Homeಅಂತರಾಷ್ಟ್ರೀಯಚಿಲಿಯಿಂದ ನಾವು ಭಾರತೀಯರು ಕಲಿಯಬೇಕಾಗಿರುವುದು ಏನು?

ಚಿಲಿಯಿಂದ ನಾವು ಭಾರತೀಯರು ಕಲಿಯಬೇಕಾಗಿರುವುದು ಏನು?

- Advertisement -

ದಕ್ಷಿಣ ಅಮೆರಿಕದ ಚಿಲಿಯಲ್ಲಿ ಇದೇ ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕ ಸಾರಿಗೆ ದರ ಹೆಚ್ಚಳದ ವಿರುದ್ಧ ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಯು ಕೆಲವೇ ದಿನಗಳಲ್ಲಿ ಆಂದೋಲನವಾಗಿ, ನವ ಉದಾರವಾದಿ ದಬ್ಬಾಳಿಕೆ ಮತ್ತು ಪ್ರತಿಗಾಮಿ ಸಂವಿಧಾನವನ್ನೇ ಕಿತ್ತೆಸೆಯುವ ಹಂತಕ್ಕೆ ಬೆಳೆದುಬಿಟ್ಟಿದೆ. ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ನಡೆಯುತ್ತಿರುವ ವಿವಿಧ ಆಂದೋಲನಗಳು ನಮಗೆ ಭಾರತೀಯರಿಗೆ ಪಾಠವಾಗಬೇಕಾಗಿರುವ ಹೊತ್ತಲ್ಲಿ ಚಿಲಿಯಲ್ಲಿ ನಡೆಯುತ್ತಿರುವ ಈ ಆಂದೋಲನದ ಹಿನ್ನೆಲೆ ಕುರಿತು ಸ್ವಲ್ಪ ತಿಳಿಯೋಣ.
***
ಆಕ್ಟೋಬರ್ 2019ರಿಂದ ಚಿಲಿಯಲ್ಲಿ ಒಂದು ಭಾರೀ ಆಂದೋಲನ ನಡೆಯುತ್ತಿದೆ. ಸುಮಾರು 40 ಲಕ್ಷ ಜನರು ಅದರಲ್ಲಿ ಭಾಗವಹಿಸಿ, ದೇಶದ ನವ ಉದಾರೀಕರಣದ ಹಿನ್ನೆಲೆಯಿಂದ ಹೊರಬರಲು ಹೋರಾಡುತ್ತಿದ್ದಾರೆ. ಈ ಪ್ರತಿಭಟನೆಯು ಸಾರ್ವಜನಿಕ ಸಾರಿಗೆ ದರ ಹೆಚ್ಚಳದ ವಿರುದ್ಧ ಸಂಘಟಿತ ಶಾಲಾ ವಿದ್ಯಾರ್ಥಿಗಳ ಗುಂಪೊಂದರ ಪ್ರತಿಭಟನೆಯು ಜನಾಂದೋಲನವಾಗಿ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ, ಚಿಲಿಯ ದಮನಕಾರಿ ಸಂವಿಧಾನದ ಪತನದ ತನಕ ಬೆಳೆದುನಿಂತಿದೆ.

ಒಂದು ಕಲ್ಯಾಣ ರಾಜ್ಯ (Welfare State) ಆಗಿದ್ದ ಚಿಲಿ ಮಿಲಿಟರಿ ಸರ್ವಾಧಿಕಾರವಾಗಿ ಬದಲಾದ ದೇಶ. 1930ರಲ್ಲಿ ದೇಶದಲ್ಲಿ ಕ್ರಾಂತಿ ಭುಗಿಲೇಳುವ ಭಯದಿಂದ ಪ್ರತಿಷ್ಟಿತ ಆಳುವ ವರ್ಗವು ಆಧುನಿಕ ಕಲ್ಯಾಣ ರಾಜ್ಯ ಮಾದರಿಯ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಆರಂಭಿಸಿತು. ಚಿಲಿಯ ಸರಕಾರ ಒಂದು ಆಧುನಿಕ ಪ್ರಜಾಪ್ರಭುತ್ವವಾಯಿತು. ಆ ಹೊತ್ತಿಗೆ ಚಿಲಿಯಲ್ಲಿ ಸಮಾಜವಾದ ಜನಪ್ರಿಯಗೊಳ್ಳಲು ಆರಂಭವಾಯಿತು.

