| ಥೂತ್ತೇರಿ ಯಾಹೂ |
“ವಿಕ್ರಮ ಚಂದ್ರನ ಮೇಲೆ ಕಾಲೂರಿದ ಆ ಕ್ಷಣಕ್ಕೆ ಜಗತ್ತು ಸಾಕ್ಷಿಯಾಯ್ತು” ಪ್ರಜಾವಾಣಿಯಲ್ಲಿ ಈ ತಲೆಬರಹ ಓದಿದ ಜನಕ್ಕೆ ದಿಗ್ಭ್ರಮೆಯಾಯ್ತಂತಲ್ಲಾ. ರಾತ್ರಿಯೆಲ್ಲಾ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಚಂದ್ರನ ಮೇಲೆ ವಿಕ್ರಮ ಇಳಿಯುವ ದೃಶ್ಯಕ್ಕಾಗಿ ಕಾದಿದ್ದ ಜನರು, ಅದು ಉಡುಪಿ ಕಡೆ ವಾಲುತ್ತ ಕಣ್ಮರೆಯಾದ ದೃಶ್ಯದಿಂದ ದುಗುಡಗೊಂಡ ಜನ ನಿರಾಶೆಯಿಂದ ನಿದ್ರೆಗೆ ಜಾರಿದರೆ, ಈ ಪ್ರಜಾವಾಣಿಯವರಿಗೆ ಏನಾಯ್ತು ಎಂದು ಪ್ರಜೆಗಳು ಶಾನೆ ಶಾಕ್‍ಗೆ ಒಳಗಾದರಂತಲ್ಲಾ. ಬಹುಶಃ ಹೀಗಾಗಿರಬೇಕು, ಇಸ್ರೋ ಅಧ್ಯಕ್ಷ ಕೆ. ಶಿವನ್ ಅಸಾಮಾನ್ಯ ವಿಜ್ಞಾನಿಗಳನ್ನು ಒಟ್ಟುಗೂಡಿಸಿ ಬಹುನಿಷ್ಠೆಯಿಂದ ವಿಕ್ರಮನನ್ನು ತಯಾರಿಸಿದ್ದಾರೆ. ಆದರೂ ಒಂದು ಸಣ್ಣ ಅಳುಕಿಗೆ ತುತ್ತಾಗಿ ಉಡುಪಿ ಮಠದ ಮಾಧ್ವ ಜಗತ್ತಿನ ಗುರುವರ್ಯರ ಆಶೀರ್ವಾದ ಪಡೆದರೆ ಹೇಗೆ ಅನ್ನಿಸಿದೆ. ಇದಕ್ಕೆ ಅವರ ಟೀಮು ಶಿರಸಾವಹಿಸಿ ಒಪ್ಪಿದೆ. ಅದರಂತೆ ಉಡುಪಿ ದಾರಿ ಹಿಡಿದ ವಿಜ್ಞಾನಿಗಳು ಅಷ್ಟಮಠದ ಅಧಿಪತಿಯ ಆಶೀರ್ವಾದ ಪಡೆದು ಕೈ ಸಡಿಲಬಿಟ್ಟು ಭೋಜನ ಭಾರಿಸಿ ವಾಪಸಾದದು, ಮುಂದೆ ಪ್ರಧಾನಿ ಬರಲು ಒಪ್ಪಿದ್ದು, ಇದೆಲ್ಲಾ ಆದ ಮೇಲೆ ವಿಕ್ರಮ ಚಂದ್ರನ ಮೇಲಿಳಿಯದೆ ಇನ್ನೆಲ್ಲಿ ಇಳಿಯಲು ಸಾಧ್ಯ ಎಂದು ಪ್ರಜಾವಾಣಿ ಶಿಖಾಮಣಿಗಳು ಭಾವಿಸಿದ್ದೇ ಅನಾಹುತಕ್ಕೆ ಕಾರಣವಂತಲ್ಲಾ ಥೂತ್ತೇರಿ.
