ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಬಿಜೆಪಿಗೆ ರಾಜೀನಾಮೆ ನೀಡಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಎರಡು ದಿನಗಳ ನಂತರ, ಬಿಜೆಪಿಯ ಬಂಗಾಳ ಘಟಕದ ಮುಖ್ಯಸ್ಥ ದಿಲೀಪ್ ಘೋಷ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ.
ಉತ್ತರ ಬಂಗಾಳದ ಬಾಲುರ್‌ಘಾಟ್‌ನ ಬಿಜೆಪಿಯ ಸಂಸದ, 41 ವರ್ಷದ ಸುಕಾಂತ ಮಜೂಂದಾರ್ ಅವರಿಗೆ ಬಂಗಾಳ ಘಟಕದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳಿಂದ ಹೆಸರುವಾಸಿಯಾಗಿದ್ದ ದಿಲೀಪ್ ಘೋಷ್ ಅವರಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ನಾಲ್ಕು ಮಂದಿ ಹಾಲಿ ಶಾಸಕರು ಟಿಎಂಸಿಗೆ ವಾಪಸ್ ಆಗಿದ್ದಾರೆ. 2 ದಿನಗಳ ಹಿಂದೆ ಬಿಜೆಪಿ ಸಂಸದ ಬಾಬೂಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ 200 ಸ್ಥಾನಗಳನ್ನು ಗುರಿಯಾಗಿಸಿಕೊಂಡಿತ್ತು. ಆದರೆ ಕೇವಲ 77 ಸ್ಥಾನಗಳನ್ನು ಪಡೆದಿತ್ತು. ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ಪಡೆದಿತ್ತು.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಟಿಎಂಸಿ ಸೇರಿದ ಬಿಜೆಪಿ ಶಾಸಕ ತನ್ಮಯ್ ಘೋಷ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಪ್ರಮುಖರಾಗಿರುವ, ಸಸ್ಯಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಸುಕಾಂತ ಮಜೂಂದಾರ್, “ದಿಲೀಪ್ ಘೋಷ್ ಅವರು ಬಂಗಾಳದಲ್ಲಿ ಬಿಜೆಪಿಯನ್ನು ಪ್ರಬಲ ವಿರೋಧ ಪಕ್ಷವಾಗಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಅದರ ಬೆಳವಣಿಗೆಗೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಆ ಹಂತದಿಂದ ಪಕ್ಷವನ್ನು ಮುನ್ನಡೆಸಲು ನಾನು ಆಶಿಸುತ್ತೇನೆ” ಎಂದಿದ್ದಾರೆ.
ಬಂಗಾಳದ ನೂತನ ಅಧ್ಯಕ್ಷ ಡಾ. ಮಜೂಂದಾರ್ ಅವರನ್ನು ಅಭಿನಂದಿಸಿರುವ ದಿಲೀಪ್ ಘೋಷ್, “ಜೆಪಿ ನಡ್ಡಾ ಅವರು ಕರೆ ಮಾಡಿ ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದಿದ್ದಾರೆ. ಇದು ನನ್ನ ಕೆಲಸ ಮತ್ತು ನಾನು ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸುತ್ತದೆ ಎಂದು ಭಾವಿಸುತ್ತೇನೆ. ಸಮಾಜ ಮತ್ತು ಪಕ್ಷದ ಹೊಸ ಬೇಡಿಕೆಗಳನ್ನು ಪೂರೈಸಲು ಬಂಗಾಳದಲ್ಲಿ ಬಿಜೆಪಿ ನಾಯಕತ್ವಕ್ಕೆ ಪರಿವರ್ತನೆಯ ಅಗತ್ಯವಿದೆ ಎಂದು ನಾನು ಹೇಳಿದ್ದೆ” ಎಂದಿದ್ದಾರೆ.
ಆದರೆ, ಬಂಗಾಳ ಬಿಜೆಪಿಯಲ್ಲಿನ ಆಂತರಿಕ ಸಂಘರ್ಷದಿಂದ ಅಧ್ಯಕ್ಷ ಸ್ಥಾನವನ್ನು ಬದಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಶನಿವಾರ ಟಿಎಂಸಿ ಸೇರಿದ ಬಾಬುಲ್ ಸುಪ್ರಿಯೋ ಬಹಿಂಗವಾಗಿಯೇ ದಿಲೀಪ್ ಘೋಷ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಿಜೆಪಿ ಚುನಾವಣೆಯಲ್ಲಿ ಸೋಲಲು ದಿಲೀಪ್ ಘೋಷ್ ಕಾರಣ ಎಂದಿದ್ದರು.
ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿಯವರ ಕಟು ಟೀಕಾಕಾರರಲ್ಲಿ ಬಾಬುಲ್ ಸುಪ್ರಿಯೋ ಒಬ್ಬರಾಗಿದ್ದರು. ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಾಜಕೀಯ ತ್ಯಜಿಸುವುದಾಗಿ ಹೇಳಿದ್ದ ಅವರು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದಿದ್ದರು. ಈಗ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ರಾಜಕೀಯವನ್ನೇ ತೊರೆಯುವುದಾಗಿ ಹೇಳಿದ್ದ ಬಿಜೆಪಿ ಸಂಸದ ಬಾಬುಲ್ ಟಿಎಂಸಿ ಸೇರ್ಪಡೆ