ಕ್ಯೂಬಾದ ಕ್ರಾಂತಿಯ ಬಳಿಕ ಪಶ್ಚಿಮ ಗೋಳದಲ್ಲಿ ಒಂದು ಸೋವಿಯತ್ ಒಕ್ಕೂಟದ ಮಿತ್ರ ರಾಷ್ಟ್ರ ಸ್ಥಾಪನೆಯಾಯಿತು. ಲ್ಯಾಟಿನ್ ಅಮೆರಿಕದ ಇನ್ನಷ್ಟು ದೇಶಗಳು ಅತ್ತ ವಾಲುವವು ಎಂದು ಯುಎಸ್‌ಎ ಆತಂಕಗೊಂಡಿತು. ಪರಿಣಾಮವಾಗಿ, 1960ರ ದಶಕದಲ್ಲಿ ಅನೇಕ ಪ್ರಜಾಪ್ರಭುತ್ವ ದೇಶಗಳಲ್ಲಿ ಮಿಲಿಟರಿ ಆಡಳಿತಗಳ ಸ್ಥಾಪನೆಯಾಯಿತು. ಇವೆಲ್ಲವೂ ನಡೆದುದು ‘ಮಹಾನ್ ಪ್ರಜಾಪ್ರಭುತ್ವ’ ಎಂದು ಕರೆದುಕೊಳ್ಳುವ ಯುಎಸ್‌ಎ ಪಿತೂರಿ ಮತ್ತು ಬೆಂಬಲದಿಂದ.

ಇದ‍ನ್ನೂ ಓದಿ: ಬ್ರೆಜಿಲ್ ಚುನಾವಣೆ ಮತ್ತು ಪಾಶ್ಚಾತ್ಯ ಪ್ರಜಾತಂತ್ರದ ಅನಾವರಣ

ಚಿಲಿಯಲ್ಲಿ ಸಮಾಜವಾದ ವಿರೋಧಿ ಅಭ್ಯರ್ಥಿಗಳಿಗೆ ಯುಎಸ್‌ಎ ಸರಕಾರ ಬೆಂಬಲ ನೀಡಿತು. ಸಮಾಜವಾದಿಗಳು ಒಂದು ಭಾರಿ ಅಪಪ್ರಚಾರ ಅಭಿಯಾನದ ವಿರುದ್ಧ ಕಾದಾಡಬೇಕಾಯಿತು. ಕೊನೆಗೂ 1970ರಲ್ಲಿ, ಹಲವು ವಿಫಲ ಯತ್ನಗಳ ನಂತರ, ಚಿಲಿಯನ್ ಸೋಷಿಯಲಿಸ್ಟ್ ಪಾರ್ಟಿಯ ಸಾಲ್ವದೊರ್ ಗಿಲೆರ್ಮೊ ಅಲ್ಲಂದೆ ಗೊಸೆನ್ಸ್ ಚಿಲಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆಯ್ಕೆಯಾದ ತಕ್ಷಣ ಅಲ್ಲಂದೆ, ಕನಿಷ್ಟ ವೇತನವನ್ನು ಹೆಚ್ಚಿಸಿದರು, ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಹೆಚ್ಚಿಸಿದರು. ಆರೋಗ್ಯ ಮತ್ತು ಶಿಕ್ಷಣದ ಮೇಲಿನ ವೆಚ್ಚವನ್ನು ಹೆಚ್ಚಿಸಿದರು. ಇದು ಯುಎಸ್‌ಎ ಬಂಡವಾಳಿಗರ, ಆ ಮೂಲಕ ಅಲ್ಲಿನ ಸರಕಾರದ ಕೆಂಗಣ್ಣಿಗೆ ಗುರಿಯಾಯಿತು. ಅಲ್ಲಂದೆ ಜೀವವೇ ಅಪಾಯಕ್ಕೆ ಸಿಲುಕಿತು.

