CBI
PC: NIA

ರಾಜ್ಯದಲ್ಲಿ ಪ್ರಕರಣಗಳ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರವು ಕೇಂದ್ರ ತನಿಖಾ ದಳ(CBI) ಕ್ಕೆ ನೀಡಿದ್ದ ’ಸಾಮಾನ್ಯ ಒಪ್ಪಿಗೆ’ಯನ್ನು ಬುಧವಾರ ಹಿಂತೆಗೆದುಕೊಂಡಿದೆ. ರಾಜ್ಯ ಸರ್ಕಾರದ ಈ ನಡೆಯಿಂದಾಗಿ ಮುಂದೆ ಯಾವುದೇ ತನಿಖೆಯನ್ನು ನಡೆಸಲು ಸಿಬಿಐಗೆ ರಾಜ್ಯದ ಅನುಮತಿ ಪಡೆಯಬೇಕಾಗುತ್ತದೆ.

ಈಗಾಗಲೆ ಮೂರು ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳಾದ ರಾಜಸ್ಥಾನ, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳ ಸಿಬಿಐ ತಮ್ಮ ವ್ಯಾಪ್ತಿಯಲ್ಲಿನ ಪ್ರಕರಣಗಳನ್ನು ತನಿಖೆ ಮಾಡಲು ಅವಕಾಶ ನೀಡುವ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿದೆ.

ಇದನ್ನೂ ಓದಿ: TRP ಹಗರಣದಲ್ಲಿ ವಿಚಾರಣೆಗೆ ಹಾಜರಾಗಲು ಸಮನ್ಸ್; ಬಂಧನ ಭೀತಿಯಲ್ಲಿ ಅರ್ನಾಬ್ ಗೋಸ್ವಾಮಿ

ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಸಿಬಿಐ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ, ಯಾಕೆಂದರೆ ಈ ತನಿಖೆ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ನಡೆಯುತ್ತಿದೆಯೆ ಹೊರತು ರಾಜ್ಯವು ತನ್ನ ಒಪ್ಪಿಗೆಯನ್ನು ನೀಡುವ ಅಗತ್ಯವಿರುವ ನಿಬಂಧನೆಗಳ ಅಡಿಯಲ್ಲಿ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

TRP ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಸರ್ಕಾರ FIR ದಾಖಲಿಸಿ CBI ಗೆ ಹಸ್ತಾಂತರಿಸುತ್ತಿದ್ದಂತೆ, ಮಹಾರಾಷ್ಟ್ರದ ಗೃಹ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ಉತ್ತರ ಪ್ರದೇಶ ಸರ್ಕಾರದ ಈ ನಡೆಯು ರಿಪಬ್ಲಿಕ್ ಟಿವಿ ವಿರುದ್ಧ ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಯುಪಿ ಸರ್ಕಾರವು ಸಿಬಿಐಗೆ ವಹಿಸುವ ಪ್ರಯತ್ನವಾಗಿದೆ ಎಂದು ಮಹರಾಷ್ಟ್ರ ಸರ್ಕಾರ ಭಾವಿಸಿದೆ.  ಹೆಚ್ಚಿನ ಓದಿಗೆ; TRP ಹಗರಣ: ಉತ್ತರಪ್ರದೇಶ ಸರ್ಕಾರದ ಶಿಫಾರಸ್ಸಿನ ಮೇರೆಗೆ ತನಿಖೆ ವಹಿಸಿಕೊಂಡ ಸಿಬಿಐ

ಪ್ರಸ್ತುತ ಸಾಮಾನ್ಯ ಒಪ್ಪಿಗೆಯನ್ನು ಹಿಂತೆಗೆದುಕೊಂಡಿರುವುದರಿಂದ ಯುಪಿ ಸರ್ಕಾರದ ಪ್ರಯತ್ನಕ್ಕೆ ಅಡ್ಡಿಯಾಗಲಿದೆ. ರಿಪಬ್ಲಿಕ್ ಟಿವಿ ವಿರುದ್ಧದ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿರುವುದು ಪ್ರಕರಣವನ್ನು “ದುರ್ಬಲಗೊಳಿಸುವ” ಪ್ರಯತ್ನ ಎಂದು ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿಕೂಟದ ನಾಯಕರು ಕರೆದಿದ್ದಾರೆ.

ಈ ತಿಂಗಳ ಆರಂಭದಲ್ಲಿ ರಿಪಬ್ಲಿಕ್ ಟಿವಿ ವಿರುದ್ಧ ಮುಂಬೈ ಪೊಲೀಸ್ ತನಿಖೆ ಪ್ರಾರಂಭಿಸಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಒಟ್ಟು ಮೂರು ಚಾನೆಲ್‌ಗಳು ತನ್ನ TRP ಯನ್ನು ತಿರುಚಿದೆ ಎಂದು ಆರೋಪಿಸಿದ್ದಾರೆ. ಆದರೆ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ಎಂಟು ಜನರನ್ನು ಮುಂಬೈ ಪೊಲೀಸರು ಇದುವರೆಗೂ ಬಂಧಿಸಿದ್ದಾರೆ.

ಇದನ್ನೂ ಓದಿ: TRP ಹಗರಣ: 3 ತಿಂಗಳು TRP ರೇಟಿಂಗ್ ಸ್ಥಗಿತಗೊಳಿಸಿದ BARC!

LEAVE A REPLY

Please enter your comment!
Please enter your name here