Homeಅಂಕಣಗಳುಕಳೆದುಹೋದ ದಿನಗಳುನಮ್ಮೆಲ್ಲರಿಗೆ ದಲಿತರ ಸಾವಿರ ವರ್ಷಗಳ ಋಣ ಇದೆ: ರವೀಂದ್ರನಾಥ

ನಮ್ಮೆಲ್ಲರಿಗೆ ದಲಿತರ ಸಾವಿರ ವರ್ಷಗಳ ಋಣ ಇದೆ: ರವೀಂದ್ರನಾಥ

ದಲಿತರು ಸಾವಿರ ವರ್ಷಗಳಿಂದ ಮೋಸ ಹೋಗಿದ್ದಾರೆ. ಅವರೀಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ...

- Advertisement -
- Advertisement -

ಕಳೆದು ಹೋದ ದಿನಗಳು -27

ಇಂದಿರಾ ಹತ್ಯೆಯಾಗಿ ಭಾರತದ ಇತಿಹಾಸದಲ್ಲಿ ಎರಡನೇ ಬಾರಿಗೆ ಬೀದಿ ಬೀದಿಗಳಲ್ಲಿ ರಕ್ತ ಹರಿಯಿತು. ಇಂದಿರಾ ಹತ್ಯೆಯಲ್ಲಿ ವಿರೋಧಪಕ್ಷಗಳ ಪಾಲು ಇಲ್ಲದಿದ್ದರೂ, ಇಂದಿರಾ ದೇಹಕ್ಕೆ ಉಗ್ರರು ಹೊಡೆದ ಗುಂಡುಗಳು, ವಿರೋಧ ಪಕ್ಷಗಳಿಗೇ ಹೊಡೆದಂತಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಹಿಂದೆಂದೂ ಕಾಣದಂತಹ ಬಹುಮತ ಕಾಂಗ್ರೆಸ್ ಪಕ್ಷಕ್ಕೆ ಬಂತು. ರಾಜೀವ್ ಗಾಂಧಿ ಪ್ರಧಾನಿಯಾದರು. ಅದರ ಪರಿಣಾಮವಾಗಿ ಕರ್ನಾಟಕದಲ್ಲಿ ರಾಮಕೃಷ್ಣಹೆಗಡೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಹೋಗಲು ನಿರ್ಧರಿಸಿದ್ದರು.

ಗುಂಡೂರಾವ್ ಸರ್ಕಾರವಿದ್ದಾಗ ದೊಡ್ಡ ಪ್ರಮಾಣದಲ್ಲಿ ಬೆಳೆದ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಅದೇ ರೀತಿಯ ಬೆಳವಣಿಗೆಯನ್ನು ಕಾಯ್ದುಕೊಳ್ಳುವುದಿರಲಿ, ಸಂಘಟನೆಯನ್ನು ಉಳಿಸಿಕೊಳ್ಳಲು ಸಾಹಸ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಅದಕ್ಕೆ ಕಾರಣಗಳು ಹಲವು. ಗುಂಡೂರಾವ್ ಸರ್ಕಾರವಿದ್ದಾಗ ರೈತ ಸಂಘದಲ್ಲಿದ್ದವರಲ್ಲಿ ದೊಡ್ಡ ಸಂಖ್ಯೆಯ ಜನರು ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ ನೆಲೆಯಲ್ಲಿ ಇದ್ದವರೇ ಆಗಿದ್ದರು. ಅವರೆಲ್ಲರೂ ಹೆಗಡೆ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಅದೂ ಅಲ್ಲದೆ, ರಾಮಕೃಷ್ಣಹೆಗಡೆ ಸರ್ಕಾರದ ಅನೇಕ ಮಂತ್ರಿಗಳು ಜನಪರರಾಗಿದ್ದು ಜನರಲ್ಲಿ ಭರವಸೆಯನ್ನು ಹುಟ್ಟಿಸಿದ್ದರು.

ಇದಿಷ್ಟೇ ಅಲ್ಲದೆ ರೈತ ಸಂಘ ಹೆಗಡೆ ಸರ್ಕಾರದ ವಿರುದ್ಧ ಬೀದಿಗಿಳಿದಾಗ ಜನರ ಬೆಂಬಲ ಮೊದಲಿನಂತೆ ರೈತಸಂಘಕ್ಕೆ ಇಲ್ಲವೆಂದು ಕಂಡುಕೊಂಡ ಸರ್ಕಾರ ಒಂದು ಕಡೆ ಓಲೈಕೆ ಇನ್ನೊಂದು ಕಡೆ ದಮನ ನೀತಿಯನ್ನು ಅನುಸರಿಸಿ ರೈತಸಂಘದ ಕಾರ್ಯಕರ್ತರಲ್ಲಿ ಸಮರ್ಥವಾಗಿ ಗೊಂದಲವನ್ನು ಸೃಷ್ಟಿಸಿತು.

ರೈತ ಮತ್ತು ಕೂಲಿಕಾರ್ಮಿಕರನ್ನು ಒಂದಾಗಿ ಹೋರಾಟಕ್ಕೆ ತಯಾರು ಮಾಡುವ ಕೆಲಸವನ್ನು ಎರಡೂ ಕಡೆಯವರು ಮಾಡಲೇ ಇಲ್ಲ.

ನಮ್ಮ ಜೈಕರ್ನಾಟಕ ಸಂಘದ ಕಾರ್ಯಕ್ರಮವೊಂದರಲ್ಲಿ, ಅಂದಿನ ಶಾಸಕ ಬಿ.ಡಿ. ಬಸವರಾಜ್ ಮಾತಾಡುತ್ತಿರುವುದು, ಅವರ ಬಲಭಾಗದಲ್ಲಿ ಮಂಡಲ ಪ್ರಧಾನ ಹೆಚ್ ಎಸ್ ಸಂಪತ್, ಎಡಭಾಗದಲ್ಲಿ ಕಾಳೀಪ್ರಸಾದ್, ಮತ್ತು ಉಪ ಪ್ರಧಾನ್ ರಿಚರ್ಡ್‌ ಲೋಬೋ

ಇದೆಲ್ಲದರ ಜೊತೆಯಲ್ಲಿ ರೈತ ಸಂಘ ಬಲಿಷ್ಠವಾಗಿದ್ದ ಸಮಯದಲ್ಲೇ, ರಾಜಕೀಯ ಎಂದರೆ  ರಾ….ಷ್ಟ್ರದ     ಜ…ನರನ್ನು ಕೀ…..ಳು ಮಟ್ಟಕ್ಕೆ… ಯ…..ಳೆಯುವುದು… ಎಂದು  ಕೆಲವರು ರೈತನಾಯಕರು ಭಾಷಣ ಮಾಡುತ್ತಿದ್ದು ನಂತರ ಏಕಾಏಕಿ ರೈತ ಸಂಘ ನೇರವಾಗಿ ಲೋಕಸಭೆಗೆ ಚುನಾವಣೆಗೆ ಧುಮುಕಿದ್ದು ಅವಸರದ ತೀರ್ಮಾನವಷ್ಟೇ ಅಲ್ಲ ಅತಿ ದೊಡ್ಡ ತಪ್ಪು ಎಂದು ಸಾಬೀತಾಯಿತು.

ಎರಡೇ ತಿಂಗಳಿನಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯಿತು. ಮಲೆನಾಡಿನಲ್ಲಿ ರೈತಸಂಘದ ಹೆಚ್ಚಿನ ಕಾರ್ಯಕರ್ತರು ಬೇರೆ ಬೇರೆ ಪಕ್ಷಗಳಲ್ಲಿ ಹಂಚಿಹೋದರು. ಆ ಚುನಾವಣೆಯಲ್ಲಿ ಇದರ ಲಾಭ ಜನತಾಪಕ್ಷಕ್ಕೆ ಆಯಿತು. ಇಲ್ಲಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆಂದು ನಂಬಿದವರಿಗೆ ಅಚ್ಚರಿಯಾಗುವಂತೆ, ರಾಮಕೃಷ್ಣ ಹೆಗಡೆ ಮತ್ತೊಮ್ಮೆ ಹೆಚ್ಚಿನ ಬಹುಮತದಿಂದ ಗೆದ್ದು ಮುಖ್ಯಮಂತ್ರಿಯಾದರು.

ಮುಂದೆ ರೈತ ಸಂಘ ಮಲೆನಾಡಿನಲ್ಲಿ ಬಹಳ ಬೇಗ ಬಲಹೀನವಾಗುತ್ತ ಹೋಗಿ ಒಂದೆರಡು ವರ್ಷಗಳಲ್ಲಿ ನಾಮಾವಶೇಷದ ಹಂತ ತಲುಪಿತು.

ಸಕಲೇಶಪುರದಲ್ಲಿ ಜನತಾಪಕ್ಷದಿಂದ ಬಿ.ಡಿ. ಬಸವರಾಜ್ ಅವರು ಜಯಗಳಿಸಿದ್ದರು. ನಮ್ಮ ಜೈಕರ್ನಾಟಕ ಸಂಘದ ಸದಸ್ಯರೂ ಸೇರಿದಂತೆ ಇಡೀ ನಮ್ಮಗೆಳೆಯರ ಬಳಗವೆಲ್ಲ ಆ ಚುನಾವಣೆಯಲ್ಲಿ ಹಾದಿಗೆ ಸಂಪತ್ ಅವರ ನೇತೃತ್ವದಲ್ಲಿ ಬಿ.ಡಿ.ಬಸವರಾಜ್ ಅವರ ಪರವಾಗಿ ಚುನಾವಣೆ ಪ್ರಚಾರಕ್ಕಿಳಿದಿತ್ತು. ಅದರಿಂದಾಗಿ ಬಿ.ಡಿ.ಬಸವರಾಜ್ ಅವರು ನಮ್ಮ ಗೆಳೆಯರ ಬಳಗಕ್ಕೆ ಹತ್ತಿರದವರಾದರಲ್ಲದೆ ಮುಂದೆ ನಮ್ಮೂರಿನ ಶಾಲೆ, ಕುಡಿಯುವ ನೀರಿನ ಯೋಜನೆಗಳು ಎತ್ತಿನ ಹಳ್ಳಕ್ಕೆ ರಕ್ಷಿದಿ ಯಲ್ಲೊಂದು ಸೇತುವೆ ಮುಂತಾದವುಗಳ ನಿರ್ಮಾಣಕ್ಕೆ ಕಾರಣರಾದರು.

ಗಣಪಯ್ಯನವರು ಆ ಚುನಾವಣೆಯಲ್ಲಿ ಹೆಚ್ಚು ಓಡಾಟ ಮಾಡಿರಲಿಲ್ಲ. ಆದರೆ ಜನತಾ ಪಕ್ಷದ ಪರವಾಗಿಯೇ ಇದ್ದರು. ರವೀಂದ್ರನಾಥರು ಮತ್ತು ಬಿ.ಡಿ.ಬಸವರಾಜ್ ಜೊತೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಗೆಳೆಯರು.

ನಾವು ಆ ವರ್ಷ ಪ್ರಾರಂಭಿಸಬೇಕೆಂದಿದ್ದ ಅಗಲಟ್ಟಿ, ಮಾವಿನಹಳ್ಳಿ ಗ್ರಾಮಗಳಲ್ಲಿನ ದಲಿತರ ಜಮೀನಿನ ಕೃಷಿ ಹಲವು ಕಾರಣಗಳಿಂದ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಇನ್ನೂ ಬೇಲಿ ಆಗಿರಲಿಲ್ಲ. ಈಚಲು ಗುತ್ತಿಗಳನ್ನು ಕಿತ್ತು ನೆಲವನ್ನು ಹದಗೊಳಿಸಿ ಆಗಿರಲಿಲ್ಲ. ಈ ಎಲ್ಲ ಕೆಲಸಗಳಿಗೆ ಜನರನ್ನು ಸಂಘಟನೆ ಮಾಡುವುದೂ ಕಷ್ಟವಿತ್ತು.  ಅದೇ ಸಮಯಕ್ಕೆ ಗಣಪಯ್ಯನವರಿಗೆ ಬೆಂಗಳೂರಿನಲ್ಲಿ ಒಂದು ಅಪಘಾತವಾಗಿ ಕಾಲಿಗೆ ಪೆಟ್ಟಾಗಿ ಕೆಲವು ತಿಂಗಳು ಓಡಾಡದಂತೆ ಆದರು. ಇದೆಲ್ಲ ಕಾರಣಗಳಿಂದ ಅನಿವಾರ್ಯವಾಗಿ ಆ ಯೋಜನೆಯನ್ನು ಮುಂದಕ್ಕೆ ಹಾಕಬೇಕಾಯಿತು.

ರಾಮಕೃಷ್ಣ ನಗರ

ದಲಿತರಿಗೆ ಕಟ್ಟಿಸಿಕೊಟ್ಟ ಮನೆಗಳಿಗೆ ಬ್ಯಾಂಕಿನಿಂದ ಕೊಡಿಸಲಾಗಿದ್ದ ಸಾಲಕ್ಕೆ ರವೀಂದ್ರನಾಥರೇ ಜಾಮೀನಾಗಿದ್ದರು. ಮನೆಗಳ ಕೆಲಸ ಅವರವರೇ ಮಾಡಿದವರ ಸಾಲ ಬಹು ಪಾಲು ಸಂದಾಯವಾಗಿತ್ತು, ಆದರೆ ಕೆಲವು ಕಡೆಗಳಲ್ಲಿ ಮನೆಗಳ ನಿರ್ಮಾಣ ವೆಚ್ಚ ಸ್ವಲ್ಪ ಹೆಚ್ಚಾಗಿದ್ದು ಅವರ ಸಾಲ ಬಾಕಿ ಇತ್ತು. ಅಂತವರು ಮಾವಿನ ಹಳ್ಳಿ ಊರಿನಲ್ಲಿ ಹೆಚ್ಚಿದ್ದರು. ಅದು ಕಾಳಿಪ್ರಸಾದರ ಮನೆಯಿರುವ ಸ್ಥಳ ರಾಮಕೃಷ್ಣನಗರ.

ರವೀಂದ್ರ ನಾಥರು ಹೀಗೆ ಬಾಕಿ ಉಳಿಸಿಕೊಂಡಿರುವವರಲ್ಲಿಗೆ ಹೋಗಿ “ನೀವು ಬ್ಯಾಂಕಿನ ಹಣ ಕಟ್ಟಬೇಕು. ಅದು ಸಾರ್ವಜನಿಕ ಹಣ. ಅದನ್ನು ಬಾಕಿ ಉಳಿಸಿಕೊಳ್ಳುವಂತಿಲ್ಲ. ಈಗ ನೀವು ಕಟ್ಟದಿದ್ದರೆ ಮುಂದೆ ನಿಮ್ಮಲ್ಲೇ ಯಾರಿಗಾದರೂ ಹಣ ಬೇಕಾದರೂ ಯಾರೂ ಕೊಡುವುದಿಲ್ಲ, ಸ್ವಲ್ಪ ಸ್ವಲ್ಪವೇ ಆದರೂ ನಿಧಾನವಾಗಿ ಕಟ್ಟಿ” ಎಂದು ಹೇಳುತ್ತಿದ್ದರು.

ಒಂದು ದಿನ ಸಂಜೆ ರವೀಂದ್ರನಾಥರು ನನ್ನನ್ನೂ ಕರೆದುಕೊಂಡು ರಾಮಕೃಷ್ಣನಗರಕ್ಕೆ ಹೋದರು. ಜೀಪನ್ನು ರಸ್ತೆಯ ಬದಿ ನಿಲ್ಲಿಸಿದೆವು. ನಾನು ಮನೆ ಮನೆಗೆ ಹೋಗಿ ಎಲ್ಲರನ್ನೂ ಕರೆದೆ. ಕೆಲವರು ಬಂದರು ಇನ್ನು ಕೆಲವರು ಬರಲಿಲ್ಲ. ಹಲವರು ಅಷ್ಟುಹೊತ್ತಿಗೇ ಕುಡಿದು ತೇಲಾಡುವ ಹಂತ ತಲುಪಿದ್ದರು.

