 52ರ ವಯೋಮಾನದಲ್ಲಿ ದೇಹತ್ಯಾಗ ಮಾಡಿದ ವಿಕ್ರಂ ಅವರು ಅಷ್ಟು ಚಿಕ್ಕವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೆ ಭಾರತವನ್ನು ಅಣಿಮಾಡಿದರು. ಇಂದು ಇಸ್ರೋ ಏನೆಲ್ಲಾ ಸಾಧಿಸಿದ್ದರೂ ಅದಕ್ಕೆಲ್ಲಾ ಅವರು ಹಾಕಿಹೋದ ಭದ್ರ ಅಡಿಪಾಯ ಬಹಳ ಮುಖ್ಯವಾದುದು.

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರ ಪ್ರಕಾರ ಮಾನವ ಕುಲದ ವಿಶೇಷತೆ ಎಂದರೆ “ನಮ್ಮ ಮಿತಿಗಳನ್ನು ದಾಟುವುದಂತೆ”. ಕುರ್ಚಿಗೆ ಅಂಟಿಕೊಂಡೇ ಅರ್ಧ ಜೀವನ ಕಳೆದೂ ಸಂಶೋಧನೆಯಲ್ಲಿ ನಿರತವಾಗಿ ಬದಕನ್ನು ನೀಗಿಸಲು ಸಾಧ್ಯವಾಗಿದ್ದು ಅಂತಹ ಮಿತಿಯನ್ನು ದಾಟಿದ್ದರಿಂದ ಎನ್ನುತ್ತಿದ್ದರು. ಭಾರತೀಯ ಸಂದರ್ಭದಲ್ಲಿ ಅಂತಹ ಮಿತಿಗಳನ್ನು ದಾಟುವುದನ್ನು ಕಲಿಯುವುದು ವಿಜ್ಞಾನಿಗಳಿಗೂ, ವಿಜ್ಞಾನ ಸಂಸ್ಥೆಯ ನಾಯಕರಿಗೂ ಬಹಳ ಇದೆ. ಇದು ಕೇವಲ ಇಸ್ರೋ ವಿಜ್ಞಾನಿಗಳಿಗಷ್ಟೇ ಮಾತ್ರ ಅಲ್ಲ.

