Homeಮುಖಪುಟರಾಷ್ಟ್ರೀಯ ಶಿಕ್ಷಣ ನೀತಿ 2020: ಪ್ರಭುತ್ವ ಹಿತಾಸಕ್ತಿ v/s ಸಾರ್ವಜನಿಕ ಹಿತಾಸಕ್ತಿ

ರಾಷ್ಟ್ರೀಯ ಶಿಕ್ಷಣ ನೀತಿ 2020: ಪ್ರಭುತ್ವ ಹಿತಾಸಕ್ತಿ v/s ಸಾರ್ವಜನಿಕ ಹಿತಾಸಕ್ತಿ

ಕರ್ನಾಟಕ ರಾಜ್ಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಟಾನಕ್ಕೆ ತಂದು ಮೋದಿ ಪ್ರಭುತ್ವದ ಕೃಪೆಗೆ ಪಾತ್ರವಾಗಲು ತುದಿಗಾಲಲ್ಲಿ ನಿಂತಿದೆ ಎನ್ನುತ್ತಾರೆ ಡಾ.ಬಿ.ಪಿ.ಮಹೇಶ ಚಂದ್ರಗುರು.

- Advertisement -
- Advertisement -

ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಶೈಕ್ಷಣಿಕ ಆದ್ಯತೆ ವಲಯಗಳು ಮತ್ತು ಹೊಸ ಶೈಕ್ಷಣಿಕ ಸಾಧ್ಯತೆಗಳನ್ನು ಪ್ರಧಾನವಾಗಿ ಒಳಗೊಂಡಿದೆ. ಪಠ್ಯಕ್ರಮ ಮತ್ತು ಬೋಧನಾ ಕ್ರಮಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಪಠ್ಯೇತರ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಬೆಳೆಸುವ ಆಶಯ ಹೊಂದಿದೆ. ನಾವೀನ್ಯತೆ ಮತ್ತು ಸೃಜನಶೀಲತೆಗಳನ್ನು ಆಧರಿಸಿದ ವ್ಯಕ್ತಿತ್ವ ರೂಪಿಸುವ ವಿಧಿ-ವಿಧಾನಗಳನ್ನು ಹೊಸ ಶಿಕ್ಷಣ ನೀತಿ ಒಳಗೊಂಡಿದೆ. ಭಾರತೀಯ ಅಸ್ಮಿತೆಯ ಆಧಾರದ ಮೇಲೆ ಜ್ಞಾನ ಸಮಾಜವನ್ನಾಗಿ ಪರಿವರ್ತಿಸುವ ಮತ್ತು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣ ಸೇವೆ ಒದಗಿಸುವ ದೂರದರ್ಶಿತ್ವವನ್ನು ಶಿಕ್ಷಣ ನೀತಿ ಪ್ರಧಾನವಾಗಿ ಒಳಗೊಂಡಿರಬೇಕು.

ರಾಷ್ಟ್ರೀಯ ಶಿಕ್ಷಣ ನೀತಿ 2020: ಸಾರ್ವಜನಿಕ ಹಿತ ರಕ್ಷಣೆ ದೃಷ್ಟಿಕೋನ

ಬಹುತೇಕ ಸಮಿತಿ ಸದಸ್ಯರು ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರಿಗಳಿಗೆ ನಿಷ್ಟರಾಗಿದ್ದು ಶಿಕ್ಷಣದ ಕೇಸರೀಕರಣಕ್ಕೆ ಬದ್ಧರಾಗಿದ್ದಾರೆ. ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಮುನ್ನ ಸಂಸತ್ತು ಮತ್ತು ವಿಧಾನ ಸಭೆಗಳಲ್ಲಿ ವಿಸ್ತೃತ ಸಂವಾದಗಳು ಜರುಗಿಲ್ಲ. ಆತುರಾತುರವಾಗಿ ಕೋವಿಡ್-19 ಸಂಕಷ್ಟ ನಿರ್ವಹಣೆ ವೇಳೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಟಾನಗೊಳಿಸುವುದು ದೇಶಾದ್ಯಂತ ಹಲವಾರು ಗಂಭೀರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶಿಕ್ಷಣದ ಕೇಂದ್ರೀಕರಣ

ರಾಜ್ಯ ಹಾಗೂ ಕೇಂದ್ರದ ಜಂಟಿ ಜವಾಬ್ದಾರಿಯಲ್ಲಿರುವ ಶಿಕ್ಷಣವನ್ನು ಪ್ರಸ್ತುತ ಶಿಕ್ಷಣ ನೀತಿಯ ಮೂಲಕ ಸಂಪೂರ್ಣವಾಗಿ ಕೇಂದ್ರದ ಅಧೀನಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಪೂರಕವಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರದ ಅಧೀನದಲ್ಲಿ ತರುವುದರ ಮೂಲಕ ರಾಜ್ಯಗಳನ್ನು ಸಂಪೂರ್ಣವಾಗಿ ಮೂಲೆಗೆ ಸರಿಸುವ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಯುಜಿಸಿ, ಎಐಸಿಟಿಇ ಹಾಗೂ ನ್ಯಾಕ್ ಸಂಸ್ಥೆಗಳನ್ನು ವಿಲೀನಗೊಳಿಸಿ ಒಂದು ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.

ಶಿಕ್ಷಣದ ಕೇಸರೀಕರಣ

ಭಾರತವು ಮೂಲಭೂತವಾಗಿ ಬಹುತ್ವ, ಧರ್ಮನಿರಪೇಕ್ಷತೆ, ಸಮಾನತೆ, ಸಾರ್ವಭೌಮತ್ವ ಮತ್ತು ಇತರ ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಂಡಿದೆ. ಪ್ರಸ್ತುತ ಕೇಂದ್ರ ಸರ್ಕಾರವು ಭಾರತದ ಆತ್ಮವೇ ಆಗಿರುವ ಬಹುತ್ವವನ್ನು ಕಡೆಗಣಿಸಿ ಏಕತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಿದೆ. ಭಾರತವೆಂದರೆ ಹಿಂದೂ ರಾಷ್ಟ್ರವಲ್ಲ, ಬಹುತ್ವ ಕೇಂದ್ರಿತ ಬಹುಜನರ ದೇಶವೇ ಆಗಿದೆ. ಪ್ರಸ್ತುತ ಶಿಕ್ಷಣ ನೀತಿ ಶಿಕ್ಷಣದ ಸಾರ್ವತ್ರೀಕರಣ ಮತ್ತು ಮಾನವೀಕರಣಗಳಿಗೆ ಅನುವು ಮಾಡಿಕೊಡುವುದರ ಬದಲಿಗೆ ಹಿಂದುತ್ವ ಕೇಂದ್ರಿತ ಶಿಕ್ಷಣದ ಕೇಸರೀಕರಣಕ್ಕೆ ಪೂರಕವಾಗಿದೆ. ಇದು ಮೂಲಭೂತವಾಗಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇಂತಹ ಶಿಕ್ಷಣ ನೀತಿಯಿಂದ ಎಲ್ಲರಿಗೂ ಎಲ್ಲೆಡೆ ಶಿಕ್ಷಣ ಎಂಬ ಪರಿಕಲ್ಪನೆಗೆ ಪೆಟ್ಟು ಬಿದ್ದಿದೆ.

ಮೂಲನಿವಾಸಿಗಳ ಚರಿತ್ರೆಗೆ ಧಕ್ಕೆ

ಹೊಸ ಶಿಕ್ಷಣ ನೀತಿ ಬುದ್ಧ, ಮಹಾವೀರ, ಕಬೀರ, ಫುಲೆ, ಸ್ವಾಮಿ ವಿವೇಕಾನಂದ, ರಾಜಾರಾಮ್ ಮೋಹನ್‌ರಾಯ್, ಈಶ್ವರ ಚಂದ್ರ ವಿದ್ಯಾಸಾಗರ್, ದಯಾನಂದ ಸರಸ್ವತಿ, ಗೋಪಾಲಕೃಷ್ಣ ಗೋಖಲೆ, ಗಾಂಧಿ, ಅಂಬೇಡ್ಕರ್, ಮೌಲಾನ ಅಬ್ದುಲ್ ಕಲಾಮ್ ಅಜಾದ್, ಝಾಕೀರ್ ಹುಸೇನ್, ಪೆರಿಯಾರ್, ನಾರಾಯಣ ಗುರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲಾದ ದಾರ್ಶನಿಕರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳ ಪರಿಷ್ಕರಣೆ ನೆಪದಲ್ಲಿ ಮುಚ್ಚಿ ಹಾಕುವ ಹುನ್ನಾರವನ್ನು ಪ್ರಧಾನವಾಗಿ ಒಳಗೊಂಡಿದೆ. ಇದು ವಾಸ್ತವವಾಗಿ ಮೂಲ ನಿವಾಸಿಗಳು ಮತ್ತು ಬಹುತ್ವವಾದಿಗಳ ಮೇಲಿನ ಅಮಾನುಷ ಸಾಂಸ್ಕೃತಿಕ ಧಾಳಿಯಾಗಿದೆ.

ಇದನ್ನೂ ಓದಿ: ಹೊಸ ಶಿಕ್ಷಣ ನೀತಿ NEP ’ಹೇಗೆ ಯೋಚಿಸಬೇಕು’ ಎಂಬುದಕ್ಕೆ ಹೆಚ್ಚು ಒತ್ತು ನೀಡುತ್ತದೆ: ಪ್ರಧಾನಿ ಮೋದಿ

ಮರಳಿ ಗುಲಾಮಗಿರಿಗೆ

ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಆರನೇ ತರಗತಿಯಿಂದಲೇ ಕುಲಕಸುಬುಗಳನ್ನು ಕಲಿಸಿಕೊಡುವ ಆಶಯವನ್ನು ಒಳಗೊಂಡಿದೆ. ಇದು ಹೆಚ್ಚು ಕಲಿಯಬೇಕಾದ ತಳಸಮುದಾಯಗಳ ಮಕ್ಕಳನ್ನು ಉನ್ನತ ಶಿಕ್ಷಣ ಮತ್ತು ತರಬೇತಿಗಳಿಂದ ವಿಮುಖರಾಗಿಸುವ ಹುನ್ನಾರ ಹೊಂದಿದೆ. ಇದು ಸಂವಿಧಾನ ಮತ್ತು ಸರ್ಕಾರಗಳು ಈಗಾಗಲೇ ಕಾನೂನುಬದ್ಧವಾಗಿ ನಿಷೇಧಿಸಿರುವ ಬಾಲಕಾರ್ಮಿಕ ಪದ್ಧತಿಯನ್ನು ಉತ್ತೇಜಿಸುತ್ತದೆ. ಇಂದು ಎಲ್ಲ ಧರ್ಮಗಳು ಮತ್ತು ಜನಾಂಗಗಳ ಮಕ್ಕಳಿಗೆ ಬೇಕಿರುವುದು ಮೂಲಶಿಕ್ಷಣ, ವೃತ್ತಿಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು. ಇಂತಹ ಮಾನವೀಯ ಆಶಯಗಳಿಗೆ ಹೊಸ ಶಿಕ್ಷಣ ನೀತಿ ತದ್ವಿರುದ್ಧವಾಗಿದೆ.

ಸಂಸ್ಕೃತ ಭಾಷೆಯಿಂದ ದೇಶೀಯ ಭಾಷೆಗಳ ಕಡೆಗಣನೆ

ಹೊಸ ಶಿಕ್ಷಣ ನೀತಿಯಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸುವುದು ಮತ್ತು ಮುಂದಿನ ಪೀಳಿಗೆಗೆ ವೈದಿಕ ಪರಂಪರೆಯನ್ನು ಹೇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ವಾಸ್ತವವಾಗಿ ಸಂಸ್ಕೃತ ಭಾಷೆ ಬಹುತ್ವದ ಸುಸ್ಥಿರ ಬೆಳವಣಿಗೆಗೆ ಪೂರಕವಲ್ಲ. ಕೆಲವರಿಂದ, ಕೆಲವರಿಗಾಗಿ ಮತ್ತು ಕೆಲವರಿಗೋಸ್ಕರವೇ ಇರುವ ಸಂಸ್ಕೃತ ಭಾಷೆ ಅನ್ನ-ಬದುಕುಗಳನ್ನು ನೀಡುವ ಭಾಷೆಯಲ್ಲ. ಸಂಸ್ಕೃತ ಭಾಷೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ವೇದಗಳು ಮತ್ತು ಪುರಾಣಗಳೆಡೆಗೆ ಬಹುಜನರನ್ನು ದಬ್ಬುವ ಮತ್ತು ಬಹುಜನರ ಉದ್ಧಾರಕ್ಕೆ ಮಾರಕವಾದ ವೈದಿಕ ಸಂಸ್ಕೃತಿಯನ್ನು ಉತ್ತೇಜಿಸುವ ಹುನ್ನಾರವನ್ನು ಭಾರತ ಸರ್ಕಾರ ಹೊಂದಿದೆ.

