ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ನೈಟ್ ಕರ್ಫ್ಯೂ ಸೇರಿದಂತೆ ವೀಕೆಂಡ್ ಕರ್ಫ್ಯೂ ಕೂಡ ಜಾರಿ ಮಾಡಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಿರಲಿದೆ ಎನ್ನಲಾಗಿತ್ತು. ಆದರೆ ಶುಕ್ರವಾರ ಸಂಜೆ 6 ಗಂಟೆಯಿಂದಲೇ ಕರ್ಫ್ಯೂ ಜಾರಿ ಮಾಡಲಾಗಿದೆ.
ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜೊತೆಗೆ ಈಗಾಗಲೇ ರಾಜ್ಯ ಸರ್ಕಾರವು ಮೇ 4ರವರೆಗೆ ಬಹುತೇಕ ಎಲ್ಲಾ ಚಟುವಟಕೆಗಳ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಹಾಗಾಗಿ ಶನಿವಾರ ಮತ್ತು ಭಾನುವಾರ ಏನಿರುತ್ತೆ, ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ.
ಕಂದಾಯ ಸಚಿವ ಆರ್.ಅಶೋಕ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವೀಕೆಂಡ್ ಕರ್ಫ್ಯೂನಲ್ಲಿ ಯಾರು ಓಡಾಡಬಹುದು, ಯಾರು ಓಡಾಡಬಾರದು ಎಂಬುದನ್ನು ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಸಮಿತಿಯಿಂದ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಅಗತ್ಯ ಸೇವೆ ಬಿಟ್ಟು ಎಲ್ಲಾ ಬಂದ್: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಅಗತ್ಯ ಸೇವೆ ಒದಗಿಸುವ ಎಲ್ಲಾ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆಯ ಸಿಬ್ಬಂದಿ, ಟೆಲಿಕಾಂ ಕಂಪನಿ ಉದ್ಯೋಗಿಗಳು ಐಡಿ ಕಾರ್ಡ್ ತೋರಿಸಿ ಓಡಾಡಬಹುದು ಎಂದು ಹೇಳಿದ್ದಾರೆ.
ರೋಗಿಗಳು ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ ನಾಗರಿಕರು ಓಡಾಡಬಹುದು. ದಿನಸಿ ಅಂಗಡಿ, ಹಣ್ಣು ತರಕಾರಿ ಹಾಲು ಮಾಂಸದ ಅಂಗಡಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ತೆಗೆದಿರಲು ಅವಕಾಶವಿದೆ. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ಗೆ ಮಾತ್ರ ಅವಕಾಶ ಇರುತ್ತದೆ. ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಮಾತ್ರ ಅನುಮತಿ.
ದೂರ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ, ರೈಲ್ವೆ ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬಹುದು. ಆದರೆ ಪ್ರಯಾಣಿಕರು ಕಡ್ಡಾಯವಾಗಿ ಟಿಕೆಟ್ ತೋರಿಸಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?: ಅಘೋಷಿತ ಲಾಕ್‌ಡೌನ್‌ಗೆ ಸಿದ್ದರಾಮಯ್ಯ ಕಿಡಿ
ಸಿನಿಮಾ, ಬಾರ್, ಪಬ್, ಮಾಲ್ ಎಲ್ಲವೂ ಬಂದ್. ಧಾರ್ಮಿಕ, ರಾಜಕೀಯ ಗುಂಪು ಸೇರುವಿಕೆ ನಿಷೇಧ ಇದೆ. . ಧಾರ್ಮಿಕ ಕೇಂದ್ರಗಳಲ್ಲಿ ಪೂಜಾರಿಗಳು, ಮೌಲ್ವಿಗಳಿಗೆ ಮಾತ್ರ ಅವಕಾಶ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಎರಡು ದಿನ ಮಾತ್ರ ಕಟ್ಟಡ ನಿರ್ಮಾಣ ಕೆಲಸಕ್ಕೆ ನಿಷೇಧ ವಿಧಿಸಲಾಗಿದೆ. ಮಾಧ್ಯಮದವರು, ವೈದ್ಯರು, ನರ್ಸಿಂಗ್ ಸ್ಟಾಫ್ ಕೂಡ ಓಡಾಡಬಹುದು.
ವೀಕೆಂಡ್ ಕರ್ಫ್ಯೂ ಹಿನ್ನಲೆ, ನಮ್ಮ ಮೆಟ್ರೋ ಸೇವೆ ಶುಕ್ರವಾರ ಸಂಜೆ 7.30 ಕ್ಕೆ ಸ್ಥಗಿತಗೊಳ್ಳಲಿದೆ. ಬಳಿಕ ಸೋಮವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ. ಶನಿವಾರ ಹಾಗೂ ಭಾನುವಾರ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ಹೊರಡಿಸಿದೆ.
ಜನಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದರೂ ಬಿಎಂಟಿಸಿ ಬಸ್‍ಗಳು ಎಂದಿನಂತೆ ರಸ್ತೆಗಿಳಿಯಲಿವೆ. ಬಿಎಂಟಿಸಿಯಿಂದ ಕೇವಲ ತುರ್ತುಸೇವೆ ಮಾತ್ರ ಅವಕಾಶ ನೀಡಲಾಗಿದ್ದು, ಕೇವಲ 500 ಬಸ್‍ಗಳು ಮಾತ್ರ ಸಂಚರಿಸಲಿವೆ.
ಇದನ್ನೂ ಓದಿ: ಆಕ್ಸಿಜನ್, ಐಸಿಯು ಕೊರತೆಯಿಂದ ಉಂಟಾಗುವ ಸಾವುಗಳಿಗೆ ಕೇಂದ್ರವೇ ಹೊಣೆ- ರಾಹುಲ್ ಗಾಂಧಿ