ಗೆಲುವನ್ನು ಸೋಲಾಗಿಸಿದ ಮೋದಿಯ ಪ್ರಚಾರದ ಹಪಾಹಪಿ

ಅಚ್ಚರಿ ಪಡುವಂತಹ ಹಲವು ಸಾಧನೆಗಳನ್ನು ಇಸ್ರೋ ಮಾಡಿದೆ. ಜನಸಾಮಾನ್ಯರ ಒಳಿತಿಗೆ ಬೇಕಾದ ಸಾಹಸಗಳು ಅದರ ವತಿಯಿಂದ ನಡೆದಿವೆ. ಅಂತಹ ಮತ್ತೊಂದು ಸಾಹಸ ಚಂದ್ರಯಾನ-2. ಶೇ.95ರಷ್ಟು ಯಶಸ್ವಿಯಾದ ಆ ಪ್ರಯೋಗವು ಭಾರತದ ವಿಜ್ಞಾನಿಗಳ ಕೀರ್ತಿಯನ್ನು ಹೆಚ್ಚಿಸಬೇಕಿತ್ತು. ಆದರೆ, ಅದರ ಬದಲಿಗೆ ಇಡೀ ಭಾರತ ಒಂದು ರೀತಿಯ ಶೋಕಾಚರಣೆಯಲ್ಲಿ ಮುಳುಗುವಂತಾಯಿತು. ಇದಕ್ಕೆ ವಿಜ್ಞಾನಿಗಳು ಕಾರಣವಲ್ಲ. ಪ್ರಚಾರದ ಹಪಾಹಪಿಯ ಕ್ಷುಲ್ಲಕ ರಾಜಕಾರಣ! ಈ ಚಂದ್ರಯಾನದ ಯಶಸ್ಸಿನ ಕೀರ್ತಿಯನ್ನು ಕಿರೀಟಕ್ಕೇರಿಸಿಕೊಳ್ಳಲು ಹೊರಟ ಪ್ರಧಾನಿ, ಪ್ರಧಾನಿಯ ತುತ್ತೂರಿಗಳಾದ ಮಾಧ್ಯಮಗಳು, ಅದು ಶೇ.100ರಷ್ಟು ಯಶಸ್ವಿಯಾಗುತ್ತದೆ ಎಂಬ ನಿರೀಕ್ಷೆ ಮತ್ತು ಹುಸಿ ಸಂಭ್ರಮವನ್ನು ಮೊದಲೇ ಬಿತ್ತರಿಸಿದ್ದವು. ಈಗಾಗಲೇ ಹಲವಾರು ದೇಶೀ ಮತ್ತು ವಿದೇಶಿ ಉಪಗ್ರಹಗಳನ್ನು ತನ್ನ ಉಡ್ಡಯನ ವಾಹನಗಳ ಮೂಲಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿರುವ ಇಸ್ರೋ ಪಾಲಿಗೆ ಚಂದ್ರಯಾನ-2 ವಿಶೇಷವೆನಿಸಿದ್ದು ಅದು ಚಂದ್ರನ ಮೇಲೆ ಇಳಿಸಲಿದ್ದ ವಿಕ್ರಂ ಲ್ಯಾಂಡರ್‍ನಿಂದಾಗಿ. ಆ ವಿಶೇಷ ಸಾಧನೆ ತನ್ನಿಂದಲೇ ಸಾಧ್ಯವಾಯಿತು ಎಂಬುದನ್ನು ತನ್ನ ಬಾಲಬಡುಕ ಮಾಧ್ಯಮಗಳ ಮೂಲಕ ಜನರಲ್ಲಿ ಬಿತ್ತಿ ದೇಶದ ಆರ್ಥಿಕ ಸಂಕಷ್ಟದ ಚರ್ಚೆಯನ್ನು ಹಿನ್ನೆಲೆಗೆ ಸರಿಸಬೇಕೆಂದು ಪ್ರಧಾನಿ ಮೋದಿ ಇಸ್ರೋದ ಕುತ್ತಿಗೆ ಮೇಲೆ ಕೂತಿದ್ದರಿಂದ ವಿಜ್ಞಾನಿಗಳೂ ವಿಕ್ರಂ ಲ್ಯಾಂಡರ್ ಪಾದಾರ್ಪಣೆಯನ್ನು ಯಶಸ್ವಿಗೊಳಿಸಬೇಕಾದ ಒತ್ತಡಕ್ಕೆ ಸಿಲುಕಿದರು. ದುರಾದೃಷ್ಟವಶಾತ್ ಅದು ಸಾಧ್ಯವಾಗದೆ ಹೋದ್ದರಿಂದ ಇಡೀ ಯೋಜನೆಯ ಶೇ.95ರಷ್ಟು ಯಶಸ್ಸು ನಗಣ್ಯವೆನಿಸಿ `ಮೋದಿ ವಿಜೃಂಭಣೆ’ಗೆ ಅವಕಾಶ ತಪ್ಪಿದ ಶೇ.5ರಷ್ಟು ಸೋಲಿಗೆ ಇಡೀ ದೇಶವೇ ಶೋಕಾಚರಣೆ ಮಾಡುವಂತಾಯ್ತು. ಆದರೆ ಈ ಯೋಜನೆಯ ನಿಜವಾದ ಯಶಸ್ಸು ಅರ್ಥವಾದದ್ದು ಅಮೆರಿಕಾದ ನಾಸಾ ವಿಜ್ಞಾನಿಗಳಿಗೆ. ಅದಕ್ಕೇ ನಾಸಾ, ಇಸ್ರೋವನ್ನು ಮೆಚ್ಚಿ ಕೊಂಡಾಡಿ ಟ್ವೀಟ್ ಮಾಡಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...