Homeಕರ್ನಾಟಕಶಿಕ್ಷಣ ಇಲಾಖೆಯ ಅಕ್ರಮದ ಬಗ್ಗೆ ವರದಿ ಪ್ರಕಟಿಸಿದ ‘ದಿ ಫೈಲ್‌’ಗೆ ಪೊಲೀಸರಿಂದ ನೋಟಿಸ್

ಶಿಕ್ಷಣ ಇಲಾಖೆಯ ಅಕ್ರಮದ ಬಗ್ಗೆ ವರದಿ ಪ್ರಕಟಿಸಿದ ‘ದಿ ಫೈಲ್‌’ಗೆ ಪೊಲೀಸರಿಂದ ನೋಟಿಸ್

ಇದು ತನಿಖಾ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ಎಂದು ‘ದಿ ಫೈಲ್’ ಸಂಪಾದಕರು ಆರೋಪಿಸಿದ್ದಾರೆ

- Advertisement -
- Advertisement -

ಶಿಕ್ಷಣ ಇಲಾಖೆಯ ಅಕ್ರಮದ ಬಗ್ಗೆ ವರದಿ ಮಾಡಿದ್ದ ಕನ್ನಡದ ಖ್ಯಾತ ತನಿಖಾ ಪೋರ್ಟಲ್ ‘ದಿ ಫೈಲ್‌’ಗೆ ಸೈಬರ್‌ ಪೊಲೀಸ್ ಕೇಂದ್ರ ವಿಭಾಗವೂ ನೋಟಿಸ್ ನೀಡಿದ್ದು, ವರದಿಗಾಗಿ ಸರ್ಕಾರಿ ಕಚೇರಿಯ ಇ-ದಾಖಲೆಗಳನ್ನು ನೀಡಿರುವ ಮಾಹಿತಿದಾರರ ವಿವರಗಳನ್ನು ಒದಗಿಸುಂತೆ ಕೇಳಿಕೊಂಡಿದೆ. ಪೊಲೀಸರ ಈ ಕ್ರಮವನ್ನು ಖಂಡಿಸಿರುವ ‘ದಿ ಫೈಲ್’ ಸಂಸ್ಥಾಪಕ ಜಿ. ಮಹಾಂತೇಶ್‌, ತನಿಖಾ ಮಾಧ್ಯಮವನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಸೇರಿದಂತೆ ಒಟ್ಟು ಮೂವರನ್ನು ಸೇವೆಗೆ ಪುನರ್‌ ಸ್ಥಾಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆಗಿನ ವರದಿಯನ್ನು ದಾಖಲೆ ಸಹಿತ ‘ದಿ ಫೈಲ್’ ದಿನಾಂಕ 2022 ರ ನವೆಂಬರ್‌ 10 ರಂದು ಪ್ರಕಟಿಸಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆ – 2000 ರ ಸೆಕ್ಷನ್ 66 ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದು, ಇಲಾಖೆಯ ಇ-ಆಫೀಸ್ ಪೋರ್ಟಲ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕೆ ಮತ್ತು ದಾಖಲೆಯನ್ನು ಸೋರಿಕೆ ಮಾಡಿದ್ದಕ್ಕಾಗಿ ಹೆಸರಿಸದ ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದೆ.

ಅಲ್ಲದೆ, ಸೈಬರ್‌ ಪೊಲೀಸರು ‘ದಿ ಫೈಲ್‌’ಗೆ ನೋಟಿಸ್ ಜಾರಿ ಮಾಡಿದ್ದು, ‘ದಿ ಫೈಲ್‌’ಗೆ ಮಾಹಿತಿ ನೀಡಿದವರ ಹೆಸರು, ಫೋನ್‌ ನಂಬರ್‌, ಐ.ಡಿ. ಫ್ರೂಫ್‌ ಹಾಗೂ ವಿಳಾಸವನ್ನು ತನಿಖೆಗೆ ಒದಗಿಸಬೇಕು ಎಂದು ನೋಟೀಸ್‌ನಲ್ಲಿ ಸೂಚಿಸಿದೆ.

