ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಆಘಾತ ಉಂಟಾಗಿದ್ದು, ಗೂರ್ಖಾ ಜನಮುಕ್ತಿ ಮೋರ್ಚಾ (GJM) ನಾಯಕ ಬಿಮಲ್ ಗುರುಂಗ್ ಬುಧವಾರ ಎನ್‌ಡಿಎ ಮೈತ್ರಿಯನ್ನು ತೊರೆದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಜೊತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಗೂರ್ಖಾಲ್ಯಾಂಡ್ ವಿಷಯದಲ್ಲಿ ಬಿಜೆಪಿ ತನ್ನ ಬದ್ಧತೆಯನ್ನು ಉಳಿಸಿಕೊಂಡಿಲ್ಲ ಎಂದು ಆರೋಪಿಸಿದ ಗುರುಂಗ್, 2021 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು TMC ಯನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಆದಾಗ್ಯೂ, 2024 ರಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಗೆ GJM ನ ನಿಲುವನ್ನು ಗುರುಂಗ್ ಸ್ಪಷ್ಟಪಡಿಸಲಿಲ್ಲ. “ನಮ್ಮ ಗೂರ್ಖಾಲ್ಯಾಂಡ್ ಬೇಡಿಕೆಯ ಪರವಾಗಿ ಮಾತನಾಡುವವರನ್ನು ನಾವು ಬೆಂಬಲಿಸುತ್ತೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ವಾಯುಮಾಲಿನ್ಯ: ಕಳೆದ ವರ್ಷ ಭಾರತದಲ್ಲಿ 1.16 ಲಕ್ಷ ನವಜಾತ ಶಿಶುಗಳು ಮರಣ!
ಕಳೆದ 3 ವರ್ಷಗಳಿಂದ ಕಣ್ಮರೆಯಾಗಿದ್ದ ಗುರುಂಗ್ ಬುಧವಾರ ಕೋಲ್ಕತ್ತಾದಲ್ಲಿ ಕಾಣಿಸಿಕೊಂಡರು. ಒಂಬತ್ತು ವಿಧಾನಸಭಾ ಸ್ಥಾನಗಳಲ್ಲಿ GJM ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 16 ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. GJM ನ ಗುರುಂಗ್ ಬಣದ ಬೆಂಬಲದೊಂದಿಗೆ, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಡಾರ್ಜಿಲಿಂಗ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು.
ತಮ್ಮ ಪಕ್ಷ ಮತ್ತು ಬೆಂಬಲಿಗರು ರಾಜ್ಯದ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಗುರುಂಗ್ ಸ್ಪಷ್ಟಪಡಿಸಿದ್ದು, “ಪ್ರಧಾನ ಮಂತ್ರಿಯಾಗಲಿ, ಗೃಹ ಸಚಿವರಾಗಲಿ ಅವರ ಬದ್ಧತೆಯನ್ನು ಉಳಿಸಿಕೊಂಡಿಲ್ಲ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತುಗಳನ್ನು ಉಳಿಸಿಕೊಂಡಿದ್ದೇವೆ. ಇದಕ್ಕಾಗಿಯೇ ನಾನು ಎನ್‌ಡಿಎಯನ್ನು ತೊರೆದು TMC ಯನ್ನು ಬೆಂಬಲಿಸಲು ನಿರ್ಧರಿಸಿದ್ದೇನೆ” ಎಂದು ಅವರು ಹೇಳಿದರು.
ಗುರುಂಗ್ ಅವರ ವಿರುದ್ಧ ದೇಶದ್ರೋಹ ಆರೋಪ ಸೇರಿದಂತೆ ಹಲವು ಪ್ರಕರಣಗಳಿವೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. “ಬಿಜೆಪಿ ಶಾಂತಿಯನ್ನು ಬಯಸಿದೆ. ಗುರುಂಗ್ ಅವರ ಈ ನಡೆಯು ಈ ಪ್ರದೇಶದಲ್ಲಿ ಅಶಾಂತಿಯನ್ನು ಉಂಟುಮಾಡುವ ಮತ್ತೊಂದು ಪ್ರಯತ್ನವೆಂದು ತೋರುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ‘ಐಟಂ’ ಹೇಳಿಕೆಗೆ ಕಮಲನಾಥ್ ವಿವರಣೆ ನೀಡಬೇಕು ಎಂದ ಚುನಾವಣಾ ಆಯೋಗ!