ಶಿಕ್ಷಣದ ಖಾಸಗೀಕರಣ

ಹೊಸ ಶಿಕ್ಷಣ ನೀತಿಯನ್ನು ಭಾರತ ಸರ್ಕಾರ ಅನುಷ್ಟಾನಗೊಳಿಸುವುದರ ಮೂಲಕ ದುರ್ಬಲ ವರ್ಗಗಳ ಶಿಕ್ಷಣ ಹಕ್ಕನ್ನು ಕಸಿಯಲು ಸರ್ಕಾರ ಮುಂದಾಗಿರುವುದು ತರವಲ್ಲ. ಶಿಕ್ಷಣದ ಖಾಸಗೀಕರಣದಿಂದ ಶೈಕ್ಷಣಿಕ ಮಾಫಿಯಾ ಪ್ರಬಲವಾಗಿದೆಯೇ ಹೊರತು ಮೂಲನಿವಾಸಿಗಳ ಶೈಕ್ಷಣಿಕ ಸಬಲೀಕರಣ ಸಾಧ್ಯವಾಗಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಮನಸೋ ಇಚ್ಛೆ ಶುಲ್ಕವನ್ನು ನಿರ್ಧರಿಸುವ ಪ್ರವೃತ್ತಿಯಿಂದಾಗಿ ಬಡವರ ಮಕ್ಕಳು ಅಲ್ಲಿ ಕಲಿಯುವ ಅವಕಾಶದಿಂದ ವಂಚಿತರಾಗಿದ್ದಾರೆ.

ಕನಿಷ್ಟ ಶೈಕ್ಷಣಿಕ ಹೂಡಿಕೆ

ಇಷ್ಟು ವರ್ಷಗಳ ಅವಧಿಯಲ್ಲಿ ಬಜೆಟ್‌ನಲ್ಲಿ ಶಿಕ್ಷಣಾಭಿವೃದ್ಧಿಗೆ ನೀಡಿರುವ ಅನುದಾನ ಶೇ.5ಕ್ಕಿಂತಲೂ ಕಡಿಮೆಯಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಶೇ.6ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕೆಂಬ ಕನಿಷ್ಟ ಜ್ಞಾನ ಮತ್ತು ರಾಜಕೀಯ ಇಚ್ಛಾಶಕ್ತಿ ನಮ್ಮನ್ನು ಆಳುವವರಿಗೆ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ. ಭಾರತದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದರೆ ಆಳುವ ವರ್ಗಕ್ಕೆ ಬಹುಜನರ ಶೈಕ್ಷಣಿಕ ಹಾಗೂ ಆರ್ಥಿಕ ಸಬಲೀಕರಣಕ್ಕೆ ಅವಶ್ಯಕವಾದ ಬದ್ಧತೆಯಿಲ್ಲ.


ಇದನ್ನೂ ಓದಿ: ಹೊಸ ಶಿಕ್ಷಣ ನೀತಿ ಏನು? ಎತ್ತ?


ಶೈಕ್ಷಣಿಕ ಮೂಲಸೌಕರ್ಯಗಳ ಕೊರತೆ

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ ಕೂಡ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಸುಸಜ್ಜಿತ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣ ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ. ಸರ್ಕಾರಿ ಶಾಲೆಗಳನ್ನು ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆ ಎಂಬ ಕಾರಣಕ್ಕೆ ಮುಚ್ಚಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಸಮರ್ಥ ಶಿಕ್ಷಕರು, ಮೂಲಸೌಕರ್ಯಗಳು ಮತ್ತು ಗುಣಾತ್ಮಕ ಶಿಕ್ಷಣ ಸೌಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ಹಿಂದೆ ಸರಿಯುವ ದುಸ್ಥಿತಿ ಬಂದೊದಗಿದೆ. ಬಹಳಷ್ಟು ವಿಶ್ವವಿದ್ಯಾಲಯಗಳು ಮಾನವ ಸಂಪನ್ಮೂಲಗಳು, ಸುಸಜ್ಜಿತ ಕೊಠಡಿಗಳು, ಪ್ರಯೋಗ ಶಾಲೆಗಳು, ಗ್ರಂಥಾಲಯಗಳು, ಕ್ರೀಡಾ ಸೌಲಭ್ಯಗಳು, ವಿಸ್ತರಣಾ ಶಿಕ್ಷಣ ಸೌಲಭ್ಯಗಳು, ವಿಶೇಷ ಉಪನ್ಯಾಸ ಕಾರ್ಯಕ್ರಮಗಳು, ಪುನಶ್ಚೇತನ ಕಾರ್ಯಕ್ರಮಗಳು ಮೊದಲಾದವುಗಳನ್ನು ಹೊಂದಿಲ್ಲದಿರುವುದನ್ನು ನ್ಯಾಕ್ ಸಮಿತಿ ಗಮನಿಸಿದೆ.