ವಿಕ್ರಮ ಸೌರವ್ಯೂಹ ಭೇದಿಸಿ ಚಂದ್ರನ ಸುತ್ತ ಗಿರಕಿ ಹೊಡೆದಿರಬೇಕು. ಆದ್ದರಿಂದ ಮುಂದಿನ ಕೆಲವೇ ಕ್ಷಣಗಳಲ್ಲಿ ಚಂದ್ರನ ಮೇಲೆ ವಿಕ್ರಮ ಕಾಲೂರಿ ನಿಲ್ಲುವುದು ಮೋದಿ ಮಹಾತ್ಮನಾಣೆ ನಿಜ ಎಂದುಕೊಂಡ ಸಿಬ್ಬಂದಿ ಆ ಕ್ಷಣಕ್ಕೆ ಜಗತ್ತು ಸಾಕ್ಷಿಯಾಯ್ತು ಎಂದು ತಲೆಬರಹಗಳನ್ನು ಕೊಟ್ಟು ಅವನ್ನ ಮಾತ್ರ ಪುನಃ ಪುನಃ ಓದಿಕೊಂಡು ಹೊರಟವಂತಲ್ಲಾ. ಆದರೇನು ವಿಕ್ರಮ ಚಂದ್ರನ ಮೇಲೆ ಕಾಲೂರುವುದು ಬಿಟ್ಟು ಅಷ್ಟಮಠಗಳ ದಿಕ್ಕಿಗೆ ಜಾರಿ ಕಣ್ಮರೆಯಾದಾಗ ವಿಕ್ರಮನ ವಿಜ್ಞಾನಿಗಳ ಕಣ್ಣಂಚಿನಲ್ಲಿ ನೀರಾಡಿತು. ಆಗ ಮಾರಣಹೋಮ ದುರಂತವನ್ನೂ ನಾಯಿಮರಿ ಸಾವಿನಂತೆ ಭಾವಿಸುವ ಮೋದಿಯವರು ಕ್ಯಾಮೆರಾಗಳ ಮುಂದೆ ಶಿವನ್ ಭುಜ ಸವರಿ ಸವರಿ ಕಾವೇರುವಂತೆ ಮಾಡಿ ಸಾಂತ್ವಾನಗೊಳಿಸಿದರಂತಲ್ಲಾ, ಥೂತ್ತೇರಿ.
ವಿಕ್ರಮ ಆ ಕ್ಷಣಕ್ಕೆ ಯಶಸ್ವಿಯಾಗಿ ಚಂದ್ರನ ಮೇಲಿಳಿದಿದ್ದರೆ ಏನಾಗುತ್ತಿತ್ತು ಎಂದರೆ, ಮಾತಿನ ಮಲ್ಲನ ವರಸೆ ಬದಲಾಗುತ್ತಿತ್ತು. ಆರ್ಥಿಕವಾಗಿ ದಿವಾಳಿ ಏಳುತ್ತಿರುವ ಭಾರತವನ್ನು ವಿಕ್ರಮನ ಸಾಧನೆಯಿಂದ ತುಂಬಿಕೊಳ್ಳುತ್ತಿದ್ದರು. ಅತ್ತ ವಿಜ್ಞಾನಿಗಳ ದಂಡು ಉಡುಪಿ ಕಡೆಗೆ ಬಂದು ಒಂದು ಪುಟಾಣಿ ಚಿನ್ನದ ವಿಕ್ರಮನನ್ನು ಪೇಜಾವರನ ಪದತಳದಲ್ಲಿಟ್ಟು ಎಲ್ಲ ತಮ್ಮ ಕೃಪೆ ಎನ್ನುತ್ತಿದ್ದರು. ಆಗ ಪೇಜಾವರನ ದಿಕ್ಕಿನಿಂದ ರೇಡಿಯೋ ಶಬ್ದದ ದನಿಯೊಂದು ಹೊರಬಿದ್ದು “ಎಲ್ಲ ಕೃಷ್ಣನ ಮಹಿಮೆ, ಗೋವರ್ಧನ ಗಿರಿಎತ್ತಿ ನಿಲ್ಲಿಸಿದ ಆತನ ಸಂಕಲ್ಪ ಶಕ್ತಿಯೇ ವಿಕ್ರಮನಲ್ಲಿ ಸೇರಿಕೊಂಡು ಚಂದ್ರನ ಮೇಲೆ ನೆಲೆಗೊಳ್ಳುವಂತೆ ಮಾಡಿತು. ವಿಜ್ಞಾನ ಮತ್ತು ಆಧ್ಯಾತ್ಮ ಜೊತೆಜೊತೆಯಾಗೇ ಹೋಗಬೇಕು. ಯಾವತ್ತೂ ಅವು ಒಂದನ್ನೊಂದು