Homeಕರ್ನಾಟಕಮೋದಿ 2.0 ಸರ್ಕಾರಕ್ಕೆ ಒಂದು ವರ್ಷ : ಕರ್ನಾಟಕದ ಸಂಸದರ ಸಾಧನೆಗಳೆಷ್ಟು?

ಮೋದಿ 2.0 ಸರ್ಕಾರಕ್ಕೆ ಒಂದು ವರ್ಷ : ಕರ್ನಾಟಕದ ಸಂಸದರ ಸಾಧನೆಗಳೆಷ್ಟು?

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2.0 ಸರ್ಕಾರ ಹಲವು ಟೀಕೆ-ಟಿಪ್ಪಣಿಗಳ ನಡುವೆಯೂ ಒಂದು ವರ್ಷವನ್ನು ಪೂರೈಸಿದೆ. ಕೊರೋನಾ ಎಂಬ ಮಹಾಮಾರಿ ಇಡೀ ದೇಶದ ಜನರ ಬದುಕನ್ನು ಹಣಿಯುತ್ತಿದೆ. ಇದರ ನಡುವೆಯೂ ಬಿಜೆಪಿ ಸರ್ಕಾರ ತನ್ನ 2.0 ಸರ್ಕಾರದ ಮೊದಲ ವರ್ಷದ ಪೂರೈಕೆಯನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳಲು ಮುಂದಾಗಿದೆ.

ದೇಶದಲ್ಲಿ ಇಂದಿರಾಗಾಂಧಿ ನಂತರ ಸತತ ಎರಡನೇ ಬಾರಿ ಬಹುಮತದ ಸರ್ಕಾರ ರಚಿಸಿದ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಗೆ ಇದೆ. ಆ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಎರಡನೇ ಅವಧಿಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ.

ಆದರೆ, ಈ ಅವಧಿಯಲ್ಲಿ ಕೇಂದ್ರ ಸರ್ಕಾರ ನಿಜಕ್ಕೂ ಸಾಧಿಸಿದ ಸಾಧನೆಯಾದರೂ ಏನು? 25 ಜನ ಸಂಸದರನ್ನು ಕಮಲದ ಚಿಹ್ನೆಯ ಅಡಿಯಲ್ಲಿ ಆರಿಸಿ ಕಳುಹಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ನೀಡಿದ ಕೊಡುಗೆ ಏನು? ನಮ್ಮ ಸಂಸದರು ತಂದ ಭಾಗ್ಯವಾದರೂ ಏನು? ಅಸಲಿಗೆ ಕಳೆದ ಒಂದು ವರ್ಷದಿಂದ ನಮ್ಮ ರಾಜ್ಯದ ಸಂಸದರು ಸದನದಲ್ಲಿ ಎಷ್ಟು ಪ್ರಶ್ನೆ ಕೇಳಿದ್ದಾರೆ? ಎಷ್ಟು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ? ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿಯ ಮಾತುಗಳನ್ನಾಡಿದ್ದ ಇವರು ಕೇಂದ್ರದಿಂದ ಎಷ್ಟು ಯೋಜನೆಗಳನ್ನು ರಾಜ್ಯಕ್ಕೆ ತಂದಿದ್ದಾರೆ?

ಕನಿಷ್ಟ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ನ್ಯಾಯಯುತವಾಗಿ ಸಿಗಬೇಕಾಗಿದ್ದ ತೆರಿಗೆಯ ಪಾಲು ಮತ್ತು ನೆರೆ-ಬರ ಪರಿಹಾರವನ್ನಾದರೂ ನಮ್ಮ ಸಂಸದರು ಕೊಡಿಸಿದ್ದಾರಾ? ಈ ಕುರಿತು ಸದನದಲ್ಲಿ ಪ್ರಶ್ನೆ ಮಾಡಿದ್ದಾರಾ? ಎಂದು ಒಮ್ಮೆ ಅವಲೋಕಿಸಿದರೆ ನಮ್ಮ ಸಂಸದರ ಅಸಲಿ ಸಾಧನೆ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಅಲ್ಲದೆ, ಎರಡನೇ ಅವಧಿಯ ಬಿಜೆಪಿ ಸರ್ಕಾರದ ಮೊದಲ ವರ್ಷದ ವಾರ್ಷಿಕೋತ್ಸವದ ಅಗತ್ಯತೆಯನ್ನೂ ಪ್ರಶ್ನಿಸುವಂತಿದೆ.

25 ಸಂಸದರು 4 ಸಚಿವರು, ಅಭಿವೃದ್ಧಿ ಎಷ್ಟು?

ಕರ್ನಾಟಕದಿಂದ ಹಿರಿಯ ನಾಯಕರುಗಳನೇಕರು ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆಂಗಲ್ ಹನುಮಂತಯ್ಯ, ಹೆಚ್.ಸಿ.ದಾಸಪ್ಪ, ಸಿ.ಕೆ.ಜಾಫರ್ ಶರೀಫ್, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫನಾರ್ಂಡಿಸ್, ರೆಹಮಾನ್ ಖಾನ್ ಸೇರಿದಂತೆ ಅನೇಕರು ಈ ಹಿಂದೆ ಕೇಂದ್ರ ಸರ್ಕಾರದ ನಾನಾ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಆಸ್ಕರ್ ಫನಾರ್ಂಡಿಸ್ ಕೇಂದ್ರದ ಭೂ ಸಾರಿಗೆ ಸಚಿವರಾಗಿ ರಾಜ್ಯಕ್ಕೆ ನಲವತ್ತು ಸಾವಿರ ಕೋಟಿ ರುಪಾಯಿಗಳಷ್ಟು ಹಣ ಮಂಜೂರು ಮಾಡಿ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಟ್ಟರು. ಯಾವತ್ತೂ ಮುಗಿಯದ ಕತೆ ಅನ್ನಿಸಿದ್ದ ಶಿರಾಡಿ ಘಾಟ್ ರಸ್ತೆಗೆ ಒಂದು ರೂಪ ಕೊಟ್ಟರು.

ಮಲ್ಲಿಕಾರ್ಜುನ ಖರ್ಗೆ ಅವರು ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 371(ಜೆ) ಕಾನೂನನ್ನು ಜಾರಿಗೆ ತರಲು ಪ್ರಯತ್ನಪಟ್ಟು ಯಶಸ್ವಿಯಾಗಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಹೈದ್ರಾಬಾದ್ ಕರ್ನಾಟಕದ ಪಾಲಿಗೆ ಇದು ನಿಜಕ್ಕೂ ವರದಾನವೇ ಸರಿ. ಈ ಮೂಲಕ ಖರ್ಗೆ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದರು.

ಗುಲ್ಬರ್ಗದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ, ದೊಡ್ಡ ಇಎಸ್‍ಐ ಆಸ್ಪತ್ರೆ, ವೈದ್ಯಕೀಯ ಕಾಲೇಜು ತಂದಿದ್ದರು. ಇಎಸ್‍ಐ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರಿಂದ ಹಿಡಿದು ಹಲವು ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಖಾಯಂ ಮಾಡುವ ಮಹತ್ವದ ನಿರ್ಧಾರಗಳ ಹಿಂದೆ ಖರ್ಗೆ ಪಾತ್ರ ಪ್ರಮುಖವಾದದ್ದು.

ಇದೆಲ್ಲದ್ದಕ್ಕಿಂತ ಖರ್ಗೆ ಮಾಡಿದ ಒಂದು ಉತ್ತಮ ಕೆಲಸ ಎಂದರೆ ಕೇಂದ್ರದ ರೈಲ್ವೆ ಸಚಿವರಾಗಿ ಕರ್ನಾಟಕದ ಮುನಿರಾಬಾದ್ – ಮೆಹಬೂಬ್‍ನಗರ ರೈಲ್ವೆ ಸಂಪರ್ಕ ಕಲ್ಪಿಸಿದ್ದು. ಇದರ ಪರಿಣಾಮದಿಂದಾಗಿಯೇ ಇಂದು ಮುಂಬೈ, ಚೆನ್ನೈ, ದೆಹಲಿ, ಹೈದರಾಬಾದ್ ಸೇರಿದಂತೆ ಅನೇಕ ನಗರಗಳಿಗೆ ಹುಬ್ಬಳ್ಳಿಯಿಂದ ನೇರ ರೈಲು ಸಂಪರ್ಕ ಸಾಧ್ಯವಾಗಿದೆ.

ಇನ್ನು ರಾಜ್ಯದಿಂದ ಸಂಸದರಾಗಿ ಕೇಂದ್ರದಲ್ಲಿ ರೈಲ್ವೆ ಖಾತೆ ನಿರ್ವಹಿಸಿದ್ದ ಸಿ.ಕೆ.ಜಾಫರ್ ಶರೀಫ್ ಸಹ ರಾಜ್ಯಕ್ಕೆ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ರೈಲ್ವೆ ಸಂಪರ್ಕ ಸಂಪೂರ್ಣವಾಗಿ ಬ್ರಾಡ್‍ಗೇಜ್ ಮಾರ್ಗವಾಗಿ ಬದಲಾದದ್ದು ಇವರ ಕಾಲದಲ್ಲೇ. ಕೇಂದ್ರದ ರೈಲ್ವೆ ಇಲಾಖೆಯಲ್ಲಿ ಸಚಿವರಾಗಿ ಯಶಸ್ವಿ ಕಂಡ ಕೆಲವೇ ಕೆಲವು ನಾಯಕರ ಪೈಕಿ ಮಲ್ಲಿಕಾರ್ಜುನ ಖರ್ಗೆ ಮತ್ತು ಜಾಫರ್ ಶರೀಫ್ ಹೆಸರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತವೆ. ಇದಲ್ಲದೆ ಅನೇಕರು ಕೇಂದ್ರದಿಂದ ನಾನಾ ಯೋಜನೆಗಳನ್ನು ರಾಜ್ಯಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಎಚ್.ಮುನಿಯಪ್ಪನವರಂತಹ ಅಷ್ಟೇನೂ ಕ್ರಿಯಾಶೀಲರಲ್ಲದವರೂ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಮಾರ್ಗಕ್ಕೆ ಪುನರ್‍ಚಾಲನೆ ಕೊಟ್ಟಿದ್ದಲ್ಲದೇ, ಶ್ರೀನಿವಾಸಪುರದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿಯನ್ನೂ ಹಾಕಿಸಿಕೊಂಡರು.

ರಾಜ್ಯದ ಹಿಂದಿನ ಸಚಿವರುಗಳ ಜೊತೆಗೆ ಈಗಿನ ಬಿಜೆಪಿ ಸರ್ಕಾರದ ಸಚಿವರ ಸಾಧನೆಯನ್ನು ಹೋಲಿಕೆ ಮಾಡಿದರೆ ಇವರ ಸಾಧನೆ ಶೂನ್ಯ ಎಂಬುದು ಕಣ್ಣಿಗೆ ರಾಚುವಂತಿದೆ. ಕಳೆದ 5+1 ವರ್ಷದಲ್ಲಿ ರಾಜ್ಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಮಹತ್ವದ ಯೋಜನೆಗಳು ಕೇಂದ್ರದಿಂದ ಬಂದಿಲ್ಲ. ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸುವ ಸಲುವಾಗಿ ಸಬ್ ಅರ್ಬನ್ ಟ್ರೈನ್ ಬಿಟ್ಟರೆ ರೈಲ್ವೆ ಖಾತೆಯಿಂದಲೂ ರಾಜ್ಯಕ್ಕೆ ದಕ್ಕಿದ್ದು ಶೂನ್ಯವಷ್ಟೆ.

ಇಷ್ಟಕ್ಕೂ ಮೋದಿ ಮೊದಲ ಅವಧಿಯ ಸರ್ಕಾರದಲ್ಲಿ ಸದಾನಂದಗೌಡ ಕೇಂದ್ರ ರೈಲ್ವೆ ಸಚಿವರಾಗಿ, ಕಾನೂನು ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ವರ್ಷ ಆರ್‍ಟಿಐ ಕಾರ್ಯಕರ್ತ ಶಿವಮಂಜೇಶ್ ಎಂಬುವವರು, ‘ರೈಲ್ವೆ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವರಾಗಿ ರಾಜ್ಯಕ್ಕೆ ಸದಾನಂದಗೌಡ ಅವರ ಕೊಡುಗೆ ಏನು?’ ಎಂದು ಕೋರಿ ಆರ್‍ಟಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಗೆ ಈವರೆಗೆ ಉತ್ತರ ದೊರಕಿಲ್ಲ.

ನಮ್ಮ ಸಂಸದರು ಸದನದಲ್ಲಿ ಪ್ರಶ್ನೆ ಕೇಳಲ್ಲ, ಚರ್ಚೆಯ ಮಾತೇ ಇಲ್ಲ:

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ತಮ್ಮ ಪ್ರತಿನಿಧಿಗಳನ್ನು ಸಂಸತ್‍ಗೆ ಆರಿಸಿ ಕಳುಹಿಸುವುದೇ, ತಮ್ಮ ಕ್ಷೇತ್ರದ ನೈಜ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಪ್ರಶ್ನೆಗಳ ಮೂಲಕ ಸರ್ಕಾರದ ಗಮನಕ್ಕೆ ತರಬೇಕು; ಶಾಸನಸಭೆಗಳಲ್ಲಿ ಶಾಸನಗಳನ್ನು ರೂಪಿಸುವುದು, ರಾಜ್ಯಕ್ಕೆ ಹೆಚ್ಚಿನ ಅನುದಾನ, ಯೋಜನೆಗಳನ್ನು ತರಬೇಕು, ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗಬಾರದು, ಆ ಮೂಲಕ ತಮ್ಮ ಸಮಸ್ಯೆ ಬಗೆಹರಿಯಬೇಕು ಎಂಬುದೇ ಆಗಿರುತ್ತದೆ. ಇಲ್ಲದಿದ್ದರೆ ಸಂಸದರಾಗಿ ಹೋಗಿ ಏನು ಮಾಡುವುದು ಎಂಬ ಪ್ರಶ್ನೆ ಏಳುತ್ತದೆ.

ಆದರೆ, ಕಳೆದ ಒಂದು ವರ್ಷದಲ್ಲಿ ಕರ್ನಾಟಕದ ಬರೋಬ್ಬರಿ 25 ಬಿಜೆಪಿ ಸಂಸದರು ಹಾಗೂ ಇತರೆ 03 ಸಂಸದರೂ ಸೇರಿದಂತೆ ಯಾವೊಬ್ಬರೂ ರಾಜ್ಯದ ಅಸಲಿ ಸಮಸ್ಯೆ ಕುರಿತು ಸಂಸತ್‍ನಲ್ಲಿ ಪ್ರಶ್ನೆ ಮಾಡಿಲ್ಲ. ಬಜೆಟ್ ಸೇರಿದ ಚರ್ಚೆಗಳಲ್ಲಿ ಪಾಲ್ಗೊಂಡಿಲ್ಲ ಎಂಬುದೇ ಕಟು ಸತ್ಯ. ಹಾಗಿದ್ದ ಮೇಲೆ ಕರ್ನಾಟಕಕ್ಕಾದ ಅನ್ಯಾಯದ ಕುರಿತು ಗಮನ ಸೆಳೆಯುವ ಪ್ರಶ್ನೆ ಉದ್ಭವಿಸುವುದಿಲ್ಲ.

ರಾಜ್ಯದಲ್ಲಿ ಎಲ್ಲೇ ಸಭೆ ನಡೆದರೂ ಯಾರೇ ಮೈಕ್ ಕೊಟ್ಟರೂ ಮಹಾತ್ಮಾ ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ ಪಕ್ಷದ ಕುರಿತು ಬೆಂಕಿ ಉಂಡೆಯನ್ನು ಕಾರುವ, ಸಾಲುಸಾಲು ಪ್ರಶ್ನೆಗಳನ್ನು ಮಾಡುವ ಮೂಲಕ ಸಮಾಜದಲ್ಲಿ ವಿವಾದ ಸೃಷ್ಟಿಸುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರದ ಯಾವುದೇ ಮಹತ್ವದ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ. ಕೇಳಿದ್ದು ಕೇವಲ 17 ಪ್ರಶ್ನೆಗಳನ್ನು ಮಾತ್ರ. ಈ ಪ್ರಶ್ನೆಗಳಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯೂ ಇರಲಿಲ್ಲ ಎಂಬುದು ಉಲ್ಲೇಖಾರ್ಹ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಂದು ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಸತತ 5 ಬಾರಿ ಸಂಸದರಾಗಿ ಆಯ್ಕೆಯಾದರೂ ಸಹ ಅನಂತಕುಮಾರ್ ಹೆಗಡೆ ಈ ಕುರಿತು ಚಿಂತಿಸಿರಲಿಲ್ಲ. ಈಗ ಕೊರೋನಾ ಎಂಬ ಮಹಾಮಾರಿ ಉತ್ತರ ಕನ್ನಡ ಜಿಲ್ಲೆಯನ್ನೂ ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ, ಇಲ್ಲಿ ಸೂಕ್ತ ಚಿಕಿತ್ಸೆ ಅಸಾಧ್ಯವಾಗಿದೆ. ಚಿಕಿತ್ಸೆಗೆಂದು ಪಕ್ಕದ ಜಿಲ್ಲೆಗೆ ಹೋಗಲು ಯತ್ನಿಸಿದರೆ ಎಲ್ಲಾ ಗಡಿಗಳು ಬಂದ್ ಆಗಿವೆ. ಹೊರ ಜಿಲ್ಲೆಯವರಿಗೆ ಉಡುಪಿಯಲ್ಲಿ ಚಿಕಿತ್ಸೆಗೆ ಅವಕಾಶ ಇಲ್ಲ ಎಂದು ಅಲ್ಲಿನ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಜನ ಪರಿತಪಿಸುವಂತಾಗಿದೆ.

ಸತತ 5 ಬಾರಿ ಸಂಸದ ಸಚಿವರಾಗಿಯೂ ಕ್ಷೇತ್ರದಲ್ಲಿ ತಮ್ಮ ಸಾಧನೆ ಏನು? ರಾಜ್ಯಕ್ಕೆ ತಾವು ನೀಡಿರುವ ಕೊಡುಗೆ ಏನು? ಎಂಬುದರ ಕುರಿತು ಅನಂತಕುಮಾರ್ ಹೆಗಡೆ ಈಗಲಾದರೂ ರಾಜಕೀಯವನ್ನು ಬದಿಗಿಟ್ಟು ಒಮ್ಮೆ ಅವಲೋಕಿಸಿಕೊಳ್ಳಬೇಕಿದೆ.

ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸದನದಲ್ಲಿ 11 ಚರ್ಚೆಯಲ್ಲಿ ಪಾಲ್ಗೊಂಡಿದ್ದು ಸುಮಾರು 119 ಪ್ರಶ್ನೆಗಳನ್ನು ಕೇಳಿದ್ದಾರೆ, ಡಿ.ಕೆ.ಸುರೇಶ್ 116 ಪ್ರಶ್ನೆಗಳು (8 ಚರ್ಚೆಗಳು) ಮತ್ತು ತೇಜಸ್ವಿ ಸೂರ್ಯ 77 ಪ್ರಶ್ನೆಗಳು ಎಂಬುದನ್ನು ಬಿಟ್ಟರೆ ಕಳೆದ ಕಳೆದ ಒಂದು ವರ್ಷದಲ್ಲಿ ಸದನದಲ್ಲಿ ಕರ್ನಾಟಕದ ಸಂಸದರ ಸಾಧನೆ ತೀರಾ ಕಳಪೆಯಾಗಿದೆ. ಇನ್ನು ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ಕೇವಲ ಒಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದು ಯಾವುದೇ ಪ್ರಶ್ನೆ ಕೇಳದೆ ದೇಶದಲ್ಲೇ ಅತ್ಯಂತ ಕಳಪೆ ಸಂಸದ ಎನಿಸಿಕೊಂಡಿದ್ದಾರೆ. ಸದನದಲ್ಲಿ ಇವರ ದಾಖಲಾತಿಯೂ ಕೇವಲ ಶೇ.54 ರಷ್ಟು ಮಾತ್ರ.

ಬರ-ನೆರೆ ಪರಿಹಾರ ಖೋತಾ: ಕರ್ನಾಟಕದ ಪಾಲಿಗೆ 2018-19 ನಿಜಕ್ಕೂ ಶಾಪಗ್ರಸ್ತ ವರ್ಷ ಎನ್ನಲು ಅಡ್ಡಿಯಿಲ್ಲ. 2017-18ರ ಅವಧಿಯಲ್ಲಿ ಕರ್ನಾಟಕ ಇತಿಹಾಸ ಕಾಣದ ಬರಕ್ಕೆ ತುತ್ತಾಗಿತ್ತು. ರಾಜ್ಯ ಸರ್ಕಾರ ಸುಮಾರು 103 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.ಉತ್ತರ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ ಹಾಗೂ ದಕ್ಷಿಣ ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಹಾಗೂ ಹಾಸನ ಜಿಲ್ಲೆಗಳು ಬರದಿಂದ ತತ್ತರಿಸಿದ್ದವು. ಹಲವಾರು ಕಡೆಗಳಲ್ಲಿ ಜನ ಜಾನುವಾರುಗಳ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹತ್ತಾರು ಬಾರಿ ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.

ಆದರೆ, ಕೇಂದ್ರದಿಂದ ಬಂದ ಹಣ ಕೇವಲ 1 ಸಾವಿರ ಕೋಟಿ ಮಾತ್ರ. ಇನ್ನೂ ಇದೇ ಸಂದರ್ಭದಲ್ಲಿ ಓಡಿಶಾದಂತಹ ಚಿಕ್ಕ ರಾಜ್ಯಕ್ಕೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರ ನೀಡಿದ್ದು ಬರೋಬ್ಬರಿ 3 ಸಾವಿರ ಕೋಟಿ. ಆದರೂ, ಈ ಮಲತಾಯಿ ಧೋರಣೆಯ ಬಗ್ಗೆ ರಾಜ್ಯದ ಯಾವ ಬಿಜೆಪಿ ಸಂಸದರೂ ದ್ವನಿ ಎತ್ತಿರಲಿಲ್ಲ. ಅಷ್ಟರಲ್ಲಿ ರಾಜ್ಯಕ್ಕೆ ನೆರೆ ದಾಳಿ ಇಟ್ಟಿತ್ತು.

ಬರದ ಬೆನ್ನಿಗೆ ರಾಜ್ಯ 2018-20ರಲ್ಲಿ ಎರಡು ನೆರೆಯನ್ನು ಕಂಡಿತ್ತು. ಉತ್ತರ ಕರ್ನಾಟಕದ ಹಲವಾರು ಭಾಗ ಸೇರಿದಂತೆ ನೆರೆಯ ಕೊಡಗು ಮಳೆ ನೀರಿಗೆ ಕೊಚ್ಚಿ ಹೋಗಿತ್ತು. ಈ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಮೊದಮೊದಲು ನಷ್ಟದ ಪ್ರಮಾಣ 1 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದ್ದರೂ ಸಹ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಳೆಯಿಂದ ರಾಜ್ಯಕ್ಕೆ 30 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರಕ್ಕೆ ವರದಿ ನೀಡಿದ್ದರು.

ಆದರೆ, ರಾಜ್ಯಕ್ಕೆ ಸಿಕ್ಕಿದ್ದು ಮಾತ್ರ 1,200 ಕೋಟಿ ರೂ. ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿ ಇಂದು ಕೇಂದ್ರದಲ್ಲಿ ಹಣಕಾಸು ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ನಿರ್ಮಲಾ ಸೀತಾರಾಮನ್ ಸ್ವತಃ ರಾಜ್ಯಕ್ಕೆ ಬಂದು ನೆರೆ ಹಾನಿಯನ್ನು ವೀಕ್ಷಿಸಿ ಹೋಗಿದ್ದರೂ ಸಹ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡಿರಲಿಲ್ಲ. ಆದರೆ, ಇದೇ ಸಂದರ್ಭದಲ್ಲಿ ಕೇರಳಕ್ಕೆ 3,048 ಕೋಟಿ ಪರಿಹಾರ ನೀಡಲಾಗಿತ್ತು. ಆಗಲೂ ಸಹ ಈ ಮಲತಾಯಿ ಧೋರಣೆ ಕುರಿತು ರಾಜ್ಯ ಯಾವುದೇ ಬಿಜೆಪಿ ಸಂಸದರೂ ತುಟಿ ಬಿಚ್ಚಿರಲಿಲ್ಲ. ಬಿಜಾಪುರದ ಬಿಜೆಪಿಯ ಬಾಯಿಬಡುಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಪ್ರಶ್ನೆ ಮಾಡಿದ್ದರು, ‘ಕೇಂದ್ರ ಸರ್ಕಾರ ನೆರೆ-ಬರ ಪರಿಹಾರ ನೀಡದೆ ಇದ್ದಲ್ಲಿ ನಾವು ಜನರಿಗೆ ಮುಖ ತೋರಿಸುವುದು ಹೇಗೆ? ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಹೇಗೆ?’ ಎಂದು ಕೇಳಿದ್ದರು. ಆದರೆ, ಅವರ ಪ್ರಶ್ನೆಗೆ ಕೆಂಡಾಮಂಡಲವಾಗಿದ್ದ ಬಿಜೆಪಿ ಹೈಕಮಾಂಡ್ ಯತ್ನಾಳ್‍ಗೆ ಶೋಕಾಸ್ ನೋಟೀಸ್ ನೀಡಿ ಸದ್ದಡಗಿಸಿತ್ತು. ಇನ್ನೂ ಉಳಿದ ಬಿಜೆಪಿ ಸಂಸದರ ಕಥೆಯನ್ನು ನೀವೇ ಊಹಿಸಿಕೊಳ್ಳಿ.

ಜಿಎಸ್ಟಿ ಪಾಲಿಗೂ ಕನ್ನ, ದ್ವನಿ ಎತ್ತಲಿಲ್ಲ ಇವರು ಇನ್ನ!

ಜನವರಿ – ಮಾರ್ಚ್ ತ್ರೈಮಾಸಿಕದಲ್ಲಿ ಜಿಎಸ್ಟಿ ಸಂಗ್ರಹದ ಪಾಲಾಗಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇನ್ನೂ 5,000 ಕೋಟಿ ರೂ. ಪಾವತಿ ಮಾಡಿಲ್ಲ. ಕಳೆದ ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕದ ಪಾಲನ್ನೂ ಸಹ ಕೇಂದ್ರ ಸರ್ಕಾರ ಈವರೆಗೆ ಸಂಪೂರ್ಣವಾಗಿ ಪಾವತಿಸಿಲ್ಲ. ಹಗೆಯೇ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಲವಾರು ಅನುದಾನಗಳು ಯೋಜನೆಗಳು ಲಭ್ಯವಾಗದ ಕಾರಣ ರಾಜ್ಯದ ಆರ್ಥಿಕತೆ ಜಟಿಲವಾಗಿದೆ. ಈ ನಡುವೆ ಕೊರೋನಾ ದಾಳಿ ಇಟ್ಟಿದ್ದು ರಾಜ್ಯ ಖಜಾನೆ ಯಲ್ಲಿ ಹಣವಿಲ್ಲದೆ ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲಾಗದೆ ರಾಜ್ಯ ಸರ್ಕಾರ ತತ್ತರಿಸುತ್ತಿದೆ.

ಆದರೆ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ರಾಜ್ಯದಿಂದ ಅತ್ಯಧಿಕ 25 ಬಿಜೆಪಿ ಸಂಸದರನ್ನು ನಾವು ಆಯ್ಕೆ ಮಾಡಿ ಕಳಿಸಿದ್ದಾಗ್ಯೂ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ಏಕಿಲ್ಲ? ನಮ್ಮ ಸಂಸದರು ಈ ಕುರಿತು ಏಕೆ ಪ್ರಶ್ನೆ ಮಾಡಲ್ಲ? ಎಂಬ ಪ್ರಶ್ನೆಗೆ ಈವರೆಗೆ ಉತ್ತರವಿಲ್ಲದಂತಾಗಿರುವುದು ಮಾತ್ರ ವಿಪರ್ಯಾಸ.

ಎಂಪಿ ಲಾಡ್ ಹಣವನ್ನೂ PM Caresಗೆ ಕೊಟ್ಟ ಪುಣ್ಯಾತ್ಮರು?

ಜಿಲ್ಲೆಗಳ ಅಭಿವೃದ್ದಿಗೆಂದು ಎಲ್ಲಾ ಸಂಸದರ ನಿಧಿಗೂ ಕೇಂದ್ರ ಸರ್ಕಾರ ವರ್ಷಕ್ಕೆ 5 ಕೋಟಿ ಹಣ ನೀಡುತ್ತದೆ. ಈ ಹಣದಲ್ಲಿ ಸಂಸದರು ತಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಆದರೆ, ಈ ವರ್ಷ ದೇಶಕ್ಕೆ ಕೊರೋನಾ ದಾಳಿ ಇಟ್ಟಿದೆ. ಈ ವೇಳೆ ಸಂಸದರು ತಮ್ಮ ನಿಧಿಯನ್ನು ತಮ್ಮ ಕ್ಷೇತ್ರಗಳಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸುವುದು ಸರಿಯಾದ ನಿರ್ಧಾರವಾಗುತ್ತದೆ. ಇಲ್ಲದಿದ್ದರೆ, ಸಂಸದರು ಈ ಹಣವನ್ನು ಮುಖ್ಯಮಂತ್ರಿ ನಿಧಿಗೆ ನೀಡಿದರೆ ಇನ್ನೂ ಉತ್ತಮ. ಆದರೆ, ಕರ್ನಾಟಕದ ಸಂಸದರು ಈ ಹಣವನ್ನು PM Cares ಗೆ ನೀಡಿರುವುದು ಎಷ್ಟು ಸರಿ? ಎಂಬ ಪ್ರಶ್ನೆ ಇದೀಗ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...