Homeಕರ್ನಾಟಕ‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

‘ಲೌಕಿಕ ಜೀವನ’ ಮತ್ತು ‘ಸತಿಪತಿ ಭಾವ’ದ ಕುರಿತು ವಚನಕಾರರ ದೃಷ್ಟಿಕೋನವೇನು?

- Advertisement -
- Advertisement -

ಚಿತ್ರದರ್ಗದ ಮುರುಘಾ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಬಳಿಕ ಮತ್ತೊಂದು ಸಂಗತಿ ಚರ್ಚೆಯ ಮುನ್ನೆಲೆಗೆ ಬಂದಿದೆ. ನಾಡಿನ ಬಹುತೇಕ ಜನರು, “ಈ ಮಠಾಧೀಶರೇಕೆ ಮದುವೆಯಾಗುವುದಿಲ್ಲ? ವಚನ ಪರಂಪರೆಯನ್ನು ಅನುಸರಿಸುವವರು ನಿಸರ್ಗ ಸಹಜ ಗುಣಗಳನ್ನು ಹತ್ತಿಕ್ಕುವುದಿಲ್ಲ ಹಾಗೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡು ಈ ರೀತಿಯ ಘೋರ ಅಪರಾಧದಲ್ಲಿ ಸಿಲುಕುವುದಿಲ್ಲ” ಎಂಬ ಅಭಿಪ್ರಾಯಗಳನ್ನು ತಾಳುತ್ತಿದ್ದಾರೆ.

ಲೌಕಿಕ ಜೀವನ, ಸತಿಪತಿ ಬಾಳ್ವೆ ಹಾಗೂ ನಿಸರ್ಗ ಸಹಜ ಸ್ಥಾಯಿ ಭಾವಗಳ ಕುರಿತು ವಚನಕಾರರ ನಿಲುವು ಏನಿತ್ತು? ಧರ್ಮಗುರುಗಳು ಎನಿಸಿಕೊಂಡು, ಗುರು ಪೀಠದಲ್ಲಿ ಕುಳಿತು ಜನರಿಗೆ ಮಾರ್ಗದರ್ಶನ ತೋರುವವರು ಎಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾರೆ? ನಿಜಕ್ಕೂ ವಚನಕಾರರ ಹಾದಿಯಲ್ಲಿ ಇವರು ನಡೆಯುತ್ತಿದ್ದಾರಾ?- ಈ ಮೊದಲಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

“ಶರಣ ಪರಂಪರೆಯಲ್ಲಿ ಸತಿ-ಪತಿ ಭಾವ ಎನ್ನುವುದು ಲೋಕ ವಿವರಣೆಗೂ ಬಳಕೆಯಾಗುತ್ತದೆ, ಕೌಟುಂಬಿಕ ವ್ಯವಸ್ಥೆಗೂ ಬಳಕೆಯಾಗುತ್ತದೆ. ಸತಿ-ಪತಿ ಭಾವವು ಶರಣ ಪರಂಪರೆಯಲ್ಲಿ ಬಹಳ ಮುಖ್ಯವಾದ ನಿಲುವು ಎನ್ನುತ್ತಾರೆ” ಚಿಂತಕ ಡಾ.ಎಸ್‌.ನಟರಾಜ ಬೂದಾಳು.

ಶ್ರಮಣ ಪರಂಪರೆಗಳ ಬಗ್ಗೆ ಗಂಭೀರವಾದ ಅಧ್ಯಯನ ಮಾಡಿದವರಲ್ಲಿ ಒಬ್ಬರಾದ ಬೂದಾಳು ಅವರು ಈ ವಿಷಯದ ಕುರಿತು ಮತ್ತಷ್ಟು ಬೆಳಕು ಚೆಲ್ಲುತ್ತಾರೆ. “ಸತಿ-ಪತಿ ಭಾವ ಎನ್ನುವುದು ಗುರು-ಶಿಷ್ಯ ಪರಂಪರೆಗೂ ಅನ್ವಯವಾಗುತ್ತದೆ. ಅಂಗ-ಲಿಂಗ ಸಂಬಂಧಕ್ಕೂ ಅನ್ವಯವಾಗುತ್ತದೆ. ಕುಟುಂಬ ವ್ಯವಸ್ಥೆಗೂ ಅನ್ವಯವಾಗುತ್ತದೆ” ಎಂಬುದು ಅವರ ವಿಶ್ಲೇಷಣೆ.

“ಕುಟುಂಬ- ಶರಣರ ಮುಖ್ಯವಾದ ಕೇಂದ್ರ ಕಲ್ಪನೆಯೂ ಹೌದು. ಕೌಂಟುಬಿಕ ಬದುಕನ್ನು ತುಂಬಾ ಗೌರವದಿಂದ ನೋಡಿದರು ಹಾಗೂ ಅದನ್ನು ಜತನದಿಂದ ಕಾಪಾಡಬೇಕೆಂದು ಆಶಿಸಿದರು. ಕುಟುಂಬದಾಚೆಗಿನ ವ್ಯವಸ್ಥೆಗಳಾದ ಮಠಗಳ ಬಗ್ಗೆ ವಚನಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಶರಣರು ಕಾಲವಾದ ಸುಮಾರು ಇನ್ನೂರು ಮುನ್ನೂರು ವರ್ಷಗಳ ನಂತರದಲ್ಲಿ ಮಠಗಳು ಹುಟ್ಟಿಕೊಂಡವು” ಎನ್ನುತ್ತಾರೆ ಬೂದಾಳು.

ಮುಂದುವರಿದು, “ಶರಣರದ್ದು ಬಹುಮುಖ್ಯವಾಗಿ ಗುರುಶಿಷ್ಯ ಪರಂಪರೆಯಾಗಿದೆ. ಅದು ಗುರುಮಾರ್ಗವೇ ಹೊರತು ಮಠಮಾರ್ಗವಲ್ಲ. ಅರಿವನ್ನೇ ಗುರು ಎನ್ನುತ್ತಾರೆ ವಚನಕಾರರು. ಅಲ್ಲಮ, ಬಸವಣ್ಣ, ಜೇಡರ ದಾಸಮಯ್ಯ, ಮಾದಾರ ಚೆನ್ನಯ್ಯ ಮೊದಲಾದ ವಚನಕಾರರು ಒಳ್ಳೆಯ ಕುಟುಂಬಸ್ಥರಾಗಿದ್ದರು. ಬಸವಾದಿ ಶರಣರೆಲ್ಲ ಕುಟುಂಬ ಪ್ರೇಮಿಗಳೇ ಹೊರತು ಮಠ ಪ್ರೇಮಿಗಳಲ್ಲ” ಎಂದು ತಿಳಿಸಿದರು.

“ಬಸವಣ್ಣ, ಅಲ್ಲಮ, ಅಂಬಿಗರ ಚೌಡಯ್ಯ- ಇವರ್‍ಯಾರು ಯಾವುದೇ ಮಠದ ಜಗದ್ಗುರು ಆಗಿರಲಿಲ್ಲ. ಬದಲಿಗೆ ಒಳ್ಳೆಯ ಕುಟುಂಬಸ್ಥರಾಗಿದ್ದರು ಹಾಗೂ ಜ್ಞಾನಿಗಳಾಗಿದ್ದರು. ಶರಣರ ಕಾಲದಲ್ಲಿ ಯಾವುದೇ ಮಠಗಳು ಇರಲಿಲ್ಲ. ಆದರೆ ಅನುಭವ ಮಂಟಪಗಳು ಇದ್ದವು. ಎಲ್ಲೆಲ್ಲಿ ಶರಣರು, ಜ್ಞಾನಿಗಳು ಸೇರುತ್ತಿದ್ದರೋ ಅವೆಲ್ಲವನ್ನೂ ಅನುಭವ ಮಂಟಪ ಎನ್ನಲಾಗುತ್ತಿತ್ತು” ಎಂದು ವಿವರಿಸಿದರು.

“ಮಠ ಮಾನ್ಯಗಳ ನಡೆ ನಿಸರ್ಗ ಸಹಜವಾದದ್ದಲ್ಲ. ತಿಂದ ಅನ್ನದ ರಸವ ಕಟ್ಟಿದೊಡೆ ದೊಡ್ಡ ಯೋಗಿಯಾಗುತ್ತಾನೆಯೇ? ಅನ್ನ ತಿಂದ ಬಳಿಕ ಏನೆಲ್ಲ ನಿಸರ್ಗ ಸಹಜವಾಗಿ ಆಗಬೇಕೋ ಅದೆಲ್ಲವೂ ಆಗಬೇಕು ಎಂಬುದು ವಚನಕಾರರ ಆಶಯ” ಎಂದು ಸ್ಪಷ್ಟಪಡಿಸಿದರು.

ವಚನ ಸಾಹಿತ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದವರಾದ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಕಾಯಕ ನಿರತರಾದ ವಚನಕಾರರು (ಸಂಸಾರಿಗಳು) ಹಾಗೂ ಜಂಗಮರು (ಬಹುತೇಕರು ಮದುವೆಯಾಗಿರುತ್ತಿರಲಿಲ್ಲ) ಎಂದು ಎರಡು ವಿಧದಲ್ಲಿ ವಚನಕಾರರನ್ನು ಗುರುತಿಸಬಹುದು. ಇವರ್‍ಯಾರು ಮಠಗಳನ್ನು ಸ್ಥಾಪಿಸಿದವರಲ್ಲ. ನಾಥ, ಸಿದ್ಧ ಪರಂಪರೆಯಲ್ಲಿ ಬರುವ ಭೈರಾಗಿಗಳ ರೀತಿ, ಬೌದ್ಧಬಿಕ್ಕುಗಳಂತೆ ಜಂಗಮರು ಸಂಚಾರಿಗಳಾಗಿದ್ದರು. ಆದರೆ ಮದುವೆಯಾಗಲೇಬಾರದು ಎನ್ನುವುದಾಗಲೀ, ಸನ್ಯಾಸ ಧರ್ಮವೇ ಶ್ರೇಷ್ಠ ಎನ್ನುವುದಾಗಲೀ ಯಾವುದೇ ವಚನಕಾರರ ನಿಲುವಾಗಿರಲಿಲ್ಲ. ಸತಿ-ಪತಿಗಳೊಂದಾದ ಭಕ್ತಿ ಹಿತವೊಪ್ಪುದು ಶಿವಂಗೆ ಎಂಬ ಉದಾತ್ತ ಚಿಂತನೆಯನ್ನು ಬಿತ್ತದವರು ಶರಣರು” ಎಂದರು.

“ವೈದಿಕ ಧರ್ಮ ಸನ್ಯಾಸವೇ ಶ್ರೇಷ್ಠ ಎಂದು ಪ್ರತಿಪಾದಿಸಿತು. ಬಾಲ ಸನ್ಯಾಸಿಗಳು ಇನ್ನೂ ಶ್ರೇಷ್ಠ, ಹೆಣ್ಣು ಮೋಕ್ಷಕ್ಕೆ ಅಡ್ಡಿ ಎಂದು ಹೇಳಿತು. ಪೂಜಾ ವಿಧಿಗಳಲ್ಲಿ ಹೆಣ್ಣು ಸಹಾಯಕಿಯಾಗಿರಬೇಕೋ ಹೊರತು ಪ್ರಧಾನ ಪೂಜಕಳಾಗಿರಬಾರದು ಎಂದು ನಿಯಮಗಳನ್ನು ವೈದಿಕ ಧರ್ಮ ತಂದಿತು. ಇದನ್ನು ವಿರೋಧಿಸಿದವರು ಶರಣರು. ಹೆಣ್ಣಿಗೂ ಲಿಂಗಾಧಾರಣೆ, ಇಷ್ಟಲಿಂಗ ಪೂಜೆಗೆ ಅವಕಾಶ ನೀಡಿತು. ಕಾಲಗಳು ಉರುಳಿದಂತೆ ವೈದಿಕ ಪ್ರಭಾವಕ್ಕೆ ಒಳಗಾದ ಕೆಲವರು ಮಠ ಕಟ್ಟಲು ಶುರು ಮಾಡಿದರು. ಇಲ್ಲಿ ಸಂಸಾರಿ ಮಠಗಳೂ ಇವೆ, ಸನ್ಯಾಸಿ ಮಠಗಳೂ ಇವೆ” ಎಂದು ಹೇಳಿದರು.