ಮರೆಯಾದ ನಾಯಕರು

ಅಲ್ಲಂದೆಯವರು ಚಿಲಿಯ ಗಣಿಗಾರಿಕೆ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿದಾಗ, ಆ ತನಕ ಚಿಲಿಯಲ್ಲಿ ಹೇರಳವಾಗಿ ದೊರೆಯುವ ತಾಮ್ರವನ್ನು ದೋಚುತ್ತಿದ್ದ ಯುಎಸ್‌ಎಯ ಕಂಪನಿಗಳು ನಷ್ಟ ಅನುಭವಿಸಿದವು. ಅಲ್ಲಂದೆ, ಶಾಂತಿಯುತ ಸಂಸದೀಯ ಹಾದಿಯ ಮೂಲಕ ಸಮಾಜವಾದದ ಸ್ಥಾಪನೆಯನ್ನು ಪ್ರತಿಪಾದಿಸುತ್ತಿದ್ದರು. ಆ ಕಾಲದಲ್ಲಿ ಸಮಾಜವಾದವನ್ನು ಹಿಂಸಾಚಾರದೊಂದಿಗೆ ತಳಕುಹಾಕಿ ಅಪಪ್ರಚಾರ ಮಾಡಲಾಗುತ್ತಿತ್ತು.

ಸಾಲ್ವದರ್ ಅಲ್ಲಂದೆ

ಇದ‍ನ್ನೂ ಓದಿ: ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ ಕಚೇರಿಯ ಮೇಲೆ ಸಿಬಿಐ ದಾಳಿ

ಈ ಶಾಂತಿಯುತ ಸಮಾಜವಾದದ ಪರಿಕಲ್ಪನೆ ಉಳಿದ ದೇಶಗಳಿಗೂ ಮಾದರಿಯಾಗಿ, ತನ್ನ ಬಂಡವಾಳಕ್ಕೆ ಕುತ್ತು ತರಲಿದೆ ಎಂದು ಭಯಗೊಂಡ ಯುಎಸ್ಎ, ನೇರವಾಗಿ ಚಿಲಿಯ ವ್ಯವಹಾರಗಳಲ್ಲಿ ತಲೆಹಾಕಿತು. ಮುಂದಿನ ಚುನಾವಣೆ ನಡೆಯುವುದಕ್ಕೆ ಬಹಳ ಮುಂಚೆಯೇ ಅಲ್ಲಂದೆ ವಿರೋಧಿ ಅಪಪ್ರಚಾರ ಆರಂಭಿಸಿತು. ಇದು ಚಿಲಿಯಲ್ಲಿ ಧ್ರುವೀಕರಣಕ್ಕೆ ಕಾರಣವಾಯಿತು. ಯುಎಸ್ಎ, ಚಿಲಿಯಲ್ಲಿ ಹಣದುಬ್ಬರ ಹೆಚ್ಚಿಸುವಂತಹ ಆರ್ಥಿಕ ತಂತ್ರಗಳ ಸರಣಿಯನ್ನೇ ಆರಂಭಿಸಿತು.ಅಲ್ಲಂದೆಯವರು ಕನಿಷ್ಟ ವೇತನವನ್ನು ಹೆಚ್ಚಿಸಿದ್ದರೂ, ಸರಾಸರಿ ವೇತನದಲ್ಲಿ ಇಳಿಕೆಯಾಯಿತು.

1973ರಲ್ಲಿ ಸೇನಾನಾಯಕರ ಕೂಟವೊಂದು ಸೇನಾಕ್ರಾಂತಿ ನಡೆಸಿತು. ಅದರ ನಾಯಕ, ಮುಂದೆ ಮರಿಹಿಟ್ಲರ್ ಅನಿಸಿಕೊಂಡ ಅಗಸ್ತೋ ಪಿನೋಷೆ ಅಧಿಕಾರಕ್ಕೆ ಬಂದ. ಅವನೊಂದಿಗೆ ಸಂಧಾನ ನಡೆಸಲು ಒಪ್ಪದ ಅಲ್ಲಂದೆ ಆತ್ಮಹತ್ಯೆ ಮಾಡಿಕೊಂಡರು. ಇದೊಂದು ಸಿಐಎ ಯೋಚಿತ ಹತ್ಯೆ ಎಂದೂ ಹೇಳಲಾಗುತ್ತದೆ. ಈ ಕ್ರಾಂತಿಯಲ್ಲಿ ಯುಎಸ್ಎಯ ನೇರ ಪಾತ್ರ ಇದೆಯೆಂದು ಸಾಬೀತಾಗಿಲ್ಲವಾದರೂ, ಅದರ ಬೆಂಬಲ ಇಲ್ಲದೇ, ಮಿಲಿಟರಿ ನಾಯಕತ್ವವು ಉಳಿಯುವ ಸಾಧ್ಯತೆ ಇರಲಿಲ್ಲ. ಇದಕ್ಕೆ ಸಾಕ್ಷ್ಯ ಹೇಳುವಂತೆ ಪಿನೋಷೆ ಮುಂದೆ ಕೈಗೊಂಡ ಕ್ರಮಗಳು ಯುಎಸ್‌ಎಗೆ ಅನುಕೂಲಕರವಾಗಿದ್ದವು.

ಪಿನೋಷೆ

ಆತ ತ್ವರಿತವಾಗಿ ಅಲ್ಲಂದೆಯವರ  ಸುಧಾರಣೆಗಳನ್ನು ಬದಿಗೆ ಸರಿಸಿ, ಚಿಲಿಯನ್ನು ಒಂದು ಅನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಯತ್ತ ನೂಕಿದ. ರಾಷ್ಟ್ರೀಕೃತ ಕೈಗಾರಿಕೆಗಳನ್ನು ಭಾರತದಲ್ಲಿ ಈಗ ನಡೆಯುತ್ತಿರುವಂತೆ ಖಾಸಗೀಕರಣಗೊಳಿಸಿದ. ಕಾರ್ಮಿಕ ಸಂಘಟನೆಗಳನ್ನು, ವಿದ್ಯಾರ್ಥಿಗಳನ್ನು ಚಿತ್ರಹಿಂಸೆ, ಸಾಮೂಹಿಕ ಹತ್ಯಾಕಾಂಡಗಳ ಮೂಲಕ ಹಿಂಸಾತ್ಮಕವಾಗಿ ದಮನಿಸಲಾಯಿತು. ಆತನ ಅತ್ಯಂತ ದೊಡ್ಡ ಫ್ಯಾಸಿಸ್ಟ್ ಕೃತ್ಯ ಎಂದರೆ, ಚಿಲಿಯ ರಾಜಧಾನಿ ಸಾಂತಿಯಾಗೊ ದಿ ಚಿಲಿಯ ‘ಎಸ್ಟೇಡಿಯೋ ನ್ಯಾಸಿಯೋನಲ್’ -ನ್ಯಾಷನಲ್ ಸ್ಟೇಡಿಯಂ-ರಾಷ್ಟ್ರೀಯ ಕ್ರೀಡಾಂಗಣವನ್ನು ಜೈಲು ಶಿಬಿರವನ್ನಾಗಿ ಪರಿವರ್ತಿಸಿದುದು. ಇಲ್ಲಿ ಸಾವಿರಾರು ಅಲ್ಲಂದೆ ಬೆಂಬಲಿಗರನ್ನು ಸರಪಳಿ ತೊಡಿಸಿ ಇರಿಸಲಾಯಿತು. ಅವರಿಗೆ ಚಿತ್ರಹಿಂಸೆ ನೀಡಲಾಯಿತು  ಮತ್ತು ಹತ್ಯೆ ಮಾಡಲಾಯಿತು.

 

ಯುಎಸ್ಎ ಅಂತರರಾಷ್ಟ್ರೀಯವಾಗಿ ಬಾಯ್ಮಾತಿನಲ್ಲಿ ಈ ಆಡಳಿತವನ್ನು ಟೀಕಿಸಿತಾದರೂ ಆರ್ಥಿಕ ಬದಲಾವಣೆಗಳನ್ನು ಬೆಂಬಲಿಸಿ ಖಾಗೀಕರಣದ ದುಷ್ಪರಿಣಾಮಗಳು ತಟ್ಟದಂತೆ ನೋಡಿಕೊಂಡಿತು. ಚಿಲಿಯು ಇದರಿಂದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಯಿತು. ವೇತನಗಳು ಕಡಿಮೆಯಾದರೂ, ಸ್ಥಿರಗೊಂಡವು. ಆದರೆ, ಗ್ರಾಮೀಣ ಪ್ರದೇಶಗಳ ಸಂಕಷ್ಟ ಮುಂದುವರಿದು, ಅವುಗಳ ಅಭಿವೃದ್ಧಿ ಕುಂಠಿತವಾಯಿತು. ಅಸಮಾನತೆ ಹೆಚ್ಚಿತು. ಇದೆಲ್ಲ ಸಾಧ್ಯವಾದುದು ಹೇಗೆಂದರೆ, ಯುಎಸ್ಎ ನಿಯಂತ್ರಿತ ವಿಶ್ವಬ್ಯಾಂಕ್ ಸಾಲದ ಮೂಲಕ! ಇದು ಸಾಲ ಮಾಡಿ ತುಪ್ಪ ತಿಂದಂತಾಯಿತು. ಈ ಸಾಲದ ಪ್ರಮಾಣ ಬಿಕ್ಕಟ್ಟಿನ ಹಂತಕ್ಕೆ ತಲಪಿ ಪಿನೋಷೆಯ ಪತನಕ್ಕೆ ಕಾರಣವಾಯಿತು. 1980ರಲ್ಲಿ ಆತ ಕೆಳಗಿಳಿದು ಒಂದು ಸಮ್ಮಿಶ್ರ ಸರಕಾರ ಸ್ಥಾಪನೆಯಾಯಿತು. ಆಗ ದೇಶದ ಮುಂದಿನ ಸಂವಿಧಾನ ಎನಿಸಿದ ಒಂದು ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲಾಯಿತು.

ಹೊಸ ಸಂವಿಧಾನವನ್ನು ರೂಪಿಸಿದವರು ಪಿನೋಷೆಯ ಬೆಂಬಲಿಗರೇ ಆಗಿದ್ದರು. ಅದು ಮಿಲಿಟರಿಗೆ ಬಹಳಷ್ಟು ಅಧಿಕಾರವನ್ನು ಕೊಟ್ಟಿತ್ತು. ಸಂಘಟನೆಯನ್ನು ದೇಶಕ್ಕೆ ಬೆದರಿಕೆ ಎಂದು ಪರಿಗಣಿಸಿತ್ತು. ಚುನಾಯಿತ ಸದನಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿತ್ತು. ಆದರೂ, ಈ ಸಂವಿಧಾನವನ್ನು ಸೇನಾ ಉಸ್ತುವಾರಿಯಲ್ಲಿ  (ಬೆದರಿಕೆ, ಹಸ್ತಕ್ಷೇಪದಲ್ಲಿ) ನಡೆದ ಜನಮತಗಣನೆಯಲ್ಲಿ ಅಂಗೀಕರಿಸುವಂತೆ ಮಾಡಲಾಯಿತು. ಪರಿಣಾಮವಾಗಿ, ಪಿನೋಷೆ ಮತ್ತೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದಂತೆ, ಚಿಲಿಯು ಎಡ-ಮಧ್ಯ ರಾಜಕೀಯ ಗುಂಪುಗಳಲ್ಲಿ ಸಂಘಟಿತವಾಯಿತು. ಈ ಗುಂಪುಗಳು ಜನಮತಗಣನೆಯನ್ನು ವಿರೋಧಿಸುತ್ತಾ, ‘ಕಂಸೆರ್ಟೇಸಿಯೋನ್ ಪೊರ್ ಎಲ್ ನೋ”- ಕ್ಯಾಂಪೇನ್ ಫಾರ್ ನೋ- ‘ಬೇಡ’ ಅಭಿಯಾನದ ಹೆಸರಿನಲ್ಲಿ ಅಧಿಕಾರದಲ್ಲಿ ಪಾಲುದಾರರಾದವು.

1989ರಲ್ಲಿ ಈ ಕೂಟ ಪಿನೋಷೆಯನ್ನು ಸೋಲಿಸಿತು. 2010ರ ತನಕ ಪ್ರಬಲ ಶಕ್ತಿಯಾಗಿ ಉಳಿಯಿತು. ಆದು ಸಂವಿಧಾನದಲ್ಲಿ ಹಲವು ತಿದ್ದುಪಡಿಗಳನ್ನು ತಂದರೂ, ಹಿಂದಿನ ನವ ಉದಾರವಾದಿ/ಮಿಲಿಟರಿ ಚೌಕಟ್ಟು ಹಾಗೆಯೇ ಉಳಿಯಿತು. ಇದು ತೀವ್ರವಾದ ಅಸಮಾನತೆಗೆ ಕಾರಣವಾಗಿ, ಜನರು ನಿತ್ಯ ಜೀವನಕ್ಕೆ ಪರದಾಡುವಂತಾಯಿತು. ಆಹಾರ, ಇಂಧನ, ಶಿಕ್ಷಣ, ಆರೋಗ್ಯ, ಸಾರಿಗೆ ವೆಚ್ಚಗಳ ಏರಿಕೆಗಳಿಗೆ ಕಾರಣವಾಗಿ, ಜನರು ಇಂತಹಾ ಸ್ಥಿತಿಯಲ್ಲಿಯೇ ಎರಡು ದಶಕಗಳಿಂದ ನರಳಿದ್ದಾರೆ. ಇದೀಗ ಜನರಿಗೆ ಇವುಗಳೇ ಮುಖ್ಯ ಪ್ರಶ್ನೆಗಳಾಗಿವೆ. ಆದುದರಿಂದಲೇ, ಶಾಲಾ ವಿದ್ಯಾರ್ಥಿಗಳು ಆರಂಭಿಸಿದ ಈ ಹೋರಾಟ ಅಭಿಯಾನವಾಗಿ ದಮನಕಾರಿ ಸಂವಿಧಾನ ಕಸದ ಬುಟ್ಟಿ ಸೇರುವ ಹಂತದಲ್ಲಿದೆ.

ಇಲ್ಲಿನ ಹಿಂದಿನ ವಿದ್ಯಮಾನಗಳತ್ತವೇ ಭಾರತವೂ ಈಗ ಸಾಗುತ್ತಿದೆ. ಆದರೆ, ಅವರಿಗೆ ಮುಖ್ಯವಾದ ಜೀವನದ ಪ್ರಶ್ನೆಗಳು ನಮಗೆ ಮುಖ್ಯ ಪ್ರಶ್ನೆಗಳಾಗುವುದು ಯಾವಾಗ? ನಾವು ಜಾತಿ ಗಲಾಟೆ, ಕೋಮುವಾದ, ಪಾಕಿಸ್ತಾನದ ಬೆದರಿಕೆ, ವ್ಯಕ್ತಿಪೂಜೆ ಇತ್ಯಾದಿ ಕ್ಷುಲ್ಲಕ ವಿಷಯಗಳಿಂದ ಹೊರಬರುವುದು ಯಾವಾಗ? ನಾವು ಚಿಲಿ ಸೇರಿದಂತೆ ಇತರ ಲ್ಯಾಟಿನ್ ಅಮೆರಿಕಾ ದೇಶಗಳ ಪರಿಸ್ಥಿತಿಯನ್ನೂ, ಅವುಗಳಲ್ಲಿ ನಡೆಯುತ್ತಿರುವ ಹೋರಾಟಗಳನ್ನೂ ಹತ್ತಿರದಿಂದ ಗಮನಿಸಿ, ನಮ್ಮ ಹಾದಿಯನ್ನು ಕಂಡುಕೊಳ್ಳುವ ಅಗತ್ಯವಿದೆ.

-ನಿಖಿಲ್ ಕೋಲ್ಪೆ

(ಅತಿಥಿ ಲೇಖಕರ ಬರಹಗಳಲ್ಲಿನ ಅಭಿಪ್ರಾಯಗಳು ಅವರ ಸ್ವಂತದ್ದೇ ಹೊರತು, ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅನಿಸಿಕೆಗಳಾಗಿರಬೇಕೆಂದೇನಿಲ್ಲ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial