ತಮಿಳುನಾಡಿನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಮುಂದಾಗಿರುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ಕ್ರಮಲ್ಲಿ ‘ಪಿತೂರಿ’ಯ ಶಂಕೆ ವ್ಯಕ್ತಪಡಿಸಿರುವ ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ನವೆಂಬರ್ 2ರಂದು ಚೆನ್ನೈನಲ್ಲಿ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ.
ತಮಿಳುನಾಡು ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಮುಂದಿನ ಹಂತದ ಎಸ್‌ಐಆರ್ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದೆ. ಈ ಬೆನ್ನಲ್ಲೇ ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿ ಜಾತ್ಯತೀತ ಪ್ರಗತಿಪರ ಒಕ್ಕೂಟದ ನಾಯಕರ ಸಮಾಲೋಚನಾ ಸಭೆ ನಡೆದಿದೆ. ಸಭೆಯ ಬಳಿಕ ನವೆಂಬರ್ 2ರ ಸರ್ವಪಕ್ಷ ಸಭೆಗೆ ಆಹ್ವಾನ ನೀಡಲಾಗಿದೆ.
ಜಂಟಿ ಹೇಳಿಕೆಯಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಪಡಿಸುತ್ತಿದೆ. ಸ್ವತಂತ್ರ ಸಂಸ್ಥೆಗಳನ್ನು ತನ್ನ ಇಚ್ಛೆಯಂತೆ ದುರುಪಯೋಗಪಡಿಸಿಕೊಳ್ಳುತ್ತಿದೆ. ಚುನಾವಣಾ ಆಯೋಗದ ಕಾರ್ಯನಿರ್ವಹಣೆ ವಿವಾದಾತ್ಮಕ ಮಾತ್ರವಲ್ಲದೆ, ಅನುಮಾನಾಸ್ಪದವಾಗಿದೆ ಎಂದು ಡಿಎಂಕೆ ಮೈತ್ರಿಕೂಟದ ನಾಯಕರು ಹೇಳಿದ್ದಾರೆ.
ಬಿಹಾರದಲ್ಲಿ ನಡೆಸಲಾದ ಎಸ್‌ಐಆರ್ ಅನ್ನು ಉಲ್ಲೇಖಿಸಿದ ನಾಯಕರು, “ಬಿಹಾರದಲ್ಲಿ ನಡೆದ ಎಸ್‌ಐಆರ್ ವಾಸ್ತವವಾಗಿ ನಿಜವಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಸಂಚು ಎಂಬುವುದು ನಮಗೆ ಗೊತ್ತಾಗಿದೆ. ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಕೂಡ ಪಾಲಿಸಿಲ್ಲ. ಈ ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಯನ್ನು ನಡೆಸಲು ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಪ್ರಚೋದಿಸಿದೆ” ಎಂದು ಆರೋಪಿಸಿದ್ದಾರೆ.
ನವೆಂಬರ್ ಮತ್ತು ಡಿಸೆಂಬರ್ ಮಳೆಗಾಲದ ತಿಂಗಳುಗಳಲ್ಲಿ ತಮಿಳುನಾಡಿನಲ್ಲಿ ಎಸ್‌ಐಆರ್ ನಡೆಸುವುದು ತುಂಬಾ ಕಷ್ಟಕರ ಮತ್ತು ಪ್ರಾಯೋಗಿಕವಾಗಿ ಅಸಾಧ್ಯ. ಚುನಾವಣಾ ಆಯೋಗ ಘೋಷಿಸಿದ ಕಾರ್ಯವಿಧಾನಗಳು ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ತೊಂದರೆಯನ್ನುಂಟುಮಾಡುತ್ತವೆ ಎಂದು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರವೂ ಎಸ್‌ಐಆರ್‌ಗೆ ಆಧಾರ್ ಕಾರ್ಡ್ ಅನ್ನು ಏಕೆ ಸ್ವೀಕರಿಸಿಲ್ಲ? ಪದೇ ಪದೇ ಒತ್ತಾಯಿಸಿದರೂ ಪಡಿತರ ಚೀಟಿಯನ್ನು ಏಕೆ ಸ್ವೀಕರಿಸಿಲ್ಲ ಎಂದು ಡಿಎಂಕೆ ಮೈತ್ರಿಕೂಟದ ನಾಯಕರು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಅಗತ್ಯವನ್ನು ಒಪ್ಪಿಕೊಂಡರೂ, ಆತುರದಿಂದ ಈ ಪ್ರಕ್ರಿಯೆ ನಡೆಸಬಾರದು ಎಂದಿದ್ದಾರೆ.
“ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವಾಗ, ಈಗ ಎಸ್‌ಐಆರ್ ಘೋಷಿಸುವುದು ಅನ್ಯಾಯ. ತಮಿಳುನಾಡಿನ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಪಿತೂರಿ ನಡೆಯುತ್ತಿದೆ ಎಂಬ ಅನುಮಾನ ನಮಗಿದೆ. ಬಿಹಾರದಲ್ಲಿ ಮುಸ್ಲಿಮರು, ಪರಿಶಿಷ್ಟ ಜಾತಿ ಸಮುದಾಯಗಳು ಮತ್ತು ಮಹಿಳೆಯರನ್ನು ಹೆಸರು ತೆಗೆಯುವಿಕೆಗೆ ಗುರಿಯಾಗಿಸಲಾಗಿತ್ತು. ತಮಿಳುನಾಡು ಅಂತಹ ಸಂಚನ್ನು ಎಂದಿಗೂ ಅನುಮತಿಸುವುದಿಲ್ಲ. ಈ ವಿಷಯದಲ್ಲಿ ರಾಜ್ಯವು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಲಿದೆ” ಎಂದು ನಾಯಕರು ಹೇಳಿದ್ದಾರೆ.
ಇದೇ ವಿಷಯದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸ್ಟಾಲಿನ್, “ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ. ತಮಿಳುನಾಡು ಅದನ್ನು ಕೊಲ್ಲುವ ಯಾವುದೇ ಪ್ರಯತ್ನದ ವಿರುದ್ಧ ಹೋರಾಡುತ್ತದೆ ಮತ್ತು ತಮಿಳುನಾಡು ಗೆಲ್ಲುತ್ತದೆ” ಎಂದು ಬರೆದುಕೊಂಡಿದ್ದಾರೆ.
“ಆತುರ ಮತ್ತು ಅಪಾರದರ್ಶಕ ರೀತಿಯಲ್ಲಿ ಎಸ್‌ಐಆರ್ ನಡೆಸುವುದು ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮತ್ತು ಬಿಜೆಪಿಗೆ ಸಹಾಯ ಮಾಡಲು ಚುನಾವಣಾ ಆಯೋಗ ನಡೆಸುತ್ತಿರುವ ಪಿತೂರಿಯಲ್ಲದೆ ಬೇರೇನೂ ಅಲ್ಲ” ಎಂದು ಸ್ಟಾಲಿನ್ ಹೇಳಿದ್ದಾರೆ.
#SIR in Tamil Nadu: We will resist disenfranchisement and defeat #VoteTheft.
To carry out Special Intensive Revision just months before the election, and especially during the monsoon months of November and December, brings serious practical difficulties. To conduct SIR in a… pic.twitter.com/wXUXuZUkyp
— M.K.Stalin – தமிழ்நாட்டை தலைகுனிய விடமாட்டேன் (@mkstalin) October 27, 2025
ಬಿಹಾರದ ಎಸ್‌ಐಆರ್‌ನಲ್ಲಿ ಉಂಟಾದ ಗೊಂದಲಗಳನ್ನು ಬೆಟ್ಟು ಮಾಡಿದ ಸ್ಟಾಲಿನ್, “ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯ ಕೊರತೆಯು ಸಾರ್ವಜನಿಕ ಮನಸ್ಸಿನಲ್ಲಿ ಅನುಮಾನವನ್ನು ಹೆಚ್ಚಿಸಿದೆ ಎಂದಿದ್ದಾರೆ.
12 ರಾಜ್ಯಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗ


