ಕಳೆದು ಹೋದ ದಿನಗಳು -19

ಇಷ್ಟೆಲ್ಲ ವ್ಯವಹಾರಗಳನ್ನು ಮಾಡುತ್ತಿದ್ದ ಗಣಪಯ್ಯ ವೈಯಕ್ತಿಕವಾಗಿ ವ್ಯವಹಾರಗಳಲ್ಲಿ ಹೇಗಿದ್ದರು ಎಂಬ ಕುತೂಹಲ ಸಹಜ. ಅವರು ರಾಜಕೀಯಕ್ಕಾಗಲೀ, ಸಾಮಾಜಿಕ ಕೆಲಸಗಳಿಗಾಗಲೀ ಹೆಚ್ಚಾಗಿ ಬಳಸಿದ್ದು ಸ್ವಂತ ಹಣವನ್ನೇ. ಬೇರೆಯವರಿಂದ ಹಣ ಕೇಳಿದ್ದೂ, ತೆಗೆದುಕೊಂಡದ್ದೂ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಗಣಪಯ್ಯನವರಿಗೆ ಸಿಟ್ಟು ತುಂಬ ಇತ್ತು. ಸಿಟ್ಟು ಬಂದಾಗ ಬೈದುಬಿಡುವರು. ಆದರೆ ಅದು ಅಲ್ಲಿಗೆ ಮುಗಿಯಿತು ನಂತರ ಶಿಕ್ಷಿಸಿದವರಲ್ಲ. ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಎಂದೂ ಹೊಟ್ಟೆಗೆ ಹೊಡೆದವರಲ್ಲ.

ಕಷ್ಟದಲ್ಲಿ ಇದ್ದವರಿಗೆ ಉದಾರಿಗಳು.

ಒಮ್ಮೆ ಹಾರ್ಲೆ ತೋಟದ ಕಿತ್ತಳೆ ಫಸಲನ್ನು ಬಾಷ ಎಂಬ ಸಕಲೇಶಪುರದ ಸಾಬರೊಬ್ಬರಿಗೆ ಗುತ್ತಿಗೆಗೆ  ಕೊಟ್ಟಿದ್ದರು. ಆ ವರ್ಷದ ಕಿತ್ತಲೆ ಫಸಲು ನಲುವತ್ತು ಸಾವಿರಕ್ಕೆ ಮಾತಾಗಿ ಐದು ಸಾವಿರ ಮುಂಗಡ ಪಡೆದಿದ್ದರು.

ಆ ವರ್ಷ ನಿರಂತರ ಮಳೆಯಾಗಿ ಕಿತ್ತಲೆ ಕಾಯಿಗಳೆಲ್ಲ ಉದುರಿ ಹೋದವು. ಕಿತ್ತಲೆ ಫಸಲಿನವರು ಅಂಥ ಸಂದರ್ಭದಲ್ಲಿ ಕೊಯ್ಯಲು ಬಾರದೆ, ಹಣವನ್ನೂ ಕೊಡದೆ ಕದ್ದು ಹೋಗುವುದೂ ಇದೆ. ಬಾಷ ಹಾಗೆ ಮಾಡಲಿಲ್ಲ ಬಂದು ಅಳಿದುಳಿದ ಕಿತ್ತಲೆಯನ್ನು ಕೊಯ್ದರು. ಕೇವಲ ಎರಡು ಸಾವಿರದಷ್ಟು ಹಣ್ಣು ಸಿಕ್ಕಿತು. ಅದರಲ್ಲಿ ಸ್ವಲ್ಪ ಬಂಗಲೆಗೆ ಕೊಟ್ಟು. “ಸ್ವಾಮಿ ನೀವೆ ನೋಡಿದೀರ ಏನಾದ್ರೂ ರಿಯಾಯ್ತಿ ಮಾಡಿ ಈ ವರ್ಷ ಮಗಳ ಮದುವೆ ಬೇರೆ ಇಟ್ಕಂಡಿದೀನಿ” ಎಂದು ಸಾಬರು ತಲೆಕೆರೆದರು.

ಆಗ ಗಣಪಯ್ಯ, “ನಿನ್ನ ಬಂಡವಾಳ ಏನಿದೆ ಒಂದು ಕುಕ್ಕೆ, ಒಂದು ಕೊಕ್ಕೆ ಬೇರೆ ಏನು? ಬಂಡವಾಳ ಹಾಕಿ ತೋಟ ಮಾಡಿದ್ದು ನಾನು. ಅದೆಲ್ಲ ಆಗದಿಲ್ಲ ಮೊದ್ಲು ಬಾಕಿ ದುಡ್ಡು ತಾ ಆ ಮೇಲೆ ಬೇರೆ ಮಾತು, ಲಾಭ ಆದ್ರೆ ನನಗೆ  ತಂದು ಕೊಡ್ತಿದ್ಯಾ?” ಎಂದು ಬಿಟ್ಟರು.

ಸಾಬರು ಏನೂ ಮಾತಾಡದೆ, ಸುಮ್ಮನೆ ಹೋದರು.

ಎರಡು ದಿನದಲ್ಲಿ ಬಾಷ ಸಾಬರು ಉಳಿದ ಮೂವತ್ತೈದು ಸಾವಿರ ಹಿಡಿದು ಗಣಪಯ್ಯನವರ ಮುಂದೆ ಹಾಜರಾದರು.

“ತಗೊಳ್ಳಿ ಸ್ವಾಮಿ ನಿಮ್ ದುಡ್ಡು” ಎಂದು ಮೇಜಿನ ಮೇಲೆ ಹಣವನ್ನು ಇಟ್ಟರು.

ಹಾರ್ಲೆ ತೋಟ

ಗಣಪಯ್ಯ “ಈಗೆಲ್ಲಿಂದ ಬಂತು ದುಡ್ಡು?, ಬ್ಯಾಂಕಿಂದ ತಂದ್ಯಾ?” ಎಂದರು.

“ನಮ್ಮಂತೋರಿಗೆ ಬ್ಯಾಂಕಲ್ಲಿ ಏನೈತೆ, ದೇವ್ರಾಣೆ ಕೇಳಿ ನೋಡಿ ಮಾರ್ವಾಡಿ ಅಂಗ್ಡೀಲಿ ಸಾಲ ತಂದಿದ್ದೀನಿ.” ಎಂದರು ಸಾಬರು.

ಗಣಪಯ್ಯ ಮಾತಾಡದೆ ಒಂದು ನಿಮಿಷ ಸುಮ್ಮನೆ ಕುಳಿತರು, ನಂತರ “ತಗೊ ಹೋಗು ಮಗಳ ಮದ್ವೆ ಮಾಡು ಮುಂದಿನ ವರ್ಷ ಬಾ” ಎಂದು ಆ ಮೂವತ್ತೈದು ಸಾವಿರವನ್ನೂ ವಾಪಸ್ ಕೊಟ್ಟರು!

“ಇದೇನ್ ಸ್ವಾಮಿ? ಎಂದರು ಸಾಬರು.”

“ನೀನು ಕೊಟ್ಟ ಮುಂಗಡ ಐದು ಸಾವಿರ ಇತ್ತಲ್ಲ ಅದು ಸಾಕು. ನನಗೆ ಮೂವತ್ತೈದು ಸಾವಿರ ಲಾಸು, ನಿನಗೂ ಒಂದ್ ಐದು ಸಾವಿರ ಲಾಸ್ ಇರ್ಲಿ” ಎಂದು ಹೇಳಿ ಸಾಬರನ್ನು ಕಳುಹಿಸಿದರು.

ಈ ವಿಚಾರವನ್ನು ಬಾಷ ಸಾಬರು ನನಗೆ ಹೇಳಿದ್ದು ಗಣಪಯ್ಯನವರು ತೀರಿಕೊಂಡು ಕೆಲವು ವರ್ಷಗಳು ಕಳೆದ ಮೇಲೆ.

ಕೊನೆಯಲ್ಲಿ ಸಾಬರು ನನ್ನಲ್ಲಿ “ನೋಡಿ ಸಾಮಿ ನಮ್ಮಂಥವ್ರಿಗೇ ಅಂತ ದೇವ್ರು ಒಬ್ಬೊಬ್ಬರನ್ನ ಭೂಮಿ ಮ್ಯಾಲೆ ಇಟ್ಟಿರ್ತಾನೆ” ಎಂದರು!

ಇದಕ್ಕೆ ವ್ಯತಿರಿಕ್ತವಾದ ಘಟನೆಗಳೂ ಇದ್ದವು. ಒಬ್ಬ ಮರಿ ಪುಢಾರಿಯೊಬ್ಬ ಗಣಪಯ್ಯನವರಲ್ಲಿಗೆ ಬಂದ, ತನ್ನ ತಂದೆಗೆ ಕಾಯಿಲೆ ಆಗಿದೆ, ಆಸ್ಪತ್ರೆಗೆ ಸೇರಿಸಿದ್ದೇನೆ, ಎಂದು ಹೇಳಿ ಸಹಾಯ ಕೇಳಿದ, ಗಣಪಯ್ಯನವರು ಒಂದಷ್ಟು ಹಣವನ್ನು ಕೊಟ್ಟರು. ಆಗ ಅಲ್ಲೇ ಇದ್ದ ಗಣಪಯ್ಯನವರ ಹತ್ತಿರದ ಸಂಬಂಧಿಯೊಬ್ಬರು ಇದನ್ನು ಗಮನಿಸಿದರು. ಅವರಿಗೂ ಹಣ ಪಡೆದ ವ್ಯಕ್ತಿಯ ಪರಿಚಯ ಚೆನ್ನಾಗಿ ಇತ್ತು. ಸ್ವಲ್ಪ ಹೊತ್ತಿನಲ್ಲೇ ಅವರು ಬಸ್ಸಿನಲ್ಲಿ ಸಕಲೇಶಪುರಕ್ಕೆ ಹೋದರು. ಈ ಪುಢಾರಿಯೂ ಅದೇ ಬಸ್ಸಿನಲ್ಲಿ ಇದ್ದ. ಇವರು ಆತನ ಕ್ರಮಗಳನ್ನು ನೋಡಿ ಅನುಮಾನದಿಂದ ಸಕಲೇಶಪುರದಲ್ಲಿ ಕೂಡಾ ಆತನನ್ನು ಹಿಂಬಾಲಿಸಿದರು. ತಂದೆಯ ಚಿಕಿತ್ಸೆಗೆಂದು ಹಣ ಪಡೆದ ವ್ಯಕ್ತಿ ಹೋದದ್ದು ಸಕಲೇಶಪುರದ ಖ್ಯಾತ ಇಸ್ಪೀಟ್ ಕ್ಲಬ್ಬಿಗೆ!

ಇದಕ್ಕಿಂತ ರೋಚಕವಾದ ಸಂಗತಿಯೊಂದಿದೆ.

ಸೋಮವಾರ ಪೇಟೆ ಕಡೆಯಿಂದ ಗಣಪಯ್ಯನವರ ನೆಂಟನೊಬ್ಬ ಹಾರ್ಲೆಗೆ ಬಂದು ಗಣಪಯ್ಯನವರ ಮನೆಯಲ್ಲಿ ಉಳಿದುಕೊಂಡ. ತಾನು ಅನೇಕ ಕಡೆ ನೆಲವನ್ನು ಗುತ್ತಿಗೆಗೆ ಪಡೆದು ಏಲಕ್ಕಿ ತೋಟ ಮಾಡುತ್ತಿದ್ದೇನೆ, ಅದಕ್ಕಾಗಿ ಏಲಕ್ಕಿ ಗಿಡಗಳನ್ನು ಸಂಗ್ರಹಿಸಲು ಬಂದಿದ್ದೇನೆಂದು ಹೇಳಿದ. ಸುತ್ತ ಹಲವು ಗ್ರಾಮಗಳಲ್ಲಿ ಏಲಕ್ಕಿ ಗಿಡಗಳನ್ನು ಸಾವಿರ ಸಾವಿರ ಲೆಕ್ಕದಲ್ಲಿ ಕೊಂಡು ಮುಂಗಡ ಕೊಟ್ಟ. ಬೇರೆಯವರಿಗಿಂತ ಹೆಚ್ಚಿಗೆ ಬೆಲೆಯನ್ನೂ ಕೊಟ್ಟ. ಗಣಪಯ್ಯನವರ ನೆಂಟರು ಎಂದ ಮೇಲೆ ಕೇಳಬೇಕೆ ರೈತರು ಮೇಲೆ ಬಿದ್ದು ಗಿಡಗಳನ್ನು ಕೊಟ್ಟರು. ಒಂದು ಸಲ ಲಾರಿಯ ತುಂಬ ಗಿಡಗಳನ್ನು ತುಂಬಿಕೊಂಡು ಹೋದ, ಎರಡನೆಯ ಸಲ ಬಂದಾಗ ಒಂದಷ್ಟು ಹಣವನ್ನು ರೈತರಿಗೆ ಬಾಕಿ ಮಾಡಿ ಮುಂದಿನ ಸಲ ಬಂದಾಗ ಕೊಡುತ್ತೇನೆ ಎಂದ. ಮುಂದಿನ ಸಲ ಪ್ರಾಮಾಣಿಕವಾಗಿ ಹಣ ತಂದು ಕೊಟ್ಟ. ಆಗ ಬರುವಾಗ ದೊಡ್ಡ ಲಾರಿಯನ್ನೇ ತಂದಿದ್ದ, ಅನುಮಾನಕ್ಕೆ ಕಾರಣವಿಲ್ಲದೆ ಒಂದು ಪೈಸೆ ಹಣ ಕೊಡದೆ ಲಾರಿ ಗಿಡಗಳಿಂದ ತುಂಬಿತು. ಎರಡೇ ದಿನದಲ್ಲಿ ಮತ್ತೆ ಬರುತ್ತೇನೆಂದ, ತಮ್ಮಲ್ಲಿ ಗಿಡಗಳು ಖಾಲಿಯಾದವರು ಬೇರೆಯವರಲ್ಲಿ ಸ್ವಲ್ವ ಕಮ್ಮಿಗೆ ಗಿಡ ಖರೀದಿ ಮಾಡಿಟ್ಟುಕೊಂಡು, ಲಾಭ ಮಾಡುವ ಆಸೆಯಿಂದ ಕಾದು ಕೂತರು, ಹೋದ ನೆಂಟ ಬರಲೇ ಇಲ್ಲ!

ಸ್ವಲ್ಪ ದಿನಗಳ ನಂತರ ಗಿಡ ಕೊಟ್ಟವರೆಲ್ಲ ಒಬ್ಬೊಬ್ಬರಾಗಿ ಹಾರ್ಲೆಗೆ ಬಂದು ವಿಚಾರಿಸ ತೊಡಗಿದರು. ದಿನಕಳೆದಂತೆ ಗಣಪಯ್ಯನವರಿಗೂ ಮುಜುಗರವಾಗತೊಡಗಿತು. ಒಂದು ದಿನ ಎಲ್ಲರನ್ನೂ ಬರಹೇಳಿ ಲೆಕ್ಕ ಚುಕ್ತಾ ಮಾಡಿ ಹಣ ಕೊಟ್ಟು ಕಳುಹಿಸಿದರು. ಆ ಕಾಲದಲ್ಲೇ ಅದು ಸುಮಾರು ಆರೇಳು ಸಾವಿರ ರೂಪಾಯಿಗಳಷ್ಟಿತ್ತು.

ಎಷ್ಟೋ ಸಲ ಗಣಪಯ್ಯ ಜನರಿಗೆ ಸಹಾಯ ಮಾಡಿ ಹಣ ಕೊಡುತ್ತಿದ್ದುದು ಬೇರೆ ಯಾರಿಗೂ ತಿಳಿಯುತ್ತಲೇ ಇರಲಿಲ್ಲ.

ತೋಟದ ಕಾರ್ಮಿಕರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ಅವರು ಬೆಂಗಳೂರಿನಿಂದ ಕೈಮಗ್ಗದ ವಸ್ತ್ರಗಳನ್ನು ತಂದು ಕೊಡುತ್ತಿದ್ದರು. ಅವರು ದೊಡ್ಡ ಸಂಖ್ಯೆಯಲ್ಲಿ ಖರೀದಿಸುತ್ತಿದ್ದರಿಂದ ಕಡಿಮೆ ಬೆಲೆಗೆ ಸಿಗುತ್ತಿತ್ತು, ಸಾಮಾನ್ಯವಾಗಿ ವರ್ಷಕ್ಕೆರಡು ಸಲ ಸೀರೆ ಪಂಚೆಗಳನ್ನು ತರುತ್ತಿದ್ದರು. ಕೆಲಸಗಾರರು, ಅದರ ಅಸಲು ಹಣವನ್ನು ಕಂತುಗಳಲ್ಲಿ ತೀರಿಸಬೇಕು. ವಯಸ್ಸಾದವರಿಗೆ ಉಚಿತ.

ಆ ಕಾಲದಲ್ಲಿ ಎಷ್ಟೋ ಮನೆಗಳಲ್ಲಿ ಗಂಡಸರು ಕುಡುಕರಾದರೆ ಹೆಂಗಸರಿಗೆ ಬಟ್ಟೆಯೇ ಇರುತ್ತಿರಲಿಲ್ಲ.

ಏಲಕ್ಕಿ ಗಿಡಗಳು

ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಎಲ್ಲ ಮಕ್ಕಳಿಗೂ ಉಚಿತವಾಗಿ ಬಟ್ಟೆ ಹೊಲಿಸಿ ಹಂಚುತ್ತಿದ್ದರು.

ಹಾರ್ಲೆಯ ಪಕ್ಕದ ದಲಿತರ ಕಾಲೊನಿಗಳಿಗೆ ಗಣಪಯ್ಯ ದಂಪತಿಗಳಿಗೆ ಜೀಪಿನಲ್ಲಿ ಬೆಳಗಿನ ಹನ್ನೊಂದು ಘಂಟೆಯ ವೇಳೆಗೆ ಹೋಗುತ್ತಿದ್ದರು. ಆ ಹೊತ್ತಿನಲ್ಲಿ ಮನೆಯವರು ಕೆಲಸಕ್ಕೆ ಹೋಗಿರುತ್ತಿದ್ದರು ಆದರೆ ವಯಸ್ಸಾದವರು ಮಾತ್ರ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಸಿಗುತ್ತಿದ್ದರು. ಆಗ ಅವರನ್ನು ಕರೆದು ಗುಟ್ಟಾಗಿ ಅವರಿಗೆ ಸೀರೆ, ಪಂಚೆ ಕೊಡುವರು. ನಂತರ ಇದು ನೀನೇ ಇಟ್ಕೋ ಮಕ್ಕಳಿಗೆ ಕೊಡಬೇಡ ಎನ್ನುವರು. ಯಾಕೆಂದರೆ ಅದನ್ನೂ ಮಾರಿ ಹೆಂಡ ಕುಡಿಯುವವರೂ ಇದ್ದರು. ಕೆಲವರ ಮಕ್ಕಳು ಅದನ್ನೂ ಮಾರಿಕೊಂಡದ್ದು ತಿಳಿದಾಗ “ಇವರೆಲ್ಲ ಈಗ ಸರಿಯಾಗಕಿಲ್ಲ, ವಿದ್ಯೆ ಕಲಿತು ನಿಧಾನಕ್ಕೆ ಇವರ ಮೊಮ್ಮಕ್ಕಳ ಕಾಲಕ್ಕೆ ಎಲ್ಲ ಸರಿಯಾಗ್ತಾರೆ” ಎನ್ನುತ್ತಿದ್ದರು.

ಇಂದು ಸಣ್ಣದೊಂದು ವಸ್ತುವನ್ನು “ದಾನ ಮಾಡಿ” ಪೋಟೋ ತೆಗೆಸಿಕೊಂಡು ಪತ್ರಿಕೆಗಳಲ್ಲೋ ಸಾಮಾಜಿಕ ಜಾಲತಾಣಗಳಲ್ಲೋ ಸ್ವಯಂ ಪ್ರಚಾರ ಮಾಡಿಕೊಳ್ಳುವವರನ್ನು ಕಂಡಾಗ ಇದೆಲ್ಲ ನೆನಪಾಯಿತು.

ಗಣಪಯ್ಯ ಇನ್ನೂ ಸಣ್ಣ ಕೆಲಸದಿಂದ ತಮ್ಮ ವೃತ್ತಿಯನ್ನು ಪ್ರಾರಂಭಿಸಿ, ನಂತರ ರಾಜಕಾರಣಿ, ಸಮಾಜ ಸೇವಕರಾಗಿ, ಪ್ರಗತಿಪರ ಕೃಷಿಕರಾಗಿ ಏರಿದ ಎತ್ತರಕ್ಕೆ ಅವರು ದೆಹಲಿಯಲ್ಲಿ ಮೊರಾರ್ಜಿ ಸರ್ಕಾರ ಬಂದಾಗ, ಕೇಂದ್ರದಲ್ಲಿ ಸಚಿವರೋ, ಇಲ್ಲವೇ ರಾಜ್ಯಪಾಲರೋ ಆಗಬಹುದಿತ್ತು. ಆದರೆ ಅವರು ನಿರ್ಲಿಪ್ತರಾಗಿ ದೂರ ಉಳಿದರೇ ಹೊರತು “ರಾಜಕೀಯ” ಮಾಡಲಿಲ್ಲ.

ಹಾರ್ಲೆ ಪಕ್ಕದ ಹಳ್ಳಿಗಳು ಇಂದು

ಆದರೆ ರಾಜಕಾರಣಿಗಳಿಂತ ಹೆಚ್ಚು ಜನಮಾನಸದಲ್ಲಿ‌ ಉಳಿಯುವಂತಹ ಕೆಲಸಗಳಲ್ಲಿ ತೊಡಗಿದರು.

ಆ ಕಾಲದ ಮುದುಕರಲ್ಲಿ ಅನೇಕರು ಗಣಪಯ್ಯನವರು ತೀರಿಕೊಂಡ ನಂತರವೂ ಒಮ್ಮೊಮ್ಮೆ ಹಾರ್ಲೆ ಬಂಗಲೆಗೆ ಬಂದು ದೇವಮ್ಮನವರನ್ನು ಮಾತಾಡಿಸಿ ಹೋಗುತ್ತಿದ್ದರು. ಯಾರು ಹಣ ಕೊಟ್ಟಿದ್ದರೂ ಸರಿ ಚುನಾವಣೆಯ ಹಿಂದಿನ ದಿನ ಹಾರ್ಲೆಗೆ ಬಂದು ದೇವಮ್ಮನವರಲ್ಲಿ ಈಗ ನಾವು ಯಾವ ಕಡೆ ಎನ್ನುವರು.

ಆಗ ದೇವಮ್ಮ ನನ್ನ ಗಂಡ ಕಟ್ಟಿ ಬೆಳೆಸಿದ ಪಕ್ಷ ಉಂಟು ನನಗೆ ಕಡೇವರೆಗೂ ಅದೇ ಪಕ್ಷ, ನೀವೂ ಹಾಗೇ ಮಾಡಿ ಎನ್ನುವರು. ದೇವಮ್ಮನವರು ಇರುವ ತನಕ ಹೀಗೆ ಕೆಲವರು ಬರುತ್ತಿದ್ದರು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಪ್ರಸಾದ್ ರಕ್ಷಿದಿ
+ posts

LEAVE A REPLY

Please enter your comment!
Please enter your name here