ಅಗಲುವಂತೆ ಮಾಡಬಾರದು” ಎಂದು ಬುದ್ದಿಜೀವಿಗಳ ಬಗ್ಗೆ ಕಟಕಿಯಾಡುತ್ತಿದ್ದರು. ಅದೆಲ್ಲಾ ಇರಲಿ ಕರ್ನಾಟಕದ ಸಂತ್ರಸ್ತರ ವಿಷಯದಲ್ಲಿ ಮೋದಿ ಬರುತ್ತಾರೆಂದು ತಮಟೆಯ ಜೊತೆಗೇ ಕೂಗಾಡಿದ್ದ ಬಿಜೆಪಿಗಳು ಮೋದಿ ಮಾಡಿದ ಕೆಲಸದಿಂದ ತಲೆ ತಗ್ಗಿಸಿಕೊಂಡು ಓಡಾಡುತ್ತಿವೆಯಂತಲ್ಲಾ, ಥೂತ್ತೇರಿ.
ಚಂದ್ರನ ಮೇಲೆ ಮುಖ ಮುಂದಾಗಿಯೇ ಬಿದ್ದು, ಓರೆಯಾಗಿ ನಿಂತಿರುವ ವಿಕ್ರಮ ಗೊರಗೊರ ಸದ್ದಿನೊಂದಿಗೆ ತಾನಿಲ್ಲಿರುವುದಾಗಿ ಕಳಿಸಿದವರಿಗೆ ಮಾಹಿತಿಕೊಟ್ಟ ಕೂಡಲೇ ಅದರ ಯೋಗಕ್ಷೇಮದ ವಿಚಾರಣೆಗೆ ಪರಿಶೀಲನಾ ಸಮಿತಿಯೊಂದು ನಿರ್ಮಾಣವಾಗುತ್ತಿರುವಾಗಲೇ, ಇತ್ತ ಕರ್ನಾಟಕದ ಪ್ರವಾಹ ಪೀಡಿತ ಸಂತ್ರಸ್ತರ ಶೆಡ್ಡುಗಳಲ್ಲಿನ ಜನರ ಕಣ್ಣುಗಳು ಮರಣದ ದಿಕ್ಕನ್ನ ದಿಟ್ಟಿಸುತ್ತಿವೆಯಂತಲ್ಲಾ. ಇವರ ಗೋಳು ಕೇಳಲು ನೋಡಲು ಇಷ್ಟಪಡದ ಬಿಜೆಪಿಗಳು ಅತ್ತ ತಲೆ ಹಾಕುವುದನ್ನೇ ಮರೆತು ಹೊಸದಾಗಿ ರಚನೆಗೊಂಡ ಸಂಘಟಿತ ಮಂತ್ರಿಗಳು ತಮಗೆ ಸೂಕ್ತವಾದ ಹೊಸ ಬಂಗಲೆಯೇ ಬೇಕು ಎಂದು ಹಟದಲ್ಲಿ ಹುಡುಕುತ್ತಿವೆಯಂತಲ್ಲಾ. ಜೊತೆಗೆ ಉಸ್ತುವಾರಿಗೆ ಸಿಗುವ ಜಿಲ್ಲೆಗಳ ಬಗ್ಗೆಯೂ ತಲೆಕೆಡಿಸಿಕೊಂಡಿವೆಯಂತಲ್ಲಾ. ಇಂತಹ ಸಮಯದಲ್ಲಿ ಅತ್ತ ಮೋದಿ ಮಹಾತ್ಮನೂ ಸಂತ್ರಸ್ತರ ವಿಷಯದಲ್ಲಿ ಮಾತನಾಡಲಿಲ್ಲ. ಕೇಂದ್ರದಿಂದ ಕಾಸೂ ಬರಲಿಲ್ಲ. ಸಂತ್ರಸ್ತರ ಶೆಡ್ಡಿನಿಂದ ಸಾವು ನೋವಿನ ಆಕ್ರಂದನ ಕೇಳುತ್ತಿದೆ. ಜೊತೆಗೆ ಸರಕಾರ ರಚನೆಯಾಗುವಂತೆ ಮಾಡಿದ ಹದಿನೇಳು ಜನ ಶಾಸಕರ ಗೋಳು ನೋಡಲಾಗುತ್ತಿಲ್ಲ. ಇಂತಹ ದುಃಖ ತುಂಬಿಕೊಂಡ ಎಡೂರಪ್ಪನನ್ನ ನೋಡಿದರೆ ಸದಾ ಆಸ್ಪತ್ರೆಕಡೆಗೆ ನಡೆಯುತ್ತಿರುವ ಶ್ರೀಮಂತ ರೋಗಿಯಂತೆ ಕಾಣುತ್ತಾರಂತಲ್ಲಾ ಥೂತ್ತೇರಿ.
ಕಬೀರ್ ಎಂಬ ಪಂಜುರ್ಲಿಯನ್ನ ಕರ್ನಾಟಕದ ಭಾರತೀಯ ಜನತಾಪಾರ್ಟಿ ಅಧ್ಯಕ್ಷನನ್ನಾಗಿ ಮಾಡಿದಾಗಲೇ ಇದರಿಂದ ಆಗುವ ಅನಾಹುತವನ್ನ ಜನ ಊಹಿಸಿದ್ದರು. ಅದರಂತೆ ಇದರ ಬಾಯಲ್ಲಿ ಬರುತ್ತಿರುವ ಮಾತುಗಳು ಬಿಜೆಪಿ ಎಂಬ ಪಾರ್ಟಿಯ ಅಧ್ಯಕ್ಷನ ಬಾಯಿಂದ ಹೊರಡುವ ತಕ್ಕ ಮಾತುಗಳಂತಿವೆಯಂತಲ್ಲಾ. ತಮ್ಮ ಸ್ಥಾನಕ್ಕೆ ರಾಜಿನಾಮೆಯಿತ್ತ ಸೆಂಥಿಲ್ ಎಂಬ ದಕ್ಷ ಅಧಿಕಾರಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ರಾಜೀನಾಮೆ ಕೊಟ್ಟರೆ, ಹಾಗಾದರೆ ನೀನು ಪಾಕಿಸ್ತಾನಕ್ಕೆ ಹೋಗು ಎನ್ನುವ ಬಿಜೆಪಿಗಳ ತಲೆಯಲ್ಲಿ ಏನಿದೆ ಎಂಬುದು ಎಲ್ಲರಿಗೂ ಮನವರಿಕೆಯಾಗುತ್ತಿದೆಯಲ್ಲಾ. ಅದೇನದರಾಗಲಿ ಸುಸಂಸ್ಕøತರ ನಾಡಾದ ಕರ್ನಾಟಕದಲ್ಲಿ ದಕ್ಷ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸದಂತಾಗಿದೆ. ಈ ಹಿಂದೆ ಮುದುಕರ ಶೆಟ್ಟರು ನೋವು ನುಂಗಿಕೊಂಡೇ ನಿಧನರಾದರು. ಅಣ್ಣಾಮಲೈ ಯಾರನ್ನ ದೂರದೆ ಹೊರಟುಹೋದರು. ಈಗ ಸಂಧಿಲ್ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಾರಣ ನೀಡಿ ಹೊರಟು ಹೋಗುತ್ತಿದ್ದಾರೆ. ಇದು ದಕ್ಷಿಣ ಕನ್ನಡ ಏನಾಗಿರಬಹುದು ಎಂಬ ಸೂಚನೆಯಂತಿದೆ. ಕರ್ನಾಟಕದ ಜನ ಈ ನಾಡು ದ.ಕ ಆಗದಂತೆ ನೋಡಿಕೊಳ್ಳುವ ತುರ್ತು ಈಗ ಬಂದಿದೆಯಂತಲ್ಲಾ, ಥೂತ್ತೇರಿ.