ಸೈಬರ್‌‌‌ ಪೊಲೀಸರ ನೋಟಿಸ್‌ಗೆ ‘ದಿ ಫೈಲ್’ ಉತ್ತರಿಸಿದ್ದು, ಈ ವರೆಗೆ ಪೊಲೀಸರಿಂದ ಪ್ರತ್ಯುತ್ತರ ಬಂದಿಲ್ಲ ಎಂದು ‘ದಿ ಫೈಲ್’ ಸಂಪಾದಕ ಜಿ. ಮಹಾಂತೇಶ್‌ ನಾನುಗೌರಿ.ಕಾಂಗೆ ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ಉತ್ತರದಲ್ಲಿ,“ ‘ದಿ ಫೈಲ್’ ಸ್ವತಂತ್ರ ಮಾಧ್ಯಮವಾಗಿದ್ದು, ಅದು ತನ್ನ ಸುದ್ದಿಗಳನ್ನು ವೆಬ್‌ಸೈಟ್ ಮುಖಾಂತರ ವರದಿಯನ್ನು ಪ್ರಕಟಿಸುತ್ತದೆ. ಪೊಲೀಸರು ಉಲ್ಲೇಖಿಸಿದ ಪ್ರಕರಣದ ಮಾಹಿತಿಯು ಸರ್ಕಾರಿ ದಾಖಲೆಯ ವಿಷಯವಾಗಿದ್ದು, ಅದು ಸಾರ್ವಜನಿಕ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯಾಗಿರುತ್ತದೆ. ಅದಲ್ಲದೇ ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿರುತ್ತದೆ” ಎಂದು ಹೇಳಿದೆ.

“ಮಾಧ್ಯಮ ಸಂಸ್ಥೆಯಾಗಿ ಸುದ್ದಿಯ ಮೂಲದ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಅದಲ್ಲದೇ ನೀವು ಕೇಳಿದ ಪ್ರಕರಣ ಮತ್ತುಅದರ ಮಾಹಿತಿಯು ಸರ್ಕಾರಿ ಗೌಪ್ಯತೆ ಕಾಯ್ದೆ 1923 ರ ಅಡಿಯಲ್ಲಿ ಬರುತ್ತದೆಯೋ ಎಂಬ ವಿಷಯವನ್ನು ತಿಳಿಸಿರುವುದಿಲ್ಲ. ಹೀಗಾಗಿ ಪ್ರಕರಣ ಸರ್ಕಾರಿ ಗೌಪ್ಯತಾ ಕಾಯ್ದೆ 1923ರ ಅಡಿಯಲ್ಲಿ ಬರುವ ವಿಷಯವಾಗಿದ್ದಲ್ಲಿ, ನಮಗೆ ತಿಳಿಸಿದಲ್ಲಿ, ನಾವು ತಾವು ಕೇಳಿದ ವಿವರಗಳನ್ನು ಕೊಡುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಪೊಲೀಸರಿಗೆ ‘ದಿ ಫೈಲ್’ ಪ್ರತಿಕ್ರಿಯೆ ನೀಡಿದೆ.

ಈ ಬಗ್ಗೆ ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿದ ಜಿ. ಮಹಾಂತೇಶ್‌, “ಮಾಹಿತಿದಾರರ ಮೂಲವನ್ನು ಕೇಳಿ ಮಾಧ್ಯಮ ಸಂಸ್ಥೆಗೆ ನೋಟಿಸ್ ಜಾರಿ ಮಾಡುತ್ತಿರುವುದು ಇದುವೆ ಮೊದಲ ಬಾರಿಯಾಗಿದೆ. ಪೊಲೀಸ್ ನೋಟಿಸ್‌ಗೆ ನಾವು ಪ್ರತಿಕ್ರಿಯೆ ನೀಡಿದ್ದು, ಈ ವೆರೆಗೆ ಪ್ರತ್ಯುತ್ತರ ಬಂದಿಲ್ಲ” ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...