ಚೀನಾ ಮತ್ತು ತಾಲಿಬಾನ್‌ಗೆ ಹೆದರಿದ್ದು ಆಯಿತು, ಮುಂದಕ್ಕೆ ಮಾಲ್ಡೀವ್‌ಗೆ ನಾವು ಹೆದರಲಿದ್ದೇವೆಯೆ? ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರ ಒಕ್ಕೂಟ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನರಮೇಧದ ವಿಚಾರದಲ್ಲಿ ಬಿಜೆಪಿ ಸರ್ಕಾರ ಯಾಕೆ ಪ್ರತಿಭಟಿಸುತ್ತಿಲ್ಲ? ಬಾಂಗ್ಲಾದೇಶಕ್ಕೆ ನಾವು ಹೆದರುತ್ತಿದ್ದೇವೆಯೆ? ಎಂದು ಅವರು ಕೇಳಿದ್ದಾರೆ.
ದುರ್ಗಾ ಪೂಜೆ ಆಚರಣೆಯ ಸಮಯ ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಅಲ್ಲಿ ಕಳೆದ ಬುಧವಾರದಿಂದ ಕೋಮುಗಲಭೆ ಭುಗಿಲೆದ್ದಿತ್ತು. ಇದರ ನಂತರ ಹಿಂದೂ ದೇವಾಲಯಗಳ ಮೇಲೆ ದಾಳಿಗಳು ತೀವ್ರಗೊಂಡಿತ್ತು.
ಇದನ್ನೂ ಓದಿ: ಕೋಮು ಹಿಂಸೆಗೆ ಪ್ರಚೋದಿಸುವವರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಿ: ಬಾಂಗ್ಲಾ ಗೃಹ ಸಚಿವರಿಗೆ ಪ್ರಧಾನಿ ಶೇಖ್ ಹಸೀನಾ
ಈ ಬಗ್ಗೆ ಸೋಮವಾರ ಟ್ವಿಟರ್‌ನಲ್ಲಿ ಪ್ರಶ್ನಿಸಿದ ಸುಬ್ರಮಣಿಯನ್ ಸ್ವಾಮಿ, “ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ನರಮೇಧದ ವಿಚಾರದಲ್ಲಿ ಬಿಜೆಪಿ ಸರ್ಕಾರ ಏಕೆ ಪ್ರತಿಭಟಿಸುತ್ತಿಲ್ಲ? ನಾವು ಬಾಂಗ್ಲಾದೇಶಕ್ಕೆ ಹೆದರುತ್ತಿದ್ದೇವೆಯೇ?” ಎಂದು ಅವರು ಕೇಳಿದ್ದಾರೆ.
“ಲಡಾಖ್‌ನಲ್ಲಿ ಚೀನಾದ ಆಕ್ರಮಣದ ಬಗ್ಗೆ ಭಯಪಟ್ಟ ನಂತರ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿರುವುದರ ಬಗ್ಗೆ ನಾವು ಹೆದರಿದೆವು. ಈಗ ಅವರೊಂದಿಗೆ ಮಾತನಾಡಲು ಬಯಸುತ್ತಿದ್ದೇವೆ. ಮುಂದಕ್ಕೆ ನಾವು ಮಾಲ್ಡೀವ್ಸ್‌ಗೆ ಹೆದರಲಿದ್ದೇವೆಯೆ?” ಎಂದು ಅವರು ಕೇಳಿದ್ದಾರೆ.
Why is BJP govt not protesting on the issue of the developing genocide of Hindus in Bangla Desh? Are we afraid of BD? After the fear of Chinese aggression in Ladakh, we are cowed by Taliban take over of Afghanistan and want to talk with them. Will we be next afraid of Maldives?
— Subramanian Swamy (@Swamy39) October 20, 2021
ಭಾನುವಾರ ತಡರಾತ್ರಿ, ಗುಂಪೊಂದು 66 ಮನೆಗಳಿಗೆ ಹಾನಿ ಮಾಡಿದ್ದು, ಕನಿಷ್ಠ 20 ಹಿಂದೂ ಧರ್ಮಿಯರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ದೇಶದ ಬೇರೆ ಬೇರೆ ಕಡೆ ನಡೆದ ಪ್ರತ್ಯೇಕ ದಾಳಿಯಲ್ಲಿ ಆರು ಹಿಂದೂಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಬಾಂಗ್ಲಾದೇಶ: ಹಿಂದೂಗಳಿಗೆ ಸೇರಿದ 29 ಮನೆಗಳಿಗೆ ಬೆಂಕಿ, 66 ಮನೆಗಳು ಧ್ವಂಸ
ಕೋಮು ಹಿಂಸೆಯನ್ನು ಪ್ರಚೋದಿಸುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ತನ್ನ ಗೃಹ ಸಚಿವರಿಗೆ ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಮಂಗಳವಾರ ಸೂಚನೆ ನೀಡಿದ್ದಾರೆ. ಅವರು ದೇಶದ ಜನತೆಯೊಂದಿಗೆ ಸತ್ಯವನ್ನು ಪರಿಶೀಲಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ನಂಬಬೇಡಿ ಎಂದು ವಿನಂತಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಈ ಮಧ್ಯೆ, ಆಡಳಿತಾರೂಢ ಅವಾಮಿ ಲೀಗ್ ಪಕ್ಷವು ‘ಸಾಮರಸ್ಯ ರ್‍ಯಾಲಿ’ಗಳನ್ನು ನಡೆಸುತ್ತಿದ್ದು, ಕೋಮುಗಲಭೆಗಳ ವಿರುದ್ಧ ಮಂಗಳವಾರ ದೇಶದಾದ್ಯಂತ ಶಾಂತಿ ಮೆರವಣಿಗೆಗಳನ್ನು ನಡೆಸುತ್ತಿದೆ.
“ಹಿಂದೂ ಸಹೋದರ ಸಹೋದರಿಯರೇ, ಭಯಪಡಬೇಡಿ. ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ನಿಮ್ಮೊಂದಿಗಿದ್ದಾರೆ. ಶೇಖ್ ಹಸೀನಾ ಸರ್ಕಾರವು ಅಲ್ಪಸಂಖ್ಯಾತ ಸ್ನೇಹಿ ಸರ್ಕಾರವಾಗಿದೆ” ಎಂದು ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್ ಅವರು ಪಕ್ಷದ ಕೇಂದ್ರ ಕಚೇರಿಯ ಮುಂದೆ ನಡೆದ ರ್‍ಯಾಲಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಾಂಗ್ಲಾ ಭೇಟಿ: ಬಾಂಗ್ಲಾದಲ್ಲಿ ತೀವ್ರಗೊಂಡ ’ಮೋದಿ ನಾಟ್ ವೆಲ್ಕಮ್’ ಪ್ರತಿಭಟನೆ
ಕೋಮುವಾದಿ ಶಕ್ತಿಗಳ ವಿರುದ್ಧ ಪ್ರತಿರೋಧವನ್ನು ಒಡ್ಡುವಂತೆ ಅವರು ತಮ್ಮ ಪಕ್ಷದ ಸದಸ್ಯರನ್ನು ಕೇಳಿದ್ದಾರೆ ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. ಕೋಮುವಾದಿ ಶಕ್ತಿಗಳನ್ನು ಹೆಡೆಮುರಿ ಕಟ್ಟುವವರೆಗೂ ಆಡಳಿತ ಪಕ್ಷವು ಬೀದಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ. ದೇಶಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ಕೋಮುವಾದಿಗಳಿಗೆ ಸರಿಯಾದ ಉತ್ತರ ನೀಡಲು ಸಿದ್ಧರಾಗಿದ್ದಾರೆ ಎಂದು ಒಬೈದುಲ್ ಖಾದರ್ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.
ಇದನ್ನೂ ಓದಿ: ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ: ಬಾಂಗ್ಲಾ ಪ್ರಧಾನಿ


