ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ಅಸ್ಸಾಂ ಗೌಹಾತಿಯಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸುವ ಮೂಲಕ ತಮ್ಮ 73ನೇ ಶತಕ ಗಳಿಸಿದ್ದಲ್ಲದೆ, ಸಚಿನ್ ತೆಂಡೂಲ್ಕರ್‌ರವರ ಎರಡು ವಿಶ್ವ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿಯವರ ಇಂದಿನ ಅಬ್ಬರದ ಶತಕ ಮೂಲಕ (87 ಎಸೆತಗಳಲ್ಲಿ 113 ರನ್) ಸ್ವದೇಶದಲ್ಲಿ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಸಚಿನ್‌ರವರ ದಾಖಲೆಗೆ ಕಿಂಗ್ ಕೊಹ್ಲಿ ಸಹ ಸಮವಾಗಿ ನಿಂತಿದ್ದಾರೆ. ಸಚಿನ್ ತೆಂಡೂಲ್ಕರ್ ಭಾರತದಲ್ಲಿ ಆಡಿದ 164 ಪಂದ್ಯಗಳಲ್ಲಿ 20 ಶತಕಗಳನ್ನು ಬಾರಿಸಿದರೆ, ವಿರಾಟ್ ಕೊಹ್ಲಿ 102 ಪಂದ್ಯಗಳಲ್ಲಿ 20 ಶತಕ ಬಾರಿಸಿದ್ದಾರೆ.
ಅಲ್ಲದೆ ಶ್ರೀಲಂಕಾ ತಂಡದ ವಿರುದ್ಧ ಸಚಿನ್ ತೆಂಡೂಲ್ಕರ್ 8 ಶತಕಗಳನ್ನು ಬಾರಿಸಿದರೆ ವಿರಾಟ್ ಕೊಹ್ಲಿ 9 ಶತಕಗಳನ್ನು ಭಾರಿಸುವ ಮೂಲಕ ಸಚಿನ್ ದಾಖಲೆ ಮುರಿದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ತಲಾ 9 ಶತಕಗಳನ್ನು ಬಾರಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಭಾರತ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ವಿರುದ್ಧ ಬೃಹತ್ ಮೊತ್ತ ಪೇರಿಸಿತು. 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 373 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 67 ಎಸೆತಗಳಲ್ಲಿ 83 ರನ್ ಗಳಿಸಿದರೆ, ಶುಭ್ಮನ್ ಗಿಲ್ 60 ಎಸೆತಗಳಲ್ಲಿ 70 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರ ಮೇಲೆ ವಿರಾಟ್ ಕೊಹ್ಲಿ ಶತಕದ ಮಹಲ್ ಕಟ್ಟಿದರು.
87 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 113 ರನ್ ಸಿಡಿಸಿದರು. 48ನೇ ಓವರ್‌ನಲ್ಲಿ ರಜಿತ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಕುಶಾಲ್ ಮೆಂಡಿಸ್ ಅವರಿಗೆ ಕ್ಯಾಚಿತ್ತು ಔಟಾದರು.
ಇದನ್ನೂ ಓದಿ: 34ನೇ ಜನ್ಮದಿನ: ಮಾಗಿದ, ಸೌಹಾರ್ದತೆ ಪರ ವಾಲಿದ ವಿರಾಟ್ ಕೊಹ್ಲಿ