“ವೈದಿಕ ಮಠಗಳ ಅನುಕರಣೆಯಲ್ಲಿ ವಿರಕ್ತ ಮಠಗಳಲ್ಲಿಯೂ ಪೀಠಗಳು ಬಂದವು. ಆದರೆ ವಚನಕಾರರಲ್ಲಿ ಮದುವೆಯಾಗದೆಯೇ ದೈವ ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂಬ ಪರಿಕಲ್ಪನೆಯೇ ಇಲ್ಲ. ಶರಣರಿಗೆ ಸಂಸಾರ ಮತ್ತು ಕಾಯಕಗಳು ತೊಡಕುಗಳಾಗಿರಲಿಲ್ಲ. ಭಕ್ತಿಯನ್ನು ಪ್ರಕಟಿಸಲು ಇವುಗಳು ಸಾಧನಗಳಾಗಿದ್ದವು. ಸ್ವಾರ್ಥವಿಲ್ಲದ ಸಂಸಾರ ಕಲ್ಪನೆಯನ್ನು ಬೆಳೆಸಿದರು. ದಾಸೋಹ ಚಿಂತನೆ ಬೆಳೆದು ಬಂದಿದ್ದೇ ಈ ಮಾರ್ಗದಲ್ಲಿ. ವಚನಕಾರರ ಪ್ರಕಾರ ದುಡಿಯದೇ ತಿನ್ನುವುದು ಅಪರಾಧ, ಜೊತೆಗೆ ದುಡಿದು ತಾನೊಬ್ಬನೇ ತಿನ್ನವುದು ಕೂಡ ಅಪರಾಧ. ಅತಿಥಿಯೇ ಶಿವನ ಸ್ವರೂಪ” ಎಂದು ವಿಶ್ಲೇಷಿಸಿದರು.

“ಕಾಮ- ವ್ಯಾಮೋಹವಾಗಬಾರದು ಎಂಬುದು ವಚನಕಾರರ ನಿಲುವಾಗಿತ್ತು. ಪರಸತಿಯನ್ನೊಲ್ಲೆ, ಪರಧನವನ್ನೊಲ್ಲೆ ಎಂಬ ಸಂದೇಶವನ್ನು ಸಾರಿದರು. ಸತಿ-ಪತಿ ಒಂದಾದರೆ ಶಿವ-ಶಿವೆಯರ ಮಿಲನವಾದಂತೆ ಎಂದು ತಿಳಿಸಿದರು. ಆದರೆ ಕಾಮದ ಮೋಹ ಹಾಗೂ ಪರಸತಿಯ ಮೋಹವನ್ನು ಅಲ್ಲಗಳೆದರು. ಇದರ ಜೊತೆಗೆ ನಿಸರ್ಗಧರ್ಮವನ್ನು ಪ್ರತಿಪಾದಿಸಿದರು. ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು ಎಂದರು. ಒಡಲೆಚ್ಚೆ ಎಂಬುದು ಯಾವುದು? ಹಸಿವು, ನಿದ್ರೆ, ಕಾಮ ನಿಸರ್ಗ ತತ್ವಗಳು. ಅವುಗಳು ಎಷ್ಟಿರಬೇಕೋ ಅಷ್ಟು ಇರಲೇಬೇಕು. ಅಂದರೆ ಅದರಲ್ಲಿಯೇ ಮುಳುಗಬಾರದು ಎನ್ನುತ್ತಾರೆ ವಚನಕಾರರು. ನಿಸರ್ಗ ತತ್ವವನ್ನು ಅಲ್ಲಗಳೆದು ಬದುಕುವುದು ಶಿವನ ಇಚ್ಛೆಗೆ ವಿರುದ್ಧವಾಗಿ ಬದುಕಿದಂತೆ. ಆದರೆ ಲಂಪಟತನ ಬೇರೆ, ಕಾಮ ಬೇರೆ. ದುಡಿಮೆ ಬೇರೆ, ದುರಾಸೆ ಬೇರೆ ಎಂಬುದು ವಚನಕಾರರ ನಿಲುವುವಾಗಿತ್ತು” ಎಂದು ವಿವರಿಸಿದರು.

1
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

2
ಕಾಮ ಬೇಡ ಪರಸ್ತ್ರೀಯರಲ್ಲಿ
ಕ್ರೋಧ ಬೇಡ ಗುರುವಿನಲ್ಲಿ
ಲೋಭ ಬೇಡ ತನು ಮನ ಧನದಲ್ಲಿ
ಮೋಹ ಬೇಡ ಸಂಸಾರದಲ್ಲಿ
ಮದ ಬೇಡ ಶಿವಭಕ್ತರಲ್ಲಿ
ಮತ್ಸರ ಬೇಡ ಸಕಲಪ್ರಾಣಿಗಳಲ್ಲಿ.
ಇಂತೀ ಷಡ್ಗುಣವನರಿದು ಮೆರೆಯಬಲ್ಲಡೆ
ಆತನೇ ಸಹಜ ಸದ್ಭಕ್ತ ಕಾಣಾ ಕೂಡಲಚೆನ್ನಸಂಗಮದೇವಾ

3
ಭಕ್ತನ ಮನ ಹೆಣ್ಣಿನೊಳಗಾದಡೆ,
ವಿವಾಹವಾಗಿ ಕೊಡುವುದು.
ಭಕ್ತನ ಮನ ಮಣ್ಣಿನೊಳಗಾದಡೆ,
ಕೊಂಡು ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದಡೆ,
ಬಳಲಿ ದೊರಕಿಸುವುದು ನೋಡಾ.
ಕಪಿಲಸಿದ್ಧಮಲ್ಲಿಕಾರ್ಜುನಾ

– ಈ ರೀತಿಯ ನೂರಾರು ವಚನಗಳನ್ನು ವಚನಕಾರರು ಬರೆದಿದ್ದಾರೆ ಎನ್ನುತ್ತಾರೆ ವಚನಗಳನ್ನು ಅಧ್ಯಯನ ಮಾಡಿದವರಾದ ವೀರಭದ್ರಗೌಡ ಅಮರಾಪುರ.

“17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿ ಎಂಬ ಶರಣ- ಹೊರಗೆ ಹೆಣ್ಣ ಬಿಟ್ಟು ನಿಶ್ಚಿಂತನೆಂದು ಹೇಳುವನಲ್ಲದೆ ಒಳಗೆಬಿಟ್ಟು ನಿಶ್ಚಿಂತನಲ್ಲನಯ್ಯ. ಇಂತಪ್ಪ ಏಕಾಂತ ದ್ರೋಹಿ- ಎಂದಿದ್ದಾರೆ. ಈ ರೀತಿಯಲ್ಲಿ ವಚನಕಾರರು ನಿಸರ್ಗ ಸಹಜ ಗುಣಗಳನ್ನು ಚಿಂತಿಸಿದರು” ಎನ್ನುತ್ತಾರೆ ಅಮರಾಪುರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೊದಲ ಪ್ಯಾರಾದಲ್ಲಿ. ಹತ್ತಿಕ್ಕುತ್ತಾರೆ ಮತ್ತು ಸಿಲುಕುತ್ತಾರೆ ಎಂಬ ಪದಗಳನ್ನು ಬಳಸಬೇಕಾಗಿತ್ತು ನೀವು ಬಳಸಿದ ಪದಗಳು ತಪ್ಪಾಗಿದೆ.

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...