ರವೀಂದ್ರನಾಥರು ಅವರಿಗೆ ಎಂದಿನಂತೆ ಬುದ್ಧಿವಾದವನ್ನೆಲ್ಲ ಹೇಳಿ, ನಾನು ಮುಂದಿನ ವಾರ ಬರುತ್ತೇನೆ ಅಷ್ಟರಲ್ಲಿ ನೀವು ಸ್ವಲ್ಪವಾದರೂ ಹಣ ಬ್ಯಾಂಕಿಗೆ ಕಟ್ಟಿರಬೇಕು, ಇಲ್ಲವಾದರೆ ನಾನು ಇಲ್ಲೇ ಧರಣಿ ಸತ್ಯಾಗ್ರಹ ಮಾಡುತ್ತೇನೆ ಎಂದರು.

ಅದೇನು ಅವರಿಗೆ ಅರ್ಥವಾದಂತೆ ಕಾಣಲಿಲ್ಲ. ಕಾಳಿಪ್ರಸಾದ್ ಎಲ್ಲರಿಗೂ ವಿವರಿಸಿ ಹೇಳಲು ಪ್ರಯತ್ನಿಸುತ್ತಿದ್ದರು.

ಅಷ್ಟರಲ್ಲಿ ಒಬ್ಬ “ನಾವು ಕಟ್ಟುವುದಿಲ್ಲ ಏನಾರಾ ಮಾಡ್ಕಳಿ” ಎಂದ. ಇನ್ನೊಬ್ಬ “ಇವ್ರು ಇಷ್ಟೊತ್ತಿಗೆ ಯಾಕೆ ಬಂದ್ರು ಇಲ್ಲಿಗೆ?” ಅಂದ. ಮತ್ತಿಬ್ಬರು “ಇವರ ಜೀಪಿಗೆ ಬೆಂಕಿ ಹಾಕಣ” ಅಂದರು! ಉಳಿದವರು ತಲೆಗೊಂದು ಮಾತಾಡಿದರು.

ಕಾಳಿಪ್ರಸಾದ್ ಅವರನ್ನೆಲ್ಲ ಬೈದು ದೂರ ಕರೆದುಕೊಂಡು ಹೋದರು. “ಬನ್ನಿ ಹೋಗೋಣ” ಎಂದು ನಾನು ರವೀಂದ್ರನಾಥರಿಗೆ ಹೇಳಿದೆ.

ರವೀಂದ್ರನಾಥರು ಮಾತಾಡದೆ ಜೀಪಿನಲ್ಲಿ ಕುಳಿತರು. ಅಲ್ಲಿಂದ ಹೊರಟೆವು.

ರಕ್ಷಿದಿ ಕೂಡಿಗೆ ನಾನು ಇಳಿಯುವ ಸ್ಥಳ. ಅಲ್ಲಿಗೆ ಬರುವಾಗ ಸಂಜೆ ಏಳುಗಂಟೆ ಕಳೆದಿರಬಹುದು. ನನಗೂ  ರಾಮಕೃಷ್ಣ ನಗರದ ದಲಿತರ ಹುಚ್ಚಾಟಗಳನ್ನು ನೋಡಿ ರೇಗಿಹೋಗಿತ್ತು.

“ನಿಮಗೆ ಬೇರೆ ಕೆಲಸ ಇಲ್ಲ, ನೀವು ಅಂತವರಿಗೇ ಉಪಕಾರ ಮಾಡಕ್ಕೆ ಹೋಗ್ತೀರಿ, ಅವರಿಗೆ ಅದರ ನೆನಪೇ ಇಲ್ಲ. ಯಾರಾದ್ರು ನಮ್ಮಂಥವರಿಗೆ ಉಪಕಾರ ಮಾಡಿ ನೋಡಿದಿರಲ್ಲ ಇವರ ಬುದ್ಧಿ” ಎಂದೆ.

ರಕ್ಷಿದಿ ಕೂಡಿಗೆ

ರವೀಂದ್ರನಾಥರು ಒಂದಿಷ್ಟೂ ವಿಚಲಿತರಾಗದೆ, “ನಿನಗೆ ಶಕ್ತಿ ಇದೆ, ನೀನು ಯಾರ ಸಹಾಯವೂ ಇಲ್ಲದೆ ಮೇಲೆ ಬರಬಲ್ಲೆ. ಆದರೆ ಅವರು ಹಾಗಲ್ಲ ಅವರಿಗೆ ಸಹಾಯ ಸಿಗದೆ ಮೇಲೆ ಬರಲು ಸಾಧ್ಯವೇ ಇಲ್ಲ ಅವರಿಗೆ ಸಹಾಯದ ಅಗತ್ಯ ಇದೆ” ಎಂದರು.

“ಅಗತ್ಯ ಇರಬಹುದು, ಆದರೆ ಅವರಿಗೆ ಅರ್ಹತೆ ಇಲ್ಲ” ಎಂದು ಅಸಹನೆಯಿಂದ ಜೋರಾಗಿ ಹೇಳಿದೆ.

“ಅದು ಬೇರೆ ಮಾತು. ಯಾರಿಗೇ ಆಗಲಿ ಅರ್ಹತೆ ಇದೆಯೋ ಇಲ್ಲವೋ ಅಂತ ಗೊತ್ತಾಗುವುದು ತುಂಬ ನಿಧಾನ. ಆದರೆ ಅವರು ಸಾವಿರ ವರ್ಷಗಳಿಂದ ಮೋಸ ಹೋಗಿದ್ದಾರೆ. ಅವರೀಗ ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಲ್ಲ.”

“ಯಾವುದೋ ಕಾಲದಲ್ಲಿ ಯಾರೋ ಮೋಸ ಮಾಡಿದ್ರೆ ನಾವೇನು ಮಾಡಬೇಕು. ಅವರು ಹೀಗೇ ಮಾಡ್ತಾ ಇದ್ರೆ, ಯಾರು ಸಹಾಯ ಮಾಡ್ತಾರೆ” ಎಂದೆ, ನನಗೆ ರವೀಂದ್ರನಾಥರ ಮಾತು ಸಮ್ಮತವಿರಲಿಲ್ಲ.

ರವೀಂದ್ರನಾಥರು ಮತ್ತೆ ಮೌನವಾದರು.

ಕೆಲವು ಕ್ಷಣಗಳ ನಂತರ. “ನೋಡು ಅವರು ಏನು ಹೇಳಿದರು ಎನ್ನುವುದು ಮುಖ್ಯವಲ್ಲ. ನಮ್ಮೆಲ್ಲರಿಗೆ ಅವರ ಸಾವಿರ ವರ್ಷಗಳ ಋಣ ಇದೆ. ಅದರಲ್ಲಿ ಸ್ವಲ್ಪ ತೀರಿತು ಅಂದುಕೊಂಡರಾಯಿತು” ಎಂದರು.

ನನಗೆ ಅಂದು ಅವರ ಮಾತಿನಿಂದ ಸಮಾಧಾನವಾಗಲಿಲ್ಲ. ಆದರೆ ಆ ಮಾತು ಅರ್ಥವಾಗಲು ಕೆಲವು ವರ್ಷಗಳು ಬೇಕಾಯಿತು ಮತ್ತು ಆ ಮಾತುಗಳು ನನ್ನ ಯೋಚನಾ ಕ್ರಮವನ್ನೂ ನನ್ನ ಬದುಕಿನ ಹಾದಿಯನ್ನು ಬದಲಿಸಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ವಿದ್ಯೆ ಕಲಿತು ನಿಧಾನಕ್ಕೆ ಇವರ ಮೊಮ್ಮಕ್ಕಳ ಕಾಲಕ್ಕೆ ಎಲ್ಲ ಸರಿಯಾಗ್ತಾರೆ: ಗಣಪಯ್ಯನವರ ಮಾತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...