ವಿದ್ಯಾರ್ಥಿಗಳ ಸಂಘಟಿತ ಹೋರಾಟಗಳ ದಮನ

ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳು, ವಿದ್ಯಾರ್ಥಿ ಚಳುವಳಿಗಳು ಮೊದಲಾದ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಬದಿಗೆ ಸರಿಸುವ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯ ದುರ್ಬಳಕೆ ಉಂಟಾಗುತ್ತದೆ. ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಉತ್ತೇಜಿಸುವುದರ ಮೂಲಕ ಆಂಗ್ಲಭಾಷೆ ಮತ್ತು ದೇಶೀಯ ಭಾಷೆಗಳನ್ನು ಕಡೆಗಣಿಸುವ ಪ್ರಯತ್ನ ಬಹುತ್ವಕ್ಕೆ ಧಕ್ಕೆಯುಂಟು ಮಾಡುತ್ತವೆ.

ಸಾರಾಂಶ

ಹೊಸ ಶಿಕ್ಷಣ ನೀತಿಯ ಸಾಧಕ-ಬಾಧಕಗಳನ್ನು ಕುರಿತಂತೆ ಪ್ರಸ್ತುತ ಸಂದರ್ಭದಲ್ಲಿ ಗಂಭೀರ ಸಂವಾದಗಳು ದೇಶಾದ್ಯಂತ ಜರುಗುತ್ತಿವೆ. ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಿ ದೇಶವನ್ನು ಬೆಳಕಿನಿಂದ ಕತ್ತಲಿನೆಡೆಗೆ, ಸಾರ್ವಭೌಮತ್ವದಿಂದ ಗುಲಾಮಗಿರಿಯೆಡೆಗೆ ಮತ್ತು ಸ್ವಾವಲಂಬನೆಯಿಂದ ಪರಾವಲಂಬನೆಯೆಡೆಗೆ ದಬ್ಬುವ ಪ್ರಯತ್ನ ನಡೆಸುತ್ತಿರುವುದು ಅನುಭವವೇದ್ಯವಾಗಿದೆ. ಹೊಸ ಶಿಕ್ಷಣ ನೀತಿಯ ಮೂಲಕ ದೇಶದ ಶಿಕ್ಷಣ ವ್ಯವಸ್ಥೆಯನ್ನು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿಗಳಿಗೆ ಒಪ್ಪಿಸಿ ಬಡವರು ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಮುಖ್ಯವಾಹಿನಿಯಿಂದ ಹೊರದಬ್ಬುವ ನಮ್ಮನ್ನು ಆಳುವವರ ತೆರೆಮರೆಯ ಹುನ್ನಾರವನ್ನು ಪ್ರಜ್ಞಾವಂತರು ಅರ್ಥಮಾಡಿಕೊಳ್ಳಬೇಕು. ಕರ್ನಾಟಕ ರಾಜ್ಯ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಟಾನಕ್ಕೆ ತಂದು ಮೋದಿ ಪ್ರಭುತ್ವದ ಕೃಪೆಗೆ ಪಾತ್ರವಾಗಲು ತುದಿಗಾಲಲ್ಲಿ ನಿಂತಿದೆ. ಹೊಸ ಶಿಕ್ಷಣ ನೀತಿಯ ಹಿಂದಿರುವ ರಹಸ್ಯ ಕಾರ್ಯಸೂಚಿಯನ್ನು ಪ್ರಜಾಪ್ರಭುತ್ವವಾದಿಗಳು, ಸಂವಿಧಾನ ನಿಷ್ಟರು ಮತ್ತು ದೇಶದ ಚರಿತ್ರೆಯ ವಾರಸುದಾರರಾದ ಬಹುಜನರು ಅರಿತು ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಾಮ್ರಾಜ್ಯಶಾಹಿ ಶಕ್ತಿಗಳಿಂದ ವಿಮೋಚನೆಗೊಳಿಸಬೇಕು.

  • ಡಾ.ಬಿ.ಪಿ.ಮಹೇಶ ಚಂದ್ರಗುರು

(ಚಿಂತಕರು ಮತ್ತು ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು.)


ಇದನ್ನೂ ಓದಿ: ಹೊಸ ಶಿಕ್ಷಣ ನೀತಿ: ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಮಾಡಿದ ವ್ಯವಸ್ಥಿತ ವಂಚನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ-ವಿವಿಪ್ಯಾಟ್ ಎಲ್ಲಾ ಮತಗಳ ಎಣಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

0
ಇವಿಎಂ ಮತ್ತು ವಿವಿಪ್ಯಾಟ್‌ಗಳ ಎಲ್ಲಾ (ಶೇ.100) ಮತಗಳನ್ನು ತಾಳೆ ಮಾಡಿ ನೋಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂ ಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ...